ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಅಂಕಣಗಳು

ಬೆಳಕಿರುವುದು ಒಳಗೆ ಎಂದವರ ಬಿಂಬಗಳು

ಸಿಪ್ರಾ ದಾಸ್ ಅವರ ಫೋಟೊಗ್ರಾಫ್‌ಗಳನ್ನು ನೋಡುತ್ತಿದ್ದರೆ ಮೀನುಗಾರರಾದ...

Srinivasa Murthy VN
Updated On : 24 Nov 2013, 5:35 am

ಸಿಪ್ರಾ ದಾಸ್ ಅವರ ಫೋಟೊಗ್ರಾಫ್‌ಗಳನ್ನು ನೋಡುತ್ತಿದ್ದರೆ ಮೀನುಗಾರರಾದ ಮಿಸಿರಿ ಸಹಾನಿ, ಸಫತ್ ಅಲಿ ಹಸನ್, ಮೊಟಾರ್ ಸೈಕಲ್ ಮೆಕ್ಯಾನಿಕ್ ರಿಯಾಜುದ್ದೀನ್ ಇವರೆಲ್ಲರ ಬದುಕು ಎಷ್ಟೊಂದು ಸಹಜವಾಗಿದೆ ಎಂದೆನಿಸಿಬಿಡುತ್ತದೆ. ಇವರ ಸಾಮರ್ಥ್ಯಗಳ ಎದುರು ನಾವೇ ಅಂಗಊನತೆ ಹೊಂದಿರುವವರಂತೆ ತೋರುತ್ತೇವೆ.

ನಾನು ಈ ಹಿಂದೆ ಹಲವು ಪುಸ್ತಕ ಬಿಡುಗಡೆ ಕಾರ್ಯಕ್ರಮಗಳಿಗೆ ಅತಿಥಿಯಾಗಿ ಹೋಗಿದ್ದಿದೆ. ಆದರೆ ನವೆಂಬರ್ 18ರಂದು ನಾನು ಭಾಗವಹಿಸಿದ್ದ ಕಾರ್ಯಕ್ರಮ ಅವಿಸ್ಮರಣೀಯವಾಗಿತ್ತು. ರಾಷ್ಟ್ರಪತಿ ಭವನದಲ್ಲಿ ರಾಷ್ಟ್ರಪತಿಗಳ ಸಮ್ಮುಖದಲ್ಲಿ ಆದ ಸಮಾರಂಭದಲ್ಲಿ ಪುಸ್ತಕ ಬಿಡುಗಡೆ ಮಾಡಿದ್ದು ರಾಷ್ಟ್ರಪತಿಗಳಲ್ಲ. 'ದ ಲೈಟ್ ವಿಥಿನ್‌' ಎಂಬ ಆ ಪುಸ್ತಕವನ್ನು ಬಿಡುಗಡೆ ಮಾಡಿದ್ದು ಪ್ರಗ್ಯಾ ಮತ್ತು ಪ್ರಚಿ ಎಂಬ ಇಬ್ಬರು ಚಿಕ್ಕ ಹೆಣ್ಣುಮಕ್ಕಳು. ಈ ಅವಳಿ ಜವಳಿ ಸಹೋದರಿಯರಿಗೆ ಬಾಲ್ಯದಿಂದಲೇ ಅಂಧತ್ವ. ಇವರಿಬ್ಬರೂ ಈಗ ಹನ್ನೆರಡನೇ ತರಗತಿಯಲ್ಲಿ ಇದ್ದಾರೆ.
ಲೈಟ್ ವಿಥಿನ್ ಎಂಬುದು ಫೋಟೊಜರ್ನಲಿಸ್ಟ್ ಸಿಪ್ರಾ ದಾಸ್ ಅವರ ಫೋಟೊಗಳ ಸಂಕಲನ. ಹಲವು ದಶಕಗಳಿಂದ ದೆಹಲಿಯನ್ನು ಮೂಲವಾಗಿಟ್ಟುಕೊಂಡು ರಾಜಕೀಯ ಜೀವನದಲ್ಲಿರುವ ನಾನು ಸಿಪ್ರಾ ಅವರನ್ನೂ ಹಲ ವರ್ಷಗಳಿಂದ ಬಲ್ಲೆ. ಈ ಪುಸ್ತಕಕ್ಕೆ ಮುನ್ನುಡಿ ಬರೆದಿರುವ ಸಾಹಿತಿ ಗುಲ್ಜಾರ್ ಅವರು ಸಿಪ್ರಾರನ್ನು ಅದ್ಭುತವಾಗಿ ಪರಿಚಯಿಸಿದ್ದಾರೆ. ಗುಲ್ಜಾರ್ ಬರೆಯುತ್ತಾರೆ: 'ಕ್ಯಾಮರಾದ ಲೆನ್ಸ್‌ಗಳಿರುವ ಜಾಗದಲ್ಲಿ ತನ್ನ ಹೃದಯವನ್ನೇ ಇಟ್ಟಿದ್ದಾಳೆ ಸಿಪ್ರಾ. ಪುಟ ತಿರುವುತ್ತ ಇಲ್ಲಿನ ಫೋಟೊಗಳಲ್ಲಿರುವ ಮುಖಗಳನ್ನು ನೋಡುವವರು ತಮ್ಮ ಒಳಾಂತರಂಗದಲ್ಲೊಂದು ಲೆನ್ಸ್ ಹೊಂದಿರುತ್ತಾರೆ. ಸಿಪ್ರಾ ಅದೇ ಲೆನ್ಸ್ ಹೊಂದಿದ್ದಾರೆ.'
'ಆಲ್ ಇಂಡಿಯಾ ಕಾನ್ಫಿಡರೇಷನ್ ಆಫ್ ಬ್ಲೈಂಡ್‌'ನ ಪ್ರಾಂಶುಪಾಲರಾಗಿರುವ ಜವಾಹರ್ ಕೌಲ್ ಹೇಳುತ್ತಾರೆ- ನೀವು ನಿಮ್ಮ ಕಣ್ಣುಗಳಿಂದ ನೋಡಬಲ್ಲಿರಾದರೂ ನಮ್ಮಂತೆ ಹೃದಯದಿಂದ ನೋಡಲಾರಿರಿ. ಆದರೆ ಸಿಪ್ರಾ ಇವೆರಡರಿಂದಲೂ ನೋಡುತ್ತಾರೆ.
ಸಿಪ್ರಾ ದಾಸ್ ಅವರ ಫೋಟೊಗ್ರಾಫ್‌ಗಳನ್ನು ನೋಡುತ್ತಿದ್ದರೆ ಮೀನುಗಾರರಾದ ಮಿಸಿರಿ ಸಹಾನಿ, ಸಫತ್ ಅಲಿ ಹಸನ್, ಮೊಟಾರ್ ಸೈಕಲ್ ಮೆಕ್ಯಾನಿಕ್ ರಿಯಾಜುದ್ದೀನ್ ಇವರೆಲ್ಲರ ಬದುಕು ಎಷ್ಟೊಂದು ಸಹಜವಾಗಿದೆ ಎಂದೆನಿಸಿಬಿಡುತ್ತದೆ. ಇವರ ಸಾಮರ್ಥ್ಯಗಳ ಎದುರು ನಾವೇ ಅಂಗಊನತೆ ಹೊಂದಿರುವವರಂತೆ ತೋರುತ್ತೇವೆ.
ಈ ಪುಸ್ತಕವನ್ನು ನಿಯೋಗಿ ಪ್ರಕಾಶನ ಪ್ರಕಟಿಸಿದೆ. ಆಹ್ವಾನ ಪತ್ರಿಕೆಯಲ್ಲಿ ದಿನಾಂಕ, ಸ್ಥಳ, ಭಾಗವಹಿಸುವವರ ಹೆಸರುಗಳನ್ನು ಸಾಂಪ್ರದಾಯಿಕ ಅಕ್ಷರಗಳ ಜತೆಯಲ್ಲಿ ಬ್ರೈಲ್‌ನಲ್ಲೂ ಛಾಪಿಸಿದ್ದಾರೆ. 2005ರಲ್ಲಿ ಮೊದಲ ಬಾರಿಗೆ ಸಿಪ್ರಾ ಅವರು ತಮ್ಮ ಛಾಯಾಚಿತ್ರಗಳ ಪ್ರದರ್ಶನವನ್ನು ಉದ್ಘಾಟಿಸುವುದಕ್ಕಾಗಿ ನನ್ನನ್ನು ಕರೆದಿದ್ದರು. ಈ 204 ಪುಟಗಳ ಪುಸ್ತಕದಲ್ಲಿ ಕಾಣುತ್ತಿರುವ ಥೀಮ್ ಏನಿದೆಯೋ ಅದೇ ಅವರ ಮೊದಲ ಪ್ರದರ್ಶನದಲ್ಲೂ ವ್ಯಕ್ತವಾಗಿತ್ತು. ಆ ಪ್ರದರ್ಶನವನ್ನೂ ಅವರು ದೇಶದ ಬೇರೆ ಬೇರೆ ಭಾಗದ ಏಳು ನಗರಗಳಲ್ಲಿ ಆಯೋಜಿಸಿದ್ದರು ಎಂಬುದನ್ನು ತಿಳಿದುಕೊಂಡೆ.
ಈ ಪುಸ್ತಕದ ಪ್ರಕಾಶಕರು ಅದರ ತಿರುಳನ್ನು ಸಶಕ್ತವಾಗಿ ಕಟ್ಟಿಕೊಟ್ಟಿದ್ದಾರೆ- 'ದ ಲೈಟ್ ವಿಥಿನ್ ಎಂಬುದು ಅಂಧರ ಅಸಾಮಾನ್ಯ ಬದುಕನ್ನು ಛಾಯಾಚಿತ್ರಗಳಲ್ಲಿ ಅಭಿವ್ಯಕ್ತಿಸುತ್ತದೆ. ಈ ಚಿತ್ರಗಳು ನಮ್ಮಲ್ಲಿ ಸಹಾನುಭೂತಿ ಹಾಗೂ ಅಚ್ಚರಿಯನ್ನು ಒಮ್ಮೆಲೆ ಹುಟ್ಟುಹಾಕುತ್ತವೆ. ತಮ್ಮ ಬೌದ್ಧಿಕತೆ, ಆಳನೋಟ ಹಾಗೂ ಸಾಮಾನ್ಯ ವಿವರಗಳಾಚೆಯದ್ದನ್ನು ಕಟ್ಟಿಕೊಡುವ ಸಾಮರ್ಥ್ಯಗಳಿಂದ ನಿಮ್ಮನ್ನು ರಂಜಿಸುತ್ತವೆ. 'ಲೈಟ್ ವಿಥಿನ್‌'ನಲ್ಲಿ ಸಿಪ್ರಾ ಅವರು ಹೋರಾಟ ಮತ್ತು ಅಸ್ತಿತ್ವ, ಹತಾಶೆ ಹಾಗೂ ಭರವಸೆ, ಪ್ರತಿರೋಧ ಮತ್ತು ಗೆಲುವು ಈ ಎಲ್ಲ ಭಾವಗಳನ್ನು ಕಟ್ಟಿಕೊಟ್ಟಿದ್ದಾರೆ.
ಈ ಪುಸ್ತಕದಲ್ಲಿ ಪ್ರತಿ ಚಿತ್ರಕ್ಕೆ ವಸ್ತುವಾಗಿರುವ ವ್ಯಕ್ತಿಗಳೂ ನಮ್ಮ ಕಣ್ಣುಗಳನ್ನು ತೆರೆಸುತ್ತಾರೆ. ಬದುಕನ್ನು ಹೊಸದೊಂದು ಬೆಳಕಿನಲ್ಲಿ ಕಾಣುವುದಕ್ಕೆ ಪ್ರೇರೇಪಿಸುತ್ತಾರೆ. ಮಾನವರಾಗಿ ನಾವು ವಿಕಸಿಸುವುದಕ್ಕೆ ಸಹಕರಿಸುತ್ತವೆ. ನಮ್ಮ ಪರಿಧಿಯ ಹೊರಗೆ ಉಳಿದುಬಿಟ್ಟಿದ್ದ ಸತ್ಯಗಳನ್ನು ಕಣ್ಣಿಗೆ ಕುಕ್ಕುವಂತೆ ತೋರಿಸಿ, ಅದ್ಭುತ ಬದುಕನ್ನು ಸ್ಪರ್ಶಿಸಿದೆ ಪುಸ್ತಕ. ಇವೆಲ್ಲವೂ ನಮಗೆ ಪ್ರೇರಣಾದಾಯಿ.'
1980ರಲ್ಲಿ ತಮ್ಮ ವೃತ್ತಿಯನ್ನು ಪ್ರಾರಂಭಿಸಿದ ಸಿಪ್ರಾ, ಆನಂದ ಬಜಾರ್ ಪತ್ರಿಕಾ ಸಮೂಹದ ಕೋಲ್ಕತಾದ ಆಜ್ಕಾಲ್ ಪತ್ರಿಕೆಯಲ್ಲಿ ಪ್ರಾರಂಭಿಕ ಉದ್ಯೋಗ ಮಾಡಿದರು. 1987ರಲ್ಲಿ ಪ್ರೆಸ್ ಟ್ರಸ್ಟ್ ಆಫ್ ಇಂಡಿಯಾ ಸೇರಿದರು. ಕೋಲ್ಕತಾದಲ್ಲಿ ಪಿಟಿಐನ ಫೋಟೊ ಸರ್ವೀಸ್ ವಿಭಾಗವನ್ನು ಅಭಿವೃದ್ಧಿಪಡಿಸಿದ ಅವರು ನಂತರ ದೆಹಲಿಗೆ ತೆರಳಿ ಆ ಸಂಸ್ಥೆಯ ರಾಷ್ಟ್ರೀಯ ಮಟ್ಟದ ಫೋಟೊ ಪ್ರಸಾರದ ಉಸ್ತುವಾರಿ ವಹಿಸಿದರು. ನಂತರ ಇಂಡಿಯಾ ಟುಡೆ ನಿಯತಕಾಲಿಕಕ್ಕೆ ಎರಡು ದಶಕ ಸೇವೆ ಸಲ್ಲಿಸಿದರು. ಈ ಅವಧಿಯಲ್ಲಿ ಪ್ರಮುಖ ರಾಜಕೀಯ ಹಾಗೂ ಇತಿಹಾಸ ಪ್ರಮುಖ ವಿದ್ಯಮಾನಗಳಿಗೆ ಕನ್ನಡಿಯಾಗಿ, ಪ್ರಮುಖ ರಾಜಕೀಯ ವ್ಯಕ್ತಿಗಳನ್ನು ಚಿತ್ರಿಸಿದರು.
ಸಿಪ್ರಾ ಈ ಪುಸ್ತಕದಲ್ಲಿ ತಮ್ಮ ಛಾಯಾಚಿತ್ರಕ್ಕೆ ಬಳಸಿಕೊಂಡ ಕೆಲ ಅಂಧ ವ್ಯಕ್ತಿಗಳ ಜೀವನವನ್ನು ಗಮನಿಸಿದರೆ ಆ ಬದುಕಿನ ಅಚ್ಚರಿಯ ಮಗ್ಗುಲು ಅರಿವಿಗೆ ಬರುತ್ತದೆ.

ಸಂಗೀತಾ, 38, ಶಾಲಾ ಶಿಕ್ಷಕಿ: ಬಿಹಾರದ ಮುಜಪ್ಫರ್‌ಪುರದ ಕಬ್ಬಿಣ ಮಾರಾಟಗಾರನ ಮಗಳು ಈಕೆ. ಅಂಧ ಮಕ್ಕಳಿಗೆ ವಸತಿಶಾಲೆಯೊಂದನ್ನು ನಡೆಸುತ್ತಾರೆ. ಅಲ್ಲದೇ ಹತ್ತಿರದ ಹಳ್ಳಿಗಳ ಬಡಮಕ್ಕಳಿಗೆ ಸಹಾಯ ಮಾಡುವ ಶುಭಮ್ ಎಂಬ ಸ್ವಯಂಸೇವಾಸಂಸ್ಥೆಯ ಪ್ರೇರಕ ಶಕ್ತಿಯಾಗಿಯೂ ಕೆಲಸ ಮಾಡುತ್ತಿದ್ದಾರೆ. ಅಂಧಳಾಗಿ ಹುಟ್ಟಿದ ಸಂಗೀತಾರಿಗೆ ಎಲ್ಲರೂ ಹೋಗುವ ಶಾಲೆಗೆ ಪ್ರವೇಶ ಸಿಗದಾಯಿತು. ಆದರೆ ಅವರ ಅಕಾಡೆಮಿಕ್ ವರದಿ ನೋಡಿದರೆ ಯಾವುದಕ್ಕೂ ಕಡಿಮೆ ಇಲ್ಲ. ಅಂಧರ ಶಾಲೆಯಲ್ಲಿ ಅಭ್ಯಸಿಸಿ ಎಲ್ಲ ತರಗತಿಗಳಲ್ಲಿ ಉನ್ನತ ಅಂಕಗಳೊಂದಿಗೆ ತೇರ್ಗಡೆಯಾದ ಆಕೆ ಮೆರಿಟ್ ಪಟ್ಟಿಯಲ್ಲಿ ಹತ್ತನೇ ಸ್ಥಾನದಲ್ಲಿದ್ದಳು. 1986ರಲ್ಲಿ ಅಂದಿನ ಪ್ರಧಾನಿ ರಾಜೀವ್ ಗಾಂಧಿ ಅವರು, ವಿಶ್ವವಿದ್ಯಾಲಯದ 300 ಮೆರಿಟ್ ವಿದ್ಯಾರ್ಥಿಗಳಿಗೆ ಚಹಾಕೂಟಕ್ಕೆ ಆಹ್ವಾನಿಸಿದ್ದರು. ಅವರಲ್ಲೊಬ್ಬ ವಿದ್ಯಾರ್ಥಿನಿ ಸಂಗೀತಾ. ಅಂಧ ವ್ಯಕ್ತಿಗಳ ಬಾಳು ಸುಗಮವಾಗುವಂತೆ ನೋಡಿಕೊಳ್ಳುವುದಕ್ಕೆ ತಮ್ಮ ಬದುಕನ್ನು ಮುಡಿಪಿಟ್ಟರು. 

ಮಿಸ್ರಿ ಸಹಾನಿ, 30, ಮೀನುಗಾರ: ಬಿಹಾರದ ಬುದ್ಧನಗರವೆಂಬ ಹಳ್ಳಿಯ ಅಂಧ ಮೀನುಗಾರ ಸಹಾನಿ. ಆತನೆಂದೂ ಬರಿಗೈನಲ್ಲಿ ಮನೆಗೆ ಹಿಂತಿರುಗಿದ್ದೇ ಇಲ್ಲ. ತನ್ನ ಎರಡನೇ ವಯಸ್ಸಿನಲ್ಲೇ ದೃಷ್ಟಿ ಕಳೆದುಕೊಂಡ ಹತಭಾಗ್ಯ. ಸಹಾನಿ ಚಿಕಿತ್ಸೆ ಪಡೆದುಕೊಳ್ಳುತ್ತಿರುವಾಗಲೇ ಆತನ ವೈದ್ಯ ಸತ್ತುಹೋದ. ಆನಂತರ ಸಹಾನಿಗೆ ವೈದ್ಯಕೀಯ ನೆರವು ಸಿಗಲೇ ಇಲ್ಲ. ಏಕೆಂದರೆ ಅವನ ಕುಟುಂಬದವರು ಈತ ಮಾಟಕ್ಕೆ ಬಲಿಯಾಗಿದ್ದಾನೆಂದು ತೀರ್ಮಾನಿಸಿಬಿಟ್ಟಿದ್ದರು. ಸಹಾನಿ ತನ್ನ ತಂದೆಯೊಂದಿಗೆ ಬಾರಿಗಂಡಕ್ ನದಿಗೆ ಮೀನು ಹಿಡಿಯಲು ತೆರಳುತ್ತಿದ್ದದ್ದು ಆತನ ಬದುಕಲ್ಲಿ ಸಕಾರಾತ್ಮಕತೆ ತಂದಿತು. ಸಹಾನಿಗೆ ಈಜೂ ಗೊತ್ತು. ಯಾವ ಮೀನುಗಾರನಿಗೂ ಕಡಿಮೆಯಿಲ್ಲದ ಸಹಾನಿ ತಿಂಗಳಿಗೆ ಐದು ಸಾವಿರ ದುಡಿಯುತ್ತಾನೆ. ಸರ್ಕಾರಿ ಸಾಲದ ಸಹಾಯದಿಂದ ಕಿರಾಣಿ ಅಂಗಡಿಯನ್ನೂ ನಡೆಸುತ್ತಿದ್ದಾನೆ. ಈತ ಮೀನು ಹಿಡಿಯುವುದಕ್ಕೆ ತೆರಳಿದಾಗ ಅಪ್ಪ-ಅಮ್ಮ ಅಂಗಡಿ ನಡೆಸುತ್ತಾರೆ.

ರೇಷ್ಮಾ ಸೋನಾವಣೆ, 32, ಸೌಂದರ್ಯ ಪ್ರಸಾದನಕಾರ್ತಿ: ಅಂಧಳಾಗಿರುವ ರೇಷ್ಮಾ ಮಾಮೂಲಿ ಬ್ಯೂಟಿಷಿಯನ್ ಎಂದುಕೊಳ್ಳಬೇಕಿಲ್ಲ. ಆಕೆ ಗಂಡುಮಗುವಿನ ತಾಯಿಯೂ ಹೌದು. ಮುಂಬೈನ ಮನೆಯಲ್ಲೇ ಬ್ಯೂಟಿ ಪಾರ್ಲರ್ ತೆರೆದಿರುವ ಆಕೆ ಹಲವು ವಿಧದ ಸೇವೆಗಳನ್ನು ನೀಡುತ್ತಾಳೆ. ಸಾಮಾನ್ಯ ಸೌಂದರ್ಯವರ್ಧನೆಯಿಂದ ಪ್ರಾರಂಭವಾಗಿ ಕೇಶಶೃಂಗಾರ ಹಾಗೂ ಅರೋಮಾಪತಿಗಳಲ್ಲೂ ಆಕೆ ಪರಿಣತೆ. ಐದು ವರ್ಷದವಳಿರುವಾಗಲೇ ಕಾಣಿಸಿಕೊಂಡ ದೃಷ್ಟಿದೋಷ 12ನೆ ತರಗತಿ ವೇಳೆಗೆ ತೀವ್ರವಾಯಿತು. ಅನೇಕ ಅವಮಾನಗಳನ್ನು ಎದುರಿಸಿದ ಆಕೆ ಒಂದು ಹಂತದಲ್ಲಿ ಮನೆಯವರ ಇಚ್ಛೆಗೆ ವಿರುದ್ಧವಾಗಿ ಮದುವೆಯೂ ಆದಳು. ಆಕೆಯ ಪತಿ ಟಾಟಾ ಮೋಟಾರ್ ಡೀಲರ್. ಇವ್ಯಾವುದರ ಬಗ್ಗೆಯೂ ಆಕೆಗೆ ವಿಷಾದವಿಲ್ಲ. ಸ್ವಾಭಿಮಾನದ ಜೀವನ ಸಾಗಿದೆ.

ರಿಯಾಜುದ್ದೀನ್ 55, ಮೊಟಾರ್‌ಸೈಕಲ್ ಮೆಕ್ಯಾನಿಕ್: ಭೋಪಾಲದಲ್ಲಿ ಮೆಕ್ಯಾನಿಕ್ ಈ ರಿಯಾಜುದ್ದೀನ್. ತನ್ನ 23ನೇ ವಯಸ್ಸಿನಲ್ಲಿ ದೃಷ್ಟಿ ಕಳೆದುಕೊಂಡ. ಕೀಟ ಕಚ್ಚಿದ್ದರಿಂದ ಕಣ್ಣಿನ ತಪಾಸಣೆಗೆ ಹೋಗಿದ್ದವನಿಗೆ ವೈದ್ಯರು ಅವಧಿ ಮೀರಿದ ಔಷಧ ಕೊಟ್ಟದ್ದೇ ಮುಳುವಾಯಿತು. ಕುಟುಂಬಕ್ಕೆ ಉನ್ನತ ಮಟ್ಟದಲ್ಲಿ ಚಿಕಿತ್ಸೆ ಕೊಡಿಸುವ ಆರ್ಥಿಕ ಚೈತನ್ಯವೂ ಇರಲಿಲ್ಲ. 1980ರಲ್ಲಿ ದೆಹಲಿಯಲ್ಲಿ ಶಾಪ್ ಒಂದಕ್ಕೆ ತೆರಳಿದಾಗ ಅವರು ಈತನಿಗೆ ಕಣ್ಣು ಕಾಣುವುದಿಲ್ಲವೆಂದು ತಿಳಿದು ಹಳೆ ಟೈರ್ ಕೊಟ್ಟು ವಂಚಿಸಿದರು. ಆದರೆ ಕೈಯಲ್ಲೇ ಪರೀಕ್ಷಿಸಿದ ರಿಯಾಜ್ ಅದು ದೋಷಪೂರಿತ ಎಂದು ತಟ್ಟನೇ ಹೇಳಿದ. ಬೇರೆ ಬೇರೆ ಟೈರ್‌ಗಳನ್ನು ಕೊಟ್ಟು ನೋಡಿದಾಗಲೂ ಅವೆಲ್ಲ ಎಲ್ಲಿ ದೋಷ ಹೊಂದಿವೆ ಎಂಬುದನ್ನು ಕರಾರುವಾಕ್ ಹೇಳಿದ. ಐದನೇ ಟೈರ್ ಹೊಸತು ಎಂಬುದನ್ನೂ ಗುರುತಿಸಿದ.
ಅದೇ ಸಾಮರ್ಥ್ಯದ ಮೇಲೆ ಮೆಕ್ಯಾನಿಕ್ ಆದ ರಿಯಾಜ್ ತನ್ನ ರಿಪೇರಿಗೆ ಒಂದು ವರ್ಷದ ಗ್ಯಾರಂಟಿಯನ್ನೂ ಕೊಡುತ್ತಾನೆ. ಪ್ರಾರಂಭದಲ್ಲಿ ಕಷ್ಟವಾದರೂ ಕೊನೆಗೆ ಆತನ ನಿಷ್ಠೆಯ ಸೇವೆಗೆ ಮಣಿದು ಗ್ರಾಹಕರು ಹೆಚ್ಚಿದರು. ಇವತ್ತು ಚೆನ್ನೈನ ಎನ್‌ಫೀಲ್ಡ್ ಕಂಪನಿ ಎಂಜಿನಿಯರ್‌ಗಳು ರಿಯಾಜ್‌ರನ್ನು ಹುಡುಕಿಕೊಂಡುಬಂದು ಸಹಾಯ ಕೇಳುತ್ತಾರೆ! ಮೊಬೈಲ್ ಫೋನ್‌ನಲ್ಲಿ ಮೊಟಾರ್ ಸೈಕಲ್‌ನ ಅವಾಜ್ ಕೇಳಿಕೊಂಡೇ ದೋಷ ಏನು ಎಂದು ಹೇಳಬಲ್ಲಷ್ಟು ಪರಿಣತ ರಿಯಾಜ್!

- ಎಲ್.ಕೆ. ಆಡ್ವಾಣಿ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement