ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಅಂಕಣಗಳು

ಇಂಥ ಬಾಸ್‌ಗಳನ್ನು ಭಯವಿಲ್ಲದೆ ಬಯಲಿಗೆಳೆಯಬೇಕಿದೆ...

Srinivasa Murthy VN
Updated On : 23 Nov 2013, 11:58 am

ಜಾಗತೀಕರಣದ ನಂತರದ ಮುಕ್ತ ಭಾರತದಲ್ಲಿ, ಸುದ್ದಿವಾಹಿನಿಗಳು ಅವತರಿಸುವ ಒಂದು ದಶಕಕ್ಕೆ ಮುನ್ನವೇ, ಅಂತರ್ಜಾಲದಲ್ಲಿ ರಹಸ್ಯ ಕಾರ್ಯಾಚರಣೆಗಳ ಮೂಲಕ "ಎಕ್ಸ್‌ಪೋಸ್‌", "ಬ್ರೇಕಿಂಗ್ ನ್ಯೂಸ್‌" ಪದಪ್ರಯೋಗಳನ್ನು ನಮಗೆ ಪರಿಚಯಿಸಿ, ಪತ್ರಿಕೋದ್ಯಮದ ಹೊಸ ಆಯಾಮವೊಂದಕ್ಕೆ ಪರಿಭಾಷೆಯನ್ನು ಕಲ್ಪಿಸಿದ ತೆಹಲ್ಕಾದ ಸಂಪಾದಕರು ಇಂದು ತಾವೆ "ಬ್ರೇಕಿಂಗ್ ನ್ಯೂಸ್- ಎಕ್ಸ್‌ಪೋಸ್‌" ಆಗಿದ್ದಾರೆ.
"ಅಹಿತಕರ ಘಟನೆಯೊಂದು ಘಟಿಸಿದೆ. ಹಾಗಾಗಿ ತರುಣ್ ತೇಜ್‌ಪಾಲ್ ಆರು ತಿಂಗಳ ವಿರಾಮ ತೆಗೆದುಕೊಳ್ಳುತ್ತಿದ್ದಾರೆ" ಎಂದು ಒಂದು ಪತ್ರವನ್ನು ವ್ಯವಸ್ಥಾಪಕ ಸಂಪಾದಕಿ ಶೋಮಾ ಚೌಧ್ರಿ ತೆಹೆಲ್ಕಾದ ಸಿಬ್ಬಂದಿಗೆ ವಿತರಿಸುತ್ತಾರೆ. "ಸರಿಯಾದ ನಿರ್ಣಯವನ್ನು ಕೈಗೊಳ್ಳಲಾಗಲಿಲ್ಲ", "ನಮ್ಮ ಪ್ರಮಾಣಿಕ ನಂಬಿಕೆಗಳ ವಿರುದ್ಧ ಒಂದು ಅಹಿತಕರ ಘಟನೆ ನಡೆದು ಹೋಗಿದೆ. ಹಾಗಾಗಿ ನಾನು ಆರು ತಿಂಗಳ ಕಾಲ ತೆಹೆಲ್ಕಾದಿಂದ ದೂರ ಉಳಿಯುತ್ತಿದ್ದೇನೆ" ಎಂದು ತಾವೇ ದೋಷ ಮುಕ್ತಿಯ ಸರ್ಟಿಫಿಕೆಟ್ ಕೊಟ್ಟುಕೊಂಡುಬಿಟ್ಟಿದ್ದಾರೆ ತರುಣ್ ತೇಜ್‌ಪಾಲ್.
50 ವರ್ಷದ ಹಿರಿಯ ಪತ್ರಕರ್ತ,  ಯುವ ಪತ್ರಕರ್ತೆಯ ಮೇಲೆ ಅತ್ಯಾಚಾರದ ಪ್ರಯತ್ನ ನಡೆಸಿ, ಇತರರಿಗೆ ಹೇಳಿದರೆ ಕೆಲಸ ಕಳೆದುಕೊಳ್ಳುವ ಸಾಧ್ಯತೆ ಇರಬಹುದೆಂದು ಬೆದರಿಸಿ, ಕುಡಿದ ಅಮಲಿನಲ್ಲಿ ಹಾಗಾಯಿತೆಂದು ಸಮಜಾಯಿಶಿ ಕೊಡುತ್ತಾರೆ! ಪತ್ರಿಕೆಯ ಮಾಲೀಕಳು ಈ ಘಟನೆಯನ್ನು "ಆಂತರಿಕ ವಿಚಾರ" ಎಂದು ಕೇಸ್ ಕ್ಲೋಸ್ ಮಾಡುವ ಪ್ರಯತ್ನ ಮಾಡುತ್ತಾಳೆ. ರಾಜಕಾರಣಿಗಳ, ಕ್ರಿಕೆಟಿಗರ ನಿದ್ದೆ ಕೆಡಿಸಿದ, ಜನ್ಮ ಜಾಲಾಡಿದ ಸಾಮಾಜಿಕ ಪೊಲೀಸ್-ಕೆಚ್ಚೆದೆಯ ತನಿಖಾ ಪತ್ರಕರ್ತ, ಕಾಮುಕನೆಂಬ ಭಯಾನಕ ಸತ್ಯ ಹೊರಬಿದ್ದಿದೆ. ಇತರರ ತಪ್ಪು, ಅಶಿಸ್ತು, ಭ್ರಷ್ಟಾಚಾರದತ್ತ ಸೂಚಿಸಿದ ಬೆರಳು ಇಂದು ತೋರುವವನೆಡೆಗೇ ತಿರುಗಿದೆ!
ಪೂರ್ವಾಗ್ರಹಗಳಿಗೆ ಬಲಿಯಾಗದೆ ತಮ್ಮವನ ವಿರುದ್ಧವೇ ಆದರೂ ಅತ್ಯಂತ ಪ್ರಾಮಾಣಿಕವಾಗಿ ಈ ವಿಚಾರವನ್ನು ಬಿತ್ತರಿಸುತ್ತಿರುವ ಮಾಧ್ಯಮ ಮಿತ್ರರ ಪ್ರಶ್ನೆಗಳಿಗೆ, "ಹುಡುಗಿಗಿಂತ ನಿಮಗೇ ಹೆಚ್ಚು ನೋವಾದಂತಿದೆ?" ಎಂದು ಶೋಮಾ ಚೌಧ್ರಿ ಕೆಂಡಕಾರುತ್ತಾರೆ. ನನ್ನ ಪ್ರೀತಿಯ ಗೆಳತಿಯರೆ ಎಚ್ಚೆತ್ತುಕೊಳ್ಳಿ ತಂದೆ ಸಮಾನರಾದ, ನಮಗಿಂತ ದುಪಟ್ಟು ವಯಸ್ಸಿನ ನಮ್ಮ ಬಾಸ್‌ಗಳು, ನಾವು ಗುರುಗಳೆಂದು ಭಾವಿಸುವ ಸಮಾಜದ ಪ್ರತಿಷ್ಠಿತರು, ತಮ್ಮ ಸ್ಥಾನವನ್ನು, ನಮ್ಮ ವಿಶ್ವಾಸವನ್ನು ದುರುಪಯೋಗಿಸಿಕೊಂಡು ನಮ್ಮ ಮೇಲೆ ಅತ್ಯಾಚಾರದ ಪ್ರಯತ್ನ ನಡೆಸಿದರೆ...ಕೆಲಸ ಕಳೆದುಕೊಳ್ಳುವ ಭೀತಿಯಿಂದ ಬಾಯಿ, ಬುದ್ಧಿ, ಮನಸ್ಸುಗಳಿಗೆ ಬೀಗ ಹಾಕಿ ಕೂರುವ ಅಗತ್ಯವಿಲ್ಲ. ಅಂತ ಸೀನ್ ಲೇದು! ಇಂತಹ ಲೈಂಗಿಕ ಕಿರುಕುಳ ಅಪರಾಧವೆನಿಸಿಕೊಳ್ಳುತ್ತವೆ. ನಮಗಾಗಿ, ನಮ್ಮ ರಕ್ಷಣೆಗಾಗಿ ಪ್ರತ್ಯೇಕವಾದ ಕಾನೂನುಗಳಿವೆ, ಅಪರಾಧಕ್ಕೆ ಶಿಕ್ಷೆ, ದಂಡ ಎರಡೂ ಉಂಟು.
ರಾಜಸ್ಥಾನದ ಭಟೇರಿ ಗ್ರಾಮದ ಭಂವರಿ ದೇವಿಯ ಮೇಲಾದ ಅತ್ಯಾಚಾರ ಪ್ರಕರಣ ದೇಶದೆಲ್ಲೆಡೆ ಸದ್ದು ಮಾಡಿತು. ನ್ಯಾಯಕ್ಕಾಗಿ ಆಕೆಯ ಹೋರಾಟ ಇಂದಿಗೂ ನಿರಂತರವಾಗಿ ಸಾಗುತ್ತಿದೆ. ಅವಳಿಗೆ ನ್ಯಾಯ ಸಿಗದಿದ್ದರೂ, ಕೆಲಸ ಮಾಡುವ ಸ್ಥಳದಲ್ಲಿ ಸ್ತ್ರೀಯರ ಮೇಲಾಗುವ ಲೈಂಗಿಕ ಕಿರುಕುಳದ ಕುರಿತ ಚರ್ಚೆಗೆ ಮತ್ತು ಒಂದು ಬಹುದೊಡ್ಡ ಕ್ರಾಂತಿಗೆ ಭಂವರಿ ದೇವಿಯ ಪ್ರಕರಣ ನಾಂದಿ ಹಾಡಿತು. ದೇಶಾದ್ಯಂತ ಮಹಿಳಾ ಸಂಘಟನೆಗಳು, ಸರ್ಕಾರೇತರ ಸಂಸ್ಥೆಗಳು ಭಂವರಿ ದೇವಿಗೆ ನ್ಯಾಯ ದೊರಕಿಸಬೇಕೆಂಬ ಉದ್ದೇಶದಿಂದ ಮತ್ತು ಒಟ್ಟಾರೆ ಕೆಲಸ ಮಾಡುವ ಸ್ಥಳಗಳಲ್ಲಿ ನಡೆಯುವ ಲೈಂಗಿಕ ಕಿರುಕುಳದ ವಿರುದ್ಧ ಹೋರಾಟ ಕೈಗೊಂಡವು.  'ವಿಶಾಖ' ಎಂಬ ಹೆಸರಿನಡಿಯಲ್ಲಿ 1997ರಲ್ಲಿ ಒಂದು ಸಾರ್ವಜನಿಕ ಹಿತಾಸಕ್ತಿ ಮೊಕದ್ದಮೆಯನ್ನು ರಾಜಸ್ಥಾನದ ಉಚ್ಚ ನ್ಯಾಯಾಲಯ ಮತ್ತು ಸರ್ವೋಚ್ಚ ನ್ಯಾಯಾಲಯದಲ್ಲಿ ದಾಖಲಿಸಲಾಯಿತು. ಅದರ ಪರಿಣಾಮವಾಗಿ ಸರ್ವೋಚ್ಚ ನ್ಯಾಯಾಲಯ ವಿಶಾಖ ಮಾರ್ಗಸೂಚಿಗಳನ್ನು ಹೊರಡಿಸಿತು. ಈ ಮಾರ್ಗಸೂಚಿಗಳ ಪ್ರಕಾರ, ಎಲ್ಲಾ ಸಂಸ್ಥೆಗಳಲ್ಲೂ ಕೆಲಸದ ಜಾಗದಲ್ಲಿ ಲೈಂಗಿಕ ಕಿರುಕುಳಕ್ಕೆ ಸಂಬಂಧ ಪಟ್ಟ ಸಮಿತಿಗಳ ರಚನೆಯಾಗತಕ್ಕದ್ದು, ಹಾಗೆ ಆಗದಿದ್ದಲ್ಲಿ 50000-ರು ದಂಡವನ್ನು ಅಂತಹ ಸಂಸ್ಥೆಗಳ ಮೇಲೆ ವಿಧಿಸಲು ಅವಕಾಶವಿದೆ. ಅಂತಹ ಸಮಿತಿಗಳು ಮಹಿಳಾ ಸಿಬ್ಬಂದಿಯಲ್ಲದೆ, ಹೊರಗಿನವರನ್ನು ಒಳಗೊಂಡಿರಬೇಕು, ಎನ್ನುತ್ತದೆ ಮಾರ್ಗಸೂಚಿ. 2007ರಲ್ಲಿ ತಯಾರಾದ, ಕೆಲಸದ ಸ್ಥಳಗಳಲ್ಲಿ ಲೈಂಗಿಕ ಕಿರುಕುಳವನ್ನು ತಡೆಗಟ್ಟುವ ಕರಡು ಮಸೂದೆಯನ್ನು, 2013ರಲ್ಲಿ ಅಧಿಕೃತ ವಿಧೇಯಕವಾಗಿ ಸಂಸತ್ತು ಅನುಷ್ಠಾನಗೊಳಿಸಿದೆ. ಭಾರತೀಯ ಸ್ತ್ರೀಯರು ಈ ಮೂಲಕ ಇನ್ನಷ್ಟು ಸಶಕ್ತರಾಗಿದ್ದಾರೆ.   
ಕಳೆದ ತಿಂಗಳು ಒಬ್ಬ ಯುವ ನ್ಯಾಯವಾದಿ, ಸರ್ವೋಚ್ಚ ನ್ಯಾಯಾಲಯದ ನ್ಯಾಯಾಧೀಶರ ವಿರುದ್ಧ ಲೈಂಗಿಕ ಕಿರುಕುಳದ ಆರೋಪವನ್ನು ಮಾಡಿದ್ದರ ಬೆನ್ನಲ್ಲಿ, ವಿಚಾರಣೆಗಾಗಿ ನ್ಯಾಯಾಧೀಶರ ತ್ರಿಸದಸ್ಯ ಸಮಿತಿಯೊಂದನ್ನು ರಚಿಸಲಾಯಿತು. ತೇಜ್‌ಪಾಲ್ ಅವರೆ, ನೀವೇ ಸ್ವೇಚ್ಛಾ ವನವಾಸವನ್ನು ವಿಧಿಸಿಕೊಂಡು ದೇವತಾ ಮನುಷ್ಯನಾಗುವ ಪ್ರಯತ್ನ ಮಾಡಬೇಡಿ. ಆ ಹುಡುಗಿಯ ಮೇಲೆ ನೀವು ಎಸಗಿದಂತಹ ಹೀನ ಕೃತ್ಯದಂತಹದು, ಆಕೆಯ ಸ್ನೇಹಿತೆಯಾದ ನಿಮ್ಮ ಮಗಳ ಮೇಲಾಗಿದ್ದರೆ? ಇಂತಹ ಪ್ರಕರಣಗಳಲ್ಲಿ ಪೊಲೀಸರು ಸ್ವಯಂಪ್ರೇರಿತ ಕೇಸನ್ನು ನಿಮ್ಮ ವಿರುದ್ಧ ದಾಖಲಿಸಬಹುದು. ತಂದೆಯ ಆಗ್ರಹದ ಮೇರೆಗೆ ಮಗಳಿಗೆ ರಕ್ಷಣೆ ಒದಗಿಸಿದ ಗುಜರಾತ್ ಸರ್ಕಾರದ ವಿರುದ್ಧ ನಿರಂತರ ಆರೋಪ ಮಾಡುತ್ತಿರುವ ಆಡಳಿತ ಪಕ್ಷದ ಮಹಿಳಾವಾದಿಗಳು, ಈ ಪ್ರಕರಣಕ್ಕೆ ಪ್ರತಿಕ್ರಿಯಿಸಿಲ್ಲವೆಂಬುದು ಆಶ್ಚರ್ಯವೇನಲ್ಲ!   
ಗೆಳೆಯರೆ, ನಿಮ್ಮಲ್ಲಿ ಲೈಂಗಿಕ ಕಿರುಕುಳಗಳ ಪ್ರಕರಣಗಳ ವಿಚಾರಣೆಗೆ ಸಮಿತಿ ಇದೆಯೇ? ಇಲ್ಲವಾದಲ್ಲಿ ನಿಮ್ಮ ಹಕ್ಕನ್ನು ಕೇಳಿ ಪಡೆದುಕೊಳ್ಳಿ. ಅಂತಹ ಒಂದು ಸಮಿತಿ ಇದ್ದು, ಕಿರುಕುಳಕ್ಕೆ ನೀವು ಅಥವಾ ನಿಮ್ಮ ಗೆಳತಿಯರು ತುತ್ತಾಗಿದ್ದರೆ ದಯಮಾಡಿ ಅದನ್ನು ಬೆಳಕಿಗೆ ತನ್ನಿ. ಹಾಗೆ ನಾವು ಮಾತಾಡಿದಾಗ ನಮ್ಮ ಮರ್ಯಾದೆ ಕೆಡುವುದಿಲ್ಲ, ಇತರರ ಮಧ್ಯೆ ಹೆಚ್ಚುತ್ತದೆ. ನಮ್ಮ ಆಫೀಸಿನ ಮರ್ಯಾದೆ ಹೋಗುವುದಿಲ್ಲ, ಬದಲಾಗಿ ಸಮಾಜದಲ್ಲಿ ಗೌರವ ವೃದ್ಧಿಯಾಗುತ್ತದೆ. ಈ ಕಾನೂನು ಪುರುಷ ಮಿತ್ರರಿಗೂ ಅನ್ವಯಿಸುತ್ತದೆ.

- ಮಾಳವಿಕ ಅವಿನಾಶ್, ಬಿಜೆಪಿ ನಾಯಕಿ, ನಟಿ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement