ಮೂಢನಂಬಿಕೆಯ ನಿರ್ಣಯ ಹೇಗೆ?
ಮೂಢನಂಬಿಕೆ ಎಂದರೇನು? ಆಧಾರವಿಲ್ಲದ ನಂಬಿಕೆಯೇ? ನಂಬಿಕೆಗೆ ಆಧಾರವಾಗಬೇಕಾದ್ದೇನು? ನಂಬಿದವನಿಗೆ ಅದರಿಂದ ಆದ ಲಾಭ ಮತ್ತು ನಷ್ಟ. ಒಂದು ನಂಬಿಕೆಯಿಂದ ಅಥವಾ ಆಚರಣೆಯಿಂದ ಒಬ್ಬನಿಗೆ ಲಾಭವಾದರೆ ಮಾತ್ರ ಅವನು ಅದನ್ನು ಮುಂದುವರೆಸುತ್ತಾನೇ ವಿನಃ ಅದರಿಂದ ಲಾಭವಾಗದೇ ಹೋದಾಗ ಅವನಷ್ಟಕ್ಕೆ ಅವನೇ ಅದನ್ನು ಕೈ ಬಿಡುತ್ತಾನೆ. ಉದಾಹರಣೆಗೆ ಒಬ್ಬ ವ್ಯಕ್ತಿ ಏನೋ ಸಮಸ್ಯೆಯಿದೆ ಎಂದು ಜ್ಯೋತಿಷಿ ಬಳಿಗೆ ಹೋಗುತ್ತಾನೆ. ಆ ಜ್ಯೋತಿಷಿ ಏನೋ ಒಂದು ಹೋಮವನ್ನೋ, ಹವನವನ್ನೋ, ಇಲ್ಲವೇ ಗೃಹಶಾಂತಿಯನ್ನೋ ಮಾಡು ಎಂದು ಹೇಳುತ್ತಾನೆ. ಅವನು ಅದನ್ನು ಮಾಡುತ್ತಾನೆ. ಅದರಿಂದ ಫಲ ಸಿಕ್ಕರಷ್ಟೆ ಅವನು ಅದನ್ನು ನಿಜವೆಂದು ನಂಬಿ ಜ್ಯೋತಿಷಿ ಬಳಿ ಹೋಗುವುದನ್ನು ಮುಂದುವರೆಸುತ್ತಾನೇ. ಒಂದು ವೇಳೆ ಅದು ಫಲಿಸದೇ ಹೋದಲ್ಲಿ ಅವನು ಆ ಜ್ಯೋತಿಷಿಯ ಮೇಲಿನ ನಂಬಿಕೆಯನ್ನು ಕಳೆದುಕೊಳ್ಳುತ್ತಾನೆ. ಅದೇ ರೀತಿ ಒಬ್ಬ ವ್ಯಕ್ತಿ ತನ್ನ ಆರೋಗ್ಯದಲ್ಲಿ ಏರು ಪೇರಾದಾಗ ಒಬ್ಬ ವೈದ್ಯನ ಬಳಿ ಹೋಗುತ್ತಾನೆ. ವೈದ್ಯನೂ ಔಷಧಿ ಕೊಡುತ್ತಾನೆ. ಆ ಔಷಧಿಯಿಂದ ಆ ವ್ಯಕ್ತಿಗೆ ಗುಣ ಕಾಣಿಸಿಕೊಂಡರಷ್ಟೇ ಅವನು ಆ ವೈದ್ಯನನ್ನು ನಂಬುವುದು, ಇಲ್ಲವಾದಲ್ಲಿ ಆ ವೈದ್ಯ ಸರಿಯಿಲ್ಲ ಎಂದು ಬೇರೊಬ್ಬರ ಹತ್ತಿರ ಹೋಗುತ್ತಾನೆ. ಹೀಗೇ ಒಬ್ಬ ಜ್ಯೋತಿಷಿಯಿಂದ ಇನ್ನೊಬ್ಬ ಜ್ಯೋತಿಷಿಯ ಹತ್ತಿರ ತಿರುಗಿ ತಿರುಗಿ ಅವನಿಗೆ ಪರಿಹಾರ ಸಿಗದೇ ಹೋದಾಗ ಅವನು ಜ್ಯೋತಿಷ್ಯದ ಮೇಲೆಯೇ ನಂಬಿಕೆ ಕಳೆದುಕೊಳ್ಳುತ್ತಾನೆ. ಅದೇ ರೀತಿ ವೈದ್ಯರಿಂದ ವೈದ್ಯರ ಬಳಿಗೆ, ಆಸ್ಪತ್ರೆಯಿಂದ ಆಸ್ಪತ್ರೆಗೆ ಹೋದರೂ ತನಗೆ ಖಾಯಿಲೆ ವಾಸಿ ಆಗಲಿಲ್ಲ ಅಂದರೆ ಅವನು ಆ ವ್ಯವಸ್ಥೆಯ ಮೇಲೂ ನಂಬಿಕೆ ಕಳೆದುಕೊಳ್ಳುತ್ತಾನೆ. ಹೀಗೆ ಯಾವುದೇ ನಂಬಿಕೆಗೆ ಆಧಾರ ಅದರಿಂದ ಸಿಗುವ ಲಾಭವೇ(ಫಲವೇ) ಹೊರತು ಬೇರೇನೂ ಅಲ್ಲ. ಆ ಲಾಭ ದ್ರವ್ಯ ರೂಪದ್ದಾಗಿರಬಹುದು ಅಥವಾ ಮಾನಸಿಕ ಶಾಂತಿಯದ್ದಾಗಿರಬಹುದು. ಅದು ಗೋಚರವಾಗುವುದು ಆ ನಂಬಿಕೆ ಇರಿಸಿಕೊಂಡವನಿಗಷ್ಟೇ ಹೊರತು ಪಕ್ಕದಲ್ಲಿ ನಿಂತು ನೋಡುವವನಿಗಲ್ಲ. ಅವನವನ ನಂಬಿಕೆಗೆ ಆಧಾರ ಅವನವನ ಅನುಭವವೇ ಹೊರತು ಅದು ಇನ್ನೊಬ್ಬನ ತರ್ಕಕ್ಕೆ ನಿಲುಕಬೇಕೆಂದೇನೂ ಇಲ್ಲ. 1983ರಲ್ಲಿ ಭಾರತ ಕ್ರಿಕೆಟ್ ವಿಶ್ವಕಪ್ ಗೆದ್ದಾಗ, ಆ ತಂಡದಲ್ಲಿದ್ದ ಆಟಗಾರರ ಅನುಭವಗಳನ್ನು ಕೇಳಿದಾಗ ಈ ನಂಬಿಕೆ ಎನ್ನುವುದು ಅವರಲ್ಲಿ ಯಾವ ರೂಪದಲ್ಲಿ ಎದುರಾಗಿತ್ತು ಎನ್ನುವುದು ತಿಳಿಯುತ್ತದೆ. ಜಿಂಬಾಬ್ವೆ ತಂಡದ ವಿರುದ್ಧ ಕಪಿಲ್ದೇವ್ ಬ್ಯಾಟ್ಮಾಡುತ್ತಿದ್ದಾಗ, ಡ್ರೆಸ್ಸಿಂಗ್ ರೂಮಿನಲ್ಲಿ ಕುಳಿತ ಭಾರತ ತಂಡದ ಆಟಗಾರರು, ತಮ್ಮ ಜಾಗದಿಂದ ಸ್ವಲ್ಪವೂ ಅಲುಗಲಿಲ್ಲ. ನಿಂತವನು ಕೂತರೆ, ಕೂತವನು ನಿಂತರೆ ಅಥವಾ ಸ್ವಲ್ಪ ಅಲ್ಲಾಡಿದರೆ ಎಲ್ಲಿ ವಿಕೆಟ್ ಬೀಳುತ್ತದೋ ಎಂಬ ನಂಬಿಕೆಯಿಂದ ಹಾಗೇ ತಟಸ್ಥವಾಗಿ ಇದ್ದರಂತೆ.
ಯಾರಾದರೂ ಒಬ್ಬ ಆಟಗಾರ ಸ್ಥಾನಪಲ್ಲಟ ಮಾಡಿದ್ದಕ್ಕೂ ವಿಕೆಟ್ ಬಿದ್ದಿದ್ದಕ್ಕೂ ಒಂದೇ ಸಮಯವಾದರೆ "ನೀನು ಜಾಗ ಬದಲು ಮಾಡ್ದೆ ಅದಕ್ಕೆ ವಿಕೆಟ್ ಬಿತ್ತು" ಎಂದು ಬೈದಾಡಿಕೊಂಡು, ನಿಂತವರು ನಿಂತ ಹಾಗೆ, ಕೂತವರು ಕೂತ ಹಾಗೇ ಇರುತ್ತಿದ್ದರಂತೆ. ಟಿ.ವಿ ಸಂದರ್ಶನವೊಂದರಲ್ಲಿ, ಭಾರತದ ಆರಂಭಿಕ ಆಟಗಾರ ಶ್ರೀಕಾಂತ್ ಅವರ ಬಾಯಲ್ಲಿ ಇದನ್ನು ಕೇಳಿದಾಗ "ಇದೆಷ್ಟು ಅತಾರ್ಕಿಕ, ಇವರೆಲ್ಲಾ ಎಷ್ಟು ಮೂಢರು" ಅನ್ನಿಸಿದರೂ ಆ ಘಳಿಗೆಯಲ್ಲಿ ಅವರು ಯಾವುದೋ ನಂಬಿಕೆಯಿಂದ ಅಲುಗಾಡದೇ ನಿಂತಿದ್ದಕ್ಕೂ, ಕಪಿಲ್ದೇವ್ ಅಜೇಯ 175 ಹೊಡೆದುದಕ್ಕೂ, ಅದರಿಂದ ಅವರಿಗಾದ ಮಾನಸಿಕ ಸಮಾಧಾನವನ್ನು ನಿರಾಕರಣೆ ಮಾಡಲಾದೀತೇ? ಅಂಥ ಮಾನಸಿಕ ಸಮಾಧಾನವನ್ನು ಕಿತ್ತುಕೊಳ್ಳುವ ಹಕ್ಕು ಯಾರಿಗಿದೆ? ಎಲ್ಲಾ ನಂಬಿಕೆಗಳಿಗೂ ವೈಜ್ಞಾನಿಕ ಆಧಾರವಿರಬೇಕು ಎನ್ನುವುದು ಒಂದು ಮೂರ್ಖತನದ ವಾದ. ಕಣ್ಣಿಗೆ ಕಾಣುವುದಷ್ಟೇ ಸತ್ಯ ಎಂದು ವಿಜ್ಞಾನ ಹೇಳುತ್ತದೆ. ಹಾಗಿದ್ದರೆ ಕುರುಡನೊಬ್ಬ ಜಗತ್ತೇ ಸುಳ್ಳು ಎಂದರೆ ಕಣ್ಣಿರುವವರು ಅದನ್ನು ಒಪ್ಪಲಾದೀತೇ? ಮಂತ್ರ, ಯಂತ್ರ ತಂತ್ರ, ಜ್ಯೋತಿಷ್ಯ ಕಡೆಗೆ ಫುಟ್ಪಾತ್ ಮೇಲೆ ಕೂತು ಗಿಣಿಶಾಸ್ತ್ರ ಹೇಳುವವನಿಂದಲೂ ತಮ್ಮ ಸಮಸ್ಯೆಗಳಿಗೆ ಪರಿಹಾರ ದೊರೆತು ಮಾನಸಿಕ ಶಾಂತಿ, ನೆಮ್ಮದಿ ಪಡೆದವರು ಈ ದೇಶದಲ್ಲಿ ಬಹಳಷ್ಟು ಜನರು ಸಿಗುತ್ತಾರೆ. ಅದೇ ರೀತಿ ಅತ್ಯಂತ ನುರಿತ ವೈದ್ಯರಿಂದ ಚಿಕಿತ್ಸೆ ಪಡೆದರೂ ದೈಹಿಕವಾಗಿ ಮಾನಸಿಕವಾಗಿ ಗುಣವಾಗದೇ ನರಳುತ್ತಿರುವವರೂ ಇದ್ದಾರೆ. ಹಾಗಾಗಿ ನಂಬಿಕೆಯ ವಿಷಯದಲ್ಲಿ ನಿಯಂತ್ರಣ ಸಲ್ಲದು.
ಹಾಗಿದ್ದರೆ ಮೂಢನಂಬಿಕೆ ಎಂಬುದೇ ಇಲ್ಲವೆ? ಖಂಡಿತ ಇದೆ. ಕೆಲವು ವಿಚಾರಗಳನ್ನು ಅಪ್ಪಟ ಸುಳ್ಳೆಂದು ತಿಳಿದಿದ್ದರೂ ನಾವು ನಂಬುತ್ತೇವೆ. ಅದನ್ನು ಮೂಢನಂಬಿಕೆಯೆಂದು ನಿರ್ವಿವಾದವಾಗಿ ಗುರುತಿಸಬಹುದಾದರೂ ನಾವು ಗುರುತಿಸುತ್ತಿಲ್ಲ ಅಂಥ ಒಂದೆರಡು ಮೂಢನಂಬಿಕೆಗಳನ್ನು ಹೀಗೆ ಪಟ್ಟಿ ಮಾಡಬಹುದಾಗಿದೆ.
* ಜಾತಿ ಆಧಾರದ ಮೇಲೆಯೇ ಎಲ್ಲವೂ ನಿರ್ಧರಿತವಾಗುವ ಜಾತಿ ಆಧಾರಿತ ಜನಗಣತಿಯನ್ನು ಮಾಡಲು ಹೊರಟಿರುವ ಜಾತಿ, ಉಪಜಾತಿ, ಒಳಜಾತಿ ಹೀಗೆ ಜಾತಿಯ ಎಲ್ಲ ಬೇರುಗಳನ್ನು ಗೊಬ್ಬರ ನೀರು ಹಾಕಿ ಪೋಷಿಸಿ ಹೆಮ್ಮರವಾಗಿ ಬೆಳೆಸುತ್ತಿರುವ ನಮ್ಮ ದೇಶವನ್ನು ಜಾತ್ಯತೀತ ರಾಷ್ಟ್ರ ಎಂದು ನಂಬಿಸಿದ್ದಾರಲ್ಲಾ? ನಾವು ನಂಬಿದ್ದೇವಲ್ಲಾ? ಅದು ನಿಜವಾದ ಮೂಢನಂಬಿಕೆ.
* ಸಿದ್ಧರಾಮಯ್ಯನವರು ಕುರಿ ಕಾಯುತ್ತಿಲ್ಲ. ಕುಮಾರಸ್ವಾಮಿಯವರು ಹೊಲ ಉಳುತ್ತಿಲ್ಲ. ಆರ್.ವಿ. ದೇಶಪಾಂಡೆಯವರು ಸಂಧ್ಯಾವಂದನೆಯನ್ನೂ ಮಾಡುವುದಿಲ್ಲ. ಜಾತಿಯೆಂಬುದು ಹುಟ್ಟಿನಿಂದ ಬರುವಂಥದ್ದಲ್ಲ, ಮಾಡುವ ಕರ್ಮದಿಂದ ಎಂದು ನಮಗೆ ತಿಳಿದಿದ್ದರೂ ಇವರುಗಳನ್ನು ಕ್ರಮವಾಗಿ ಕುರುಬ, ಒಕ್ಕಲಿಗ, ಬ್ರಾಹ್ಮಣರೆಂದು ನಂಬಿದ್ದೇವಲ್ಲ ಅದು ಮೂಢನಂಬಿಕೆ.
* ರಾಜಕಾರಣಿಗಳು ಪ್ರತಿ ಚುನಾವಣೆ ಸಮಯದಲ್ಲೂ ಭರಪೂರ ಆಶ್ವಾಸನೆಗಳೊಂದಿಗೆ ಪ್ರಕಟಿಸುವ ಪ್ರಣಾಳಿಕೆಗಳು ಅವು ಈಡೇರುವಂಥವುಗಳಲ್ಲ. ಸುಳ್ಳುಭರವಸೆಗಳು ಎಂದು ಸಾಬೀತಾಗಿದ್ದರೂ ಅವರು ಮತ್ತೆ ಮತ್ತೆ ನಂಬಿಸುತ್ತಾರೆ, ನಾವು ಮತ್ತೆ ಮತ್ತೆ ನಂಬುತ್ತಲೇ ಇರುತ್ತೇವಲ್ಲಾ ಅದು ಮೂಢನಂಬಿಕೆ.
* ಕರ್ನಾಟಕದ ಯಾವುದೋ ಒಂದು ಮೂಲೆಯಲ್ಲಿ ಕೂತು ಪಕ್ಕದ ಜಿಲ್ಲೆಯವರಿಗೇ ಪರಿಚಯವಿಲ್ಲದವರನ್ನೆಲ್ಲಾ ಜಗದ್ಗುರುಗಳೆಂದು ಸಂಬೋಧಿಸುತ್ತೇವಲ್ಲಾ ಅದು ಮೂಢನಂಬಿಕೆ.
* ಜಾತಿರಹಿತ, ವರ್ಗರಹಿತ ಸಮಾಜವನ್ನು ಸೃಷ್ಟಿಸಲು ಹೊರಟ ಬಸಬಣ್ಣನಂಥವರನ್ನು ಒಂದು ಜಾತಿಯ ಹಗ್ಗದಿಂದ ಕಟ್ಟಿಹಾಕಿ ಅದರಲ್ಲೂ ಪಂಗಡ, ಉಪ ಪಂಗಡಗಳನ್ನು ಹುಟ್ಟುಹಾಕಿ ಹೊಡೆದಾಡುವಂಥವರನ್ನು ಬಸವಣ್ಣನ ಆರಾಧಕರೆಂದು ನಂಬಿ ಕೈ ಮುಗಿಯುತ್ತೇವಲ್ಲಾ ಅದು ಮೂಢನಂಬಿಕೆ.
* ಪ್ರಚಾರಕ್ಕೋಸ್ಕರ, ಸರ್ಕಾರದ ಸವಲತ್ತುಗಳಿಗೋಸ್ಕರ ಕಣ್ಣ ಮುಂದೆಯೇ ಗೋಸುಂಬೆಯಂತೆ ಬಣ್ಣ ಬದಲಾಯಿಸುತ್ತಿದ್ದರೂ, ಆಗಾಗ ಅಜ್ಞಾನದ ಪ್ರದರ್ಶನ ಮಾಡುತ್ತಿದ್ದರೂ ಅಂಥವರನ್ನು ಬುದ್ದಿಜೀವಿಗಳೆಂದು ಗುರುತಿಸಿ ಅವರನ್ನು ಜ್ಞಾನಪೀಠದಲ್ಲಿ ಕೂರಿಸುತ್ತೇವಲ್ಲಾ ಅದು ಮೂಢನಂಬಿಕೆ.
* ಹೀಗೇ ಪಟ್ಟಿ ಮಾಡುತ್ತಾ ಹೋದರೆ ಸಾಕಷ್ಟು ಉದಾಹರಣೆಗಳು ಸಿಗುತ್ತವೆ. ಇಂಥ ನಿಜವಾದ ಮೂಢನಂಬಿಕೆಗಳ ವಿರುದ್ಧ ಕಾಯಿದೆಯೇನಾದರೂ ಜಾರಿಗೊಳಿಸಿದರೆ, ಮೂಢನಂಬಿಕೆ ಹುಟ್ಟಿಸಿದವರನ್ನು ಮತ್ತು ಪಾಲಿಸುತ್ತಿರುವವರನ್ನು ಜೈಲಿಗೆ ಹಾಕಬೇಕೆಂದಾದರೆ ಸಮಗ್ರ ಭಾರತವನ್ನೇ ಬಂದೀಖಾನೆಯಾಗಿ ಮಾರ್ಪಡಿಸಬೇಕಾದೀತು. ಜೇನುಗೂಡಿಗೆ ಕಲ್ಲು ಹೊಡೆಯುವುದು ಬೇಡ. ಪ್ರಗತಿಪರ ಚಿಂತಕರೆಂದು ಕರೆಸಿಕೊಳ್ಳುವ ಕೆಲವು ಮಠಾಧೀಶರು ಈ ಕಾಯಿದೆಯನ್ನು ಜಾರಿಗೆ ತರಲೇಬೇಕೆಂದು ಒತ್ತಾಯಿಸಿದ್ದಾರೆ. ಅವರುಗಳು ತೊಟ್ಟಿರುವ ಕಾವಿ ಸರ್ವಸಂಗ ಪರಿತ್ಯಾಗದ ಸಂಕೇತ ಎಂದು ನಂಬಿರುವುದೂ ಒಂದು ಮೂಢನಂಬಿಕೆ. ಆದ್ದರಿಂದ ಅವರುಗಳು ಕಾವಿಯನ್ನು ಕಳಚಿಟ್ಟು ಮೂಢನಂಬಿಕೆ ದೃಷ್ಟಿಯಿಂದ ಬಳಸಬಹುದಾದ ಶ್ರೀ, ಸ್ವಾಮೀಜಿ, ಜಗದ್ಗುರು ಈ ಪದಪ್ರಯೋಗಗಳನ್ನು ನಿಲ್ಲಿಸಿ ಮಠಾಧೀಶರೆಂಬ ಪದವನ್ನು ತ್ಯಾಗಮಾಡಿ ಎಲ್ಲರಂತೆ ಬಟ್ಟೆ ತೊಟ್ಟು ಎಲ್ಲರೊಳಗೊಂದಾಗಿ ಸಮಾಜ ಸೇವೆ ಸಲ್ಲಿಸಲಿ!
- ಫಣಿ ರಾಮಚಂದ್ರ
ಚಲನಚಿತ್ರ ನಿರ್ದೇಶಕರು
paniramachandra.hs@gmail.com