ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಅಂಕಣಗಳು

ಸಮಸ್ಯೆ ಇರುವುದು ಗಡಿಯಲ್ಲಲ್ಲ, ದೇಶದೊಳಗಿನ ವ್ಯವಸ್ಥೆಯಲ್ಲಿ

Mainashree
Updated On : 7 Oct 2013, 11:15 am

ಸೆಪ್ಟೆಂಬರ್, 28 ರಂದು ಅನುಭವ ಮಂಟಪದಲ್ಲಿ ಪ್ರಕಟವಾದ ಮಾಜಿ ಸಚಿವೆ, ಶೋಭಾ ಕರಂದ್ಲಾಜೆ ಅವರ ಲೇಖನ 'ದುರುಳರಿಗೆ ಬುದ್ಧಿ ಕಲಿಸುವ ಶಕ್ತಿ ನಮಗಿಲ್ಲವೆ?" ಕುರಿತು ನನ್ನ ಅಭಿಪ್ರಾಯ ಹೀಗಿದೆ... ಚೀನಾಕ್ಕೆ ಬುದ್ಧಿ ಕಲಿಸುವ ಶಕ್ತಿಯನ್ನು ನಾವು ಬೆಳೆಸಿಕೊಂಡೇ ಇಲ್ಲ. ಚೀನಾ ಕೇವಲ ಗಡಿ ಭಾಗದಲ್ಲಷ್ಟೇ ಅಲ್ಲದೆ, ನಮ್ಮ ದೇಶದೊಳಕ್ಕೂ ವಿವಿಧ ರೂಪದಲ್ಲಿ ನುಗ್ಗಿ ತನ್ನ ಪ್ರಾಬಲ್ಯ ಮೆರೆಯುತ್ತಿದೆ. ಇದೇನೇ ಇದ್ದರೂ ಚೀನಾವನ್ನು ದೂಷಿಸುವುದಕ್ಕಿಂತ ಮುಖ್ಯವಾಗಿ ನಮ್ಮ ಚರ್ಚೆಯ ವಿಸ್ತಾರವನ್ನು ಹೆಚ್ಚಿಸಿ ವಾಸ್ತವದತ್ತ ಗಮನಹರಿಸುವುದು ಒಳಿತು. ಚೀನಾ ಹಠಾತ್ತನೆ ಆರ್ಥಿಕ ಶಕ್ತಿಯಾಗಿ ಬೆಳೆದು ನಿಲ್ಲಲಿಲ್ಲ. ಇದರ ಹಿಂದೆ ಕೋಟ್ಯಂತರ ಜನರ ಶ್ರಮವಿದೆ, ಪ್ರಾಮಾಣಿಕತೆಯಿದೆ ಹಾಗೂ ಆಳುವ ಜನರ ದೂರದೃಷ್ಟಿ.
ನಮಗಿಂತ ಹಚ್ಚಿನ ಸಮಸ್ಯೆಗಳಿದ್ದ ಚೀನಾ ಇಂದು ಇಡೀ ವಿಶ್ವವೇ ಬೆರಗಾಗುವಂತಹ ಸಾಧನೆ ಮಾಡಿ ಇಡೀ ವಿಶ್ವದ ಆರ್ಥಿಕತೆಯನ್ನು ಹೆಚ್ಚು ಕಡಿಮೆ ತನ್ನ ನಿಯಂತ್ರಣಕ್ಕೆ ತೆಗೆದುಕೊಳ್ಳುವತ್ತ ಸಾಗುತ್ತಿದೆ. ಇದೇನು ಗನ್ ತೋರಿಸಿ ಮಾಡುವಂತಹ ಕಾರ್ಯವಲ್ಲ. ಸತತ ಪರಿಶ್ರಮ, ಗುರಿ ಹಾಗೂ ಕೆಚ್ಚದೆಯಿಂದ ಮಾತ್ರ ಇದು ಸಾಧ್ಯವಾಗುತ್ತದೆ. ಬಲಿಷ್ಟ ಆರ್ಥಿಕತೆ ಮಹಾನ್ ಮಿಲಿಟರಿ ಶಕ್ತಿಯನ್ನು ಸೃಷ್ಟಿಸುತ್ತದೆ ಹಾಗೂ ಪೋಷಿಸುತ್ತದೆ. ಯಾವುದೇ ದೇಶದ ಇತಿಹಾಸ ಓದಿದಾಗ, ಅದು ಜರ್ಮನಿ, ಜಪಾನ್, ಅಮೆರಿಕ ಸಂಯುಕ್ತ ಸಂಸ್ಥಾನ ಇರಬಹುದು. ಇತಿಹಾಸದ ನಿಷ್ಠುರ ಪಾಠವೇನೆಂದರೆ ಬಲಿಷ್ಟ ಆರ್ತಿಕತೆ ಮಹಾನ್ ಮಿಲಿಟರಿ ಶಕ್ತಿಗೆ ಬುನಾದಿ ಹಾಕುತ್ತದೆ ಎಂದು.
ಸಮಸ್ಯೆ ಇರುವುದು ಗಡಿ ಅತಿಕ್ರಮಿಸುವ ಚೀನಿ ಸೈನಿಕರಿಂದಲ್ಲ, ಗಡಿ ಯಾವುದೆಂದು ಕಳೆದ 52 ವರ್ಷಗಳಿಂದ ಗುರುತಿಸಲು ವಿಫಲವಾಗಿರುವ ನಮ್ಮ ಅಧಿಕಾರಿಗಳಿಂದ, ನಮ್ಮ ಆಡಳಿತಶಾಹಿ ವ್ಯವಸ್ಥೆಯ ನಿರ್ಲಜ್ಜ ಹೇಡಿತನದಿಂದ ಹಾಗೂ ಅದನ್ನು ಪೋಷಿಸುತ್ತಿರುವ ಭ್ರಷ್ಟ ರಾಜಕಾರಣಿಗಳಿಂದ ಮತ್ತು ಅವರನ್ನು ಆರಿಸಿ ಕಳುಹಿಸಿರುವ ನಮ್ಮಿಂದ. ಚೀನಾ ಗಡಿಯಲ್ಲಿ ನಡೆಯುವ ಅತಿಕ್ರಮಣವನ್ನು, ಅದನ್ನು ಅತಿ ರಂಜಿತವಾಗಿ ವರದಿಮಾಡುವ ಪತ್ರಿಕೆಗಳನ್ನು, ದೃಶ್ಯ ಮಾಧ್ಯಮಗಳನ್ನು ಹಾಗೂ ನಮ್ಮ ಜನಗಳನ್ನು ವಿಮರ್ಷೆ ಮಾಡುವ ಮೊದಲು, ಬನ್ನಿ ಒಬ್ಬ ಸಮಾನ್ಯ ಮನುಷ್ಯನಾಗಿ ಮೈಸೂರಿನಲ್ಲೋ, ಮಂಗಳೂರಿನಲ್ಲೋ ಒಂದು ಕೈಗಾರಿಕೆ ತೆಗೆದು ನೋಡಿ. ಆಗ ತಿಳಿಯುವುದು ನಮ್ಮ ದೇಶದ ವಿರಾಟ ಸ್ವರೂಪ. ನೀವು ಜಾಗ ಪಡೆದು, ನೀರು ಹಾಗೂ ವಿದ್ಯುತ್ ಸಂಪರ್ಕ ಪಡೆಯುವುದರಲ್ಲಿ ಹೈರಾಣವಾಗಿರುತ್ತೀರ. ನಂತರ ಕೆಲಸ ಹಿಡಿದು, ಕಾರ್ಮಿಕರನ್ನು ಹೊಂದಿಸಿ, ಕೆಲಸ ಮುಗಿಸಿ ಹೂಡಿದ ಹಣ ಮರಳಿಪಡೆಯುವುದರೊಳಗೆ ನಿಮಗೆ ಜನ್ಮ ಜನ್ಮಾಂತರದ ಕರ್ಮಗಳು ಕಾಡದಿದ್ದರೆ ಕೇಳಿ! ಆಧುನಿಕ ಬ್ಯಾಂಕಿಂಗ್ ವ್ಯವಸ್ಥೆಯ ಜೀತದಾಳುಗಳಾಗಿ ಬರಿ ರೈತರಷ್ಟೆ ಅಲ್ಲ, ಬಹುತೇಕ ಕೈಗಾರಿಕೊದ್ಯಮಿಗಳೂ ಸಹ ಪರಿವರ್ತಿತರಾಗುತ್ತಿರುವುದು ನಮ್ಮ ದೇಶದ ದರಂತ,
ಚೀನಾ ಬರಿ ಗಡಿಯಲ್ಲಷ್ಟೇ ಅಲ್ಲ, ಸಂಪೂರ್ಣ ಕೈಗಾರಿಕಾ ಕ್ಷೆತ್ರಗಳಲ್ಲೂ ಅತಿಕ್ರಮಣ ನಡೆಸುತ್ತಿದೆ. ಒಂದೆಡೆ ಕೊನೆಯೇ ಇಲ್ಲದ ಮಾರಾಟ ತೆರಿಗೆ, ಸೇವಾ ತೆರಿಗೆ, ಆದಾಯ ತೆರಿಗೆ, ಕಾರ್ಮಿಕ ಇಲಾಖೆ, ಪರಿಸರ ಮಾಲಿನ್ಯ ಮಂಡಳಿಗಳ ಎಂದೂ ಮುಗಿಯದ ಜಂಜಾಟಗಳು, ಬ್ಯಾಂಕಿನ ಬೃಹತ್ ಬಡ್ಡಿದರಗಳು, ಕಾರ್ಮಿಕ ಸಮಸ್ಯೆ, ವಿದ್ಯುತ್, ನೀರಿನ ಸಮಸ್ಯೆ ಹಾಗೂ ಕಡೆಯದಾಗಿ ಚೀನಾ ವಸ್ತುಗಳ ದರ ಪೈಪೋಟಿ ಇಂದು ನಮ್ಮ ದೇಶವನ್ನು ದುರ್ಬಲಗೊಳಿಸುತ್ತಿವೆ. ಗಡಿ ಭಾಗದಲ್ಲಿನ ಶತ್ರುಗಳ ಸಮಸ್ಯೆಯನ್ನೂ ಕಡೆಗಣಿಸುವಂತಿಲ್ಲವಾದರೂ, ನಮ್ಮ ಅರಿವಿಗೆ ಬಾರದೆ ಮೆಲ್ಲಗೆ ನಮ್ಮ ಸಾಮಾಜಿಕ ಹಂದರವನ್ನು ಹಾಳು ಮಾಡುತ್ತಾ ಹೊರಟಿರುವ ಈ ಆಂತರಿಕ ಸಮಸ್ಯೆ ಮೊದಲು ಬಗೆಹರಿಯಬೇಕು. ಇದೇ ಕಾರಣದಿಂದ ಶೇಕಡಾ 80 ರಷ್ಟು ಸಣ್ಣ ಹಾಗೂ ಮಧ್ಯಮ ಕೈಗಾರಿಕೆಗಳಿಂದು ರೋಗಗ್ರಸ್ಥವಾಗಿ ಮುಚ್ಚುತ್ತಿರುವುದು. ಇದಕ್ಕೆ ಜ್ವಲಂತ ಸಾಕ್ಷಿ ಯಾವುದೇ ಕೈಗಾರಿಕಾ ವಸಹಾತು ಪ್ರದೇಶದಲ್ಲಿ, ಎಷ್ಟೋಬಾರಿ ನಮ್ಮ ಕೈಗಾರಿಕಾ ಸಹವರ್ತಿಗಳಿಂದ ಖರೀದಿಸುವುದಕ್ಕಿಂತ ಚೀನಾ ಉತ್ಪನ್ನಗಳೇ ನಮಗೆ ಅಗ್ಗವಾಗಿ ದೊರೆಯುತ್ತವೆ.  ಇದು ಇಂದಿನ ದೇಶದ ಕೈಗಾರಿಕೆಗಳ ನೈಜ ಪರಿಸ್ಥಿತಿ. ದೇಶದ ಮೂಲೆ ಮೂಲೆಗಳಲ್ಲಿ ಪರಿಸ್ಥಿತಿ ಹೀಗಿರುವಾಗ ದೇಶದ ರಸ್ತೆ, ರಸ್ತೆಗಳಲ್ಲಿ, ಕೈಗಾರಿಕಾ ವಸಹಾತುಗಳಲ್ಲಿ, ಅಕ್ಷರಶಃ ಪ್ರತಿ ಹಂತದಲ್ಲೂ ನಾವು ಚೀನಿಯರಿಗೆ ಮಣಿಯುವ ಪರಿಸ್ಥಿತಿ ಉಂಟಾಗಿದೆ.
ಆದ್ದರಿಂದ ಗಡಿರೇಖೆಯಲ್ಲಿನ ಚೀನೀ ಭೂತವನ್ನು ನೋಡಿ ಹೆದರುತ್ತಾ ಕುಳಿತುಕೊಳ್ಳುವುದಕ್ಕಿಂತ, ಭಾರತದ ಆರ್ಥಿಕತೆಯನ್ನು ಬಲಾಢ್ಯವಾಗಿ ಬೆಳೆಸುವುದರತ್ತ ನಾವು ಗಮನಹರಿಸಬೇಕಾಗಿದೆ. ಅಧಿಕಾರದಲ್ಲಿದ್ದಾಗ ನಮ್ಮ ಇಂಧನ ಸಚಿವೆ ಪ್ರತಿ ಸ್ಥಾವರದಲ್ಲೂ ಚೀನಾ ಇಂಜಿನಿಯರ್‌ಗಳನ್ನು ನೋಡಿ ಹೆದರಿದರಷ್ಟೆ. ಆದರೆ ಅವರೇ ಯಾವ ಸ್ಥಳೀಯ ಇಂಧನ ಕೈಗಾರಿಕೆಗಳೂ ಹಾಗೂ ಪೂರೈಕೆದಾರರು ತಲೆ ಎತ್ತದಂತಹ ನೀತಿ ನಿಯಮಗಳನ್ನು ರೂಪಿಸಿ, ಚೀನಾ ಸಂಸ್ಥೆಗಳಿಗೆ ಸ್ವಾಗತ ಕೋರಿದರು. ಹಿತ್ತಲಗಿಡ ಮದ್ದಲ್ಲ ನೋಡಿ. ಸೌರಶಕ್ತಿ, ಪವನಶಕ್ತಿ ಬಳಕೆಗೆ ಸಾಕಷ್ಟು ಅವಕಾಶ ನೀಡದೆ ಬರೀ ಘೋಷಣೆಗೆ ಮಾತ್ರ ಸ್ಥಿಮಿತಗೊಳಿಸಿ ಹೊರ ರಾಜ್ಯಗಳಿಂದ ಅಪಾರ ವಿದ್ಯುತ್ ಖರೀದಿಸಲಾಯಿತು. ವಿವಿಧ ಇಲಾಖೆಗಳಲ್ಲಿ ನಡೆಯುತ್ತಿದ್ದ ಇಂಧನ ಉಳಿತಾಯ ಕಾರ್ಯಕ್ರಮಗಳನ್ನು ನಿಲ್ಲಿಸಿ ಇಂಧನ ಬಳಕೆ ಹೆಚ್ಚುವುದಕ್ಕೆ ಕಾರಣರಾದರು. ಇದೇ ರೀತಿ ಪ್ರತಿ ರಾಜ್ಯದಲ್ಲೂ ತೆಗೆದುಕೊಳ್ಳುತ್ತಿರುವ ದೂರದೃಷ್ಟಿಯಿಲ್ಲದ ನಿರ್ಧಾರಗಳು ಇಂದು ನಮ್ಮ ಭಾರತವನ್ನು ಈ ಪರಿಸ್ಥಿತಿಗೆ ತಳ್ಳಿವೆ. ಗಡಿಯಲ್ಲಿ ನಮ್ಮ ಸೈನಿಕರು ಕಣ್ಣೀರು ಹರಿಸುತ್ತಿದ್ದರೆ, ಅವರು ಅಸಹಾಯಕ ಪರಿಸ್ಥಿತಿಯಲ್ಲಿ ಪರದಾಡುತ್ತಿದ್ದರೆ, ಅದಕ್ಕೆ ಚೀನಾಕ್ಕಿಂತಲೂ ಹೆಚ್ಚಿನ ಕಾರಣ ನಮ್ಮ ವ್ಯವಸ್ಥೆಯೇ. ಹಾಗೆ ನೋಡಿದರೆ ಈ ಸಮಸ್ಯೆಗಳಿಗೆಲ್ಲ ಪರಿಹಾರ ಕೂಡ ನಮ್ಮ ಕೈಯಲ್ಲೇ ಇದೆ.

- ಹರ್ಷ ಎಮ್.ಎಲ್, ಮೈಸೂರು

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement