ಅಂಕಣಗಳು

ಹುಸಿ ದೇವರುಗಳ ಭಾರಕ್ಕೆ ಭಾರತ ಹಳಿ ತಪ್ಪಿದಾಗ...

ಇದಂತೂ ಸತ್ಯ. ಮಾಧ್ಯಮಗಳ ಸ್ಪರ್ಧಾತ್ಮಕ ಸಾಹಸ ಕಾರ್ಯದಲ್ಲಿ ನಮ್ಮ...

ಇದಂತೂ ಸತ್ಯ. ಮಾಧ್ಯಮಗಳ ಸ್ಪರ್ಧಾತ್ಮಕ ಸಾಹಸ ಕಾರ್ಯದಲ್ಲಿ ನಮ್ಮ ರಾಜಕಾರಣಿಗಳು ದೇಶವನ್ನು ಹೇಗೆ ಲೂಟಿ ಹೊಡೆಯುತ್ತಿದ್ದಾರೆ ಎನ್ನುವುದು ನಮಗಂತೂ ಗೊತ್ತಾಗುತ್ತಿಲ್ಲ. ಮಾಧ್ಯಮಗಳು ಅರ್ಧ ಸುದ್ದಿಯನ್ನು ಮಹತ್ವಹೀನಗೊಳಿಸಿ, ಇನ್ನರ್ಧ ಸುದ್ದಿಯನ್ನು ಭಾವೋದ್ರೇಕದಿಂದ ಬಿತ್ತರಿಸುತ್ತವೆ. ಇದರ ಫಲಿತಾಂಶ ಮಾತ್ರ ಹಾನಿಕರವಾದದ್ದು. ಮನೆಯಲ್ಲಿ ಕುಳಿತ ಜನ ಸ್ವಾರ್ಥಿಗಳನ್ನು ಹೀರೋಗಳೆಂದುಕೊಳ್ಳುತ್ತಾರೆ. ಭಾರತ ರಣೋತ್ಸಾಹವನ್ನು ತೋರಿಸದಿರುವುದನ್ನು ನೋಡಿ ವಿದೇಶಗಳಲ್ಲಿ ಕುಳಿತವರು ಈ ದೇಶವನ್ನು ಬಾಲಿಶವೆಂದು ಭಾವಿಸುತ್ತಾರೆ.
ಜನಜೀವನದ ಮೇಲೆ ಪ್ರಭಾವ ಬೀರುವ ಮತ್ತು ದೇಶದ ಭವಿಷ್ಯವನ್ನು ನಿರ್ಧರಿಸುವ ವಿಷಯಗಳಿಗೆ ಪತ್ರಿಕಾ ಮಾಧ್ಯಮಗಳಲ್ಲಂತೂ ಹೆಚ್ಚು ಜಾಗ ಸಿಗುವುದಿಲ್ಲ, ಇನ್ನು ಟೆಲಿವಿಷನ್ ಮಾಧ್ಯಮಗಲ್ಲಂತೂ ಇವುಗಳಿಗೆ ಜಾಗವಿಲ್ಲ. ಯುಪಿಎ-2 ಸರ್ಕಾರದಡಿಯಲ್ಲಿ ಎದುರಾಗಿರುವ ಆರ್ಥಿಕ ಹಿನ್ನಡೆಯ ಬಗ್ಗೆ ಮತ್ತು ಹೀಗಾಗಲು ಕಾರಣವಾದ ಸರ್ಕಾರದ ಅಸಾಮರ್ಥ್ಯದ ಬಗ್ಗೆ ಹೆಚ್ಚು ಚರ್ಚೆಯಾಗುವುದೇ ಇಲ್ಲ. ಖರ್ಚು ಕಡಿಮೆ ಮಾಡುವ ಬಗ್ಗೆ ಸರ್ಕಾರ ಮಾತನಾಡುತ್ತದಾದರೂ ವಿಐಪಿ ಭದ್ರತೆಗೆ, ಶಾಸಕರ ಖರ್ಚಿಗೆ, ಅಧಿಕಾರಿಗಳ ಸವಲತ್ತುಗಳಿಗೆ ಅದು ಮಾಡುತ್ತಿರುವ ಹಣದ ಪೋಲಿನತ್ತ ಮಾಧ್ಯಮಗಳ ದೃಷ್ಟಿ ಹರಿಯುವುದೇ ಇಲ್ಲ. ಸಾಮಾಜದ ಕ್ರೂರ ಸಂಪ್ರದಾಯಗಳನ್ನು ನಿರ್ಮೂಲನೆ ಮಾಡಲು ಸಹಾಯಕವಾದ ರಾಜಾರಾಮ್ ಮೋಹನ್ರಾಯರ ತತ್ವಗಳು ಬಹುಶಃ ಅವರೊಂದಿಗೇ ಅಂತ್ಯವಾಗಿವೆ ಅನಿಸುತ್ತಿದೆ. ಇಂದು ಹರ್ಯಾಣಾದ ಮುಖ್ಯಮಂತ್ರಿಗಳು ಖಾಪ್
ಪಂಚಾಯತ್ಗಳ ಕಾನೂನುಬಾಹಿರ ಶಿಕ್ಷೆಗಳನ್ನು ಸಮರ್ಥನೆಗೆ ನಿಲ್ಲುತ್ತಾರೆ, ಕುರುಡು ನಂಬಿಕೆಯ ನಾಯಕರು ಧರ್ಮಪುರಿಯಂಥ ಜಾಗಗಳಲ್ಲಿ ಜಾತಿ ಗಲಭೆಗಳು ನಡೆಯುವುದಕ್ಕೆ ಪ್ರಚೋದನೆ ನೀಡುತ್ತಾರೆ. ಅಲ್ಪಸಂಖ್ಯಾತರ ಹಕ್ಕನ್ನು ಕಾಯುವುದೆಂದರೆ ಸೌದಿ ಅರೇಬಿಯಾದಂಥ ರಾಷ್ಟ್ರಗಳೊಂದಿಗೆ ಉತ್ತಮ ಬಾಂಧವ್ಯ ಹೊಂದುವುದು ಮತ್ತು ಮುಸ್ಲಿಂ ಮೂಲಭೂತವಾದವನ್ನು ಬೆಂಬಲಿಸುವುದು ಎನ್ನುವಂಥ ವಾತಾವರಣವನ್ನು ಸೃಷ್ಟಿಸಿದ್ದಾರೆ. ಭಾರತದ ಇನ್ನೊಂದು ಮಿತ್ರರಾಷ್ಟ್ರವಾಗಿರುವ ಅಮೆರಿಕದ ಮೂಲಭೂತವಾದಿ ಚರ್ಚ್ಗಳು, ಪ್ರಪಂಚದ ವಿವಿಧ ದುರ್ಬಲ ವರ್ಗಗಳ ಮೇಲೆ ಸ್ವಹಿತಕ್ಕಾಗಿ ಹಣಹೂಡುತ್ತಿವೆ. ಇದೇ ಸಮಯದಲ್ಲೇ ಅಲ್ಪಸಂಖ್ಯಾತ ಸಂಸ್ಥೆಗಳು ತಮ್ಮದೇ ಕಾನೂನನ್ನು ಜಾರಿಗೊಳಿಸುತ್ತಿವೆ. ಈ ವಿಷಯದಲ್ಲಿ ಸರ್ಕಾರದಂತೆಯೇ ಮಾಧ್ಯಮಗಳೂ ಕೂಡ ಸೇಫ್ ಆಗಿ ವರ್ತಿಸುತ್ತವೆ. ಹಾದು, ಇದೆಲ್ಲ ಯಾರ ಸುರಕ್ಷತೆಗಾಗಿ?
ಸುಲಭವಾಗಿ ಸಂಭ್ರಮಗೊಳಿಸುವ ಸುದ್ದಿ ಸಿಕ್ಕರೆ ಸಾಕು, ಮಾಧ್ಯಮಗಳೆಲ್ಲವೂ ಪ್ರಮುಖ ಎಚ್ಚರಿಕೆಗಳನ್ನೇ ಕಡೆಗಣಿಸಿಬಿಡುತ್ತವೆ. ಅವುಗಳಲ್ಲಿ ನಿತ್ಯವೂ ರಾರಾಜಿಸುವ ನರೇಂದ್ರ ಮೋದಿ ಮತ್ತು ರಾಹುಲ್ ಗಾಂಧಿ ನಂತರ ಈಗ ಸಚಿನ್ಗೆ ಜಾಗ ಸಿಕ್ಕಿದೆ. ಕೇವಲ ಸಚಿನ್ ತೆಂಡುಲ್ಕರ್ ಎನ್ನುವ ಹೆಸರು ಕೇಳಿದರೇ ಸಾಕು ಬಹುತೇಕ ಭಾರತೀಯರು ಭಾವಾವೇಷಕ್ಕೊಳಗಾಗುತ್ತಾರೆ ಎನ್ನುವುದು ನಿಜಕ್ಕೂ ದುಃಖದ ಸಂಗತಿ. ಇನ್ನು ಬುದ್ಧಿವಂತರು ಎನಿಸಿಕೊಂಡವರು ಸಚಿನ್ನ ಮೇಲೆ ಪ್ರಬಂಧವನ್ನೋ ಅಥವಾ ಪುಸ್ತಕವನ್ನೋ ಬರೆದು ಪಾವನರಾಗುತ್ತಾರೆ. ದೊಡ್ಡ ಪತ್ರಿಕೆಗಳು ಆತನ ಮೇಲೆ ಸಂಪಾದಕೀಯ ಬರೆದು ಪುಳಕಗೊಳ್ಳುತ್ತವೆ. ಅಷ್ಟಕ್ಕೂ ಈ ವ್ಯಕ್ತಿ ಯಾರು? ತನ್ನ ಫೆರಾರಿ ಕಾರಿಗೆ ಭಾರತೀಯರು ತೆರಿಗೆ ಕಟ್ಟಲಿ ಎಂದು ಬಯಸಿದಾತ! ಭಾರತೀಯ ಕ್ರಿಕೆಟ್ ಅಸ್ತವ್ಯಸ್ಥಗೊಂಡಾಗ ಅದನ್ನು ಸರಿಪಡಿಸಲು ಮುಂದಾಗದ, ತನ್ನ ಪಾಡಿಗೆ ತಾನಿದ್ದ ವ್ಯಕ್ತಿ. ತನ್ನ ವೈಭವಕ್ಕೆ ಇನ್ನಷ್ಟು ರನ್ಗಳ ಸೇರ್ಪಡೆಯಾಗಬೇಕೆಂಬ ಆಸೆಗೆ ಬಿದ್ದು ಫಾರ್ಮ್ ಕಳೆದುಕೊಂಡರೂ ನಿವೃತ್ತಿಯಾಗದೇ ಕಾಲ ದೂಡಿದಾತ. ತೆಂಡುಲ್ಕರ್ಗೆ ಹೋಲಿಸಿದರೆ, ರಾಹುಲ್ ದ್ರಾವಿಡ್ ತುಂಬಾ ಆದರ್ಶಪೂರ್ವಕವಾಗಿ ವರ್ತಿಸಿದ ಆಟಗಾರ.
ತೆಂಡುಲ್ಕರ್, ಭಾರತೀಯ ಕ್ರಿಕೆಟ್ಗೆ ಮಾರ್ಕೆಟಿಂಗ್ ತಂದೊಡ್ಡಿದ ದುರಂತದ ಪ್ರತೀಕ. ಇಂಗ್ಲೆಂಡ್ ಈ ಮಾರ್ಕೆಟಿಂಗ್ ತಂತ್ರವನ್ನು ಹುಟ್ಟುಹಾಕಿತು. ಆಸ್ಟ್ರೇಲಿಯಾ ಇದನ್ನು ಇನ್ನಷ್ಟು ಎತ್ತರಕ್ಕೆ ಒಯ್ದು ನಿಲ್ಲಿಸಿತು. ಆದರೆ ಅವರು ಯಾವತ್ತೂ ಸಮತೋಲನ ಕಳೆದುಕೊಳ್ಳಲಿಲ್ಲ. ಇತ್ತ ಭಾರತೀಯ ಕ್ರಿಕೆಟ್ ಉದ್ಯಮವಾಗಿ ಬದಲಾಯಿತು. ರಾಜಕಾರಣಿಗಳು ಮತ್ತು ಉದ್ಯಮಿಗಳ ವಿಷಕಾರಿ ಮಿಶ್ರಣದಿಂದ ಹುಟ್ಟಿಕೊಂಡ ಹಣ ಕ್ರಿಕೆಟ್ ಅನ್ನು ಲಾಭದಾಯಕ ಜಾಲವಾಗಿ ಬದಲಾಯಿಸಿತು. ಕ್ರಿಕೆಟ್ ಭ್ರಷ್ಟ ಉದ್ಯಮವಾಯಿತು. ಇದನ್ನೆಲ್ಲ ಸಾಧ್ಯವಾಗಿಸಿದ್ದು ಮಾಧ್ಯಮಗಳು. ಲಲಿತ್ ಮೋದಿಯವರಿಗೆ ಲಾಭ ಮಾಡಿಕೊಟ್ಟದ್ದು ಚಿಯರ್ ಗರ್ಲ್ಗಳಲ್ಲ, ಇದೇ ಮಾಧ್ಯಮಗಳು.
ಈ ಗಲಿಬಿಲಿಗಳ ನಡುವೆಯೇ ಚಿಕ್ಕದೊಂದು ಸುದ್ದಿ ಮಾಧ್ಯಮಗಳಲ್ಲಿ ಮಿಂಚಿ ಕ್ಷಣಾರ್ಧದಲ್ಲಿ ಮಾಯವಾಯಿತು. ಇತ್ತೀಚೆಗೆ ತೆಗೆದುಕೊಳ್ಳಲಾದ ಪ್ರಮುಖ ರಾಜಕೀಯ ನಿರ್ಧಾರವೊಂದರಲ್ಲಿ ಪ್ರಣಬ್ ಮುಖರ್ಜಿಯವರ ಪಾತ್ರ ದೊಡ್ಡದಿತ್ತು. ಆದರೆ ಅದು ಹೆಚ್ಚು ಸುದ್ದಿಯಾಗಲೇ ಇಲ್ಲ. ಸರ್ಕಾರದಲ್ಲಿ ಅತಿ ಹೆಚ್ಚು ಹುದ್ದೆಗಳನ್ನು ನಿರ್ವಹಿಸಿದ ಅತ್ಯಂತ ಚಾಣಾಕ್ಷ ರಾಷ್ಟ್ರಪತಿ ಅವರು. ಹಾಸ್ಯೋಕ್ತಿಯೆಂದರೆ, ಭಾರತಕ್ಕೆ ಎಂದೂ ದೊರೆಯದ  ಅತ್ಯುತ್ತಮ ಪ್ರಧಾನ ಮಂತ್ರಿಗಳವರು!
ಅವರು ಭಾರತದ ಪ್ರಧಾನಿ ಏಕೆ ಆಗಲಿಲ್ಲ ಎಂದರೆ, ಹಾಗೆ ಆಗುವುದು ಸೋನಿಯಾ ಗಾಂಧಿಗೆ ಇಷ್ಟವಿರಲಿಲ್ಲ. ಸೋನಿಯಾ ಗಾಂಧಿಗೆ ಏಕೆ ಇಷ್ಟವಿರಲಿಲ್ಲ ಎಂದರೆ ಪ್ರಣಬ್ ಮುಖರ್ಜಿ ಎಲ್ಲದಕ್ಕೂ "ಎಸ್" ಎಂದು ತಲೆ ಅಲ್ಲಾಡಿಸುವ ವ್ಯಕ್ತಿಯಲ್ಲ! ಸೋನಿಯಾ ಗಾಂಧಿಗೆ ಆಜ್ಞಾಪಾಲಕರು ಬೇಕು. ಹಾಗಾಗೇ ಅವರು ಮನಮೋಹನ್ ಸಿಂಗ್ ಅವರನ್ನು ಆರಿಸಿದರು, ಹಾಗಾಗೇ ಅವರು ಪ್ರತಿಭಾ ಪಾಟೀಲ್ರನ್ನು ಮೆಚ್ಚಿಕೊಂಡರು. ಪ್ರಣಬ್ ರಾಷ್ಟ್ರಪತಿಯಾಗುವುದನ್ನು ಅವರು ತಪ್ಪಿಸಲು ಪ್ರಯತ್ನಿಸಿದರಾದರೂ, ಕಾಂಗ್ರೆಸ್ಸೇತರ ಪಕ್ಷಗಳ ಬೆಂಬಲ ಪಡೆದು
ಆ ಹುದ್ದೆಗೆ ಏರಿದರು ಪ್ರಣಬ್. ಆದರೆ ಪ್ರಣಬ್ ಮುಖರ್ಜಿಯವರದ್ದು ಪ್ರತೀಕಾರ ತೀರಿಸಿಕೊಳ್ಳುವಂಥ ಬಾಲಿಶ ಮನಸ್ಥಿತಿಯಲ್ಲ. ಒಂದು ವೇಳೆ ಅತಂತ್ರ ಸಂಸತ್ತು ಉದ್ಭವವಾದರೆ ಅವರೇನೂ ರಬ್ಬರ್ ಸ್ಟ್ಯಾಂಪ್ ಆಗಿ ಕಾರ್ಯನಿರ್ವಹಿಸುವುದಿಲ್ಲ ಎನ್ನುವುದಂತೂ ಖಚಿತ.


-ಟಿ.ಜೆ.ಎಸ್ ಜಾರ್ಜ್

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಸಿಇಸಿ ವಿರುದ್ಧದ ವಿಪಕ್ಷಗಳ ಪ್ರತಿಭಟನೆ: ವಶಕ್ಕೆ ಪಡೆದ ಬೆನ್ನಲ್ಲೇ ರಾಹುಲ್, ಪ್ರಿಯಾಂಕಾ ಗಾಂಧಿ ಬಿಡುಗಡೆ

ಅಧಿಕಾರಿಯಂತೆ ನಟಿಸಿ ಆಪ್ ನಾಯಕನಿಗೆ ಧೋಕಾ; ಮದುವೆಯಾಗಿ ಆಭರಣಗಳೊಂದಿಗೆ ಮಹಿಳೆ ಪರಾರಿ!

ಆಪರೇಷನ್ ಸಿಂಧೂರ್, ರಕ್ಷಕ್‌ನಲ್ಲಿ ಪ್ರಮುಖ ಪಾತ್ರವಹಿಸಿದ್ದ ಅಶುತೋಷ್ ದೀಕ್ಷಿತ್ ವಾಯುಪಡೆಯ ನೂತನ ಮುಖ್ಯಸ್ಥ!

ಮಚ್ಛಾರ್ ಆರೋಗ್ಯಯಲ್ಲಿ 'ಸ್ಥಿರ ಸುಧಾರಣೆ': ಭಾರತೀಯ ರಾಯಭಾರ ಕಚೇರಿ

KPSC ನೇಮಕಾತಿ ಹಗರಣ: EDಯಿಂದ ಮಾಜಿ ಅಧ್ಯಕ್ಷ ಶಿವಶಂಕರಪ್ಪ ಸಾಹುಕಾರ್‌, ಸದಸ್ಯೆ ಗೀತಾ ಬಂಧನ!