ವೈದ್ಯರ ಸ್ವಾವಲಂಬಿ ಬದುಕಿಗೆ ಮಾರಕವಾಗಲಿರುವ ಕಾನೂನು!
ಖಾಸಗಿ ವೈದ್ಯಕೀಯ ಸಂಸ್ಥೆಗಳನ್ನು ಸರಕಾರದ ನಿಯಂತ್ರಣದಲ್ಲಿರಿಸಿಕೊಳ್ಳುವ ಉದ್ದೇಶದಿಂದ ಆಗಸ್ಟ್ 13, 2007 ರಂದು ರಾಜ್ಯಪಾಲರಿಂದ ಅನುಮೋದಿಸಲ್ಪಟ್ಟ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯವು ಸಪ್ಟೆಂಬರ್ 15, 2009 ರಂದು ಅಧಿಸೂಚನೆ ಹೊರಡಿಸಿ ರೂಪಿಸಿದ ನಿಯಮ ಇದಾಗಿದ್ದು ನವಂಬರ್ 10, 2009 ರಿಂದ ಜಾರಿಯಾಗಿದೆ. ಈ ನಿಯಮವು ಆವರೆಗೆ ಊರ್ಜಿತದಲ್ಲಿದ್ದ 'ಕರ್ನಾಟಕ ಖಾಸಗಿ ನರ್ಸಿಂಗ್ ಹೋಂ (ನಿಯಂತ್ರಣ) ಅಧಿನಿಯಮ 1976' ಅನ್ನು ನಿರಸನಗೊಳಿಸಿದೆ. ಈ ಹೊಸ ನಿಯಮದಡಿಯಲ್ಲಿ ಅಲೋಪತಿ, ಭಾರತೀಯ ವೈದ್ಯಪದ್ಧತಿ, ಹೋಮಿಯೋಪತಿ ಆಸ್ಪತ್ರೆಗಳು, ಕ್ಲಿನಿಕ್ ಅಥವಾ ಡಿಸ್ಪೆನ್ಸರಿಗಳು, ಹಲ್ಲಿನ ಆಸ್ಪತ್ರೆಗಳು, ಕ್ಲಿನಿಕಲ್ ಲ್ಯಾಬೋರೇಟರಿಗಳು, ಸ್ಕ್ಯಾನಿಂಗ್ ಸೆಂಟರ್‌ಗಳು, ಫಿಸಿಯೋಥೆರಪಿ ಯುನಿಟ್‌ಗಳು, ಮಸಾಜ್ ಸೆಂಟರ್‌ಗಳು, ಆಕ್ಸಿಜನ್ ಬಾರ್‌ಗಳು, ಚಿಕಿತ್ಸಾ ವ್ಯಾಯಾಮ (ರೆಮೀಡಿಯಲ್ ಜಿಮ್ನ್ಯಾಸ್ಟಿಕ್) ಸಂಸ್ಥೆಗಳು, ಆಕ್ಯುಪ್ರೆಶರ್, ಆಕ್ಯುಪಂಕ್ಚರ್ ಸೆಂಟರ್‌ಗಳು ಜಿಲ್ಲಾಮಟ್ಟದಲ್ಲಿ ನೋಂದಣಿ ಮಾಡಿಸಿಕೊಳ್ಳಲೇಬೇಕು. ಈ ನಿಯಮದಿಂದಾಗಿ ಇನ್ನು ಮುಂದೆ ಅಪಘಾತ, ಹಲ್ಲೆ, ಆಕಸ್ಮಿಕಗಳಿಂದ ಗಾಯಗೊಂಡಿರುವವರಿಗೆ ತುರ್ತು ಚಿಕಿತ್ಸೆ ನೀಡುವುದನ್ನು 'ಮೆಡಿಕೋಲೀಗಲ್' ಎಂಬ ಕಾರಣ ನೀಡಿ ಖಾಸಗಿ ವೈದ್ಯಕೀಯ ಸಂಸ್ಥೆಗಳು ನಿರಾಕರಿಸುವಂತಿಲ್ಲ. ರೋಗಿಯೊಬ್ಬ ತಾನು ಪಡೆದ ಚಿಕಿತ್ಸೆಯ ಮಾಹಿತಿಗಳನ್ನು ನಿಗದಿತ ಶುಲ್ಕ ಪಾವತಿಸಿ ಒಂದು ವಾರದೊಳಗೆ ಪಡೆದುಕೊಳ್ಳುವ ಹಕ್ಕು ಇದರಲ್ಲಿದೆ. ಅಲ್ಲದೆ, ವೈದ್ಯಕೀಯ ಸಂಸ್ಥೆಗಳು ತಮ್ಮಲ್ಲಿರುವ ವಿವಿಧ ಚಿಕಿತ್ಸಾಕ್ರಮ ಹಾಗೂ ಅವುಗಳ ವೆಚ್ಚ, ಸೇವಾಶುಲ್ಕಗಳ ಪಟ್ಟಿಯನ್ನು ಪ್ರದರ್ಶಿಸಿ ಅದಕ್ಕನುಸಾರವಾಗಿ ರಸೀದಿಯನ್ನು ನೀಡಿ ಹಣವನ್ನು ಪಡೆಯಬಹುದಾಗಿದ್ದು, ಪ್ರದರ್ಶಿತವಾಗಿಲ್ಲದ ರಸೀದಿ ರಹಿತ ಇತರೆ ಶುಲ್ಕಗಳ ಪಾವತಿಗೆ ರೋಗಿಯು ನಿರಾಕರಿಸಬಹುದಾಗಿದೆ. ಹೆಚ್1ಎನ್1 ನಂತಹ ಸೋಂಕು ರೋಗಗಳ ಸಾಂಕ್ರಾಮಿಕ ಸಂದರ್ಭದಲ್ಲಿ ಸರಕಾರ ನಿಗದಿಪಡಿಸಿದ ಚಿಕಿತ್ಸಾ ಪ್ರಕ್ರಿಯೆಗಳನ್ನು ಮಾತ್ರ ಪಾಲಿಸುವುದು ಖಾಸಗಿ ವೈದ್ಯಕೀಯ ಸಂಸ್ಥೆಗಳಿಗೆ ಈ ನಿಯಮದಡಿ ಅನಿವಾರ್ಯ.
ಇಂತಹ ಸಾರ್ವಜನಿಕ ಉಪಯೋಗೀ ಕಾನೂನಿನಲ್ಲಿ ಇರುವ ಕೆಲವು ಗೊಂದಲಗಳು ಭ್ರಷ್ಟ ಅಧಿಕಾರಿಗಳಿಗೆ ಕುಟುಂಬ ವೈದ್ಯರುಗಳ ಕ್ಲಿನಿಕ್/ಡಿಸ್ಪೆನ್ಸರಿಗಳನ್ನು ಹೆದರಿಸುವ ಬಂಡವಾಳವಾಗಿರುವುದು ಮಾತ್ರ ವಿಪರ್ಯಾಸ. ಈ ಅಧಿನಿಯಮದಲ್ಲಿ 11 ಪರಿಚ್ಛೇದಗಳಿದ್ದು, 3ನೇ ಪರಿಚ್ಛೇದವು 5 ಅನುಬಂಧಗಳಲ್ಲಿ ಖಾಸಗಿ ವೈದ್ಯಕೀಯ ಸಂಸ್ಥೆಗಳನ್ನು ಅವುಗಳ ಚಿಕಿತ್ಸಾ ಪದ್ಧತಿ, ಗಾತ್ರ ಮತ್ತು ಸೌಲಭ್ಯಗಳಿಗನುಸಾರವಾಗಿ ವಿವಿಧ ರೀತಿಯಲ್ಲಿ ವಿಂಗಡಿಸಿದೆ. 4ನೆಯ ಪರಿಚ್ಛೇದವು 4 ಅನುಬಂಧಗಳಲ್ಲಿ ವಿವಿಧ ರೀತಿಯ ಸಂಸ್ಥೆಗಳು ಸಂದಾಯ ಮಾಡಬೇಕಾದ ನೋಂದಣಿ ಶುಲ್ಕದ ಬಗ್ಗೆ ಹೇಳಿದೆ. ಆದರೆ, 5ನೆಯ ಪರಿಚ್ಛೇದದಲ್ಲಿ ಕೇವಲ ಒಂದೇ ಅನುಬಂಧವಿದ್ದು (್ಝ) ರಿಂದ (್ಢ್ಝಢ) ನೋಂದಣಾ ಷರತ್ತುಗಳನ್ನು ವಿವರಿಸಿದ್ದು, ಇದು ಕೇವಲ ಹೈಟೆಕ್ ಅಲೋಪತಿ ಆಸ್ಪತ್ರೆಗಳಿಗೆ ಮಾತ್ರ ಅನ್ವಯವಾಗುವಂಥದ್ದಾಗಿದೆ. ಖಾಸಗಿ ವೈದ್ಯಕೀಯ ಸಂಸ್ಥೆಗಳಿಗೆ ವಿವಿಧ ವಿಭಾಗಗಳನ್ನು, ವಿವಿಧ ನೋಂದಣಾ ಶುಲ್ಕಗಳನ್ನು ಹೇಳಿದ ಅಧಿನಿಯಮದಲ್ಲಿ ನೋಂದಣಾ ಷರತ್ತುಗಳೂ ಬೇರೆ ಬೇರೆ ಇರಬೇಕಾದ್ದು ನ್ಯಾಯ ಅಲ್ಲವೇ? ಹಾಗಾಗಿ ಪರಿಚ್ಛೇದ 5 ಅಪೂರ್ಣವಾಗಿದೆ. ಅಲ್ಲದೆ 8ನೆಯ ಪರಿಚ್ಛೇದವು ವಿವಿಧ ವಿಭಾಗದ ಸಂಸ್ಥೆಗಳಲ್ಲಿ ಇರಲೇಬೇಕಾದ ಕನಿಷ್ಠ ಸೌಲಭ್ಯ ಹಾಗೂ ಸಲಕರಣೆಗಳ ಮಾನದಂಡವನ್ನು ಶೆಡ್ಯೂಲ್(ಎ), (ಬಿ), (ಸಿ), (ಡಿ), (ಇ)ಗಳಲ್ಲಿ ವಿವರಿಸಿದೆ. ಹೀಗಿರುವಾಗ ಪರಿಚ್ಛೇದ 5 ಅಪ್ರಸ್ತುತವೆನಿಸುವುದಿಲ್ಲವೇ? ಪರಿಚ್ಛೇದ 8ರ, ಶೆಡ್ಯೂಲ್ (ಬಿ)ನ (1) ರ ಪ್ರಕಾರ ಆಯುರ್ವೇದ ಡಿಸ್ಪೆನ್ಸರಿ/ಕ್ಲೀನಿಕ್‌ಗಳು ಕನಿಷ್ಠ 150 ಚದರಡಿಯಷ್ಟಿದ್ದು ಟೇಬಲ್, ಕುರ್ಚಿ, ತೂಕ ಮಾಪನ ಯಂತ್ರ, ಪರೀಕ್ಷಾ ಟೇಬಲ್, ವಾಶ್ ಬೇಸಿನ್, ಡಿಸ್ಪೆನ್ಸಿಂಗ್ ಟೇಬಲ್, ಬಿ.ಪಿ ಅಪ್ಪರೆಟಸ್, ಟಂಗ್ ಡಿಪ್ರೆಸರ್, ಟಾರ್ಚ್‌ಲೈಟ್, ನೀ ಹ್ಯಾಮರ್, ಅಳತೆಯ ಟೇಪ್, ಥರ್ಮಾಮೀಟರ್ ಇತ್ಯಾದಿಗಳನ್ನು ಹೊಂದಿರತಕ್ಕದ್ದು ಎಂದು ಹೇಳಿದೆ. ಸ್ಥಳೀಯ ತಪಾಸಣಾ ತಂಡವು ಪರಿಶೀಲಿಸಿದ ಸಂದರ್ಭದಲ್ಲಿ ಇವುಗಳನ್ನು ಖಚಿತಪಡಿಸಿಕೊಂಡರೂ ದ.ಕ. ಜಿಲ್ಲಾ ಆರೋಗ್ಯಾಧಿಕಾರಿಗಳು ಕಳೆದೊಂದು ತಿಂಗಳಿನಿಂದ ದ.ಕ. ಜಿಲ್ಲೆಯ ಹೆಚ್ಚಿನ ಆಯುರ್ವೇದ ಕ್ಲಿನಿಕ್‌ಗಳಿಗೆ ನೀಡಿದ ನೋಟೀಸಿನಲ್ಲಿ ಪರಿಚ್ಛೇದ 5 ರ(1) (್ಝ್ಝ್ಝ) ಮತ್ತು ಪರಿಚ್ಛೇದ 8ರ ಶೆಡ್ಯೂಲ್(ಬಿ)ನ 2, 3, 4, 5, 6, 7 ಮತ್ತು ಶೆಡ್ಯೂಲ್(ಸಿ) ಮತ್ತು (ಡಿ)ಯಲ್ಲಿ ಉಲ್ಲೇಖಿಸಿದ 'ಪುರುಷರಿಗೆ ಮತ್ತು ಮಹಿಳೆಯರಿಗೆ ಪ್ರತ್ಯೇಕ ಶೌಚಾಲಯ', ಪರಿಚ್ಛೇದ 5 ರ (1) (್ಝಢ) ಮತ್ತು ಪರಿಚ್ಛೇದ 8ರ ಶೆಡ್ಯೂಲ್ (ಎ)ನ ಭಾಗ 1 ರ (ಡಿ) ಮತ್ತು ಶೆಡ್ಯೂಲ್ (ಡಿ)ನಲ್ಲಿ ಉಲ್ಲೇಖಿಸಿದ 'ರೆಕಾರ್ಡ್ ರೂಂ', ಪರಿಚ್ಛೇದ 5 ರ(1) (ಢ) ಮತ್ತು ಪರಿಚ್ಛೇದ 8ರ ಶೆಡ್ಯೂಲ್ (ಎ)ನ ಭಾಗ 1ರ (ಇ), ಶೆಡ್ಯೂಲ್ (ಡಿ)ನಲ್ಲಿರುವ 'ಬಯೋವುಡಿಕಲ್ ತ್ಯಾಜ್ಯ ನಿರ್ವಹಣೆ', ಪರಿಚ್ಛೇದ 5 ರ(1) (್ಝ್ಢ) (ಎಫ್)ಲ್ಲಿರುವ ಡಿಸ್ಪ್ಲೇ ಆಫ್ ಚಾರ್ಜಸ್ ಇತ್ಯಾದಿ ಕುಂದುಕೊರತೆಗಳ ಪಟ್ಟಿ ಮಾಡಿ 90 ದಿನಗಳೊಳಗಾಗಿ ಸರಿಪಡಿಸಿ ವರದಿ ನೀಡಿ ಎಂದು ಆದೇಶಿಸಿರುವುದು, ಈ ಕಾನೂನು ಗೊಂದಲಮಯವಾಗಿದೆ ಎಂಬುದಕ್ಕೆ ಉದಾಹರಣೆಯಾಗಿದೆ. 4 ನೇ ಪರಿಚ್ಛೇದದ 3ನೇ ಅನುಬಂಧದ (ಎ) (1)ರಲ್ಲಿ ಹೇಳಿದ ರು. 500 ನೋಂದಣಾ ಶುಲ್ಕ ಪಾವತಿಸಿ, ಪರಿಚ್ಛೇದ 8ರ ಶೆಡ್ಯೂಲ್(ಬಿ) ನ (1)ರಂತೆ ಆಯುರ್ವೇದ ಡಿಸ್ಪೆನ್ಸರಿ ನಡೆಸುವ 3ನೇ ಪರಿಚ್ಛೇದದ 3 ನೇ ಅನುಬಂಧದ (ಎ) ವಿಭಾಗದಡಿ ಬರುವ ಆಯುರ್ವೇದ ವೈದ್ಯನನ್ನು ಅಧಿಕಾರಿಗಳು ಯಾವುದೋ ಅಲೋಪತಿ ಆಸ್ಪತ್ರೆಯ ಮಾಲಕನೆಂದು ಭಾವಿಸಿಕೊಂಡಿದೆಯಲ್ಲವೇ? ಇದೇ ಅಲ್ಲವೇ "ಕಾನೂನಿಗೆ ಕಣ್ಣಿಲ್ಲ, ಕುರುಡು ಕಾನೂನು" ಎಂಬ ನಾಣ್ಣುಡಿಗಳಿಗೆ ಹಿಡಿದ ಕೈಗನ್ನಡಿ?!
ಇವೆಲ್ಲವುಗಳಿಗಿಂತಲೂ ಮಿಗಿಲಾಗಿ, ಕ್ಲಿನಿಕ್/ಡಿಸ್ಪೆನ್ಸರಿಗಳು ದಿನವೊಂದಕ್ಕೆ ಸರಾಸರಿ 20-25 ರೋಗಿಗಳನ್ನು ಸಂತೈಸುವ ಕುಟುಂಬ ವೈದ್ಯರುಗಳ ವೈದ್ಯಕೀಯ ಸೇವೆ ನೀಡುವ ಕಚೇರಿಗಳಾಗಿವೆ. ಇವುಗಳ ಕಾರ್ಯಾಚರಣೆ ಹಲವಾರು ವೈದ್ಯರು, ಅರೆವೈದ್ಯಕೀಯ ಸಿಬ್ಬಂದಿಗಳು, ವೈದ್ಯಕೀಯೇತರ ಸಾಮಾನ್ಯ ಸಿಬ್ಬಂದಿಗಳಿರುವ, ವೈದ್ಯನೇ ಅಲ್ಲದ 3ನೆಯ ವ್ಯಕ್ತಿಯ ಅಥವಾ ಸಂಸ್ಥೆಯ ಒಡೆತನದಲ್ಲಿರುವ ಆಸ್ಪತ್ರೆ ಎಂಬ ಉದ್ದಿಮೆಗಿಂತ ಭಿನ್ನ. ಆರ್ಥಿಕ ಲಾಭದ ಹಿತಾಸಕ್ತಿ ಮಾತ್ರ ಅಡಗಿರುವ ವೈದ್ಯಕೀಯ ಉದ್ದಿಮೆಗಳಿಗೆ ಅನಿವಾರ್ಯವಾದ ಇಂತಹ ಕಾನೂನು ಕುಟುಂಬ ವೈದ್ಯರುಗಳಿಗೂ ಅಗತ್ಯವೇ? ವೈದ್ಯಕೀಯ ಶಿಕ್ಷಣವನ್ನು ಯಶಸ್ವಿಯಾಗಿ ಪೂರೈಸಿ, ವೃತ್ತಿ ಆರಂಭಿಸಲು ಕಾನೂನು ರೀತ್ಯಾ ಕಡ್ಡಾಯವಾದ ನೋಂದಣಿ ಮಾಡಿಸಿಕೊಂಡ ವೈದ್ಯ ತನ್ನ ಕಾರ್ಯ ಸ್ಥಳವಾದ ಕ್ಲಿನಿಕ್‌ಗಳನ್ನೂ ನೋಂದಾಯಿಸಬೇಕೆಂದು ಈ ಅಧಿನಿಯಮ ಹೇಳುತ್ತಿರುವುದು ಅಸಂವಿಧಾನಿಕ ಎನಿಸುವುದಿಲ್ಲವೇ? ಕರ್ನಾಟಕ ಮೆಡಿಕಲ್ ರೆಜಿಸ್ಟ್ರೇಷನ್ ಆ್ಯಕ್ಟ್ 34, 1961 ಹಾಗೂ ಕರ್ನಾಟಕ ಆಯುರ್ವೇದ / ಯುನಾನಿ ಪ್ರಾಕ್ಟೀಸ್‌ನ ರೆಜಿಸ್ಟ್ರೇಷನ್ / ಮೆಡಿಕಲ್ ಪ್ರಾಕ್ಟೀಷನರ್ಸ್ ಮಿಸಲೇನಿಯಸ್ ಆ್ಯಕ್ಟ್ 1961 ಇತ್ಯಾದಿಗಳಡಿಯಲ್ಲಿ ನೋಂದಾಯಿತ ವೈದ್ಯರುಗಳ ಕ್ಲಿನಿಕ್/ಡಿಸ್ಪೆನ್ಸರಿಗಳನ್ನು ನಿಯಂತ್ರಿಸಬಹುದಾದ ಅಧಿಕಾರ ಸರಕಾರಕ್ಕಿದ್ದರೂ ಈ ಹೊಸ ಅಧಿನಿಯಮದಿಂದಾಗುವ ಲಾಭವಾದರೂ ಏನು? ಇದು ಬಾರ್ ಕೌನ್ಸಿಲ್ ಸದಸ್ಯನಾದ ವಕೀಲನೋರ್ವನ ಕಚೇರಿಯನ್ನೂ ವೃತ್ತಿ ನಿರ್ವಹಿಸುವ ಸಲುವಾಗಿ ನೋಂದಣಿ ಮಾಡಲೇಬೇಕೆಂದು ಕಾನೂನು ಮಾಡಿದಂತೆ ಹಾಸ್ಯಾಸ್ಪದ ಅಲ್ಲವೇ? ಲಾಡ್ಜ್‌ಗಳಲ್ಲಿದ್ದುಕೊಂಡು, ಸಂಜೆ ಪತ್ರಿಕೆಗಳಿಗೆ ಜಾಹೀರಾತು ನೀಡಿ ಯಾವುದೇ ವೈದ್ಯಕೀಯ ಶಿಕ್ಷಣವನ್ನೂ ಪಡೆಯದೇ ಲೈಂಗಿಕ ತಜ್ಞ, ಮೂಲವ್ಯಾಧಿ ತಜ್ಞರೆನಿಸಿಕೊಂಡು ಜನರನ್ನು ವಂಚಿಸುವ ನಕಲಿ ವೈದ್ಯರುಗಳು ತಮ್ಮ ದಂಧೆಗಳನ್ನು ನೋಂದಾಯಿತ ವೈದ್ಯರುಗಳ ದಾಖಲೆಗಳನ್ನು ಬಳಸಿ ನೋಂದಾಯಿತ ಖಾಸಗಿ ವೈದ್ಯಕೀಯ ಸಂಸ್ಥೆಗಳನ್ನಾಗಿಸುವ ಅಪಾಯಕಾರಿ ಪರಿಚ್ಛೇದ 6 ಅನುಬಂಧ 2 ಈ ಹೊಸ (ಅಕ್ರಮ-ಸಕ್ರಮ) ಅಧಿನಿಯಮದಲ್ಲಿದೆ.
ಈಗಿನ ಐ.ಟಿ., ಬಿ.ಟಿ. ಆರ್ಭಟದಲ್ಲಿ ವೈದ್ಯಕೀಯ ಶಿಕ್ಷಣವನ್ನು ಆಶಿಸುವ ವಿದ್ಯಾರ್ಥಿಗಳ ಸಂಖ್ಯೆ ಕ್ಷೀಣಿಸುತ್ತಿದೆ. 24/7 ಕರ್ತವ್ಯ ನಿರತರಾಗಿರಲೇಬೇಕಾದ, 6-10 ವರ್ಷಗಳ ಕಲಿಯುವಿಕೆ ಕೇಳುವ ವೈದ್ಯ ವೃತ್ತಿಯಿಂದ ಕೈತುಂಬಾ ಸಂಪಾದಿಸುವ ಹೊತ್ತಿಗೆ ವೃದ್ಧನಾಗಿ ವೈದ್ಯನೆನಿಸಿಕೊಳ್ಳುವುದಕ್ಕಿಂತ, ವಾರಕ್ಕೆ ಐದೇ ದಿನದ ದುಡಿಮೆ, ಕೈತುಂಬಾ ಸಂಬಳ-ಸವಲತ್ತು, ಪ್ರಪಂಚ ಪರ್ಯಟನೆಯ ಸದಾವಕಾಶ, ಹೆತ್ತವರ ಜೀವಮಾನದ ಗಳಿಕೆಯನ್ನು ಬೆರಳೆಣಿಕೆಯ ವರ್ಷಗಳಲ್ಲಿ ಸಂಪಾದಿಸಬಹುದಾದ, ಸಣ್ಣ ವಯಸ್ಸಿಗೇ ಜೀವನದಲ್ಲಿ ತಳವೂರಬಹುದಾದ ಕೇವಲ ನಾಲ್ಕೇ ವರ್ಷಗಳ ಕಲಿಕೆಯಿಂದ ಆಗುವ 'ಇಂಜಿನಿಯರ್' ಇಂದಿನ ಯುವ ಜನಾಂಗದ ಪ್ರಥಮ ಆಯ್ಕೆ ಆಗಿರುವುದರಲ್ಲಿ ಆಶ್ಚರ್ಯ್ಯವೇನಿಲ್ಲ. ಇಂತಹ ಸಂಕೀರ್ಣ ಕಾಲಘಟ್ಟದಲ್ಲಿ ಈ ರೀತಿಯ ಕರಾಳ ಅಧಿನಿಯಮ ಕುಟುಂಬ ವೈದ್ಯಕ್ಕೆ ಮರಣ ಶಾಸನ ಬರೆದಲ್ಲಿ ಜನಸಾಮಾನ್ಯರು ತಮ್ಮ ಕನಿಷ್ಠ ವೈದ್ಯಕೀಯ ಆವಶ್ಯಕತೆಗಳನ್ನು ಪೂರೈಸಲೂ ದುಬಾರಿ ವೆಚ್ಚದ ಆಸ್ಪತ್ರೆಗಳೆಂಬ ಉದ್ದಿಮೆಗಳಿಗೆ ಎಡತಾಕಬೇಕಾದ ದಿನಗಳಿನ್ನು ದೂರವಿಲ್ಲ. ನಗರೀಕರಣ-ಜಾಗತೀಕರಣದ ಹೊಡೆತದಿಂದ ಈಗಾಗಲೇ ಗ್ರಾಮಾಂತರ ಪ್ರದೇಶಗಳು ಅರ್ಹ ವೈದ್ಯರುಗಳ ಕೊರತೆಯನ್ನು ಎದುರಿಸುತ್ತಿದ್ದು, ಗ್ರಾಮೀಣ ಜನರು ಈಗಿರುವ ವೈದ್ಯಕೀಯ ಸೌಲಭ್ಯಗಳಿಂದಲೂ ವಂಚಿತರಾಗಬಹುದಾದ ಪರಿಸ್ಥಿತಿ ಈ ಹೊಸ ಕಾನೂನಿನಿಂದ ಆಗುವುದು ನಿಶ್ಚಿತ. ಉದ್ದಿಮೆದಾರರ ಹಿಡಿತಕ್ಕೆ ವೈದ್ಯಕೀಯವನ್ನು ತಳ್ಳುವ ಇಂತಹ ಕಾನೂನಿನಿಂದಾಗಿ ವೈದ್ಯರಿಗೆ ಸ್ವ-ಉದ್ಯೋಗ, ಸ್ವಾವಲಂಬೀ, ಸ್ವತಂತ್ರ ಬದುಕೆಂಬುದು ಮರೀಚಿಕೆಯಾಗಲಿದೆ. ಆದ್ದರಿಂದ, ಸರಕಾರವು -ದ್ವಿವಿಧ ನೋಂದಣಾ ಪದ್ಧತಿ ಎಂಬ ಅಸಂವಿಧಾನಿಕ, ಭ್ರಷ್ಟಾಚಾರಕ್ಕೆ ಪೂರಕ, ಸಾರ್ವಜನಿಕರಿಗೆ ಮಾರಕ 'ಕರ್ನಾಟಕ ಖಾಸಗಿ ವೈದ್ಯಕೀಯ ಸಂಸ್ಥೆಗಳ ಅಧಿನಿಯಮ 2007'ರಿಂದ ಕುಟುಂಬ ವೈದ್ಯರುಗಳ ಕ್ಲಿನಿಕ್/ಡಿಸ್ಪೆನ್ಸರಿಗಳಿಗೆ ವಿನಾಯಿತಿ ನೀಡುವುದು ಒಳಿತು ಅಲ್ಲವೇ ಏನಂತೀರಿ?
ಕುಟುಂಬ ವೈದ್ಯರನ್ನು ಉಳಿಸಬೇಕೆಂಬ ಆಶಯ ಹೊಂದಿದ ಪ್ರತಿಯೊಬ್ಬ ಪ್ರಜ್ಞಾವಂತ ನಾಗರಿಕನೂ ಕರ್ನಾಟಕ ರಾಜ್ಯ ಉಚ್ಚ ನ್ಯಾಯಾಲಯದ ಮುಖ್ಯ ನ್ಯಾಯಾಧೀಶರಾದ ಜಸ್ಟೀಸ್ ಜೆ.ಎಸ್.ಖೇಹರ್ ಅವರಿಗೆ 'ವಿನಾಯಿತಿ ಕೊಡುವಂತೆ ಸರಕಾರಕ್ಕೆ ನಿರ್ದೇಶನ ನೀಡಿ' ಎಂದು ವಿನಂತಿಸಿ ಪತ್ರ ಬರೆಯುವಿರಾ?
ಡಾ.ರಾಮಚಂದ್ರ