ರಿಮ್ಯಾಂಡ್ ಹೋಂನ ಮಕ್ಕಳ ಮುಖದಲ್ಲಿ ಕಂಡ ಸಂತೋಷ
ಕಳೆದ ಅಂಕಣದಲ್ಲಿ ನಾನು ನಿಮಗೆ ಬಾಲ ಕಾರ್ಮಿಕರ ಸಮಸ್ಯೆಗಳ ಬಗ್ಗೆ ತಿಳಿಸಿದ್ದೆ. ಈ ಸಮಸ್ಯೆಯನ್ನು ಎದುರಿಸುತ್ತಿರುವಾಗಲೇ ಒಂದು ದಿನ ಮಧ್ಯರಾತ್ರಿ ನನಗೆ ಬೆಂಗಳೂರಿನ ಉಪ ನಿರ್ದೇಶಕರಿಂದ ಕರೆ ಬಂತು. ಬೆಂಗಳೂರಿನಲ್ಲಿರುವ ಮಕ್ಕಳ ರಿಮ್ಯಾಂಡ್ ಹೋಂನಿಂದ ನಾಲ್ಕು ಮಕ್ಕಳು ಪರಾರಿಯಾಗಿದ್ದಾರೆ, ಈ ಬಗ್ಗೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಲಾಗಿದೆ ಹಾಗೂ ಅವರನ್ನು ಹುಡುಕಲು ಪ್ರಯತ್ನ ನಡೆಸಲಾಗುತ್ತಿದೆ ಎಂದರು. ಇದು ಪತ್ರಿಕೆಗಳಲ್ಲಿ ದೊಡ್ಡ ತಲೆಬರಹಗಳಲ್ಲಿ ಸುದ್ದಿಯಾಗುತ್ತದೆ, ಸರ್ಕಾರಕ್ಕೆ ತುಂಬಾ ಕೆಟ್ಟ ಹೆಸರು ಬರುತ್ತದೆ, ದಾರಿ ತಪ್ಪಿದ ಮಕ್ಕಳನ್ನು ಸುಧಾರಿಸುವ ಜವಾಬ್ದಾರಿ ಹೊಂದಿರುವ ರಿಮ್ಯಾಂಡ್ ಹೋಂಗಳು ವಿಫಲವಾಗಿವೆ ಎಂದು ಎಲ್ಲರೂ ಟೀಕೆ ಮಾಡುತ್ತಾರೆ ಎಂದು ಸಹಜವಾಗಿಯೇ ನಿರೀಕ್ಷಿಸಿದೆ. ಖಂಡಿತವಾಗಿಯೂ ನಮ್ಮ ವ್ಯವಸ್ಥೆಯಲ್ಲಿ ಕೆಲವು ಕೊರತೆಗಳಿದ್ದು ಅವುಗಳನ್ನು ಸೂಕ್ಷ್ಮವಾಗಿ ವಿಶ್ಲೇಷಿಸಿದರೆ ಸುಧಾರಣೆ ಮಾಡಲು ಅವಕಾಶ ಸಿಗುತ್ತದೆ ಎಂದು ಯೋಚಿಸಿ ಮಾರನೆಯ ದಿನ ಮುಂಜಾನೆ ಸ್ಥಳ ಪರಿಶೀಲನೆ ನಡೆಸಲು ಬರುತ್ತೇನೆಂದು ತಿಳಿಸಿದೆ. ಜೊತೆಗೆ ಎಲ್ಲಾ ಸಿಬ್ಬಂದಿಗಳು ಹಾಗೂ ಪೊಲೀಸರು ಅಲ್ಲಿರಬೇಕೆಂದು ಸೂಚಿಸಿದೆ.
ಬೆಂಗಳೂರಿನ ಮಡಿವಾಳದಲ್ಲಿ ಸ್ಥಾಪಿಸಿರುವ ಗಂಡು ಮಕ್ಕಳ ರಿಮ್ಯಾಂಡ್ ಹೋಂಗೆ ನಾನು ಬೆಳಿಗ್ಗೆ ಭೇಟಿ ನೀಡಲು ಹೋದಾಗ ಅದರ ಸುತ್ತಮುತ್ತ ಕಾಯಿಪಲ್ಯ, ಹಣ್ಣು ಮಾರುವವರ ದೊಡ್ಡ ಸಂತೆ ಇತ್ತು. ಗೇಟ್ ಒಳಗಡೆ ಪ್ರವೇಶಿಸಲು ಕಷ್ಟಪಡಬೇಕಾಯಿತು. ಒಳಗೆ ಹೋದಾಗ ಕಬ್ಬಿಣದ ದೊಡ್ಡ ದ್ವಾರ. ಕಟ್ಟಡವನ್ನು ಪ್ರವೇಶಿಸಿದರೆ ಒಂದು ರೀತಿಯ ನಿಶ್ಶಬ್ದ ವಾತಾವರಣ ಇತ್ತು. "ಇಲ್ಲಿ ಮಕ್ಕಳು ಇದ್ದಾರೋ ಇಲ್ಲವೋ?" ಎಂಬ ನನ್ನ ಪ್ರಶ್ನೆಗೆ, "ಸುಮಾರು ನೂರನಲವತ್ತು ಮಕ್ಕಳು ಇದ್ದಾರೆಂದು" ಅಧಿಕಾರಿಗಳು ತಿಳಿಸಿದರು. ಹಿಂದಿನ ದಿನದ ಘಟನೆಯಿಂದ ಎಲ್ಲರೂ ಭಯಭೀತರಾಗಿದ್ದರು. ನಾನು ರಿಮ್ಯಾಂಡ್ ಹೋಂ ಅನ್ನು ವೀಕ್ಷಿಸಿದ ಬಳಿಕ ಮಕ್ಕಳನ್ನು ಒಂದು ಕಡೆ ಕೂಡಿಸಿ ಅವರ ಜೊತೆಗೆ ಮಾತನಾಡಬೇಕೆಂದು ತಿಳಿಸಿದೆ. ಅಲ್ಲಿನ ಊಟದ ಕೊಠಡಿಯ ಹತ್ತಿರ ತರಗತಿಗಳು ನಡೆಯುವ ಕೋಣೆಗಳು ಮತ್ತು ಮಕ್ಕಳ ವಸತಿ ಕೊಠಡಿಗಳು ಸಹ ಇದ್ದವು. ಒಂದು ಆಟದ ಮೈದಾನ ಸಹ ಇತ್ತು. ಕಟ್ಟಡದ ಹೊರಗಡೆ ಸುಮಾರು ಜಾಗ ಇದ್ದರೂ ಸಹ ಅವರಿಗೆ ಹೊರಗೆ ಹೋಗಿ ಆಡಲು ಅನುಮತಿ ಇರಲಿಲ್ಲ. ಏಕೆಂದರೆ ಅವರು ಓಡಿ ಹೋಗುವ ಸಾಧ್ಯತೆ ಇರುತ್ತದೆ. ನೂರ ನಲವತ್ತು ಮಕ್ಕಳನ್ನು ನಿಭಾಯಿಸಲು ಕೇವಲ ಇಬ್ಬರು ಮೇಲ್ವಿಚಾರಕರು ಮಾತ್ರ ಇದ್ದರು. ಪ್ರತಿಯೊಬ್ಬ ಬಾಲಕನಿಗೂ ಸಂಬಂಧ ಪಟ್ಟ ಒಂದು ಕಡತವನ್ನು ಅವರುಗಳು ಇಟ್ಟುಕೊಳ್ಳಬೇಕಾಗಿತ್ತು. ನ್ಯಾಯಾಲಯದಲ್ಲಿ ಪ್ರಕರಣಗಳು ಇರುವಾಗ ಅವರು ಅಲ್ಲಿಗೆ ಬಾಲಕನನ್ನು ಕರೆದುಕೊಂಡು ಹಾಜರಾಗಬೇಕಿತ್ತು. ಒಂದೊಂದು ಪ್ರಕರಣಕ್ಕೆ ಒಂದೊಂದು ದಿನ ಆದರೂ ಕಳೆದು ಹೋಗುತ್ತಿತ್ತು. ಕಾಯ್ದೆಯ ಪ್ರಕಾರ ಸಮಯದ ಮಿತಿಯ ಒಳಗಡೆ ಪ್ರಕರಣಗಳು ಇತ್ಯರ್ಥ ಆಗಬೇಕಿದ್ದರೂ ಸಹ ವರ್ಷಗಟ್ಟಲೇ ಪ್ರಕರಣಗಳು ಬಾಕಿ ಇರುತ್ತಿದ್ದವ್ತು. ಅಂಥ ಕೊಠಡಿಗಳಲ್ಲಿ ವರ್ಷಗಟ್ಟಲೆ ಅಸಹಾಯಕರಾಗಿರುವುದರಿಂದ ಆ ವಾತಾವರಣದಿಂದ ಓಡಿ ಹೋಗಬೇಕೆಂದು ಆ ಹುಡುಗರ ಮನಸ್ಸಿನಲ್ಲಿ ಬರುವುದು ಸ್ವಾಭಾವಿಕವಾಗಿತ್ತು. ಮೇಲ್ವಿಚಾರಕರು ಕೇವಲ ನ್ಯಾಯಾಲಯಗಳಿಗೆ ಹೋಗಿ ಬರುವುದರಲ್ಲಿ ಕಾರ್ಯಮಗ್ನರಾಗಿದ್ದುದರಿಂದ ಮಕ್ಕಳ ಬೆಳವಣಿಗೆಗೆ ಅವರು ಗಮನ ಕೊಡುವ ಸಾಧ್ಯತೆ ಕಡಿಮೆ ಇತ್ತು. ಒಂದು ಕೊಠಡಿಯಲ್ಲಿ ಮಕ್ಕಳ ಮನರಂಜನೆಗಾಗಿ ಒಂದು ಟಿ.ವಿ.ಯನ್ನು ಇಡಲಾಗಿತ್ತು. ಬೆಳಿಗ್ಗೆ ಸಮಯದಲ್ಲಿ ಎಡ್ಯುಸ್ಯಾಟ್ ಕಾರ್ಯಕ್ರಮದ ಮೂಲಕ ಅವರಿಗೆ ಪಾಠಗಳನ್ನು ಹೇಳಿಕೊಡಲು ವ್ಯವಸ್ಥೆಯನ್ನು ಈ ಹಿಂದೆ ಮಾಡಲಾಗಿತ್ತು. ಆದರೆ ಕಾರಣಾಂತರಗಳಿಂದ ಈ ಸೌಲಭ್ಯ ನಿಂತು ಹೋಗಿದೆ ಎಂದು ತಿಳಿಸಿದರು. ಮಕ್ಕಳಿಗೆ ಪಾಠ ಹೇಳಿಕೊಡಲು ಮತ್ತು ಮಾನಸಿಕ ಪರಿವರ್ತನೆ ತರಲು ಕೆಲವು ಸ್ವಯಂಸೇವಾ ಸಂಸ್ಥೆಗಳು ಮುಂದೆ ಬಂದಿದ್ದವು. ಆದರೆ ಅವರಿಗೆ ನೀಡಬೇಕಾದ ಸಂಭಾವನೆ ಹಾಗೂ ಅನುಮತಿಗಳ ಅಡಚಣೆಯಿಂದ ಆ ಕಾರ್ಯಗಳೂ ನಿಂತುಹೋಗಿದ್ದವು. "ಹಾಗಾದರೆ ಇಡೀ ದಿನ ಮಕ್ಕಳು ಏನು ಮಾಡುತ್ತಾರೆ?" ಎಂದು ನಾನು ಕೇಳಿದಾಗ ಸಮರ್ಪಕವಾದ ಉತ್ತರ ಕೊಡಲು ನಿರ್ವಾಹಕರು ಒದ್ದಾಡಿದರು. ಏಕೆಂದರೆ ಆ ಪ್ರಶ್ನೆಗೆ ಅವರ ಬಳಿ ಉತ್ತರವೇ ಇರಲಿಲ್ಲ. ಪೊಲೀಸರು ಬಂದು ಮಕ್ಕಳು ಓಡಿ ಹೋದ ಜಾಗವನ್ನು ತೋರಿಸಿದರು. ಆಟದ ಆವರಣದಲ್ಲಿ ಸುಮಾರು ಮೂವತ್ತು ಅಡಿ ಎತ್ತರದ ಗೋಡೆಯನ್ನು ದಾಟಿ ಓಡಿ ಹೋಗಿದ್ದಾರೆ ಎಂದರೆ ನಿಜವಾಗಿ ಅವರಲ್ಲಿ ಬಹಳ ಧೈರ್ಯ ಹಾಗೂ ಛಲ ಇದೆ ಎಂಬುದು ಅರಿವಾಯಿತು. ಊಟದ ಕೊನೆಯಲ್ಲಿ ಎಲ್ಲಾ ಮಕ್ಕಳನ್ನು ಕೂಡಿಸಿ ಅವರ ಜೊತೆಗೆ ಮಾತನಾಡಲು ಪ್ರಾರಂಭಿಸಿದೆ. ಒಬ್ಬೊಬ್ಬರ ಕುಟುಂಬದ ಬಗ್ಗೆಯೂ ವಿಚಾರಿಸಿದೆ, ಅವರ ಅಣ್ಣತಮ್ಮಂದಿರು, ಅಕ್ಕ ತಂಗಿಯರು ಏನು ಮಾಡುತ್ತಿದ್ದಾರೆಂದು ಕೇಳಿ ತಿಳಿದುಕೊಂಡೆ. ಹೆಚ್ಚಿನ ಮಕ್ಕಳು ತಮ್ಮ ಕುಟುಂಬದ ಬಗ್ಗೆ ಅಷ್ಟೊಂದು ಆತ್ಮೀಯತೆ ಹಾಗೂ ಗೌರವವನ್ನು ಇಟ್ಟುಕೊಂಡಿರಲಿಲ್ಲ. ತಂದೆ ದಿನವೂ ಕುಡಿದು ಬಂದು ಮನೆಯವರಿಗೆ ಹೊಡೆದು ಬಡಿದು ಗಲಾಟೆ ಮಾಡುತ್ತಿದ್ದರು, ಅದನ್ನು ಸಹಿಸಲು ಆಗದೇ ಇದ್ದುದರಿಂದ ಮನೆಯನ್ನು ಬಿಟ್ಟು ಓಡಿ ಹೋಗಲು ಪ್ರಯತ್ನಿಸಿದರೆಂದು ಕೆಲವು ಹುಡುಗರು ಹೇಳಿದರು. ಟಿಕೆಟ್ ಇಲ್ಲದೇ ಇನ್ನೂ ಕೆಲವರು ಯಾವುದೋ ಒಂದು ರೈಲನ್ನು ಹತ್ತಿದ್ದು, ಅವರನ್ನು ಪೊಲೀಸಿನವರು ಹಿಡಿದು ನ್ಯಾಯಾಲಯದಲ್ಲಿ ಹಾಜರು ಪಡಿಸಿದಾಗ, ಹದಿನೆಂಟು ವರ್ಷದೊಳಗಿರುವವರು ಈ ರೀತಿ ಕಾನೂನು ಉಲ್ಲಂಘನೆ ಮಾಡಿದ್ದರಿಂದ ಅವರುಗಳನ್ನು ರಿಮ್ಯಾಂಡ್ ಹೋಂಗೆ ಸೇರಿಸಲಾಗಿತ್ತು. ಆ ಹುಡುಗರನ್ನು ವಿಚಾರಿಸಿದಾಗ ಸುಮಾರು ವರ್ಷದಿಂದ ಅವರಿಗೆ ಊರಿನ ಬಗ್ಗೆ, ಕುಟುಂಬದ ಬಗ್ಗೆ ಗೊತ್ತಿಲ್ಲ ಎಂದರು. ಇನ್ನೊಬ್ಬ ಚಿಕ್ಕ ವಯಸ್ಸಿನವನು ಕೆಟ್ಟ ಸಹವಾಸದಲ್ಲಿ ಬಿದ್ದು ಶಾಲೆಗೆ ಹೋಗುವುದನ್ನೇ ಬಿಟ್ಟಿದ್ದ. ಮನೆಯಿಂದ ಶಾಲೆಗೆ ಹೋಗುತ್ತಿದ್ದೇನೆಂದು ಹೇಳಿ ಬೇರೆ ಹುಡುಗರ ಜೊತೆಗೆ ಸೇರಿ ಬೀಡಿ, ಸಿಗರೇಟ್ ಮುಂತಾದ ಕೆಟ್ಟ ಚಟಗಳನ್ನು ಕಲಿತು ಒಂದು ದಿನ ಈ ಗುಂಪು ತಮ್ಮ ಮನೆಯಿಂದ ಕಳ್ಳತನ ಮಾಡಿ ಬೆಂಗಳೂರಿಗೆ ಬಂದುಬಿಟ್ಟಿತ್ತು. ಬಸ್ ನಿಲ್ದಾಣದಲ್ಲಿ ಈ ಮಕ್ಕಳನ್ನು ನೋಡಿ ಒಂದು ಗುಂಪಿನ ಕಳ್ಳರು ಅವರನ್ನು ಮೋಸ ಮಾಡಿ ಕರೆದುಕೊಂಡು ಹೋಗುತ್ತಿದ್ದಾಗ ಇವರೆಲ್ಲರೂ ಅವರ ಮೇಲೆ ಹಲ್ಲೆ ನಡೆಸಿದ್ದರು. ಪೊಲೀಸರು ಇವರನ್ನು ಬಂಧಿಸಿ ನಂತರ ರಿಮ್ಯಾಂಡ್ ಹೋಂಗೆ ಕರೆತಂದಿದ್ದರು. ಇನ್ನೊಬ್ಬ ದೊಡ್ಡ ಹುಡುಗ ತುಂಬಾ ಒರಟಾಗಿ ವರ್ತಿಸುತಿದ್ದ. ಯಾವ ಪ್ರಶ್ನೆಗೂ ಉತ್ತರ ನೀಡುತ್ತಿರಲಿಲ್ಲ. ನಂತರ ನಾನು ಅವನ ಹಿನ್ನೆಲೆಯ ದಾಖಲೆಗಳನ್ನು ನೋಡಿದಾಗ ಅವನ ತಾಯಿ ದೇವದಾಸಿಯಾಗಿದ್ದುದು ತಿಳಿದುಬಂತು. ಅವನು ರಿಮ್ಯಾಂಡ್ ಹೋಂನಿಂದ ಪರಾರಿಯಾದ ಆ ನಾಲ್ವರ ಜೊತೆಗೆ ತಾನೂ ಏಕೆ ಹೋಗಲಿಲ್ಲ ಎಂದು ಪರಿತಪಿಸುತ್ತಿದ್ದ!
ಅವರೆಲ್ಲರ ಜೊತೆಗೆ ಮಾತನಾಡಿದ ಮೇಲೆ ನನ್ನ ಮನಸ್ಸಿಗೆ ತುಂಬಾ ನೋವಾಯಿತು. ದೇಶದ ಆಸ್ತಿಯಾದ ಮಕ್ಕಳು ಪರಿಸ್ಥಿತಿಯ ಪ್ರಭಾವದಿಂದಾಗಿ ಎಂಥ ಸ್ಥಿತಿಗೆ ತಲುಪಿದ್ದಾರೆ ಎನ್ನುವುದನ್ನು ಕಂಡು ಸಂಕಟವಾಯಿತು. ಇದಕ್ಕೆ ಮುಖ್ಯ ಕಾರಣ ಪಾಲಕರ ಬೇಜವಾಬ್ದಾರಿತನವಲ್ಲದೆ ಮತ್ತೇನು? ಮಕ್ಕಳಿಗೆ ಒಳ್ಳೆಯ ಬದುಕನ್ನು ನೀಡಲು ಆಗದೇ ಇರುವಾಗ ನಾವು ಅವರಿಗೆ ಜನ್ಮ ಕೊಡುವುದೇಕೆ? ಕೇವಲ ಹುಟ್ಟಿಸಿದ ಮಾತ್ರಕ್ಕೆ ಜವಾಬ್ದಾರಿ ಕೊನೆಗೊಂಡಿತು ಎಂದು ತಿಳಿದ ತಂದೆ-ತಾಯಿಗಳು ಒಂದು ಜೀವನವನ್ನು ಹಾಳು ಮಾಡುವುದು ಮಾತ್ರವಲ್ಲ, ಇಡೀ ಸಮಾಜಕ್ಕೇ ದೊಡ್ಡ ಹಾನಿ ಉಂಟಾಗಲು ಕಾರಣರಾಗುತ್ತಾರೆ. ಏನೇ ಇರಲಿ, ಇಂಥ ಅನಾಹುತಗಳನ್ನು ಸರಿಪಡಿಸುವ ಜವಾಬ್ದಾರಿ ಸರ್ಕಾರ ಹಾಗೂ ಇಲಾಖೆಯದ್ದಾಗಿರುತ್ತದೆ. ಆರ್ಥಿಕವಾಗಿ, ಮಾನಸಿಕವಾಗಿ ಹಾಗೂ ದೈಹಿಕವಾಗಿ ನೊಂದಿರುವ ಮಕ್ಕಳಿಗೆ ಒಂದು ಉತ್ತಮ ವಾತಾವರಣ, ಹೊಸ ಚೈತನ್ಯ ಹಾಗೂ ಪ್ರೇರಣೆ ನೀಡುವ ಜವಾಬ್ದಾರಿ ನಮ್ಮದು. ಪ್ರತಿಯೊಂದು ಮಗುವಿನಲ್ಲಿಯೂ ಉತ್ತಮವಾಗಿ ಬೆಳೆಯುವ ಸಾಮರ್ಥ್ಯ ಇರುತ್ತದೆ, ಅದನ್ನು ಹೊರತರುವ ಜವಾಬ್ದಾರಿ ಶಿಕ್ಷಕರದ್ದೂ, ತರಬೇತಿ ನೀಡುವವರದ್ದೂ ಆಗಿರುತ್ತದೆ. ಇದನ್ನು ಗಮನದಲ್ಲಿಟ್ಟುಕೊಂಡು ಸೌಕರ್ಯಗಳನ್ನು ಒದಗಿಸುವ ಸರ್ಕಾರೇತರ ಸಂಘ ಸಂಸ್ಥೆಗಳೊಂದಿಗೆ ಸರ್ಕಾರ ಒಪ್ಪಂದ ಮಾಡಿಕೊಂಡು ಒಂದು ಹೊಸ ಅಧ್ಯಾಯವನ್ನು ಆರಂಭಿಸಿತು.
ಉಚ್ಚ ನ್ಯಾಯಾಲಯದ ಮುಖ್ಯ ನ್ಯಾಯಾಧೀಶರುಗಳ ಸಹಯೋಗದಿಂದ ಇಂತಹ ಮಕ್ಕಳ ಪ್ರಕರಣಗಳನ್ನು ತ್ವರಿತವಾಗಿ ವಿಲೇವಾರಿ ಮಾಡಲು ಪ್ರತ್ಯೇಕ ವ್ಯವಸ್ಥೆ ಹಾಗೂ ಸೂಚನೆ ನೀಡಲಾಯಿತು. ಶಿಕ್ಷಣ ಇಲಾಖೆಯಿಂದ ಒಳ್ಳೆಯ ದೈಹಿಕ ಶಿಕ್ಷಕರನ್ನು ಆಯ್ಕೆ ಮಾಡಿ ಉತ್ತಮ ತರಬೇತಿಯನ್ನು ಕೊಡಲು ಪ್ರಾರಂಭಿಸಲಾಯಿತು. ಹೊಸ ಟಿ.ವಿ, ವಿಡಿಯೋ ತರಿಸಿ, ಎಡ್ಯುಸ್ಯಾಟ್ ಕಾರ್ಯಕ್ರಮವನ್ನು ಪುನಃ ಪ್ರಾರಂಭಿಸಲಾಯಿತು. ಇಲಾಖೆಯಿಂದ ಕೆಲವು ಒಳ್ಳೆಯ ಸಿಬ್ಬಂದಿಗಳನ್ನು ನೇಮಿಸಲಾಯಿತು. ಬೆಳಿಗ್ಗೆ ಆರು ಗಂಟೆಯಿಂದ ರಾತ್ರಿ ಹತ್ತು ಗಂಟೆಯವರೆಗೆ ಮಕ್ಕಳ ಪಾಲ್ಗೊಳ್ಳುವಿಕೆಯ ವಾರದ ಏಳೂ ದಿವಸಗಳ ವೇಳಾಪಟ್ಟಿಯನ್ನು ರಚಿಸಲಾಯಿತು. ಹುಡುಗರಿಗೆ ಇಷ್ಟವಿರುವಂತಹ ಆಹಾರಗಳನ್ನು ತಯಾರಿಸಲು ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು. ಕೆಲವು ದಿವಸಗಳು ಕಳೆದ ಮೇಲೆ ನಾನು ಇನ್ನೊಮ್ಮೆ ಅಲ್ಲಿಗೆ ಭೇಟಿ ನೀಡಿದಾಗ ಮಕ್ಕಳ ಮುಖದಲ್ಲಿ ನಗು ಇತ್ತು. ಅವರು ಆಟವಾಡಿಕೊಳ್ಳುತ್ತಿದ್ದರು. ಹೊರಗಿರುವ ಮೈದಾನವನ್ನು ಅವರೇ ಸ್ವಚ್ಛ ಮಾಡಿ ಒಂದು ಬ್ಯಾಸ್ಕೆಟ್ ಬಾಲ್ ಕೋರ್ಟ್ ಅನ್ನು ತಯಾರಿಸಿದ್ದರು. ಹಳೇ ಪೀಠೋಪಕರಣಗಳ ಬದಲಾಗಿ ಉತ್ತಮ ವ್ಯವಸ್ಥೆ ಆಗಿತ್ತು, ವಾತಾವರಣ ಮುಕ್ತವಾಗಿತ್ತು. ನನ್ನ ಜವಾಬ್ದಾರಿಯನ್ನು ಸರಿಯಾಗಿ ನಿಭಾಯಿಸಿದ ನೆಮ್ಮದಿ ನನಗೆ ಸಿಕ್ಕಿತ್ತು.
- ಶಾಲಿನಿ ರಜನೀಶ್, ಐಎಎಸ್
anisikeprabha@gmail.com