ಶಾದಿ ಭಾಗ್ಯ-ತಾಳಿ ಭಾಗ್ಯಗಳೆರಡೂ ಅಸಾಂವಿಧಾನಿಕ
ಶಾದಿ ಭಾಗ್ಯ ಯೋಜನೆಯ ವಿಸ್ತರಣೆ ಬೇಡಿಕೆಯನ್ನು ಮುಂದಿಟ್ಟು ಯಡಿಯೂರಪ್ಪನವರು ಧರಣಿ ನಡೆಸಿದರು. ಕಾಂಗ್ರೆಸ್ ನೇತೃತ್ವದ ಕರ್ನಾಟಕ ಸರ್ಕಾರ ಮುಸ್ಲಿಂ ಮಹಿಳೆಯರ ಮದುವೆಗೆ ರೂಪಾಯಿ ಐವತ್ತು ಸಾವಿರ ಅನುದಾನ ಘೋಷಿಸಿರುವುದೇ ಈ ಧರಣಿಗೆ ಹೇತು. ಯಡಿಯೂರಪ್ಪನವರು ಈ ಯೋಜನೆಯನ್ನು ಅಕ್ಷರಶಃ ವಿರೋಧಿಸುವುದಿಲ್ಲ. ಅವರು ಯೋಜನೆಯ ಪರವಾಗಿಯೇ ಇದ್ದಾರೆ. ಅವರ ಬೇಡಿಕೆಏನೆಂದರೆ ಈ ಯೋಜನೆಯ ಫಲವನ್ನು ಇತರೆ ಅಲ್ಪಸಂಖ್ಯಾತ ವರ್ಗವಾದ ಕ್ರಿಶ್ಚಿಯನ್ ಮಹಿಳೆಯರಿಗೂ ಹಾಗೂ ಸಮಾಜದ ಎಲ್ಲ ವರ್ಗದವರಿಗೂ ವಿಸ್ತರಿಸಬೇಕು. ಇದು ಅವರು ಹೇಳಿಕೊಳ್ಳುವ ಉದ್ದೇಶ. ಆದರೆ ಅಂತರ್ಗತ ಉದ್ದೇಶ ಎರಡೂ ಪಕ್ಷಗಳಿಗೂ ಓಟ್ ಬ್ಯಾಂಕ್. ಕಾಂಗ್ರೆಸ್ಸಿಗೆ ಈ ಯೋಜನೆ ತನ್ನ ಯಾವತ್ತೂ ಮುಸ್ಲಿಂ ತುಷ್ಟೀಕರಣ ನೀತಿಯ ಭಾಗ. ಕರ್ನಾಟಕ ಜನತಾಪಕ್ಷಕ್ಕೆ ಮುಂಬರುವ ಚುನಾವಣೆಗಳಲ್ಲಿ ಕ್ರಿಶ್ಚಿಯನ್ ಮತಗಳ ಮೇಲೆ ಕಣ್ಣಿರಬಹುದು ಹಾಗೂ ತಾನೂ ಜನಾನುರಾಗಿ ಎಂದು ತೋರಿಸಿಕೊಳ್ಳುವ ತವಕ. ಆದರೆ ಸಾರ್ವಜನಿಕ ಹಿತಾಸಕ್ತಿ ಎರಡೂ ಪಕ್ಷಗಳಿಗೂ ಇಲ್ಲ. ಯಾಕೆಂದರೆ ಈ ಯೋಜನೆ ಸಂವಿಧಾನದ ಮೂಲಾಶಯಕ್ಕೆ ವಿರೋಧವಾದುದು.
ಭಾರತೀಯ ಪ್ರಜಾಸತ್ತೆ ಜಾತ್ಯತೀತ ಸ್ವರೂಪವಾದುದು. ಸಂವಿಧಾನದ ಪ್ರಸ್ತಾವನೆಯಲ್ಲಿಯೇ ಇದನ್ನು ವಿಷದಪಡಿಸಲಾಗಿದೆ. ಕೇವಲ ನೆನಪಿಸಿದರೆ ಸಾಕು. ಆದರೆ ಸಂವಿಧಾನದಲ್ಲಿ ಜಾತಿ, ಮತ, ಧರ್ಮಗಳು ಇರಕೂಡದು ಮತ್ತು ಇರುವುದಾದರೆ ಒಂದೇ ಆಗಿರಬೇಕೆಂಬ ಕಡ್ಡಾಯವನ್ನು ವಿಧಿಸಲಿಲ್ಲ. ಪ್ರತಿಯೊಬ್ಬ ಪ್ರಜೆಗೂ ಅವನವನ ಧರ್ಮ ಮತ್ತು ವ್ರತಾಚರಣೆಗಳನ್ನು ಪಾಲಿಸಿಕೊಂಡು ಬರಲು ಅಥವಾ ಪರಧರ್ಮವನ್ನು ಅವಲಂಬಿಸಲು ಸಹ ಅವಕಾಶ ಮುಕ್ತವಾಗಿದೆ. ಆದರೆ ಈ ಆಚರಣೆಗಳು ಸಾಮಾಜಿಕ ಶಿಸ್ತು, ನೈತಿಕತೆ ಹಾಗೂ ಸಾರ್ವಜನಿಕ ಆರೋಗ್ಯಕ್ಕೆ ಧಕ್ಕೆಯುಂಟು ಮಾಡಬಾರದು ಎಂದು ಸಂವಿಧಾನದ ಪರಿಚ್ಛೇಧ 25(1)ರಲ್ಲಿ ಒಂದು ನಿಯಂತ್ರಕವನ್ನು ಆಳವಡಿಸಲಾಗಿದೆ. ಹಾಗಾಗಿ ಈ ದೇಶದ ಪ್ರಜೆಗಳು ಮದುವೆ, ಮುಂಜಿ ಇತ್ಯಾದಿ ಆಚರಣೆಗಳನ್ನು ತಮ್ಮ ಯಾವತ್ತೂ ವಿಧಾನದಂತೆ ಸರಳವಾಗಿಯೂ ಅಥವಾ ವಿಜೃಂಭಣೆಯಿಂದಲೂ ನಡೆಸಿಕೊಂಡು ಬರಲು ಮುಕ್ತ ಅವಕಾಶವಿದೆ. ಸರ್ಕಾರದ ನಿಲುವು ಇದರಲ್ಲಿ ತಟಸ್ತವಾಗಿರತಕ್ಕದ್ದೆಂಬುದು ಸಂವಿಧಾನದ ಆಶಯ. ಪ್ರೋತ್ಸಾಹಿಸಲೂ ಕೂಡದು ಅಥವಾ ಆರ್ಟಿಕಲ್ 25(1)ರ ಸ್ಪಷ್ಟ ಉಲ್ಲಂಘನೆಯಾಗದೆ ಯಾವ ಆಚರಣೆಯನ್ನು ವಿರೋಧಿಸಲೂ ಕೂಡದು. ತಟಸ್ತ ಎನ್ನುವುದರ ಮರ್ಮ ಇದು. ಭಾರತದಲ್ಲಿ ಜಾತ್ಯತೀತ ಎಂಬುದರ ಸಾರ ಇದೇ.
ಭಾರತೀಯ ಸಂವಿಧಾನದಲ್ಲಿ ವ್ರತಾಚರಣೆ ಮಾಡುವವರಿಗೆ ಸರ್ಕಾರ ಪ್ರೋತ್ಸಾಹ ನೀಡಲು ಅವಕಾಶವಿಲ್ಲ. ಪ್ರೋತ್ಸಾಹ ನೀಡುವುದು ಸಂವಿಧಾನಕ್ಕೆ ವಿರೋಧವಾದ ಹಾಗೂ ಸಂವಿಧಾನಕ್ಕೆ ಎಸಗುವ ಅಪಚಾರ. ಕಳೆದ ಅರವತ್ತೈದು ವರ್ಷಗಳಿಂದಲೂ ಯಾವ ರಾಜಕೀಯ ಪಕ್ಷವೂ ಸಂವಿಧಾನಾತ್ಮಕವಾಗಿ ಆಡಳಿತ ನಡೆಸುವ ಸಾಹಸ ತೋರಿಸಿಯೇ ಇಲ್ಲ. ಕೇವಲ ಓಟ್ ಬ್ಯಾಂಕ್ ರಾಜಕಾರಣ ಮಾಡಿದುದು ಮಾತ್ರ.
ಆಚರಣೆಗಳಲ್ಲಿ ನಂಬಿಕೆ ಮುಖ್ಯ. ಆಚರಿಸದೆಯೂ ಇರಬಹುದು. ಅತಿ ಸರಳವಾಗಿ ಆಚರಿಸಬಹುದು ಅಥವಾ ಬಹು ವಿಜೃಂಭಣೆಯಿಂದ ಆಚರಿಸಬಹುದು. ಕೆಲವು ವರ್ಷಗಳ ಹಿಂದೆ ಲಾಲೂ ಪ್ರಸಾದ್ ಯಾದವರು ತಮ್ಮ ಮಗಳ ಮದುವೆಗೆ ಇಡೀ ಊರಿಗೆ ಚಪ್ಪರ ಹಾಕಿಸಿದ್ದರಂತೆ ಎಂದು ಪಾಕ್ಷಿಕ ಒಂದರಲ್ಲಿ ಓದಿದ ನೆನಪು. ತಮ್ಮಲ್ಲಿ ಧನಾಡ್ಯ ಮೇವಿದೆ. ಊರವರೆಲ್ಲರೂ ಒಂದೂಟ ಮಾಡಲಿ ಎಂದು ಧಾರಾಳತನ ತೋರಿಸಿರಬಹುದು. ಆದರೆ ಈ ಮದುವೆಯನ್ನು ಸಾಂಪ್ರದಾಯಿಕವಾಗಿಯೂ ಅತಿ ಸರಳವಾಗಿ ನೆರವೇರಿಸಲು ಸಾಧ್ಯ. ಮದುವೆಯಂಥ ಶುಭಾಚರಣೆಗಳ ಬಗ್ಗೆ ಸಮಾಜದ ಸ್ಪಂದನವಿರುತ್ತದೆ. ಉಳ್ಳವರು ಬಡವರಿಗೆ ಸಹಾಯ ಮಾಡುವುದು ಸ್ವಾಭಾವಿಕ. ಅದು ಹಂಗು ಎಂದೆನಿಸಿಕೊಳ್ಳುವುದಿಲ್ಲ. ಅದು ಶುಭ ಕಾರ್ಯಕ್ಕಾಗಿ ಮಾಡಿದ ಸಹಾಯ. ಬೇಡಿ ಶುಭ ಕಾರ್ಯ ಮಾಡುವುದು ಭಾರತೀಯ ಪರಂಪರೆಯಲ್ಲಿ ಹೀನಾಯ ಕಾರ್ಯವಲ್ಲ. ಅಲ್ಲಿ ಸರಳತೆಯೂ ಹಾಗೂ ಇತರರ ಸಹಯೋಗವೂ ಮೇಳೈಸುತ್ತದೆ. ನಮ್ಮ ಸಮಾಜದಲ್ಲಿ ಮದುವೆಗೆ ಮಾಡುವ ಸಹಾಯ ಒಂದು ಯೋಗ ಎಂದು ಭಾವಿಸುವುದೇ ವಾಡಿಕೆ. ಹೀಗೆ ಕೊಡುವ ಪಡೆಯುವ ಪ್ರಕ್ರಿಯೆ ಸಮಾಜ ಬಾಂಧವರ ನಡುವೆ ಭಾವನಾತ್ಮಕ ಬೆಸುಗೆ ಬಿಗಿಯಾಗಿರಲು ಸಹಕಾರಿ.
ನಮ್ಮಲ್ಲಿ ದಾನಿಗಳಿಗೆ ಕೊರತೆ ಇಲ್ಲ. ಒಳ್ಳೆ ಕಾರ್ಯಕ್ಕೆ ಅವರವರ ಶಕ್ತ್ಯಾನುಸಾರ ದೇಣಿಗೆ ನೀಡುವುದು ನಮ್ಮ ಸಮಾಜ ಅನುಸರಿಸಿಕೊಂಡು ಬಂದ ದಾರಿ. ಕಲಾವಿದರನ್ನು, ಕ್ರೀಡಾಪಟುಗಳನ್ನು, ಸಮಾಜ ಸೇವೆಯಲ್ಲಿ ತೊಡಗಿಸಿಕೊಂಡವರನ್ನು ಗುರುತಿಸಿ ಪ್ರಶಸ್ತಿ ನೀಡಿ ಗೌರವಿಸುವ ಪರಿಪಾಠ ನಮ್ಮ ಸಮಾಜಕ್ಕಿದೆ. ನೊಂದವರಿಗೆ ಆಸರೆಯಾಗುವ ಅನೇಕ ಖಾಸಗಿ ಯೋಜನೆಗಳಿರುತ್ತವೆ.ತೀರ್ಥಯಾತ್ರೆ ಕೈಗೊಳ್ಳುವವರಿಗೆ ಅವರು ಯಾಚಿಸದೆ ಧನ ಸಹಾಯ ಮಾಡುವ ಕ್ರಮವಿದೆ. ಇದರಿಂದ ಮಧುರ ಬಾಂಧವ್ಯ ಬೆಳೆಯುತ್ತದೆ ಎನ್ನುವುದು ನಮ್ಮ ಅನುಭವ. ಹೀಗೆ ಭಾವನಾತ್ಮಕವಾಗಿ ಸಂತುಲಿತವಾಗಿರುವ ಸಮಾಜಕ್ಕೆ ಮದುವೆ, ಮುಂಜಿ ಇತ್ಯಾದಿ ಆಚರಣೆಗಳ ಹೆಸರಿನಲ್ಲಿ ಸರ್ಕಾರ ಸಾರ್ವಜನಿಕರ ತೆರಿಗೆ ಹಣವನ್ನು ವಿನಿಯೋಗಿಸುವುದು ಸಮಾಜದ ಭಾವೈಕ್ಯತೆ ಕೆಡಿಸುವ ಪ್ರಯತ್ನವಲ್ಲದೆ ಪ್ರಗತಿಪರ ನಡೆಯಲ್ಲ. ಸ್ವಯಂ ನೆಲೆ ನಿಂತಿರುವ ಸಾಮರಸ್ಯಕ್ಕೆ ಧಕ್ಕೆಯುಂಟು ಮಾಡತಕ್ಕ ಸರ್ಕಾರಿ ಯೋಜನೆಗಳ ಕುರಿತು ಗಂಭೀರವಾಗಿ ಚಿಂತಿಸುವ ಕಾಲ ಸನ್ನಿಹಿತವಾಗಿದೆ.
ಮೀಸಲಾತಿ ಅಥವಾ ಯಾವುದೇ ವಿಶೇಷ ಸೌಲಭ್ಯಗಳನ್ನು ಮತೀಯರ ಹೆಸರಿನಲ್ಲಿ ನೀಡಲು ಸಂವಿಧಾನದಲ್ಲಿ ಅವಕಾಶವಿಲ್ಲವೆಂದು ಸರ್ವೋಚ್ಚ ನ್ಯಾಯಾಲಯ ಅನೇಕ ಬಾರಿ ಎಚ್ಚರಿಕೆ ನೀಡಿದೆ. ಮುಸ್ಲಿಂ ಮೀಸಲಾತಿಯನ್ನು ಅಳವಡಿಸಿದ ಆಂಧ್ರಪ್ರದೇಶ ಸರ್ಕಾರದ ಆದೇಶವನ್ನು ಸರ್ವೋಚ್ಚ ನ್ಯಾಯಾಲಯ ರದ್ದು ಪಡಿಸಿರುವುದನ್ನು ಇಲ್ಲಿ ಸ್ಮರಿಸಬಹುದಾಗಿದೆ. ಹಿಂದುಳಿದಿರುವಿಕೆಯ ಆಧಾರದಲ್ಲಿ ವಿಶೇಷ ಸೌಲಭ್ಯ ನೀಡುವುದಾದರೂ ಅಲ್ಲಿ ಮತೀಯ ಪ್ರಸ್ತಾಪವಿರಬಾರದು. ಇದ್ದಲ್ಲಿ ಅದು ಸಂವಿಧಾನದ ಆಶಯಕ್ಕೆ ವಿರೋಧ. ಮದುವೆ, ಧರ್ಮಕ್ಕೆ ಸಂಬಂಧಿಸಿದ ವಿಚಾರ. ಬೇರೆ ಬೇರೆ ಧರ್ಮಗಳಲ್ಲಿ ಬೇರೆ ಬೇರೆ ವಿಧಾನಗಳಲ್ಲಿ ಅದರ ಆಚರಣೆ ನಡೆಯುತ್ತದೆ. ಸರ್ಕಾರ ಧರ್ಮ ನಿರಪೇಕ್ಷವಾದುದು ಎಂದಾದಲ್ಲಿ ಮದುವೆ ಯಾವ ಮತದ್ದೇ ಆಗಿರಲಿ ಸರ್ಕಾರ ಅದಕ್ಕೆ ಧನ ಸಹಾಯ ನೀಡಿದಲ್ಲಿ ಅದನ್ನು ಪ್ರೋತ್ಸಾಹಿಸಿದಂತಾಗಲಿಲ್ಲವೇ? ಹಾಗಾಗಿ ತಾಳಿಭಾಗ್ಯ, ಶಾದಿಭಾಗ್ಯ ಎಂಬಿತ್ಯಾದಿ ಹೆಸರಿನಲ್ಲಿ ಆಚರಣೆಗಳಿಗೆ ಸರ್ಕಾರ ಅನುದಾನ ನೀಡುವುದರಿಂದ ಆ ಧರ್ಮಗಳನ್ನು ಪ್ರೋತ್ಸಾಹಿಸಿದಂತಾಗುತ್ತದೆ. ಈ ಕ್ರಮ ಸಂವಿಧಾನದ ಮೂಲಾಶಯಕ್ಕೆ ವಿರೋಧ ಎಂದು ಪುನರುಚ್ಚರಿಸಬೇಕಾಗಿದೆ.
ಸರ್ಕಾರಕ್ಕೆ ಬೇರೆ ಅನೇಕ ಸಾಂವಿಧಾನಿಕ ಕರ್ತವ್ಯಗಳಿವೆ. ಮುಖ್ಯವಾಗಿ ಎಲ್ಲ ವರ್ಗದ ಜನರ ಆರ್ಥಿಕ ಹಾಗೂ ಶೈಕ್ಷಣಿಕ ಸಬಲತೆಯನ್ನು ಸಾಧಿಸುವುದು. ದುರ್ಬಲರು ಹಾಗೂ ಹಿಂದುಳಿದವರು ಆರ್ಥಿಕವಾಗಿ ಸ್ವಾವಲಂಬಿಗಳಾದಾಗ ಮದುವೆ ಮುಂಜಿ ಇತ್ಯಾದಿ ಶುಭ ಕಾರ್ಯಗಳನ್ನು ಸಾಕಷ್ಟು ಅದ್ದೂರಿಯಾಗಿಯೇ ಆಚರಿಸುತ್ತಾರೆ ಎಂದು ಬೇರೆ ಹೇಳಬೇಕಾಗಿಲ್ಲ. ಮೊದಲು ದುರ್ಬಲರ ಆರ್ಥಿಕ ಸ್ಥಿತಿಗತಿ ಉತ್ತಮಪಡಿಸುವ ಯೋಜನೆಗಳನ್ನು ರೂಪಿಸುವುದು ಸರ್ಕಾರದ ಆದ್ಯ ಕರ್ತವ್ಯ. ಸಾಂವಿಧಾನಿಕವಾಗಿ ತನ್ನದಲ್ಲದ ಕರ್ತವ್ಯವಾದ ಸರ್ಕಾರಿ ವೆಚ್ಚದಲ್ಲಿ ಮದುವೆ ಮಾಡಿಸುವ ಯೋಜನೆಯ ಉಸಾಬರಿ ಸರ್ಕಾರಕ್ಕೆ ಬೇಡ. ಸಂವಿಧಾನಕ್ಕೆ ಬದ್ಧನಾಗಿರುತ್ತೇವೆ ಎಂದು ಪ್ರತಿಜ್ಞೆ ಮಾಡಿದ ಜನಪ್ರತಿನಿಧಿಗಳು ಈಗ ಆತ್ಮಾವಲೋಕನ ಮಾಡಿಕೊಳ್ಳುವ ಕಾಲ ಸನ್ನಿಹಿತವಾಗಿದೆ. ಈ ನೆಲೆಯಲ್ಲಿ ತಾಳಿಭಾಗ್ಯ ಮತ್ತು ಶಾದಿಭಾಗ್ಯಗಳೆರಡೂ ಅಸಾಂವಿಧಾನಿಕ ಹಾಗೂ ಶಾದಿಭಾಗ್ಯವನ್ನು ವಿಸ್ತರಿಸಬೇಕೆಂದು ಧರಣಿ ನಡೆಸುತ್ತಿರುವುದು ಅಸಾಂವಿಧಾನಿಕ ಹಾಗೂ ಅಪ್ರಜಾಸತ್ತಾತ್ಮಕವೆಂದು ಹೇಳದೆ ವಿಧಿಯಿಲ್ಲ.
ಜಾತ್ಯತೀತ ಎಂದು ಸದಾ ಪಠಿಸುತ್ತಿರುವ ಕಾಂಗ್ರೆಸ್,ಮುಸ್ಲಿಂ ಮಹಿಳೆಯರ ಮದುವೆಗಾಗಿ ಶಾದಿಭಾಗ್ಯ ಎಂಬ ನೇರ ಮತೀಯ ಯೋಜನೆಯನ್ನು ರೂಪಿಸಿರುವುದು ಅಚ್ಚರಿ ಮೂಡಿಸುವಂತಿದೆ. ಒಂದಂತು ಸತ್ಯ. ಮುಸ್ಲಿಂ ತುಷ್ಟೀಕರಣ ಕಾಂಗ್ರೆಸ್ ನೀತಿಯ ಒಂದು ಅವಿಭಾಜ್ಯ ಅಂಗ. ಕರ್ನಾಟಕದ ಮಾಜಿ ಮುಖ್ಯಮಂತ್ರಿ ದೇವರಾಜ್ ಅರಸು ಅವರ ಜನಪ್ರಿಯ ನುಡಿ ನಾಡಿಬಡಿತ ಕಾಂಗ್ರೆಸ್ಸಿಗರ ಪಾಲಿಗೆ ನಿತ್ಯ ನೂತನ. ಯಾವುದಾದರೊಂದು ಹೊಸ ಯೋಜನೆ ರೂಪಿಸಬೇಕು. ಅದು ಸಂವಿಧಾನ ಬದ್ಧವಾಗಿರಬೇಕೆಂದಿಲ್ಲ. ಈಗ ಆ ಯೋಜನೆ ಶಾದಿ ಭಾಗ್ಯ. ನಮ್ಮ ದೇಶದಲ್ಲಿ ಬುದ್ಧಿ ಜೀವಿಗಳು, ವಿದ್ಯಾವಂತರು ಕೂಡ ಆಡಳಿತವನ್ನು ಸಂವಿಧಾನಾತ್ಮಕವಾಗಿ ಪರಾಮರ್ಶಿಸುವ ಗೋಜಿಗೆ ಹೋಗುವುದೇ ಇಲ್ಲ ಎಂದು ಎಲ್ಲ ರಾಜಕೀಯ ಪಕ್ಷಗಳ ನಂಬಿಕೆ. ಆದರೆ ಈ ನಂಬಿಕೆ ಹುಸಿಯಾಗುವ ಕಾಲ ಬಹಳ ದೂರವಿಲ್ಲ. ಈಗ ಸಾರ್ವಜನಿಕರು ಹೆಚ್ಚೆಚ್ಚು ಜಾಗೃತರಾಗುತ್ತಿದ್ದಾರೆ. ನೇತಾರರು ನೀಡುವ ಆಶ್ವಾಸನೆ ಹಾಗೂ ಸರ್ಕಾರ ರೂಪಿಸುವ ಯೋಜನೆಗಳ ಔಚಿತ್ಯವನ್ನು ತಾತ್ವಿಕವಾಗಿ ಪರಾಮರ್ಶಿಸಲು ಆರಂಭಿಸಿದ್ದಾರೆ. ಅದರ ಫಲರೂಪವಾಗಿಯೇ ಇತ್ತೀಚೆಗೆ ಚುನಾವಣಾ ಆಯೋಗ ರಾಜಕೀಯ ಪಕ್ಷಗಳ ಪ್ರಣಾಳಿಕೆಗಳ ಪರಿಶೀಲನೆ ಸಂವಿಧಾನದ ಬೆಳಕಿನಲ್ಲಾಗಬೇಕೆಂದು ಎಚ್ಚರಿಸಿರುವುದು. ಇನ್ನು ಮುಂದೆಯಾದರೂ ಆಡಳಿತದಲ್ಲಿರುವ ರಾಜಕೀಯ ಪಕ್ಷಗಳು ಸಂವಿಧಾನದ ಆಶಯಕ್ಕೆ ತಕ್ಕಂತೆ ಯೋಜನೆ ರೂಪಿಸುವ ಇಚ್ಛೆ ತೋರಲಿ.
- ಬೇಳೂರು ರಾಘವ ಶೆಟ್ಟಿ, ಉಡುಪಿ