ಅಂಕಣಗಳು

ಹೊಸ ಸರ್ಕಾರದ ಹೊಳಪು ಮಸಕಾಗುತ್ತಿದೆ

ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸಚಿವ ಸಂಪುಟ ಅಧಿಕಾರವನ್ನು ವಹಿಸಿಕೊಂಡು ಇನ್ನೂ ಆರು ತಿಂಗಳೂ ಕಳೆದಿಲ್ಲ.

ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸಚಿವ ಸಂಪುಟ ಅಧಿಕಾರವನ್ನು ವಹಿಸಿಕೊಂಡು ಇನ್ನೂ ಆರು ತಿಂಗಳೂ ಕಳೆದಿಲ್ಲ. ಆಗಲೇ ವಿಶ್ಲೇಷಕರ- ಮಿಮರ್ಶಕರ ಪಡೆಗಳ ಅನಿಸಿಕೆಯನ್ನು ಗಮನಿಸಿದರೆ ಹೊಸ ಸರ್ಕಾರದ ಹುರುಪು- ಹೊಳಪು ಮಸಕಾಗುತ್ತಿರುವಂತಿದೆ ಎನ್ನುವ ಭಾವನೆ ಮೂಡಿರುವಂತೆ ಕಂಡು ಬರುತ್ತಿದೆ.
 ನಿಜ. ಹೊಸ ಪಕ್ಷ ಅಧಿಕಾರಕ್ಕೆ ಬಂದು, ಮಂತ್ರಿಗಳು ಬದಲಾದ ಕೂಡಲೇ ದಿಢೀರನೆ ಆಡಳಿತದಲ್ಲಿ, ರಾಜಕೀಯದಲ್ಲಿ, ಎಲ್ಲವೂ ಬದಲಾಗುವುದು ಸಾಧ್ಯವಿಲ್ಲ. ಸರ್ಕಾರದ ಸಂಪರ್ಕ ಪಡೆಯಲೇಬೇಕಾದ ಜನಸಾಮಾನ್ಯ ವರ್ಗಗಳಲ್ಲಿ ಸದ್ಯದಲ್ಲಂತೂ ಸರ್ಕಾರದ ವಿಚಾರದಲ್ಲಿ ಹಿಂದೆ ಇದ್ದ ಭಾವನೆ ಬದಲಾಗಿಲ್ಲ, ಅದೇ ಅದಕ್ಷತೆ, ನಿರ್ಲಕ್ಷ್ಯ, ಭ್ರಷ್ಟಾಚಾರ.
 ಯಾವುದೇ ಹೊಸ ಸರ್ಕಾರವಾಗಲಿ, ಜನರ ಪಾಲಿಗೆ ಆರಂಭದಲ್ಲಿ ಒಳ್ಳೆಯ ಭಾವನೆ ಮೂಡುವಂತೆ ವರ್ತಿಸದೇ ಹೋದರೆ, ಮುಂದೆ ಒಳ್ಳೆಯ ಕೆಲಸವಾದರೂ ಅದು ಗೌಣವಾಗಿಬಿಡುತ್ತದೆ. ಸಿದ್ದರಾಮಯ್ಯ ಸರ್ಕಾರ ಅಂಥ ಪರಿಸ್ಥಿತಿಯನ್ನು ಮುಟ್ಟಬಾರದು.  ವಿಧಾನ ಸಭೆ ಚುನಾವಣೆಯಲ್ಲಿ ದೊಡ್ಡ ರೀತಿಯಲ್ಲಿ ಗೆದ್ದು, ಅತಿ ಪ್ರತಿಷ್ಠಿತ ಎನ್ನಬಹುದಾದ ಮಂಡ್ಯ- ರಾಮನಗರ ಲೋಕಸಭೆ ಕ್ಷೇತ್ರಗಳ ಉಪಚುನಾವಣೆಗಳಲ್ಲಿ ವಿಜಯ ದುಂದುಭಿಯನ್ನು ಮೊಳಗಿಸಿದ ಪಕ್ಷ ರಾಜಕೀಯವಾಗಿ ಹೊಗಳಿಸಿಕೊಳ್ಳಲು ಅರ್ಹ. ಆದರೆ ಆಡಳಿತಾತ್ಮಕವಾಗಿ?
ಶಿಕ್ಷಣ ವಲಯದಲ್ಲಿ  ಪರೀಕ್ಷೆ ಬರೆದಿದ್ದ ವಿದ್ಯಾರ್ಥಿಗಳ ಹೆಸರಿನ ಮುಂದೆ "ಹಾಜರಾಗಲಿಲ್ಲ" ಎನ್ನುವ ಉಲ್ಲೇಖ ಇದ್ದರೆ, ಅದಕ್ಕೆ ಯಾರೂ ಜವಾಬ್ದಾರಿಯಲ್ಲ ಎನ್ನುವ ರೀತಿಯಲ್ಲಿ ಪ್ರಭುತ್ವ ವರ್ತಿಸಿದರೆ, ಏನು ಹೇಳಬೇಕು?
ಅಧಿಕಾರ ವಹಿಸಿಕೊಂಡ ಕೂಡಲೇ ಕ್ಷಿಪ್ರವಾಗಿ ಬಡವರಿಗೆ ಕೇಜಿಗೊಂದು ರುಪಾಯಿ ದರದಲ್ಲಿ ಅಕ್ಕಿಯನ್ನು ರೇಷನ್ ಡಿಪೋಗಳ ಮೂಲಕ ವಿತರಣೆ ಮಾಡುವ ಯೋಜನೆಯನ್ನು ಜಾರಿಗೊಳಿಸಿದ್ದು ಒಂದು ಸಾಧನೆ. ಅದರಲ್ಲಿ ಎರಡು ಮಾತಿಲ್ಲ. ಆ ಅಕ್ಕಿ ದುರುಪಯೋಗವಾಗುತ್ತಿದೆ ಎಂದು ಆಧಾರ ಸಮೇತ ದೂರುಗಳನ್ನು ಕೊಟ್ಟವರಿಗೆ ತಿಂಗಳೆರಡಾದರೂ ಉತ್ತರವನ್ನು ಕೊಡದಿದ್ದರೆ ಹೇಗೆ?
 ರುಪಾಯಿಗೊಂದು ಕೇಜಿ ಅಕ್ಕಿ ಒಂದು ದೊಡ್ಡ ಕ್ರಾಂತಿಯನ್ನೇ ಈ ವೇಳೆಗೆ ಎಬ್ಬಿಸಬೇಕಾಗಿತ್ತು. ಆದರೆ ಕೇಳಿ ಬರುತ್ತಿರುವುದು ದೂರುಗಳು ಮಾತ್ರ. ಮುಂದಿನ ತಿಂಗಳ ಬೆಳಗಾವಿ ವಿಧಾನ ಮಂಡಲದ ಅಧಿವೇಶನದಲ್ಲಿ ಅಕ್ಕಿ ಹಂಚಿಕೆ ಯೋಜನೆ ಒಂದು ದೊಡ್ಡ ಸಾಧನೆಯೋ, ಹಗರಣವೋ ಎನ್ನುವುದು ತೀರ್ಮಾನವಾಗಬೇಕಾಗಿದೆ. ಮಾತು ಮಾತಿಗೂ ತನಿಖೆಗೆ ಸಮಿತಿ, ವರದಿಯ ಪರಿಶೀಲನೆಯಂತಹ ಸಬೂಬುಗಳನ್ನು ಕೊಟ್ಟು ಕಾಲಹರಣ ಮಾಡಿದರೆ, ಸಾಮಾನ್ಯ ಜನ ಎಲ್ಲವನ್ನು ಮರೆತು ಬಿಡುತ್ತಾರೆನ್ನುವ ಭಾವನೆ ಇರಬಹುದು. ಇದ್ದರೆ ಅದನ್ನು ಕೈ ಬಿಡುವುದು ಒಳಿತು.  ನಿಜ. ಮುಖ್ಯಮಂತ್ರಿಯಾಗಿ ಸಿದ್ದರಾಮಯ್ಯ ಅವರು ಸ್ವಂತವಾಗಿ ಯಾವುದೇ ರೀತಿಯ ಹಗರಣಕ್ಕೂ ಅವಕಾಶ ಮಾಡಿಕೊಟ್ಟ ಆರೋಪಕ್ಕೆ ಗುರಿಯಾಗಿಲ್ಲ. ಆದರೆ ಅವರು ಮುಖ್ಯಮಂತ್ರಿ, ಸರ್ಕಾರದ ಇಲಾಖೆಗಳ ಲೋಪದೋಷಗಳ ಜವಾಬ್ದಾರಿಯನ್ನು ಹೊರಲೇಬೇಕು.

 ಹೀಗೊಂದು ವರದಿಯನ್ನು ಗಮನಿಸಿ:  ಈಗಾಗಲೇ 2013-14ನೇ ಸಾಲಿನ ವಿತ್ತೀಯ ವರ್ಷದಲ್ಲಿ ಅರ್ಧದಷ್ಟು ಕಳೆದು ಹೋಗಿದೆ. ಜಗದೀಶ ಶೆಟ್ಟರ್ ಬಜೆಟ್ ಮೂಲೆ ಗುಂಪಾಗಿ ಸಿದ್ದರಾಮಯ್ಯ ಬಜೆಟ್ ಜಾರಿಗೆ ಬಂದಿರಬೇಕು. ಆದರೆ ಅನೇಕ ಇಲಾಖೆಗಳಿಗೆ,ಇನ್ನೂ ನಿರ್ದಿಷ್ಟವಾದ ಆದೇಶಗಳು ತಲುಪಿಲ್ಲ. ಅಲ್ಲಿ ಕೆಲಸ ಸ್ಥಗಿತ.  ವಿದ್ಯುತ್ ಪೂರೈಕೆ, ಸಂವಹನ, ವಿತರಣೆಗೆ ಪ್ರತ್ಯೇಕ ನಿಗಮ- ಕಂಪನಿಗಳು, ನೀರಾವರಿಗೆ ನಿಗಮಗಳು, ಕುಡಿವ ನೀರಿನ ಪೂರೈಕೆಗೆ ಪ್ರಾಧಿಕಾರಗಳು, ಬೇರು ಮಟ್ಟದ ಪಂಚಾಯಿತಿ ರಾಜ್ಯ ವ್ಯವಸ್ಥೆಗೇ ಸ್ಥಳೀಯ ಕೆಲಸಗಳ ಹೊಣೆ- ಇದು ಈಗಿನ ವ್ಯವಸ್ಥೆ. ಹಾಗಿದ್ದರೆ ಸರ್ಕಾರವೇ ಮಾಡಬೇಕಾದ ಕೆಲಸವೇನು? ಪ್ರಮುಖ ಖಾತೆಗಳನ್ನು ಕುರಿತ ರಾಜಕೀಯ ಚರ್ಚೆಗೇ ಅವಕಾಶವಿಲ್ಲವಲ್ಲ. ಈಗಿನ ಸ್ಥಿತಿಯಲ್ಲಿ ಎಲ್ಲಕಡೆ ಅಧಿಕಾರವಿದೆ. ಯಾರಿಗೂ ಹೊಣೆಗಾರಿಕೆ ಇಲ್ಲ.

ಕಾಂಗ್ರೆಸ್ ಕಾರ್ಯಕಾರಿಣಿ: ಆಳುವ ಪಕ್ಷದ ಪ್ರದೇಶ ಸಮಿತಿಯಲ್ಲಿ ಭಿನ್ನಾಭಿಪ್ರಾಯಗಳೇನೂ ಇಲ್ಲ.  ಸಿದ್ದರಾಮಯ್ಯ, ಪರಮೇಶ್ವರ ಅವರಿಬ್ಬರ ಗುರಿಯೂ ಒಂದೇ ಎಂದು ಬಾರಿ ಬಾರಿಗೂ ಹೇಳಿ ಸಾಬೀತು ಮಾಡಬೇಕಾದ ಸ್ಥಿತಿ ಕಾಂಗ್ರೆಸ್ಸಿನಲ್ಲಿದೆ. ಅದಿನ್ನೂ ಗುಂಪುಗಾರಿಕೆಯ, ಎರಡು ಶಕ್ತಿ ಕೇಂದ್ರಗಳ ಸಂಘರ್ಷದ ಸ್ವರೂಪವನ್ನು ಪಡೆದಿಲ್ಲ, ಎನ್ನುವುದೇ ಸಮಾಧಾನದ ಮಾತು.
 ಇಂತಹ ಸನ್ನಿವೇಶದಲ್ಲಿ ಪ್ರದೇಶ ಕಾಂಗ್ರೆಸ್ ಕಾರ್ಯಕಾರಿಣಿ ಸಭೆಯನ್ನು ಕರೆಯಲಾಗಿದೆ. ಅದರಲ್ಲಿ ಕೇಂದ್ರದ ಕಾಂಗ್ರೆಸ್ ಪ್ರಭಾರಿ ದಿಗ್ವಿಜಯ ಸಿಂಗ್, ಕೇಂದ್ರ ಮಂತ್ರಿಗಳು, ಇತರ ಪ್ರಮುಖರು ಪಾಲುಗೊಳ್ಳಲಿದ್ದಾರೆ.  ಅಂತಹ ಸಭೆಯಲ್ಲಿ ನಿಜವಾದ ಬಿಚ್ಚು ಮಾತಿನ, ತೆರೆದ ಹೃದಯದ ವಿಚಾರ ವಿಮರ್ಶೆ ಅಸಾಧ್ಯ. ದಿಗ್ವಿಜಯಸಿಂಗ್, ಅದಕ್ಕೆಲ್ಲ ಅವಕಾಶವನ್ನು ಕೊಡುವವರಲ್ಲ. ಪ್ರದೇಶ ಕಾಂಗ್ರೆಸ್ಸನ್ನು ಕಾಡುತ್ತಿರುವ ಜಾತಿಗಳ ಸಮಸ್ಯೆ, ಕೆಲವು ಕಡೆ ವ್ಯಕ್ತಿಗತವಾಗಿ ನಾಯಕರ ನಡುವೆ ಇರುವ ಸಂಘರ್ಷ, ಸರ್ಕಾರದ ಕೆಲಸ, ಮಂತ್ರಿಗಳ ಕಾರ್ಯ ವೈಖರಿಯಂತಹ ವಿಷಯಗಳ ಮುಕ್ತ ಚರ್ಚೆಗೆ ಅವಕಾಶವೇ ಇರುವುದಿಲ್ಲ.
ಲೋಕಸಭೆ ಚುನಾವಣೆಗೆ ಸಿದ್ಧತೆ, ಅಭ್ಯರ್ಥಿಗಳ ಆಯ್ಕೆಯ ವಿಚಾರವನ್ನು ವರಿಷ್ಠರಿಗೇ ಬಿಟ್ಟುಕೊಡುವುದು ಇಂತಹ ವಿಚಾರಗಳನ್ನು ಕುರಿತ ಸಾಂಪ್ರದಾಯಿಕ ನಿರ್ಣಯಗಳನ್ನು ಬಿಟ್ಟರೆ ಬೇರೆ ಏನನ್ನೂ ಈಗ ನಿರೀಕ್ಷಿಸುವಂತಿಲ್ಲ. ರಾಜ್ಯದಲ್ಲಿ ಕಾಂಗ್ರೆಸ್ ಈಚಿನ ದಿನಗಳಲ್ಲಿ ಚುನಾವಣೆಯಲ್ಲಿ ಗೆದ್ದಿದ್ದರೂ ಸಚಿವ ಸಂಪುಟದಲ್ಲಿ ರಾಜಕೀಯ ಸ್ವರೂಪದ ಬದ್ಧತೆಯನ್ನು ಪ್ರದರ್ಶಿಸುವಂಥ ಮನೋಧರ್ಮವನ್ನು ಮೂಡಿಸುವುದು ಇನ್ನೂ ಸಾಧ್ಯವಾಗಿಲ್ಲ. ಸಿದ್ದರಾಮಯ್ಯ ನೇತೃತ್ವದಲ್ಲಿ ಮಂತ್ರಿಮಂಡಲದ ರಚನೆಯೇನೋ ಆಗಿದೆ. ಆದರೆ ಎಲ್ಲ ಅಧಿಕಾರ ಮುಖ್ಯಮಂತ್ರಿಯ ಕೈಯಲ್ಲೇ ಕೇಂದ್ರೀಕೃತವಾಗಿದೆ. ಇನ್ನೂ ನಾಲ್ಕೂ ಸ್ಥಾನಗಳು ಮಂತ್ರಿಮಂಡಲದಲ್ಲಿ ಖಾಲಿ ಬಿದ್ದಿವೆ.
ಸಿದ್ದರಾಮಯ್ಯ ಅವರ ಈಗಿನ ಸಮಸ್ಯೆ ಎಂದರೆ ಪಕ್ಷದ ಪರವಾಗಿ ನಾನಾ ಸಂಸ್ಥೆಗಳ ಜವಾಬ್ದಾಯನ್ನು ಹೋರಲು ಸೂಕ್ತ ವ್ಯಕ್ತಿಗಳನ್ನು ಆರಿಸುವುದು. ಬೋರ್ಡಿನ, ನಿಗಮ, ಮಂಡಳಿ, ಪ್ರಾಧಿಕಾರಗಳಿಗೆ ಅಧ್ಯಕ್ಷರು, ನಿರ್ದೇಶಕರನ್ನು ನೇಮಿಸುವುದು ಒಂದು ರೀತಿಯಲ್ಲಿ ರಾಜಕೀಯ ಅಧಿಕಾರ ಹಾಗೂ ಪ್ರತಿಷ್ಠೆಯನ್ನು ಹಂಚುವುದೇ.
ಅಲ್ಲಿ ಲೆಕ್ಕ, ವರ್ಗಾವಣೆ ಲೆಕ್ಕ, ವೈಯುಕ್ತಿಕ ಚರಿತ್ರೆಯ ವಿಚಾರ, ಹಿರಿಯ ನಾಯಕರ ಬಗಲ ಬಚ್ಚಾಗಳಿಗೆ ಅವಕಾಶ ಕೊಡುವುದು, ಎಲ್ಲವೂ ಜಟಿಲ ಪ್ರಶ್ನೆಗಳೇ. ಯಾವುದೇ ವಿಭಾಗದಲ್ಲಿ ಯಾರೊಬ್ಬರನ್ನು ನೇಮಿಸಿದರೂ, ಅದರಿಂದ ಅವರಷ್ಟೇ ತೃಪ್ತರಾಗುವುದು. ಆ ಸ್ಥಾನಕ್ಕೆ ಆಸೆ ಪಟ್ಟಿದ್ದ ಇತರರ ವಿರೋಧವನ್ನು ಕಟ್ಟಿಕೊಳ್ಳಬೇಕಾಗುತ್ತದೆ. ಹಾಗೆಂದು ಆ ತುಮುಲದಲ್ಲೇ ಮುಳುಗಿ, ನೇಮಕಗಳನ್ನೇ ಮುಂದಕ್ಕೆ ಹಾಕಿದರೆ, ಅಧಿಕಾರಿ ಷಾಹಿಯ ತಾಂಡವಕ್ಕೆ ಆಹ್ವಾನ ನೀಡಿದಂತೆ ಆಗುತ್ತದೆ. ಇದು ಅನಿವಾರ್ಯ. ಕಾಂಗ್ರೆಸ್ಸಿನಲ್ಲಿ ಕೇಂದ್ರ ಕಾರ್ಯಕಾರಿಣಿಯಿಂದ ಹಿಡಿದು ತಾಲ್ಲೂಕು ಸಮಿತಿಯವರೆಗೆ ಎಲ್ಲಾ ಸ್ಥಾನಗಳಿಗೂ ನಾನಾ ಹಂತಗಳ ನಾಯಕರೇ ನೇಮಕಗಳಲ್ಲಿ ಪ್ರಮುಖ ಪಾತ್ರವನ್ನು ವಹಿಸುವುದರಿಂದ ಎಲ್ಲ ಸಮಿತಿಗಳ ಪ್ರಾತಿನಿಧಿಕ ಸ್ವರೂಪವೇ ಇಲ್ಲದಂತೆ ಆಗಿದೆ.
ಯಾವುದೇ ವ್ಯವಸ್ಥೆಯಲ್ಲೇ ಆದರೂ ನಾಮಕರಣವಾದ ಸದಸ್ಯರಿಂದ ಎಷ್ಟರ ಮಟ್ಟಿಗೆ ಜನತಾಂತ್ರಿಕ ಸ್ವರೂಪದ ಕೆಲಸ ಸಾಧ್ಯ ?
ಹೈಕೋರ್ಟ್‌ನ ಪೀಠಗಳಲ್ಲಿ ಸರ್ಕಾರದ ನಿಲವನ್ನು ಪ್ರತಿಪಾದಿಸಲು ಸುಮಾರು ಎಪ್ಪತ್ತು ಮಂದಿ ನುರಿತ, ಕಾಯಿದೆ ಪಾಂಡಿತ್ಯವಿರುವ ವಕೀಲರ ನೇಮಕವಾಗಬೇಕು. ಇದೂ ರಾಜಕೀಯ ನೇಮಕವೇ ಆದರೂ ಅದಕ್ಕೂ ಕೆಲವು ರೀತಿ-ರಿವಾಜು, ನೀತಿ-ನಿಯಮಗಳಿವೆ. ಜಾತಿ, ಪ್ರದೇಶ, ಹಾಗೂ ಇತರ ರೀತಿಯ "ಪ್ರಾತಿನಿಧ್ಯ"ದ ಕಲ್ಪನೆ ಸರಿ ಎಂದು ಒಪ್ಪಿದರೂ, ನೇಮಕಕ್ಕೆ ಇಷ್ಟೊಂದು ವಿಳಂಬವೇಕೆ ? ಲೋಕಸಭೆ ಚುನಾವಣೆಯ ರಣಕಹಳೆ, ಶಂಖನಾದ ಮೊಳಗಲಿಕ್ಕೆ ಇನ್ನು ಉಳಿದಿರುವುದು ಇನ್ನೂರು ದಿನಗಳಿಗೂ ಕಡಿಮೆ. ಆಡಾಡುತಾ ದಿನಗಳು ಕಳೆದು ಹೋಗುತ್ತವೆ. ಅನಂತರ ಆತುರದಲ್ಲಿ ಕೆಲಸ ಮಾಡಲು ಹೊರಟರೆ ಎಡವಟ್ಟಾಗುವುದು ಖಂಡಿತ.

ಬಿಜೆಪಿ ತೊಳಲಾಟ: ಕಳೆದ ಐದು ವರ್ಷಗಳ ಕಾಲ ಅಧಿಕಾರದ ಸ್ಥಾನಗಳಲ್ಲಿ ವಿರಾಜಮಾನವಾಗಿದ್ದು ಈಗ ಮುಖ ಕೆಳಗೆ ಮಾಡಿ ನಡೆಯ ಬೇಕಾಗಿರುವ ಭಾರತೀಯ ಜನತಾ ಪಾರ್ಟಿಯ ಮುಂದೆ ಇರುವುದು, ಯಡಿಯೂರಪ್ಪ ಬರ್ತಾರಾ ? ಅಥವಾ ಕೇವಲ ಒಪ್ಪಂದಕ್ಕೆ ಮುಂದಾಗ್ತಾರಾ ಎನ್ನುವ ಪ್ರಶ್ನೆ ಒಂದೇ ಎನ್ನುವ ರೀತಿಯಲ್ಲಿ ನಾಯಕರೆನಿಸಿಕೊಂಡವರು ವರ್ತಿಸುತ್ತಿರುವುದು ನಿಜಕ್ಕೂ ಕರುಣಾಜನಕ ದೃಶ್ಯ. ಮುಂಬೈನಲ್ಲಿ ನಡೆದ ಬಿಜೆಪಿ ನಾಯಕರ ವಿಚಾರ ಮಂಥನ ಶಿಬಿರದಲ್ಲಿ ದಿಲ್ಲಿಯ ನಾಯಕರು ಕರ್ನಾಟಕದ ನಾಯಕರಿಗೆ ನೀಡಿದ ಸ್ಪಷ್ಟ ಸಂದೇಶ: ಯಡಿಯೂರಪ್ಪ ವಿಚಾರವನ್ನು ನಮಗೆ ಬಿಡಿ, ಸಂಘಟನೆಯ ಕೆಲಸವನ್ನು ನೀವು ಮಾಡಿ.ಅಂತಹ ಆದೇಶವನ್ನು ಪಾಲಿಸುವುದು ಕರ್ನಾಟಕ ಬಿಜೆಪಿ ನಾಯರಿಗೆ ಕಡುಕಷ್ಟ. ಯಡಿಯೂರಪ್ಪ ಬಂದರೆ ಒಬ್ಬರೇ ಬರ್ತಾರಾ? ಅವರ ಪರಿವಾರವೆಲ್ಲ ಬರ್ತಾರಾ? ಯಡಿಯೂರಪ್ಪ ಅವರ ಸ್ಥಾನಮಾನವೇನು? ಅವರ ಸಂಗಾತಿಗಳಿಗೆಂತಹ ಕುರ್ಚಿ?
ಇಂತಹ ಪ್ರಶ್ನೆಗಳಿಗೆ ನಿಜವಾಗಲೂ ಉತ್ತರಗಳನ್ನು ಕಂಡುಕೊಳ್ಳಬೇಕಾದವರು ರಾಜ್ಯದ ನಾಯಕರು. ರಾಜ್ಯದ ನಾಯಕರಲ್ಲಿ (ಜಗದೀಶ್ ಶೆಟ್ಟರ್ - ಸದಾನಂದಗೌಡ) ಅವರಂತಹವರಿಗೆ ಈಗ ಮಾತಾಡುವ ಅಧಿಕಾರವೂ ಇಲ್ಲ, ಹಕ್ಕೂ ಇಲ್ಲ. ಯಡಿಯೂರಪ್ಪ ಅವರಂತೂ ಪ್ರತಿನಿತ್ಯ ಒಂದಲ್ಲ ಒಂದು ರೀತಿಯ ಹೇಳಿಕೆಯನ್ನು ನೀಡಿ ಗೊಂದಲಕ್ಕೆ ಕಾರಣರಾಗುತ್ತಿರುವುದು ನಿಜ. ಅವರು ಬಿಜೆಪಿಗೆ ಬಂದರೂ, ಅಥವಾ ಬಿಜೆಪಿಯ ಜತೆ ಒಪ್ಪಂದ ಮಾಡಿಕೊಂಡು ಬೆಂಬಲ ನೀಡಿದರೂ, ಅದು ಮೋದ್ನಿ ಬೆಂಬಲಿಸುವ ದೃಷ್ಟಿಯಿಂದ ಮಾತ್ರ. ಈ ಅಭಿಪ್ರಾಯವನ್ನು ಯಡಿಯೂರಪ್ಪ ಮುಚ್ಚುಮರೆ ಇಲ್ಲದೆ ಕಳೆದ ನಾಲ್ಕಾರು ದಿನಗಳಲ್ಲಿ ಹಲವಾರು ಬಾರಿ ಪ್ರಕಟಿಸಿದ್ದಾರೆ. ಯಡಿಯೂರಪ್ಪ ಅವರ ಜತೆ ಬಿಜೆಪಿಯ ಒಡಂಬಡಿಕೆ ಎಂದರೇನರ್ಥ? ಕರ್ನಾಟಕ ಜನತಾ ಪಾರ್ಟಿ - ಬಿಜೆಪಿಯ ನಡುವೆ ಒಪ್ಪಂದ ಎಂದೇ ಅಲ್ಲವೇ. ಬಿಜೆಪಿ ನಾಯಕರು ಆ ವಿಚಾರವನ್ನು ಗಂಭೀರವಾಗಿ ಪರಿಗಣಿಸಿದ್ದಾರೋ ಇಲ್ಲವೋ ಗೊತ್ತಿಲ್ಲ. ಆದರೆ ಕೆಲವು ಕಾರ್ಯಕರ್ತರು ಸುಮ್ಮನೆ ಕೂತಿಲ್ಲ.
ಯಡಿಯೂರಪ್ಪ ಅವರಿಗೆ, ಅವರ ಬೆಂಬಲಿಗರಿಗೆ ಯಾವುದೇ ರೀತಿಯ ಸ್ಥಾನ-ಮಾನ ಬೇಕಾದರೂ, ಕೇಂದ್ರದ ವರಿಷ್ಠರ ಆದೇಶದಂತೆ ಕೊಡಬಹುದು. ಆದರೆ ವಿಧಾನ ಸಭೆಯ ಚುನಾವಣೆಯಲ್ಲಿ ಸ್ಪರ್ಧಿಸಿ ಸೋತವರಿಗೆ, ಬಿಜೆಪಿಯವರೇ ಆಗಿರಲಿ, ಬೇರೆಯವರೇ ಆಗಿರಲಿ, ಪಕ್ಷದ ಸಂಘಟನೆಯಲ್ಲಿ ಯಾವುದೇ ರೀತಿಯ ಜವಾಬ್ದಾರಿಯುತವಾದ ಸ್ಥಾನಗಳನ್ನು ಕೊಡಕೂಡದು ಎನ್ನುವ ವಾದವನ್ನು ಮುಂದಿಟ್ಟಿದ್ದಾರೆ. ಯಡಿಯೂರಪ್ಪ ಅವರ ಪ್ರಮುಖ ಬೆಂಬಲಿಗರೆಲ್ಲರೂ, ಚುನಾವಣೆಯಲ್ಲಿ ಸ್ಪರ್ಧಿಸಿ ಸೋತವರೇ. ಈ ವಾದವನ್ನು ಬಿಜೆಪಿ ಒಪ್ಪಿದರೆ ಯಡಿಯೂರಪ್ಪ ಒಂಟಿಯಾಗಿ ಬಿಜೆಪಿಗೆ ಬರಬೇಕಾದೀತು. ಅದು ಅವರ ಪಾಲಿಗೆ ರಾಜಕೀಯ ಆತ್ಮಹತ್ಯೆಯೇ.
ಇದೆಲ್ಲವನ್ನು ಜಾತ್ಯತೀತ ಜನತಾದಳದ ನಾಯಕರು ನಸುನಗುತ್ತಾ ನೋಡಿ ಮಜಾ ತೆಗೆದುಕೊಳ್ಳುತ್ತಿದ್ದಾರೆ. ಲೋಕಸಭೆ ಚುನಾವಣೆಯಲ್ಲಿ ಆ ಪಕ್ಷ ನಿರ್ವಹಿಸಬಲ್ಲ ಪಾತ್ರ ಕಡಿಮೆ.

   ಕಿಡಿಗೇಡಿತನ : ಅಧಿಕಾರಿಗಳ ವರ್ಗಾವಣೆಯ ಕಾಲದಲ್ಲಿ ಮಂತ್ರಿಗಳೇ ಭ್ರಷ್ಟಾಚಾರ ನಡೆಸಿರುವುದು, ವಿಧಾನ ಸಭೆಯಲ್ಲಿ ಪ್ರತಿಪಕ್ಷದ ನಾಯಕ ಕುಮಾರ ಸ್ವಾಮಿ ಅವರಿಗೆ ಗೊತ್ತಂತೆ ಅದನ್ನು ಸೂಕ್ತಕಾಲದಲ್ಲಿ ಪ್ರಕಟಿಸುತ್ತಾರಂತೆ. ಇದು ಎಷ್ಟನೆಯ ಬೆದರಿಕೆ? ಯಾರೂ ಲೆಕ್ಕ ಇಟ್ಟಿಲ್ಲ.

- ಸತ್ಯ
anisikeprabha@gmail.com


Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

INDIA ಬ್ಲಾಕ್ ನಲ್ಲಿ ಬಿರುಕು?: ಆಪ್ ಕೈ ಕೊಟ್ಟ ಬೆನ್ನಲ್ಲೇ ಭೋಜನ ಕೂಟಕ್ಕೆ ಸಮಾಜವಾದಿ ಪಕ್ಷ ಗೈರು!

ರಾಹುಲ್, ಪ್ರಿಯಾಂಕಾ ಗಾಂಧಿಯನ್ನು ಎಳೆದೊಯ್ದು ವಶಕ್ಕೆ ಪಡೆದ ಪೊಲೀಸರು; ಬಸ್‌ನ ಟೈರ್ ಪಂಕ್ಚರ್ ಮಾಡಿದ ಕಾರ್ಯಕರ್ತರು

ಭಾರತವನ್ನು ಜಾಗತಿಕ ಶಕ್ತಿಯಾಗಿಸಿದ್ದು ಮೋದಿ, ಅಂತಹವರ ವಿರುದ್ಧವೇ ಸಂಚು: ಸರ್ಬಿಯಾ ಮಾಜಿ ಅಧ್ಯಕ್ಷ, Video ವೈರಲ್

SIR ವಿರುದ್ಧ ಕಾಂಗ್ರೆಸ್ ಪ್ರತಿಭಟನೆ: ಡಿಎಂಕೆ ಯು-ಟರ್ನ್!

ಗ್ರಾಹಕರಿಗೆ ನೆಮ್ಮದಿ: ಕಟಾವಿಗೆ ಬಂದ ಖಾರಿಫ್ ಬೆಳೆ, ಕರ್ನಾಟಕ ಸೇರಿ ಹಲವು ರಾಜ್ಯಗಳಲ್ಲಿ ಈರುಳ್ಳಿ ದರ ಕುಸಿತ ಸಾಧ್ಯತೆ, 2 ಲಕ್ಷ ಕ್ವಿಂಟಾಲ್‌ ಪೂರೈಕೆ!