ಮುಕುಟಕಿಟ್ಟ ರತ್ನದಂತೆ ಸೆಳೆದ ಮುಖಪುಟ!
ಸಚಿನ್ ತೆಂಡುಲ್ಕರ್ ಹಾಗೂ ಕನ್ನಡಿಗ, ವಿಜ್ಞಾನಿ ಸಿಎನ್ಆರ್ ರಾವ್ ಅವರಿಗೆ ಸಮಪಾಲಿನ ಗೌರವ ಸೂಚಿಸಿ ರೂಪಿಸಿದ 'ಕನ್ನಡಪ್ರಭ' ಮುಖಪುಟ ವಿನ್ಯಾಸಕ್ಕೆ ರಾಜ್ಯಾದ್ಯಂತ ವ್ಯಾಪಕ ಪ್ರತಿಕ್ರಿಯೆ ವ್ಯಕ್ತವಾಗಿದೆ.
ಭಾರತ ರತ್ನ ಪುರಸ್ಕಾರಕ್ಕೆ ಪಾತ್ರರಾದ ಸಚಿನ್ ತೆಂಡುಲ್ಕರ್ ಹಾಗೂ ಕನ್ನಡಿಗ, ವಿಜ್ಞಾನಿ ಸಿಎನ್ಆರ್ ರಾವ್ ಅವರಿಗೆ ಸಮಪಾಲಿನ ಗೌರವ ಸೂಚಿಸಿ ರೂಪಿಸಿದ 'ಕನ್ನಡಪ್ರಭ' ಮುಖಪುಟ ವಿನ್ಯಾಸಕ್ಕೆ ರಾಜ್ಯಾದ್ಯಂತ ವ್ಯಾಪಕ ಪ್ರತಿಕ್ರಿಯೆ ವ್ಯಕ್ತವಾಗಿದೆ.
'ಕನ್ನಡಪ್ರಭ' ಪತ್ರಿಕೆಯ ಭಾನುವಾರದ ಸಂಚಿಕೆ ನೋಡಿ ತುಂಬಾನೇ ಖುಷಿಯಾಯಿತು. ಕನ್ನಡಿಗರಾದ ಖ್ಯಾತ ವಿಜ್ಞಾನಿ ಸಿಎನ್ಆರ್ ರಾವ್ ಅವರಿಗೆ ಭಾರತ ರತ್ನ ಪ್ರಶಸ್ತಿ ಬಂದಿರುವ ವಿಷಯವನ್ನು ಪತ್ರಿಕೆಯ ಮುಖಪುಟದಲ್ಲಿ ಆದ್ಯತೆ ಕೊಟ್ಟು ಕನ್ನಡಿಗರಿಗೆ ಗೌರವ ಸೂಚಿಸಲಾಗಿದೆ. ಸಚಿನ್ ತೆಂಡೂಲ್ಕರ್ ಅವರಿಗೆ ಭಾರತ ರತ್ನ ಬಂದಿರುವ ವಿಷಯವನ್ನೂ ಮುಖಪುಟದಲ್ಲಿ ಪ್ರಕಟಿಸಿ, ಈ ಎರಡು ರತ್ನಗಳಿಗೆ ಸಮಾನ ಗೌರವವನ್ನು ನೀಡಿರುವುದು ಕನ್ನಡ ಪತ್ರಿಕೆಯ ಹೆಮ್ಮೆಯ ಸಂಗತಿ.
-ಸಿ.ಕೆ. ಸತೀಶ್, ಆಡಿಟರ್, ಚಿಕ್ಕಮಗಳೂರು,
ಕನ್ನಡಪ್ರಭ ಬಂದೊಡನೆ ನೆಲಕ್ಕೆ ಹರವಿ ಓದುವುದು ನಮ್ಮ ರಿವಾಜು. ನಾನು ಓದಿ ಆದ ನಂತರ ಪತ್ನಿಗೆ ವರ್ಗಾಯಿಸುತ್ತಿದ್ದೆ. ಇಂದಿನ ಮುಖಪುಟ ಮಾತ್ರ ಭಿನ್ನವಾಗಿದ್ದು, ನಾನು ಕೈಯಲ್ಲಿ ಓದುತ್ತಿದ್ದಂತೆ ಎದುರಿನಿಂದ ಪತ್ನಿಗೆ ಓದಿಕೊಳ್ಳುವಂತೆ ಹೇಳಿದೆ.
-ಆನಂದ ಸುಬ್ರಹ್ಮಣ್ಯ ನಾರಾವಿ
ನೋಡ್ತಾ ಇರಿ, ಏನೇನ್ ಮಾಡ್ತೀವಿ ಅಂತ ಹೇಳುತ್ತಾ ಮಾಡಿಕೊಂಡು ಬಂದಿದ್ದು ಈವರೆಗೆ. ಹೇಳದೆ ಮಾಡಿದ್ದು, ಅದೂ ಕೊನೆ ಗಳಿಗೆಯಲ್ಲಿ, ಈವರೆಗೆ ಕನ್ನಡ ಪತ್ರಿಕಾರಂಗದಲ್ಲಿ ಯಾರೂ ಮಾಡದ ಪ್ರಯೋಗವನ್ನು. ಶಹಭಾಷ್ ಎನ್ನಲೇಬೇಕು. ಭಾರತರತ್ನ ಪ್ರಶಸ್ತಿಯನ್ನು ಏಕಕಾಲದಲ್ಲಿ ಪಡೆದ ಕ್ರಿಕೆಟ್ ಪಟು ಸಚಿನ್, ಭಾರತದ ಮಹಾನ್ ವಿಜ್ಞಾನಿ ಸಿ.ಎನ್.ಆರ್ ಅವರಿಬ್ಬರಿಗೂ ಪತ್ರಿಕೆಯಲ್ಲಿ ಸಮಾನ ಸ್ಥಾನ ಕಲ್ಪಿಸುವ ಮೂಲಕ ಕನ್ನಡಪ್ರಭ ಕನ್ನಡಪ್ರಜ್ಞೆಯನ್ನು ಮೆರೆದಿದೆ.
-ರವೀಂದ್ರನಾಥ ಠಾಗೂರ್,
ಹಿರಿಯ ವಕೀಲ, ತುಮಕೂರು
ಕನ್ನಡಪ್ರಭ ಪತ್ರಿಕೆಯನ್ನು ಭಾನುವಾರ ಅತ್ಯಂತ ವಿಶೇಷವಾಗಿ ವಿನ್ಯಾಸ ಮಾಡಲಾಗಿದೆ. ಪತ್ರಿಕೋದ್ಯಮದ ಇತಿಹಾಸದಲ್ಲಿ ಇದೊಂದು ಮೈಲುಗಲ್ಲು. ದೇಶದ ಶ್ರೇಷ್ಠ ನಾಗರಿಕ ಪ್ರಶಸ್ತಿಯನ್ನು ಪಡೆದ ವ್ಯಕ್ತಿಗಳಿಗೆ ಸಮಾನಂತರ ಗೌರವ ನೀಡಿರುವ ಕನ್ನಡಪ್ರಭ ಬಳಗದ ಎಲ್ಲ ಕ್ರಿಯಾಶೀಲ ಗೆಳೆಯರಿಗೆ ಅಭಿನಂದನೆಗಳು. ಇದೊಂದು ವಿನೂತನ ಹಾಗೂ ವಿಶೇಷ ಪ್ರಯತ್ನವಾಗಿದೆ.
-ಎಚ್.ಕೆ. ಪಾಟೀಲ, ಗ್ರಾಮೀಣಾಭಿವೃದ್ಧಿ ಸಚಿವ
'ಕನ್ನಡಪ್ರಭ'ದಲ್ಲಿ ಯಾವಾಗಲೂ ಹೊಸ ಆಲೋಚನೆಗೆ, ಹೊಸ ವಿನ್ಯಾಸಕ್ಕೆ ಸಾಕಷ್ಟು ಅವಕಾಶ ಇರುತ್ತದೆ. ಇಬ್ಬರಿಗೆ ಭಾರತ ರತ್ನ ನೀಡಿದ ಹಿನ್ನೆಲೆಯಲ್ಲಿ ಪುಟವಿನ್ಯಾಸ ತುಂಬಾ ಚೆನ್ನಾಗಿ ಮೂಡಿಬಂದಿದೆ. ಬಹಳ ಸಂತೋಷವಾಯಿತು.
-ಪ್ರೊ.ಎಂ. ಕೃಷ್ಣೇಗೌಡ, ಸಾಹಿತಿ, ಮೈಸೂರು
ನಮ್ಮ 'ಭಾರತ ರತ್ನ' ಸಿ.ಎನ್.ಆರ್. ರಾವ್ ಅವರನ್ನು ಏಕೆ ತಲೆ ಕೆಳಗು ಮಾಡಿ ಪ್ರಕಟಿಸಿದಿರಿ? ಅಂದರೆ ಭಾರತಕ್ಕೆ ಗೌರವ ತರುವುದು ಆಟವೋ, ವಿಜ್ಞಾನವೋ? ಟಿವಿ ಮಾಧ್ಯಮಗಳೇನು ಬೇಕಾದರೂ ಮಾಡಲಿ. ಟಿವಿ ಆಫ್ ಮಾಡಿ ಕುಳಿತರಾಯಿತು. ಆದರೆ ನಿಮ್ಮ ಪತ್ರಿಕೆ ನಮ್ಮ ಸಂಗ್ರಹಾಗಾರದಲ್ಲಿ ಇರುತ್ತದಲ್ಲಾ, ಇಷ್ಟವಿಲ್ಲದಿದ್ದರೆ ಎಸೆದು ಬಿಡಿ ಎನ್ನುತ್ತೀರೇನು? ಅಷ್ಟಕ್ಕೂ ಸಿ.ಎನ್.ಆರ್. ರಾವ್ ಅವರು 'ಉಲ್ಟಾ' ಬಿದ್ದಿರುವುದೇಕೆ? ನಾವು ಇಡೀ ಪತ್ರಿಕೆಯನ್ನು ಬಿಡಿಸಿ ಓದುವ ಅಭ್ಯಾಸದವರು. ರಾವ್ ಅವರ ಸಾಧನೆಯಿಂದ 'ಭಾರತರತ್ನ' ಪ್ರಶಸ್ತಿಗೆ ಮಾನ ಬಂದಿದೆ. ಇದು ಸಚಿನ್ ತೆಂಡುಲ್ಕರ್ಗೆ ಕೊಟ್ಟು ಮೈನಸ್ ಆಗಿರುವ ಮಾನವನ್ನು ಭರ್ತಿ ಮಾಡಲು ಹೂಡಿದ ಉಪಾಯವೆಂದು ಯಾರಿಗಾದರೂ ಹೊಳೆಯದೇ? ಸಿದ್ದರಾಮಯ್ಯನವರನ್ನು ಸಕಾರಣವಾಗಿ ಟೀಕಿಸುವ ನೀವು ಈಗ ಅಂಥದ್ದೇ ಅಪ್ರಬುದ್ಧ ಕೆಲಸ ಮಾಡಿದಿರಲ್ಲಾ?
-ಚಂದ್ರಶೇಖರ ದಾಮ್ಲೆ, ಸ್ನೇಹ ಶಿಕ್ಷಣ ಸಂಸ್ಥೆ, ಸುಳ್ಯ
'ಕನ್ನಡಪ್ರಭ' ಸದಾ ಹೊಸತನ, ಹೊಸ ಪ್ರಯೋಗ ಬಯಸುತ್ತದೆ. ಕ್ರಿಯಾಶೀಲತೆಯ ಕೈಗನ್ನಡಿಯನ್ನು ತನ್ನ ಓದುಗರ ಮುಂದೆ ಹಿಡಿಯುತ್ತದೆ ಎನ್ನುವುದಕ್ಕೆ ಭಾನುವಾರದ ಸಂಚಿಕೆ ಸಾಕ್ಷಿ. ಎಂತಹ ಅದ್ಭುತ ಪರಿಕಲ್ಪನೆ. 'ಭಾರತ ರತ್ನಗಳು' ಎಂದು ಬಿಂಬಿಸಿರುವ ಮುಖಪುಟದ ಶೈಲಿ, ನಿರೂಪಣೆ, ತಲೆಬರಹ ಎಲ್ಲವೂ ಒಂದು ಪಾಠದಂತಿದೆ. ಜಿಡ್ಡುಗಟ್ಟಿರುವ ಕೆಲವು ಪತ್ರಿಕೆಗಳಿಗೆ ದೊಡ್ಡ ಪಾಠವೂ ಹೌದು. ಸಂಗ್ರಹಕ್ಕೆ ಯೋಗ್ಯವಾದ, ಬೆಲೆ ಕಟ್ಟಲಾಗದ ಮಾಹಿತಿಯನ್ನು ನೀಡಿ ನಾವು (ಕನ್ನಡಪ್ರಭ) ಎಲ್ಲರಿಗಿಂತಲೂ ವಿಭಿನ್ನ ಎಂಬುದನ್ನು ತೋರಿಸಿಕೊಟ್ಟ ಪ್ರಧಾನ ಸಂಪಾದಕರು ಹಾಗೂ ಬಳಗಕ್ಕೆ ಹ್ಯಾಟ್ಸ್ ಆಫ್...
-ಕೊಕ್ಕಡ ವೆಂಕಟರಮಣ ಭಟ್, ಮಂಡ್ಯ
ವಿಜ್ಞಾನ ಮತ್ತು ಕ್ರೀಡೆ ಮನುಷ್ಯನ ಒಟ್ಟು ಬೆಳವಣಿಗೆಗೆ ಪೂರಕ ಎಂಬುದನ್ನು 'ಕನ್ನಡಪ್ರಭ' ಸಾಬೀತುಪಡಿಸಿದೆ. ಇದಕ್ಕೆ ಒಂದೇ ಮುಖಪುಟದಲ್ಲಿ ಎರಡೆರಡು ಭಾರತ ರತ್ನಗಳಿಗೆ ಸಮಾನ ಸ್ಥಾನ ನೀಡಿದ್ದೇ ಸಾಕ್ಷಿ. ಸಾಧಕರ ವಿವರಣೆ, ಅಪರೂಪದ ಭಾವಚಿತ್ರಗಳು ಸಾಂಧರ್ಬಿಕವಾಗಿದ್ದು ಸಂಗ್ರಹಯೋಗ್ಯವಾಗಿದೆ.
-ಶಿವಶಂಕರ ಟೋಕರೆ, ಪ್ರಾಂಶುಪಾಲರು ಸರ್ಕಾರಿ ಐಟಿಐ, ಬೀದರ್.
ಅಂತರ್ಜಾಲ ತಾಣದಲ್ಲಿ ಮುಖಪುಟ ಓದುವಾಗ ಕಂಪ್ಯೂಟರನ್ನೇ ಉಲ್ಟಾ ಮಾಡಿ ಓದಬೇಕೇನೋ ಅನಿಸಿತು.
-ಫನಿಶ್ ಬಸವಾಣಿ
ಒಬ್ಬರು ವಿಜ್ಞಾನ ಕ್ಷೇತ್ರದಲ್ಲಿ ಮೇರು ಸಾಧನೆಗೈದ ಮಹಾನ್ ಸಾಧಕ. ಮತ್ತೊಬ್ಬರು ಕ್ರೀಡಾ ಕ್ಷೇತ್ರದಲ್ಲಿ ಇಡೀ ಜಗತ್ತಿನ ಗಮನ ಸೆಳೆದ ಅಪ್ರತಿಮ ಕ್ರೀಡಾಪಟು. ಇಬ್ಬರಿಗೂ ಸಮಾನ ಗೌರವ, ಸಮಾನ ಪ್ರಾತಿನಿಧ್ಯ ನೀಡುವ ಮೂಲಕ ಕನ್ನಡಪ್ರಭ ವಿಜ್ಞಾನ, ಕ್ರೀಡೆಗೆ ಸಮಾನ ಗೌರವ ನೀಡಿದೆ. ಪತ್ರಿಕೆ ಮುಖಪುಟವನ್ನು ತಲೆ ಕೆಳಗೆ ಮಾಡಿ ನೋಡಿದರೂ ಭಾರತ ರತ್ನ, ಅದೇ ಪತ್ರಿಕೆ ಉಲ್ಟಾ ಹಿಡಿದರೂ ಭಾರತ ರತ್ನ.
-ಬುರುಡೇಕಟ್ಟೆ ಮಂಜಪ್ಪ, ಹಿರಿಯ ಇತಿಹಾಸ ಸಂಶೋಧಕರು, ದಾವಣಗೆರೆ
ಭಾನುವಾರ 'ಕನ್ನಡಪ್ರಭ' ನೋಡಿದ ಕೂಡಲೇ ಶಾಕ್ ಆಯ್ತು. ಉಲ್ಟಾ- ಪಲ್ಟಾ ಪೇಪರ್ ಪ್ರಿಂಟ್ ಮಾಡಿದ್ದಾರೆ ಎಂದುಕೊಂಡೆ. ನಂತರ ಗೊತ್ತಾಯಿತು 'ಕನ್ನಡಪ್ರಭ'ವು ಈ ಇಬ್ಬರು ದಿಗ್ಗಜರ ಕುರಿತು ವಿಶೇಷವಾಗಿ ಮಾಡಿರುವ ಪುಟ ವಿನ್ಯಾಸ ಎಂದು. ಇಬ್ಬರಿಗೂ ಸಮಾನ ಸ್ಥಾನ ನೀಡಿರುವ ಕ್ರಿಯಾಶೀಲತೆ ಮೆಚ್ಚುವಂತದ್ದು.
-ವಸಂತ್ಕುಮಾರ್, ವ್ಯಾಪಾರಸ್ಥರು, ಶಿವಮೊಗ್ಗ
ಮುಖ ಪುಟ ನೋಡಿ ವಿಸ್ಮಯವಾಯಿತು.
ಹೊಸ ಪ್ರಯೋಗ ಚೆನ್ನಾಗಿದೆ. ಅತ್ಯುನ್ನತ ನಾಗರಿಕ ಪ್ರಶಸ್ತಿಯಾದ 'ಭಾರತ ರತ್ನ' ಪ್ರಶಸ್ತಿಗೆ ಭಾಜನರಾಗಿರುವ ವಿಜ್ಞಾನಿ ಪ್ರೊ.ಚಿಂತಾಮಣಿ ನಾಗೇಶ ರಾಮಚಂದ್ರರಾವ್ ಮತ್ತು ಕ್ರಿಕೆಟ್ ಪ್ರೇಮಿಗಳ ಪಾಲಿನ ದೇವರು ಸಚಿನ್ ತೆಂಡೂಲ್ಕರ್ ಬಗ್ಗೆ ಸಮಗ್ರ ಮಾಹಿತಿ ನೀಡಲಾಗಿದೆ. ಮಾಹಿತಿ, ಸುಂದರ ಪುಟ ವಿನ್ಯಾಸದೊಂದಿಗೆ ಪತ್ರಿಕೆ ಜೀವ ಕಳೆ ಪಡೆದುಕೊಂಡಿದೆ.
-ಜೆ.ಜಿ.ನಾಗರಾಜ್, ಅಧ್ಯಕ್ಷರು,
ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್, ಕೋಲಾರ
ಕನ್ನಡಕ್ಕೆ 3ನೇ ಭಾರತರತ್ನ ತಂದು ಕೊಟ್ಟ ವಿಜ್ಞಾನಿ ಸಿಎನ್ಆರ್ ರಾವ್, ಕ್ರೀಡೆಗೆ ಮೌಲ್ಯ ತಂದುಕೊಟ್ಟಂತಹ ತೆಂಡೂಲ್ಕರ್ ಎರಡೂ ರತ್ನಗಳು ಯಾವ ವಿಧದಲ್ಲೂ ಕಮ್ಮಿ ಇಲ್ಲ ಎಂಬುದನ್ನು ಕನ್ನಡಪ್ರಭ ತನ್ನು ನ.17ರ ಸಂಚಿಕೆಯಲ್ಲಿ ತೋರಿಸಿಕೊಟ್ಟಿದೆ. ಪತ್ರಿಕೆಯ ಹೊಸತನಕ್ಕೆ, ವಿನ್ಯಾಸಕ್ಕೆ ಕನ್ನಡಿ ಹಿಡಿದಿದೆ. ಕನ್ನಡಪ್ರಭಕ್ಕೆ ಶುಭಾಶಯಗಳು.
-ವಿಜಯಶ್ರೀ ಕಲ್ಯಾಣರಾವ
ಕಣಮೇಶ್ವರ, ಗೃಹಣಿ, ಜೇವರ್ಗಿ
'ಕನ್ನಡಪ್ರಭ'ದ ವಿನೂನತ ಪ್ರಯೋಗ ಕನ್ನಡ ಪತ್ರಿಕಾರಂಗದಲ್ಲಿಯೇ ಒಂದು ಹೊಸ ಮೈಲುಗಲ್ಲು. ಭಾನುವಾರದ ಸಂಚಿಕೆ ವಿಶೇಷತೆಯಿಂದ ಕೂಡಿದ್ದು, ಅದ್ಭುತವಾಗಿದೆ. ಸಚಿನ್ ತೆಂಡೊಲ್ಕರ್ ಹಾಗೂ ಕರ್ನಾಟಕದ ವಿಜ್ಞಾನಿ ಸಿಎನ್ಆರ್ ರಾವ್ ಅವರಿಗೆ ಮುಖಪುಟದಲ್ಲಿ ಪ್ರಧಾನ ಸುದ್ದಿಯನಾಗಿಸಿ ಸಮಾನ ಸ್ಥಾನ ನೀಡುವ ಮೂಲಕ ಇಬ್ಬರನ್ನೂ ಗೌರವಿಸಲಾಗಿದೆ.
-ಸಿದ್ದರಾಮ ಸ್ವಾಮೀಜಿ,
ನಾಗನೂರು ರುದ್ರಾಕ್ಷಿಮಠ ಬೆಳಗಾವಿ