ಬೀದಿ ತಿನಿಸು ಸರಳತೆಯಲ್ಲ ಆರೋಗ್ಯಕ್ಕೆ ಸಂಚಕಾರ
200 ವರ್ಷಗಳ ಕಾಲ ಆಳಿ ನಮ್ಮ ದೇಶದ ಸಂಸ್ಕೃತಿಯನ್ನು ಹಾಳುಗೆಡವಿದ ಬ್ರಿಟಿಷ್ ಸಾಮ್ರಾಜ್ಯವನ್ನು ಪ್ರತಿನಿಧಿಸುವ ಪ್ರಧಾನಿ ಡೇವಿಡ್ ಕೆಮರಾನ್ ಅವರು ಬೀದಿಯಲ್ಲಿ ನಮ್ಮ ದೇಶದ ಜನಪ್ರಿಯ, ಆರೋಗ್ಯಕರ ತಿಂಡಿ ಉದ್ದಿನ ವಡೆಯನ್ನು ಸೇವಿಸುವ ದೃಶ್ಯ ನೋಡಿ ಮನಸ್ಸಿಗೆ ಖೇದವಾಯಿತು. ರಾಮನ ಕಾಲದಿಂದ ಬಂದ ರಾಜ, ರಾಜ್ಯವನ್ನು ಆಳುವ ನಮ್ಮ ಸಂಸ್ಕೃತಿಯಾದಂತಹ ಧರ್ಮ, ಭಾಷೆ, ಕಲೆ, ಸಂಗೀತ, ನಾನಾ ಪುರಾಣ ಶಾಸ್ತ್ರಗಳನ್ನು ಪೋಷಿಸುವ ರಾಜರನ್ನೆಲ್ಲ ಒಬ್ಬರ ಮೇಲೆ ಒಬ್ಬರನ್ನು ಎತ್ತಿಕಟ್ಟಿ ಆಡಳಿತ ಮಾಡಿದ ಆ ದೇಶದಿಂದ ನಮ್ಮ ಸಂಸ್ಕೃತಿಗೆ ಬರಿಸಲಾಗದ ಧಕ್ಕೆಯಾಗಿರುವುದು ಎಲ್ಲರಿಗೂ ತಿಳಿದ ವಿಚಾರ.
ಇಂದಿಗೂ ನಮ್ಮನ್ನಾಳುವ ಪ್ರಜಾಪ್ರತಿನಿಧಿಗಳು ಜನರನ್ನು ಧರ್ಮ, ಜಾತಿ, ಭಾಷೆ, ಪಂಗಡ ಎಂದೆಲ್ಲಾ ವಿಷಬೀಜ ಬಿತ್ತಿ ಆಳುತ್ತಿರುವುದು, ತಮ್ಮ ಸ್ವಹಿತಕ್ಕಾಗಿ ಭ್ರಷ್ಟಾಚಾರ, ಅಜ್ಞಾನ, ಅನಾರೋಗ್ಯ, ಶಿಕ್ಷಣದ ಕೊರತೆ ಏರ್ಪಟ್ಟಿರುವುದು ಕೂಡ ಖಂಡನಾರ್ಹವಾಗಿದೆ.
ನಮ್ಮ ದೇಶದ ಸಂಸ್ಕೃತಿಯಲ್ಲಿ ಮಡಿಯಾಗಿ ಊಟ, ತಿಂಡಿ, ಪಾನೀಯ ತಯಾರಿಸಿ ದೇವರಿಗೆ ಮನೆ ಅಥವಾ ದೇವಸ್ಥಾನದಲ್ಲಿ ನೈವೇದ್ಯ ಮಾಡಿ ಊಟ ಸ್ವೀಕರಿಸುವ ಒಂದು ಆರೋಗ್ಯಕರ ಪದ್ಧತಿ ಇತ್ತು. ಇಂದು ಬೀದಿಯಲ್ಲಿ ಅನಾರೋಗ್ಯಕರವಾಗಿ ಊಟ-ತಿಂಡಿ ಸೇವಿಸುವುದು, 'ಊಟ ಬಲ್ಲವನಿಗೆ ರೋಗವಿಲ್ಲ' ಎಂಬ ನಾಣ್ಣುಡಿಗೆ ವಿರುದ್ಧವಾಗಿದೆ.
ಶುದ್ಧ ನೀರಿನ ಕೊರತೆ, ಪೌಷ್ಟಿಕ ಆಹಾರದ ಕೊರತೆ, ಅದರಿಂದಾಗಿ ಹದಗೆಡುತ್ತಿರುವ ಆರೋಗ್ಯ ಸಮಸ್ಯೆ, ಪಾಶ್ಚಿಮಾತ್ಯ ಔಷಧಗಳು, ಉತ್ಪನ್ನ ವಿತರಣೆ, ಹೆಚ್ಚುತ್ತಿರುವ ವೈದ್ಯಕೀಯ ಕಾಲೇಜುಗಳು, ಕೃಷಿಯಲ್ಲಿ ಕ್ರಿಮಿಕೀಟನಾಶಕ ಔಷಧ, ರಾಸಾಯನಿಕ ಗೊಬ್ಬರ ಒಂದು ಕಡೆಯಾದರೆ ನಮ್ಮ ಪ್ರಾಚೀನ ಆಯುರ್ವೇದ, ಹೋಮಿಯೋಪತಿ ಔಷಧ, ಸಾವಯವ ಕೃಷಿಯಲ್ಲಿ ಪ್ರಗತಿ ಕುಂಠಿತವಾಗಿದೆ. ಅತಿಯಾದ ರಾಸಾಯನಿಕ ಆರೋಗ್ಯ ಸಮಸ್ಯೆ ಉಲ್ಬಣವಾಗಿದೆ.
ಚಾಟ್ಸ್, ಪಾನಿಪುರಿ ಇತ್ಯಾದಿ ಬೇಯಿಸದೆ ನೇರವಾಗಿ ತಿನ್ನುವ ತಿಂಡಿಗಳು ಮಾತ್ರ ನಗರದ ಬೀದಿ-ಬೀದಿಯಲ್ಲಿ ಸೇವಿಸುವ ಸಂಪ್ರದಾಯ ಉತ್ತರ ಭಾರತದಿಂದ ಬಂದಿದೆ ಎಂದರೆ ತಪ್ಪಾಗಲಾರದು. ಆದರೆ ಇಂದು ಚಹ, ಕಾಫಿ, ಇಡ್ಲಿ, ವಡೆ, ದೋಸೆ ಪಾವ್ಬಾಜಿ, ಫ್ರೈಡ್ರೈಸ್, ಮಂಚೂರಿಯನ್ ಇತ್ಯಾದಿ ಬೇಯಿಸಿ ಮಾಡುವ ಪದಾರ್ಥಗಳನ್ನೂ ಬೀದಿಯ ಬದಿಯಲ್ಲಿ ತಿನ್ನುವ ಪರಿಸ್ಥಿತಿ ಬಂದಿದೆ.
ಇದಕ್ಕೆಲ್ಲ ಕಾರಣ ಜಾಗತಿಕ ಮಟ್ಟದಲ್ಲಿ ಮೌಲ್ಯವರ್ಧನೆ. ಮೌಲ್ಯವರ್ಧನೆಯಾಗದೆ ಬಾಡಿಗೆ ನೀಡಿ, ಊಟ-ತಿಂಡಿ ಪಾನೀಯ ತಯಾರಿಸಿ ಸರಬರಾಜು ಸ್ಥಳದಲ್ಲಿ ಮಾಡುವುದು ಅಸಾಧ್ಯ. ಈ ಕಾರಣಕ್ಕಾಗಿ ಬೀದಿಯಲ್ಲಿ ತಯಾರಿಸಿ ತಿನ್ನುವ ಪರಿಪಾಠ ಅನಾರೋಗ್ಯಕರ ಹಾಗೂ ಆರೋಗ್ಯಕರ ಪ್ರವಾಸೋದ್ಯಮಕ್ಕೆ ಕೂಡ ಧಕ್ಕೆ.
ನಮ್ಮ ದೇಶದಲ್ಲಿ ಹೊರಗುತ್ತಿಗೆಯಲ್ಲಿ ಸಾಕಷ್ಟು ಪ್ರಗತಿ ನಿರ್ಮಾಣವಾಗಿರುವುದು ನಿಜ. ಆದರೆ ಅಂತಹ ಸಂಸ್ಥೆಗಳಲ್ಲಿ ಊಟ-ತಿಂಡಿ, ಪಾನೀಯ ತಯಾರಿಸಿ ಸರಬರಾಜು ಮಾಡುವ ಗುತ್ತಿಗೆದಾರರ ಪರಿಸ್ಥಿತಿ ಶೋಚನೀಯ. ಇಲ್ಲಿ ಕೂಡ ಮಾಹಿತಿ ತಂತ್ರಜ್ಞಾನದ ದುರುಪಯೋಗ ಆಗುತ್ತಿರುವುದು ನಮ್ಮ ಊಟ-ತಿಂಡಿ, ಪಾನೀಯದ ಬೆಲೆ ಏರದೆ ಇರಲು ಕಾರಣ ಎಂದರೆ ತಪ್ಪಾಗಲಾರದು. ಈ ನಿಟ್ಟಿನಲ್ಲಿ ಮಾಧ್ಯಮವು ಸಮೀಕ್ಷೆ ನಡೆಸಬೇಕು ಹಾಗೂ ನಮ್ಮ ದೇಶೀ ತಿಂಡಿ-ಪಾನೀಯಗಳಿಗೆ ಮೌಲ್ಯವರ್ಧನೆಯ ಪ್ರಯತ್ನ ಆಗಬೇಕು.
ಅಡಿಗೆ ಗುತ್ತಿಗೆದಾರ ಕೆಲಸಗಾರರು ಸಾಮಾನ್ಯವಾಗಿ ಅಶಿಕ್ಷಿತ, ಅರೆಶಿಕ್ಷಿತ, ಗ್ರಾಮೀಣ ಪ್ರದೇಶದವರು. ಈ ಜನರ ಜೀವನ, ಸಂಬಳ, ಭತ್ಯೆ, ಸೌಲಭ್ಯ ಸುಧಾರಿಸುವ ನಿಟ್ಟಿನಲ್ಲಿ ಬೆಳಕು ಚೆಲ್ಲಿ ತದನಂತರ ಜಗತ್ತಿನಾದ್ಯಂತ ಜನಪ್ರಿಯವಾಗಿರುವ ಚೈನೀಸ್, ಪೀಜಾ, ಬರ್ಗರ್ ಇತ್ಯಾದಿ ಹಾಗೆಯೇ ನಮ್ಮ ದೇಶದ ಆರೋಗ್ಯಕರ ತಿಂಡಿ-ಪಾನೀಯ ವೈವಿಧ್ಯಮಯ ಊಟ ಜಗತ್ತಿನಾದ್ಯಂತ ಜನಪ್ರಿಯವಾಗುವ ನಿಟ್ಟಿನಲ್ಲಿ ನಮ್ಮ ಪ್ರಯತ್ನ ಸಾಗಲಿ. ನಮ್ಮ ಬಾಣಸಿಗರು ವಿದೇಶದಲ್ಲಿ ಕೂಡ ಉದ್ಯೋಗ ಪಡೆಯುವ ಅವಕಾಶವಿರಲಿ.
- ಎ.ಎಸ್. ಕಾಮತ್
ಕಾಮತ್ಯಾತ್ರಿ ನಿವಾಸ್ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕರು