ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಅಂಕಣಗಳು

ದಲಿತ ಚಳವಳಿಯನ್ನು ಕೊಂದವರು ಯಾರು?

ಗುಲ್ಬರ್ಗ ವಿಶ್ವವಿದ್ಯಾಲಯವು ಕೆಲವು ದಿನಗಳ ಹಿಂದೆ ಆಯೋಜಿಸಿದ್ದ...

Vishwanath S
Updated On : 19 Oct 2013, 10:25 am

ಸಾಮಂತಶಾಹಿ ವ್ಯವಸ್ಥೆಯಲ್ಲಿ ಒಂದೆರಡು ಕ್ಷೇತ್ರಕ್ಕೆ ಮೀಸಲಾಗಿದ್ದ ದಲಿತ ಶ್ರಮವು, ಬಂಡವಾಳಶಾಹಿ-ಸಾಮ್ರಾಜ್ಯಶಾಹಿ ವ್ಯವಸ್ಥೆಯಲ್ಲಿ ಎಲ್ಲಾ ಕ್ಷೇತ್ರಗಳಿಗೂ ಹರಿದು ಹಂಚಿಹೋಗಿದೆ. ಊಳಿಗಮಾನ್ಯ ದೊರೆಗಳಿಗಿಂತ ಶ್ರಮದೋಚುವುದರಲ್ಲಿ ಜಾಗತೀಕರಣದ ದೊರೆಗಳು ಸಾವಿರ ಪಾಲು ಅಪಾಯಕಾರಿಗಳೆಂದು ಅರಿಯಬೇಕಾಗಿದೆ.

ಗುಲ್ಬರ್ಗ ವಿಶ್ವವಿದ್ಯಾಲಯವು ಕೆಲವು ದಿನಗಳ ಹಿಂದೆ ಆಯೋಜಿಸಿದ್ದ ಕರ್ನಾಟಕ ದಲಿತ ಚಳವಳಿ ಕುರಿತ ವಿಚಾರ ಸಂಕಿರಣದಲ್ಲಿ ರಾಜ್ಯದ ಹಲವಾರು ಸಾಹಿತಿ, ಬರಹಗಾರರು ಪಾಲ್ಗೊಂಡಿದ್ದರು. ಇಡೀ ವಿಚಾರ ಸಂಕಿರಣದ ಉಪನ್ಯಾಸಗಳು, ಅಭಿಪ್ರಾಯಗಳು ನಿರೀಕ್ಷಿತ ಬೆಳಕು ಚೆಲ್ಲುವಲ್ಲಿ ವಿಫಲವಾಗಿವೆ. ದಲಿತ ಚಳವಳಿ ಸತ್ತು ಹೋಗಿದೆ ಅದನ್ನು ವಿಸರ್ಜಿಸಿ ಮತ್ತೆ ಹೊಸ ಜೀವ ನೀಡಬೇಕೆಂದು ಹೇಳಲಾಗಿದೆ. 1975ರಿಂದ 1985ರ ಅವಧಿಯನ್ನು ದಲಿತ ಚಳವಳಿಯ ಸುವರ್ಣಕಾಲ, ದಲಿತ ಎಂಬ ಪದದ ಅರ್ಥವನ್ನು ಕ್ರಾಂತಿಕಾರಿ ಎಂದು ವ್ಯಾಖ್ಯಾನ ಮಾಡಲಾಗಿದೆ. "ಬ್ರಿಟಿಷರ ಆಗಮನದಿಂದ ಸಾರ್ವಜನಿಕ ಸೌಲಭ್ಯಗಳಿಗೆ ಎಲ್ಲರೂ ಅರ್ಹರಾದರು. ಸ್ವಾತಂತ್ರ್ಯ ಚಳವಳಿಯಲ್ಲಿ ಸತ್ತವರಲ್ಲಿ ದಲಿತರೇ ಹೆಚ್ಚು. ಜಾತಿ ವ್ಯವಸ್ಥೆಯ ವಿನಾಶದ ದೃಷ್ಟಿಯಿಂದ ನಾವು ಜಾಗತಿಕರಣವನ್ನು ಸ್ವಾಗತಿಸಬೇಕು. ಬ್ರಿಟಿಷರು ಬಂದದ್ದರಿಂದ ದಲಿತರಿಗೆ ಧ್ವನಿ ಬಂದಿತು" ಎಂಬಿತ್ಯಾದಿ ಅಭಿಪ್ರಾಯಗಳು, ಹೇಳಿಕೆಗಳು ಮೊದಲ ದಿನದ ವಿಚಾರ ಸಂಕಿರಣದಿಂದ ಹೊರಬಿದ್ದವು.
ದಲಿತ ಚಳವಳಿಯ ಬಗ್ಗೆ ಮೇಲ್ನೋಟಕ್ಕೆ ಗಂಭೀರವಾಗಿ ಗಮನಕೊಟ್ಟಂತೆ ಕಂಡರೂ, ಚಳವಳಿಯೊಂದನ್ನು ಅದರ ತಾತ್ವಿಕ ಹಾಗೂ ಆಚರಣಾತ್ಮಕ ಅಂಶಗಳ ಹಿನ್ನೆಲೆಯಲ್ಲಿ ಮೌಲ್ಯಮಾಪನ ಮಾಡುವಲ್ಲಿ ಈ ಮೇಧಾವಿಗಳ ಹಿಂಡು ಸೋತಿದೆ. ಸುಧಾರಣವಾದಿ ಹಾಗೂ ಪ್ರತಿಗಾಮಿ ನೆಲೆಯಲ್ಲಿ ನಿಂತು ಕರ್ನಾಟಕದ ದಲಿತ ಚಳವಳಿಯನ್ನು ವಿಮರ್ಶಿಸಿದಂತಾಗಿದೆ. ಸ್ವಾತಂತ್ರ್ಯ ಚಳವಳಿಯಲ್ಲಿ ಬ್ರಿಟಿಷರಿಂದ ಸತ್ತವರು ದಲಿತರು, ಬ್ರಿಟಿಷರಿಂದ ಧ್ವನಿ ಸಂಪಾದಿಸಿದವರೆಂಬ ಅಭಿಪ್ರಾಯ ಅತ್ಯಂತ ಅಪಾಯಕಾರಿಯಾದದ್ದು. ಇದು ಡಾ. ಬಿ. ಆರ್. ಅಂಬೇಡ್ಕರ್‌ರವರ ನಿಲುವನ್ನು ಪ್ರಶ್ನಿಸುವಂಥದ್ದು.
ಹಾಗೆಯೇ ಜಾಗತಿಕರಣದಿಂದಾಗಿ ಜಾತಿ, ಜನಾಂಗ, ಪ್ರದೇಶ, ಭಾಷೆಯ ಬೇಧಗಳು ತಾರಕಕ್ಕೇರಿ ಇಡೀ ಪ್ರಪಂಚವನ್ನೇ ಹಣಕಾಸು ಬಂಡವಾಳ ಹಾಗೂ ಮಾರುಕಟ್ಟೆ ಶಕ್ತಿಗಳು ಆಳುತ್ತಿರುವ ವಾಸ್ತವಿಕ ಸತ್ಯ ಕಣ್ಮುಂದೆ ಇದ್ದರೂ, ಜಾತಿನಾಶಕ್ಕೆ ಜಾಗತೀಕರಣದ ಔಷಧಿಯನ್ನು ಶಿಫಾರಸು ಮಾಡುವ ವಿಚಾರದಿಂದ ನಿಜವಾಗಲೂ ದಲಿತ ಸಮುದಾಯ ತಲೆ ತಗ್ಗಿಸುವಂತಾಗಿದೆ. ಸಾಮಂತಶಾಹಿ ವ್ಯವಸ್ಥೆಯಲ್ಲಿ ಒಂದೆರಡು ಕ್ಷೇತ್ರಕ್ಕೆ ಮೀಸಲಾಗಿದ್ದ ದಲಿತ ಶ್ರಮವು, ಬಂಡವಾಳಶಾಹಿ-ಸಾಮ್ರಾಜ್ಯಶಾಹಿ ವ್ಯವಸ್ಥೆಯಲ್ಲಿ ಎಲ್ಲಾ ಕ್ಷೇತ್ರಗಳಿಗೂ ಹರಿದು ಹಂಚಿಹೋಗಿದೆ. ಊಳಿಗಮಾನ್ಯ ದೊರೆಗಳಿಗಿಂತ ಶ್ರಮದೋಚುವುದರಲ್ಲಿ ಜಾಗತೀಕರಣದ ದೊರೆಗಳು ಸಾವಿರ ಪಾಲು ಅಪಾಯಕಾರಿಗಳೆಂದು ಅರಿಯಬೇಕಾಗಿದೆ. ಜಾಗತೀಕರಣದಲ್ಲಿ ಜಾತಿವ್ಯವಸ್ಥೆ ಶ್ರಮ ಹಾಗೂ ಮಾರುಕಟ್ಟೆ ಆಧಾರದ ಮೇಲೆ ವಿಭಜಿಸಿಕೊಂಡು ಪುನರ್‌ನಿರ್ಮಾಣವಾಗಹತ್ತಿದೆ. ಬ್ರಿಟಿಷ್ ವಸಾಹತುವಾದಿಗಳು ಈ ದೇಶದ ಊಳಿಗಮಾನ್ಯ(ಶ್ರೇಣೀಕೃತ ಜಾತಿ ಆಧಾರಿತ ಶ್ರಮ ವಿಭಜನಾ ವ್ಯವಸ್ಥೆ) ಶಾಹಿಯನ್ನು ನಾಶಮಾಡಲಿಲ್ಲ. ಜಮೀನ್ದಾರಿ ಹಾಗೂ ರೈತುವಾರಿ ಪದ್ಧತಿಯ ಮೂಲಕ ಊಳಿಗಮಾನ್ಯಶಾಹಿಯನ್ನೇ ತನ್ನ ಶೋಷಣೆಗೆ ಸಾಮಾಜಿಕ ಬುನಾದಿ ಮಾಡಿಕೊಳ್ಳಲಾಯಿತು.
ಇಂದು ಜಾಗತೀಕರಣದ ಹೆಸರಿನಲ್ಲಿ ನವವಸಾಹತುಶಾಹಿ ವ್ಯವಸ್ಥೆ ಜಾರಿಯಲ್ಲಿದೆ. ಉದ್ಯೋಗಗಳ ನಾಶ, ಗುತ್ತಿಗೆ ಕಾರ್ಮಿಕ ಪದ್ಧತಿ, ಕಾರ್ಮಿಕರ ಮಾರುಕಟ್ಟೆ, ಮಾನವ ಹಕ್ಕುಗಳ ಹರಣ ಯತೇಚ್ಛವಾಗಿ ಸಾಗಿವೆ. ಇಲ್ಲೆಲ್ಲ ದಮನ ದಬ್ಬಾಳಿಕೆಗೆ ಒಳಗಾಗುವ ಶ್ರಮಿಕರಲ್ಲಿ ದಲಿತರದ್ದೇ ದೊಡ್ಡ ಸಂಖ್ಯೆ. ಇದನ್ನು ಸಾಹಿತಿ, ಕಲಾವಿದರು ಸರಿಯಾಗಿ ಅರ್ಥಮಾಡಿಕೊಳ್ಳುವ ಸುವರ್ಣ ದಿನಕ್ಕಾಗಿ ದಲಿತ ಸಮೂಹ ಕಾಯುತ್ತಿದೆ.
ಹಾಗೆಯೇ, ದಲಿತ ಚಳವಳಿ "ಸತ್ತುಹೋಗಿದೆ" ಎಂಬುದಕ್ಕಿಂತ "ಸಾಯಿಸಲಾಗಿದೆ" ಎಂಬ ಸಂಗತಿ ಸತ್ಯವಾದದ್ದು. ದಲಿತ ಸಮೂಹವನ್ನು ಕೇವಲ ಸಾಮಾಜಿಕ ತಾರತಮ್ಯಗಳ ವಿರುದ್ಧ ತಿರುಗಿಸುವಲ್ಲಿ ಮೇಲ್ವರ್ಗ-ಮೇಲ್ಜಾತಿಯ ಸಿದ್ಧಾಂತಗಳು ದಲಿತರ ನಡುವೆ ಒಳತೂರಿಕೊಂಡವು. ಉತ್ಪತ್ತಿ ಹಾಗೂ ಸಾಮಾಜಿಕ ಸಂದರ್ಭದಲ್ಲಿ ದಲಿತರ ಪಾತ್ರವನ್ನು ಗೌಣವಾಗಿ ನೋಡುವ ದೃಷ್ಟಿಕೋನಗಳು ದಲಿತ ನಾಯಕರ ಒಪ್ಪಿತ ಸಿದ್ಧಾಂತಗಳಾದವು. ಗಾಂಧಿ ಹಾಗೂ ಅಂಬೇಡ್ಕರ್ ನಡುವೆ ವೈಚಾರಿಕ ಭಿನ್ನಾಭಿಪ್ರಾಯ ಅರಿಯದವರು ಚಳವಳಿಯ ಹರಿಕಾರರೆಂದು ಆಳುವ ವರ್ಗಗಳು ಪ್ರಚಾರ ಮಾಡಿದವು. ದಲಿತ ಚಳವಳಿಯನ್ನು ಮೆದಕಿನಾಳ ಭೂ ಹೋರಾಟ, ಮಹ್ಮದ್ ನಗರ ಭೂ ಹೋರಾಟ, ದೇವಸಂದ್ರ ಭೂ ಹೋರಾಟ, ಹೆಚ್.ಡಿ.ಕೋಟೆ ಭೂ ಹೋರಾಟದ ಮೂಲಕ ಕಟ್ಟಿ ಈ ಸಮೂಹಕ್ಕೆ ವರ್ಗ ಪ್ರಜ್ಞೆ ಕೊಟ್ಟ ಆಚರಣಾತ್ಮಕ ನಾಯಕರನ್ನು ವ್ಯವಸ್ಥಿತವಾಗಿ ಬಗ್ಗುಬಡಿಯಲಾಯಿತು. ದಲಿತರ ಶತ್ರುಗಳ್ಯಾರು ಮತ್ತು ಮಿತ್ರರ್ಯಾರು ಎಂದು ನಿರ್ಧರಿಸುವ ಸೈದ್ಧಾಂತಿಕ ಸಂಜೀವಿನಿಯಿಂದ ಮಾತ್ರ ದಲಿತ ಚಳವಳಿಯನ್ನು ಬದುಕಿಸಿಕೊಳ್ಳಲು ಸಾಧ್ಯ ಎಂದವರನ್ನು ದಲಿತ ವಿರೋಧಿಗಳೆಂದು ಪ್ರಚಾರ ಮಾಡಲಾಯಿತು. ಅಂದು ಈ ಪ್ರಚಾರದ ನೇತೃತ್ವ ವಹಿಸಿದವರು ಇಂದು ದಲಿತ ಚಳವಳಿಗೆ ಬರಿಗೈಯಿಂದ ಜೀವ ತುಂಬಲು ಹೊರಟಿದ್ದಾರೆ. ಹಾಗಾಗಿ ಇಡೀ ದಲಿತ ಸಮುದಾಯ ಕೇಳಲೇಬೇಕಾದ ಪ್ರಶ್ನೆಯೆಂದರೆ "ದಲಿತ ಚಳವಳಿಯನ್ನು ಕೊಂದವರು ಯಾರು?" ಎಂದು.


  -ಆರ್. ಮಾನಸಯ್ಯ
ಪ್ರಧಾನ ಸಂಪಾದಕರು, ಬೆಂಕಿ ಬೆಳಕು ಪತ್ರಿಕೆ
ರಾಯಚೂರು


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement