ಅಂಕಣಗಳು

ಆಮ್ ಆದ್ಮಿ ಪಕ್ಷಕ್ಕೆ ಆಸರೆಯಾಗುವನೇ ಮತದಾರ?

ಅರವಿಂದ್ ಕೇಜ್ರಿವಾಲ್ ಅವರ ಆಂದೋಲನ ಭಾರೀ ಸದ್ದು ಮಾಡುತ್ತಿದೆ...

ಅರವಿಂದ್ ಕೇಜ್ರಿವಾಲ್ ಅವರ ಆಂದೋಲನ ಭಾರೀ ಸದ್ದು ಮಾಡುತ್ತಿದೆ. ಇದನ್ನು ಅಲ್ಲಗಳೆಯಲು ಯಾರಿಂದಲೂ ಸಾಧ್ಯವಿಲ್ಲ. ಅವರ ವರ್ಚಸ್ಸು ಅಥವಾ ರಾಜಕೀಯ ನೀತಿಗಿಂತ ಹೆಚ್ಚಾಗಿ ಅವರಿಗೆ ಬೆಂಬಲ ಸಿಗುತ್ತಿರುವುದಕ್ಕೆ ಬೇರೆಯದ್ದೇ ಕಾರಣಗಳಿವೆ. ರಾಜಕೀಯ ವ್ಯವಸ್ಥೆಯ ವಿರುದ್ಧ ರೊಚ್ಚಿಗೆದ್ದಿರುವ ಜನತೆಯ ಪ್ರತಿಬಿಂಬದಂತೆ ಅವರು ಕಾಣುತ್ತಿದ್ದಾರೆ. ಸ್ವಾತಂತ್ರ್ಯಾ ನಂತರದಿಂದ ಬಂದ ರಾಜಕೀಯ ಪಕ್ಷಗಳೆಲ್ಲವೂ ತಮ್ಮ ಕೈಲಾದಷ್ಟೂ ದೇಶವನ್ನು ಲೂಟಿ ಹೊಡೆದಿವೆ. ಜನತೆ ಇಷ್ಟು ವರ್ಷದಿಂದ ಈ ದೌರ್ಜನ್ಯವನ್ನು ಸಹಿಸಿಕೊಳ್ಳುತ್ತಾ ಬಂದಿದ್ದಾರೆ. ರಾಜಕೀಯ ಕೆಸರು ಗುಂಡಿಯಲ್ಲಿ ಮುಳುಗುತ್ತಿರುವ ಜನತೆಗೆ ಅದೇಕೋ ಕೇಜ್ರಿವಾಲ್ ಮೇಲೆತ್ತುವ ಕೈಯಾಗಿ ಕಾಣಿಸುತ್ತಿದ್ದಾರೆ. ಅಥವಾ ಅವರು ಹುಲ್ಲುಕಡ್ಡಿಯಷ್ಟೆಯೇ?
ಮತದಾರರು ಆಗಾಗ ಎಚ್ಚೆತ್ತು ರಾಜಕೀಯ ವರ್ಗ ನಡೆಸುವ ದೌರ್ಜನ್ಯದ ವಿರುದ್ಧ ತೊಡೆ ತಟ್ಟಿದ್ದಾರೆ. ತುರ್ತು ಪರಿಸ್ಥಿತಿ ಹೇರಿ ದೇಶದ ಕುತ್ತಿಗೆ ಹಿಚುಕಲು ಪ್ರಯತ್ನಿಸಿದ ಇಂದಿರಾ ಗಾಂಧಿಯನ್ನು ಅವರು ಕೆಳಕ್ಕಿಳಿಸಿದರು. ಕಳೆದ ಬಾರಿಯ ಚುನಾವಣೆಯಲ್ಲಿ ಕಾಂಗ್ರೆಸ್ ಅಮೇಥಿ ಕ್ಷೇತ್ರದಿಂದ ದೂರ ಉಳಿಯುವಂತೆಯೇ ಅವರು ನೋಡಿಕೊಂಡರು. ಭ್ರಷ್ಟಾಚಾರ, ಒಳಜಗಳಗಳಿಂದ ಹೆಸರು ಕೆಡಿಸಿಕೊಂಡ ಕರ್ನಾಟಕ ಬಿಜೆಪಿಯನ್ನು ಅವರು ಅಧಿಕಾರದಿಂದ ಕಿತ್ತೆಸೆದರು. ಆದರೆ ಇವೆಲ್ಲ ಅಸಾಧಾರಣ ಸಂಗತಿಗಳು. ಪ್ರತಿ ಬಾರಿಯೂ ಮತದಾರರು ಇದೇ ರೀತಿ ವರ್ತಿಸುತ್ತಾರೆ ಎಂದು ಹೇಳುವುದಕ್ಕೆ ಸಾಧ್ಯವಿಲ್ಲ. ಮತದಾರ ವರ್ಗದ ಸಮಸ್ಯೆಗಳನ್ನು 'ಇವಿಷ್ಟೇ' ಎಂದು ಸ್ಪಷ್ಟವಾಗಿ ಹೇಳುವುದಕ್ಕೆ ಸಾಧ್ಯವೇ ಇಲ್ಲ. ಎಲ್ಲಾ ವಲಯಗಳ ಜನರೂ ಈ ಗುಂಪಿನಲ್ಲಿದ್ದಾರೆ. ಅವರವರ ಕ್ಷೇತ್ರಗಳಲ್ಲಿ ಉದ್ಭವವಾಗುವ ಸಮಸ್ಯೆ ಮತ್ತು ಅವುಗಳ ತೀವ್ರತೆ ಪರಸ್ಪರ ವಿಭಿನ್ನವಾಗೇ ಇರುತ್ತವೆ. ಬೆಂಗಳೂರು ಮತ್ತು ಮುಂಬೈನಲ್ಲಿ ಕಳೆದ ಚುನಾವಣೆಯಲ್ಲಿ ಎಷ್ಟೊಂದು ವಿದ್ಯಾವಂತ ಅಭ್ಯರ್ಥಿಗಳು ಚುನಾವಣಾ ಅಖಾಡಕ್ಕಿಳಿದಿದ್ದರು! ಐಟಿ ಪ್ರೊಫೆಷನಲ್ಗಳು, ಬ್ಯಾಂಕರ್ಗಳು, ವೈದ್ಯರು, ಸಮಾಜ ಸೇವಕರು...ಆದರೂ ಎಲ್ಲರೂ ಸೋತರು!
ಕೇಜ್ರಿವಾಲ್ರ ಪಕ್ಷಕ್ಕಿರುವ ಇನ್ನೊಂದು ತೊಂದರೆಯೆಂದರೆ, ಆಮ್ ಆದ್ಮಿ ಪಕ್ಷವೆಂದರೆ ಕೇವಲ ಕೇಜ್ರಿವಾಲ್ ಅಷ್ಟೇ ಎನ್ನುವಂಥ ಸನ್ನಿವೇಶ ಸೃಷ್ಟಿಯಾಗಿರುವುದು. ಕೇಜ್ರಿವಾಲ್ರ ಹೆಸರು ಮೊದಲು ಸದ್ದು ಮಾಡಿದ್ದು, ಅಣ್ಣಾ ಹಜಾರೆಯವರೊಂದಿಗೆ  ಭ್ರಷ್ಟಾಚಾರ ವಿರೋಧಿ ಆಂದೋಲನದಲ್ಲಿ ಅವರು ಕಾಣಿಸಿಕೊಂಡಾಗ. ಆದರೆ ಅಣ್ಣಾ ಹಜಾರೆಯವರು ತಮ್ಮ ಈ ಶಿಷ್ಯ ರಾಜಕೀಯ ಪಕ್ಷವನ್ನು ಸ್ಥಾಪಿಸುತ್ತೇನೆ ಎಂದು ಹೇಳಿದಾಗ ದೂರವಾಗಿಬಿಟ್ಟರು. ಈಗ ಕೇಜ್ರಿವಾಲರ ಜೊತೆಗೆ ಇಬ್ಬರು ಗೌರವಾನ್ವಿತ ಸಂಗಾತಿಗಳಿದ್ದಾರೆ- ಪ್ರಶಾಂತ್ ಭೂಷಣ್ ಮತ್ತು ಯೋಗೇಂದ್ರ ಯಾದವ್. ಆದರೆ ಇಬ್ಬರೂ ಪರದೆಯ ಹಿಂದೆ ನಿಂತುಕೊಂಡೇ ಕೆಲಸ ಮಾಡುತ್ತಾ ಕೇಜ್ರಿವಾಲ್ರಿಗೆ ಒಬ್ಬಂಟಿಯಾಗಿ ಮಿಂಚಲು ಬಿಟ್ಟುಬಿಟ್ಟಿದ್ದಾರೆ. ಆದರೆ ಇದರಿಂದ ಕೇಜ್ರಿವಾಲರಿಗೆ  ಉಪಯೋಗವೂ ಆಗುತ್ತಿದೆ. ಬಿಳಿ ಟೋಪಿಯ ಈ ರಾಜಕಾರಣಿ (ಕೇಜ್ರಿವಾಲ್), ತಮ್ಮ ಸಾಂಸ್ಥಿಕ ನೈಪುಣ್ಯ ಮತ್ತು ಸ್ವಂತಿಕೆಯನ್ನು ಬಳಸುತ್ತಿದ್ದಾರೆ. ಸುಮಾರು 10,000 ಸ್ವಯಂ ಸೇವಕರು, ತಮ್ಮ ಬ್ಯುಸಿ ಜೀವನದಿಂದ ಸಮಯ ತೆಗೆದಿಟ್ಟು ಕೇಜ್ರಿವಾಲರಿಗಾಗಿ ದುಡಿಯುತ್ತಿದ್ದಾರೆ. ಇದರಲ್ಲಿ ವಿದ್ಯಾರ್ಥಿಗಳು, ವೃತ್ತಿನಿರತರೂ ಇದ್ದಾರೆ. ಸ್ಟಾರ್ ಟಿ.ವಿ.ಯ ಮುಖ್ಯಸ್ಥರಾಗಿ ಮ್ಯಾಜಿಕ್ ಮಾಡಿದ್ದ ಸಮೀರ್ ನಾಯರ್ ಅವರನ್ನೇ ಇದಕ್ಕೆ ಉದಾಹರಿಸಬಹುದು. ಸಮೀರ್ ಕೇಜ್ರಿವಾಲರ ಪಕ್ಷಕ್ಕಾಗಿ ದುಡಿಯುತ್ತಿದ್ದಾರೆ. ಇಷ್ಟೇ ಅಲ್ಲದೆ ಅನಾಮಧೇಯ ವ್ಯಕ್ತಿಯೊಬ್ಬರು ತಮ್ಮ ದೊಡ್ಡ ಬಂಗಲೆಯನ್ನು ಆಮ್ ಆದ್ಮಿ ಪಕ್ಷಕ್ಕೆ ಕೊಟ್ಟುಬಿಟ್ಟಿದ್ದಾರೆ! ಆದರೆ ಕಾಂಗ್ರೆಸ್ ಏನು ಮಾಡುತ್ತಿದೆಯೋ ನೋಡಿ? ಕೇಜ್ರಿವಾಲರಿಗೆ ಸಿಗುತ್ತಿರುವ ಬೆಂಬಲವನ್ನು ಸಹಿಸಲು ಅದಕ್ಕೆ ಆಗುತ್ತಿಲ್ಲ. ಕೇಜ್ರಿವಾಲ್ಗೆ ವಿದೇಶದಿಂದ ಹಣ ಬರುತ್ತಿದೆ ಎಂದು ಗೃಹಮಂತ್ರಿ ಶಿಂದೆಯವರು ತನಿಖೆಗೆ ಆದೇಶಿಸಿದ್ದಾರೆ.
ಕೇಜ್ರಿವಾಲರ ಕೆಲವು ಐಡಿಯಾಗಳು ಹೊಸತಾಗಿವೆ. ಆದರೆ ರಾಮ್ಲೀಲಾ ಮೈದಾನದಲ್ಲಿ ವಿಧಾನಸಭಾ ಅಧಿವೇಶನ ನಡೆಸಬೇಕೆಂಬ ಅಥವಾ ಸಾರ್ವಜನಿಕ ಹಣವನ್ನು ಹೇಗೆ ಖರ್ಚು ಮಾಡಬೇಕೆಂಬುದನ್ನು ದೆಹಲಿಯ 2700 ಮೊಹಲ್ಲಾಗಳ ಸಾರ್ವಜನಿಕರೇ ನಿರ್ಧರಿಸಬೇಕೆಂಬ ಅವರು ಕೆಲವು ಯೋಚನೆಗಳು ತುಂಬಾ ನಾಟಕೀಯ/ ಭಾವುಕವೆನಿಸುತ್ತವೆ.  ಆದರೆ ಪ್ರತಿ ಪ್ರದೇಶಗಳಿಗೂ ತಮ್ಮದೇ ಆದ ಸಮಸ್ಯೆಗಳಿರುವುದರಿಂದ ಅವೇ ಒಂದು ಪ್ರಣಾಳಿಕೆಯನ್ನು ಸಿದ್ಧಪಡಿಸಿ ತಮಗೆ ಕೊಡಬೇಕು ಎನ್ನುವ ಅವರ ಯೋಚನೆಯನ್ನು ಮೆಚ್ಚಲೇಬೇಕು. ಆದರೆ ತಮ್ಮ ಪ್ರಣಾಳಿಕೆಯಲ್ಲಿ ಕೇಜ್ರಿವಾಲರು ನೀರು ಮತ್ತು ವಿದ್ಯುತ್ಗೆ ಸಬ್ಸಿಡಿ ಕೊಡುತ್ತೇವೆ ಎಂದು ಹೇಳಿದರೆ, ಅವರ ಪಕ್ಷವೂ ಉಳಿದ ಪಕ್ಷಗಳಂತೆ ಆಮಿಷ ಒಡ್ಡುವ ತಂತ್ರಕ್ಕೆ ಮೊರೆಹೋಗುತ್ತಿದೆ ಎಂದಂತಾಗುತ್ತದೆ.  ಹೇಗೆ ಸಬ್ಸಿಡಿ ಎಂಬುದು ಭ್ರಷ್ಟಾಚಾರಕ್ಕೆ ಆಹ್ವಾನ ನೀಡುತ್ತದೆ ಎನ್ನುವುದನ್ನು ನಾವು ನೋಡಿಯೇ ಇದ್ದೇವೆ. ಮೇಲ್ನೋಟಕ್ಕಂತೂ ಕೇಜ್ರಿವಾಲ್ರ ಕಾರ್ಯವೈಖರಿ ಪಾರದರ್ಶಕವಾಗಿದೆ, ಜನತೆಯನ್ನು ಆಡಳಿತದ ಭಾಗವಾಗಿಸಲು ಅವರು ಉತ್ಸುಕರಾಗಿದ್ದಾರೆ ಮತ್ತು ಭ್ರಷ್ಟಾಚಾರದ ವಿರುದ್ಧ ಟೊಂಕಕಟ್ಟಿ ನಿಲ್ಲಲಿದ್ದಾರೆ ಎನ್ನುವುದಂತೂ ಗೋಚರವಾಗುತ್ತಿದೆ. ಆದರೆ ಚುನಾವಣೆ ಗೆಲ್ಲಲು ಇಷ್ಟು ಸಾಕೆ? ಇನ್ನೊಂದೆಡೆ ಶೀಲಾ ದೀಕ್ಷಿತ್ ಅವರ ವೈಫಲ್ಯವಂತೂ ಕೇಜ್ರಿವಾಲರ ಸಹಾಯಕ್ಕೆ ಬರಲಿದೆ. ದೀಕ್ಷಿತ್ರಿಗೆ ಮಹಿಳೆಯರ ಭದ್ರತೆಯ ಬಗ್ಗೆ ಮಾತನಾಡುವುದಕ್ಕೂ ಈಗ ಧೈರ್ಯ ಸಾಲುತ್ತಿಲ್ಲ. ಇನ್ನು ದೆಹಲಿ ಬಿಜೆಪಿಯ ಒಳಜಗಳಗಳೂ ಹೆಚ್ಚಾಗಿವೆ. ಆದರೆ ಈ ಅಂಶಗಳನ್ನು ಗಣನೆಗೆ ತೆಗೆದುಕೊಂಡು ಆಮ್ ಆದ್ಮಿ ಪಕ್ಷವೇ ಗೆಲ್ಲುತ್ತದೆ ಎಂದು ಹೇಳಲು ಸಾಧ್ಯವೇ?
ಏಕೆಂದರೆ ಮತದಾರರ ಗುಣವೇ ನಮ್ಮಲ್ಲಿ ವಿಚಿತ್ರವಾಗಿದೆ. ಮತದಾರರು ಬಹುತೇಕ ಬಾರಿ ಕುರಿ ಮಂದೆಯಂತೆ ವರ್ತಿಸುತ್ತಾರೆ. ಸ್ವತಂತ್ರವಾಗಿ ಯೋಚಿಸುವ ಶಕ್ತಿಯನ್ನೇ ಅವರು ಕಳೆದುಕೊಂಡುಬಿಡುತ್ತಾರೆ.  ಧೀರ್ಘಕಾಲದಿಂದ ಬೇರೂರಿರುವ ಪಕ್ಷಗಳನ್ನು ಕಿತ್ತೆಸೆಯಲು ಹೊಸಬರಿಗೆ ಅಷ್ಟು ಸುಲಭವಾಗಿ ಸಾಧ್ಯವಿಲ್ಲ. ಬಿಜೆಪಿ ಮತ್ತು ಕಾಂಗ್ರೆಸ್ನ ಬೇರು ಈ ಬಾರಿ ಅಲ್ಲಾಡಬಹುದೇನೋ? ಆದರೆ ಇದರಿಂದಾಗಿ ಕೇಜ್ರಿವಾಲ್ ಗೆದ್ದೇ ಗೆಲ್ಲುತ್ತಾರೆ ಎಂದು ಸ್ಪಷ್ಟವಾಗಿ ಹೇಳುವುದಕ್ಕಾಗುವುದಿಲ್ಲ. ಒಂದು ವೇಳೆ ಕೇಜ್ರಿವಾಲ್ ಗೆಲುವು ಸಾಧಿಸಿದ್ದೇ ಆದರೆ, ಅದು ಭಾರತದ ರಾಜಕೀಯದಲ್ಲಿ ಬದಲಾವಣೆಗೆ ಕಾರಣವಾಗಲಿರುವುದಂತೂ ಸತ್ಯ.

- ಟಿಜೆಎಸ್ ಜಾರ್ಜ್

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಸಿಇಸಿ ವಿರುದ್ಧದ ವಿಪಕ್ಷಗಳ ಪ್ರತಿಭಟನೆ: ವಶಕ್ಕೆ ಪಡೆದ ಬೆನ್ನಲ್ಲೇ ರಾಹುಲ್, ಪ್ರಿಯಾಂಕಾ ಗಾಂಧಿ ಬಿಡುಗಡೆ

ಅಧಿಕಾರಿಯಂತೆ ನಟಿಸಿ ಆಪ್ ನಾಯಕನಿಗೆ ಧೋಕಾ; ಮದುವೆಯಾಗಿ ಆಭರಣಗಳೊಂದಿಗೆ ಮಹಿಳೆ ಪರಾರಿ!

ಆಪರೇಷನ್ ಸಿಂಧೂರ್, ರಕ್ಷಕ್‌ನಲ್ಲಿ ಪ್ರಮುಖ ಪಾತ್ರವಹಿಸಿದ್ದ ಅಶುತೋಷ್ ದೀಕ್ಷಿತ್ ವಾಯುಪಡೆಯ ನೂತನ ಮುಖ್ಯಸ್ಥ!

ಮಚ್ಛಾರ್ ಆರೋಗ್ಯಯಲ್ಲಿ 'ಸ್ಥಿರ ಸುಧಾರಣೆ': ಭಾರತೀಯ ರಾಯಭಾರ ಕಚೇರಿ

KPSC ನೇಮಕಾತಿ ಹಗರಣ: EDಯಿಂದ ಮಾಜಿ ಅಧ್ಯಕ್ಷ ಶಿವಶಂಕರಪ್ಪ ಸಾಹುಕಾರ್‌, ಸದಸ್ಯೆ ಗೀತಾ ಬಂಧನ!