ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಅಂಕಣಗಳು

ಮತ್ತೆ ಅದೇ ಪ್ರೇರಣೆ ನೀಡುತ್ತೀರಾ?

Mainashree
Updated On : 5 Oct 2013, 11:03 am

ಪ್ರೀತಿಯ ಭಟ್ಟರೆ,
ನಿಮ್ಮ ಅಂಕಣಕ್ಕಿರುವ ಶಕ್ತಿ, ಪ್ರಭಾವ ಅದನ್ನು ಅರಗಿಸಿಕೊಳ್ಳುವ ನಿಮ್ಮ ನೆಚ್ಚಿನ ಓದುಗ ಬಂಧುಗಳಿಗೆ ಮಾತ್ರ ಗೊತ್ತು. ವಿಷಾದವೆಂದರೆ ನೀವು ಬೆಳೆಯುತ್ತಾ ಹೋದಂತೆಲ್ಲ ನಿಮ್ಮ ಅಂಕಣದ ಗಾಂಭೀರ್ಯ, ವರ್ಚಸ್ಸು ಕ್ಷೀಣಿಸುತ್ತಿರುವಂತಿದೆ. ಬ್ರಾನ್‌ಸನ್ ಯಶಸ್ಸಿನ ಕತೆ, ಇನ್ನಿತರರ ಅಸಾಮಾನ್ಯ ಸಾಧನೆಗಳು, ಮನಮುಟ್ಟುವ ಕತೆಗಳು, ಒಂದಿಷ್ಟು ಹಾಸ್ಯ, ನವ-ನವೀನ ಯೋಚನೆಗಳಿಗೆ ನಿಮ್ಮ ಅಂಕಣವೇ ಅಸ್ತ್ರದಂತಿತ್ತು. ಆದರೆ ತಮ್ಮ ಇತ್ತೀಚಿನ ಅಂಕಣಗಳು ಎಲ್ಲೋ ಎಡವಿದಂತೆ ಭಾಸವಾಗುತ್ತಿದೆ. ಹಿಂದಾದರೆ ನಿಮ್ಮ ಒಂದು ಅಂಕಣ ವಾರದುದ್ದಕ್ಕೂ ಮೆಲುಕು ಹಾಕಲು ಆಹಾರವಾಗುತ್ತಿತ್ತು. ನಮ್ಮ ಭಟ್ಟರನ್ನು ನಾವು ಎಂದೂ ಬಿಟ್ಟುಕೊಡುವುದಿಲ್ಲ. ನಿಮ್ಮ ನೆಚ್ಚಿನ ಓದುಗರಿಗೆ ಅದೇ ಹುಮ್ಮಸ್ಸು, ಪ್ರೇರಣೆ ನೀಡುತ್ತೀರಾ?
-joepraveen

22/9ರ ಸಂಪಾದಕರ ಸರದಿ ಅಂಕಣದ 'ನಾವು ಬೇರೆಯವರಿಂದ ಯಾಕೆ ಕಲಿಯುವುದಿಲ್ಲ?' ಎಂಬ ಲೇಖನವು ಔಚಿತ್ಯಪೂರ್ಣವಾಗಿತ್ತು. ಲೇಖನದಲ್ಲಿ ವ್ಯಕ್ತಿತ್ವ ವಿಕಸನಕ್ಕೆ ಸಂಬಂಧಿಸಿದಂತೆ ಪೂರಕವಾದ ಸಾಕಷ್ಟು ಅಂಶಗಳಿದ್ದವು. ಅದರಲ್ಲೂ ಇರಾನ್, ನೌರು ರಾಷ್ಟ್ರದ ಕುರಿತ ಉದಾಹರಣೆಗಳು ತುಂಬಾ ಸೊಗಸಾಗಿದ್ದವು. 'ವೀರಶೈವವಾಣಿ' ಪಾಕ್ಷಿಕ ಪತ್ರಿಕೆಯ ಸಂಪಾದಕರಾದ ಡಾ. ಶಿವಾನಂದ ಮೂಲಿಮನಿಯವರಿಗೆ ಧನ್ಯವಾದಗಳು.
-ಶರತ್ ಎಂ.ಆರ್. ಮಳವಳ್ಳಿ, ಭಾರತೀ ಕಾಲೇಜು, ಭಾರತೀನಗರ, ಮೊ. 8183883838

ಸೆ. 24ರ ಪುಟ 9ರಲ್ಲಿ, ಕಾಲುಭಾಗ ಅತ್ಯಾಚಾರದ ಸುದ್ದಿಗಳೇ ಇವೆ. ಶಿಕ್ಷಕರೇ ಲೈಂಗಿಕ ಕಿರುಕುಳ, ಅತ್ಯಾಚಾರ ನಡೆಸಿರುವುದನ್ನು ಓದಿ ತುಂಬಾ ಬೇಸರವಾಯಿತು. ಮಕ್ಕಳಿಗೆ ಉತ್ತಮ ಶಿಕ್ಷಣ, ಸಂಸ್ಕಾರ ನೀಡಿ ಉತ್ತಮ ಸಮಾಜದ ನಿರ್ಮಾಣಕ್ಕೆ ನಾಂದಿ ಹಾಡಬೇಕಾದವರೇ ಈ ರೀತಿ ವರ್ತಿಸಿದರೆ, 'ಬೇಲಿಯೇ ಎದ್ದು ಹೊಲ ಮೇಯ್ದಂತೆ'. ಸಂಸ್ಕಾರವಿಲ್ಲದ ಶಿಕ್ಷಕರಿಂದ ಆ ವೃತ್ತಿಗೆ ಅಪಮಾನವಾಗುತ್ತಿದೆ. ಇನ್ನು ಮೆಹೂರ್ ಬೆಂಗಳೂರು ಎಂಬಾತನಿಗೆ ಬಹುವಚನ ಪ್ರಯೋಗಿಸಿರುವುದು ತಪ್ಪು. ಭಯೋತ್ಪಾದಕರಿಗೆ, ಕಿರುಕುಳಕೋರರಿಗೆ, ಅತ್ಯಾಚಾರಿಗಳಿಗೆ, ಕೊಲೆಗಡುಕರಿಗೆ ಬಹುವಚನ ಪ್ರಯೋಗಿಸಬಾರದೆಂದು ಕಳಕಳಿಯ ವಿನಂತಿ.
-ಜಿ.ಎಂ. ಕುಲಕರ್ಣಿ, ಮಾಲತಿ, ಹೂಟಗಳ್ಳಿ, ಬೆಳವಾಡಿ ಪೋಸ್ಟ್,  ಮೈಸೂರು, ಮೊ. 8050 309362

ದಿ. 17.9.13ರಂದು ನಿಮ್ಮ ಪತ್ರಿಕೆಯಲ್ಲಿ ಪ್ರಕಟವಾದ ವೆಂಕಟೇಶ ಆರ್. ದೊಡ್ಮನೆಯವರ "ಮನೆ ಮುರುಕ ಕಾನೂನು ನಮಗೆ ಬೇಕಾ?" ಎಂಬ ಲೇಖನವು ಬಹಳ ಸತ್ಯಸಂಗತಿಗಳಿಂದ ಕೂಡಿದೆ. ನಾನೊಬ್ಬ ಗ್ರಾಮೀಣ ಭಾಗದ ಹೆಣ್ಣು ಮಗಳಾಗಿ ಬರೆಯುತ್ತಿದ್ದೇನೆ- ಈ ಅನಿಷ್ಟ ಕಾನೂನಿನಿಂದ ನಾನು ಮತ್ತು ನನ್ನಂತಹ ಅನೇಕ ಹೆಣ್ಣುಮಕ್ಕಳು ತುಂಬಾ ನಲುಗಿ ಹೋಗಿದ್ದೇವೆ. ಹೆಣ್ಣು, ತವರಿನ ಪ್ರೀತಿಯನ್ನು ಬಯಸಿ ಅವರ ಮನೆ ಉದ್ಧಾರವಾಗಲಿ ಎಂದು ಹರಸಿ ಸಂತೋಷಪಡಬೇಕು. ಅದರ ಬದಲು ಕಾನೂನಿನ ದುರುಪಯೋಗ ಪಡೆದುಕೊಳ್ಳುವ ದುರಾಸೆಯ ಹೆಂಗಸರು ತವರಿನವರನ್ನು ಕೋರ್ಟ್‌ಗೆ ಎಳೆಯುತ್ತಾರೆ. ಯಾವುದೇ ತಂದೆ -ತಾಯಿ ತನ್ನ ಮಗಳು ಒಳ್ಳೆಯ ಮನೆ ಸೇರಲಿ ಎಂದು ಬಯಸಿ ಯೋಗ್ಯವಾದ ಕಡೆ ಮಗಳನ್ನು ಮದುವೆ ಮಾಡಿಕೊಡುತ್ತಾರೆ. ಆದರೆ ದುರಾಸೆ ಬುದ್ಧಿಯ ಮಗಳು ತವರಿನ ಮೇಲೆಯೇ ಆಸ್ತಿಗಾಗಿ ತಿರುಗಿ ಬೀಳುತ್ತಾಳೆ ಇಂಥ ದರಿದ್ರ ಕಾನೂನಿನಿಂದ ಹೆಣ್ಣು ಮಕ್ಕಳು ಮತ್ತು ತವರಿನ ಬಾಂಧವ್ಯ ಮುರಿದು ಬಿದ್ದಿದೆ. ಹಿಂದೆ ನಮ್ಮ ಹಿರಿಯರು ಯಾವುದಕ್ಕೂ ಆಸೆ ಪಡದೆ ಬಾಳಿ ಬದುಕಿರಲಿಲ್ಲವೇ? ಇದು ನನ್ನ ಜೀವನದಲ್ಲಿ ನಡೆದಿರುವುದರಿಂದ ತುಂಬಾ ನೊಂದು ಬರೆಯುತ್ತಿದ್ದೇನೆ. ನಾನು ಮಗಳಾಗಿ, ಸೊಸೆಯಾಗಿ ಈ ಕಾನೂನಿಗೆ ಧಿಕ್ಕಾರ ಎಂದು ಸಾರಿ ಸಾರಿ ಹೇಳುತ್ತಿದ್ದೇನೆ.
-ಸುಮಿತ್ರಾ, ಶ್ರೀರಂಗಪಟ್ಟಣ ತಾ., ಮಂಡ್ಯ ಜಿಲ್ಲೆ

ವಿಶ್ವೇಶ್ವರಭಟ್‌ರವರ ಗುರುವಾರದ (3.10.2013) 'ನೂರೆಂಟು ನೋಟ' ಅಂಕಣದಲ್ಲಿ ನಮ್ಮ ನರಸಿಂಹರಾಜಪುರ ಹಾಗೂ ಇಲ್ಲಿನ ಕಾರ್ಯಕ್ರಮದ ಕುರಿತು ಹೊಗಳಿಕೆಯ ಮಾತುಗಳನ್ನು ಓದಿ ನಿಜಕ್ಕೂ ಸಂತಸವಾಯಿತು. ಬಹುತೇಕರು ಅನ್ಯ ಪ್ರದೇಶಗಳಿಗೆ ಭೇಟಿ ನೀಡಿ, ಕೆಲವೇ ದಿನಗಳಲ್ಲಿ ಅದನ್ನೆಲ್ಲ ಮರೆತುಬಿಡುತ್ತಾರೆ. ಆದರೆ ಭಟ್ರು, ಇಲ್ಲಿನ ಸತ್ಕಾರವನ್ನು ಮನಸಾರೆ ಸ್ಮರಿಸಿ, ಮಲೆನಾಡಿನವರ ಆತಿಥ್ಯವನ್ನು ತಮ್ಮ ಲೇಖನಿಯ ಮೂಲಕ ಕರ್ನಾಟಕದ ಜನತೆಗೆ ತಿಳಿಸಿದ ರೀತಿ ಶ್ಲಾಘನೀಯ. ಅವರಿಗೆ ನರಸಿಂಹರಾಜಪುರದ ಜನತೆಯ ಪರವಾಗಿ ಮತ್ತೊಮ್ಮೆ ವಂದನೆಗಳು.
-ಶ್ರೀಮತಿ ಭಾಗ್ಯ ನಂಜುಂಡಸ್ವಾಮಿ, ಅಗ್ರಹಾರ, ನರಸಿಂಹರಾಜಪುರ, ಚಿಕ್ಕಮಗಳೂರು ಜಿಲ್ಲೆ
---------
ದಿನಾಂಕ 14.9.13ರ ಪುಟ 8ರಲ್ಲಿ ಪ್ರಕಟವಾದ ಎಚ್.ಎಸ್. ಬಲರಾಮ್‌ರವರ ಲೇಖನ ಬಹಳ ತಾರ್ಕಿಕವಾಗಿ ಮೂಡಿಬಂದಿದೆ. ಭಾರತವು ಚಂದ್ರಯಾನಕ್ಕೆ ತಯಾರಿ ನಡೆಸುವುದಕ್ಕಿಂತ ಹದಗೆಟ್ಟ ಪ್ರಮುಖ ನಗರಗಳ ರಸ್ತೆ ರಿಪೇರಿ ಮಾಡಿದರೆ ಉಪಕಾರವಾಗುತ್ತಿತ್ತು ಎಂದು ಹೇಳಿರುವುದು ಅರ್ಥಗರ್ಭಿತವಾಗಿದೆ.
-ಸಂಪತ್ ನೂ. ಗಾಣಿಗೇರ, ಮಹಾಂತನಗರ, ಹುನಗುಂದ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement