ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಅಂಕಣಗಳು

ಭಾರಿ ಸದ್ದು ಮಾಡಿದ ವಿಶೇಷ ವಿತ್ತ ವಲಯಗಳು ಎಡವಿದ್ದೆಲ್ಲಿ?

ಕೆಲವು ಕಾಲ ಸಾಕಷ್ಟು ಗದ್ದಲ ಮಾಡಿ ಈಗ ಸದ್ದಿಲ್ಲದೆ ಪರದೆಯ...

Vishwanath S
Updated On : 16 Oct 2013, 12:10 pm

ಕೆಲವು ಕಾಲ ಸಾಕಷ್ಟು ಗದ್ದಲ ಮಾಡಿ ಈಗ ಸದ್ದಿಲ್ಲದೆ ಪರದೆಯ ಹಿಂದೆ ಜಾರಿದ ವಿಶೇಷ ಆರ್ಥಿಕ ವಲಯಗಳು (ಎಸ್‌ಇಝಡ್‌ಗಳು) ರಫ್ತು ವ್ಯಾಪಾರಕ್ಕೆ ತಮ್ಮ ಪಾಲಿನ ಕೊಡುಗೆಯನ್ನು ನೀಡಲಾಗದ ಸ್ಥಿತಿ. 11ನೆಯ ಯೋಜನೆಯ (2007- 12) ದಾಖಲೆ ಪತ್ರ ಎಷ್ಟೋ ಎಸ್‌ಇಝಡ್‌ಗಳು ಹುಟ್ಟಿ ಬರುವ ಸಾಧ್ಯತೆಯನ್ನು ತಿಳಿಸಿತ್ತು. ಎಸ್‌ಇಝಡ್‌ಗಳು ಯೋಜನಾ ಆಯೋಗ ತಿಳಿಸಿದ ರೀತಿಯಲ್ಲಿ ಹುಟ್ಟಿ ಬರಲಿಲ್ಲ. 12ನೆಯ ಯೋಜನೆಯ ದಾಖಲೆ ಪತ್ರ ಮೂರು ಸಂಪುಟಗಳಲ್ಲಿ ಪ್ರಕಟವಾಗಿದೆ. ಯಾವ ಸಂಪುಟದಲ್ಲೂ ಎಸ್‌ಇಝಡ್ ಯೋಜನೆಯ ಪ್ರಸ್ತಾವ ಕೂಡ ಇಲ್ಲ.
ನಮ್ಮ ದೇಶದಲ್ಲಿ ಎಸ್‌ಇಝಡ್‌ಗಳು ಹುಟ್ಟಿ ಬಂದದ್ದು ಸ್ವಲ್ಪ ವಿಚಿತ್ರ ರೀತಿಯಲ್ಲಿ. 2000 ಏಪ್ರಿಲ್ ತಿಂಗಳಿನಲ್ಲಿ ಆಗಿನ ಕೇಂದ್ರ ಸರಕಾರ ಆಗ ಅಸ್ತಿತ್ವದಲ್ಲಿದ್ದ 08 ರಫ್ತು ಸಂಸ್ಕರಣಾ ವಲಯಗಳನ್ನು ವಿಶೇಷ ಆರ್ಥಿಕ ವಲಯಗಳೆಂದು ಪರಿವರ್ತಿಸಿ ಘೋಷಣೆ ಹೊರಡಿಸಿತ್ತು. ಸೂರತ್, ಸಾಂತಾ ಕ್ರೂಜ್, ಕೊಚ್ಚಿ, ಚೆನ್ನೈ, ವಿಶಾಖ ಪಟ್ಟಣ, ಫಾಲ್ಟಾ ಮತ್ತು ನೊಯ್ಡಾ ಪ್ರದೇಶಗಳಲ್ಲಿದ್ದ ಗುಣಮಟ್ಟದ ಮೂಲ ಸೌಕರ್ಯಗಳಿಲ್ಲದ ಮತ್ತು ನಿಶ್ಚಿತವಾದ ವಿತ್ತೀಯ ಧೋರಣೆ ಕಾಣದ ರೋಗಗ್ರಸ್ತ ರಫ್ತು ಸಂಸ್ಕರಣಾ ವಲಯಗಳು ವಿಶೇಷ ಆರ್ಥಿಕ ವಲಯಗಳೆಂಬ ಅವತಾರ ತಾಳಿಬಿಟ್ಟವು. ಎಸ್‌ಇಝಡ್ ಕಾನೂನು (2005) ಮತ್ತು ಎಸ್‌ಇಝಡ್ ನಿಯಮಾವಳಿಗಳು ಜಾರಿಯಾಗಿದ್ದು 2006 ಫೆಬ್ರವರಿ ತಿಂಗಳಿನಲ್ಲಿ. ಅಧಿಕೃತವಾಗಿ ಮಗು ಹುಟ್ಟುವ ಮೊದಲೇ ನಾಮಕರಣ!
ಅಧಿಕ ಆರ್ಥಿಕ ಅವಕಾಶಗಳ ನಿರ್ಮಾಣ, ಸರಕು ಮತ್ತು ಸೇವೆಗಳ ರಫ್ತಿನಲ್ಲಿ ಹೆಚ್ಚಳ, ಆಂತರಿಕ ಮತ್ತು ಬಾಹ್ಯ ಮೂಲಗಳಿಂದ ಹಣ ಹೂಡಿಕೆಗೆ ಬೇಕಾದ ವಾತಾವರಣದ ಸೃಷ್ಟಿ, ಉದ್ಯೋಗಾವಕಾಶಗಳ ಪೂರೈಕೆ ಮತ್ತು ಮೂಲ ಸೌಕರ್ಯಗಳ ಅಭಿವೃದ್ಧಿ- ಹೀಗೆ ಐದು ಉದ್ದೇಶಗಳುಳ್ಳ 2005ರ ಕಾನೂನು ಈ ತನಕ ಕಂಡ ಯಶಸ್ಸು ಅಷ್ಟಕ್ಕಷ್ಟೆ. ಹೀಗಾಗಿ ಬಹುಶಃ ಯೋಜನಾ ಆಯೋಗವೇ ಎಸ್‌ಇಝಡ್‌ಗಳ ಬಗೆಗೆ ಹೆಚ್ಚಿನ ಭರವಸೆ ಇಟ್ಟುಕೊಂಡಂತೆ ಕಾಣುವುದಿಲ್ಲ. ಭರವಸೆಯ ಬೀಜ ಮೊಳೆತು ಬೆಳೆಯಲಿಲ್ಲ. ಬದಲಾಗಿ ಎಸ್‌ಇಝಡ್‌ಗಳು ವಿರೋಧ- ಪ್ರತಿರೋಧಗಳಿಂದ ಬಳಲಿವೆ, ರಕ್ತ ಹೀನತೆ ಈಗ ಅವುಗಳನ್ನು ಪೀಡಿಸುತ್ತಿದೆ.
ಕೇಂದ್ರ ಸರಕಾರದ ಮಾಹಿತಿ ಮತ್ತು ಪ್ರಸಾರ ಸಚಿವಾಲಯ ಪ್ರಕಟಿಸಿದ ಇಂಡಿಯಾ- 2013 ಒದಗಿಸುವ ಅಂಕಿ ಸಂಖ್ಯೆಗಳು ಎಸ್‌ಇಝಡ್ ಯೋಜನೆಗಳ ದುಸ್ಥಿತಿಗೆ ಕನ್ನಡಿ ಹಿಡಿಯುತ್ತದೆ. ರಫ್ತು ವ್ಯಾಪಾರಕ್ಕೆ ಎಸ್‌ಇಝಡ್‌ಗಳ ಕೊಡುಗೆಯ ದರ ಇತ್ತೀಚಿನ ವರ್ಷಗಳಲ್ಲಿ ಗಣನೀಯವಾಗಿ ಕಡಿಮೆಯಾಗಿದ್ದನ್ನು ಅದು ಸ್ಪಷ್ಟವಾಗಿ ತೋರಿಸುತ್ತದೆ. 2013 ಜುಲೈ 17ರ ವರದಿಯ ಪ್ರಕಾರ ಈ ತನಕ 576 ವಲಯಗಳಿಗೆ ಪ್ರಾಥಮಿಕ ಅನುಮತಿ ದೊರೆತಿದೆ. ಅವುಗಳಲ್ಲಿ 392 ವಲಯಗಳಿಗೆ ಬೇಕಾದ ಅಧಿಸೂಚನೆಗಳ ಪ್ರಕಟಣೆ. ಆದರೆ ಕೇವಲ 173 ಎಸ್‌ಇಝಡ್‌ಗಳು ಮಾತ್ರ ರಫ್ತು ವ್ಯಾಪಾರದಲ್ಲಿ ತೊಡಗಿದ್ದವು. 88ರಷ್ಟು ಘಟಕಗಳು ಮಾಹಿತಿ ತಂತ್ರಜ್ಞಾನ ರಂಗದ ವ್ಯಾಪ್ತಿಯಲ್ಲಿದ್ದವು. ಒಮ್ಮೆ ಭಾರತದಲ್ಲಿ ಇಷ್ಟೊಂದು ಸಂಖ್ಯೆಯಲ್ಲಿ ತಾತ್ವಿಕ ಮಂಜೂರಾತಿ ಪಡೆದ ಎಸ್‌ಇಝಡ್ ಯೋಜನೆಗಳ ಔಚಿತ್ಯವನ್ನು ವಿಶ್ವಬ್ಯಾಂಕ್ ಪ್ರಶ್ನಿಸಿತ್ತು.
ಎಸ್‌ಇಝಡ್ ಯೋಜನೆಗಳನ್ನು ರೂಪಿಸುವಾಗ ಭಾರತ ಚೀನದ ಅನುಕರಣೆ ಮಾಡಲು ಹೋಗಿ ಮುಗ್ಗರಿಸಿದೆ. ಭಾರತಕ್ಕಿಂತ ದೊಡ್ಡ ದೇಶವಾದ ಚೀನದಲ್ಲಿ ಕೇವಲ ಆರು ವಿಶೇಷ ಆರ್ಥಿಕ ವಲಯಗಳಿದ್ದು ದೊಡ್ಡ ಪ್ರಮಾಣದ ಉತ್ಪಾದನೆಯ ಲಾಭಗಳು ಸಲೀಸಾಗಿ ದೊರಕಿತ್ತು. ರಾಜಕೀಯ ಒತ್ತಡಗಳಿಗೆ ಮಣಿದು ನಮ್ಮ ದೇಶದ ಕೇಂದ್ರ ಸರ್ಕಾರ ಮತ್ತು ರಾಜ್ಯ ಸರ್ಕಾರಗಳು ಸಣ್ಣ ಗಾತ್ರದ ಎಸ್‌ಇಝಡ್‌ಗಳಿಗೆ ಮಂಜೂರಾತಿ ನೀಡಿದ್ದರಿಂದ ದೊಡ್ಡ ಪ್ರಮಾಣದ ಉತ್ಪಾದನೆಯ ಲಾಭಗಳು ಸಿಗಲಿಲ್ಲ. ಹೀಗಾಗಿ 2005ರ ಕಾನೂನಿನ ಉದ್ದೇಶಗಳು ಕಾಗದದ ಮೇಲೆ ಮಾತ್ರ ಬದುಕಿ ಉಳಿದಿವೆ. ಚೀನದಲ್ಲಿ ಎಲ್ಲ ಎಸ್‌ಇಝಡ್‌ಗಳು ಕರಾವಳಿ ಪ್ರದೇಶದಲ್ಲಿದ್ದು ರಫ್ತು ವ್ಯಾಪಾರಕ್ಕೆ ಧನಾತ್ಮಕ ಕೊಡುಗೆ ನೀಡಿವೆ. ಭಾರತದಲ್ಲಿ ಒಳನಾಡಿನಲ್ಲೂ ಎಸ್‌ಇಝಡ್‌ಗಳ ಸ್ಥಾಪನೆ. ರಸ್ತೆ ಸಾರಿಗೆ ಮತ್ತು ರೈಲ್ವೆ ಸಾರಿಗೆಗಳ ಮೇಲೆ ಒತ್ತಡ ಜಾಸ್ತಿ. ಅಧಿಕ ಮೂಲ ಸೌಕರ್ಯಗಳ ನಿರ್ಮಾಣ ಮಾಡುವ ಬದಲು ಎಷ್ಟೋ ಎಸ್‌ಇಝಡ್‌ಗಳು ಇರುವ ಮೂಲ ಸೌಕರ್ಯಗಳನ್ನೇ ಹೆಚ್ಚಾಗಿ ಬಳಸಿ ಜನಸಾಮಾನ್ಯರಿಗೆ ತೊಂದರೆಯಾದ ಉದಾಹರಣೆಗಳು ಇವೆ.
ಹಿಂದುಳಿದ ಪ್ರದೇಶಗಳಲ್ಲಿ ಮತ್ತು ಹಾಳು ಬಿದ್ದ ಭೂಮಿಗಳನ್ನು ಹೆಚ್ಚು ಬಳಸಿಕೊಳ್ಳುವ ರೀತಿಯಲ್ಲಿ ಎಸ್‌ಇಝಡ್‌ಗಳು ಬಂದಿದ್ದರೆ ಸೇರ್ಪಡೆಯುಳ್ಳ ಅಭಿವೃದ್ಧಿಗೆ ಅವು ಪೂರಕವಾಗುವ ಸಾಧ್ಯತೆ ಇರುತ್ತಿತ್ತು.
ಆಂಧ್ರದಲ್ಲಿರುವ ಶ್ರೀಸಿಟಿ ಎನ್ನುವ ಹೆಸರಿನ ಎಸ್‌ಇಝಡ್ ಮೂಲ ಸೌಕರ್ಯಗಳನ್ನು ನಿರ್ಮಾಣ ಮಾಡಿದೆ. ಹಾಳು ಬಿದ್ದ ಭೂಮಿಗಳನ್ನು ಶ್ರೀಸಿಟಿಯಲ್ಲಿ ಬಳಸಲಾಗಿದ್ದು ಇದು ಜನ ಮನ್ನಣೆ ಪಡೆದ ಸಂಗತಿ. ಆದರೆ ಆಂಧ್ರದಲ್ಲಿರುವ ಇತರ ಯೋಜನೆಗಳಲ್ಲಿ ಕೃಷಿಕರ ಹಿತಾಸಕ್ತಿ ಕಡೆಗಣಿಸಿದ್ದರಿಂದ ವಿರೋಧ ವ್ಯಕ್ತವಾಯಿತು. ಆಂಧ್ರ ಪ್ರದೇಶದ ಮಾನವ ಹಕ್ಕುಗಳ ಆಯೋಗ ವಿರೋಧವಿರುವ ಪ್ರದೇಶಗಳಿಗೆ ಭೇಟಿ ನೀಡಿ ವಿಚಾರಣೆ ನಡೆಸಿ ಆಂಧ್ರದ ಹೈಕೋರ್ಟ್‌ಗೆ ವರದಿ ನೀಡಬೇಕಾದ ಪ್ರಸಂಗ ತಲೆದೋರಿತ್ತು. ಕೆಲವು ಎಸ್‌ಇಝಡ್‌ಗಳು ಅಗತ್ಯಕ್ಕಿಂತ ಹೆಚ್ಚು ಕೃಷಿ ಭೂಮಿಯನ್ನು ವಶಪಡಿಸಿಕೊಂಡಿದ್ದರಿಂದ ರಿಯಲ್ ಎಸ್ಟೇಟ್ ದಂಧೆ ಸರಾಗವಾಗಿ ನಡೆದದ್ದನ್ನು ಕೇಂದ್ರ ಗ್ರಾಮೀಣಾಭಿವೃದ್ಧಿ ಸಚಿವ ಜೈರಾಮ್ ರಮೇಶ್ ಕಳೆದ ಸೆಪ್ಟೆಂಬರ್ 29ರಂದು ಮುಂಬಾಯಿಯಲ್ಲಿ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡುತ್ತ ಹೇಳಿದ್ದರು. ಎಸ್‌ಇಝಡ್ ಯೋಜನೆಯ ಮೂಲ ಉದ್ದೇಶಗಳಿಗೆ ಭಂಗವಾಗಿದ್ದನ್ನು ಒಪ್ಪಿಕೊಂಡ ಅವರು ಇನ್ನು ಮುಂದೆ ಹೀಗಾಗದಂತೆ ಎಚ್ಚರಿಕೆ ವಹಿಸುವ ಭರವಸೆ ನೀಡಿದರು.
ವಿವಿಧ ರೀತಿಯ ರಿಯಾಯಿತಿಗಳು, ವಿನಾಯಿತಿಗಳು ಮತ್ತು ವಿಶೇಷ ಉತ್ತೇಜಕಗಳನ್ನು ಸರಕಾರ ಎಸ್‌ಇಝಡ್‌ಗಳಿಗೆ ನೀಡಿದ್ದರಿಂದ ಸಾರ್ವಜನಿಕ ಬೊಕ್ಕಸದ ಮೇಲೆ ದೊಡ್ಡ ಹೊರೆ. ಯೋಜನಾ ಆಯೋಗ ಇದನ್ನು ದಾಖಲೆಯಲ್ಲಿರಿಸಿದೆ. ಕೇಂದ್ರ ವಿತ್ತಸಚಿವಾಲಯ ಮತ್ತು ವಾಣಿಜ್ಯ ಸಚಿವಾಲಯಗಳ ನಡುವೆ ಮುಸುಕಿನ ಗುದ್ದಾಟ ಆಗಾಗ ನಡೆಯುತ್ತಿರುತ್ತದೆ. ಒಮ್ಮೊಮ್ಮೆ ಈ ಗುದ್ದಾಟ ಬಹರಂಗಗೊಂಡ ನಿದರ್ಶನಗಳಿವೆ. 2011-12ನೆಯ ಸಾಲಿನ ಕೇಂದ್ರ ಆಯವ್ಯಯ ಪತ್ರದಲ್ಲಿ ಆಗಿನ ವಿತ್ತಸಚಿವ ಪ್ರಣವ್ ಮುಖರ್ಜಿ ಎಸ್‌ಇಝಡ್‌ಗಳ ಮೇಲೆ ಕನಿಷ್ಠ ಪರ್ಯಾಯ ತೆರಿಗೆ ಹೇರುವ (ಮ್ಯಾಟ್) ನಿರ್ಧಾರ ಘೋಷಿಸಿದರು. ಆಗ ಎಸ್‌ಇಝಡ್ ಪೋಷಕರು (ಡೆವಲಪರ್ಸ್) ಮತ್ತು ಕೇಂದ್ರ ವಾಣಿಜ್ಯ ಸಚಿವಾಲಯ ಜಂಟಿಯಾಗಿ ಪ್ರಣವ್ ವಿರುದ್ಧ ವಾಗ್ದಾಳಿ ನಡೆಸಿದ್ದು ಪತ್ರಿಕೆಗಳಲ್ಲಿ ಪ್ರಚಾರ ಪಡೆದಿತ್ತು. ಆದರೆ ಪ್ರಣವ್ ತಮ್ಮ ನಿರ್ಧಾರವನ್ನು ಬದಲಿಸಲಿಲ್ಲ.
ಈಗ 58 ಎಸ್‌ಇಝಡ್ ಘಟಕಗಳು ಜಾಗತಿಕ ಆರ್ಥಿಕ ಹಿನ್ನಡೆಯಿಂದ ರಫ್ತು ವ್ಯಾಪಾರ ಮಾಡಲಾಗದೆ ಬಳಲುವಂತಾಗಿ ತಮ್ಮ ಕಾರ್ಯ ನಿಲ್ಲಿಸಿಬಿಟ್ಟಿವೆ. ಆಟೋ ಬಿಡಿ ಭಾಗಗಳನ್ನು, ಜವಳಿ ಉತ್ಪನ್ನಗಳನ್ನು ಮತ್ತು ಔಷಧ ಸಾಮಗ್ರಿಗಳನ್ನು ಉತ್ಪಾದಿಸುವ ಎಸ್‌ಇಝಡ್ ಘಟಕಗಳು ದೇಶದ ಆಂತರಿಕ ಮಾರುಕಟ್ಟೆಯಲ್ಲಿ ವಹಿವಾಟು ಮಾಡಿ ಬದುಕುವ ಪ್ರಯತ್ನ ನಡೆಸುತ್ತಿವೆ. ಆಂತರಿಕ ಮಾರುಕಟ್ಟೆಯಲ್ಲಿ ಅವು ಮಾರಾಟ ಮಾಡಬೇಕಾದರೆ ಕೇಂದ್ರ ಸರಕಾರದ ತೆರಿಗೆಯ ನಿಯಮಗಳ ಪ್ರಕಾರ ಸುಂಕ ತೆರಬೇಕು. ಈ ಸುಂಕದಿಂದ ವಿನಾಯಿತಿ ನೀಡುವಂತೆ ವಾಣಿಜ್ಯ ಸಚಿವಾಲಯ ವಿತ್ತ ಸಚಿವಾಲಯಕ್ಕೆ ಮೊರೆ ಹೋಗಿದೆ. ತೀವ್ರವಾದ ವಿತ್ತೀಯ ಕೊರತೆಯನ್ನು ಎದುರಿಸುತ್ತಿರುವ ಕೇಂದ್ರ ವಿತ್ತ ಸಚಿವ ಪಿ. ಚಿದಂಬರಂ ವಾಣಿಜ್ಯ ಸಚಿವಾಲಯದ ಬೇಡಿಕೆಯನ್ನು ತಿರಸ್ಕರಿಸಿದರೆ ಆಶ್ಚರ್ಯಪಡಬೇಕಾಗಿಲ್ಲ.
ಎಸ್‌ಇಝಡ್ ಘಟಕಗಳನ್ನು ಬದುಕಿಸುವ ಪ್ರಯತ್ನ ವಾಣಿಜ್ಯ ಸಚಿವಾಲಯದಿಂದ ನಡೆಯುತ್ತಲೇ ಇರುತ್ತದೆ. 2013 ಏಪ್ರಿಲ್ ತಿಂಗಳಿನಲ್ಲಿ ಕೇಂದ್ರ ವಾಣಿಜ್ಯ ಸಚಿವ ಆನಂದ ಶರ್ಮ 2013-14ನೆಯ ಸಾಲಿನ ವಿದೇಶ ವ್ಯಾಪಾರ ನೀತಿಗೆ ವಿಶೇಷ ಪುರವಣಿ ಪ್ರಕಟಿಸಿದರು. ಕೆಲವು ಎಸ್‌ಇಝಡ್ ಘಟಕಗಳಿಗೆ ಜೀವ ಕಳೆ ತುಂಬಿ ಹೂಡಿಕೆದಾರರನ್ನು ಆಕರ್ಷಿಸುವ ಉದ್ದೇಶ ಈ ಪುರವಣಿಯಲ್ಲಿದೆ. ಎಸ್‌ಇಝಡ್ ಘಟಕವನ್ನು ಸ್ಥಾಪಿಸಲು ಕಾನೂನಿನ ಪ್ರಕಾರ ಬೇಕಾದ ಕನಿಷ್ಠ ಭೂಮಿಯ ವಿಸ್ತಾರವನ್ನು ಪ್ರತಿಶತ 50ರಷ್ಟು ಇಳಿಸಲಾಗಿದೆ. ಮಾಹಿತಿ ತಂತ್ರಜ್ಞಾನದ ಘಟಕಗಳಿಗೆ ಕನಿಷ್ಠ ಭೂಮಿಯ ವಿಸ್ತಾರದ ನಿಯಮ ಇನ್ನು ಅನ್ವಯಿಸುವುದೇ ಇಲ್ಲ. ಎಸ್‌ಇಝಡ್ ಘಟಕಗಳ ಒಡೆತನದ ವರ್ಗಾವಣೆ ಮತ್ತು ಮಾರಾಟಕ್ಕೆ ಈಗ ವ್ಯಾಪಾರ ನೀತಿ ಅನುವು ಮಾಡಿಕೊಡುತ್ತದೆ. ವಿಶೇಷ ಪುರವಣಿಯ ಪರಿಣಾಮದಿಂದ ಇನ್ನಷ್ಟು ಲಾಭದಾಯಕವಲ್ಲದ ಸಣ್ಣ ಗಾತ್ರವುಳ್ಳ ಎಸ್‌ಇಝಡ್‌ಗಳು ಹುಟ್ಟಿ ಬರುವ ಸಾಧ್ಯತೆ ಸಾಕಷ್ಟಿದೆ. 2013ರ ಎಸ್‌ಇಝಡ್ ನಿಯಮಾವಳಿಗಳು ಸಂಪೂರ್ಣ ಜಾರಿಯಾದಾಗ 2005ರ ಕಾನೂನು ವಿಕೃತಗೊಳ್ಳುವ ಲಕ್ಷಣಗಳಿವೆ.
ಪರಿಸರವಾದಿಗಳ ವಿರೋಧದಿಂದಾಗಿಯೂ ಎಷ್ಟೋ ಎಸ್‌ಇಝಡ್ ಘಟಕಗಳು ತಾತ್ವಿಕ ಅನುಮತಿ ಪಡೆದ ನಂತರ ಕಾರ್ಯಾರಂಭಿಸಲು ವಿಫಲವಾದವು. ಆಂಧ್ರ, ಗುಜರಾತ್, ಕರ್ನಾಟಕ, ಮಹಾರಾಷ್ಟ್ರ ಮತ್ತು ತಮಿಳುನಾಡು ರಾಜ್ಯಗಳಲ್ಲಿ ಈಗ ಎಸ್‌ಇಝಡ್ ಘಟಕಗಳು ಕೇಂದ್ರೀಕೃತವಾಗಿವೆ. ಕೆಲವು ರಾಜ್ಯಗಳಲ್ಲಿ ತಾತ್ವಿಕ ಅನುಮತಿ ಪಡೆದು 7-8 ವರ್ಷಗಳು ಕಳೆದ ಮೇಲೂ ಒಂದೇ ಒಂದು ಎಸ್‌ಇಝಡ್ ಘಟಕ ಕೂಡ ಪ್ರಾರಂಭವಾಗಿಲ್ಲ. ಈಗ ಚಾಲ್ತಿ ಲೆಕ್ಕದ ಕೊರತೆ ದೇಶದ ಆರ್ಥಿಕತೆಗೆ ಗಂಭೀರವಾದ ಸವಾಲು. ರಫ್ತುಗಳ ಪ್ರಮಾಣವನ್ನು ಹೆಚ್ಚಿಸುವುದು ತೀರಾ ಅಗತ್ಯ. ಕೇವಲ ವಿರೋಧಕ್ಕಾಗಿ ವಿರೋಧ ಮಾಡುತ್ತಿರುವ ಪರಿಸರವಾದಿಗಳು ತಮ್ಮ ನಿಲುವನ್ನು ಬದಲಾಯಿಸದಿದ್ದರೆ ಸಾರ್ವಜನಿಕ ಹಣ ಅಪಾಯಕ್ಕೀಡಾಗುತ್ತದೆ.
2013ರ ನ್ಯಾಯಯುತ ಪರಿಹಾರದ ಹಕ್ಕು ಮತ್ತು ಪಾರದರ್ಶಕ ಭೂಸ್ವಾಧೀನ, ಪುನರ್ವಸತಿ ಹಾಗೂ ಪರಿಹಾರ ಕಾಯಿದೆ ಇನ್ನು ಮುಂದೆ ಹುಟ್ಟಲಿರುವ ಎಸ್‌ಇಝಡ್‌ಗಳಿಗೆ ಅನ್ವಯಿಸುತ್ತದೆ ಎಂದು ಜೈರಾಮ್ ರಮೇಶ್ ಘೋಷಿಸಿದ್ದಾರೆ. 1896ರ ಭೂ ಸ್ವಾಧೀನ ಕಾನೂನು ಅನೇಕ ಸಮಸ್ಯೆಗಳನ್ನು ಸೃಷ್ಟಿಸಿತ್ತು. ಎಸ್‌ಇಝಡ್ ಘಟಕಗಳಿಗೂ ಇದರ ಬಿಸಿ ತಾಗಿತ್ತು. 2013ರ ಕಾನೂನು ಭೂಮಿ ಕಳೆದುಕೊಳ್ಳುವ ರೈತರ ಹಿತಾಸಕ್ತಿಗಳನ್ನು ರಕ್ಷಿಸಲಿದೆಯೆಂಬ ಆಸೆ ಹುಟ್ಟಿಸಿದೆ. ಮುಂದಿನ ದಿನಗಳಲ್ಲಿ ಎಸ್‌ಇಝಡ್‌ಗಳಿಗೆ ಅನುಮತಿ ನೀಡುವಾಗ ಹಿಂದೆ ಮಾಡಿದ ತಪ್ಪುಗಳನ್ನು ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಮಾಡದಿದ್ದರೆ ಎಸ್‌ಇಝಡ್‌ಗಳು ದೇಶದ ಆರ್ಥಿಕ ಬೆಳವಣಿಗೆಗೆ ಸಹಕಾರಿಯಾಗಬಹುದು. ಕೃಷಿ ಉತ್ಪನ್ನಗಳ ಮೌಲ್ಯವರ್ಧನೆ ಆಗಬೇಕಾಗಿರುವುದು ಸತ್ಯ. ರಫ್ತು ವ್ಯಾಪಾರಕ್ಕೆ ಅನುಕೂಲಕರವಾಗಬಲ್ಲ ಕೃಷಿ ಆಧಾರಿತ ಉದ್ದಿಮೆಗಳು ಎಸ್‌ಇಝಡ್‌ಗಳಲ್ಲಿ ಹುಟ್ಟಿ ಬಂದರೆ ಆರ್ಥಿಕತೆಗೆ ವಿಶೇಷ ಲಾಭವಾಗಲಿದೆ.  

- ಪ್ರೊ. ಜಿ. ವಿ. ಜೋಶಿ, ನಿಟ್ಟೆ   
anisikeprabha@gmail.com

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement