ಗುಳೆ ತಡೆಗೆ ಸರ್ಕಾರ ತೆಗೆದುಕೊಂಡ ಕ್ರಮ ಸಾಕೆ?
ಕೆಲಸ ಅರಸಿ ಗುಳೆ ಹೋಗುವವರು ಕೆಲಸ ಸಿಗುವ ಮೊದಲೇ ಬದುಕು ಕಳೆದುಕೊಳ್ಳುತ್ತಿದ್ದು, ಇಂತಹ ಪ್ರಸಂಗಗಳು ಆಗಾಗ್ಗೆ ರಾಜ್ಯದಲ್ಲಿ ವರದಿಯಾಗುತ್ತಲೇ ಇವೆ. ಅದಕ್ಕೆ ಮತ್ತೊಂದು ಸೇರ್ಪಡೆ ಎನ್ನುವ ರೀತಿಯಲ್ಲಿ ಈಚೆಗೆ ಬೆಳಗಾವಿ ಸಮೀಪದಲ್ಲಿ ನಡೆದ ಅಪಘಾತದಲ್ಲಿ 22 ಜನ ಬಡವರು ದುಡಿಮೆ ಅರಸಿ ಹೊರಟು, ಮಸಣ ಸೇರಿದರು. ಆದರೆ ಹಲವು ವರುಷಗಳಿಂದ ಚಾಲ್ತಿಯಲ್ಲಿರುವ ಈ ಗುಳೆ ಹೋಗುವ ಪದ್ಧತಿಯನ್ನು ತಪ್ಪಿಸುವ ನಿಟ್ಟಿನಲ್ಲಿ ಸರ್ಕಾರಗಳು ಅದೇಕೆ ಹಿಂದೇಟು ಹಾಕುತ್ತಿವೆ. ಇದನ್ನು ತಡೆಯಲು ಸದ್ಯ ಸರ್ಕಾರ ತೆಗೆದುಕೊಂಡ ಕ್ರಮಗಳು ಸಾಕಾಗಿವೆಯೇ ಎನ್ನುವ ಹತ್ತಾರು ಪ್ರಶ್ನೆಗೆ ಉತ್ತರವೇ ಇಲ್ಲದಂತಾಗಿದೆ.
ಗುಳೆ ಎನ್ನುವುದು ಮರಾಠಿ ಪ್ರಭಾವದಿಂದ ಆಡು ಭಾಷೆಯಲ್ಲಿ ರೂಢಿ ಶಬ್ದವಾಗಿ ರೂಪಾಂತರಗೊಡಿದೆ ಎಂದು ಹೇಳಲಾಗುತ್ತದೆ. ಒಂದೆಡೆಯಿಂದ ಮತ್ತೊಂದೆಡೆ ದುಡಿಮೆ ಅರಸಿ ಹೋಗುವುದು ಎನ್ನುವ ಅರ್ಥವನ್ನು ಈ ಶಬ್ದ ಕೊಡುತ್ತದೆ. ಇದರಲ್ಲಿ ಮುಖ್ಯವಾಗಿ ಕೆಲಸ ಅರಸಿ ಹೋಗುವುದಕ್ಕೂ ಗುಳೆ ಹೋಗುವುದಕ್ಕೂ ವ್ಯತ್ಯಾಸವಿದ್ದು, ಕೆಲಸ ಅರಸಿ ಹೋಗುವವನು ಸಂಜೆಗೋ ಅಥವಾ ವಾರಕ್ಕೊಮ್ಮೆಯೋ ಮರಳಿ ತಮ್ಮ ಗ್ರಾಮಕ್ಕೆ ಬರುತ್ತಾನೆ. ಆದರೆ ಗುಳೆ ಹೋದವರು ಒಂದು ಸುಗ್ಗಿ (ಹಿಂಗಾರು ಅಥವಾ ಮುಂಗಾರು) ಮುಗಿಸಿಕೊಂಡೇ ಬರುತ್ತಾರೆ.
ಈ ರೀತಿ ಗುಳೆ ಹೋಗುವವರಲ್ಲಿ ಶೇ. 99 ರಷ್ಟು ಬಡವರೇ, ಇವರೆಲ್ಲ ತಾವಿರುವ ಸ್ಥಳದಲ್ಲಿ ಸಮರ್ಪಕವಾದ ಕೆಲಸ ಸಿಗದೇ ದೂರದ ಊರುಗಳಿಗೆ ಕುಟುಂಬ ಸಮೇತರಾಗಿ ದುಡಿಯಲು ಹೋಗುತ್ತಾರೆ. ಇದನ್ನು ಸಂಪೂರ್ಣ ತಡೆಗಟ್ಟಲು ನಮ್ಮ ಸರ್ಕಾರಗಳು ತೆಗೆದುಕೊಂಡ ಕ್ರಮಗಳಾದರೂ ಏನು ಎನ್ನುವ ಚಿಂತನೆ ಮಾಡಿದಲ್ಲಿ ಎಲ್ಲವೂ ಶೂನ್ಯ. ಅದರಲ್ಲಿಯೂ ಕಳೆದ ನಾಲ್ಕೈದು ವರ್ಷದಲ್ಲಿ ಗುಳೆ ತಪ್ಪಿಸಲು ರಾಷ್ಟ್ರೀಯ ಉದ್ಯೋಗ ಖಾತ್ರಿ ಯೋಜನೆ ಅತ್ಯಂತ ಮಹತ್ವದ ಪಾತ್ರ ವಹಿಸುತ್ತದೆ ಎಂದು ಹೇಳುತ್ತಲೇ ಬರುತ್ತಾರೆ. ವಾಸ್ತವದಲ್ಲಿ ರಾಜ್ಯದಲ್ಲಿ ಇಂದಿಗೂ ಗುಳೆ ಸಂಸ್ಕೃತಿ ನಿಂತಿಲ್ಲ.
ಇದು ಅತ್ಯಂತ ಕೆಟ್ಟ ಸಂಪ್ರದಾಯ ಎನ್ನುವ ರಾಜಕೀಯ ನಾಯಕರು ನಮ್ಮ ಮಧ್ಯೆ ಇದ್ದಾರೆ. ಆದರೆ ಅದನ್ನು ಶಾಶ್ವತವಾಗಿ ತಡೆಗಟ್ಟುವ ನಿಟ್ಟಿನಲ್ಲಿ ನಮ್ಮ (ರಾಜಕಾರಣಿಗಳ) ಜವಾಬ್ದಾರಿ ಏನು ಎನ್ನುವುದನ್ನೇ ಮರೆತಿದ್ದಾರೆ. ಈಚೆಗೆ ಸವದತ್ತಿ ಬಳಿ ರಾಜ್ಯದಿಂದ ಮಹಾರಾಷ್ಟ್ರದ ಕಲ್ಲು ಕ್ವಾರಿಯಲ್ಲಿ ಕೆಲಸ ಮಾಡಲು ತೆರಳುತ್ತಿದ್ದ ಕ್ಯಾಂಟರ್ ಅಪಘಾತವಾಗಿ 22 ಜನ ಅಸುನೀಗಿದ್ದಾರೆ. ಇವರೆಲ್ಲ ಗುಳೆ ಹೊರಟವರೇ, ತಮ್ಮೊಟ್ಟಿಗೆ ಮೂರು ತಿಂಗಳಿಗಾಗುವಷ್ಟು ಆಹಾರ ಧಾನ್ಯ ಅವರೆಲ್ಲ ಒಯ್ಯುತ್ತಿದ್ದರು ಎನ್ನುವುದು ಗಮನಾರ್ಹ.
ಹಾಗಾದರೆ ನಮ್ಮ ಜನರಿಗೆ (ಗುಳೆ ಹೋಗುವ) ತಿನ್ನಲು ಸಾಕಷ್ಟು ಆಹಾರ ಧಾನ್ಯಗಳು ಅವರು ಇರುವ ಸ್ಥಳದಲ್ಲಿಯೇ ಲಭ್ಯವಾಗುತ್ತಿವೆ. ಆದರೆ ಅವರಿಗೆ ಬೆಲೆ ಏರಿಕೆಯ ಈ ದಿನಗಳಲ್ಲಿ ಇನ್ನುಳಿದ ಖರ್ಚಿಗಾಗಿ ಹೆಚ್ಚಿನ ಹಣ ಬೇಕಾಗುತ್ತೆ. ಅದಕ್ಕಾಗಿ ಅವರೆಲ್ಲ ಗುಳೆ ಹೋಗುತ್ತಾರೆ ಎನ್ನುವ ಸತ್ಯ ಗೋಚರವಾಗುತ್ತದೆ. ಮುಖ್ಯವಾಗಿ ಗುಳೆ ಹೋಗುವ ಪದ್ಧತಿ ಜಾರಿಯಲ್ಲಿರುವುದು ಗ್ರಾಮೀಣ ಪ್ರದೇಶಗಳಲ್ಲಿ ಮಾತ್ರ. ಅದರಲ್ಲಿಯೂ ಶಿಕ್ಷಣ, ಸಾರಿಗೆ, ಮೂಲಸೌಲಭ್ಯಗಳಿಂದ ವಂಚಿತ ಗ್ರಾಮಗಳ ಜನರೇ ಕೆಲಸ ಅರಸಿ ಹೋಗುತ್ತಾರೆ. ಅದರಲ್ಲಿ ಪ್ರಮುಖವಾಗಿ ಲಂಬಾಣಿ ತಾಂಡಾಗಳ ನಿವಾಸಿಗಳ ಸಂಖ್ಯೆ ಹೆಚ್ಚಿದೆ. ಒಟ್ಟು ಗುಳೆ ಹೋಗುವವರಲ್ಲಿ ಶೇ. 75ರಷ್ಟು ಜನ ಲಂಬಾಣಿಗಳು ಎನ್ನುವುದನ್ನು ಖಾಸಗಿ ಸಂಸ್ಥೆಯೊಂದು ನಡೆಸಿದ ಸಮೀಕ್ಷೆಯಲ್ಲಿ ಬಹಿರಂಗಗೊಂಡಿದೆ.
ಗುಳೆ ಹೋಗುವುದರಿಂದ ಸಮಾಜದ ಸ್ವಾಸ್ಥ್ಯ ಹಾಳಾಗುತ್ತದೆ. ಗುಳೆ ಹೋಗುವವರ ಮಕ್ಕಳೆಲ್ಲ ಶಿಕ್ಷಣದಿಂದ ವಂಚಿತರಾಗುತ್ತಾರೆ. ಇದು ಅವರ ಕುಟುಂಬ ದೃಷ್ಟಿಯಿಂದ ಮತ್ತು ರಾಜ್ಯದ ಶೈಕ್ಷಣಿಕ ವ್ಯವಸ್ಥೆ ದೃಷ್ಟಿಯಿಂದ ಅತ್ಯಂತ ಅಪಾಯಕಾರಿ ಬೆಳವಣಿಗೆ. ಜಗತ್ತಿನ ಎಲ್ಲ ದೇಶಗಳು ಸಾಕ್ಷರತೆಯ ಪ್ರಮಾಣವನ್ನು ನೂರಕ್ಕೆ ನೂರಷ್ಟು ಮಾಡುತ್ತಿರುವ ಈ ಸಂದರ್ಭದಲ್ಲಿ ನಮ್ಮ ಮುಂದಿನ ತಲೆಮಾರಿನ ಆಸ್ತಿಯಂದೇ ನಂಬಿರುವ ಮಕ್ಕಳು ಶಿಕ್ಷಣದಿಂದ ವಂಚಿತವಾಗುತ್ತಿರುವುದು ಇದೇ ಗುಳೆ ಸಂಸ್ಕೃತಿಯಿಂದ. ಇನ್ನು ಕೆಲವರು ಹೆಂಡತಿ ಮಕ್ಕಳನ್ನು ಇಲ್ಲಿಯೇ ಬಿಟ್ಟು ಹೋಗುತ್ತಿದ್ದು, ಇದರಿಂದ ಹಲವಾರು ಮಾರಣಾಂತಿಕ ಕಾಯಿಲೆಗೆ ಬಡ ಕುಟುಂಬಗಳು ತುತ್ತಾಗಿ, ಇಡೀ ಕುಟುಂಬವೇ ಬೀದಿಗೆ ಬರುತ್ತದೆ.
ದುಡಿಮೆ (ಕೆಲಸ) ಅರಸಿ ಬೇರೆಡೆ ಹೋಗುತ್ತಾರೆ ಎಂದಾದಲ್ಲಿ ಅವರಿಗೆ ಅಲ್ಲಿ ಸೂಕ್ತ ಕೆಲಸ ಸಿಗುತ್ತಿಲ್ಲ. ಸಿಗುವ ಕೆಲಸಗಳಿಂದ ಅವರ ಹೊಟ್ಟೆ ತುಂಬುತ್ತಿಲ್ಲ ಎನ್ನುವುದನ್ನು ಆಳುವ ಸರ್ಕಾರಗಳು ಮನಗಾಣಬೇಕಿದೆ. ಗುಳೆ ಹೋಗುವುದನ್ನು ತಡೆಗಟ್ಟುವ ನಿಟ್ಟಿನಲ್ಲಿ ಇಲ್ಲಿಯವರೆಗೂ ಆಳಿದ ಯಾವ ಸರ್ಕಾರಗಳು ವಿಶೇಷ ಆದ್ಯತೆ ನೀಡಿಲ್ಲ ಎನ್ನುವುದು ಸದ್ಯದ ಸ್ಥಿತಿಯನ್ನು ಗಮನಿಸಿದಾಗ ತಿಳಿದು ಬರುವ ಸತ್ಯವಾಗಿದೆ. ಆದರೆ, ಕೇಂದ್ರ ಸರ್ಕಾರ ಜಾರಿಗೆ ತಂದಿರುವ ರಾಷ್ಟ್ರೀಯ ಉದ್ಯೋಗ ಖಾತ್ರಿ ಯೋಜನೆ ಗುಳೆ ಹೋಗುವವರನ್ನು ತಡೆಗಟ್ಟಲು ಅನುಕೂಲವಾಗಿದೆ ಎಂದು ವ್ಯಾಖ್ಯಾನಿಸಲಾಗುತ್ತಿದೆ. ಆದರೆ, ರಾಜ್ಯದಲ್ಲಿ ವಾಸ್ತವಾಂಶವೇ ಬೇರೆಯಾಗಿದೆ. ರಾಜ್ಯದಲ್ಲಿ 1 ಕೋಟಿಗೂ ಹೆಚ್ಚಿನ ಜನರು ಈ ಉದ್ಯೋಗ ಖಾತ್ರಿ ಯೋಜನೆಯಡಿಯಲ್ಲಿ ಜಾಬ್ ಕಾರ್ಡ್ ಹೊಂದಿದ್ದಾರೆ. ಇವರೆಲ್ಲರೂ ಉದ್ಯೋಗ ಕೇಳಿದಾಗ ಆಯಾ ಗ್ರಾಪಂಗಳು ಉದ್ಯೋಗ ನೀಡುತ್ತಿವೆ. ಆದರೆ, ಜನ ಏಕೆ ಗುಳೆ ಹೋಗುತ್ತಿದ್ದಾರೆ ಎನ್ನುವುದನ್ನು ಸೂಕ್ಷ್ಮವಾಗಿ ಗಮನಿಸಿದಲ್ಲಿ, ಕೃಷಿ ಕಾರ್ಮಿಕರಾಗಿ ರಾಜ್ಯದಲ್ಲಿ ದುಡಿವ ಜನರೇ ಬೇರೆಯಾಗಿದ್ದಾರೆ. ಕೃಷಿ ಕಾರ್ಮಿಕರಲ್ಲಿಯೇ ಶೇ. 10ರಷ್ಟು ಜನ ಮಾತ್ರ ಸತತವಾಗಿ ಮಳೆಯಾಗದೇ ಬರಗಾಲ ಪರಿಸ್ಥಿತಿ ಉಂಟಾದಾಗ ಮಾತ್ರ ಗುಳೆ ಹೋಗುತ್ತಾರೆ.
ಕೃಷಿ ಕಾರ್ಮಿಕರಾಗಿ ಕೆಲಸ ಮಾಡುವುದು ಎಂದರೆ ಅತ್ಯಂತ ಕಷ್ಟದ ಕೆಲಸವಾಗಿದೆ. ಹಗಲೆಲ್ಲ ಸುಡು ಬಿಸಿಲಿನಲ್ಲಿ, ಮಳೆಗಾಲದಲ್ಲಿ ಮಳೆಯಲ್ಲಿ, ಚಳಿಗಾಲದಲ್ಲಿ ಚಳಿಯಲ್ಲಿ, ಕೆಲವೊಮ್ಮೆ ರಾತ್ರಿಯಲ್ಲಿ ಕೃಷಿ ಕಾಯಕದಲ್ಲಿ ತೊಡಬೇಕಾಗುತ್ತದೆ. ಇಷ್ಟೆಲ್ಲ ಶ್ರಮಪಟ್ಟರೂ ಕೆಲವೊಮ್ಮೆ ರೈತರಿಗೆ ಅಂದುಕೊಂಡಷ್ಟು ಬೆಲೆ ಸಿಗದೇ ನಷ್ಟ ಅನುಭವಿಸುತ್ತಾರೆ. ರೈತರೇ ನಷ್ಟ ಅನುಭವಿಸಿದ ನಂತರ, ಅವರನ್ನು ನಂಬಿದ ಕಾರ್ಮಿಕರ ಸ್ಥಿತಿಯಂತೂ ಮತ್ತಷ್ಟು ಶೋಚನೀಯ. ಹಾಗಾಗಿ ವರ್ಷದಿಂದ ವರ್ಷಕ್ಕೆ ನಮ್ಮ ಯುವಕರು ಕೃಷಿಯಲ್ಲಿ ಕಾರ್ಮಿಕರಾಗಿ ಕೆಲಸ ಮಾಡಲು ಇಚ್ಛೆಪಡುತ್ತಿಲ್ಲ. ಕೃಷಿಯಲ್ಲಿ ಕೆಲಸ ಮಾಡಬೇಕಾದಲ್ಲಿ ವರ್ಷಪೂರ್ತಿ ದುಡಿಯಬೇಕಾದ ಅನಿವಾರ್ಯತೆ ಇದೆ. ಆದರೆ, ದೂರದ ಊರುಗಳಿಗೆ ತೆರಳಿ, ಕಟ್ಟಡ ಕಾಮಗಾರಿಗಳು ಸೇರಿದಂತೆ ಶ್ರಮದ ಕೆಲಸಗಳನ್ನು ಆಯ್ಕೆ ಮಾಡಿಕೊಂಡಲ್ಲಿ ಹೆಚ್ಚಿನ ಕೂಲಿ ಸಿಗಲಿದೆ. ನಮ್ಮ ರೈತಾಪಿ ವರ್ಗ ಇಂದು ಒಬ್ಬ ಕಾರ್ಮಿಕನಿಗೆ ದಿನಕ್ಕೆ ರು. 150 ನೀಡುತ್ತದೆ. ರಾಷ್ಟ್ರೀಯ ಉದ್ಯೋಗ ಖಾತ್ರಿ ಯೋಜನೆಯಡಿ ರು. 175 ನೀಡಲಾಗುತ್ತದೆ. ಆದರೆ, ಅದೇ ಕಾರ್ಮಿಕ, ಅದಕ್ಕಿಂತ ಕಡಿಮೆ ಸಮಯ ಕೆಲಸ ಮಾಡಿದರೂ ಇಂದು ನಗರ ಪ್ರದೇಶದಲ್ಲಿ ಅತ್ಯಂತ ಕಡಿಮೆ ಎಂದರೂ ದಿನಕ್ಕೆ ರು. 350 ಸಿಗುತ್ತದೆ ಹಾಗಾಗಿ ಬಹುತೇಕ ಗ್ರಾಮೀಣ ಪ್ರದೇಶಗಳಲ್ಲಿರುವ ಬಡ ಜನತೆ ಕೆಲಸ ಅರಸಿ ಗುಳೆ ಹೋಗುತ್ತಾರೆ.
ಮೊದ ಮೊದಲು ಗಂಡು ಮಕ್ಕಳು (ತಂದೆ, ಮಗ) ಕೆಲಸ ಅರಸಿ ಹೋಗುತ್ತಾರೆ. ಅಲ್ಲಿ ಹೆಚ್ಚಿನ ಕೂಲಿ, ಕಡಿಮೆ ಶ್ರಮ (ಕೃಷಿ ಕಾರ್ಯಕ್ಕೆ ಹೋಲಿಸಿದಲ್ಲಿ) ಗಮನಿಸುತ್ತಿದ್ದಂತೆ ಮನೆ ಮಂದಿಯನ್ನೆಲ್ಲ ಗ್ರಾಮಗಳಿಂದ ತಾವು ಕೆಲಸ ಮಾಡುವಲ್ಲಿಗೆ ಕರೆದುಕೊಂಡು ಹೋಗುತ್ತಾರೆ. ಇದು ವಾಸ್ತವ, ಇದನ್ನು ತಪ್ಪಿಸುವ ನಿಟ್ಟಿನಲ್ಲಿ ಸರ್ಕಾರ ಯಾವುದೇ ಕ್ರಮಗಳನ್ನು ತೆಗೆದುಕೊಂಡಿಲ್ಲ. ಈಗಾಗಲೇ ರಾಜ್ಯದ 64 ತಾಲೂಕುಗಳನ್ನು ಬರಪೀಡಿತ ಎಂದು ಸರ್ಕಾರ ಘೋಷಣೆ ಮಾಡಿದೆ. ಆಯಾ ತಾಲೂಕು ಆಡಳಿತಕ್ಕೆ ಜನತೆ ಗುಳೆ ಹೋಗುವುದನ್ನು ತಪ್ಪಿಸುವ ನಿಟ್ಟಿನಲ್ಲಿ ಅಗತ್ಯ ಕ್ರಮಕ್ಕೆ ಸೂಚಿಸಿ ಕೈ ತೊಳೆದುಕೊಂಡಿದೆ.
ಇನ್ನು ಉತ್ತರ ಕರ್ನಾಟಕ ಭಾಗದಲ್ಲಿ ಹೆಚ್ಚಾಗಿ ವಾಸವಾಗಿರುವ ಲಂಬಾಣಿ ಸಮುದಾಯದ ಬಹುತೇಕ ಕುಟುಂಬಗಳು ಶಿಕ್ಷಣದಿಂದ ದೂರ ಉಳಿದಿವೆ. ರಾಜ್ಯದಲ್ಲಿ ಗುಳೆ ಹೋಗುವವರಲ್ಲಿ ಇನ್ನುಳಿದ ಹಿಂದುಳಿದ ಸಮುದಾಯಕ್ಕೆ ಸೇರಿದವರು ಹೆಚ್ಚಾಗಿದ್ದಾರೆ ಎನ್ನುವುದು ಸರ್ಕಾರೇತರ ಸಂಸ್ಥೆಯೊಂದು ನಡೆಸಿದ ಸಮೀಕ್ಷೆಯಲ್ಲಿ ಬಹಿರಂಗಗೊಂಡಿದೆ. ಇವರೆಲ್ಲ ಹೀಗೆ ಗುಳೆ ಹೋಗುವುದನ್ನು ತಪ್ಪಿಸಬೇಕಾದಲ್ಲಿ ಅವರಿಗೆ ಅವರ ಗ್ರಾಮಗಳಲ್ಲಿಯೇ ಸೂಕ್ತ ಉದ್ಯೋಗ ವ್ಯವಸ್ಥೆ (ರಾಷ್ಟ್ರೀಯ ಉದ್ಯೋಗ ಖಾತ್ರಿ ಯೋಜನೆಗಿಂತ ಹೆಚ್ಚಿನ ಕೂಲಿ) ಸಿಗುವಂತಾಗಬೇಕು. ಮಹಿಳೆಯರಲ್ಲಿ ಹಲವಾರು ಕೌಶಲ್ಯಾಧಾರಿತ ಕಲೆಗಳಿದ್ದು, ಅವುಗಳನ್ನು ಉತ್ತೇಜನಕ್ಕೆ ತರಬೇತಿ ನೀಡಬೇಕಿದೆ. ಅತ್ಯಂತ ಕಡಿಮೆ ಬಡ್ಡಿ ದರದಲ್ಲಿ ಅವರಿಗೆ ಸಾಲ ಸೌಲಭ್ಯ ನೀಡಿ, ಸ್ವಯಂ ಉದ್ಯೋಗದತ್ತ ಅವರ ದೃಷ್ಟಿಯನ್ನು ಕೇಂದ್ರೀಕರಿಸಬೇಕಿದೆ. ಆ ಮೂಲಕ ಅವರ ಜೀವನಮಟ್ಟ ಎತ್ತರಿಸಬೇಕಿದೆ. ಈಗಾಗಲೇ ರಾಜ್ಯ ಸರ್ಕಾರ ರಾಜೀವ ಗಾಂಧಿ ಚೈತನ್ಯ ಯೋಜನೆಯಡಿ ಪ್ರತಿ ಗ್ರಾಮದ 50 ಜನ ಯುವಕರಿಗೆ ರು. 2 ಲಕ್ಷದವರೆಗೂ ಸಾಲ ನೀಡಿ ಅವರನ್ನು ಸ್ವಯಂ ಉದ್ಯೋಗದತ್ತ ತೊಡಗಿಸಿ ರಾಜ್ಯದಲ್ಲಿ 5 ಲಕ್ಷಕ್ಕೂ ಉದ್ಯೋಗ ಸೃಷ್ಟಿಗೆ ಕ್ರಮ ತೆಗೆದುಕೊಳ್ಳಲಾಗಿದೆ ಎಂದು ಘೋಷಣೆ ಮಾಡಿದ್ದಾರೆ. ಇದೊಂದು ಉತ್ತಮ ಬೆಳವಣಿಗೆ. ಆದರೆ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಆಳುವ ಪಕ್ಷದ ಪಾತ್ರ ಪ್ರಮುಖವಾಗಿರುತ್ತದೆ. ಈ ಯೋಜನೆಯಲ್ಲಿ ಅರ್ಹರಿಗೆ ಆದ್ಯತೆ ನೀಡಬೇಕೇ ಹೊರತು ತಮ್ಮ ತಮ್ಮ ಪಕ್ಷದ ಕಾರ್ಯಕರ್ತರಿಗಲ್ಲ.
ಈ ವ್ಯವಸ್ಥೆಯಲ್ಲಿ ಬೇರು ಮಟ್ಟದಿಂದ ಕಿತ್ತು ಹಾಕಿ, ಗುಳೆ ತಡೆಗಟ್ಟುವ ನಿಟ್ಟಿನಲ್ಲಿ ಗ್ರಾಮೀಣಾಭಿವೃದ್ಧಿ ಇಲಾಖೆ ವಿಶೇಷ ಗಮನ ನೀಡಿ, ಖಾಸಗಿ ಸಂಸ್ಥೆಗಳ (ಎನ್ಜಿಓ) ಸಹಯೋಗದಲ್ಲಿ ಒಂದು ಸಮಗ್ರ ಮತ್ತು ಪರಿಪೂರ್ಣವಾದ ಅಧ್ಯಯನ ನಡೆಸಬೇಕಿದೆ. ಗುಳೆ ಹೋಗಿರುವವರನ್ನು, ಹೋಗುವವರನ್ನು ಖುದ್ದಾಗಿ ಭೇಟಿ ಮಾಡಿ, ಅವರು ಎದುರಿಸುತ್ತಿರುವ ಸಮಸ್ಯೆಗಳು, ಯಾವ ಕಾರಣಕ್ಕಾಗಿ ಹುಟ್ಟಿ ಬೆಳೆದ ಊರನ್ನು ಅವರು ತ್ಯಜಿಸಿ ಹೋಗುತ್ತಾರೆ ಎನ್ನುವ ಬಗ್ಗೆ ಮಾಹಿತಿ ಸಂಗ್ರಹಿಸಬೇಕಿದೆ.
- ಶಿವಕುಮಾರ ಕುಷ್ಟಗಿ
ಕನ್ನಡಪ್ರಭ