ನಾನು ತೆಗೆದ ಫೋಟೊ ತನಿಖೆಗೆ ನೆರವಾಯಿತು
ಸೆಬಾಸ್ಟಿಯನ್ ಡಿ'ಸೋಜಾ. ಮುಂಬೈನ ಆಂಗ್ಲ ಪತ್ರಿಕೆಯೊಂದರ ಛಾಯಾಗ್ರಾಹಕ. ಇವರೇ ಅಜ್ಮಲ್ ಕಸಬ್ನನ್ನು ತಮ್ಮ ಕ್ಯಾಮೆರಾದಲ್ಲಿ ಸೆರೆ ಹಿಡಿದದ್ದು.
ಸೆಬಾಸ್ಟಿಯನ್ ಡಿ'ಸೋಜಾ. ಮುಂಬೈನ ಆಂಗ್ಲ ಪತ್ರಿಕೆಯೊಂದರ ಛಾಯಾಗ್ರಾಹಕ. ಇವರೇ ಅಜ್ಮಲ್ ಕಸಬ್ನನ್ನು ತಮ್ಮ ಕ್ಯಾಮೆರಾದಲ್ಲಿ ಸೆರೆ ಹಿಡಿದದ್ದು. ಇದರಿಂದಾಗಿ ಮುಂಬೈ ಪೊಲೀಸ್ ಇಲಾಖೆಯಲ್ಲಿ ಸಹಾಯಕ ಪೊಲೀಸ್ ಇನ್ಸ್ಪೆಕ್ಟರ್ ಆಗಿದ್ದ ತುಕಾರಾಮ್ ಒಂಬ್ಲೆ ಜೀವವನ್ನು ಪಣಕ್ಕಿಟ್ಟು ಕಸಬ್ನನ್ನು ಸೆರೆಹಿಡಿಯಲು ಸಾಧ್ಯವಾಯಿತು.
ಡಿ' ಸೋಜಾ ಹೇಗೆ ಕ್ಯಾಮೆರಾದಲ್ಲಿ ಕಸಬ್ನ ಫೊಟೋ ತೆಗೆಯಲು ಸಾಧ್ಯವಾಯಿತು ಎನ್ನುವುದನ್ನು ಅವರು ರೋಚಕವಾಗಿ ವಿವರಿಸುತ್ತಾರೆ. ಘಟನೆ ನಡೆದ ದಿವಸ ಹೆಚ್ಚಿನ ಕೆಲಸದ ಒತ್ತಡ ಏನಿರಲಿಲ್ಲ. ಹೀಗಾಗಿ, ಸ್ನೇಹಿತರೊಡನೆ ಹರಟೆ ಹೊಡೆಯುತ್ತಾ ನಿಂತಿದ್ದೆವು. ಅದೇ ಸಂದರ್ಭದಲ್ಲಿ ಯಾರೊ ಬಂದು ತಾಜ್ಮಹಲ್ ಹೊಟೇಲ್ಗೆ ಯುವಕರು ಪ್ರವೇಶಿಸಿದ್ದಾರೆ. ಅವರು ಮನಬಂದಂತೆ ಗುಂಡು ಹಾರಿಸುತ್ತಿದ್ದಾರೆ ಎಂಬ ಮಾಹಿತಿ ಕೊಟ್ಟರು. ಕೂಡಲೇ ನಾವೆಲ್ಲರೂ ಕ್ಯಾಮೆರಾ ಬ್ಯಾಗ್ಗಳನ್ನು ಹೆಗಲಿಗೇರಿಸಿಕೊಂಡು ಆ ಸ್ಥಳದತ್ತ ಹೊರಟೆವು. ತಾಜ್ ಹೊಟೇಲ್ಗೆ ಹೋದಾಗ ಅಲ್ಲಿನ ದೃಶ್ಯ ಕಂಡು ನನಗೆ ಆಶ್ಚರ್ಯವಾಯಿತು. ಯುವಕರಾಗಿದ್ದ ಕೆಲವರನ್ನು ನಾನು ನೋಡಿದೆ. ಅವರ ಬೆನ್ನಿನ ಮೇಲೆ ರೆಕ್ಸ್ಯಾಕ್ ಇತ್ತು ಹೀಗಾಗಿ ಅವರು ಪ್ರವಾಸಿಗರಾಗಿರಬಹುದೆಂದು ನಾನು ತಿಳಿದುಕೊಂಡೆ. ಒಮ್ಮಿಂದೊಮ್ಮೆಗೆ ಅವರ ಕೈಯಲ್ಲಿ ಅತ್ಯಾಧುನಿಕ ಬಂದೂಕು ಕಂಡಿತು. ಅದನ್ನು ನೋಡಿ ನಾನು ಭಯಗೊಂಡೆ. ಕೂಡಲೇ ಸಮೀಪದಲ್ಲಿದ್ದ ಪೊಲೀಸ್ ಸಿಬ್ಬಂದಿಯೊಬ್ಬರಿಗೆ ತೋರಿಸಿ ಗುಂಡಿಕ್ಕುವಂತೆ ಹೇಳಿದೆ. ಇದೇ ಸಂದರ್ಭದಲ್ಲಿ ನಾನು ನಿರ್ದಯೆಯಿಂದ ಗುಂಡು ಹಾರಿಸುತ್ತಾ ಸಾಗುತ್ತಿದ್ದ ಯುವಕನ ಮೊದಲ ಫೊಟೋ ತೆಗೆದೆ.
ನಾನು ಮತ್ತು ಇತರ ಮೂವರು ಪೊಲೀಸ್ ಸಿಬ್ಬಂದಿ ಗೋಡೆ ಹಿಂದೆ ಅಡಗಿದ್ದೆವು. ನಮ್ಮ ಹಿಂದೆ ಖಾಲಿಯಾಗಿದ್ದ ರೇಲಿನ ಕಂಪಾರ್ಟ್ಮೆಂಟ್ ಒಂದಿತ್ತು. ನಾನು ಅಲ್ಲಿಗೆ ಹೋಗಿ ಅಡಗಿಕೊಂಡೆ. ಮೂವರು ಪೊಲೀಸರನ್ನು ಅಲ್ಲಿಗೆ ಬರುವಂತೆ ಕರೆದೆ. ಆದರೆ ಅವರು ಬರಲಿಲ್ಲ. ಈ ಸಂದರ್ಭದಲ್ಲಿ ಇಬ್ಬರು ಉಗ್ರರ ಪೈಕಿ ಒಬ್ಬ ನಮ್ಮತ್ತ ನಡೆದುಕೊಂಡು ಬರಲಾರಂಭಿಸಿದ ಮಾತ್ರವಲ್ಲದೆ ಕೂಡಲೇ ಅದೃಶ್ಯನಾದ. ಕೂಡಲೇ ನಾವು ಅಡಗಿದ್ದ ಗೋಡೆಯ ಮೇಲಿಂದ ಕಾಣಿಸಿಕೊಂಡ. ಜತೆಗೆ ಎದುರಿನಲ್ಲಿದ್ದ ಉಗ್ರ ಕೂಡ ನಮ್ಮತ್ತ ಬಂದ. ಅವರಿಬ್ಬರೂ ಗುಂಡು ಹಾರಿಸಲು ಆರಂಭಿಸಿದರು. ನಾನು ಉಗ್ರರತ್ತ ಗುಂಡು ಹಾರಿಸಲು ಹೇಳಿದ್ದ ಪೊಲೀಸ್ ಸಿಬ್ಬಂದಿ ಹೊರತು ಪಡಿಸಿ ಉಳಿದ ಇಬ್ಬರು ಹುತಾತ್ಮರಾದರು. ರೇಲ್ವೆ ಕಂಪಾರ್ಟ್ಮೆಂಟ್ನಲ್ಲಿದ್ದ ನಾನು ಈ ದೃಶ್ಯಗಳನ್ನು ಕಂಡು ದಂಗಾಗಿದ್ದೆ. ಜತೆಗೆ 90 ಫೊಟೋಗಳನ್ನು ತೆಗೆದಿದ್ದೆ. ಈ ಪೈಕಿ 35-45 ಮಾತ್ರ ಉಪಯುಕ್ತವಾಗಿದ್ದವು. ಆದರೆ ಗುಂಡು ಹಾರಿಸಿದ ಯುವಕರು ತಮ್ಮ ಗನ್ನಲ್ಲಿ ಗುಂಡು ಮುಗಿದ್ದಿದ್ದರಿಂದ ರೆಕ್ಸ್ಯಾಕ್ನಲ್ಲಿದ್ದ ಗುಂಡುಗಳನ್ನು ತುಂಬಿ ಏನೂ ಆಗದವರಂತೆ ಹೊರಟರು. ಒಟ್ಟು 45 ನಿಮಿಷಗಳ ಕಾಲ ಬೀಭತ್ಸ ದೃಶ್ಯಗಳನ್ನು ನೋಡಿದೆ. ನಾನು ತೆಗೆದ ಆತನ ಫೊಟೋ ವಿಶ್ವಾದ್ಯಂತ ಎಲ್ಲ ಪತ್ರಿಕೆಗಳಲ್ಲಿ ಬಳಕೆಯಾಯಿತು. ಸುಪ್ರೀಂಕೋರ್ಟ್ ಕೂಡ ನನ್ನ ಕೆಲಸದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿತು.
ನಾನು ಆ ಭೀಕರ ಘಟನೆ ಮರೆಯಲು ಪ್ರಯತ್ನಿಸುತ್ತಿದ್ದೇನೆ. ನನ್ನ ವೃತ್ತಿ ಜೀವನದ ಅತ್ಯಂತ ಮಹತ್ವದ ಘಟನೆಯಿದು.