ವೋಲ್ವೋಗೆ ಗ್ರಾಹಕರ ಸಮಸ್ಯೆ ಅರ್ಥವಾಗ್ತಿಲ್ಲ
ಸಾರಿಗೆ ಕ್ಷೇತ್ರದಲ್ಲಿ ಕ್ರಾಂತಿ ಮಾಡಿರುವ ವಿಆರ್ಎಲ್ ಸಮೂಹ ಸಂಸ್ಥೆಗಳ ಚೇರಮನ್ ವಿಜಯ ಸಂಕೇಶ್ವರ, ರಸ್ತೆ ದುರಂತಗಳ ಬಗ್ಗೆ ಕಳವಳ ವ್ಯಕ್ತಪಡಿಸಿ, ಈ ದುರಂತಕ್ಕೆ ಸರ್ಕಾರ, ಜನಪ್ರತಿನಿಧಿಗಳು, ಖಾಸಗಿ ಬಸ್ ಸಂಸ್ಥೆಗಳು ಜತೆಗೆ ಪ್ರಯಾಣಿಕರೂ ಕಾರಣ ಎಂದಿದ್ದಾರೆ. ಇದೇ ವೇಳೆ ಅಪಘಾತ ಪ್ರಮಾಣ ತಗ್ಗಿಸಲು ತೆಗೆದುಕೊಳ್ಳಬೇಕಾದ ಕ್ರಮಗಳ ಬಗ್ಗೆ ತಿಳಿ ಹೇಳಿದ್ದಾರೆ.
-ಮೇಲಿಂದ ಮೇಲೆ ರಸ್ತೆ ದುರಂತ ಸಂಭವಿಸುತ್ತಿದೆ. ಇದಕ್ಕೆ ಯಾರು ಹೊಣೆಗಾರರೆನ್ನುತ್ತೀರಾ?
ರಸ್ತೆ ಅಪಘಾತಕ್ಕೆ ಇಂಥವರೇ, ಇದೇ ನಿರ್ದಿಷ್ಟ ಕಾರಣ ಎಂದು ಸ್ಪಷ್ಟವಾಗಿ ಹೇಳಲಾಗದು. ಅಪಘಾತಕ್ಕೆ ಎಲ್ಲರೂ ಕಾರಣರಾಗುತ್ತಾರೆ. ಅಪಘಾತಕ್ಕೆ ಪ್ರಮುಖ ಕಾರಣ ಹದಗೆಟ್ಟಿರುವ ರಸ್ತೆ. ರಾಜ್ಯ ಹೆದ್ದಾರಿಯಿರಲಿ, ರಾಷ್ಟ್ರೀಯ ಹೆದ್ದಾರಿಯಾಗಿರಲಿ ಅಥವಾ ಹಳ್ಳಿಯ ರಸ್ತೆಯಾಗಿರಲಿ ಎಲ್ಲವೂ ಹದೆಗೆಟ್ಟಿವೆ. ಬಸ್ ಅಪಘಾತ ಸಂಭವಿಸಿತು ಎಂದ ಕೂಡಲೇ ಎಲ್ಲರೂ ಸಾರಿಗೆ ಸಂಸ್ಥೆಯನ್ನೋ, ಖಾಸಗಿ ಬಸ್ ಸಂಸ್ಥೆಯನ್ನೋ ಅಪರಾಧಿ ಸ್ಥಾನದಲ್ಲಿ ನಿಲ್ಲಿಸುತ್ತಾರೆ. ಆದರೆ ಅಪಘಾತಕ್ಕೆ ಕಾರಣವೇನು ಎನ್ನುವುದನ್ನು ಕಂಡು ಹಿಡಿಯುವ ಪ್ರಯತ್ನ ಮಾಡುವುದಿಲ್ಲ. ಹದಗೆಟ್ಟಿರುವ ರಸ್ತೆಯಿಂದಾಗಿಯೇ ಬಹುಪಾಲು ರಸ್ತೆ ಅಪಘಾತ ಸಂಭವಿಸುತ್ತವೆ. ಸರ್ಕಾರ ರಸ್ತೆ ಅಭಿವೃದ್ಧಿಗೆ ಹೆಚ್ಚಿನ ಪ್ರಾಧಾನ್ಯತೆ ನೀಡಬೇಕು ಹಾಗೇ ಅದರ ಗುಣಮಟ್ಟವನ್ನೂ ಆಗಾಗ ಪರಿಶೀಲಿಸುತ್ತಿರಬೇಕು. ರಸ್ತೆಯಲ್ಲಿ ಸಣ್ಣ ಗುಂಡಿ ಬಿತ್ತೆಂದರೆ ಆಗಿಂದಾಗಲೇ ಅದನ್ನು ಮುಚ್ಚಬೇಕು. ದುರಂತವೆಂದರೆ ಸರ್ಕಾರ ಈ ಕಾರ್ಯಕ್ಕೆ ಮುಂದಾಗುವುದಿಲ್ಲ, ರಸ್ತೆ ಸಂಪೂರ್ಣ ಹಾಳಾಗುವವರೆಗೆ ಕಾಯುತ್ತದೆ. ಜನರೂ ಸಹ ಈ ವಿಷಯದಲ್ಲಿ ಸರ್ಕಾರದ ಗಮನ ಸೆಳೆಯುವ ಕೆಲಸ ಮಾಡಬೇಕು. ವಾಹನ ಅಪಘಾತ ಸಂಭವಿಸಿತು ಎಂದಾದರೆ ಅದಕ್ಕೆ ಸರ್ಕಾರ, ಸರ್ಕಾರಿ ಹಾಗೂ ಖಾಸಗಿ ಸಾರಿಗೆ ಸಂಸ್ಥೆ ಹಾಗೂ ಜನ ಕೂಡ ಹೊಣೆಗಾರರಾಗುತ್ತಾರೆ. ಆದಾಗ್ಯೂ ಗಮನಿಸಬೇಕಾದ ಅಂಶವೆಂದರೆ ಅಪಘಾತ ಎನ್ನುವುದು ಆಕಸ್ಮಿಕ ಘಟನೆ ವಿನಃ ಉದ್ದೇಶಪೂರ್ವಕವಾದುದ್ದಲ್ಲ.
-ವೋಲ್ವೋ ಬಸ್ನಲ್ಲೇನಾದರೂ ದೋಷಗಳಿವೆಯೇ?
ವೋಲ್ವೋ ಅಂತಾರಾಷ್ಟ್ರೀಯ ಮಟ್ಟದ ಉತ್ತಮ ಬಸ್ ತಯಾರಿಕಾ ಕಂಪನಿ. ವೋಲ್ವೋ ಬಸ್ ಬಂದ ಬಳಿಕ ದೇಶದಲ್ಲಿ ರಸ್ತೆ ಸಾರಿಗೆಯಲ್ಲಿ ಕ್ರಾಂತಿಯಾಗಿದೆ. ಇದು ತುಂಬಾ ಉತ್ತಮ ಹಾಗೂ ಸುರಕ್ಷಿತ ವಾಹನ. ಆದರೆ ಇದರಲ್ಲಿ ಕೆಲ ನ್ಯೂನತೆಗಳಿವೆ. ಭಾರತೀಯ ಪರಿಸರಕ್ಕೆ ತಕ್ಕಂತೆ ಬಸ್ನ ವಿನ್ಯಾಸದಲ್ಲಿ ಕೆಲವೊಂದು ಬದಲಾವಣೆ ಅಗತ್ಯ. ಉದಾಹರಣೆಗೆ ಬ್ಯಾಟರಿ ಬಸ್ನ ಮುಂಭಾಗದಲ್ಲಿಯೇ ಇದೆ. ಸಣ್ಣ ಮುಖಾಮುಖಿ ಅಪಘಾತ ಸಂಭವಿಸಿದರೂ ಬ್ಯಾಟರಿಯಲ್ಲಿ ಬೆಂಕಿ ಹೊತ್ತಿಕೊಳ್ಳುವ ಸಾಧ್ಯತೆ ಇದೆ. ಈ ಬಸ್ಗಳಲ್ಲಿ ಡೀಸೆಲ್ ಟ್ಯಾಂಕ್ ಅತೀ ಕೆಳಭಾಗದಲ್ಲಿದೆ. ಹೀಗಾಗಿ ರಸ್ತೆ ಮಧ್ಯೆ ಇರುವ ಗುಂಡಿಗಳಿಗೆ ತಾಗಿ ಡೀಸೆಲ್ ಟ್ಯಾಂಕ್ನ ಪೈಪ್ ತುಂಡಾಗಿ ಬೆಂಕಿ ಕಾಣಿಸಿಕೊಳ್ಳುವ ಸಾಧ್ಯತೆ ಅಲ್ಲಗಳೆಯುವಂತಿಲ್ಲ. ಪ್ರಮುಖವಾಗಿ ವೋಲ್ವೋ ಬಸ್ನ ವೇಗ ಅತೀ ಹೆಚ್ಚಾಗಿದೆ. ಈ ವಿಷಯವನ್ನು ನಾವು ವೋಲ್ವೋದವರಿಗೆ ಕಳೆದ 10 ವರ್ಷದಿಂದ ಎಚ್ಚರಿಸುತ್ತಾ ಬಂದಿದ್ದೇವೆ. ಆದರೆ ಅವರು ಕೇಳಲಿಕ್ಕೆ ತಯಾರಿಲ್ಲ. ನಮ್ಮದು ಅಂತಾರಾಷ್ಟ್ರೀಯ ಕಂಪನಿ, ಯುರೋಪಿಯನ್ ಮಾದರಿ. ಹೀಗಾಗಿ ದಿಢೀರನೇ ಬಸ್ ಮಾದರಿಯಲ್ಲಿ ಬದಲಾವಣೆ ಮಾಡಲು ಸಾಧ್ಯವಿಲ್ಲ ಎನ್ನುವ ಉತ್ತರ ನೀಡುತ್ತಾರೆ. ಇಲ್ಲಿನ ಗ್ರಾಹಕರ ಸಮಸ್ಯೆ ಅವರಿಗೆ ಅರಿವಾಗುತ್ತಿಲ್ಲ. ಬಿಳಿ ಮಂದಿ ಹೇಳಿದ್ದೇ ಅವರಿಗೆ ಶ್ರೇಷ್ಠ.
-ಹಾಗಿದ್ದರೆ ವಿಆರ್ಎಲ್ನ ವೋಲ್ವೋ ಬಸ್ ಎಷ್ಟು ಸುರಕ್ಷಿತ?
ಉತ್ತಮ ಪ್ರಶ್ನೆ. ವೋಲ್ವೋ ಬಸ್ ನಮ್ಮ ಪ್ರಯಾಣಿಕರಿಗೆ ಅಗತ್ಯ ಸುರಕ್ಷತೆ ಕಲ್ಪಿಸಿಕೊಡುವಲ್ಲಿ ವಿಫಲವಾಗಿದೆ ಎಂದ ಮಾತ್ರಕ್ಕೆ ನಾವು ಕೈಕಟ್ಟಿ ಕುಳಿತಿಲ್ಲ. ಕಂಪನಿ ಸ್ಪಂದಿಸುತ್ತಿಲ್ಲ ಎಂದ ಮಾತ್ರಕ್ಕೆ ನಾವು ಪ್ರಯಾಣಿಕರೊಂದಿಗೆ ಚೆಲ್ಲಾಟವಾಡುವುದೂ ಸರಿಯಲ್ಲ. ವಿಆರ್ಎಲ್ ಎಂದರೆ ವಿಶ್ವಾಸ ಎನ್ನುವ ಭಾವನೆ ಪ್ರಯಾಣಿಕರಲ್ಲಿದೆ. ಹೀಗಾಗಿ ವಿಆರ್ಎಲ್, ವೋಲ್ವೋ ಬಸ್ನಲ್ಲಿ ಕೆಲ ಹೊಸ ಮಾರ್ಪಾಡು ಮಾಡಿದೆ. ಮುಖ್ಯವಾಗಿ ಬ್ಯಾಟರಿಯನ್ನು ಮುಂಭಾಗದಿಂದ ಹಿಂಭಾಗಕ್ಕೆ ಸ್ಥಳಾಂತರಿಸಲಾಗಿದೆ. ಇಂಥ ಮಾರ್ಪಾಡು ಮಾಡಲು ವಿಶೇಷ ತಜ್ಞರ ತಂಡವೇ ನಮ್ಮ ಬಳಿ ಇದೆ. ಈ ತಂಡ ಹೊಸ ಹೊಸ ಸಂಶೋಧನೆ ಮಾಡುತ್ತಿದೆ. ಅದರಲ್ಲಿಯೂ ಡೀಸೆಲ್ ಟ್ಯಾಂಕ್ನ್ನು ವಾಹನದ ಬೇರೆ ಭಾಗಕ್ಕೆ ಸ್ಥಳಾಂತರಿಸುವ ನಿಟ್ಟಿನಲ್ಲಿ ಸಂಶೋಧನೆ ನಡೆದಿದೆ. ಇದಲ್ಲದೇ ಬಸ್ನಲ್ಲಿ ಅಗತ್ಯವಿರುವ ಇನ್ನಿತರ ಸುರಕ್ಷಿತ ವಿಧಾನಗಳ ಬಗ್ಗೆಯೂ ಈ ತಂಡ ಕೆಲಸ ಮಾಡುತ್ತಿದೆ. ತನ್ಮೂಲಕ ವಿಆರ್ಎಲ್ ವೋಲ್ವೋ ಬಸ್ ಪ್ರಯಾಣಕ್ಕೆ ಸುರಕ್ಷಿತವಾಗಿದೆ.
-ಸ್ಪೀಡ್ ಗವರ್ನರ್ ಅಳವಡಿಸಬೇಕೆಂಬ ನಿಯಮ ಪಾಲನೆಯಾಗದಿರುವುದೂ ಅಪಘಾತಕ್ಕೆ ಕಾರಣವೇ?
ಸ್ಪೀಡ್ ಗವರ್ನರ್ ಬಗ್ಗೆ ಮಾತನಾಡುವುದೇ ತಪ್ಪು. ಸ್ಪೀಡ್ ಗವರ್ನರ್ ಎನ್ನುವುದು ಅವೈಜ್ಞಾನಿಕ. ಇದನ್ನು ಅಳವಡಿಸಿದ ಮಾತ್ರಕ್ಕೆ ಅಪಘಾತ ನಿಂತು ಬಿಡುವುದಿಲ್ಲ. ಆದಾಗ್ಯೂ ಸ್ಪೀಡ್ ಗವರ್ನರ್ನಿಂದ ಒಂದಿಷ್ಟು ಅಪಘಾತ ಇಳಿಮುಖವಾಗುತ್ತದೆ ಎಂದಿಟ್ಟುಕೊಳ್ಳಿ, ಮೊಟ್ಟ ಮೊದಲನೆಯದಾಗಿ ಭಾರತದಲ್ಲಿ ಸ್ಪೀಡ್ ಗವರ್ನರ್ಗಳೇ ಲಭ್ಯವಿಲ್ಲ. ಸುಲಭಕ್ಕೆ ಕೈಗೆಟುಕದ ಸ್ಪೀಡ್ ಗವರ್ನರ್ನ್ನು ಎಲ್ಲಿಂದ ತರಬೇಕು? ಇದರ ಬಗ್ಗೆ ಎಲ್ಲರೂ ಮಾತನಾಡುತ್ತಾರೆಯೇ ವಿನಃ ಲಭ್ಯತೆಯ ಬಗ್ಗೆ ಯಾರೂ ತಲೆ ಕೆಡಿಸಿಕೊಂಡಿಲ್ಲ. ಕೋರ್ಟ್ನಲ್ಲಿಯೂ ಈ ಬಗ್ಗೆ ಚರ್ಚೆ ನಡೆದಿದೆ. ಇದು ಹೊಸ ವಾಹನಗಳಲ್ಲಿ ಅಳವಡಿಕೆಯಾಗಿ ಬರುವುದೇ ಉತ್ತಮ.
-ಪ್ರಯಾಣಿಕರಿಗೆ ಸುರಕ್ಷತೆ ಒದಗಿಸುವ ಜವಾಬ್ದಾರಿ ಯಾರದ್ದು?
ಸುರಕ್ಷತೆಯ ವಿಷಯ ಬಂದಾಗ ಖಾಸಗಿಯಾಗಲಿ ಅಥವಾ ಸಾರಿಗೆ ಸಂಸ್ಥೆಯ ಜತೆ ಜತೆಗೆ ಪ್ರಯಾಣಿಕರ ಜವಾಬ್ದಾರಿಯೂ ಮುಖ್ಯವಾಗಿದೆ. ಆಂಧ್ರ ಹಾಗೂ ಹಾವೇರಿಯಲ್ಲಿ ನಡೆದ ಬಸ್ ಅಗ್ನಿ ದುರಂತದ ವಿಷಯದಲ್ಲಿ ಪ್ರಯಾಣಿಕರದ್ದೂ ತಪ್ಪಿದೆ. ಬಸ್ ಸಮಸ್ಯೆಯಿಂದ ಅಪಘಾತ ಸಂಭವಿಸಿದರೂ ಬೆಂಕಿ ತೀವ್ರವಾಗಿ ಹಬ್ಬಲು ಪ್ರಯಾಣಿಕರು ಸಾಗಿಸುತ್ತಿದ್ದ ವಸ್ತು ಕಾರಣವಾಗಿದೆ. ಜಬ್ಬಾರ್ ಟ್ರಾವೆಲ್ಸ್ ಬಸ್ಸಿನ ಲಗೇಜ್ ಬಾಕ್ಸ್ನಲ್ಲಿ ಕೂದಲಿದ್ದವು. ಹಾವೇರಿಯ ಬಸ್ನಲ್ಲಿ ಬೆಂಕಿ ಕಾಣಿಸಿಕೊಂಡರೂ ಆ ನಂತರ ಮೂರು ಸ್ಫೋಟಗಳಾಗಿವೆ. ಇದರಲ್ಲಿ ಆ್ಯಸಿಡ್ ಕೊಂಡೊಯ್ಯಲಾಗುತ್ತಿತ್ತು ಎನ್ನಲಾಗಿದೆ. ಹೀಗೆ ಸ್ಫೋಟಕ ವಸ್ತುಗಳನ್ನು ಪ್ರಯಾಣಿಕರು ಸಾಗಿಸುವುದರಿಂದಲೂ ಅನಾಹುತ ಹೆಚ್ಚುತ್ತದೆ. ವಿಪರ್ಯಾಸವೆಂದರೆ ರಾಜಕಾರಣಿಗಳಾಗಲಿ, ಬಸ್ ಸಂಸ್ಥೆಗಳಾಗಲಿ ಇಂಥ ನಿಜ ಸಂಗತಿಯನ್ನು ಮರೆ ಮಾಚಿ ತೇಪೆ ಹಚ್ಚುವ ಕೆಲಸ ಮಾಡುತ್ತಾರೆ. ಬಸ್ಗಳ ಜತೆ ಪ್ರಯಾಣಿಕರೂ ಸುರಕ್ಷತೆ ಬಗ್ಗೆ ಗಮನ ಹರಿಸಬೇಕು.
-ಅಪಘಾತ ತಡೆಗೆ ಬಿಗಿ ಕಾನೂನು ಅಗತ್ಯವೇ?
ಈಗಿರುವ ಕಾನೂನುಗಳೇ ಹೆಚ್ಚಾಗಿದೆ. ಅಪಘಾತ ತಡೆಗೆ ಮತ್ತಷ್ಟು ಕಾನೂನು ಜಾರಿಗೆ ತರುವುದರಿಂದ ಪ್ರಯೋಜನವಿಲ್ಲ. ಆದರೆ ಈಗಿರುವ ಕಾನೂನನ್ನು ಪರಿಪೂರ್ಣವಾಗಿ ಜಾರಿಗೆ ತಂದಿದ್ದೇ ಆದಲ್ಲಿ ಅಪಘಾತ ಪ್ರಮಾಣ ಖಂಡಿತವಾಗಿ ತಗ್ಗಿಸಬಹುದು. ರಾಜ್ಯವನ್ನೇ ಉದಾಹರಣೆಯಾಗಿ ಇಟ್ಟುಕೊಂಡರೆ ಇಲ್ಲಿರುವ ವಾಹನಗಳ ಸಂಖ್ಯೆಗೆ ತಕ್ಕಂತೆ ಪೊಲೀಸ್ ಸಿಬ್ಬಂದಿಯಾಗಲಿ, ಆರ್ಟಿಒ ಸಿಬ್ಬಂದಿಗಳಾಗಲಿ ಇಲ್ಲ. ಈ ಮಾನವ ಸಂಪನ್ಮೂಲ ಕೊರತೆ ನೀಗಿಸಿದ್ದೇ ಆದಲ್ಲಿ ಕಾನೂನು ಪಾಲನೆಯಾಗುತ್ತದೆ. ಇನ್ನೊಂದು ಗಮನಾರ್ಹ ಸಂಗತಿಯೆಂದರೆ ನಮ್ಮಲ್ಲಿ ರಸ್ತೆ ನಿಯಮಕ್ಕೆ ಸಂಬಂಧಿಸಿದಂತೆ ಹೊಸ ತಂತ್ರಜ್ಞಾನಗಳ ಕೊರತೆ ಇದೆ. ಇದನ್ನು ನೀಗಿಸುವ ಕೆಲಸ ಸರ್ಕಾರ ಮಾಡಲೇ ಬೇಕು.
-ಅಪಘಾತಕ್ಕೆ ತರಬೇತಿ ಹೊಂದಿರದ ಚಾಲಕರೂ ಕಾರಣವೇ?
ಖಂಡಿತವಾಗಿಯೂ ಹೌದು. ನಮ್ಮಲ್ಲಿ ತರಬೇತಿ ಹೊಂದಿದ ವಾಹನ ಚಾಲಕರು ಸಿಗುವುದೇ ಇಲ್ಲ. ಇಲ್ಲಿ ಗಮನಿಸಬೇಕಾದ ಸಂಗತಿಯೆಂದರೆ ದೇಶದಲ್ಲಿ ಶೇ. 40ರಷ್ಟು ಚಾಲಕರ ಕೊರತೆ ಇದೆ. ಇನ್ನೊಂದು ವರ್ಷದಲ್ಲಿ ಈ ಪ್ರಮಾಣ ಶೇ.80ಕ್ಕೆ ತಲುಪಲಿದೆ. ಲೈಸೆನ್ಸ್ ಹೊಂದಿರದ, ಕ್ರಮಬದ್ಧವಾಗಿ ವಾಹನ ಚಾಲನೆ ಮಾಡಲು ಗೊತ್ತಿಲ್ಲದವರೂ ಇಂದು ಡ್ರೈವರ್ಗಳಾಗಿ ಬಿಟ್ಟಿದ್ದಾರೆ. ಇದಕ್ಕೆ ಚಾಲಕರನ್ನು ದೋಷಿಯಾಗಿಸಲು ಬರುವುದಿಲ್ಲ. ನಮ್ಮಲ್ಲಿ ವಾಹನ ಚಾಲನಾ ಪರವಾನಗಿ ನಿಯಮವೇ ವಿಚಿತ್ರವಾಗಿದೆ. ಮೂರು ವರ್ಷ ಲಘು ವಾಹನ ಚಾಲನೆ ಮಾಡಿದ ಅನುಭವವಿದ್ದವರಿಗೆ ಮಾತ್ರ ಭಾರಿ ವಾಹನ ಚಾಲನೆ ಪರವಾನಗಿ ನೀಡುತ್ತಾರೆ. ಡ್ರೈವರ್ ಕೆಲಸ ಆಯ್ದುಕೊಳ್ಳುವವರೇ ಬಡವರು. ಇವರು ಕಾರ್ನಂಥ ವಾಹನ ಖರೀದಿಸಿ ಕಲಿಯಲು ಸಾಧ್ಯವೇ? ಪೈಲೆಟ್, ರೇಲ್ವೆ ಚಲಾಯಿಸುವವರಿಗೂ ಈ ದೇಶದಲ್ಲಿ ಅನುಭವ ಬೇಕಾಗಿಲ್ಲ. ಆದರೆ ಬಸ್ನಂತಹ ವಾಹನ ಚಲಾಯಿಸಲು ಅನುಭವ ಕೇಳುವ ವಿಚಿತ್ರ ನಿಯಮವಿದೆ. ಇಂಥ ನಿಯಮ ಸರ್ಕಾರ ಬದಲಾಯಿಸಬೇಕಿದೆ. ಮುಖ್ಯವಾಗಿ ಸರ್ಕಾರ ಚಾಲಕರಿಗೆ ಸೂಕ್ತ ತರಬೇತಿ ನೀಡುವ ಕಾರ್ಯ ಮಾಡಬೇಕಿದೆ. ಒಂದೊಮ್ಮೆ ನುರಿತ ಚಾಲಕರು ಸಿಕ್ಕಿದ್ದೇ ಆದಲ್ಲಿ ಈ ಕೂಡಲೇ 20 ಲಕ್ಷ ಜನರಿಗೆ ಉದ್ಯೋಗ ಸಿಗಲಿದೆ. ನಾನೇ ನನ್ನ ಸಂಸ್ಥೆಯಿಂದ ಪ್ರತಿ ವರ್ಷ 2 ಸಾವಿರ ಚಾಲಕರನ್ನು ನೇಮಿಸಿಕೊಳ್ಳುವುದಾಗಿ ಸರ್ಕಾರಕ್ಕೆ ಅಫಿಡವಿಟ್ ಬರೆದುಕೊಡುತ್ತೇನೆ. ಸರ್ಕಾರ ಈ ಕೆಲಸ ಮಾಡಲಿ. ನುರಿತ ಚಾಲಕರಿದ್ದರೆ ಅಪಘಾತ ಪ್ರಮಾಣ ಗಣನೀಯವಾಗಿ ಇಳಿಮುಖವಾಗಲಿದೆ.
-ಪ್ರಕಾಶ ಎಸ್. ಶೇಟ್, ಕನ್ನಡಪ್ರಭ