ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಅಂಕಣಗಳು

ಮುಸ್ಲಿಂ ಬಂಧಿತರು ಮುಗ್ಧರೆನ್ನುವ ಶಿಂದೆಯವರಿಗೆ ಸಾಧ್ವಿ ನೆನಪಾಗಿಲ್ಲವೇಕೆ?

Mainashree
Updated On : 4 Oct 2013, 12:11 pm

ಉಗ್ರರ ವಿರುದ್ಧದ ಹೋರಾಟದಲ್ಲಿ ಮುಗ್ಧ ಮುಸ್ಲಿಮರಿಗೆ ತೊಂದರೆಯಾಗದಂತೆ ನೋಡಿಕೊಳ್ಳಬೇಕು ಹಾಗೂ 'ಮುಗ್ಧ' ಮುಸ್ಲಿಂ ಯುವಕರನ್ನು ಬಂಧಮುಕ್ತಗೊಳಿಸಬೇಕು ಎಂದು ಕೇಂದ್ರ ಗೃಹ ಸಚಿವ ಸುಶೀಲ್ ಕುಮಾರ್ ಶಿಂದೆ ಹೇಳಿರುವುದು ರಾಷ್ಟ್ರೀಯ ಭದ್ರತೆ ವಿಷಯದಲ್ಲೂ ಕಾಂಗ್ರೆಸ್ ತನ್ನ ಓಲೈಕೆ ನೀತಿಯನ್ನು ಬಿಡುವುದಿಲ್ಲ ಎಂಬುದರ ಸ್ಪಷ್ಟ ಉದಾಹರಣೆಯಾಗಿದೆ. ಇಂಥದೊಂದು ಕೋಮುವಾದಿ ಬಡಬಡಿಕೆಗೆ ನಿರೀಕ್ಷೆಯಂತೆ ಯಾವ 'ಸೆಕ್ಯುಲರ್‌ವಾದಿ' ಪಕ್ಷಗಳಿಂದಲೂ ಆಕ್ಷೇಪಣೆ ಹೊರಬಿದ್ದಿಲ್ಲ.
ಭಯೋತ್ಪಾದನೆ ವಿರುದ್ಧ ಹೋರಾಡುವ ಪ್ರಕ್ರಿಯೆಯಲ್ಲಿ ಮುಗ್ಧರು ಯಾರೇ ಇರಲಿ, ಅವರು ಯಾವ ಧರ್ಮದವರೇ ಆಗಿರಲಿ ಅವರಿಗೆ ಕಿರುಕುಳ ಸಲ್ಲ ಎಂದು ಶಿಂದೆಯವರು ಹೇಳಿದ್ದರೆ ಅವರ ಕಾಳಜಿಯನ್ನು ಅರ್ಥಮಾಡಿಕೊಳ್ಳಬಹುದಿತ್ತು. ಉಗ್ರರ ವಿರುದ್ಧ ಕ್ರಮ ಕೈಗೊಳ್ಳುವ ಉತ್ಸಾಹದಲ್ಲಿ ಅಧಿಕಾರಿಗಳು ಯಾರು ಯಾರನ್ನೋ ಕಷ್ಟಕ್ಕೆ ಸಿಲುಕಿಸಬಾರದು ಎಂಬ ಸದಾಶಯ ಸರ್ಕಾರಕ್ಕಿದೆ ಎಂದು ಅಂದುಕೊಳ್ಳಬಹುದಿತ್ತು. ಆದರೆ ಈ ಕಾಳಜಿ ಎಲ್ಲರನ್ನೂ ಒಳಗೊಳ್ಳುವ ಬದಲಿಗೆ ಒಂದು ವರ್ಗಕ್ಕಷ್ಟೇ ಏಕೆ ಸೀಮಿತವಾಗುತ್ತಿದೆ? ಕಾಂಗ್ರೆಸ್ ಹಾಗೂ ಇತರ ಸೆಕ್ಯುಲರ್ ಮುಸುಕಿನ ರಾಜಕೀಯ ಪಕ್ಷಗಳು ತಾವು ಮುಸ್ಲಿಮರ ಹಿತರಕ್ಷಕರು ಎಂದು ತೋರಿಸಿಕೊಳ್ಳುವುದಕ್ಕೆ ತಮ್ಮ ತಮ್ಮಲ್ಲೇ ಯುದ್ಧಕ್ಕೆ ಬಿದ್ದಂತೆ ಆಡುತ್ತಿರುವುದೇಕೆ?  
ಉದಾಹರಣೆಗೆ ಉತ್ತರ ಪ್ರದೇಶದ ಸಮಾಜವಾದಿ ಸರ್ಕಾರವು ಭಯೋತ್ಪಾದನೆ ಪ್ರಕರಣಗಳಿಗೆ ಸಂಬಂಧಿಸಿ ಬಂಧಿತರಾದ ಮುಸ್ಲಿಮರನ್ನು ಬಿಡುಗಡೆಗೊಳಿಸುವುದಕ್ಕೆ ಏನೆಲ್ಲ ಮಾರ್ಗಗಳನ್ನು ಅನುಸರಿಸುತ್ತಿದೆ. ಕೆಲವು ಆರೋಪಿಗಳ ವಿರುದ್ಧ ಪ್ರಕರಣವನ್ನೇ ಕೈಬಿಡುವ ಇಂಗಿತವನ್ನು ಸರ್ಕಾರ ತೋರಿದಾಗ ನ್ಯಾಯಾಲಯವು ಅಂಥ ಪ್ರಯತ್ನವನ್ನು ಖಂಡಿಸಿರುವ ಉದಾಹರಣೆಯೂ ಅಲ್ಲಿದೆ. ಮುಜಫರನಗರ ಹಿಂಸಾಚಾರ ಪ್ರಕರಣದಲ್ಲೂ ಮುಸ್ಲಿಮರಿಗೆ ಹೋಲಿಸಿದರೆ ಹಿಂದೂ ಸಂತ್ರಸ್ತರನ್ನು ಅಖಿಲೇಶ್ ಸಿಂಗ್ ಯಾದವ್ ಅವರ ಸರ್ಕಾರ ತಾರತಮ್ಯ ಭಾವನೆಯಲ್ಲಿ ನಡೆಸಿಕೊಂಡಿರುವುದು ಸ್ಪಷ್ಟವಾಗಿದೆ. ಈ ವಿದ್ಯಮಾನವು ಒಂದು ಸಮುದಾಯವನ್ನು ಓಲೈಸಿ ಇನ್ನೊಂದನ್ನು ತುಳಿಯುವ ಪ್ರಕ್ರಿಯೆಯನ್ನು ಬೊಟ್ಟು ಮಾಡಿ ತೋರಿಸುತ್ತದೆ.
ಸಾಕ್ಷ್ಯಗಳು ಪ್ರಬಲವಾಗಿ ಇಲ್ಲದಿದ್ದರೂ ಬಿಜೆಪಿ ಶಾಸಕರಾದ ಸುರೇಶ್ ರಾಣಾ ಹಾಗೂ ಸಂಗೀತ್ ಸೋಮ್ ಅವರನ್ನು ಜನರನ್ನು ಉದ್ರೇಕಿಸಿರುವ ಆರೋಪದ ಮೇಲೆ ಅವರ ಮನೆಗಳಿಂದ ಬಂಧಿಸಿ ಒಯ್ಯಲಾಯಿತು. ಆದರೆ ಇದೇ ಆರೋಪವನ್ನು ಹೊತ್ತಿರುವ ಮುಸ್ಲಿಂ ಪುರೋಹಿತ ಮೌಲಾನಾ ನಾಜೀರ್‌ಗೆ ಮಾತ್ರ ಉತ್ತರ ಪ್ರದೇಶ ಸರ್ಕಾರವು ರತ್ನಗಂಬಳಿಯನ್ನೇ ಹಾಸಿದೆ. ಲಖನೌಗೆ ಅತಿಥಿಗಳಾಗಿ ಬಂದು ಮುಖ್ಯಮಂತ್ರಿಯನ್ನು ಭೇಟಿ ಮಾಡುವುದಕ್ಕೆ ಅವರಿಗೆ ಸರ್ಕಾರದ ಖರ್ಚಿನಲ್ಲಿ ವಿಶೇಷ ವಿಮಾನವನ್ನು ಕಳುಹಿಸಲಾಯಿತು.
ಭದ್ರತಾ ಏಜೆನ್ಸಿಗಳು ಮುಸ್ಲಿಮರನ್ನು ಶೋಷಿಸುತ್ತಿವೆ ಎಂಬ ಅಭಿಪ್ರಾಯವನ್ನು ವಿಶ್ಲೇಷಿಸೋಣ. ಹಲವಾರು ಮುಸ್ಲಿಂ ಆಪಾದಿತರನ್ನು ಬಿಡುಗಡೆ ಮಾಡಿರುವ, ಕೆಲವರು ನ್ಯಾಯಾಲಯದಿಂದ ದೋಷಮುಕ್ತರಾಗಿರುವ ಉದಾಹರಣೆಗಳು ದೊರೆಯುತ್ತವೆ. ಆದರೆ ಹಿಂದೂ ಶಂಕಿತರು ಮಾತ್ರ ವರ್ಷಗಳ ಕಾಲದಿಂದ ಜಾಮೀನು ದೊರೆಯದೇ ಜೈಲುಗಳಲ್ಲಿ ಕೊಳೆಯುತ್ತಿದ್ದಾರೆ. ಸದ್ಭಾವನಾ ಎಕ್ಸ್‌ಪ್ರೆಸ್ ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿ ಮೊದಲಿಗೆ ಇಂಡಿಯನ್ ಮುಜಾಹಿದೀನ್‌ನ ಶಂಕಿತರನ್ನು ಪೊಲೀಸರು ಬಂಧಿಸಿದ್ದರು. ನಂತರ ಹೊಸದೇ ಕತೆಯೊಂದನ್ನು ಕಟ್ಟಿ ಹಿಂದೂ ಸಾಧ್ವಿ ಹಾಗೂ ಗುಪ್ತಚರ ವಿಭಾಗದಲ್ಲಿ ಸೇವೆ ಸಲ್ಲಿಸುತ್ತಿದ್ದ ಹಿಂದೂ ಲೆಫ್ಟಿನೆಂಟ್ ಒಬ್ಬರನ್ನು ಸಿಲುಕಿಸಲಾಯಿತು.
ಈ ಪ್ರಕರಣವನ್ನು ಎನ್‌ಐಎ ವಹಿಸಿಕೊಂಡು ಮೂರು ವರ್ಷಗಳೇ ಉರುಳಿ ಹೋಗಿವೆ. ಈಗಲೂ ಅದು ಆರೋಪಿಗಳಿಗೆ ಜಾಮೀನನ್ನು ನಿರಾಕರಿಸುತ್ತಿದೆ. ಸಾಧ್ವಿಯವರ ಆರೋಗ್ಯವಂತೂ ಸಂಪೂರ್ಣ ಹದಗೆಟ್ಟಿದೆ. ಸರ್ಕಾರ ಇನ್ನೂ ಆರೋಪಪಟ್ಟಿಯನ್ನೇ ಪೂರ್ಣಗೊಳಿಸಿಲ್ಲ! ಇದನ್ನೇ ಬೆಂಗಳೂರು ಬಾಂಬ್ ಸ್ಫೋಟ ಪ್ರಕರಣದಲ್ಲಿ ಆರೋಪಿಯಾಗಿರುವ ಅಬ್ದುಲ್ ನಾಸೀರ್ ಮದನಿ ಪ್ರಕರಣದೊಂದಿಗೆ ಹೋಲಿಸಿ. ಕರ್ನಾಟಕ ಸರ್ಕಾರದ ವ್ಯವಹಾರದಲ್ಲಿ ಮೂಗು ತೂರಿಸುತ್ತ ನೆರೆಯ ಕೇರಳದ ಕಾಂಗ್ರೆಸ್ ಸರ್ಕಾರವು ಮದನಿಗೆ 'ಉತ್ತಮ' ಆರೋಗ್ಯ ಸವಲತ್ತುಗಳನ್ನು ಒದಗಿಸಿ ಎಂದು ಕಾಳಜಿ ಮೆರೆಯುತ್ತದೆ!
ಸದ್ಭಾವನಾ ಎಕ್ಸ್‌ಪ್ರೆಸ್ ಹಾಗೂ ಅಜ್ಮೀರ್ ಬಾಂಬ್ ಸ್ಫೋಟಗಳಲ್ಲಿ ಆರೋಪಿಯಾಗಿ, ಆರೋಗ್ಯವು ತೀರ ಹದಗೆಟ್ಟ ಪರಿಸ್ಥಿತಿಯಲ್ಲಿರುವ ಸಾಧ್ವಿ ಪ್ರಜ್ಞಾಸಿಂಗ್ ಅವರಿಗೆ ಈ ಸರ್ಕಾರದ ಕಾಳಜಿ ವ್ಯಕ್ತವಾಗುವುದಿಲ್ಲವೇಕೆ? ಮೂಲಭೂತ ಮಾನವ ಹಕ್ಕುಗಳನ್ನೂ ಕೋಮುವಾದಿ ಚೌಕಟ್ಟಿನಲ್ಲೇ ವ್ಯಾಖ್ಯಾನಿಸುತ್ತದೆಯೇ ಕಾಂಗ್ರೆಸ್? ಭದ್ರತಾ ಏಜೆನ್ಸಿಗಳು ಹಲವು ಸಂದರ್ಭಗಳಲ್ಲಿ ಮುಗ್ಧರನ್ನೂ ನ್ಯಾಯಾಲಯಕ್ಕೆ ಎಳೆದೊಯ್ಯುತ್ತಾರೆ ಎಂಬ ಅರ್ಥದಲ್ಲಿ ಶಿಂದೆಯವರ ಹೇಳಿಕೆಯನ್ನು ನಾವು ಸ್ವೀಕರಿಸಬಹುದು. ಈ ದೇಶದ ಪೊಲೀಸ್ ವ್ಯವಸ್ಥೆಯಲ್ಲಿ ಇಂಥ ಪ್ರಮಾದಗಳು ದಿನಂಪ್ರತಿ ನಡೆಯುವುದು ಸುಳ್ಳಲ್ಲ. ನ್ಯಾಯಾಲಯಗಳು ಇಂಥ ಪ್ರಕರಣಗಳ ಮೇಲೆ ಕಣ್ಣಿಟ್ಟಿರುತ್ತವೆ. ಈ ಎಚ್ಚರಿಕೆ ಹೊರತಾಗಿಯೂ ತಪ್ಪಿತಸ್ಥರ ಜಾಗದಲ್ಲಿ ಮುಗ್ಧರನ್ನೇ ಇರಿಸಿ, ತಾವು ಕ್ರಿಮಿನಲ್‌ಗಳನ್ನು ಹಿಡಿಯುವಲ್ಲಿ ಯಶಸ್ವಿಯಾಗಿದ್ದೇವೆ ಎಂದು ಸಾಬೀತುಪಡಿಸುವ ಉತ್ಸುಕತೆ ಭದ್ರತಾ ವಿಭಾಗದವರಲ್ಲಿ ಇರುತ್ತದೆ. ಆದರೆ ಶಿಂದೆಯವರ ಕಾಳಜಿ ಈ ಬಗ್ಗೆ ಇಲ್ಲವೇ ಇಲ್ಲ. ಅವರಿಗೆ ತಾವು ಮತ್ತು ತಮ್ಮ ಪಕ್ಷ ಮುಸ್ಲಿಮರ ಹಿತ ಕಾಡುವ ಛಾಂಪಿಯನ್ನರು ಎಂದು ಬಿಂಬಿಸಿಕೊಳ್ಳುವ ಉಮೇದು ಮಾತ್ರವಿದೆ.
ಕೇಂದ್ರದ ಗೃಹ ಸಚಿವರಾಗಿ ಶಿಂದೆಯವರು ಗಮನ ವಹಿಸಬೇಕಿರುವ ವಿಷಯ ಎಂದರೆ ವಿಶೇಷವಾಗಿ ಕಾಂಗ್ರೆಸ್ ಮುಖ್ಯಮಂತ್ರಿಗಳನ್ನು ಹೊಂದಿರುವ ರಾಜ್ಯಗಳು ಮುಸ್ಲಿಂ ಬಂಧಿತರ ಓಲೈಕೆಗೆ ಹೇಗೆಲ್ಲ ತೊಡಗಿವೆ ಎಂಬುದು. ಉದಾಹರಣೆಗೆ, ಆಂಧ್ರ ಪ್ರದೇಶದ ಕಾಂಗ್ರೆಸ್ ಸರ್ಕಾರವು ಉಗ್ರ ಚಟುವಟಿಕೆ ಸಂಬಂಧ ಐದು ವರ್ಷಗಳ ಕಾಲ ಜೈಲಿನಲ್ಲಿದ್ದು ಬಂದ 21 ಮುಸ್ಲಿಂ ಯುವಕರಿಗೆ 'ಪರಿಹಾರಧನ' ನೀಡುವ ವಿಕ್ಷಿಪ್ತ ಮಾರ್ಗಕ್ಕೆ ಇಳಿಯಿತು. ಕಾಯ್ದೆಯ ಪ್ರಕಾರ ಹೀಗೆ ಪರಿಹಾರ ನೀಡುವ ಅವಕಾಶವೇ ಇಲ್ಲ. ಉಳಿದ ಧರ್ಮದ ಯಾವ ಬಂಧಿತರಿಗೂ ಇಂಥ ಪರಿಹಾರ ನೀಡಿರುವ ಉದಾಹರಣೆಯೂ ಸಿಗುವುದಿಲ್ಲ. ಸಹಜವಾಗಿಯೇ ರಾಜ್ಯದ ಹೈಕೋರ್ಟ್ ಈ ಪರಿಹಾರ ಕಾರ್ಯಕ್ರಮವನ್ನು ಕಾಯ್ದೆ ವಿರೋಧಿ ಎಂದು ರದ್ದುಗೊಳಿಸಿತು. ಇದೀಗ ಈ ಬಗ್ಗೆ ಮೇಲ್ಮನವಿಗೆ ಸುಪ್ರೀಂಕೋರ್ಟ್ ಮೆಟ್ಟಿಲೇರುವುದಕ್ಕೆ ಆಂಧ್ರದ ರಾಜ್ಯ ಸರ್ಕಾರ ಚಿಂತಿಸುತ್ತಿದೆ!
ಮುಸ್ಲಿಂ ಸಮುದಾಯದ 'ಮುಗ್ಧ'ರ ಬಗೆಗಿನ ಕಾಂಗ್ರೆಸ್ ಬೊಬ್ಬೆ ಎಷ್ಟು ಟೊಳ್ಳು ಎಂಬುದು ಬಾಟ್ಲಾಹೌಸ್ ಪ್ರಕರಣದಲ್ಲಿ ಇಂಡಿಯನ್ ಮುಜಾಹಿದೀನ್‌ನ ಕೆಲ ಶಂಕಿತರನ್ನು ಸುತ್ತುವರೆದಾಗ ಇದೇ ಪಕ್ಷದ ಪ್ರಮುಖರು ಹೇಗೆಲ್ಲ ಅರಚಾಡಿದ್ದರು ಎನ್ನುವುದನ್ನು ಗಣನೆಗೆ ತೆಗೆದುಕೊಂಡರೆ ಮನದಟ್ಟಾಗುತ್ತದೆ. ಕಾಂಗ್ರೆಸ್‌ನ ದಿಗ್ವಿಜಯ್ ಸಿಂಗ್ ಅವರಂಥ ನೇತಾರರು 265 ಜನರ ಸಾವಿಗೆ ಕಾರಣವಾದ ಮುಂಬೈ ದಾಳಿಯಲ್ಲಿ ನಮ್ಮ ಪೊಲೀಸ್ ಪಡೆಯ ಪ್ರಾಣತ್ಯಾಗವನ್ನೇ ಶಂಕಾಸ್ಪದವಾಗಿ ನೋಡಿದರು! ಅಜ್ಮೀರ್, ಪುಣೆ ಇನ್ನಿತರ ಕಡೆಗಳಲ್ಲಿ ಆಗಿರುವ ಬಾಂಬ್ ಸ್ಫೋಟಗಳು ಹಿಂದೂ ಸಂಘಟನೆಗಳ ಸಂಚಿನ ಭಾಗ ಎಂದು ಬಿಂಬಿಸುವುದಕ್ಕೆ ನ್ಯಾಷನಲ್ ಇನ್‌ವೆಸ್ಟಿಗೇಷನ್ ಏಜೆನ್ಸಿ ಶತಪ್ರಯತ್ನವನ್ನೇ ಮಾಡಿದೆ.
ಮುಗ್ಧರನ್ನು ಒಂದು ದಿನ ಜೈಲಿನಲ್ಲಿ ಇಟ್ಟರೂ ಆ ಕೃತ್ಯ ಸಮರ್ಥನೀಯವಲ್ಲ. ಆದರೆ ಭದ್ರತಾ ಏಜೆನ್ಸಿಗಳ ಕಾರ್ಯನಿರ್ವಹಣೆಯ ಒತ್ತಡದ ಅಂಶಗಳನ್ನೂ ಗಣನೆಗೆ ತೆಗೆದುಕೊಳ್ಳಬೇಕು. ಜಾಗತಿಕವಾಗಿ ಉಗ್ರವಾದದ ವಾತಾವರಣವೇ ಹಾಗಿದೆ. ಒಂದೇ ದಿನದಲ್ಲಿ ಜಗತ್ತಿನ ಬೇರೆ ಬೇರೆ ಕಡೆಗಳಲ್ಲಿ ಆದ ಉಗ್ರಕೃತ್ಯಗಳನ್ನೇ ಉದಾಹರಣೆಯಾಗಿ ತೆಗೆದುಕೊಂಡರೆ ಈ ಅಂಶ ತಿಳಿಯುತ್ತದೆ. ಉದಾಹರಣೆಗೆ ಸೆಪ್ಟೆಂಬರ್ 30ರ ಹಿಂದೂಸ್ತಾನ್ ಟೈಮ್ಸ್‌ನಲ್ಲಿ ಬಂದ ಶೀರ್ಷಿಕೆಗಳನ್ನೇ ಗಮನಿಸೋಣ. 'ಪೇಷಾವರದಲ್ಲಿ ಕಾರ್‌ಬಾಂಬ್‌ಗೆ 40 ಮಂದಿ ಬಲಿ', 'ನೈಜೀರಿಯಾದಲ್ಲಿ 50 ಕಾಲೇಜ್ ವಿದ್ಯಾರ್ಥಿಗಳನ್ನು ಕೊಂದ ಉಗ್ರರು', 'ಪಾಕ್ ಬುಡಕಟ್ಟು ಪ್ರಾಂತ್ಯದಲ್ಲಿ ಐವರು ತಾಲಿಬಾನಿಯರನ್ನು ಕೊಂದ ಅಮೆರಿಕ ಡ್ರೋನ್ ದಾಳಿ'.
ಈ ಮೇಲಿನ ಎಲ್ಲ ಘಟನೆಗಳಲ್ಲೂ ಹಿಂಸೆಗೆ ಕಾರಣರಾದವರು ಜಿಹಾದಿ ಇಸ್ಲಾಮಿಸ್ಟ್‌ಗಳೇ. ಜಗತ್ತಿನ ಯಾವುದೇ ಭಾಗದಿಂದ ವರದಿಯಾದ ಉಗ್ರ ಚಟುವಟಿಕೆಯನ್ನೇ ಗಮನಿಸಿದರೂ ಅದರ ಹಿಂದಿರುವವರು ಇಸ್ಲಾಂ ತೀವ್ರವಾದಿಗಳೇ ಆಗಿರುತ್ತಾರೆ. ಅಮೆರಿಕದಲ್ಲಿ ಇಸ್ಲಾಮ್‌ಗೆ ಮತಾಂತರವಾದವರೂ ನ್ಯೂಯಾರ್ಕ್‌ನ ಜನದಟ್ಟಣೆಯ ಟೈಮ್ಸ್ ಸ್ಕ್ವೇರ್‌ಗೆ ಬಾಂಬ್ ಇಡುತ್ತಾರೆ ಎಂದರೆ ಇವಕ್ಕೆಲ್ಲ ಪ್ರಚೋದನೆ ದೊರೆಯುತ್ತಿರುವುದು ಎಲ್ಲಿಂದ? ಜಾಗತಿಕವಾಗಿ ಸರ್ಕಾರಗಳು ಮಾತ್ರವಲ್ಲದೇ, ಅಕಾಡೆಮಿಷಿಯನ್‌ಗಳು, ಸಮಾಜ ಶಾಸ್ತ್ರಜ್ಞರು ಮತ್ತು ಇತರ ನಾಯಕರೂ ಈ ಬಗ್ಗೆ ಕಳವಳ ವ್ಯಕ್ತಪಡಿಸುತ್ತಲೇ ಇದ್ದಾರೆ.
ಆದರೆ ನಮ್ಮ ದೇಶದ 'ಸೆಕ್ಯುಲರ್‌' ಪಡೆ ಮಾತ್ರ ಭದ್ರತಾ ಏಜೆನ್ಸಿಗಳನ್ನಷ್ಟೇ ವಿಲನ್‌ಗಳನ್ನಾಗಿಸಿ, ಇಸ್ಲಾಂ ತೀವ್ರವಾದಿಗಳನ್ನು ಪರಿಸ್ಥಿತಿಗೆ ಬಲಿಯಾದ ಮುಗ್ಧರು ಎಂದು ಟಾಂಟಾಂ ಮಾಡುತ್ತಿದೆ. ಇವಕ್ಕೆಲ್ಲ ಶಿಂದೆ ಸಾಹೇಬರು ಏನಂತಾರೆ?

(ಲೇಖಕರು ಬಿಜೆಪಿಯ ರಾಷ್ಟ್ರೀಯ ಉಪಾಧ್ಯಕ್ಷ)

- ಬಲಬೀರ್ ಪುಂಜ್
anisikeprabha@gmail.com

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement