ಅಂಕಣಗಳು

ಅಮೆರಿಕದ ಅಹಂಕಾರ ಮುರಿದ ವಿಯೆಟ್ನಾಂನ ಬರಿಗಾಲ ಸೇನೆ!

ಉಳಿದೆಲ್ಲಾ ನಾಯಕರಿಗಿಂತಲೂ, ಸೇನಾ ನಾಯಕರಿಗಿರುವ ವರ್ಚಸ್ಸು ವಿಶಿಷ್ಟವಾದದ್ದು. 2ನೇ ವಿಶ್ವಯುದ್ಧದಲ್ಲಿ ಕೆಚ್ಚೆದೆಯಿಂದ ತಮ್ಮ ಸೇನೆ...

ಉಳಿದೆಲ್ಲಾ ನಾಯಕರಿಗಿಂತಲೂ, ಸೇನಾ ನಾಯಕರಿಗಿರುವ ವರ್ಚಸ್ಸು ವಿಶಿಷ್ಟವಾದದ್ದು. 2ನೇ ವಿಶ್ವಯುದ್ಧದಲ್ಲಿ ಕೆಚ್ಚೆದೆಯಿಂದ ತಮ್ಮ ಸೇನೆಯನ್ನು ಮುನ್ನಡೆಸಿ ಇತಿಹಾಸದ ಪುಟಗಳಲ್ಲಿ ತಮ್ಮ ಹೆಸ ರು ಬರೆದ ಹಲವಾರು ಸೇನಾ ನಾಯಕರಿದ್ದಾರೆ. ಪ್ಯಾಟನ್, ಮಾಂಟಗೋಮೆರಿ, ರಾಮೆಲ್(ಮರುಭೂಮಿಯ ನರಿ), ಈಸನ್‌ಹಾವರ್, ಎವೆನ್ ಟೋಜೋ, ಯಾಮಾಮೋಟೋ, ಬಾಮಾಶೀತಾ ಇತ್ಯಾದಿ. ಇನ್ನು ಜನರಲ್ ಕರಿಯಪ್ಪ ಅವರ ಹೆಸರೂ ಭಾರತೀಯರ ಮಾನಸದಲ್ಲಿ ಚಿರಸ್ಥಾಯಿಯಾಗಿದೆ. ತಿಮ್ಮಯ್ಯ ಮತ್ತು ಮಾನೆಕ್‌ಶಾ ತಮ್ಮ ವಿಶಿಷ್ಟ ನಡೆನುಡಿಗಳಿಂದ ಹೀರೋಗಳಾಗಿ ಹೆಸರುವಾಸಿಯಾದವರು. ಈ ಎಲ್ಲಾ ಸೇನಾ ನಾಯಕರ ಸಾಮರ್ಥ್ಯವನ್ನೂ, ಸೇವೆಯನ್ನು ಗೌರವಿಸಲೇಬೇಕು. ಆದರೆ ಸೇನೆಯನ್ನು ಕೆಚ್ಚೆದೆಯಿಂದ ಮುನ್ನಡೆಸಿದವರ ವಿಷಯ ಬಂದಾಗಲೆಲ್ಲ ನನಗೆ ಮೊದಲು ನೆನಪಾಗುವ ಹೆಸರು ಜನರಲ್ "ವೋ ಗುವೆನ್ ಜಿಯಾಪ್‌" ಅವರದ್ದು. ವಿಯೆಟ್ನಾಂನ ಸೇನಾ ಇತಿಹಾಸದಲ್ಲಿ ಹೋ ಚಿನ್ ಮಿನ್‌ರ ನಂತರ ಅತ್ಯಂತ ಗೌರವದಿಂದ ನೆನಯಲ್ಪಡುವ ವ್ಯಕ್ತಿ ಜಿಯಾಪ್. 1940ರ ಇಂಡೋ ಚೀನಾಯುದ್ಧದಲ್ಲಿ ಮತ್ತು 1960ರ ವಿಯೆಟ್ನಾಂ ಯುದ್ಧದಲ್ಲಿ ತಮ್ಮ ದೇಶವನ್ನು ಗೆಲ್ಲಿಸಿದ ಪರಾಕ್ರಮಿ ಈತ. 102ವರ್ಷದ ಜಿಯಾಪ್ ಕಳೆದ ವಾರ ಕೊನೆಯುಸಿರೆಳೆದರು.
ಒಬ್ಬ ವೀರ ತನ್ನ ದೇಶವನ್ನು ಗೆಲುವಿನ ದಡ ಸೇರಿಸಿದ ಎಂದು ಹೇಳುವುದು ಬಹಳ ಸುಲಭ. ಆದರೆ ಆ ಗೆಲುವಿನ ಹಿಂದೆ ಆತನ ಪಾತ್ರವೇನು, ಆ ಸಮಯದಲ್ಲಿ ಆತನ ದೇಶ ಎದುರಿಸುತ್ತಿದ್ದ ಸಮಸ್ಯೆಗಳ್ಯಾವುವು ಎನ್ನುವುದನ್ನು ಪರಿಗಣಿಸಿದಾಗ ಆಧುನಿಕ ಪ್ರಪಂಚದ ಯುದ್ಧೇತಿಹಾಸದಲ್ಲಿ ಜಿಯಾಪ್‌ನ ಹೆಸರೇ ಮುಂಚೂಣಿಯಲ್ಲಿ ನಿಲ್ಲುತ್ತದೆ. ವಿಯೆಟ್ನಾಂ ಚೀನೀ ವಸಾಹತಿನಿಂದ ಸಾವಿರಾರು ವರ್ಷಗಳವರೆಗೆ ಬಳಲಿದ ಆಗ್ನೇಯ ಏಷಿಯಾ ರಾಷ್ಟ್ರಗಳಲ್ಲೊಂದಾಗಿತ್ತು. ಇದಾದ ನಂತರ ಮತ್ತೆ ಸಾವಿರ ವರ್ಷಗಳವರೆಗೆ ಚೀನೀ ರಾಜಕುಟುಂಬಗಳು ವಿಯೆಟ್ನಾಂ ಒಳಹೊಕ್ಕು ಅಲ್ಲಿನ ಜನರನ್ನು ಶೋಷಿಸಿದವು. ಅವರು ಅಲ್ಲಿಂದ ಹೋದ ನಂತರ, ಅಂದರೆ 1850ರ ಸಮಯಕ್ಕೆ ಅಲ್ಲಿ ಪ್ರತಿಧ್ವನಿಸಿದ್ದು ಫ್ರೆಂಚ್ ವಸಾಹತಿನ ಆರ್ಭಟ! ಈ ಸಮಯಗಳಲ್ಲಿ ಅನೇಕ ವೀರರನ್ನು ವಿಯೆಟ್ನಾಂ ಹುಟ್ಟುಹಾಕಿತು. ಅವರೆಲ್ಲರೂ ವೀರರೆನಿಸಿಕೊಂಡಿದ್ದು ಸರ್ವಾಧಿಕಾರಿಗಳ ವಿರುದ್ಧ ಹೋರಾಡಿದರು ಎಂಬ ಏಕೈಕ ಕಾರಣಕ್ಕಲ್ಲ, ಇದರೊಟ್ಟಿಗೆ ಅವರಿಗಿದ್ದ ದೂರದೃಷ್ಟಿಯ ಕಾರಣಕ್ಕೂ ಕೂಡ. ಅವರು ಬಳಸಿದ ತಂತ್ರಗಳು, ಹುಟ್ಟುಹಾಕಿದ ಸಂಪ್ರದಾಯಗಳು ವಿಯೆಟ್ನಾಂ ಅನ್ನು ಬಲಿಷ್ಠಗೊಳಿಸುತ್ತಾ ಹೋದವು. ಅಮೆರಿಕದ ಲೇಖಕರುಗಳು ವಿಯೆಟ್ನಾಮಿ ಸೈನ್ಯವನ್ನು "ಬರಿಗಾಲ ಸೇನೆ" ಎಂದು ಕರೆಯುತ್ತಾರೆ. ಹಾಗೆ ಕರೆಯುವುದಕ್ಕೆ ಕಾರಣವಿಲ್ಲವೆಂದಲ್ಲ...
ಹಾಗಿದ್ದರೆ ಈ ಬರಿಗಾಲ ಸೇನೆ ಯಾರ ವಿರುದ್ಧ ಹೋರಾಡಿತು? ಫ್ರೆಂಚರು, ಜಪಾನಿಯರು, ಮತ್ತೆ ಫ್ರೆಂಚರು, ಕೊನೆಯಲ್ಲಿ ಅಮೆರಿಕದ ಯುದ್ಧ ಯಂತ್ರಗಳೊಂದಿಗೆ ವಿಯೆಟ್ನಾಂ ಯುದ್ಧ ಮಾಡಿತು. ನಿಮಗೆ ಆಶ್ಚರ್ಯವಾಗಬಹುದು. ಈ ಎಲ್ಲಾ ಯುದ್ಧಗಳಲ್ಲೂ ಆ ಪುಟ್ಟ ರಾಷ್ಟ್ರ ಗೆಲುವಿನ ಕೇಕೆ ಹಾಕಿತು. ಸೋತ ಜಪಾನಿಯರು ಮತ್ತೆ ವಿಯೆಟ್ನಾಂನತ್ತ ತಲೆಹಾಕಿಯೂ ಮಲಗಲಿಲ್ಲ. ಇನ್ನು ಎರಡನೇ ಬಾರಿ ಯುದ್ಧ ಸಾರಿದ್ದ ಫ್ರೆಂಚರು ಡಿಯನ್ ಬಿಯನ್ ಫೂ ನಲ್ಲಿ 'ಬರಿಗಾಲ ಸೇನೆಯ' ವಿರುದ್ಧ ಹೀನಾಯವಾಗಿ ಸೋತ ನಂತರ ಮುದುಡಿಕೊಂಡು ಕುಳಿತುಬಿಟ್ಟರು.
ಇನ್ನು ಅಮೇರಿಕನ್ನರ ವಿಚಾರಕ್ಕೆ ಬಂದರೆ, ಅವರೆದುರಿಸಿದ ದೀರ್ಘಕಾಲಿಕ ಯುದ್ಧವಾಗಿತ್ತು ವಿಯೆಟ್ನಾಂ ವಿರುದ್ಧದ ಹೋರಾಟ. ಇನ್ನು ಅಮೆರಿಕನ್ನರು ಸೋತ ಏಕೈಕ ಯುದ್ಧವೂ ಅದೇ ಆಗಿದೆ. ಈ ಯುದ್ಧದಲ್ಲಿ ಅಮೆರಿಕ, ನಪಾಮ್ ಬಾಂಬ್ ಮತ್ತು ಏಜೆಂಟ್ ಆರೆಂಜ್ ಎಂಬ ರಾಸಾಯನಿಕ ಅಸ್ತ್ರಗಳನ್ನು ವಿಯೆಟ್ನಾಂನ ಮೇಲೆ ಪ್ರಯೋಗಿಸಿತು. ತತ್ಫಲವಾಗಿ ಅಲ್ಲಿನ ಕಾಡುಗಳೆಲ್ಲ ನಾಶವಾದವು, ಸಾವಿರಾರು ಜನರು ಆನುವಂಶಿಕ ದೋಷಗಳಿಗೆ ತುತ್ತಾದರು. ಅಮೆರಿಕ ನೀತಿ ನಿರೂಪಕರಾದ ಅಧ್ಯಕ್ಷ ನಿಕ್ಸಾನ್ ಮತ್ತು ಹೆನ್ರಿ ಕಿಸಿಂಜರ್, ಯುದ್ಧ ಮಾಡದೇ ಬೇರೇ ದಾರಿಯಿಲ್ಲ ಎನ್ನುವ ಅನವಶ್ಯಕ ಅನಿವಾರ್ಯತೆಗೆ ಬಿದ್ದಿದ್ದರು! ಅಮೆರಿಕ ಏಕೆ ಆ ಯುದ್ಧದಲ್ಲಿ ಮಣ್ಣುಮುಕ್ಕಿತು ಎನ್ನುವುದನ್ನು ನೀಲ್ ಶೀಹಾನ್ ಎನ್ನುವ ಲೇಖಕ ಸರಿಯಾಗಿ ವಿವರಿಸುತ್ತಾನೆ- "ಅಮೆರಿಕ ಸೇನೆಯ ಜಾನ್ ಪೌಲ್ ವ್ಯಾನ್ ಎಂಬ ಗರ್ವಿ ಲೆಫ್ಟಿನೆಂಟ್ ಕರ್ನಲ್‌ಗೆ, 'ತಮಗಿಂತಲೂ ಯಾರೂ ಉತ್ತಮರಿಲ್ಲ ಮತ್ತು ಎಲ್ಲಾ ಕಮ್ಯುನಿಸ್ಟರು ಅಮೆರಿಕದ ಶತ್ರುಗಳು, ಹಾಗಾಗೇ ಅವರೆಲ್ಲರೂ ಅಭಿವೃದ್ಧಿಯ ಶತ್ರುಗಳು' ಎಂಬ ಹುಚ್ಚು ಕಲ್ಪನೆಯಿತ್ತು" ಎನ್ನುತ್ತಾನೆ.
ಇಂಥ ಮನಸ್ಥಿತಿಯೇ ವಿಯೆಟ್ನಾಂನಲ್ಲಿ ಅಮೆರಿಕದ ಸೋಲಿಗೆ ಪ್ರಮುಖ ಕಾರಣ. ಇದೇ ಮನಸ್ಥಿತಿಯೇ ಇರಾಕ್, ಅಫ್ಘಾನಿಸ್ತಾನ್, ಸಿರಿಯಾ, ಇಜಿಪ್ತ್‌ನಲ್ಲಿನ ಸೋಲಿಗೆ(ಇಲ್ಲೆಲ್ಲ ಆಗಿದ್ದು ಅಮೆರಿಕದ ಸೋಲೇ) ಕಾರಣ. ಆದರೆ ಇನ್ನೊಂದೆಡೆ ಜಿಯಾಪ್ ಅವರು ಎಂದಿಗೂ ವಿರೋಧಿಯನ್ನು ಕಡೆಗಣಿಸಿದವರಲ್ಲ, ಆತನ ಸಾಮರ್ಥ್ಯದ ಬಗ್ಗೆ ಕಡಿಮೆ ಅಂದಾಜು ಹಾಕಿದವರಲ್ಲ. ಜಿಯಾಪ್ ಮಧ್ಯಮ ವರ್ಗದಿಂದ ಬಂದ ವ್ಯಕ್ತಿಯಲ್ಲ, ಶ್ರೀಮಂತ ಕುಟುಂಬದಿಂದ ಬಂದವರು. ಅವರು ಕಮ್ಯುನಿಸ್ಟ್ ಆಗಿರಲಿಲ್ಲ, ರಾಷ್ಟ್ರೀಯವಾದಿಯಾಗಿದ್ದರು. ಸೇನೆಯಿಂದ ನಿವೃತ್ತಿಯಾದ ನಂತರ ಜಿಯಾಪ್ ಶಾಲಾ ಮಾಸ್ತರರಾಗಿ ಕೆಲಸ ಆರಂಭಿಸಿದರು. ಬರವಣಿಗೆ ಮತ್ತು ಓದಿನಲ್ಲಿ ಅವರಿಗೆ ಭಯಂಕರ ಆಸಕ್ತಿಯಿತ್ತು. 1975ರಲ್ಲಿ ಪ್ರಕಟವಾದ ಅವರ  ""Unforgettable Days'' ಪುಸ್ತಕ 1945-46ರಲ್ಲಿ ಫ್ರೆಂಚರು ಮತ್ತು ಚೀನಿಯರು ವಿಯೆಟ್ನಾಂ ಮೇಲೆ ಹಿಡಿತ ಸಾಧಿಸಲು ಪರಸ್ಪರ ಹೇಗೆ ಕಿತ್ತಾಡಿದವು ಎನ್ನುವುದನ್ನು ಅದ್ಭುತವಾಗಿ ಕಟ್ಟಿಕೊಡುತ್ತದೆ.
ಜಿಯಾಪ್ ಅವರ ಬಹುದೊಡ್ಡ ಸಾಧನೆಯೆಂದರೆ, ಅವರು ಸೊನ್ನೆಯಿಂದ ಸೇನೆಯನ್ನು ಕಟ್ಟಿದ್ದು. ಶುರುವಾತಿನಲ್ಲಿ ಅವರ ಬಳಿ ಕೇವಲ 5,000 ಗೆರಿಲ್ಲಾಗಳಿದ್ದರು. ನಂತರದ ಒಂದು ವರ್ಷದಲ್ಲಿ ಸೈನಿಕರ ಸಂಖ್ಯೆ ಹೋಗಿ ತಲುಪಿದ್ದು ಬರೋಬ್ಬರಿ 1 ಲಕ್ಷಕ್ಕೆ! ಇದು ಸಾಧ್ಯವಾಗಿದ್ದು ಹೇಗೆ ಎಂದುಕೊಂಡಿರಾ? ಜಿಯಾಪ್ ವಿಯೆಟ್ನಾಂನ ರೈತರೆಲ್ಲರಿಗೂ ಮಿಲಿಟರಿ ತರಬೇತಿ ಕೊಟ್ಟು ಸಜ್ಜುಗೊಳಿಸಿದ್ದರು! ಇನ್ನು ಜಿಯಾಪ್‌ರ ಸೇನೆಯ ಬಳಿ ಇದ್ದ ಬಹುತೇಕ ಶಸ್ತ್ರಾಸ್ತ್ರಗಳು ತಯಾರಾದದ್ದು ಫ್ರೆಂಚ್ ಮತ್ತು ಜಪಾನಿ ಸೇನೆ ಬಿಟ್ಟು ಹೋಗಿದ್ದ ಮುರಿದ ಶಸ್ತ್ರಾಸ್ತ್ರಗಳ ತುಣುಕುಗಳಿಂದ. ಇದಷ್ಟೇ ಅಲ್ಲದೆ, ಮುರಿದು ಸಾಗರದಡಿಗೆ ಸೇರಿದ್ದ ಜಪಾನಿ ನೌಕೆಗಳನ್ನು ಎತ್ತಿ, ಅವುಗಳಿಂದ ಲೋಹವನ್ನು ಬೇರ್ಪಡಿಸಿ ಶಸ್ತ್ರಾಸ್ತ್ರಗಳನ್ನು ತಯಾರಿಸಿದ್ದರು ವಿಯೆಟ್ನಾಂಮಿಗರು! ಇದೆಲ್ಲ ಸಾಧ್ಯವಾಗಿದ್ದು ವಿಯೆಟ್ನಾಂ ಜನರ ಚತುರತೆ, ಆತ್ಮಸ್ಥೈರ್ಯ ಮತ್ತು ದೇಶಭಕ್ತಿಯಿಂದಾಗಿ. ವಿಶ್ವ ಯುದ್ಧದಲ್ಲಿ ಭಾಗಿಯಾಗಿದ್ದ ಕಮಾಂಡರ್‌ಗಳಿಗಿಂತಲೂ ಕಠಿಣ ಸನ್ನಿವೇಶಗಳನ್ನು ಗುವೆನ್ ಜಿಯಾಪ್ ಎದುರಿಸಿದ್ದರು. ಹಾಗಾಗೇ ಅವರ ಗೆಲುವು ಬೇರೆಲ್ಲರಿಗಿಂತಲೂ ಎತ್ತರದ ಸ್ಥಾನದಲ್ಲಿ ನಿಲ್ಲುತ್ತದೆ. ಜಿಯಾಪ್ ಅವರನ್ನು "ಜನರಲ್‌ಗಳ ಜನರಲ್‌" ಎಂದೇ ಪ್ರಪಂಚದ ಇತಿಹಾಸದಲ್ಲಿ ಉಳಿದುಹೋಗುತ್ತಾರೆ.


-ಟಿಜೆಎಸ್ ಜಾರ್ಜ್

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಸಿಇಸಿ ವಿರುದ್ಧದ ವಿಪಕ್ಷಗಳ ಪ್ರತಿಭಟನೆ: ವಶಕ್ಕೆ ಪಡೆದ ಬೆನ್ನಲ್ಲೇ ರಾಹುಲ್, ಪ್ರಿಯಾಂಕಾ ಗಾಂಧಿ ಬಿಡುಗಡೆ

ಅಧಿಕಾರಿಯಂತೆ ನಟಿಸಿ ಆಪ್ ನಾಯಕನಿಗೆ ಧೋಕಾ; ಮದುವೆಯಾಗಿ ಆಭರಣಗಳೊಂದಿಗೆ ಮಹಿಳೆ ಪರಾರಿ!

ಆಪರೇಷನ್ ಸಿಂಧೂರ್, ರಕ್ಷಕ್‌ನಲ್ಲಿ ಪ್ರಮುಖ ಪಾತ್ರವಹಿಸಿದ್ದ ಅಶುತೋಷ್ ದೀಕ್ಷಿತ್ ವಾಯುಪಡೆಯ ನೂತನ ಮುಖ್ಯಸ್ಥ!

ಮಚ್ಛಾರ್ ಆರೋಗ್ಯಯಲ್ಲಿ 'ಸ್ಥಿರ ಸುಧಾರಣೆ': ಭಾರತೀಯ ರಾಯಭಾರ ಕಚೇರಿ

KPSC ನೇಮಕಾತಿ ಹಗರಣ: EDಯಿಂದ ಮಾಜಿ ಅಧ್ಯಕ್ಷ ಶಿವಶಂಕರಪ್ಪ ಸಾಹುಕಾರ್‌, ಸದಸ್ಯೆ ಗೀತಾ ಬಂಧನ!