ಅಂಕಣಗಳು

ಮಂಡ್ಯದಲ್ಲಿ ಸೋನಿಯಾ ಗಾಂಧಿ ಆವುಟ

ಕಳೆದ ನಾಲ್ಕು ವರ್ಷಗಳಲ್ಲಿ, ದೇಶದಲ್ಲಿ ನಡೆದ ಅನೇಕ ಲೋಕಸಭೆ ಕ್ಷೇತ್ರಗಳ ಉಪ ಚುನಾವಣೆಗಳಲ್ಲಿ ಕಾಂಗ್ರೆಸ್ ಗೆದ್ದಿದೆ. ಆ ಕಾಲದಲ್ಲಿ ಆ ಕ್ಷೇತ್ರಗಳ ಮತದಾರರಿಗೆ ಕೃತಜ್ಞತೆಯನ್ನು ಅರ್ಪಿಸಲು ಸೋನಿಯಾ ಗಾಂಧಿ ಹೋಗಲಿಲ್ಲ. ಆದರೆ ಬೆಂಗಳೂರು ಗ್ರಾಮೀಣ ಹಾಗೂ ಮಂಡ್ಯದಲ್ಲಿ ಕಾಂಗ್ರೆಸ್ ಅಭ್ಯರ್ಥಿಯನ್ನು ಗೆಲ್ಲಿಸಿದ ಮತದಾರರಿಗೆ ವಂದನೆಯನ್ನರ್ಪಿಸಲು ವಿಶೇಷವಾದ ಕಾರ್ಯಕ್ರಮವನ್ನೇ ಮಂಡ್ಯದಲ್ಲಿ ಹಮ್ಮಿಕೊಂಡಿದ್ದರು.
ಈಗ ರಾಜ್ಯ ಸರ್ಕಾರವೂ ಕಾಂಗ್ರೆಸ್ಸಿನ ಕೈಲೇ ಇರುವುದರಿಂದ, ಆ ಸಭೆಗೆ ಜನರನ್ನು ಜಮಾಯಿಸುವುದಕ್ಕಾಗಲಿ, ಎಲ್ಲ ಬಗೆಯ ವಿಶೇಷ ವ್ಯವಸ್ಥೆಯನ್ನು ಮಾಡುವುದಕ್ಕಾಗಲಿ ಕಾಂಗ್ರೆಸ್ಸಿಗೆ ಕಷ್ಟವಾಗಲಿಲ್ಲ. ಇದರ ಜತೆಯಲ್ಲೇ ಪ್ರದೇಶ ಕಾಂಗ್ರೆಸ್ ಅಧ್ಯಕ್ಷ ಡಾ॥ ಪರಮೇಶ್ವರ ಅವರು ಅದೆಷ್ಟೋ ಲಕ್ಷ ಲಾಡುಗಳನ್ನು ಹಂಚುವ ಕಾರ್ಯಕ್ರಮವನ್ನು ಪ್ರಕಟಿಸಿ, ಜನರಲ್ಲಿ ಇನ್ನಷ್ಟು ಆಸಕ್ತಿಯನ್ನು ಮೂಡಿಸಿದ್ದರು. ಈಗೇನೂ ಯಾವ ಚುನಾವಣೆಗೂ ಸಂಬಂಧಿಸಿದಂತೆ ರಾಜಕೀಯ ಪಕ್ಷಗಳಿಗೆ ಯಾವುದೇ ಆಚಾರ ಸಂಹಿತೆಯ ಇತಿ-ಮಿತಿ ಇರಲಿಲ್ಲ. ಸೋನಿಯಾ ಗಾಂಧಿ ಅವರಿಗೆ ಪ್ರದೇಶ ಕಾಂಗ್ರೆಸ್ ಪರವಾಗಿ "ಭಾರವಾದ" ಪಾರಿತೋಷಕವನ್ನೇ ಸಮರ್ಪಿಸಲಾಯಿತು. ವಿಧಾನಸಭೆ ಚುನಾವಣೆಯಲ್ಲಿ ಸೋತ ಜೆಡಿಎಸ್‌ನ ಬೇರೆ ಅಭ್ಯರ್ಥಿಗಳೇ ಇಲ್ಲಿ ಈಗ ಕಾಂಗ್ರೆಸ್ಸಿಗೆ ಸವಾಲನ್ನು ಎಸೆದಿದ್ದು. ಈ ವಿಜಯಕ್ಕೆ ಇಷ್ಟೊಂದು ಉತ್ಸಾಹವೇಕೆ? ಸೋನಿಯಾ ಗಾಂಧಿ ಅವರು ಮಂಡ್ಯದ ಬೃಹತ್ ಸಮಾವೇಶವನ್ನೇ ಲೋಕಸಭೆ ಚುನಾವಣೆಯ ಪ್ರಚಾರ ಸಮರದ ರಣಭೇರಿಯನ್ನು ಬಾರಿಸಲು ಆರಿಸಿಕೊಂಡಿದ್ದರ ಹಿನ್ನೆಲೆ ಏನು?
ವಿಧಾನಸಭೆ ಚುನಾವಣೆಗೆ ಮುನ್ನ ಸೋನಿಯಾ ಗಾಂಧಿ ಸಿದ್ಧಗಂಗಾ ಮಠದಲ್ಲಿನ ಒಂದು ಸಮಾರಂಭಕ್ಕೆ ಆಗಮಿಸಿ ದೊಡ್ಡ ಪ್ರಚಾರದ ಅಲೆಯನ್ನೇ ಸೃಷ್ಟಿಸಿದ್ದರು. ಕಾಂಗ್ರೆಸ್ಸಿನ ಅನೇಕ ಚಾಣಾಕ್ಷ ಮಾತುಗಾರರ ಪ್ರಕಾರ, ಸೋನಿಯಾ ಗಾಂಧಿ ಅವರ ಸಿದ್ಧಗಂಗಾ ಮಠದ ಭೇಟಿಯೇ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ಸಿಗೆ ವಿಜಯವನ್ನು ಗಳಿಸಿಕೊಟ್ಟ ವೀರಶೈವ ಮತಗಳ ಆಕರ್ಷಣೆಗೆ ಮೂಲಕಾರಣ.
ಅವರದ್ದು ಈಗಲೂ ಅದೇ ಚರಿತ್ರೆಯ ಪುಟ, ಮಂಡ್ಯದ ಸಭೆಯಿಂದಾಗಿ, ಪುನರಾವರ್ತನೆಯಾಗಿ, ಒಕ್ಕಲಿಗ ಸಮುದಾಯದ ಮತಗಳನ್ನು ಆಕರ್ಷಿಸಲಿದೆ ಎನ್ನುವ ವಾದ, ಅದನ್ನು ಬೇರೆ ಬೇರೆ ರೀತಿಯಲ್ಲಿ ಪ್ರಕಟಿಸಿದ್ದೂ ಆಗಿದೆ.ಆ ವಾದಕ್ಕೆ ಪ್ರತಿಯಾಗಿ ಮಾಜಿ ಪ್ರಧಾನಿ ದೇವೇಗೌಡರು ಪ್ರತಿವಾದವನ್ನು ಮಂಡಿಸಲು ತಯಾರಾಗಿದ್ದಾರೆ. ಸದ್ಯದಲ್ಲೇ ಅವರ ಪ್ರವಾಸ ಕಾಲದಲ್ಲಿ ಅದು ಪ್ರಕಟವಾಗಬಹುದು. ಅನೇಕ ಕಾಂಗ್ರೆಸ್ಸಿಗರಲ್ಲಿ ಒಂದು ನಂಬಿಕೆ ಇತ್ತು. ಮಂಡ್ಯದ ಸಭೆಯ ಅನಂತರ ಸೋನಿಯಾ ಗಾಂಧಿ ಸ್ವಲ್ಪ ಸಮಯ ತಮ್ಮ ಜತೆಯಲ್ಲಿ ಕಳೆಯಬಹುದು, ತಮಗೂ ತಮ್ಮ ಅನಿಸಿಕೆಗಳನ್ನು ತಿಳಿಸುವ ಅವಕಾಶ ಸಿಗಬಹುದು ಎನ್ನುವ ಆಸೆ ಅದು. ಆದರೆ ಹಾಗೇನೂ ಆಗಲಿಲ್ಲ.
ಸೋನಿಯಾ ಗಾಂಧಿ, ಸಾಮಾನ್ಯವಾಗಿ ಇಂತಹ ಸಂದರ್ಭಗಳಲ್ಲಿ ವರ್ತಿಸುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಸರ್ಕಾರದ ಕಾರ್ಯಶೈಲಿಯನ್ನು ಹೊಗಳಿದರು. ಈಗಾಗಲೇ ಚುನಾವಣೆ ಪ್ರಣಾಳಿಕೆಯಲ್ಲಿ ಅಡಕವಾಗಿದ್ದ ಅನೇಕ ಕಾರ್ಯಕ್ರಮಗಳನ್ನು ಜಾರಿಗೆ ತಂದಿರುವುದನ್ನು ಮೆಚ್ಚಿದರು. ಇನ್ನು ಮುಂದೆಯೂ ಒಟ್ಟಾಗಿ ಕೆಲಸ ಮಾಡಿ ಲೋಕಸಭೆ ಚುನಾವಣೆಯಲ್ಲಿ ಭರ್ಜರಿ ಗೆಲವಿನ ಉಡುಗೊರೆ ಕೊಡಿ ಎಂದು ಹೇಳಿ, ಮಂಡ್ಯದ ಭೇಟಿಯನ್ನು ಮುಗಿಸಿದರು.
ಮಂಡ್ಯಕ್ಕೆ ಸೋನಿಯಾ ಗಾಂಧಿ ಬಂದಿದ್ದರಿಂದಲೇ ಕಾಂಗ್ರೆಸ್ಸಿಗೆ ವಕ್ಕಲಿಗರ ಸಮುದಾಯಗಳ ಬೆಂಬಲ ಸಿಗತ್ತೋ - ಬಿಡತ್ತೋ ಅದು ಬೇರೆ ಮಾತು. ಆದರೆ ಆ ಆಸೆಯಂತೂ ಈಗ ಚಿಗುರಿದೆ. ಇದುವರೆಗೆ ಯಾವ ಜೆ.ಡಿ.ಎಸ್. ಒಕ್ಕಲಿಗ ಮುಖಂಡರೂ ಕಾಂಗ್ರೆಸ್ ಬಾಗಿಲನ್ನು ತಟ್ಟಿಲ್ಲ.
ದೇವೇಗೌಡರ ಮಹಾ ಪ್ರಯತ್ನ: ಒಂದು ಅಂದಾಜಿನಂತೆ, ಲೋಕಸಭೆ ಕ್ಷೇತ್ರಗಳ ಉಪಚುನಾವಣೆಗಳಲ್ಲಿ ಜಾತ್ಯತೀತ ಜನತಾದಳದ ಸುಮಾರು 20,000ಕ್ಕೂ ಹೆಚ್ಚಿನ ಒಕ್ಕಲಿಗ ಮತಗಳು ಕಾಂಗ್ರೆಸ್ಸಿಗೆ ಬಿದ್ದಿವೆ. ಭವಿಷ್ಯದಲ್ಲಿ ಈ ಸೀಮೆಯ ರಾಜಕೀಯದ ಭವಿಷ್ಯವೇ ಬದಲಾಗಬಹುದು ಎನ್ನುವ ನಿರೀಕ್ಷೆ ಅನೇಕರದ್ದು. ಅದನ್ನೇ ಜನರ ಆಡುಮಾತಿನಲ್ಲಿ ಹೇಳುವುದಾದರೆ, ಮಂಡ್ಯದ ಗೌಡರ ಮೇಲೆ ಹಾಸನದ ಗೌಡರ ಸವಾರಿ ಬಹುಕಾಲ ನಡೆಯಲಿಕ್ಕಿಲ್ಲ ಎನ್ನುವ ಮಾತೂ ಕೇಳಿ ಬರುತ್ತಿದೆ. ಇದನ್ನೆಲ್ಲಾ ಗಮನದಲ್ಲಿಟ್ಟುಕೊಂಡೇ ದೇವೇಗೌಡರು ಪಕ್ಷದ ಎಲ್ಲ ನಿಯಂತ್ರಣ ಸೂತ್ರಗಳನ್ನು ತಮ್ಮ ಕೈಯಲ್ಲೇ ಭದ್ರವಾಗಿಟ್ಟುಕೊಂಡಿದ್ದಾರೆ. ಅದು ಎಷ್ಟರ ಮಟ್ಟಿಗೆ ಬಿಗಿಯಾಗಿದೆ ಎಂದರೆ, ಒಂದು ಕಡೆ ಪಕ್ಷಕ್ಕೆ ಸಂಬಂಧಿಸಿದ ಒಂದು ವಿಚಾರವನ್ನು ಪ್ರಸ್ತಾಪಿಸಿದಾಗ ಮಾಜಿ ಮುಖ್ಯಮಂತ್ರಿ, ಈಗಿನ ವಿಧಾನಸಭೆಯಲ್ಲಿ ವಿರೋಧ ಪಕ್ಷದ ನಾಯಕ ಕುಮಾರಸ್ವಾಮಿ ಅವರು "ಆ ವಿಷಯವನ್ನು ಪಕ್ಷದ ರಾಷ್ಟ್ರೀಯ ಅಧ್ಯಕ್ಷ ದೇವೇಗೌಡರು, ರಾಜ್ಯ ಸಮಿತಿಯ ಅಧ್ಯಕ್ಷ ಎ. ಕೃಷ್ಣಪ್ಪ ಅವರು ನಿಭಾಯಿಸುತ್ತಾರೆ" ಎಂದು ಉತ್ತರ ಕೊಟ್ಟರು.
ದೇವೇಗೌಡರೇನೋ, ಪಕ್ಷದ ಸಂಘಟನೆಯಲ್ಲಿ ತಮ್ಮನ್ನು ತಾವೇ ತೊಡಗಿಸಿಕೊಂಡಿದ್ದಾರೆ. ಬೀದರ್ ಕಡೆಯಿಂದ ಯಾತ್ರೆಯನ್ನು ಆರಂಭಿಸಿದ್ದಾರೆ. ಅವರು ಬಹಿರಂಗವಾಗಿ ಪ್ರಕಟಿಸಿರುವ ಉದ್ದೇಶ ಎಂದರೆ, ಜಾತ್ಯತೀತ ಜನತಾದಳ ಒಂದು ಪ್ರದೇಶದ ಕೆಲವು ಜಿಲ್ಲೆಗಳಿಗೆ, ಒಂದು ಜಾತಿಗೆ, ಹಾಗೂ ಒಂದು ಕುಟುಂಬಕ್ಕೇ ಸೀಮಿತ ಎನ್ನುವ ಅಪಪ್ರಚಾರವನ್ನು ಅಡಗಿಸುವುದು.
ಅದು ಎಷ್ಟರ ಮಟ್ಟಿಗೆ ಸಾಧ್ಯವಾದೀತೋ ಗೊತ್ತಿಲ್ಲ. ಈಗಲೂ ಜಿಡಿಎಸ್‌ನ ನಿಲವು ಸ್ಫಟಿಕದಂತೆ ಸ್ಪಷ್ಟವಾಗಿಲ್ಲ. ಉದಾಹರಣೆಗೆ ಕೆಲವು ಕಡೆ ಸ್ಥಳೀಯ ಸಂಸ್ಥೆಗಳ ಪದಾಧಿಕಾರಿಗಳ ಚುನಾವಣೆಯಲ್ಲಿ ಬಿಜೆಪಿ ಜತೆ ಸೇರಿ ಕಾಂಗ್ರೆಸ್ಸನ್ನು ಸೋಲಿಸುವುದರಲ್ಲಿ ಪಕ್ಷ ಯಶಸ್ವಿಯಾಗಿದೆ. ಜೆಡಿಎಸ್‌ನ ಶಾಸಕಾಂಗ ವಿಭಾಗಕ್ಕೆ ಒಬ್ಬ ಸಚೇತಕ, ಒಬ್ಬ ಉಪನಾಯಕರ "ಆಯ್ಕೆ" ಆಗಬೇಕಾಗಿದೆ. ನಿಜವಾಗಿಯೂ ಇದೇನೂ ಮಹತ್ವದ ವಿಚಾರವಲ್ಲ. ಆದರೆ ಪಕ್ಷದ ಇಂದಿನ ಆಂತರಿಕ ಪರಿಸ್ಥಿತಿಯಲ್ಲಿ ಈ ಹುದ್ದೆಗಳಿಗೆ ಸೂಕ್ತ ವ್ಯಕ್ತಿಗಳ ಆಯ್ಕೆಯನ್ನು ದೇವೇಗೌಡರೇ ಮಾಡಬೇಕಾಗಿದೆ. ಅವರು ಮೊದಲ ಹಂತದ ಮಾತುಕತೆ ನಡೆಸಿದಾಗಲೇ ಸಮಸ್ಯೆಯ ಪರಿಹಾರ ಸುಲಭವಲ್ಲ ಎನಿಸಿತು. ಪಕ್ಷಮಾಸದ ನೆಪ ಹೇಳಿ ಕೆಲಸವನ್ನು ಮುಂದಕ್ಕೆ ಹಾಕಲಾಗಿದೆ. ಹಿಂದಿನ ಜೆಡಿಎಸ್‌ನಲ್ಲಿ ಇಂತಹ ಪರಿಸ್ಥಿತಿ ನಿರ್ಮಾಣವಾಗುವುದನ್ನು ಊಹಿಸಿಕೊಳ್ಳುವುದೂ ಕಷ್ಟವಾಗಿತ್ತು.
ನಿಜ. ಜೆಡಿಎಸ್, ಒಂದು ಪ್ರಾದೇಶಿಕ ಪಕ್ಷವಾಗಿ ಲೋಕಸಭೆ ಚುನಾವಣೆಗೆ ಸಂಬಂಧಿಸಿದಂತೆ ವಿಪರೀತವಾಗಿ ತಲೆ ಕೆಡಿಸಿಕೊಳ್ಳುವ ಪ್ರಮೇಯವಿಲ್ಲ. ಆದರೆ ಲೋಕಸಭೆ ಚುನಾವಣೆಯಲ್ಲಿ ಹೋದ ಬಾರಿಗಿಂತ ಹೆಚ್ಚಿನ ಸ್ಥಾನಗಳನ್ನು ಗೆಲ್ಲುವುದು ದೇವೇಗೌಡರ ಪಾಲಿನ ಪ್ರತಿಷ್ಠೆಯ ಪ್ರಶ್ನೆಯಗಿದೆ. ಹತ್ತು ಕ್ಷೇತ್ರಗಳಲ್ಲಿ ತೀವ್ರ ಸ್ವರೂಪದ ಕಾರ್ಯಾಚರಣೆಗೆ ಪಕ್ಷ ಸಿದ್ದವಾಗುತ್ತಿದೆ.
ತಣ್ಣಗಿರುವ ಬಿಜೆಪಿ: ರಾಜ್ಯದಲ್ಲಿ ನಾಯಕತ್ವದ ಅಭಾವದಿಂದ ತತ್ತರಿಸಿ ಸೋಲಿನಿಂದ ಆತ್ಮಸ್ಥೈರ್ಯವನ್ನೇ ಕಳೆದುಕೊಂಡಿರುವ ಸ್ಥಿತಿಯಿಂದ ಬಿಜೆಪಿ ತಣ್ಣಗಾಗಿದೆ. ರಾಜ್ಯದಲ್ಲಿ ಅದು ಈಗ ಮೂರನೆಯ ಪಕ್ಷ. ವಿರೋಧ ಪಕ್ಷದ ಸ್ಥಾನ -ಮಾನವೂ ಇಲ್ಲ. ಮಾಜಿ ಮುಖ್ಯಮಂತ್ರಿಗಳಾದ ಸದಾನಂದಗೌಡರು, ಜಗದೀಶ ಶೆಟ್ಟರ್ ಅವರಿಂದ ಕಾರ್ಯಕರ್ತರಲ್ಲಿ ಹುಮ್ಮಸ್ಸನ್ನು ಮೂಡಿಸುವುದು ಸಾಧ್ಯವಿಲ್ಲ ಎನ್ನುವುದು ಈಗಾಗಲೇ ಗೊತ್ತಾಗಿದೆ. ಅವರು ಏನಿದ್ದರೂ "ಉಪಪ್ರಾದೇಶಿಕ ನಾಯಕರು".
ಬೆಂಗಳೂರು ಮಹಾನಗರದಲ್ಲಿ ಈಚಿನ ದಿನಗಳಲ್ಲಿ ಬಿಜೆಪಿ ಬಹಿರಂಗವಾಗಿ ಮಾಡಿರುವ ದೊಡ್ಡ ಕೆಲಸ ಎಂದರೆ ಊರು ತುಂಬಾ ಪಕ್ಷದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಎಚ್.ಎನ್. ಅನಂತಕುಮಾರ್ ಅವರ ಪೋಸ್ಟರುಗಳನ್ನು ಪ್ರದರ್ಶಿಸಿರುವುದು. ಅದರಲ್ಲಿ ಮೋದಿ ಅವರನ್ನು ಅನಂತಕುಮಾರ್ ಅಪ್ಪಿದ್ದಾರೆ. ಪಕ್ಷದ ಸಂಘಟನೆಗೆ ಸಂಬಂಧಿಸಿದಂತೆ, ಆಂತರಿಕವಾಗಿ ಸಭೆಗಳು, ವಿಚಾರ ವಿನಿಮಯ ನಡೆಯುತ್ತಿರಬಹುದು. ಆದರೆ ಬಹಿರಂಗವಾಗಿ ಕಂಡು ಬರುತ್ತಿರುವುದು, ಬಿಜೆಪಿ ಸರ್ಕಾರ ಇದ್ದಾಗ ತುಂಬಾ ಚಟುವಟಿಕೆಯಿಂದ ಓಡಾಡಿಕೊಂಡು, ಹಲವು ಗುರುತರ ಜವಾಬ್ದಾರಿಗಳನ್ನು ಗಂಭೀರವಾಗಿ ನಿರ್ವಹಿಸಿದ ಸುರೇಶ್ ಕುಮಾರ್ ಅವರಂತಹವರು ಭೂಗತರಾಗಿರುವಂತಿದೆ. ಇನ್ನೊಬ್ಬ ಚಟುವಟಿಕೆಯ, ಚೈತನ್ಯಪೂರ್ಣ ನಾಯಕ ಅಶೋಕ್ ತಮ್ಮ ಪಾಡಿಗೆ ತಾವು ಎನ್ನುವಂತಿದ್ದಾರೆ.
 ಕಿಡಿಗೇಡಿತನ - ಲಾಲೂ ಪ್ರಸಾದ್ ಯಾದವ್ ಅವರಿಗೆ ಜೈಲು ಶಿಕ್ಷೆಯ ವಿಚಾರದಲ್ಲಿ ದೇವೇಗೌಡರ ಪ್ರತಿಕ್ರಿಯೆ ಸ್ವಲ್ಪ ವಿಚಿತ್ರವಾಗಿತ್ತು. ತೀರ್ಪಿನ ವಿಚಾರದಲ್ಲಿ ನಾನೇನೂ ಹೇಳುವುದಿಲ್ಲ. ಆದರೆ ತನಿಖೆ ಹೇಗೆ ನಡೆಯಿತು ಎನ್ನುವುದು ನನಗೆ ಗೊತ್ತು ಎಂದಿದ್ದಾರೆ ಅವರು. ಹಾಗೆಂದರೇನರ್ಥ?

- ಸತ್ಯ
anisikeprabha@gmail.com

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

INDIA ಬ್ಲಾಕ್ ನಲ್ಲಿ ಬಿರುಕು?: ಆಪ್ ಕೈ ಕೊಟ್ಟ ಬೆನ್ನಲ್ಲೇ ಭೋಜನ ಕೂಟಕ್ಕೆ ಸಮಾಜವಾದಿ ಪಕ್ಷ ಗೈರು!

ರಾಹುಲ್, ಪ್ರಿಯಾಂಕಾ ಗಾಂಧಿಯನ್ನು ಎಳೆದೊಯ್ದು ವಶಕ್ಕೆ ಪಡೆದ ಪೊಲೀಸರು; ಬಸ್‌ನ ಟೈರ್ ಪಂಕ್ಚರ್ ಮಾಡಿದ ಕಾರ್ಯಕರ್ತರು

ಭಾರತವನ್ನು ಜಾಗತಿಕ ಶಕ್ತಿಯಾಗಿಸಿದ್ದು ಮೋದಿ, ಅಂತಹವರ ವಿರುದ್ಧವೇ ಸಂಚು: ಸರ್ಬಿಯಾ ಮಾಜಿ ಅಧ್ಯಕ್ಷ, Video ವೈರಲ್

SIR ವಿರುದ್ಧ ಕಾಂಗ್ರೆಸ್ ಪ್ರತಿಭಟನೆ: ಡಿಎಂಕೆ ಯು-ಟರ್ನ್!

ಗ್ರಾಹಕರಿಗೆ ನೆಮ್ಮದಿ: ಕಟಾವಿಗೆ ಬಂದ ಖಾರಿಫ್ ಬೆಳೆ, ಕರ್ನಾಟಕ ಸೇರಿ ಹಲವು ರಾಜ್ಯಗಳಲ್ಲಿ ಈರುಳ್ಳಿ ದರ ಕುಸಿತ ಸಾಧ್ಯತೆ, 2 ಲಕ್ಷ ಕ್ವಿಂಟಾಲ್‌ ಪೂರೈಕೆ!