ಮೊದಲು 'ರಸ್ತೆ ಭಾಗ್ಯ' ಕೊಡಿ!
ಬೆಂಗಳೂರಿನ ಹೃದಯ ಭಾಗವಾಗಿರುವ ಮೆಜೆಸ್ಟಿಕ್‌ನ ಉದಾಹರಣೆ ತೆಗೆದುಕೊಳ್ಳಿ. ಮೆಜೆಸ್ಟಿಕ್ ಸುತ್ತ-ಮುತ್ತ ಯಾವುದಾದರೂ ಒಂದು ರಸ್ತೆ ಸರಿ ಇದ್ದರೆ ತೋರಿಸಿ! ಮುಖ್ಯಮಂತ್ರಿಯವರೇ, ನಿಮ್ಮ ಆಡಳಿತ ವೈಖರಿ ಆರಂಭದಲ್ಲಿ ಕುದರೆಯ ವೇಗದಲ್ಲಿ ಓಡುತ್ತಾ ಇತ್ತು, ಆದರೆ ಈಗ ಕುಂಟುತ್ತ ಸಾಗಿದೆ. ಮೂಲಭೂತ ಅವಶ್ಯಕತೆಗಳಲ್ಲಿ ಒಂದಾದ ರಸ್ತೆ ಸರಿ ಇರಬೇಕು ಅಲ್ವಾ? ನಮ್ಮ ಬೆಂಗಳೂರು ಸಿಲಿಕಾನ್ ಸಿಟಿ, ಐ.ಟಿ ಸಿಟಿ ಅಂತೆಲ್ಲಾ ಬಿರುದಾಂಕಿತಗಳನ್ನ ಹೊಂದಿದೆ. ನಮ್ಮ ನಗರಕ್ಕೆ ಲಕ್ಷಾಂತರ ವಿದೇಶಿ ಪ್ರವಾಸಿಗರು, ಬಂಡವಾಳ ಹೂಡಿಕೆದಾರರು ಹೀಗೆ ಅನೇಕಾನೇಕ ಮಂದಿ ಬರುತ್ತಾರೆ. ಅವರಿಗೆ ನಮ್ಮ ನಗರದ ಬಗ್ಗೆ, ಇಲ್ಲಿನ ಜನರ ಬಗ್ಗೆ ಪ್ರೀತಿ ಮೂಡದಿದ್ದರೂ ಪರ್ವಾಗಿಲ್ಲ, ಅಸಹ್ಯ ಮೂಡಬಾರದು ಅಲ್ವಾ? ಇತ್ತೀಚೆಗೆ ನೀವೇ ಚೀನಾಕ್ಕೆ ಹೋಗಿ ಬಂದು ಅಲ್ಲಿನ ರಸ್ತೆಗಳಲ್ಲಿ ಒಂದೇ ಒಂದು ಗುಂಡಿಯನ್ನು ನೋಡಲಿಲ್ಲ ಅಂತ ಪತ್ರಿಕಾಗೋಷ್ಠಿಯಲ್ಲಿ ಹೇಳಿದಿರಿ! ಅದೇ ತರಹ ನಮ್ಮ ನಗರ, ನಮ್ಮ ರಾಜ್ಯವನ್ನು ಅಭಿವೃದ್ಧಿಪಡಿಸಬೇಕು ಅಂತ ನಿಮಗೆ ಯಾಕೆ ಅನಿಸೋಲ್ಲ?
ಈಗ ನೀವು ಜಾರಿಮಾಡಲು ಹೊರಟಿರುವ ಶಾದಿ ಭಾಗ್ಯದ ವಿಷಯಕ್ಕೆ ಬರೋಣ. ನಮಗೆ ಈ ಭಾಗ್ಯ ಕೊಡಿ ಅಂತ ಯಾರು ಕೇಳಿದ್ದಾರೆ ನಿಮಗೆ? ಒಂದು ಕೆಲಸ ಮಾಡಬಹುದು ನೀವು, ಒಂದು ವೇದಿಕೆ ಸಿದ್ಧಪಡಿಸಿ ಅದರಲ್ಲಿ ಸಾಮಾನ್ಯ ನಾಗರಿಕರನ್ನು ಕರೆದು ಚರ್ಚಿಸಿ. ಅದರಲ್ಲಿ ಎಲ್ಲಾ ಜನಾಂಗದವರೂ ಇರಲಿ. ಸುಮ್ಮನೆ ಒಂದೇ ಒಂದು ಪ್ರಶ್ನೆ ಕೇಳಿ, "ನಿಮಗೆ ರಸ್ತೆ ಸರಿಪಡಿಸಬೇಕಾ ಅಥವಾ ಶಾದಿ ಭಾಗ್ಯ ಬೇಕಾ?" ಅಂತ ಅವರು ಯಾವುದಕ್ಕೆ ಒತ್ತು ಕೊಟ್ಟರೆ ಅದನ್ನ ಜಾರಿ ಮಾಡಿ. ಸುಮ್ಮನೆ ಮನಸ್ಸಿಗೆ ಬಂದಿದೆ ಎಂಬ ಕಾರಣಕ್ಕೋ ಅಥವಾ ಮುಂದಿನ ಚುನಾವಣೆಗಳ ಗುರಿ ಇಟ್ಟುಕೊಂಡು ಈ ತರಹ ಬೇಕಾಬಿಟ್ಟಿ ಯೋಜನೆಗಳನ್ನು ಜಾರಿ ಮಾಡಲು ಹೊರಟರೆ ಹಿಂದಿನ ಸರ್ಕಾರಕ್ಕೆ ಆದ ದುಸ್ಥಿತಿ ನಿಮ್ಮ ಸರ್ಕಾರಕ್ಕೂ ಕಟ್ಟಿಟ್ಟ ಬುತ್ತಿ. ನಿಮ್ಮ ಶಾದಿ ಭಾಗ್ಯ ಯೋಜನೆಯನ್ನು ಅನೇಕ ಮುಸಲ್ಮಾನ ವಿಚಾರವಾದಿಗಳೇ ವಿರೋಧಿಸಿದ್ದಾರೆ. ಅಂದಹಾಗೆ, ಆ ಚರ್ಚಾ ವೇದಿಕೆಗೆ ದಯವಿಟ್ಟು ನಿಮ್ಮ ಬುದ್ಧಿಜೀವಿಗಳನ್ನ ಕರೆತರಬೇಡಿ. ಅವರ ವಿಚಾರಗಳು ಅವರ ತಲೆಮಾರಿನವೇ ಆಗಿರುತ್ತವೆ! ಇಂದಿನ ಕಾಲಘಟ್ಟಕ್ಕೆ ಅವು ಹೊಂದಲಾರವು. ನೀವು ಒಮ್ಮೆ ಹಾಳಾದ ಎಲ್ಲಾ ರಸ್ತೆಗಳನ್ನ ಸರಿಪಡಿಸಿ ನೋಡಿ...ಆ ನಂತರ ನಿಮಗೆ ಸಿಗುವ ಅಭೂತಪೂರ್ವ ಪ್ರತಿಕ್ರಿಯೆ ಹೇಗಿರುತ್ತದೆ ಅಂತ.
ಸಿದ್ದರಾಮಯ್ಯ ಅವರು ಹಿಂದುಳಿದ ವರ್ಗದಿಂದ ಬಂದಿರುವವರು, ಅವರಿಗೆ ಬಡವರ ಕಷ್ಟ, ಸಾಮಾನ್ಯ ನಾಗರಿಕರ ನೋವು ಅರ್ಥವಾಗುತ್ತದೆ ಎಂಬ ನಂಬಿಕೆ ನೀವು ಆಡಳಿತದ ಚುಕ್ಕಾಣಿ ಹಿಡಿದಾಗ ಎಲ್ಲರಲ್ಲೂ ಇತ್ತು. ದಯವಿಟ್ಟು ಅದನ್ನ ಹುಸಿಗೊಳಿಸಬೇಡಿ. ನಮ್ಮಂಥ ಸಾಮಾನ್ಯ ನಾಗರಿಕರು ನಿಮಗೆ ಅಭಾರಿಗಳಾಗಿ ಇರುತ್ತಾರೆ.
- ಚನ್ನಬಸಪ್ಪ