ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಅಂಕಣಗಳು

ಇಂದಿರಮ್ಮ ಅನ್ನಯೋಜನೆ, ಇದು ಮತಬ್ಯಾಂಕ್ ಕನ್ನ ಯೋಜನೆ!

ನೆಹರು-ಗಾಂಧಿ ಕುಟುಂಬದ ಬ್ರ್ಯಾಂಡ್ ಭಾರತೀಯರ ಜೀವನದ ಎಲ್ಲಾ ...

Vishwanath S
Updated On : 15 Nov 2013, 11:48 am

ನೆಹರು-ಗಾಂಧಿ ಕುಟುಂಬದ ಬ್ರ್ಯಾಂಡ್ ಭಾರತೀಯರ ಜೀವನದ ಎಲ್ಲಾ ಹಂತದಲ್ಲೂ ಇಣುಕಬೇಕು ಎಂಬ ಕಾರಣದಿಂದ ಕಾಂಗ್ರೆಸ್ ತನ್ನ ಬಹುತೇಕ ಯೋಜನೆಗಳಿಗೆ ಇಂದಿರಾ, ರಾಜೀವ್ ಅಥವಾ ನೆಹರು ಹೆಸರಿಡುತ್ತಾ ಬಂದಿದೆ. ಅದರ ಮುಂದುವರಿದ ಭಾಗವೆನ್ನುವಂತೆ, ಈಗ ಆಹಾರ ಭದ್ರತಾ ಯೋಜನೆಯ ಸಾರ್ವಜನಿಕ ವಿತರಣಾ ವ್ಯವಸ್ಥೆಗೆ "ಇಂದಿರಮ್ಮ ಅನ್ನ ಯೋಜನೆ" ಎಂದು ಹೆಸರಿಡಲು ನಿರ್ಧರಿಸಿದೆ. ಈ ಕುರಿತು "ಔಟ್‌ಲುಕ್‌" ಪತ್ರಿಕೆಯಲ್ಲಿ ಪ್ರಕಟವಾದ ಎ. ಸೂರ್ಯ ಪ್ರಕಾಶ್ ಅವರ ವಿಶ್ಲೇಷಣೆ...

ಕುಸಿಯುತ್ತಿರುವ ತಮ್ಮ ಅದೃಷ್ಟವನ್ನು ಎತ್ತಿಹಿಡಿಯಲು ಎಲ್ಲಾ ನಿಯಮಗಳನ್ನೂ ಗಾಳಿಗೆ ತೂರುತ್ತಾ ಬಂದ ಕಾಂಗ್ರೆಸ್ ಈ ಬಾರಿ ಮತ್ತೊಮ್ಮೆ ಅಂಥದ್ದೇ ಹೆಜ್ಜೆಗೆ ಸಜ್ಜಾಗಿದೆ. ಸ್ವತಂತ್ರ ಭಾರತದ ಅತಿದೊಡ್ಡ ಕ್ಷೇಮಾಭ್ಯುದಯ ಯೋಜನೆ ಎಂದು ಕರೆಸಿಕೊಳ್ಳುತ್ತಿರುವ ಆಹಾರ ಭದ್ರತಾ ಯೋಜನೆಯ
ಸಾರ್ವಜನಿಕ ವಿತರಣಾ ವ್ಯವಸ್ಥೆಗೆ ಅದು "ಇಂದಿರಮ್ಮ ಅನ್ನ ಯೋಜನೆ" ಎಂದು ಹೆಸರಿಡಲು ನಿರ್ಧರಿಸಿದೆ! ವರದಿಗಳ ಪ್ರಕಾರ, ಈ ಯೋಜನೆಯಡಿಯಲ್ಲಿ ಸರಬರಾಜಾಗುವ ಆಹಾರ ಧಾನ್ಯಗಳನ್ನು 5 ಕೆ.ಜಿ. ಸಾಮರ್ಥ್ಯದ ಚೀಲಗಳಲ್ಲಿ ತುಂಬಿ, ಅದರ ಮೇಲೆ "ಇಂದಿರಾ ಗಾಂಧಿಯವರ ಸ್ಟ್ಯಾಂಪ್ ಮುದ್ರಿಸಿ" ಹಂಚಲು ಕಾಂಗ್ರೆಸ್ ಯೋಚಿಸುತ್ತಿದೆ.
2014ರ ಲೋಕಸಭಾ ಚುನಾವಣೆಗಳಿಗೂ ಮುನ್ನ ಹಲವು ರಾಜ್ಯಗಳಲ್ಲಿ ನಡೆಯಲಿರುವ ವಿಧಾನಸಭಾ ಚುನಾವಣೆಗಳಲ್ಲಿ, ಆಹಾರ ಭದ್ರತಾ ಯೋಜನೆಯಿಂದಾಗಿ ತಮ್ಮ ಪಕ್ಷಕ್ಕೆ ಲಾಭವಾಗಲಿದೆ ಎಂದು ಕಾಂಗ್ರೆಸ್ ಭಾವಿಸುತ್ತದೆ. ಗಮನಿಸಬೇಕಾದ ಅಂಶವೆಂದರೆ, ಸಂಸತ್ತಿನಲ್ಲಿ ಆಹಾರ ಭದ್ರತಾ ಮಸೂದೆಯನ್ನು ಮಂಡಿಸುವಾಗ ವಿರೋಧ ಪಕ್ಷಗಳ ಬೆಂಬಲ ಪಡೆಯುವ ಸಲುವಾಗಿ ಯೋಜನೆಯ ಹಿಂದಿರುವ ಆರ್ಥಿಕ ಮತ್ತು ರಾಜಕೀಯ ಅಂಶಗಳನ್ನು ಮುಚ್ಚಿಟ್ಟಿತ್ತು ಕಾಂಗ್ರೆಸ್.
"ಇಂದಿರಮ್ಮ ಅನ್ನ ಯೋಜನೆ" ಜಾರಿಯಾದರೆ, ಇದು ಕಾಂಗ್ರೆಸ್‌ನ ಅತಿದೊಡ್ಡ ವೋಟ್‌ಬ್ಯಾಂಕ್ ಕನ್ನವಾಗಲಿದೆ. ಇದುವರೆಗೂ ಈ ಮಟ್ಟದಲ್ಲಿ ಕಾಂಗ್ರೆಸ್ ಎಂದಿಗೂ ಪ್ರಯತ್ನಪಟ್ಟಿರಲಿಲ್ಲ. ಆದರೂ 1990ರಿಂದ ಕಾಲ ಕಾಲಕ್ಕೆ ಜಾರಿಯಾಗುತ್ತಾ ಬಂದಿರುವ ಯೋಜನೆಗಳಿಗೆ, ಸ್ಥಾಪನೆಯಾದ ಸಂಸ್ಥೆಗಳಿಗೆಲ್ಲ ನೆಹರು-ಗಾಂಧಿ ಕುಟುಂಬದ ಪ್ರಮುಖ ಮೂವರು ನಾಯಕರ ಹೆಸರನ್ನೇ ಅದು ಇಡುತ್ತಾ ಬಂದಿದೆ. ಕೆಲವು ವರ್ಷಗಳ ಹಿಂದೆ ನಾನು ಅಂದಾಜು ಮಾಡಿದ ಪ್ರಕಾರ, ದೇಶದ ಸುಮಾರು 450 ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಯೋಜನೆಗಳಿಗೆ/ ಕಾರ್ಯಕ್ರಮಗಳಿಗೆ ಮತ್ತು ಸಂಸ್ಥೆಗಳೆಲ್ಲ ಈ ಮೂವರ ಹೆಸರಲ್ಲೇ ರಾರಾಜಿಸುತ್ತಿವೆ.
ರಾಜೀವ್ ಗಾಂಧಿ ಗ್ರಾಮೀಣ ವಿದ್ಯುತೀಕರಣ್ ಯೋಜನೆ(ಗ್ರಾಮೀಣ ವಿದ್ಯುತ್ ಯೋಜನೆ), ರಾಜೀವ್ ಗಾಂಧಿ ಕುಡಿಯುವ ನೀರು ಯೋಜನೆ, ಇಂದಿರಾ ಆವಾಸ್ ಯೋಜನೆ(ಪ್ರತಿವರ್ಷ 7,000-10000 ಕೋಟಿ ಅನುದಾನ), ಇಂದಿರಾ ಗಾಂಧಿ ವೃದ್ಧಾಪ್ಯ ವೇತನಾ ಯೋಜನೆ, ಜವಾಹರ್‌ಲಾಲ್ ನೆಹರು ರೋಜಗಾರ್ ಯೋಜನೆ, ಜವಾಹರ್‌ಲಾಲ್ ನೆಹರು ನಗರಾಭಿವೃದ್ಧಿ ಯೋಜನೆ(ಮುಂದಿನ ಏಳು ವರ್ಷಗಳಲ್ಲಿ ತೆರಿಗೆದಾರರ ಹಣದಲ್ಲಿ 50,000 ಕೋಟಿ ಈ ಯೋಜನೆಗಾಗಿ ಖರ್ಚಾಗಲಿದೆ). ಇಷ್ಟೇ ಅಲ್ಲದೆ ಲಕ್ಷಾಂತರ ಜನರ ಬದುಕಿನ ಭಾಗವಾಗಿರುವ ಇನ್ನುಳಿದ ಅನೇಕ ಯೋಜನೆಗಳಿಗೂ ಈ ಮೂವರ ಹೆಸರಿಡಲಾಗಿದೆ. ದುಡಿಯುವ ತಾಯಂದಿರ ಮಕ್ಕಳಿಗಾಗಿನ ಯೋಜನೆಗೂ ರಾಜೀವ್ ಗಾಂಧಿ ಹೆಸರು! ಇನ್ನು ರಾಜೀವ್ ಗಾಂಧಿ ಉದ್ಯಮಿ ಮಿತ್ರ ಯೋಜನೆ, ರಾಜೀವ್ ಗಾಂಧಿ ಶ್ರಮಿಕ ಕಲ್ಯಾಣ ಯೋಜನೆ ಮತ್ತು ರಾಜೀವ್ ಗಾಂಧಿ ಶಿಲ್ಪಿ ಸ್ವಾಸ್ಥ್ಯ ವಿಮಾ ಯೋಜನೆ ಹಲವು ವರ್ಷಗಳಿಂದ ಜಾರಿಯಲ್ಲಿವೆ. ಈ ಪಟ್ಟಿಗೆ ಹೊಸತಾಗಿ ಸೇರ್ಪಡೆಗೊಂಡಿದೆ ರಾಜೀವ್ ಗಾಂಧಿ ಷೇರು ಉಳಿತಾಯ ಯೋಜನೆ!
ಅಲ್ಲ...ದುಡಿಯುವ ವರ್ಗ, ದುಡಿಯುವ ತಾಯಂದಿರು, ಶಿಲ್ಪಿಗಳು, ಷೇರು ಮತ್ತು ಕಲಾವಿದರಿಗೂ ರಾಜೀವ್ ಗಾಂಧಿಗೂ ಎಲ್ಲಿಂದೆಲ್ಲಿಯ ಸಂಬಂಧ? ಇಂಥ ಮೂರ್ಖ ಪ್ರಶ್ನೆಯನ್ನು ಕೇಳುವಂತಿಲ್ಲ...ಏಕೆಂದರೆ ಇವೆಲ್ಲ ಕೇಂದ್ರದ ಯೋಜನೆಗಳು! ಇನ್ನು ರಾಜ್ಯಗಳಲ್ಲಿನ ಈ ಮೂವರ ಹೆಸರು ಹೊತ್ತ ಯೋಜನೆಗಳ ಪಟ್ಟಿಯನ್ನು ನೋಡಿದರೆ ನಿಮ್ಮ ತಲೆತಿರುಗುವುದಂತೂ ನಿಶ್ಚಿತ!
ಅತ್ಯುತ್ತಮ ರಾಷ್ಟ್ರೀಯ ಉದ್ಯಾನಗಳು, ವಿಶ್ವವಿದ್ಯಾಲಯಗಳು, ತಾಂತ್ರಿಕ ಸಂಸ್ಥೆಗಳು, ಪ್ರಮುಖ ವಿಮಾನ ನಿಲ್ದಾಣಗಳು, ಬಂದರುಗಳು, ಅಷ್ಟೇ ಅಲ್ಲದೆ, ಮೆಟ್ರೋ ಘಟಕಗಳಿಗೂ ಕೂಡ ಈ ತ್ರಿಮೂರ್ತಿಗಳ ಹೆಸರಿಡಲಾಗಿದೆ. ಆದರೆ ನಿಜಕ್ಕೂ ದಂಗು ಬಡಿಸುವ ವಿಷಯವೆಂದರೆ, ಕ್ರೀಡಾ ಕ್ಷೇತ್ರದಲ್ಲಿನ ಯೋಜನೆ, ಪ್ರಶಸ್ತಿಗಳಿಗೂ ಕೂಡ ಇವರ ಹೆಸರಿಟ್ಟಿದ್ದಾರೆ ಎನ್ನುವುದು.  ರಾಜ್ಯ ಹಾಗೂ ರಾಷ್ಟ್ರೀಯ ಮಟ್ಟದ ಬಹುತೇಕ  ಪ್ರಮುಖ ಟೂರ್ನಮೆಂಟ್‌ಗಳು ಮತ್ತು ಪ್ರಶಸ್ತಿಗಳಿಗೆ ರಾಜೀವ್, ಇಂದಿರಾ ಅಥವಾ ನೆಹರೂರದ್ದೇ ಹೆಸರು.  
ಫುಟ್‌ಬಾಲ್, ಬಾಸ್ಕೆಟ್‌ಬಾಲ್, ಜೂಡೋ, ಬೀಚ್‌ಬಾಲ್, ರೋಲರ್ ಸ್ಕೇಟಿಂಗ್, ಕಬಡ್ಡಿ, ಗ್ರಾಮೀಣ ಕ್ರಿಕೆಟ್, ಜಿಮ್ನಾಸ್ಟಿಕ್, ಬಾಕ್ಸಿಂಗ್, ದೆಹಲಿ ಮ್ಯಾರಾಥಾನ್ ಮತ್ತು ಕೇರಳದಲ್ಲಿ ನಡೆಯುವ ದೋಣಿಯ ರೇಸ್‌ಗೂ ಕೂಡ ಇವರ ಹೆಸರೇ ಇಡಬೇಕೇ? ಇವರ ಹೆಸರಿರದ ಆಟವೆಂದರೆ 'ಗಿಲ್ಲಿ-ದಾಂಡ' ಒಂದೇ ಎನಿಸುತ್ತದೆ!
ಈ ಕುಟುಂಬದ ಬಗ್ಗೆ ಕಾಂಗ್ರೆಸ್‌ಗೆ ಅತಿಯಾದ ವ್ಯಾಮೋಹವಿದೆ. ಅದು ಯಾವ ಮಟ್ಟದಲ್ಲಿದೆಯೆಂದರೆ, ಭಾರತದ ಅತಿದೊಡ್ಡ ಮುಕ್ತ ವಿಶ್ವವಿದ್ಯಾಲಯಕ್ಕೂ ಕೂಡ ಕಾಂಗ್ರೆಸ್ ಇಂದಿರಾ ಗಾಂಧಿ ಹೆಸರಿಟ್ಟಿದೆ. ಅಷ್ಟೇ ಅಲ್ಲ, ರಾಜೀವ್ ಗಾಂಧಿ ಹೆಸರಲ್ಲಿ ಆ ವಿಶ್ವವಿದ್ಯಾಲಯದಿಂದ ಫೆಲೋಶಿಪ್ ಕೊಡಲಾಗುತ್ತಿದೆ! ಅದರಂತೆಯೇ, ಬೆಂಗಳೂರಿನ ಸೆಂಟರ್ ಫಾರ್ ಅಡ್ವಾನ್ಸ್‌ಡ್ ರಿಸರ್ಚ್ ಸಂಸ್ಥೆಗೆ ನೆಹರೂರ ಹೆಸರು, ಸೈನ್ಸ್ ಟ್ಯಾಲೆಂಟ್ ಫೆಲೋಶಿಪ್‌ಗೆ ರಾಜೀವ್ ಗಾಂಧಿಯ ಹೆಸರು! ಬಹುಶಃ ಇಂಥ ಸರ್ವಾಧಿಕಾರಿ ಧೋರಣೆಯನ್ನು ಉತ್ತರ ಕೋರಿಯಾದಲ್ಲೂ ಕೂಡ ಕಾಣಲು ಸಾಧ್ಯವಿಲ್ಲವೇನೋ?
ಇದರ ತಾತ್ಪರ್ಯವಿಷ್ಟೆ- ಭಾರತೀಯರ ಜೀವನದ ಪ್ರತಿಯೊಂದು ಹಂತದಲ್ಲಿಯೂ ನೆಹರೂ ಕುಟುಂಬದ ಬ್ರ್ಯಾಂಡ್ ಇಣುಕಬೇಕು. ಒಂದುವೇಳೆ, ಆಹಾರ ಭದ್ರತಾ ಯೋಜನೆಗೂ ಇಂದಿರಾರ ಹೆಸರು ಇಟ್ಟರೆ ಮುಗಿದೇ ಹೋಯಿತು. ಒಟ್ಟಿನಲ್ಲಿ ಕಾಂಗ್ರೆಸ್ ಹೇಳುತ್ತಿರುವುದೇನೆಂದರೆ, "ಪ್ರತಿ ಗುಟುಕು ನೀರಿನೊಂದಿಗೂ ರಾಜೀವ್‌ರನ್ನು ನೆನೆಯಿರಿ, ಪ್ರತಿ ತುತ್ತಿನೊಂದಿಗೂ ಇಂದಿರಮ್ಮನ ಸ್ಮರಿಸಿರಿ!"  
ತಾನು ವೋಟ್‌ಬ್ಯಾಂಕ್‌ನತ್ತ ನಗು ನಗುತ್ತಾ ಹೋಗಲಿದ್ದೇನೆ ಎಂದು ಕಾಂಗ್ರೆಸ್ ಭಾವಿಸುತ್ತಿದೆ. ಆದರೆ ಡಿಸೆಂಬರ್ 8 ರಂದು 5 ರಾಜ್ಯಗಳ ಮತದಾರರ ಮನಸ್ಸು ಅನಾವರಣಗೊಳ್ಳಲಿದೆ. ಕಾಂಗ್ರೆಸ್‌ನ ಗತಿ ಏನಾಗಲಿದೆಯೋ ಎನ್ನುವುದು ಅಂದು ತಿಳಿಯಲಿದೆ. ನೆಹರು-ಗಾಂಧಿ ಕುಟುಂಬದ ರಾಜಕೀಯವನ್ನು ನೋಡಿದಾಗ ಮುಸ್ಸೋಲಿನಿ ಹೇಳುತ್ತಿದ್ದ ಮಾತು ನೆನಪಾಗುತ್ತದೆ.
ಮುಸ್ಸೋಲಿನಿ "ಎಲ್ಲವೂ ರಾಷ್ಟ್ರಕ್ಕಾಗಿ" ಎಂದು ಹೇಳುತ್ತಿದ್ದರು. ಅದನ್ನು ಸ್ವಲ್ಪ ತಿರುಚಿ, "ಎಲ್ಲವೂ ಕುಟುಂಬಕ್ಕಾಗಿ, ಯಾವುದೂ ಕುಟುಂಬದ ವಿರುದ್ಧವಲ್ಲ" ಎಂದು ಬದಲಾಯಿಸಿದರೆ ಈ ಮಾತು ಕಾಂಗ್ರೆಸ್‌ಗೆ ಸರಿಯಾಗಿ ಹೊಂದಿಕೆಯಾಗುತ್ತದೇನೋ?

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement