ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಅಂಕಣಗಳು

ಒಡೆದು ಆಳುವ ರಾಜಕಾರಣಿ ಯಾರು?

ಛತ್ತೀಸ್‌ಗಡ ಚುನಾವಣಾ ಅಖಾಡದಲ್ಲಿ ಸೋನಿಯಾ ಗಾಂಧಿಯವರು ಆರ್ಭಟಿಸಿದ...

Vishwanath S
Updated On : 19 Nov 2013, 11:44 am

ಛತ್ತೀಸ್‌ಗಡ ಚುನಾವಣಾ ಅಖಾಡದಲ್ಲಿ ಸೋನಿಯಾ ಗಾಂಧಿಯವರು ಆರ್ಭಟಿಸಿದ ನಂತರ ಎರಡು ಪ್ರಮುಖ ಪ್ರಶ್ನೆಗಳಿಗೆ ಉತ್ತರ ಕಂಡುಕೊಳ್ಳಲು ನಮಗೆ ಅವಕಾಶ ದೊರಕಿದೆ. ಮೊದಲನೆಯದು, ಭಾರತದ ನಿಜವಾದ ಒಡೆದು ಆಳುವ ರಾಜಕಾರಣಿ ಯಾರು ಮತ್ತು ಎರಡನೆಯದು, ಭಾರತದ ರಾಜಕಾರಣಿಗಳಿಗೆ ಯಶಸ್ಸಿನ ನಿಜವಾದ ಮಾದರಿ ಯಾವುದು ಎನ್ನುವುದು.
ಆಹಾರ ಭದ್ರತಾ ಯೋಜನೆಯನ್ನು ಆದರದಿಂದ ಸ್ವಾಗತಿಸಿರುವ ರಾಜ್ಯದಲ್ಲಿ, ಮೋದಿ ಮತ್ತು ಬಿಜೆಪಿಯ ವಿರುದ್ಧ ಆಕ್ರೋಶದಿಂದ ಮಾತನಾಡಿ, ನಿಜವಾದ ಒಡೆದಾಳುವ ರಾಜಕಾರಣಿ ಯಾರು ಎಂಬುದನ್ನು ಸೋನಿಯಾ ಮುಚ್ಚಿಡಲು ಪ್ರಯತ್ನಿಸಿದ್ದಾರೆ. ಅಂದರೆ ಬಹಳ ಚಾಣಾಕ್ಷತನದಿಂದ ಅವರು ಅಖಾಡವನ್ನು ಆಯ್ಕೆ ಮಾಡಿಕೊಂಡು, ಬಳಸಿದ್ದಾರೆ. ಆದರೆ ಒಡೆದು ಆಳುವ ರಾಜಕಾರಣಿ ಯಾರು ಎನ್ನುವುದಕ್ಕೆ ಉತ್ತರವಂತೂ ಸ್ಪಷ್ಟ. ಆ ರಾಜಕಾರಣಿ ಸೋನಿಯಾ ಗಾಂಧಿಯೇ! ಬಿಜೆಪಿಗೆ ಅಧಿಕಾರದಾಸೆಯಿದೆ ಎಂದು ಸೋನಿಯಾ ಆಕ್ರೋಶ ವ್ಯಕ್ತಪಡಿಸುತ್ತಾರೆ. ಹಾಗಾದರೆ ಯಾವ ಪಕ್ಷಕ್ಕೆ ಅಧಿಕಾರದಾಸೆಯಿಲ್ಲ? ಕಳೆದ 10 ವರ್ಷಗಳಿಂದ ಯಾವ ಪಕ್ಷ ಅಧಿಕಾರಕ್ಕಾಗಿ ಅತಿ ಆಸೆಯನ್ನು ತೋರಿಸುತ್ತಾ ಬಂದಿದೆ ಎನ್ನುವುದನ್ನು ನಾವು ನೋಡಿಲ್ಲವೇ?
ಸೋನಿಯಾ ವಿದೇಶಿ ಮೂಲದವರು ಎಂಬ ವಿಷಯ ಜಾತ್ಯತೀತ ಭಾರತದಲ್ಲಿ ಎಣಿಕೆಗೆ ಬರುವುದಿಲ್ಲ ಎಂದು ಹೇಳುವುದು ಬೂಟಾಟಿಕೆಯ ಪ್ರಗತಿಪರ ಬುದ್ಧಿಜೀವಿಗಳಿಗೆ ಫ್ಯಾಷನ್ ಆಗಿ ಹೋಗಿದೆ. ಸತ್ಯವೇನೆಂದರೆ, ಬಹಳ ದೊಡ್ಡ ಸಂಖ್ಯೆಯ ಭಾರತೀಯರು, ಕಾಂಗ್ರೆಸ್‌ನ ಅನುಗ್ರಹದಿಂದಾಗಿ ಸೋನಿಯಾ ಗಾಂಧಿ ಭಾರತದ ಅತ್ಯಂತ ಬಲಿಷ್ಠ ರಾಜಕಾರಣಿಯಾಗಿ ಬದಲಾಗಿರುವುದನ್ನು ನೋಡಿ ಕಸಿವಿಸಿಗೊಂಡಿದ್ದಾರೆ.  
ಈ ವಿಷಯವನ್ನೆತ್ತಿಕೊಂಡು ಚರ್ಚಿಸಲು ಸಂಘ ಪರಿವಾರಕ್ಕೆ ಬಹಳ ಖುಷಿ. ಅದಷ್ಟೇ ಅಲ್ಲ, ಇದೇ ಕಾರಣದಿಂದಲೇ ಶರದ್ ಪವಾರ್ ಕಾಂಗ್ರೆಸ್‌ನಿಂದ ಹೊರನಡೆದರು. 1999ರಲ್ಲಿ ಮುಲಾಯಂ ಸಿಂಗ್ ಯಾದವ್ ಮತ್ತು 2009ರಲ್ಲಿ ಜಯಲಲಿತಾ ಅವರು ಸೋನಿಯಾರನ್ನು ಬೆಂಬಲಿಸದೇ ಇದ್ದದ್ದು ಇದೇ ಕಾರಣದಿಂದಲೇ.
ಆದರೂ ಇಂದು ಬಹುತೇಕ ಪ್ರಾದೇಶಿಕ ಪಕ್ಷಗಳ ರಾಜಕಾರಣಿಗಳು ಸೋನಿಯಾರನ್ನು ಬೆಂಬಲಿಸುತ್ತಿರುವುದರ ಹಿಂದೆ ಅವುಗಳ ಸ್ವಹಿತಾಸಕ್ತಿಯ ಆಟವಿದೆ. ಈ ವಿಷಯ 2004ರಲ್ಲಿ ಸೋನಿಯಾ ಗಾಂಧಿಯವರ ಗಮನಕ್ಕೆ ಸ್ಪಷ್ಟವಾಗಿ ಬಂದಿತ್ತು. ಹೀಗಾಗೇ, ಅವರು ಪ್ರಧಾನಿ ಹುದ್ದೆಯಿಂದ ದೂರ ಉಳಿದು, ತಮ್ಮೆಲ್ಲಾ ಮಾತಿಗೂ 'ಹೂಂ' ಗುಟ್ಟುವ ವ್ಯಕ್ತಿಯನ್ನು ಆ ಜಾಗದಲ್ಲಿ ಕೂರಿಸಿದರು.
ಎಲ್ಲಿ ತಮ್ಮಂತೆ ತಮ್ಮ ಮಗ ರಾಹುಲ್‌ರ ನೋಡಲಾಗುತ್ತದೋ ಎನ್ನುವ ಭಯದಿಂದಾಗಿಯೇ ಸೋನಿಯಾ ಗಾಂಧಿಯವರು ಹೊಸ ತಂತ್ರವನ್ನು ರಚಿಸಿದ್ದಾರೆ. ನರೇಂದ್ರ ಮೋದಿ ಒಡೆದಾಳುವ ರಾಜಕಾರಣಿ ಎಂದು ವ್ಯಾಪಕವಾಗಿ ಪ್ರಚಾರ ಮಾಡಿ ಕಾಂಗ್ರೆಸ್‌ನ ರಾಜಕುಟುಂಬದ ಅಂತರ್ಗತ ಒಡಕನ್ನು ಮುಚ್ಚಿಹಾಕುವ ಪ್ರಯತ್ನಕ್ಕೆ ಮುಂದಾಗಿದ್ದಾರೆ. ಒಂದು ವೇಳೆ 2004ರಲ್ಲಿ ವಾಜಪೇಯಿ ಗೆದ್ದಿದ್ದರೆ ಅಥವಾ 2009ರಲ್ಲಿ ಆಡ್ವಾಣಿಯವರು ಗೆಲುವು ಸಾಧಿಸಿದ್ದರೆ ನಿಸ್ಸಂಶಯವಾಗಿಯೂ ಇಂಥ ಯೋಜನೆ ಇಂದು ಅಸ್ತಿತ್ವದಲ್ಲೇ ಇರುತ್ತಿರಲಿಲ್ಲ.
ಇನ್ನು 2002ರ ಘಟನೆಯ ತಳಹದಿಯ ಮೇಲೆ ಮೋದಿಯವರನ್ನು 'ಒಡೆದಾಳುವ ನಾಯಕ' ಎಂದು ಬಿಂಬಿಸುವುದು ಬಹಳ ಸುಲಭ ಎನ್ನುವುದು ಸೋನಿಯಾರಿಗೆ ಚೆನ್ನಾಗಿ ಗೊತ್ತಿದೆ. ಆದರೆ ಒಂದು ವೇಳೆ ಮೋದಿಯವರ ಎಲ್ಲಾ ಟೀಕಾಕಾರರನ್ನು ಸಾಲಾಗಿ ನಿಲ್ಲಿಸಿ, ಅದರಲ್ಲಿ ಎಷ್ಟು ಜನರು ಅವರನ್ನು ಒಡೆದು ಆಳುವ ನಾಯಕ ಎಂದು ಭಾವಿಸುತ್ತಾರೆ ಎಂದು ನೋಡಿದಾಗ, ಈ "ವಿಭಾಗಿಸುವ" ವಾದವನ್ನು ಮುಂದಿಡುವವರೆಲ್ಲ ದೆಹಲಿಯ ಬುದ್ಧಿಜೀವಿಗಳೇ ಎನ್ನುವುದು ಗೊತ್ತಾಗುತ್ತದೆ. ಇಂದು ಬಹುತೇಕ ಪ್ರಾದೇಶಿಕ ಪಕ್ಷಗಳು ತಮ್ಮ ರಾಜಕೀಯ ಅನುಕೂಲಕ್ಕಾಗಿ "ಮೋದಿಯವರ ಒಡೆದಾಳುವ ನೀತಿ" ಎಂಬ ವಿಷಯದ ಮೇಲೆ ಭಾಷಣ ಬಿಗಿಯುತ್ತಿವೆ!
ಸರಳವಾಗಿ ಹೇಳಬೇಕೆಂದರೆ, "ಯಾವ ರಾಜಕಾರಣಿಯ ವಿರುದ್ಧ ವಿಭಿನ್ನ ಮತ್ತು ಹಾನಿಕಾರಕ ರಾಜಕೀಯ ಹಿತಾಸಕ್ತಿಗಳು ಕೆಲಸ ಮಾಡಿ ಆತನನ್ನು ಕಿತ್ತೆಸೆಯಲು ಪ್ರಯತ್ನಿಸುತ್ತವೋ, ಅವನು ಒಡೆದು ಆಳುವ ರಾಜಕಾರಣಿ!"
ಎನ್ನುತ್ತದೆ ನಮ್ಮ ದೇಶದ ಸೆಕ್ಯುಲರ್ ಸಿದ್ಧಾಂತ.
ಅಂದರೆ, ನಿರ್ಣಾಯಕ ಕ್ರಮಗಳನ್ನು ತೆಗೆದುಕೊಳ್ಳುವ ಸಾಮರ್ಥ್ಯವಿರುವ ಮತ್ತು ತಮ್ಮ ವಿರೋಧಿಗಳ ಸದ್ದಡಗಿಸಿ ತಮ್ಮ ಕಾರ್ಯಸಾಧನೆಯನ್ನು ಮಾಡುವವರನ್ನು ಇಂದು ಒಡೆದು ಆಳುವವರು ಎಂದು ಕರೆಯಲಾಗುತ್ತಿದೆ! ಹಾಗಿದ್ದರೆ ಇದು ಮೋದಿಯವರಿಗೆ ಮತ್ತು ಇಂದಿರಾ ಗಾಂಧಿಯವರಿಗೆ ಸರಿಯಾಗಿ ಅನ್ವಯವಾಗುತ್ತದೆ ಬಿಡಿ! ಏಕೆಂದರೆ, ತಮಗೆ ಎದುರಾದ ಅಡ್ಡಿಗಳೆಲ್ಲವನ್ನೂ ಜಿಗಿದು ಬಾಂಗ್ಲಾದೇಶದ ವಿಷಯದಲ್ಲಿ ನಿರ್ಣಾಯಕ ನಿರ್ಧಾರ ಕೈಗೊಂಡರು ಇಂದಿರಾ. ಈಗ ಮೋದಿಯವರಿಗೂ ಅನೇಕ ಅಡ್ಡಿಗಳು ಎದುರಾಗುತ್ತಿದ್ದರೂ, ಅವರು ಆಡಳಿತ ಮತ್ತು ಅಭಿವೃದ್ಧಿ ಪಥದಲ್ಲಿ ಮುನ್ನುಗ್ಗುತ್ತಲೇ ಇದ್ದಾರೆ.  
ಇದೆಲ್ಲಾ ಏನೇ ಇದ್ದರೂ, ನಿಜವಾಗಲೂ ಒಡೆದು ಆಳುವ ರಾಜಕಾರಣಿಗಳು ಯಾರಿದ್ದಾರೆ ಎನ್ನುವುದನ್ನು ಕಪ್ಪು ಕನ್ನಡಕ ತೆಗೆದು ನೋಡಿದಾಗ, ನಮ್ಮ ಕಣ್ಣಿಗೆ ಬೀಳುವುದು ಮೋದಿಯಲ್ಲ, ಬದಲಾಗಿ ಕಾಂಗ್ರೆಸ್! ಕಾಂಗ್ರೆಸ್ ನೆಹರೂರ ಕಾಲದಿಂದಲೂ ಜನತೆಯನ್ನು ಒಡೆದು ಆಳುವ ನೀತಿಯನ್ನು ಅನುಸರಿಸಿಕೊಂಡೇ ಬಂದಿದೆ.
ಇಂಥ ವಿಭಜನಾ ರಾಜಕೀಯಕ್ಕೆ ಮೂಲ ಕಾರಣವೆಂದರೆ ಅಧಿಕಾರದ ಮೇಲೆ ಕುಟುಂಬದ ಏಕಸ್ವಾಮ್ಯತೆಯಿರುವುದು ಮತ್ತು ವ್ಯವಸ್ಥೆಯಲ್ಲಿನ ಹುಳುಕು. ಅಲ್ಪಸಂಖ್ಯಾತರ(ಕೋಮು ಮತ್ತು ಜಾತಿ) ಚಿಕ್ಕ ಮತಗಳ ಮೂಲಕ ದೊಡ್ಡ ಗೆಲುವು ಸಾಧಿಸಬಲ್ಲ ವಿಚಿತ್ರ ಚುನಾವಣಾ ವಾತಾವರಣ ನಮ್ಮಲ್ಲಿದೆ. ಚಿಕ್ಕ ಸಂಖ್ಯೆಯಲ್ಲಿರುವ ನಮ್ಮನ್ನಾಳುವವರು ತಮ್ಮ ಪ್ರಾಬಲ್ಯವನ್ನು ಬಲಪಡಿಸಲು ಒಡೆದು ಆಳುವ ಈ ವೋಟಿನಾಟವನ್ನು ಆಡುತ್ತಾರೆ. ಬ್ರಿಟೀಷರು ತಾವು ಬಲಿಷ್ಠರಾಗಲು ಮಾಡಿದ್ದೂ ಇದನ್ನೇ. ತದನಂತರ ದೇಶದ ಚುಕ್ಕಾಣಿ ಹಿಡಿದ ಕಾಂಗ್ರೆಸ್  ಸರ್ಕಾರ ಮಾಡುತ್ತಾ ಬಂದಿರುವುದೂ ಇದನ್ನೇ. ಇಂದಿನ ಯಶಸ್ವೀ ಪ್ರಾದೇಶಿಕ ಪಕ್ಷಗಳಾದ ಸಮಾಜವಾದಿ ಪಕ್ಷ, ಬಹುಜನ ಸಮಾಜ ಪಕ್ಷ, ತೃಣಮೂಲ ಕಾಂಗ್ರೆಸ್ ಕೂಡ ಇದೇ ಹಾದಿಯಲ್ಲಿ ನಡೆಯುತ್ತಿವೆ.
ಬಹುಸಂಖ್ಯಾತ ಮತಗಳನ್ನು ಒಡೆದು, ನಂತರ ಅದರಲ್ಲಿನ ಅಲ್ಪಂಸಂಖ್ಯಾತರನ್ನು ತಮ್ಮ ಬಳಿ ಸೆಳೆದುಕೊಳ್ಳುವ ಕೆಲಸ ಹಿಂದಿನಿಂದಲೂ ಕಾಂಗ್ರೆಸ್‌ಗೆ ರೂಢಿಯಾಗಿದೆ. ಇಷ್ಟು ವರ್ಷಗಳವರೆಗೆ ಅದು ಚುಕ್ಕಾಣಿ ಹಿಡಿದಿದ್ದರ ಹಿಂದಿನ ಸೂತ್ರವೂ ಇದೇ. ಈ ಒಡೆದು ಆಳುವ ರಾಜಕೀಯಕ್ಕೆ ನೆಹರೂರ ಕಾಲದಲ್ಲಿ ಹೆಚ್ಚು ಮಹತ್ವ ಸಿಕ್ಕಿರಲೇ ಇಲ್ಲ. ಏಕೆಂದರೆ ಅವರ ವರ್ಚಸ್ಸು ಮತ್ತು ಜನಪ್ರಿಯತೆ ಅಂದು ಮತದಾರರನ್ನು ಸೆಳೆದಿದ್ದವು. ಆದರೆ ಯಾವಾಗ ನೆಹರೂರ ಕಾಲ ಅಂತ್ಯವಾಯಿತೋ, ಆಗ ಇಂದಿರಾ, "ಮತಗಳನ್ನು ಕ್ರೋಡೀಕರಿಸಬೇಕೆಂದರೆ, ಒಡೆದು ಆಳಲೇಬೇಕು" ಎಂದು ಅಂದುಕೊಂಡರು.   
ಅವರ ನಂತರ ಬಂದ ರಾಜೀವ್ ಗಾಂಧಿ ಕೂಡ ಮಾಡಿದ್ದೂ ಇದನ್ನೇ. 1984ರ ಚುನಾವಣೆಯಲ್ಲಿ ಅವರು ಗೆದ್ದದ್ದು ಸಿಖ್ಖರ ವಿರುದ್ಧ ಹಿಂದು ಮತಗಳನ್ನು ಧ್ರುವೀಕರಿಸುವ ಮೂಲಕ. ಅವರ ನಂತರ, ಬೋಫೋರ್ಸ್ ಹಗರಣ ಹಚ್ಚಿಟ್ಟ ಕಿಚ್ಚನ್ನು ನಂದಿಸಲು ಭ್ರಷ್ಟಾಚಾರ ವಿರೋಧಿ ವೇದಿಕೆಯಿಂದಷ್ಟೇ ಸಾಧ್ಯವಿಲ್ಲ ಎಂದರಿತ ವಿ.ಪಿ. ಸಿಂಗ್ "ಮುಂದುವರಿದ ವರ್ಗ ಮತ್ತು ಹಿಂದುಳಿದ ವರ್ಗದ ಮಧ್ಯೆ ಒಡಕು ತಂದು" ಗದ್ದುಗೆಯನ್ನು ಭದ್ರಪಡಿಸಿಕೊಂಡರು.
ಜಯಲಲಿತಾ, ಮಮತಾ ಬ್ಯಾನರ್ಜಿ, ಮಾಯಾವತಿ, ನವೀನ್ ಪಟ್ನಾಯಕ್, ಎನ್‌ಟಿಆರ್, ನಿತೀಶ್ ಕುಮಾರ್, ಮತ್ತು ಕಾಶ್ಮೀರದ ಅಬ್ದುಲ್ಲಾಗಳನ್ನೂ ಒಳಗೊಂಡಂತೆ ಭಾರತದ ರಾಜಕೀಯ ಪಕ್ಷಗಳೆಲ್ಲ ಜಾತಿ ಮತ್ತು ವ್ಯಕ್ತಿಯ ವರ್ಚಸ್ಸಿನ ಮಿಶ್ರಣವನ್ನು ಬಳಸಿ, ತಮ್ಮ ರಾಜ್ಯಗಳಲ್ಲಿ ಯಾರು ಅಲ್ಪಸಂಖ್ಯಾತರಿದ್ದಾರೋ(ಜಾತಿ/ಕೋಮು) ಅವರ ಮತಗಳನ್ನು ಗಳಿಸಲು ಪ್ರಯತ್ನಿಸುತ್ತಲೇ ಇವೆ.  
ಆದರೆ ಬಿಜೆಪಿ ನರೇಂದ್ರ ಮೋದಿಯವರನ್ನು ಪ್ರಧಾನಿ ಅಭ್ಯರ್ಥಿಯನ್ನಾಗಿ ಮಾಡಿದ್ದು ಅವರಿಗಿರುವ ಜನಪ್ರಿಯತೆಯ ಕಾರಣದಿಂದಾಗಿಯಷ್ಟೆ. ಮಾಯಾವತಿ, ಜಯಲಲಿತಾ ಅಥವಾ ಮಮತಾರಂತೆ ಒಡೆದು ಆಳುವ ರಾಜಕಾರಣವನ್ನು ಮೋದಿ ಮಾಡಿದವರಲ್ಲ. ಆದರೂ ಅವರನ್ನು ಹಾಗೆ ಬಿಂಬಿಸಿ ಜನರನ್ನು ನಂಬಿಸಲು ಸಫಲವಾದರೆ ತಾನು ಮತ್ತೆ ಶಕ್ತಿಪೀಠದಲ್ಲಿ ಕೂಡಬಲ್ಲೆ ಎನ್ನುವ ನಂಬಿಕೆ ಕಾಂಗ್ರೆಸ್‌ಗಿದೆ. "ತೋಳ ಬಂತು ತೋಳ" ಎನ್ನುವ ಸೋನಿಯಾ ಗಾಂಧಿಯವರ ಸುಳ್ಳು ಕೂಗನ್ನು ಈ ಬಾರಿಯೂ ಮತದಾರರು ನಂಬುತ್ತಾರೋ ಅಥವಾ ಅವರಿಗೆ ಹೊರಬಾಗಿಲು ತೋರಿಸುತ್ತಾರೋ ಎನ್ನುವುದು ನಮಗೆ 2014ರಲ್ಲೇ ತಿಳಿಯಲಿದೆ.

- ಆರ್.ಜಗನ್ನಾಥನ್
ಸಂಪಾದಕರು, ಫಸ್ಟ್ ಪೋಸ್ಟ್ ಡಾಟ್‌ಕಾಂ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement