ಇಂದಿನ ಕರ್ನಾಟಕದ ರಾಜಕೀಯದಲ್ಲಿ ಕಾಂಗ್ರೆಸ್ ವಿರೋಧಿ ಪಕ್ಷಗಳು ಚುನಾವಣೆಯಲ್ಲಿ ಸೋತು ಸುಣ್ಣವಾಗಿ ತಮ್ಮ ಭವಿಷ್ಯದ ಅನಿಶ್ಚಿತತೆಯಲ್ಲಿ ತೊಳಲಾಡುತ್ತಿದ್ದರೆ, ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಅವರು, ಏಕಾಂಗಿಯಾಗಿ (ಕೆಲವೇ ಶಾಸಕರೊಂದಿಗೆ) ಹೇಗಾದರೂ ಮಾಡಿ, ಏನಾದರೂ ಮಾಡಿ, ತಮ್ಮ ಅಸ್ತಿತ್ವವನ್ನು ಉಳಿಸಿಕೊಂಡು ಬರುವುದರಲ್ಲಿ ಅನೇಕರ ಲೇವಡಿಗೆ ತುತ್ತಾದರೂ, ಅವರ ಉದ್ದೇಶದಲ್ಲಿ ಯಶಸ್ವಿಯಾಗಿದ್ದಾರೆ ಎನ್ನುವುದರಲ್ಲಿ ಅನುಮಾನವೇ ಇಲ್ಲ.
ಅವರಿಗೆ ಈಗ ರಾಜಕೀಯವಾಗಿ, ಅಧಿಕೃತವಾಗಿ ಯಾವ ಸ್ಥಾನ-ಮಾನವೂ ಇಲ್ಲದೇ ಹೋದರೂ ವೀರಶೈವ ಸಮಾಜದ ನಾಯಕರೆನಿಸಿಕೊಂಡಿರುವುದಂತೂ ನಿಜ. ಅದರ ಪರೀಕ್ಷೆಯಾಗಬೇಕಾಗಿದೆ. ಪ್ರಸ್ತುತ, ಅವರ ನಿಜವಾದ ಚಟುವಟಿಕೆ ಏನು? ಸಿದ್ದರಾಮಯ್ಯ ಅವರು ತಮ್ಮ ಮಂತ್ರಿ ಮಂಡಲ ಸಾಧಿಸಿರುವ ಅತಿದೊಡ್ಡ ಅಹಿಂದ (ಅಲ್ಪ ಸಂಖ್ಯಾತ ಹಿಂದುಳಿದ ದಲಿತ) ಸಾಮಾಜಿಕ ನ್ಯಾಯ ವಿತರಣೆಯ ಕಾರ್ಯಕ್ರಮ ಎಂದು ಭಾವಿಸಿರುವ ಶಾದಿ ಭಾಗ್ಯದ (ಬಡ ಮುಸ್ಲಿಮ್ ಹೆಣ್ಣು ಮಕ್ಕಳಿಗೆ ಮದುವೆಯಾದರೆ ಮಂಚ, ಪಾತ್ರೆ ಪಗಡದ ಕೊಡುಗೆ - 50,000 ರುಪಾಯಿ) ಸೌಲಭ್ಯವನ್ನು ಎಲ್ಲ ಬಡವರಿಗೂ ಅನ್ವಯಿಸಬೇಕೆಂದು ಒತ್ತಾಯಪಡಿಸಿ ಧರಣಿ ಮುಷ್ಕರ ನಡೆಸಿರುವುದು.
ಮೂರನೆಯ ದಿನವೂ ಯಡಿಯೂರಪ್ಪ ವಿಧಾನ ಸಭೆಯಲ್ಲೇ ಬೆಳಗಾವಿಯಲ್ಲಿ ಧರಣಿ ಹಿಡಿದು ಕೂತಿದ್ದಾರೆ. ಅದು ಸರ್ಕಾರದ ಪಾಲಿಗೆ ನಿಜವಾಗಲೂ ನುಂಗಲಾರದ ಬಿಸಿ ತುಪ್ಪ. ಯಡಿಯೂರಪ್ಪ ತಮ್ಮ ಹೋರಾಟಕ್ಕೆ ಬಳಸಿಕೊಂಡಿರುವುದು ಶಾದಿ ಭಾಗ್ಯದಂತಹ ಭಾವನೆಗಳನ್ನು ಹರಡಬಲ್ಲ ಸಾಮರ್ಥ್ಯವಿರುವ ವಿಷಯವನ್ನು. ಅವರನ್ನು, ಆ ಧರಣಿ ಸ್ಥಾನದಿಂದ, ಅವರೇ ಕೇಳಿಕೊಂಡಿರುವಂತೆ ಬಲವಂತವಾಗಿ ಹೊರಗೆ ಹಾಕಿದರೆ, ಜನರ ಮನಸ್ಸಿನಲ್ಲಿ ದೊಡ್ಡ "ಹೀರೋ" ಆಗಿಬಿಡುತ್ತಾರೆ. ಮತಭೇದದ ವಿರುದ್ಧ ಹೋರಾಡುವ ಹೋರಾಟಗಾರರ ಕಿರೀಟ ಅವರ ಪಾಲಿಗೆ ಕಟ್ಟಿಟ್ಟ ಬುತ್ತಿ. ಆದ್ದರಿಂದಲೇ ಅವರ ಧರಣಿಯನ್ನು ಮೊದಲ ಎರಡು ದಿನಗಳ ಕಾಲ ಹಾಗೇ ನಡೆಯಲು ಬಿಟ್ಟಿದ್ದು.
ಆದರೆ, ಸದನದ ಕಾರ್ಯಕಲಾಪದ ಕಾಲದಲ್ಲಿ, ಒಬ್ಬ ಸದಸ್ಯ, ಮಾಜಿ ಮುಖ್ಯಮಂತ್ರಿ, ಸಭಾಧ್ಯಕ್ಷರ ಎದುರಿನ ಸ್ಥಳದಲ್ಲಿ (ವಾಡಿಕೆಯಲ್ಲಿ ಅದನ್ನು ಸದನದ ಬಾವಿ ಎಂದೂ ಕರೆಯುತ್ತಾರೆ) ನೆಲದ ಮೇಲೆ ಕೂತು ಪ್ರತಿಭಟನೆ ನಡೆಸುವುದು, ಸದನವೇ ಅಂಗೀಕರಿಸಿದ ನಡವಳಿಕೆ ನಿಯಮಗಳಿಗೆ ವಿರುದ್ಧವಾದದ್ದು, ಅದು ಪ್ರತಿಭಟನೆ ಅಲ್ಲ ಸದನದ ಗೌರವಕ್ಕೇ ಚ್ಯುತಿ ತರುವಂತಹ ವರ್ತನೆ. ಅದನ್ನು ಈಗ ಸಹಿಸಿಕೊಂಡರೆ, ಮುಂದೆ ಯಾವ ಮೂಲದಿಂದಲೂ, ಯಾರಿಂದಲೂ ಇಂತಹ ವರ್ತನೆಯನ್ನು ಖಂಡಿಸಿ, ನಿಯಮಾವಳಿಯ ಹಾಗೂ ಸದನದ ಪಾವಿತ್ರ್ಯವನ್ನು ಕಾಪಾಡುವುದು ಕಷ್ಟವಾಗುತ್ತದೆ.
ಸರ್ಕಾರದ್ದೇ ಜವಾಬ್ದಾರಿ
ಈ ವಿಚಾರದಲ್ಲಿ ಮೊದಲ ಸೂಚನೆ ಹಾಗೂ ನಿರ್ಧಾರ ಬರಬೇಕಾಗಿರುವುದು ಸರ್ಕಾರದ ಕಡೆಯಿಂದ. ಅನಂತರ ಅದರ ಆಧಾರದ ಮೇಲೆ ಸ್ಪೀಕರ್ ಅವರಿಂದ ನಾಮ ನಿರ್ದೇಶನ, ಸದನದಿಂದ ನಿರ್ಗಮಿಸಲು ಆದೇಶ, ಅದನ್ನು ಪಾಲಿಸದೇ ಹೋದರೆ ಬಲಾತ್ಕಾರವಾಗಿ ಹೊರಗೆ ಕಳಿಸುವ ಕ್ರಮ ಅನಿವಾರ್ಯವಾಗುತ್ತದೆ.
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸದನದ ಹೊರಗಡೆ, ಬೇರೊಂದು ಸನ್ನಿವೇಶದಲ್ಲಿ ಯಡಿಯೂರಪ್ಪ ಅವರ ಧರಣಿ ರಾಜಕೀಯ ಪ್ರೇರಿತವಾಗಿರುವುದರಿಂದ ಅದಕ್ಕೆ ತಾವು ಪ್ರತಿಕ್ರಿಯಿಸುವುದಿಲ್ಲವೆಂದು ಹೇಳಿದ್ದು ಯಡಿಯೂರಪ್ಪ ಅವರನ್ನು ಇನ್ನಷ್ಟು ಕೆರಳಿಸಿರಬೇಕು. ಮಾಜಿ ಮುಖ್ಯಮಂತ್ರಿಯ ವರ್ತನೆ, ಮಂಗಳವಾರವೇ ಕಾಂಗ್ರೆಸ್ ಶಾಸಕಾಂಗ ಪಕ್ಷದ ಸಭೆಯಲ್ಲೂ ಪ್ರಸ್ತಾಪವಾಗಿ, ಅನೇಕ ಸದಸ್ಯರು, ಸರ್ಕಾರದ "ನಿಷ್ಕ್ರಿಯತೆಯನ್ನು ಕುರಿತು ತಮ್ಮ ಅತೃಪ್ತಿಯನ್ನು ಪ್ರಕಟಿಸಿದ್ದೂ ಆಗಿದೆ. ಆದರೆ ಶಾಸಕಾಂಗ ಕಾಂಗ್ರೆಸ್ ಪಕ್ಷ ಸರ್ಕಾರಕ್ಕೆ ಯಾವ ಆದೇಶವನ್ನೂ ನೀಡಿಲ್ಲ".
ಈ ವ್ಯವಹಾರದಲ್ಲಿ ಸದನದಲ್ಲಿ ಅಧಿಕೃತವಾಗಿ ಮಾನ್ಯತೆ ಪಡೆದ ಪ್ರತಿಪಕ್ಷವಾದ ಜಾತ್ಯತೀತ ಜನತಾದಳ ಹಾಗೂ ಇನ್ನೊಂದು ಪ್ರಬಲ ಪಕ್ಷವಾದ ಭಾರತೀಯ ಜನತಾ ಪಾರ್ಟಿ ತಮಗೂ, ಈ ಧರಣಿ ಪ್ರಕರಣಕ್ಕೂ ಯಾವುದೇ ಸಂಬಂಧವೇ ಇಲ್ಲವೆನ್ನುವಂತೆ ಮೌನ ಪ್ರೇಕ್ಷಕರಾಗಿ, ಸದನದ ಕಾರ್ಯಕಲಾಪದಲ್ಲಿ ತಮ್ಮ ಪಾತ್ರವನ್ನು ನಿರ್ವಹಿಸುತ್ತಿರುವುದು ಒಂದು ರೀತಿಯಲ್ಲಿ ಸಮಯ ಸಾಧಕತನವೇ. ಸರ್ಕಾರ ಪೇಚಿನಲ್ಲಿ ಸಿಕ್ಕಿಹಾಕಿಕೊಂಡಿರುವುದನ್ನು ಕಂಡು, ಈ ಪಕ್ಷಗಳು ಸಂತೋಷ ಪಡುತ್ತಿರುವುದೂ ನಿಜ. ಆದರೆ ಜನತಾಂತ್ರಿಕ ವ್ಯವಸ್ಥೆಯಲ್ಲಿ ಪವಿತ್ರ ಸಂಸ್ಥೆಯಾದ ವಿಧಾನಸಭೆಯ ಅಧಿವೇಶನವನ್ನೇ ಮೈಲಿಗೆ ಮಾಡುವುದು, ಸಂತೋಷದ ವಿಚಾರವೇನೂ ಅಲ್ಲ.
ಜನತಾಂತ್ರಿಕ ವ್ಯವಸ್ಥೆಯಲ್ಲಿ ಎಷ್ಟೇ ಭಿನ್ನಾಭಿಪ್ರಾಯಗಳಿದ್ದರೂ, ಎಷ್ಟೇ ಭೀಕರ ಕಾಳಗಗಳನ್ನು ನಡೆಸಿದರೂ, ಅಂತಿಮವಾಗಿ ಅಲ್ಪ ಮತೀಯರು, ಬಹುಮತೀಯರ ತೀರ್ಮಾನವನ್ನು ಒಪ್ಪಲೇಬೇಕೆನ್ನುವ ಸಂಸ್ಕೃತಿಯೇ ಮಾಯವಾಗಿ ಹೋಗಿದೆಯಲ್ಲಾ ಎನ್ನುವುದೇ ದೊಡ್ಡ ವ್ಯಥೆ. ಇಂತಹ ಪೆಟ್ಟುಗಳಿಂದ ವ್ಯವಸ್ಥೆ ಚೇತರಿಸಿಕೊಳ್ಳುವುದು ಸಾಧ್ಯ ಎನ್ನುವುದೇ ದೊಡ್ಡ ಸಮಾಧಾನ.
ಯಡಿಯೂರಪ್ಪ ತಂತ್ರಗಾರಿಕೆ
ವಿಧಾನಮಂಡಲದ ಆವರಣದ ಹೊರಗಡೆಯೂ ಯಡಿಯೂರಪ್ಪ ಅವರು ತಮ್ಮದೇ ಆದ ವರಸೆಯನ್ನು ಪ್ರಯೋಗಿಸುತ್ತಿದ್ದಾರೆ. ಆದರೆ ಸದ್ಯದಲ್ಲಿ ಆ ವರಸೆ ಅವರು ನಿರೀಕ್ಷಿಸಿದ ಪರಿಣಾಮವನ್ನು ಪ್ರದರ್ಶಿಸಿಲ್ಲ.
ಕರ್ನಾಟಕದಲ್ಲಿ ಈಗ ಯಡಿಯೂರಪ್ಪ ಅವರು ಬಿಜೆಪಿಯ ಪ್ರಧಾನಿ ಪೀಠದ ಅಭ್ಯರ್ಥಿ ನರೇಂದ್ರ ಮೋದಿ ಅವರ ದೊಡ್ಡ ಅಭಿಮಾನಿಯಾಗಿದ್ದಾರೆ. ಅದನ್ನೇನೂ ಅವರು ರಹಸ್ಯವಾಗಿಟ್ಟಿಲ್ಲ. ಆದರೂ ಮೋದಿ ಬೆಂಗಳೂರಿಗೆ ಬಂದಾಗ ಅವರಿಬ್ಬರೂ ಭೇಟಿಯಾಗಿಲ್ಲ. ಮೋದಿ ಅವರು ಯಡಿಯೂರಪ್ಪ ಅವರ ವಿಚಾರದಲ್ಲಿ ಏನನ್ನೂ ಹೇಳಿಲ್ಲ.
ರಾಷ್ಟ್ರೀಯ ಜನತಾಂತ್ರಿಕ ಒಕ್ಕೂಟದ ನಾಯಕರು, ಕರ್ನಾಟಕದ ಜನತಾ ಪಾರ್ಟಿಯ ಪರವಾಗಿ ಯಡಿಯೂರಪ್ಪ ಅವರು ಬರೆದಿರುವ ಪತ್ರಕ್ಕೆ ಯಾವ ರೀತಿಯ ಪ್ರತಿಕ್ರಿಯೆಯನ್ನೂ ಪ್ರಕಟಿಸಿಲ್ಲ. ಈ ಮೌನ ಅಲಕ್ಷ್ಯವೋ ಅಥವಾ ಅಂತಹ ಬೆಳವಣಿಗೆಗೆ ಇದು ಸೂಕ್ತ ಸಮಯವಲ್ಲ ಎನ್ನುವ ನಂಬಿಕೆಯೋ ಗೊತ್ತಾಗುತ್ತಿಲ್ಲ.
ಕರ್ನಾಟಕ ಜನತಾ ಪಾರ್ಟಿಯ ಜತೆ ಸಂಬಂಧವನ್ನಿಟ್ಟುಕೊಳ್ಳುವ ವಿಚಾರದಲ್ಲಿ ಭಾರತೀಯ ಜನತಾ ಪಾರ್ಟಿಯ ಕರ್ನಾಟಕ ಶಾಖೆಯ ಮುಖಂಡರಲ್ಲಿ ಹಿಂದೆ ಇದ್ದ ವಿರೋಧ ಈಗ ಇದ್ದಂತಿಲ್ಲ. ಯಡಿಯೂರಪ್ಪ ಅವರಿಂದ ಅಪಮಾನಿತರಾದ ಮಾಜಿ ಮುಖ್ಯಮಂತ್ರಿ ಸದಾನಂದ ಗೌಡರೇ ಈಗ ಸಂಬಂಧಗಳ ಸುಧಾರಣೆಯ ವಿಚಾರದಲ್ಲಿ ಸಂಭ್ರಮದಿಂದ ಓಡಾಡುತ್ತಿದ್ದಾರೆ.
ಆದರೆ ಅದರಿಂದ ಏನೂ ಬದಲಾವಣೆ ಕಂಡುಬಂದಿಲ್ಲ. ಕರ್ನಾಟಕ ಜನತಾ ಪಾರ್ಟಿ - ಭಾರತೀಯ ಜನತಾ ಪಾರ್ಟಿಗಳ ನಡುವಣ ಸಂಬಂಧದ ಬೆಸುಗೆಯ ವಿಚಾರ ಇನ್ನೂ ಸದ್ಯಕ್ಕೆ ಏಕಪಕ್ಷೀಯ ಚಿಂತನೆಯ ಹಂತದಲ್ಲೇ ಇದೆ. ಇದ್ದಕ್ಕಿದ್ದಂತೆ, ಈಗ ಯಡಿಯೂರಪ್ಪ ಅವರು ಇನ್ನೂ ರೂಪಗೊಳ್ಳದ ತೃತೀಯ ರಂಗದ ನಾಯಕರ ಸಂಬಂಧ ಬೆಳಸಲು ಉತ್ಸುಕರಾಗಿರುವಂತೆ ವರ್ತಿಸುತ್ತಿದ್ದಾರೆ. ಇದು ಒಂದು ರೀತಿಯಲ್ಲಿ ಅವರು ಬಿಜೆಪಿಗೆ ರವಾನಿಸುತ್ತಿರುವ ಸವಾಲಿನ ಸಂದೇಶ.
ಆದರೆ ಕರ್ನಾಟಕದಲ್ಲಿ ತೃತೀಯ ರಂಗ ಎಂದರೆ, ದೇವೇಗೌಡರ ನೇತೃತ್ವದ ಜಾತ್ಯತೀತ ಜನತಾ ದಳವೇ. ಇಲ್ಲಿ ಇತರ ಯಾವ ಪಕ್ಷವೂ ಪ್ರಬಲವಾಗಿಲ್ಲ. ಯಡಿಯೂರಪ್ಪ - ದೇವೇಗೌಡರ ಜೋಡಿ, ಲೋಕಸಭೆ ಚುನಾವಣೆಯಲ್ಲಿ ಒಟ್ಟಿಗೇ ಕೆಲಸ ಮಾಡುವುದನ್ನು ಊಹಿಸಿಕೊಳ್ಳುವುದು ಕಷ್ಟವಾದರೂ, ಇಬ್ಬರು ನಾಯಕರೂ ರಾಜಕೀಯದಲ್ಲಿ ಯಾವಾಗ ಬೇಕಾದರೂ, ಏನು ಬೇಕಾದರೂ ಆಗಬಹುದೆನ್ನುವ ಸಿದ್ಧಾಂತವನ್ನು ಅವರಿಗೆ ಬೇಕಾದಾಗ ಸ್ವೀಕರಿಸುವವರೇ.
ತೃತೀಯ ರಂಗದ ರಚನೆಯಲ್ಲಿ ಮುಲಾಯಂ ಸಿಂಗ್ ಯಾದವ್ ಅವರ ಸಮಾಜವಾದಿ ಪಕ್ಷ ಸೇರದೇ ಹೋದರೆ ಆ ರಂಗಕ್ಕೆ ಬೆಲೆ ಸಿಗುವುದಿಲ್ಲ. ಯಾದವ್ ಅವರ ವರ್ಣಸಂಘರ್ಷ - ವರ್ಗ ಸಂಘರ್ಷದ ಸಿದ್ಧಾಂತವನ್ನು ಯಡಿಯೂರಪ್ಪ ಅವರ ಬೆಂಬಲಿಗರು ಸುಲಭವಾಗಿ ಸ್ವೀಕರಿಸಲಾರರು. ಇಷ್ಟಕ್ಕೂ ಕರ್ನಾಟಕದಲ್ಲಿ ಯಾರು ಈ ಮುಲಾಯಂ ಸಿಂಗ್ ಎಂದು ಕೇಳುವವರೇ ಜಾಸ್ತಿ.
ಸದ್ಯಕ್ಕೆ ರಾಜ್ಯದಲ್ಲಿ ಕನಿಷ್ಠಪಕ್ಷ ಇನ್ನು ಆರು ತಿಂಗಳ ಕಾಲ ಕಾಂಗ್ರೆಸ್ಸಿನಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಅರಸನ ಅಂಕೆಯೂ ಇಲ್ಲ, ದೆವ್ವದ ಕಾಟವೂ ಇಲ್ಲವೆನ್ನುವಂತೆ ರಾಜ್ಯಭಾರ ಮಾಡಬಹುದು.
ಮಂತ್ರಿಮಂಡಲದ ವಿಸ್ತರಣೆ, ಪುನಾರಚನೆ, ಬೋರ್ಡು - ನಿಗಮ - ಮಂಡಳಿಗಳ ಅಧ್ಯಕ್ಷರು, ನಿರ್ದೇಶಕರ ಸ್ಥಾನಗಳ ಭರ್ತಿ, ಎಲ್ಲವೂ ಮುಂದಕ್ಕೆ ಹೋಗಲೇಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ಅಂತಹ ಸನ್ನಿವೇಶದಲ್ಲಿ ಮುಖ್ಯಮಂತ್ರಿಯದ್ದೇ ಮೇಲುಗೈ. ಜಾಣತನದಿಂದ ಸಂತೋಷ್ ಲಾಡ್ ಅವರನ್ನು ಮಂತ್ರಿಮಂಡಲದಿಂದ ಹೊರಗೆ ಕಳಿಸಿ ಸಿದ್ದರಾಮಯ್ಯ ತಂತ್ರಗಾರಿಕೆಯನ್ನು ಮೆರೆದಿದ್ದೂ ಆಗಿದೆ.
ಜಾತ್ಯತೀತ ಜನತಾದಳ ಎಲ್ಲ ಜವಾಬ್ದಾರಿ, ಅಧಿಕಾರವನ್ನು ತಾವೇ ವಹಿಸಿಕೊಂಡಿರುವ ರಾಷ್ಟ್ರೀಯ ನಾಯಕ ದೇವೇಗೌಡರು, ಅವರ ಪಕ್ಷಕ್ಕೆ ಪ್ರಾದೇಶಿಕವಾಗಿ ಹಾಗೂ ಸಾಮಾಜಿಕವಾಗಿ ವಿಶಾಲ ತಳಹದಿಯನ್ನು ನೀಡಿ ಭದ್ರ ಮಾಡಲು ಎಲ್ಲ ಜನವರ್ಗದವರಿಗೂ ಪದಾಧಿಕಾರಿಗಳ ಹಂತದಲ್ಲೇ ಪ್ರಾತಿನಿಧ್ಯವನ್ನು ಕೊಟ್ಟಿದ್ದಾರೆ. ಹಳೆಯ ಸಮಿತಿಯನ್ನು ವಿಸರ್ಜಿಸಿದ್ದಾರೆ.
ಹೊಸ ವ್ಯವಸ್ಥೆಯಲ್ಲಿ ಪಕ್ಷದ ರಾಜ್ಯ ಸಮಿತಿಯ ಅಧ್ಯಕ್ಷ ಸೋಮಣ್ಣ ಅವರಿಗೆ ನೆರವು ನೀಡಲು ಐವರು ಕಾರ್ಯಾಧ್ಯಕ್ಷರು, ನಾಲ್ವರು ಉಪಾಧ್ಯಕ್ಷರು, ಹಲವು ಮಹಾಕಾರ್ಯದರ್ಶಿಗಳು, ಕೆಲವರು ಕಾರ್ಯದರ್ಶಿಗಳನ್ನು ಅವರು ನೇಮಿಸಿದ್ದಾರೆ. ಒಟ್ಟು ಪದಾಧಿಕಾರಿಗಳ ಸಂಖ್ಯೆ 57.
ಈ ಬದಲಾವಣೆಯ ಅನಂತರವೂ ಪಕ್ಷದ ಪ್ರಾದೇಶಿಕ - ಜನಾಂಗೀಯ ಓಟು ಬ್ಯಾಂಕ್ ಭದ್ರವಾಗಿ ಉಳಿಯುವುದೇನು? ಲೋಕಸಭೆ ಚುನಾವಣೆಯೇ ಅದಕ್ಕೆ ಉತ್ತರ ನೀಡಬೇಕು. 57 ಜನರ ಸಮಿತಿಯ ಸಭೆಯಲ್ಲಿ ಯಾವುದೇ ಗಂಭೀರ ವಿಚಾರ ಅರ್ಥಪೂರ್ಣ ಚರ್ಚೆ ಅಸಾಧ್ಯ. ಅಂದರೆ ಪ್ರಮುಖ ನಿರ್ಧಾರಗಳನ್ನು ಕೈಗೊಳ್ಳಲು ಈಗ ಇತರ ಪಕ್ಷಗಳಲ್ಲಿರುವಂತೆ ಒಂದು "ಕೋರ್ ಕಮಿಟಿ" ತಾನೇ ತಾನಾಗಿ ಉದ್ಭವವಾಗುವುದು ಅನಿವಾರ್ಯ. ಜಾತ್ಯತೀತ ಜನತಾ ದಳದಲ್ಲಿ ಗೌಡರ ಕುಟುಂಬವೇ ಅದರ ಚಿಲುಮೆ - ಅನುಮಾನ ಬೇಡ.
ಭಾರತೀಯ ಜನತಾ ಪಾರ್ಟಿಯ ರಾಜ್ಯ ಘಟಕ ಮಾರ್ಗದರ್ಶನ ಎಲ್ಲಿಂದಲೋ, ಹೇಗೋ ಬರುತ್ತದೆ ಎಂದು ಕಾಯುತ್ತಾ ಕೂತಿರುವುದಂತೂ ನಿಜ.
ಕಿಡಿಗೇಡಿತನ: ಯಡಿಯೂರಪ್ಪ ಅವರಿಗೆ ಧರಣಿಗೆ ನೆರವಾಗಲು ಒಂದು ಕುರ್ಚಿಯನ್ನೂ ಕೂಡಲಿಲ್ಲ ಎನ್ನುವ ದೂರು ಕೇಳಿ ಬಂದಿದೆ. 1960 ರ ದಶಕದಲ್ಲಿ ಕರ್ನಾಟಕ ವಿಧಾನಸಭೆಯಲ್ಲಿ ಎಲ್ಲ ಪ್ರತಿಪಕ್ಷಗಳೂ ಎರಡು ದಿನಗಳ ಅಹೋರಾತ್ರಿಯ ಧರಣಿ ನಡೆಸಿದ್ದವು. ಆಗ ಯಾರೂ ಹಾಸಿಗೆಯನ್ನು ಕೇಳಿರಲಿಲ್ಲ.
-ಸತ್ಯ
anisikeprabha@gmail.com