ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಅಂಕಣಗಳು

ಇಂಥ ಹೋರಾಟ ಯಾರ ಒಳಿತಿಗಾಗಿ?

ಸುರೂರ್ ಆಹಮದ್ ಅವರು ಉತ್ತರಪ್ರದೇಶದ ಮುಜಫರ್‌ನಗರದಲ್ಲಿನ ಕೋಮು ಗಲಭೆಗೆ...

Mainashree
Updated On : 11 Oct 2013, 11:56 am

ಸುರೂರ್ ಆಹಮದ್ ಅವರು ಉತ್ತರಪ್ರದೇಶದ ಮುಜಫರ್‌ನಗರದಲ್ಲಿನ ಕೋಮು ಗಲಭೆಗೆ ಸಂಬಂಧಿಸಿದಂತೆ ಮತ್ತು ಇನ್ನಿತರ ಪ್ರಚಲಿತ ವಿದ್ಯಮಾನಗಳಿಗೆ ಸಂಬಂಧಿಸಿದಂತೆ ಚಿಂತನಾತ್ಮಕ ವಿಷಯಗಳನ್ನು ತೆರೆದಿಟ್ಟಿದ್ದಾರೆ. ಅದರಲ್ಲೂ ಸುರೂರ್ ಅಹಮದ್ ಬಿಚ್ಚಿಟ್ಟ ಕೆಲವೊಂದು ಸಂಗತಿಗಳು ನಿಜಕ್ಕೂ ದಿಗಿಲು ಮೂಡಿಸುವಂತಿವೆ. ಪವಿತ್ರ ರಂಜಾನ್ ತಿಂಗಳ ನಂತರ ಈದ್ ದಿನದಂದು ಮುಸ್ಲಿಂ ಯುವಕರು ಮದ್ಯಪಾನ ಮಾಡಿ ಗಲಾಟೆ ಮಾಡಿರುವುದು, ತನ್ಮೂಲಕ ಮುಸ್ಲಿಮರ ಆಸ್ತಿಪಾಸ್ತಿಗಳಿಗೇ ಹೆಚ್ಚು ಹಾನಿಯುಂಟಾಗಲು ಕಾರಣವಾದದ್ದು. ರಸ್ತೆಯಲ್ಲಿ ಸಂಗೀತ ಹಚ್ಚಿಕೊಂಡು ರಾತ್ರಿಯೆಲ್ಲಾ ಮಸೀದಿಯ ಮುಂದೆ ಕುಣಿಯುವುದು. ಶಬ್- ಎ-ಬರಾತ್ ರಾತ್ರಿಗಳಂದು ಮುಸ್ಲಿಂ ಹುಡುಗರು ರಸ್ತೆಯಲ್ಲಿ ತಮ್ಮ ಬೈಕ್‌ಗಳನ್ನು ದೆವ್ವ ಹಿಡಿದವರಂತೆ ಓಡಿಸುವುದು ಇತ್ಯಾದಿ.
ದುರದೃಷ್ಟವಶಾತ್ ಇಂತಹವರಿಂದ ಮುಸ್ಲಿಂ ಸಮುದಾಯಕ್ಕೇ ಹಾನಿಯಾಗುತ್ತಿದೆ. ಹೀಗೆ ದಾರಿ ತಪ್ಪಿದ ಯುವಕರಿಗೆ ಧರ್ಮದ ನಿಜವಾದ ಅಂತಃಸತ್ವವನ್ನು ತಿಳಿ ಹೇಳಿ ಅವರಲ್ಲಿ ವಿನಮ್ರತೆ, ವಿಚಾರಶೀಲಗುಣಗಳನ್ನು ಬೆಳೆಸಿ ಸೂಕ್ತ ಮಾರ್ಗದರ್ಶನ ನೀಡಿ ರಾಷ್ಟ್ರದ ಮುಖ್ಯವಾಹಿನಿಯಲ್ಲಿ ಕರೆದೊಯ್ಯಬೇಕೆಂಬ ಅಂಕಣಕಾರರ ಕಳಕಳಿ ಈ ಲೇಖನಕ್ಕೆ ಸ್ಫೂರ್ತಿಯೆಂದರೆ ತಪ್ಪಿಲ್ಲ.
ಶತಮಾನಗಳಿಂದ ನಮ್ಮ ಭಾರತೀಯ ಸಮಾಜ ಸಹನೆ ಮತ್ತು ಸಹಿಷ್ಣುತೆಯ ಮೌಲ್ಯಗಳಿಗೆ ಹೆಸರಾಗಿದೆ. ಜೀವ, ಈಶ್ವರ ಮತ್ತು ಜಗತ್ತಿನ ಬಗ್ಗೆ ಅದ್ಭುತವೂ, ಅನಂತವೂ ಉಜ್ವಲವೂ ಆದ ವಿಶ್ವ ದರ್ಶನದ ತಳಹದಿಯ ಮೇಲೆ ನಿಂತ ಮಹಾ ತತ್ವಗಳು ಹುಟ್ಟಿದ್ದು ಈ ಭಾರತದ ಮಣ್ಣಿನಲ್ಲಿ. ಬುದ್ಧ, ಬಸವಣ್ಣ, ರಾಮಕೃಷ್ಣ ಪರಮಹಂಸ, ಸ್ವಾಮಿ ವಿವೇಕಾನಂದ, ರಮಣ ಮಹರ್ಷಿ, ಸಂತ ತುಕಾರಾಂ, ಕಬೀರ್ ಇವರೆಲ್ಲರ ಮನುಷ್ಯ-ದೇವರು, ಮನುಷ್ಯ-ಮನುಷ್ಯರು, ಮನುಷ್ಯ ಮತ್ತು ಪ್ರಕೃತಿಯ ನಡುವಿನ ನಿರಂತರ ಸಂಬಂಧಗಳಲ್ಲಿನ  ಅನುಭವ ವಿಸ್ಮಯ ಹುಟ್ಟಿಸುತ್ತಿತ್ತು. ಧರ್ಮವೆಂದರೆ ಬರೀ ನಂಬಿಕೆಯಲ್ಲ, ಬದಲಾಗಿ ಸಚ್ಚಾರಿತ್ರ್ಯ ಮತ್ತು ಸದ್ಗುಣಗಳಾಗಿವೆ.
ಹಿಂದು ಮತ್ತು ಮುಸ್ಲಿಮರು ಭಾರತದಲ್ಲಿ ಸಾವಿರಾರು ವರ್ಷಗಳಿಂದ ಅನ್ಯೋನ್ಯವಾಗಿ ಬದುಕುತ್ತಿದ್ದಾರೆ. ಅಜ್ಮೀರ್, ನಯನ ಮನೋಹರವಾದ ಅರಾವಳಿ ಪರ್ವತ ಶ್ರೇಣಿಯ ತಪ್ಪಲಲ್ಲಿದೆ. ಪುಷ್ಕರವೆಂಬ ಪವಿತ್ರ ಸರೋವರವೂ ಅಲ್ಲಿ ಹರಿಯುತ್ತಿದೆ. ಈ ಎರಡು ಪವಿತ್ರ ಸ್ಥಳಗಳು ಭಾರತದ ಎರಡು ಧರ್ಮಗಳ ನಡುವಿನ ಮಧುರ ಬಾಂಧವ್ಯದ ಪ್ರತೀಕವಾಗಿವೆ. ಯಾವ ನಾಡಿನಲ್ಲಿ ಬಾಳುತ್ತೇವೋ ಆ ನಾಡನ್ನು ಪ್ರೀತಿಸುವುದು ಧರ್ಮದ ತಳಹದಿಯೆಂಬ ಮೊಹಮದ್ ಪೈಗಂಬರರ ಮಾತು ನಿಜಕ್ಕೂ ಅರ್ಥಪೂರ್ಣ.
ಸಾಂಪ್ರದಾಯಿಕ ಇಸ್ಲಾಮಿಕ್ ದೇಶಗಳಲ್ಲಿ ಧಾರ್ಮಿಕ-ಸಾಂಸ್ಕೃತಿಕ ವೈವಿಧ್ಯತೆಗಳಿಗೆ ಹೆಚ್ಚಿನ ಅವಕಾಶಗಳಿತ್ತು. ಇಸ್ಲಾಮಿನ ಉಗಮದ ಚರಿತೆ ಮತ್ತು ಸಮಾಜ ಶಾಸ್ತ್ರೀಯ ದೃಷ್ಟಿಕೋನದಿಂದ ನೋಡುವುದಾದರೆ ಅದು ಬಹುರೂಪಿ ಸಮಾಜದ ಲಕ್ಷಣಗಳನ್ನು ಮೈಗೂಡಿಸಿಕೊಂಡಿತ್ತು. ಇತರ ಸಂಸ್ಕೃತಿಗಳನ್ನು ಸಜಾತೀಕರಣಗೊಳಿಸುವುದಾಗಲೀ ಅವುಗಳನ್ನು ನಾಶ ಮಾಡುವ ಧೋರಣೆಗಳನ್ನಾಗಲಿ ಅದು ಹೊಂದಿರಲಿಲ್ಲ.
ಇಂದಿನ ಸಂಕೀರ್ಣ ಸಾಮಾಜಿಕ ಮತ್ತು ಸಾಂಸ್ಕೃತಿಕ ಸ್ಥಿತ್ಯಂತರಗಳು ಮತ್ತು ಪ್ರತಿರೋಧಗಳ ಹಿನ್ನೆಲೆಯಲ್ಲಿ ಇವುಗಳನ್ನು ನೋಡುವುದು ಹೆಚ್ಚು ಸೂಕ್ತವೆನಿಸುತ್ತದೆ. ಇಸ್ಲಾಮ್ ಧಾರ್ಮಿಕ ಸಾಂಸ್ಕೃತಿಕ ವೈವಿಧ್ಯತೆಗಳ ಬಗ್ಗೆ ಹೊಂದಿರುವ ನಿಲುವಿನ ಬಗ್ಗೆ ಭಿನ್ನಾಭಿಪ್ರಾಯಗಳಿರಬಹುದು. ಆದರೆ ಇತರೆ ಧರ್ಮ ಸಂಸ್ಕೃತಿಗಳ ಬಗ್ಗೆ ಅದು ಹೊಂದಿರುವ ಸಹಿಷ್ಣುತೆ ಮತ್ತು ಗೌರವ ಭಾವನೆಯನ್ನು ಯಾರಿಗೂ ತಳ್ಳಿ ಹಾಕಲು ಸಾಧ್ಯವಿಲ್ಲ. ವಿಭಿನ್ನ ಸಂಸ್ಕೃತಿಗಳು ಕೂಡಿ ಬಾಳುವುದು ಮತ್ತು ಪರಸ್ಪರ ಗೌರವಿಸುವ ವಿಚಾರವನ್ನು ಪವಿತ್ರ ಖುರಾನ್ ಒತ್ತಿ ಹೇಳಿದೆ.
"ಧರ್ಮದಲ್ಲಿ ಬಲಾತ್ಕಾರವಿಲ್ಲ (2:256), ಮುಂದುವರಿದು ಪ್ರವಾದಿಯವರಿಗೆ ದೇವರ ನಿರ್ದೇಶನವೇನೆಂದರೆ ನಿಮಗೆ ನಿಮ್ಮ ಧರ್ಮ ನನಗೆ ನನ್ನ ಧರ್ಮ (ಖುರಾನ್ 109:6) ಎಲ್ಲಾ ಸಂದೇಶವಾಹಕರ ಮೂಲಭೂತ ದೌತ್ಯವೇ ಜನರನ್ನು ಸತ್ಯ ಮತ್ತು ಒಳಿತಿನೆಡೆಗೆ ಮಾರ್ಗದರ್ಶನ ಮಾಡುವುದಾಗಿದೆ. ನಿಮ್ಮ ಪ್ರಭು (ದೇವನು) ಬಯಸಿದ್ದಾಗಿದ್ದರೆ ಇಡೀ ಮಾನವ ಕುಲವನ್ನು ಒಂದೇ ಜನ ವಿಭಾಗವಾಗಿ ಮಾಡಬಹುದಿತ್ತು. ಬದಲಾಗಿ ಧಾರ್ಮಿಕ ಸಾಂಸ್ಕೃತಿಕ ವೈವಿಧ್ಯತೆಯು ದೇವರ ಯೋಜನೆ (ಎ್ಟಜ'ಡ ಝ್ಛಜಟಜ) ಯಾಗಿದೆ."
ಜಗತ್ತಿನ ಸೃಷ್ಟಿಯ ಹಿಂದಿರುವ ಏಕೈಕ ಉದ್ದೇಶವು ಸಾಮರಸ್ಯವೇ ಹೊರತು ಜಾಗತಿಕ ಸಮುದಾಯದ ನಡುವಿನ ಪ್ರತ್ಯೇಕತೆಯಲ್ಲವೆಂಬುದು ಇದರಿಂದ ಸ್ಪಷ್ಟವಾಗುತ್ತದೆ. ಖುರಾನ್ ಅಥವಾ ಇಸ್ಲಾಮಿನ ಚಾರಿತ್ರಿಕ ಸಂಪ್ರದಾಯಗಳೆಂದೂ ಸಮರಸ ಜೀವನ ಮತ್ತು ಮಾನವರ ನಡುವಿನ ಸ್ನೇಹ ಸಹಕಾರಗಳಿಗೆ ಕಿಂಚಿತ್ತೂ ವಿರುದ್ಧವಾಗಿರಲಿಲ್ಲ.
ಒಂದು ಘಟ್ಟದಲ್ಲಿ ಮೆಕ್ಕಾದಿಂದ ಗತ್ಯಂತರವಿಲ್ಲದೆ ಮದೀನಾಕ್ಕೆ ವಲಸೆ ಬಂದಿದ್ದವರ ಸಮಸ್ಯೆಯನ್ನು ಪರಿಹರಿಸಲು ಪ್ರವಾದಿಯವರು ಒಂದು ವಿಶಿಷ್ಟ ವಿಧಾನವನ್ನು ಅನುಸರಿಸಿದ್ದರು. ಇದನ್ನು ಮುವಖ್ಖತ್ (ಸಹೋದರ ಆತಿಥ್ಯ) ಎಂದು ಕರೆಯಲಾಗಿತ್ತು. ಮೆಕ್ಕಾದಿಂದ ಬಂದಿದ್ದ ಮುಸ್ಲಿಮೇತರರನ್ನು ಮದೀನಾದ ಮುಸ್ಲಿಮರು ತಮ್ಮ ಮನೆಯಲ್ಲಿರಿಸಿ ಸಹೋದರ ಭಾವನೆಯಿಂದ ಆತಿಥ್ಯ ನೀಡುವುದು. ಆದರೆ ಮದೀನಾಕ್ಕೆ ವಲಸೆ ಬರುವುದು ಮೆಕ್ಕಾದ ಕೆಲವು ನಾಯಕರಲ್ಲಿ ಆತಂಕ ಮೂಡಿಸಿದ್ದು ಮದೀನಾ ನಗರದ ಮೇಲೆ ಆಕ್ರಮಣ ನಡೆಯುವ ಸಾಧ್ಯತೆಗಳಿದ್ದುದರಿಂದ. ಮದೀನಾದಲ್ಲಿದ್ದ ಹೆಚ್ಚಿನ ಸಂಖ್ಯೆಯ ಯಹೂದಿಗಳು ಮತ್ತಿತರ ಗುಂಪುಗಳು ಹೊರಗಿನ ಶಕ್ತಿಗಳ ವಿರುದ್ಧ ಮದೀನಾವನ್ನು ರಕ್ಷಿಸುವುದಕ್ಕೆ ಕಟಿಬದ್ಧರಾಗಿದ್ದರು. ಈ ಹಿನ್ನೆಲೆಯಲ್ಲಿ ಮದೀನಾದ ಪ್ರತಿಯೊಬ್ಬ ನಾಗರೀಕರ ಹಕ್ಕುಗಳನ್ನು ರಕ್ಷಿಸುವ ಮತ್ತು ಆಡಳಿತ ವ್ಯವಸ್ಥೆ ಜನರಿಗೆ ಸಂಪೂರ್ಣ ಉತ್ತರದಾಯಿತ್ವವನ್ನು ಖಾತರಿಗೊಳಿಸುವ ಲಿಖಿತ ಸಂವಿಧಾನವನ್ನು ರಚಿಸಲಾಯಿತು. ಇದೊಂದು ಚಾರಿತ್ರಿಕ ಪ್ರಯೋಗವೆನ್ನಬಹುದು. ಈ ಸಂವಿಧಾನ ನಾಗರೀಕರಿಗೆ ಪೂರ್ಣ ಧಾರ್ಮಿಕ ಸಾಮಾಜಿಕ ಸಾಂಸ್ಕೃತಿಕ ಸ್ವಾತಂತ್ರ್ಯವನ್ನು ನೀಡಿತ್ತು. ಇದರ ಒಂದು ವಿಧಿ ಸ್ಪಷ್ಟವಾಗಿ ಮುಸ್ಲಿಮರಿಗೆ ಮುಸ್ಲಿಮರ ಧರ್ಮ, ಯಹೂದಿಗಳಿಗೆ ಯಹೂದಿಗಳ ಧರ್ಮವೆಂದು ಸಾರಿತ್ತು. ಮದೀನಾಕ್ಕೆ ಬಂದಿದ್ದ ನಜರನ್ ಕ್ರಿಶ್ಚಿಯನ್‌ರಿಗೆ ದೇವರು ಮತ್ತು ಸಂದೇಶವಾಹಕರ ಅಭಯವಿದೆ. ಅವರ ಭೂಮಿ ಸೊತ್ತು, ಚರ್ಚು ಮತ್ತು ಪುರೋಹಿತರಿಗೆ ಸಂಪೂರ್ಣ ರಕ್ಷಣೆಯನ್ನು ನೀಡುವ ವಾಗ್ದಾನವನ್ನು ಇದರಲ್ಲಿ ನೀಡಲಾಗಿತ್ತು. ಪ್ರವಾದಿಯವರ ನಂತರ ಅವರ ಉತ್ತರಾಧಿಕಾರಿಗಳಾದ ಖಲೀಫರು ನಜರನ್ ಕ್ರಿಶ್ಚಿಯನ್ನರಿಗೆ ಸಂಬಂಧಿಸಿದಂತೆ ಪ್ರವಾದಿಯವರ ನೀತಿಗಳನ್ನೇ ಮುಂದುವರಿಸಿರುವುದು ಗಮನಾರ್ಹ. ತಾಯಿಫ್‌ನಿಂದ ಬಂದಿದ್ದ ಕ್ರಿಶ್ಚಿಯನ್ ನಿಯೋಗವೊಂದಕ್ಕೆ ಪ್ರವಾದಿಯವರು ಮಸೀದಿಯಲ್ಲೇ ತಂಗಲು ಅನುಮತಿ ನೀಡಿ ವಿಶೇಷ ಆತಿಥ್ಯ ನೀಡಿ ಪ್ರಾರ್ಥನಾ ವಿಧಿಗಳನ್ನು ನಡೆಸುವಂತೆ ಹೇಳಿದ್ದರು.
 ಖಾಲಿದ್ ಬಿನ್ ವಲೀದ್ ತನ್ನ ಸೇನೆಯೊಂದಿಗೆ ಸಿರಿಯಾ ಪ್ರವೇಶಿಸಿದಾಗ ಅಲ್ಲಿನ ಜನರು ವಿಶೇಷ ಸ್ವಾಗತ ಕೋರಿದ್ದರು. ಕ್ರಿಶ್ಚಿಯನ್ ಬಾಹುಳ್ಯದ ಹಿರಾ ಪ್ರದೇಶದಲ್ಲಿ ಕ್ರಿಶ್ಚಿಯನ್ನರು ಮತ್ತು ಅವರ ಚರ್ಚ್‌ಗಳಿಗೆ ಸಂಪೂರ್ಣ ರಕ್ಷಣೆಯನ್ನು ನೀಡುವುದಾಗಿ ವಾಗ್ದಾನವಿತ್ತ ಖಾಲಿದ್ ಚರ್ಚ್‌ಗಳಿಗೆ ಅಗೌರವ ತೋರುವುದಾಗಲಿ ಹಾನಿಗೊಳಿಸುವುದಾಗಲಿ ಮಾಡಬಾರದೆಂದು ತಾಕೀತು ಮಾಡಿದ್ದರು.
ಖಲೀಫಾ ಉಮರ್‌ರವರು ಮುಸ್ಲಿಮೇತರ ಬಂಧುಗಳಿಗೆ ನ್ಯಾಯ ದೊರಕಿಸಿಕೊಡುವಲ್ಲಿ ಮಾದರಿಯಾಗಿದ್ದರು. ಒಮ್ಮೆ ಅಲ್ಲಿನ ಮುಸ್ಲಿಮರು ಯಹೂದಿಗಳಿಗೆ ಸೇರಿದ ಒಂದು ಪುಟ್ಟ ಸ್ಥಳವನ್ನು ಆಕ್ರಮಿಸಿ ಒಂದು ಮಸೀದಿ ನಿರ್ಮಿಸಿದ್ದು ಖಲೀಫಾರವರ ಗಮನಕ್ಕೆ ಬಂದಾಗ ಅದನ್ನು ಒಡೆದು ಹಾಕಿ ಆ ಸ್ಥಳವನ್ನು ನಿಜವಾದ ವಾರಸುದಾರರಿಗೆ ಮರಳಿಸುವಂತೆ ಕಟ್ಟಾಜ್ಞೆಯನ್ನು ಹೊರಡಿಸಿದ್ದರು.
ಹೀಗೆ ಖುರಾನ್ ಮತ್ತು ಪ್ರವಾದಿಯವರ ಆದರ್ಶ ನಡೆ ನುಡಿಗಳು ಮಾತ್ರ ಮುಸ್ಲಿಂ ಆಡಳಿತಗಾರರಿಗೆ ಮತ್ತು ಮುಸ್ಲಿಮರ ಹಿತರಕ್ಷಣೆ ಹೊತ್ತ ನಾಯಕರಿಗೆ ಮಾದರಿಯಾಗಬೇಕಲ್ಲವೇ?
ಮತಾಂಧರು, ಅಧಿಕಾರದಾಹಿಗಳು ವಿಧ್ವಂಸಕ ಕೃತ್ಯಗಳಿಗೆ ಮುಸ್ಲಿಂ ಯುವಕರನ್ನು ಬ್ರೈನ್‌ವಾಶ್ ಮಾಡಿ, ಭಯೋತ್ಪಾದಕರೆಂಬ ರಕ್ತಪಿಪಾಸುಗಳನ್ನು ಹುಟ್ಟುಹಾಕಿ ಇಸ್ಲಾಮಿಗೆ ಮತ್ತು ಇಡೀ ಮಾನವ ಕುಲಕ್ಕೇ ಕಳಂಕ ಪ್ರಾಯರಾಗಿದ್ದಾರೆ. ಇವರೆಂದೂ ಇಸ್ಲಾಮಿಗೆ ಮತ್ತು ಮುಸ್ಲಿಮರಿಗೆ ಮಾದರಿಯಾಗಲು ಸಾಧ್ಯವಿಲ್ಲ.
'ಜಿಹಾದ್‌' ಎನ್ನುವುದು ನಮ್ಮೊಳಗಿನ ಕೆಡುಕು, ಆಸೆ ಆಮಿಷಗಳ ವಿರುದ್ಧದ ಹೋರಾಟ. ಬದಲಾಗಿ ಅದೊಂದು ಹಿಂಸಾಕ್ರಾಂತಿಯಲ್ಲ. ಆದರೆ ಇಂದು ಜಿಹಾದ್‌ನ್ನು ಅಪಹಾಸ್ಯಕ್ಕೊಳಪಡಿಸಲಾಗಿದೆ. ಕಸಬ್‌ನಂತಹ ಯುವಕರ ತಲೆ ಕೆಡಿಸಿ "ನೀನು ಭಯೋತ್ಪಾದಕ ದಾಳಿ ನಡೆಸಿದರೆ ನೇರ ಸ್ವರ್ಗಕ್ಕೆ ಹೋಗುತ್ತೀ" ಎಂದು ದಾರಿ ತಪ್ಪಿಸುವವರಿಗೆ ಇಸ್ಲಾಮಿನ ಕುರಿತು ಏನು ಗೊತ್ತು?
ಹಸಿದವರಿಗೆ ತುತ್ತು ನೀಡುವುದು, ನೊಂದವರ ದುಃಖವನ್ನು ನಿವಾರಿಸುವುದು, ಕಷ್ಟಕ್ಕೀಡಾದವರಿಗೆ ಸಹಾಯ ಹಸ್ತ ನೀಡುವುದು, ದುಃಖಿತರ ಮನಸ್ಸನ್ನು ಸಂತೃಪ್ತಗೊಳಿಸುವುದು ನಿಜವಾದ ಧರ್ಮದ ತಿರುಳು. ಇದನ್ನು ಖುರಾನಿನಲ್ಲಿ ಹೇಳಿಲ್ಲವೇ?
ಇದನ್ನೇಕೆ ನಾವು ಪಾಲಿಸುತ್ತಿಲ್ಲ? ನಮ್ಮ ಬುದ್ಧಿಶಕ್ತಿ ಮತ್ತು ಸಂಪನ್ಮೂಲಗಳನ್ನು ಈ ನಿಟ್ಟಿನಲ್ಲಿ ಸದ್ಭಳಕೆ ಮಾಡಿದ್ದರೆ ಇಂದು ಮುಸ್ಲಿಮರ ಸ್ಥಿತಿ ಭಾರತದಲ್ಲಿ ಅತ್ಯಂತ ಉಚ್ಛ್ರಾಯ ಸ್ಥಿತಿಯಲ್ಲಿರುತ್ತಿತ್ತು. ಯುವಕರಿಗೆ ಅತ್ಯುತ್ತಮ ಭವಿಷ್ಯದ ಹಾದಿಗಳನ್ನು ತೆರೆಯಬಹುದಿತ್ತು. ಅದು ಬಿಟ್ಟು ಯಾವುದೋ ವಿದೇಶಿ ಸಂಘಟನೆಗಳಿಂದ ಬರುವ ಎಂಜಲು ಕಾಸಿಗೆ ಬಲಿಬೀಳಿಸಿಯೋ ಅಥವಾ ಧರ್ಮದ ನಶೆಯೇರಿಸಿ ವಿನಾಶಕಾರಿ ಕೃತ್ಯಗಳಿಗೆ ಮುಗ್ಧ ಯುವಕರನ್ನು ಬಲಿಪಶು ಮಾಡುವ ಜಿಹಾದ್‌ನಿಂದ ಯಾರಿಗೆ ಒಳಿತಾಗುತ್ತದೆ? ಧರ್ಮ ಹೇಗೆ ಬೆಳೆಯುತ್ತದೆ?
ಇನ್ನು ದೈವನಿಂದನೆ ಅಥವಾ ಧರ್ಮನಿಂದನೆ. ಧರ್ಮದ ಬಗೆಗಿನ ಅಜ್ಞಾನ, ತಪ್ಪು ಗ್ರಹಿಕೆ ಅಥವಾ ಇನ್ನಿತರ ಪ್ರಲೋಭನೆಗಳಿಂದ ಕೆಲವರು ಇಂತಹ ಕೃತ್ಯಗಳನ್ನು ಮಾಡಬಹುದು. ಆಗ ಸಮಸ್ಯೆಯ ಮೂಲವನ್ನು ಕಂಡು ಹಿಡಿದು ಚರ್ಚೆ, ಸಂವಾದಗಳಲ್ಲಿ ತೊಡಗಿ ಅವರ ತಪ್ಪು ಕಲ್ಪನೆಗಳನ್ನು ನಿವಾರಿಸಬೇಕೆಂಬುದು ಇಸ್ಲಾಮಿನ ದೃಷ್ಟಿಕೋನವಾಗಿದೆ. ಪ್ರವಾದಿಯವರನ್ನು ನಿಂದಿಸಿದಾಗ ಸ್ವತಃ ಅವರು ಯಾವುದೇ ಪ್ರತೀಕಾರವನ್ನು ತೋರದೆ ತಮ್ಮ ಅನುಚರರಾದ ಹಸನ್ ಬಿನ್-ಸಾಬಿತ್‌ರನ್ನು, ತಪ್ಪು ಗ್ರಹಿಕೆಗಳನ್ನು ಸರಿಪಡಿಸಿ ಸಂವಾದದಲ್ಲಿ ತೊಡಗಲು ಕಳುಹಿಸಿದ ಉದಾಹರಣೆಗಳಿವೆ.
ಭಾರತದಲ್ಲಿ ಸೂಫಿ ಮತ್ತು ಭಕ್ತಿ ಚಳವಳಿಗಳು ಹಿಂದು ಮುಸ್ಲಿಂ ಭಾವೈಕ್ಯತೆಗೆ ನಾಂದಿ ಹಾಡಿತ್ತು. ಪ್ರವಾದಿಯವರ ಕಾಲದಲ್ಲೇ ಕೇರಳಕ್ಕೆ ಬಂದ ಹಝ್ರತ್ ಮಾಲಿಕುದ್ದೀನಾರ್ ಮತ್ತು ಹನ್ನೆರಡು ಸಂತರು ನಂತರದಲ್ಲಿ ಅಜ್ಮೀರ್ ಖ್ವಾಜಾ ಮೊಹಿನುದ್ದೀನ್ ಚಿಸ್ತಿ ಮುಂತಾದ ಸೂಫಿಗಳ ಗುಣ ನಡತೆ ಸಹೃದಯತೆ ಅನುಪಮ ಧಾರ್ಮಿಕ ನೈತಿಕ ಮೌಲ್ಯಗಳನ್ನು ಮೆಚ್ಚಿ ಇಲ್ಲಿನ ಹಿಂದು ರಾಜರು, ಹಿಂದು ಸಹೋದರರು ಅವರನ್ನು ಸ್ವಾಗತಿಸಿ ಎಲ್ಲಾ ರೀತಿಯ ಸಹಕಾರಗಳನ್ನು ನೀಡಿ ಇಸ್ಲಾಮಿನ ಸುಂದರ ತತ್ವಾದರ್ಶನಗಳು ಭಾರತದ ಮಣ್ಣಿನಲ್ಲಿ ತಳವೂರಲು ಕಾರಣೀಭೂತರಾದರೆಂಬುದನ್ನು ನಾವು ಮರೆಯುವಂತಿಲ್ಲ. ಇಂತಹ ಮಹಾಪುರುಷರು ತೋರಿದ ಇಸ್ಲಾಂ ಮಾತ್ರ ನೈಜ ಇಸ್ಲಾಂ. ಮುಸ್ಲಿಂ ವೇಷಧಾರಿ, ಧರ್ಮದ ಹೆಸರಿನಲ್ಲಿ ಅಕ್ರಮ, ಅನೀತಿ, ಹಿಂಸೆ ಮತ್ತು ಕ್ರೌರ್ಯಗಳನ್ನು ಎಸಗುವವರು ಇಸ್ಲಾಮಿನ ಆದರ್ಶಗಳ ವಕ್ತಾರರಾಗಲು ಸಾಧ್ಯವಿಲ್ಲ. ಅನಾಗರೀಕತೆ, ಪೈಶಾಚಿಕತೆ ಮತ್ತು ಮಾನವ ದ್ವೇಷದ ಮೂಲಕ ಇಸ್ಲಾಮಿನ ಸಂಸ್ಥಾಪನೆ ಮಾಡಿ ಉದ್ಧರಿಸಲು ಈ ಕಿರಾತಕರಿಗೆ ಹೊಣೆ ವಹಿಸಿದವರು ಯಾರು. ಧರ್ಮದ ವಾರಸುದಾರರೆಂದು ತಮ್ಮನ್ನು ಬಿಂಬಿಸಿಕೊಳ್ಳುತ್ತಾ ಮುಗ್ಧರು ಮಕ್ಕಳು, ಮಹಿಳೆಯರು ಮತ್ತು ಅಮಾಯಕರನ್ನು ಬಲಿ ತೆಗೆದುಕೊಳ್ಳುವ ಈ ದುರುಳರು ಇಸ್ಲಾಮಿನ ಮುಖವಾಡ ಧರಿಸಿ ತಮ್ಮ ನೀಚತನ ಮತ್ತು ಕಪಟತನದಿಂದ ತಪ್ಪು ಸಂದೇಶವನ್ನು ನೀಡುತ್ತಿದ್ದಾರೆ. ಈ ಬಗ್ಗೆ ಧರ್ಮದ ಬಗ್ಗೆ ಅಪಾರ ಜ್ಞಾನವುಳ್ಳ ಪಂಡಿತರು, ಸುಶಿಕ್ಷಿತರು, ಇಸ್ಲಾಮಿನ ನೈಜ ಅನುಯಾಯಿಗಳು ಧ್ವನಿಯೆತ್ತ ಬೇಕಾದ ಅನಿವಾರ್ಯತೆಯಿದೆ.

- ಮೊಹಮ್ಮದ್ ಮುಸ್ತಫಾ ಆತೂರು
mustafa_kuvempu@yahoo.co.in

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement