ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಅಂಕಣಗಳು

ನರೇಂದ್ರ ಮೋದಿ ಮತ್ತು ಧ್ರುವೀಕರಣವೆಂಬ ಕಟ್ಟು ಕಥೆ

ಯುಪಿಎ ಸರ್ಕಾರಕ್ಕೆ 2014ರ ಚುನಾವಣೆಗಳಲ್ಲಿ ಭಾರೀ ಸವಾಲೊಡ್ಡಲಿರುವ ಮೋದಿಯವರದ್ದು...

Srinivasa Murthy VN
Updated On : 17 Oct 2013, 6:43 am

ಯುಪಿಎ ಸರ್ಕಾರಕ್ಕೆ 2014ರ ಚುನಾವಣೆಗಳಲ್ಲಿ ಭಾರೀ ಸವಾಲೊಡ್ಡಲಿರುವ ನರೇಂದ್ರ ಮೋದಿಯವರದ್ದು ಹಲವು ವರ್ಷಗಳಿಂದ ದೇಶದಲ್ಲಿ ಅತಿ ಹೆಚ್ಚು ಬಾರಿ ಚರ್ಚೆಗೊಳಗಾಗಿರುವ ಹೆಸರು. ಸಮಾಜದಲ್ಲಿ ಒಡಕುಂಟುಮಾಡುವ, ಹಿಂದುಗಳಿಗೆ ಪ್ರಾಧಾನ್ಯತೆ ಕೊಡುವ ಮತ್ತು ಮತಗಳ ಧ್ರುವೀಕರಣಗೊಳಿಸುವ ವ್ಯಕ್ತಿಯೆಂದೇ ಅವರನ್ನು ದೂಷಿಸಲಾಗುತ್ತದೆ. ಈ ಸಂದರ್ಭದಲ್ಲಿ ನಾವು ಉತ್ತರಕಂಡುಕೊಳ್ಳಲೇಬೇಕಿರುವ ಪ್ರಶ್ನೆಯೆಂದರೆ, ಇಷ್ಟೆಲ್ಲಾ "ಪುರಸ್ಕಾರಗಳನ್ನು" ಅವರ ಮೇಲೆ ಸುರಿಸಬೇಕೇ ಎಂಬುದು.
ಬಹು ಸಂಖ್ಯಾತರಿಗೇ ಮೋದಿ ಹೆಚ್ಚು ಮಣೆ ಹಾಕುತ್ತಾರೆ ಎನ್ನುವುದು ಬಹುತೇಕರ ವಾದ. ಆದರೆ ನಿಜಾಂಶಗಳು ಬೇರೆಯದ್ದೇ ಕಥೆ ಹೇಳುತ್ತವೆ. ಅದಾಗ್ಯೂ ಮೋದಿ ಮುಖ್ಯಮಂತ್ರಿಯಾಗಿರುವಾಗ ಗುಜರಾತ್ ಹಿಂಸಾಚಾರ ನಡೆಯಿತು, ಮತ್ತದರಲ್ಲಿ 700 ಮುಸಲ್ಮಾನರು ಮತ್ತು 300 ಹಿಂದುಗಳು ಬಲಿಯಾದರು ಎನ್ನುವುದನ್ನು ಯಾರೂ ಇಲ್ಲಿ ಅಲ್ಲಗಳೆಯುತ್ತಿಲ್ಲ, ಅದೂ ಸಾಧ್ಯವೂ ಇಲ್ಲ. ಆದರೆ ಆ ಹಿಂಸಾಚಾರದಲ್ಲಿ ಅವರ ಪಾತ್ರವಿರಲಿಲ್ಲ ಎನ್ನುವುದನ್ನು ಖುದ್ದು ಸುಪ್ರೀಂ ಕೋರ್ಟ್ ಹೇಳಿದೆ. ಅಷ್ಟೇ ಅಲ್ಲದೆ ಹಿಂಸಾಚಾರವನ್ನು ತಡೆಗಟ್ಟುವಲ್ಲಿ ನರೇಂದ್ರ ಮೋದಿ ಕೈಗೊಂಡ ಕ್ರಮಗಳ ಬಗ್ಗೆಯೂ ಪ್ರಶಂಸಾರ್ಹ ಎಂದದು ಮನಸಾರೆ ಹೊಗಳಿದೆ. ಸಂಪೂರ್ಣ ಆಡಳಿತಾತ್ಮಕ ಹಿಡಿತ ದೊರೆಯುವುದಕ್ಕೂ ಮುನ್ನವೇ, ಅಂದರೆ ಮೋದಿ ಅಧಿಕಾರ ವಹಿಸಿಕೊಂಡು ಕೇವಲ ನಾಲ್ಕು ತಿಂಗಳಾಗಿರುವಷ್ಟರಲ್ಲೇ ಗುಜರಾತ್‌ನಲ್ಲಿ ಹಿಂಸಾಚಾರ ಭುಗಿಲೆದ್ದಿತ್ತು. ಅಷ್ಟಕ್ಕೂ ಅದು ಗುಜರಾತ್‌ನಲ್ಲಿ ನಡೆದ ಏಕೈಕ ಕೋಮುಗಲಭೆಯೇನೂ ಆಗಿರಲಿಲ್ಲ. 1969, 87, 89, 90, 92ರಲ್ಲೂ ಅಲ್ಲಿ ಗಂಭೀರ ಗಲಭೆಗಳು ನಡೆದಿದ್ದವು.  ನರೇಂದ್ರ ಮೋದಿಯವರ ಆಡಳಿತದಡಿಯಲ್ಲಿ ಗುಜರಾತ್ ಶಾಂತಿ, ಅಭಿವೃದ್ಧಿ ಮತ್ತು ಸಮೃದ್ಧಿಗೆ ಸಾಕ್ಷಿಯಾಗಿದೆ. ಕಳೆದೊಂದು ದಶಕದಲ್ಲಿ ಆ ರಾಜ್ಯದಲ್ಲಿ ಒಂದೇ ಒಂದೂ ಕರ್ಫ್ಯೂ ಕೂಡ ಜಾರಿಯಾಗಿಲ್ಲ. ಹೀಗೆ ನಡೆದಿರುವುದು ಆ ರಾಜ್ಯದ ಇತಿಹಾಸದಲ್ಲೇ ಮೊದಲ ಬಾರಿಗೆ.
ದೇಶದ ಉಳಿದ ರಾಜ್ಯಗಳಿಗೆ ಹೋಲಿಸಿದರೆ ಗುಜರಾತಿ ಮುಸಲ್ಮಾನರ ಆರ್ಥಿಕ ಮತ್ತು ಸಾಮಾಜಿಕ ಸ್ಥಿತಿ ಅತ್ಯುತ್ತಮವಾಗಿದೆ ಎನ್ನುತ್ತದೆ ಸಾಚಾರ್ ಸಮಿತಿಯ ವರದಿ. ಅಲ್ಲದೆ ಗುಜರಾತಿ ಮುಸಲ್ಮಾನರ ತಲಾವಾರು ಆದಾಯ(ನಗರ ಪ್ರದೇಶಗಳಲ್ಲಿ ರು. 875 ಮತ್ತು ಗ್ರಾಮೀಣ ಪ್ರದೇಶಗಳಲ್ಲಿ 668 ರು.) ರಾಷ್ಟ್ರೀಯ ಸರಾಸರಿಗಿಂತ ಅಧಿಕವಿದೆ( ನಗರ ಪ್ರದೇಶಗಳಲ್ಲಿ ರು. 804 ಮತ್ತು ಗ್ರಾಮೀಣ ಪ್ರದೇಶಗಳಲ್ಲಿ 553 ರು.). ಇನ್ನು ಮುಸ್ಲಿಮರು ಅಧಿಕ ಸಂಖ್ಯೆಯಲ್ಲಿರುವ ಉತ್ತರಪ್ರದೇಶ ಮತ್ತು ಪಶ್ಚಿಮ ಬಂಗಾಳದಲ್ಲಿ ಆ ಸಮುದಾಯಿದ ತಲಾವಾರು ಆದಾಯ ಕ್ರಮವಾಗಿ 662 ರುಪಾಯಿ(ನಗರಪ್ರದೇಶ) ಮತ್ತು 748 ರುಪಾಯಿಗಳಷ್ಟು ಕಡಿಮೆಯಿದೆ. ಅತಿ ಹೆಚ್ಚು ಮುಸಲ್ಮಾನರಿರುವ ಗುಜರಾತ್‌ನ ಪ್ರಮುಖ ಎರಡು ಜಿಲ್ಲೆಗಳಾದ ಭರೂಚ್ ಮತ್ತು ಕಛ್‌ಗಳು ದೇಶದಲ್ಲಿ ಅತಿವೇಗವಾಗಿ ಬೆಳೆಯುತ್ತಿರುವ ಜಿಲ್ಲೆಗಳಾಗಿವೆ. ಗುಜರಾತಿ ಮುಸಲ್ಮಾನರ ಸಾಕ್ಷರತಾ ಪ್ರಮಾಣ 73.5 ಪ್ರತಿಶತದಷ್ಟಿದ್ದರೆ, ರಾಷ್ಟ್ರದ ಸರಾಸರಿ ಪ್ರಮಾಣ ಇರುವುದು 59.1 ಪ್ರತಿಶತದಷ್ಟಿದೆ. ಗುಜರಾತ್ ಸರ್ಕಾರದಡಿಯಲ್ಲಿ ಮುಸಲ್ಮಾನರ ಉದ್ಯೋಗ ಪ್ರಮಾಣ 5.4 ಪ್ರತಿಶತದಷ್ಟಿದ್ದರೆ, ಪಶ್ಚಿಮ ಬಂಗಾಳದಲ್ಲಿ 2.1 ಪ್ರತಿಶತ, ದೆಹಲಿ 3.2 ಪ್ರತಿಶತ, ಮಹಾರಾಷ್ಟ್ರ 4.4 ಪ್ರತಿಶತದಷ್ಟಿದೆ.
ಎಲ್ಲಾ ಸಮುದಾಯಗಳಿಂದಲೂ ಬೆಂಬಲ ಸಿಕ್ಕಿದ್ದರಿಂದಲೇ ಸತತ ಮೂರನೇ ಬಾರಿಗೂ ಮೋದಿ ಮುಖ್ಯಮಂತ್ರಿ ಪದವಿಯನ್ನು ಅಲಂಕರಿಸಿದರು. ಮುಸಲ್ಮಾನರ ಸಂಖ್ಯೆ 10 ರಿಂದ 60 ಪ್ರತಿಶತದಷ್ಟಿರುವ 66 ಕ್ಷೇತ್ರಗಳಲ್ಲಿ ಬಿಜೆಪಿ ಗೆಲುವು ಸಾಧಿಸಿದ್ದು 40 ಕ್ಷೇತ್ರಗಳಲ್ಲಿ. ಮುಸಲ್ಮಾನರ ಬಾಹುಳ್ಯವಿರುವ ಭುಜ್ ಮತ್ತು ವಾಗ್ರಾದ ಚುನಾವಣಾ ಕ್ಷೇತ್ರಗಳಲ್ಲಿ ಬಿಜೆಪಿಯ ಹಿಂದು ಅಭ್ಯರ್ಥಿಗಳು ಕಾಂಗ್ರೆಸ್‌ನ ಮುಸಲ್ಮಾನ ಅಭ್ಯರ್ಥಿಗಳ ವಿರುದ್ಧ ಗೆಲುವು ಸಾಧಿಸಿದ್ದಾರೆ. 90 ಪ್ರತಿಶತ ಮುಸಲ್ಮಾನರಿರುವ ಸಲಾಯಾ ಎಂಬ ಪ್ರದೇಶದಲ್ಲಿ ನಡೆದ ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ತಾನು ಸ್ಪರ್ಧಿಸಿದ ಎಲ್ಲಾ 24 ಸ್ಥಾನಗಳಲ್ಲೂ ಬಿಜೆಪಿ ಗೆಲುವು ಸಾಧಿಸಿತು. ಸತತ ಮೂರು ಬಾರಿ ಖೇಡಾದಿಂದ ಸ್ಥಳೀಯ ಸಂಸ್ಥೆ ಪ್ರತಿನಿಧಿಯಾಗಿ ಆಯ್ಕೆಯಾಗಿರುವ ಯುವ ಮುಸಲ್ಮಾನ ಯುವತಿ ಆಶ್ಮಾ ಖಾನ್ ಪಠಾಣ್, "ಮೋದಿಯವರ ಹುಟ್ಟುಹಬ್ಬದಂದು ಖೇಡಾ ಜಿಲ್ಲೆಯೊಂದರಲ್ಲೇ ಸುಮಾರು 7000 ಮುಸಲ್ಮಾನರು ಬಿಜೆಪಿಗೆ ಸೇರಿದರು" ಎಂದು ಹೇಳುತ್ತಾರೆ. ಹೀಗೆ ಕಾರ್ಯಕರ್ತರಾಗಿ ಬಿಜಿಪಿಗೆ ಸೇರಿದವರಲ್ಲಿ ಬಹುತೇಕರು ಗುಜರಾತ್ ಹಿಂಸಾಚಾರದಿಂದ ಹಾನಿ ಅನುಭವಿಸಿದವರೇ ಎನ್ನುವುದು ವಿಶೇಷ! ಮೋದಿಯವರ ಬೆಂಬಲಿಗರಲ್ಲಿ ಪ್ರಭಾವಿ ಮುಸಲ್ಮಾನರೂ ಇದ್ದಾರೆ. ಇವರಲ್ಲಿ ಝಫರ್ ಸರೇಶ್‌ವಾಲಾ(ಉದ್ಯಮಿ), ಆಸಿಫಾ ಖಾನ್( ಕಾಂಗ್ರೆಸ್ ವಕ್ತಾರೆಯಾಗಿದ್ದ ಈಕೆ ಈಗ ಬಿಜೆಪಿ ಸೇರಿದ್ದಾರೆ), ಮುಫ್ತಿ ಶಬ್ಬೀರ್ ಅಹಮದ್ ಸಿದ್ದಿಕಿ( ಅಹಮದಾಬಾದ್‌ನ ಜಾಮಾ ಮಸೀದಿಯ ಇಮಾಮ್) ಪ್ರಮುಖರು.  
ದೇಶದ ರಾಜಕಾರಣಿಗಳು, ಜಾತಿ ಅಥವಾ ಕೋಮು ಆಧಾರದ ಮೇಲೆಯೇ ತಮ್ಮ ಭದ್ರ ನೆಲೆಯನ್ನು ಸೃಷ್ಟಿಸಿಕೊಂಡಿದ್ದಾರೆ ಎನ್ನುವುದು ತಿಳಿಯದ ಸಂಗತಿಯೇನಲ್ಲ. ರಾಷ್ಟ್ರೀಯ ಸಂಪತ್ತಿನ ಬಳಕೆಯಲ್ಲಿ ಮುಸಲ್ಮಾನರಿಗೆ ಮೊದಲ ಹಕ್ಕಿದೆ ಎಂದು ಹೇಳುವ ಪ್ರಧಾನಿ ಮನಮೋಹನ್ ಸಿಂಗ್ ಅವರಿಂದ ಹಿಡಿದು, ಶಿಕ್ಷಣ ಮತ್ತು ಸೇವಾ ಕ್ಷೇತ್ರಗಳಲ್ಲೂ ಮುಸಲ್ಮಾನರಿಗಾಗಿ ಪ್ರತ್ಯೇಕ ನಿಯಮಗಳನ್ನು ಜಾರಿಗೆ ತರುತ್ತಿರುವ ಬಹುತೇಕ ಪಕ್ಷಗಳವರೆಗೆ ಈ ಪಟ್ಟಿ ಸಾಗುತ್ತದೆ. ಇನ್ನೂ ಕೆಲವು ಪಕ್ಷಗಳು ಜಾತಿಯ ಹೆಸರಿನಲ್ಲಿ ತಮ್ಮನ್ನು ತಾವು ಗುರುತಿಸಿಕೊಳ್ಳಲು ಇಷ್ಟಪಡುತ್ತವೆ. ಉತ್ತರಪ್ರದೇಶದ ಸಮಾಜವಾದಿ ಪಕ್ಷ ಮತ್ತು ಬಹುಜನ ಸಮಾಜ ಪಕ್ಷಗಳು ಯಾದವರು ಮತ್ತು ದಲಿತರ ಹೆಸರು ಹೇಳಿಕೊಂಡೇ ಮುಂದೆ ಬಂದಿವೆ. ಈ ವಿಷಯದಲ್ಲೇ ಮೋದಿ ಎಲ್ಲರಿಗಿಂತಲೂ ಭಿನ್ನರಾಗಿ ನಿಲ್ಲುತ್ತಾರೆ. ಅವರು ತಮ್ಮ ರಾಜ್ಯದ ಜನತೆಯನ್ನು ಕೋಮು ಅಥವಾ ಜಾತಿಯ ಕನ್ನಡಕದಲ್ಲಿ ನೋಡದೇ, ಎಲ್ಲರನ್ನೂ "ಗುಜರಾತಿಗಳು" ಎಂದೇ ಕರೆಯುತ್ತಾರೆ. ಅವರು ಯಾವುದೇ ಧರ್ಮವನ್ನು ಪುಸಲಾಯಿಸುವ ಕೆಲಸ ಮಾಡುವುದಿಲ್ಲ. ಸಾರ್ವಜನಿಕ ಸ್ಥಳಗಳಲ್ಲಿ ಅನಧಿಕೃತವಾಗಿ ಕಟ್ಟಲಾಗಿದೆ ಎನ್ನುವ ಕಾರಣಕ್ಕೆ ಮಂದಿರಗಳನ್ನೂ ಅವರ ಸರ್ಕಾರ ತೆರವುಗೊಳಿಸಿದೆ. ಇನ್ನು ಪಾಕಿಸ್ತಾನಿ ಕಲಾವಿದರ ಪ್ರದರ್ಶನವನ್ನು ತಡೆಯಲು ಪ್ರಯತ್ನಿಸಿದ ಹಿಂದು ಸಂಘಟನೆಗಳನ್ನೂ ಅವರ ಸರ್ಕಾರ ಹತ್ತಿಕ್ಕಿದ ಸುದ್ದಿ ಗೊತ್ತಿರುವಂಥದ್ದೆ.ಮುಸಲ್ಮಾನ ವಿದ್ಯಾರ್ಥಿಗಳಿಗೆ ಸ್ಕಾಲರ್‌ಶಿಪ್ ಕೊಡಬೇಕು ಎಂಬ ಕೇಂದ್ರ ಸರ್ಕಾರದ ಆದೇಶವನ್ನು ಅವರು ತೀವ್ರವಾಗಿ ಖಂಡಿಸಿದ ವಿಷಯ ಬಹಳ ಚರ್ಚೆಗೊಳಗಾಗಿತ್ತು. ಈಗ ಗುಜರಾತ್ ಸರ್ಕಾರ ಜನರ ಆರ್ಥಿಕ ಪರಿಸ್ಥಿತಿಯನ್ನು ಮಾತ್ರ ಪರಿಗಣಿಸಿ ಸ್ಕಾಲರ್‌ಶಿಪ್ ಕೊಡುತ್ತಿರುವುದರಿಂದ ಎಲ್ಲಾ ಕೋಮುಗಳಲ್ಲಿನ ಬಡ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಲಾಭವಾಗುತ್ತಿದೆ.  ಹಾಗೆ ನೋಡಿದರೆ ಮೋದಿ ಅತ್ಯಂತ ಹಿಂದುಳಿದ ಜಾತಿಗೆ ಸೇರಿದವರಾದರೂ, ಅವರೆಂದೂ ತಮ್ಮ ಜಾತಿ ಹೆಸರು ಹೇಳಿಕೊಂಡು ರಾಜಕಾರಣ ಮಾಡಿದವರಲ್ಲ.
ಅವರು ಕೇವಲ ಉತ್ತಮ ರಾಜಕೀಯದಿಂದಷ್ಟೇ ಅಲ್ಲದೆ, ಉತ್ತಮ ಆರ್ಥಿಕ ಯೋಜನೆಗಳ ಮೂಲಕವೂ ಗುಜರಾತನ್ನು ಭೂಪಟಲದ ಮೇಲೆ ಮಿಂಚುವಂತೆ ಮಾಡಿದ್ದಾರೆ. ರಾಜ್ಯದ ಸಂಪತ್ತನ್ನು ಅನುದಾನ ಮತ್ತು ಸಬ್ಸಿಡಿಗಳಿಗಿಂತ ಹೆಚ್ಚಾಗಿ ಮೂಲಸೌಕರ್ಯಾಭಿವೃದ್ಧಿಯಲ್ಲಿ ಬಳಸಬೇಕು ಎಂಬುದು ಅವರ ಸಿದ್ಧಾಂತ. ಗುಜರಾತ್, ಹೊಸ ತಂತ್ರಜ್ಞಾನಗಳ ಮೂಲಕ ಶಕ್ತಿ ಉತ್ಪಾದನಾ ವಲಯಗಳಲ್ಲೂ ಮುಂಚೂಣಿಯಲ್ಲಿದೆ. ಏಷಿಯಾದ ಅತಿದೊಡ್ಡ ಸೋಲಾರ್‌ಪಾರ್ಕ್ ಗುಜರಾತ್‌ನಲ್ಲಿದ್ದು ಅದು 600 ಮೆಗಾ ವ್ಯಾಟ್ ವಿದ್ಯುತ್ ಉತ್ಪಾದಿಸುತ್ತದೆ. ಅಂದರೆ ದೇಶದ ಸೋಲಾರ್ ವಿದ್ಯುತ್ ಉತ್ಪಾದನೆಯಲ್ಲಿ 3ರಲ್ಲಿ ಎರಡನೇ ಭಾಗದಷ್ಟು. ತಂತ್ರಜ್ಞಾನ ಆಧಾರಿತ ಪರಿವೀಕ್ಷಣೆಯ ಮೂಲಕ ಬೃಹತ್ ಪ್ರಮಾಣದಲ್ಲಿ ನಡೆಯುತ್ತಿದ್ದ ವಿದ್ಯುತ್ ಕಳ್ಳತನವನ್ನು ತಡೆ ಹಿಡಿದು ವಿದ್ಯುತ್ ಅಭಾವವನ್ನು ಸರಿಪಡಿಸಲಾಗಿದೆ. ಈ ಕ್ರಮವನ್ನು ಬಿಜೆಪಿಯ ರೈತ ಘಟಕವಾದ ಭಾರತೀಯ ಕಿಸಾನ್ ಸಂಘವೇ ತೀವ್ರವಾಗಿ ವಿರೋಧಿಸಿತ್ತು. ಆದರೆ ಈ ವಿರೋಧಗಳ್ಯಾವುದಕ್ಕೂ ಸೊಪ್ಪು ಹಾಕಲಿಲ್ಲ ಮೋದಿ! ಜುಲೈ 2012ರಲ್ಲಿ ಸುಮಾರು 600 ಮಿಲಿಯನ್ ಜನರು ಕತ್ತಲಕೂಪದಲ್ಲಿ ಮುಳುಗಿದ್ದಾಗ ಗುಜರಾತ್ ಮಾತ್ರ ಬೆಳಕಿನಿಂದ ಝಗಮಗಿಸುತ್ತಿತ್ತು!  
ಇನ್ನು ಕಾನೂನು ಸುವ್ಯವಸ್ಥೆಯ ವಿಷಯದಲ್ಲೂ ಗುಜರಾತ್ ಉಳಿದ ರಾಜ್ಯಗಳಿಗೆ ಮಾದರಿಯಾಗಿ ನಿಂತಿದೆ. ಮೊದಲಿನಿಂದಲೂ ಮೋದಿಯವರನ್ನು ಕಟುವಾಗಿ ವಿರೋಧಿಸುತ್ತಾ ಬಂದಿದ್ದ "ಎಬಿಪಿ" ಎಂಬ ಸುದ್ದಿ ವಾಹಿನಿಯೂ ಸಹ, "ದೇಶದಲ್ಲಿ ಹೆಣ್ಣುಮಕ್ಕಳಿಗೆ ಅತ್ಯಂತ ಸುರಕ್ಷಿತ ಪ್ರದೇಶವೆಂದರೆ ರಾಜಕೋಟ್‌" ಎಂದು ಮೆಚ್ಚುಗೆ ಸೂಚಿಸಿತ್ತು. ಕಳೆದೊಂದು ದಶಕದಲ್ಲಿ ಗುಜರಾತ್‌ನ ಆರ್ಥಿಕ ಅಭಿವೃದ್ಧಿಯ ಸರಾಸರಿ ಪ್ರಮಾಣ 10.3 ಪ್ರತಿಶತದಲ್ಲಿ ಮುನ್ನುಗ್ಗುತ್ತಿದೆ. ಇಡೀ ಪ್ರಪಂಚವೇ ಹಣದುಬ್ಬರದ ಹೊಡೆತಕ್ಕೆ ಸಿಲುಕಿ ನುಜ್ಜುಗುಜ್ಜಾಗಿದ್ದ ಸಮಯದಲ್ಲೂ ಕೂಡ ಗುಜರಾತ್‌ನ ಸಮಗ್ರ ಉತ್ಪನ್ನ 11.58 ಪ್ರತಿಶತಕ್ಕೇರಿತ್ತು. 2005ರಲ್ಲಿ, ಮೋದಿಯವರ ಪಕ್ಕಾ ವಿರೋಧಿಯಾದ ಸೋನಿಯಾ ಗಾಂಧಿಯವರ ನೇತೃತ್ವದ ರಾಜೀವ್ ಗಾಂಧಿ ಪ್ರತಿಷ್ಠಾನ, "ಆರ್ಥಿಕ ಸ್ವಾತಂತ್ರ್ಯದ ಸೂಚ್ಯಂಕದಲ್ಲಿ ದೇಶದಲ್ಲೇ ಅತ್ಯುತ್ತಮ ರಾಜ್ಯ ಗುಜರಾತ್‌" ಎಂದು ಹೇಳಿತ್ತು!  
ಹಿಂದೆ ಅತೀವ ಜಲ ಅಭಾವದಿಂದ ಬಳಲುತ್ತಿದ್ದ ಗುಜರಾತ್ ಈಗ ಕೃಷಿ ಕ್ಷೇತ್ರದಲ್ಲೂ ಕಂಗೊಳಿಸುತ್ತಿರುವುದು ಸಾಮಾನ್ಯ ಸಾಧನೆಯೇನಲ್ಲ. ಇದಕ್ಕಾಗಿ ಆ ರಾಜ್ಯದಲ್ಲಿ ಸೃಜನಾತ್ಮಕ ಜಲ ನಿರ್ವಹಣಾ ವಿಧಾನಗಳನ್ನು ಅಳವಡಿಸಿಕೊಳ್ಳಲಾಯಿತು. ಕಳೆದ ಎಂಟು ವರ್ಷಗಳಲ್ಲಿ ಉಳಿದ ರಾಜ್ಯಗಳಿಗೆ ಹೋಲಿಸಿದರೆ ಗುಜರಾತ್‌ನ ಅಂತರ್ಜಲ ಮಟ್ಟ ಅಧಿಕವಿದೆ ಎನ್ನುತ್ತದೆ ಕೇಂದ್ರದ ಅಂತರ್ಜಲ ಮಂಡಳಿ. ಕಾಲುವೆಗಳ ಮೂಲಕ ನರ್ಮದಾ ಮತ್ತು ಸಾಬರ್‌ಮತಿ ನದಿಗಳನ್ನು ಜೋಡಿಸಿರುವುದು ಈ ಸಾಧನೆಯ ಹಿಂದಿರುವ ಗುಟ್ಟು. ಕಳೆದ ಹತ್ತು ವರ್ಷಗಳಲ್ಲಿ ಸುಮಾರು 5.5 ಲಕ್ಷ ಜಲ ನಿರ್ವಹಣಾ ನಿರ್ಮಾಣ ಕಾರ್ಯಗಳು ಮತ್ತು ಕಿರು ನೀರಾವರಿ ಯೋಜನೆಗಳಡಿಯಲ್ಲಿ ಗುಜರಾತ್‌ನ 4 ಲಕ್ಷ ಹೆಕ್ಟೇರ್ ಕೃಷಿ ಭೂಮಿ ಹಸಿರಿನಿಂದ ಮೈದುಂಬಿಕೊಳ್ಳುತ್ತಿವೆ.
ಇನ್ನು ಮೋದಿಯವರು ಮತದಾರರನ್ನು ತಲುಪಲು ಭಾರತೀಯ ಸಂದರ್ಭಕ್ಕೆ ಹೊಸತು ಎನಿಸುವಂಥ ತಂತ್ರವನ್ನು ಅಳವಡಿಸಿಕೊಂಡಿದ್ದಾರೆ. ಸ್ವಂತ ಬ್ಲಾಗ್ ಸೃಷ್ಟಿಸಿದ ಮತ್ತು ಟ್ವಿಟ್ಟರ್-ಫೇಸ್‌ಬುಕ್‌ಗಳಲ್ಲಿ ಮೊದಲು ಖಾತೆ ತೆರೆದ ರಾಜಕಾರಣಿಗಳಲ್ಲಿ ಅವರೂ ಒಬ್ಬರು. ಗೂಗಲ್ ಹ್ಯಾಂಗ್‌ಔಟ್‌ನ ಮೂಲಕ ಯುವ ವಿದ್ಯಾವಂತ ವರ್ಗವನ್ನು ಉದ್ದೇಶಿಸಿ ಅವರು ಮಾತನಾಡಿದರು, 3ಡಿ ಪ್ರಾಜೆಕ್ಷನ್‌ಗಳ ಮೂಲಕ ಅವರು ನಡೆಸಿದ ರ್ಯಾಲಿ ಗಿನ್ನಿಸ್ ದಾಖಲೆಯಲ್ಲಿ ಸ್ಥಾನ ಪಡೆಯಿತು.  
ಇದೇನೇ ಇದ್ದರೂ ಮೋದಿ ಈಗ ಚುನಾವಣೆಗಳಿಗೆ ಮತ ಯಾಚಿಸುತ್ತಿರುವುದು ತಮ್ಮ ನಿರ್ಣಾಯಕ ಮತ್ತು ಭ್ರಷ್ಟಾಚಾರ ರಹಿತ ಆಡಳಿತದ ಆಧಾರದ ಮೇಲೆಯೇ ಹೊರತು, ಉಳಿದ ಪಕ್ಷಗಳಂತೆ 'ಐಡೆಂಟಿಟಿಯ' ಆಧಾರದ ಮೇಲಲ್ಲ. ಈಗ ಅವರು ಅಖಾಡಕ್ಕಿಳಿದಿದ್ದಾರೆ. ಮತದಾರರು ಚುನಾವಣೆಗಳಿಗಾಗಿ ಕಾದು ಕುಳಿತಿದ್ದಾರೆ. ಮತದಾರರು ಯಾರಿಗೆ ಮಣೆ ಹಾಕುತ್ತಾರೆ ಎನ್ನುವ ಪ್ರಶ್ನೆಗೆ ಸಮಯವೇ ಉತ್ತರಿಸಲಿದೆ.

- ಶಾಶ್ವತಿ ಸರ್ಕಾರ್
swati@seas.upenn.edu
ಪ್ರಾಧ್ಯಾಪಕರು, ಪೆನ್ಸಿಲ್ವೇನಿಯಾ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement