ವಿದೇಶಾಂಗ ನೀತಿಗೆ ಹೊಸ ಹಾದಿ ತೋರಿಸಿದ ಗುಜ್ರಾಲ್
ಐ.ಕೆ. ಗುಜ್ರಾಲ್ ಎಂದಾಕ್ಷಣ ನಮಗೆ ನೆನಪಾಗುವುದು "ಗುಜ್ರಾಲ್ ಸಿದ್ಧಾಂತ". ಅವರು ತಮ್ಮ ಬಹುತೇಕ ರಾಜಕೀಯ ಜೀವನವನ್ನು ಮೇಲ್ಮನೆ ಸದಸ್ಯರಾಗಿ ಕಳೆದರಾದರೂ, ವಿದೇಶಾಂಗ ಸಚಿವರಾಗಿ ಮತ್ತು ಪ್ರಧಾನಿಯಾಗಿ ತಮಗೆ ದೊರೆತ ಅಲ್ಪಾವಧಿಯಲ್ಲೇ ಭಾರತದ ವಿದೇಶಾಂಗ ನೀತಿಗಳಿಗೆ ಹೊಸ ಹಾದಿಯನ್ನು ತೋರಿಸಿದರು. ರಾಜಕೀಯ ರಂಗದಲ್ಲಿ ವಿಶಿಷ್ಟ ವರ್ಚಸ್ಸಿನೊಂದಿಗೆ ಮಿನುಗಿದ ಇಂದರ್ ಕುಮಾರ್ ಗುಜ್ರಾಲ್ ಅವರ ರಾಜಕೀಯ ಜೀವನದ ಮೇಲೆ ಬೆಳಕು ಹಾಯಿಸುವ ಲೇಖನ 'ದಿ ಗಾಡಿರ್ಯನ್' ಪತ್ರಿಕೆಯಲ್ಲಿ ಪ್ರಕಟವಾಗಿತ್ತು. ಅವರು ನಮ್ಮನ್ನಗಲಿ ನವೆಂಬರ್ 30ಕ್ಕೆ ಒಂದು ವರ್ಷವಾಯಿತು. ತನ್ನಮಿತ್ತ ಈ ಲೇಖನ...
ಗುಜ್ರಾಲ್ ಅವರು ಅತ್ಯುತ್ತಮ ಸಂಸತ್ ಪಟುವಾಗಿದ್ದರು. ಅನ್ಯ ಪಕ್ಷಗಳ ಕಾರ್ಯತಂತ್ರಗಳ ಮೇಲೆ ಅವರು ವಿಶಿಷ್ಟ ರೀತಿಯಲ್ಲಿ ಹಿಡಿತ ಸಾಧಿಸಿದ್ದರು. ಇದರೊಟ್ಟಿಗೆ ಅವರಿಗಿದ್ದ ವರ್ಚಸ್ಸು, ಬೇರೇ ಪಕ್ಷದ ನಾಯಕರೊಂದಿಗೆ ಹೊಂದಿಕೊಳ್ಳುವ ಸ್ವಭಾವ, ತಮ್ಮ ವಾದದಿಂದ ಎದುರಿನವನನ್ನು ಒಪ್ಪಿಸುವಂಥ ಗುಣ ಅವರನ್ನು ಅಸಾಧಾರಣ ನಾಯಕನನ್ನಾಗಿಸಿತ್ತು.
ಗುಜ್ರಾಲ್ ತಮ್ಮ ರಾಜಕೀಯ ಜೀವನವನ್ನು ಆರಂಭಿಸಿದ್ದು ಅವರ ಹುಟ್ಟೂರಾದ ಝೇಲಂನಲ್ಲಿ(ಈಗಿನ ಪಾಕಿಸ್ತಾನದ ಪಂಜಾಬ್ ಪ್ರಾಂತದಲ್ಲಿ). 1930-31ರಲ್ಲಿ ಅವರು ಬ್ರಿಟಿಷರ ವಿರುದ್ಧದ ಸ್ವಾತಂತ್ರ್ಯ ಹೋರಾಟದಲ್ಲಿ ಜೈಲುಸೇರಿದರು. ವಿದ್ಯಾರ್ಥಿಯಾಗಿದ್ದಾಗ ಅವರು ಕಮ್ಯುನಿಸ್ಟ್ ಪಕ್ಷದ ಭಾಗವಾದರು. ಗುಜ್ರಾಲ್ರ ತಂದೆ ಕೂಡ ಸ್ವಾತಂತ್ರ್ಯ ಹೋರಾಟದಲ್ಲಿ ಪ್ರಮುಖ ಪಾತ್ರ ವಹಿಸಿದ್ದವರು. ಹಾಗಾಗಿ ಅವರ ಮನೆಗೆ ದಿನವೂ ಅನೇಕ ಹಿರಿಯ ನಾಯಕರು ಬಂದು ಹೋಗುತ್ತಿದ್ದರು. ಆಗಾಗ ಪಂಡಿತ್ ಜವಾಹರ್ ಲಾಲ್ ನೆಹರೂ ಕೂಡ ಗುಜ್ರಾಲ್ರ ತಂದೆಯನ್ನು ಭೇಟಿಯಾಗುತ್ತಿದ್ದುದುಂಟು. ಎರಡನೆಯ ವಿಶ್ವಯುದ್ಧದ ಸಮಯದಲ್ಲಿ ಮತ್ತೆ ಗುಜ್ರಾಲ್ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಪಾಲ್ಗೊಂಡು ಸೆರೆಮನೆವಾಸ ಅನುಭವಿಸಿದರು.
ವಿಭಜನೆಯ ನಂತರ ಅವರು ದೆಹಲಿಗೆ ಬಂದು ನೆಲೆಸಿದರು. ಅಲ್ಲಿ ಇಂದಿರಾ ಗಾಂಧಿಯವರೊಂದಿಗೆ ನಿಕಟ ಸಂಪರ್ಕ ಬೆಳೆದಿದ್ದರಿಂದ, ಅವರಿಗೆ ಸಂಸತ್ತಿನ ಮೇಲ್ಮನೆಗೆ ಪ್ರವೇಶ ದೊರಕಿತು. 1965ರಲ್ಲಿ ಪ್ರಧಾನಿ ಲಾಲ್ ಬಹಾದ್ದೂರ್ ಶಾಸ್ತ್ರಿಯವರ ಅಕಾಲಿಕ ಮರಣದ ನಂತರ ಕಾಂಗ್ರೆಸ್ ಪಕ್ಷವನ್ನು ಮುನ್ನಡೆಸಲು ಇಂದಿರಾಗಾಂಧಿಯವರಿಗೆ ಬೆಂಬಲ ನೀಡಿ, ಆಕೆಯ ಯಶಸ್ಸಿಗೆ ಕಾರಣರಾದ ಪ್ರಮುಖರಲ್ಲಿ ಗುಜ್ರಾಲ್ ಕೂಡ ಒಬ್ಬರು.
1969ರಲ್ಲಿ ಯಾವಾಗ ಇಂದಿರಾ ಮತ್ತು ಕಾಂಗ್ರೆಸ್ನ ಹಳೆಯ ನಾಯಕರ ಮಧ್ಯ ಜಗಳ ಶುರುವಾಗಿಕಾಂಗ್ರೆಸ್ ಎರಡು ಹೋಳಾಯಿತೋ, ಆಗ ಇಂದಿರಾರ ಕಾಂಗ್ರೆಸ್ಗೆ ಹೆಚ್ಚಿನ ಬೆಂಬಲ ಸಿಗುವಂತೆಮಾಡಿದ್ದು ಗುಜ್ರಾಲ್ ಅವರೇ. ಶಾಸಕರು ಮನಸ್ಥಿತಿ ಹೇಗಿದೆ, ಅವರನ್ನು ಹೇಗೆ ಒಲಿಸಿಕೊಳ್ಳಬೇಕು ಎನ್ನುವುದು ಗುಜ್ರಾಲ್ ಅವರಿಗೆ ಬಹಳ ಚೆನ್ನಾಗಿ ತಿಳಿದಿತ್ತು.
1975ರಲ್ಲಿ ಇಂದಿರಾಗಾಂಧಿಯವರು ತುರ್ತು ಪರಿಸ್ಥಿತಿ ಹೇರಿದಾಗ ಗುಜ್ರಾಲ್ 'ವಾರ್ತಾ ಮತ್ತು ಪ್ರಸಾರ ಇಲಾಖೆಯ' ಸಚಿವರಾಗಿದ್ದರು. ಆ ಸಮಯದಲ್ಲಿ ಇಂದಿರಾ ಅನೇಕ ನಾಗರಿಕ ಹಕ್ಕುಗಳನ್ನು ತಡೆಹಿಡಿದುಬಿಟ್ಟರು. ಇನ್ನೊಂದೆಡೆ ಯಾವುದೇ ಅಧಿಕಾರದಲ್ಲಿಲ್ಲದ, ಆದರೆ ಎಲ್ಲಾ ಅಧಿಕಾರವನ್ನೂ ಅನುಭವಿಸುತ್ತಿದ್ದ ಇಂದಿರಾರ ಒರಟು ಸ್ವಭಾವದ ಮಗ ಸಂಜಯ್ ಗಾಂಧಿ 'ಮಾಧ್ಯಮಗಳ ಮೇಲೆ ನಿರ್ಬಂಧ ಹೇರಿ' ಎಂದು ಗುಜ್ರಾಲ್ಗೆ ಆಜ್ಞೆ ಮಾಡಿದರು. ಗುಜ್ರಾಲ್ ತಮ್ಮ ಸೌಮ್ಯ ಸ್ವಭಾವಕ್ಕೆ ಹೆಸರಾಗಿದ್ದರಾದರೂ, ಆ ಸಮಯದಲ್ಲಿ ಸಂಜಯ್ರನ್ನು ಗದರಿಸಿದ ಅವರು, "ಈ ಆಜ್ಞೆ ನೀಡಲು ನಿಮಗೆ ಅಧಿಕಾರವಿಲ್ಲ. ನಾನು ಪ್ರಧಾನಿಯೊಂದಿಗಷ್ಟೇ(ಇಂದಿರಾ) ಮಾತನಾಡುತ್ತೇನೆ"ಎಂದು ಕಣ್ಣು ಕೆಂಪು ಮಾಡಿದ್ದರು. ಆ ಘಟನೆಯ ನಂತರ ಕೂಡಲೇ ಗುಜ್ರಾಲ್ ಅವರನ್ನು ಆ ಸಚಿವಾಲಯದಿಂದ ಹೊರಗೆ ಕಳುಹಿಸಲಾಯಿತು!
1980ರ ಸಮಯದಲ್ಲಿ ಇಂದಿರಾರ ಹಿರಿಯ ಮಗದ ಪ್ರಧಾನಿ ರಾಜೀವ್ ಗಾಂಧಿಯವರ ವರ್ತನೆಯಿಂದ ಮುನಿಸಿಕೊಂಡ ಗುಜ್ರಾಲ್, ಕಾಂಗ್ರೆಸ್ನಿಂದ ಹೊರ ನಡೆದು ಜನತಾದಳವನ್ನು ಸೇರಿದರು. 1989ರ ಸಾರ್ವತ್ರಿಕ ಚುನಾವಣೆಗಳಲ್ಲಿ ಆ ಪಕ್ಷ ಅತಂತ್ರ ಸರ್ಕಾರ ರಚಿಸಿದಾಗ, ಗುಜ್ರಾಲ್ ವಿದೇಶಾಂಗ ಸಚಿವರಾಗಿ ನೇಮಕವಾದರು. ಆ ಅಲ್ಪಾವಧಿಯಲ್ಲಿಯೇ ಅವರು ರಚಿಸಿದ ನೀತಿಗಳನ್ನು ಮುಂದೆ ಗುಜ್ರಾಲ್ ಸಿದ್ಧಾಂತ (ಗುಜ್ರಾಲ್ ಡಾಕ್ಟ್ರೀನ್ ಎನ್ನುವ 5 ಅಂಶಗಳ ಮಾರ್ಗದರ್ಶಕ ನೀತಿ) ಎಂದೇ ಕರೆಯಲಾಯಿತು. ಭಾರತ ತನ್ನ ನೆರೆಹೊರೆಯ ರಾಷ್ಟ್ರಗಳೊಂದಿಗೆ ಉದಾತ್ತ ಸ್ವಭಾವದಿಂದ ವರ್ತಿಸಬೇಕು ಎನ್ನುತ್ತಿದ್ದರು ಗುಜ್ರಾಲ್. 1996ರಲ್ಲಿ ಅತ್ಯಂತ ಅತಂತ್ರ ಸರ್ಕಾರ ರಚನೆಯಾದಾಗ ಅವರು ಮೊದಲು ವಿದೇಶಾಂಗ ಸಚಿವರಾಗಿ, ನಂತರ ಪ್ರಧಾನಿಯಾದರು. ಅಧಿಕಾರ ವಹಿಸಿಕೊಂಡ ಕೂಡಲೇ ಅವರು ಗಂಗಾ ನದಿಯ ವಿಚಾರವಾಗಿ ಬಾಂಗ್ಲಾದೇಶದೊಂದಿಗಿನ ಸಮಸ್ಯೆಯನ್ನು ಬಗೆಹರಿಸಲು ಮುಂದಾದರು. ಗುಜರಾಲ್ ಅವರ ರಾಜಕೀಯ ಪ್ರತಿಭೆ ಮಿಂಚಿದ್ದು, ಅವರು ಪಶ್ಚಿಮ ಬಂಗಾಳದ ಕಮ್ಯುನಿಸ್ಟ್ ಮುಖ್ಯಮಂತ್ರಿಗಳಿಂದ 'ನದಿಯ ಒಪ್ಪಂದಕ್ಕೆ' ಬೆಂಬಲ ಪಡೆದಾಗ.
ಪ್ರಧಾನ ಮಂತ್ರಿಯಾಗಿ ಅವರು ಪಾಕಿಸ್ತಾನದತ್ತಲೂ ಸ್ನೇಹ ಹಸ್ತ ಚಾಚಿದರು. ಪಾಕಿಸ್ತಾನ ಪ್ರಧಾನಿ ನವಾಜ್ ಷರೀಫ್ ಅವರೊಂದಿಗೆ ಐತಿಹಾಸಿಕ ಶಾಂತಿ ಮಾತುಕತೆಯನ್ನು ನಡೆಸಿದ ಅವರು, ಎರಡೂ ರಾಷ್ಟ್ರಗಳು ಯಾವುದೇ ಕಾರಣಕ್ಕೂ ಮಾತುಕತೆಯನ್ನು ನಿಲ್ಲಿಸಬಾರದು ಎಂದು ಹೇಳಿದ್ದರು. ಎಷ್ಟೆಲ್ಲ ಅಡ್ಡಿಗಳು ಎದುರಾದರೂ ಪಾಕಿಸ್ತಾನ ಮತ್ತು ಭಾರತದ ನಡುವಿನ ಮಾತುಕತೆಗಳು ನಿರಂತರವಾಗಿ ಮುಂದುವರಿದಿರುವುದು ಇದೇ ಕಾರಣಕ್ಕಾಗಿಯೇ.
ಅನುದ್ವಿಗ್ನ ಸ್ವಭಾವದ ಗುಜ್ರಾಲ್ ಕೆಲವು ಬಾರಿಯಷ್ಟೇ ಸಂಯಮ ಕಳೆದುಕೊಂಡ ಉದಾಹರಣೆಗಳಿವೆ. ಅವರು ಪ್ರಧಾನಿಯಾಗಿದ್ದ ಸಂದರ್ಭ. ಪಾಕಿಸ್ತಾನ ಮತ್ತು ಭಾರತಕ್ಕೆ ಭೇಟಿ ನೀಡಲಿದ್ದ ಬ್ರಿಟನ್ನ ವಿದೇಶಾಂಗ ಸಚಿವ ರಾಬಿನ್ ಕುಕ್ "ಕಾಶ್ಮೀರದ ವಿಷಯವಾಗಿ ಪಾಕಿಸ್ತಾನ ಮತ್ತು ಭಾರತದ ನಡುವೆ ಬ್ರಿಟನ್ ಮಧ್ಯವರ್ತಿಯಾಗಿ ಕೆಲಸ ಮಾಡಲು ಸಿದ್ಧವಿದೆ" ಎಂದು ಹೇಳಿದ್ದರು. ಈ ಕುರಿತು ಪ್ರಶ್ನಿಸಿದಾಗ ಗುಜ್ರಾಲ್, "ಅಧಿಕಾರದಾಸೆಯ ಬ್ರಿಟನ್, ಇನ್ನೂ ತನ್ನ ಕೀಳು ಮಟ್ಟದ ಗತ ವೈಭವದ ಗುಂಗಿನಲ್ಲಿಯೇ ಇದೆ" ಎಂದು ಜಾಡಿಸಿದ್ದರು.
ದುರದೃಷ್ಟವಶಾತ್ ಕಾಂಗ್ರೆಸ್ನಿಂದ ಹೆಚ್ಚು ಬೆಂಬಲ ದೊರೆಯಲಿಲ್ಲವಾದ್ದರಿಂದ ಅವರ ಸರ್ಕಾರ ಉರುಳಿಹೋಯಿತು. ಅವರು ಕೇವಲ 7 ತಿಂಗಳುಗಳು ಮಾತ್ರ ಪ್ರಧಾನಿ ಹುದ್ದೆಯಲ್ಲಿದ್ದರು. ನಂತರದ ವರ್ಷಗಳಲ್ಲಿ ಐ.ಕೆ.ಗುಜ್ರಾಲ್ ರಾಜಕಾರಣದಿಂದ ತುಸು ದೂರವೇ ಉಳಿದರಾದರೂ, ಅವರ ಹೆಸರು ಮಾತ್ರ ವಿದೇಶಾಂಗ ನೀತಿಗಳಲ್ಲಿ, ಭಾರತೀಯ ರಾಜಕಾರಣದಲ್ಲಿ ಚಿರಸ್ಥಾಯಿಯಾಗಿ ಉಳಿದಿದೆ.
- ಮಾರ್ಕ್ ಟುಲಿ
ಖ್ಯಾತ ಪತ್ರಕರ್ತ