ಭಾರತವನ್ನು ಬೆರಗುಗೊಳಿಸಿದ ಸಚಿನ್ ಎಂಬ ಶಕ್ತಿ
ಕಳೆದ ಕೆಲವು ದಿನಗಳಿಂದ ಎಲ್ಲಾ ಕಡೆ ಸಚಿನ್ ತೆಂಡೂಲ್ಕರ್ ನಿವೃತ್ತಿಯಾಗುತ್ತಾರೆ ಎಂಬ ಸುದ್ದಿ.
ಕಳೆದ ಶತಮಾನದ ಭಾರತದ ಖ್ಯಾತ ಕ್ರಿಕೆಟ್ ಆಟಗಾರ ವಿಜಯ್ ಮರ್ಚೆಂಟ್ ತಮ್ಮ ಆತ್ಮಕಥೆಯಲ್ಲಿ ತಾವು ಕ್ರಿಕೆಟ್ನಿಂದ ಕಲಿತ ಮೂರು ಪಾಠಗಳನ್ನು ಹೀಗೆ ವಿವರಿಸುತ್ತಾರೆ. ಮೊದಲನೆಯದು ತಾಳ್ಮೆ, ತಾನು ಸೂಕ್ತವಾಗಿ ಹೊಡೆಯಬಹುದಾದ, ಸ್ಕೋರ್ ಮಾಡಬಹುದಾದ ಆದರೆ ಯಾವುದೇ ಕಾರಣಕ್ಕೂ ಔಟಾಗದಿರುವ ರೀತಿಯಲ್ಲಿ ಸರಿಯಾದ ಚೆಂಡಿಗಾಗಿ ಕಾಯುವುದು. ಬದಲಿಗೆ ತಾಳ್ಮೆಗೆಟ್ಟು ಬಂದ ಚೆಂಡನ್ನೆಲ್ಲಾ ಹೊಡೆಯಲು ಹೋದರೆ, ಹೋದ ಪುಟ್ಟ ಬಂದ ಪುಟ್ಟ ಎಂಬ ರೀತಿಯಲ್ಲಿ ಮೈದಾನದಿಂದ ಪೆವಿಲಿಯನ್ಗೆ ವಾಪಸ್ಸು ಹೋಗಬೇಕಾಗುತ್ತದೆ. ಇಂಥ ಪ್ರಸಂಗಗಳನ್ನು ಎದುರಿಸುವ ಅನೇಕ ಆಟಗಾರರನ್ನು ನಾವು ನೋಡಿದ್ದೇವೆ.
ಯಾವುದೇ ಕಾರಣಕ್ಕೆ ಸಂಯಮ ಕಳೆದುಕೊಳ್ಳದಿರುವುದು, ಗಾಬರಿಯಾಗದಿರುವುದು, ಪೇಚಾಡಿಕೊಳ್ಳದಿರುವುದು, ಎರಡನೆಯ ಪಾಠವೆಂದು ವಿಜಯ್ ಮರ್ಚೆಂಟ್ ಹೇಳುತ್ತಾರೆ. ಒಂದೊಮ್ಮೆ ಒಂದು ಚೆಂಡಿಗೆ ವಿಕೆಟ್ ಕಳೆದುಕೊಳ್ಳುವ ಅಥವಾ ಔಟ್ ಆಗುವ ಸಾಧ್ಯತೆಯಿಂದ ಬದುಕುಳಿದರೆ ಅದೇ ಚಿಂತೆಯಿಂದ, ಗಾಬರಿಯಿಂದ ಆಟವನ್ನು ಮುಂದುವರೆಸಬಾರದು. ಆತಂಕ, ದುಗುಡ ತಲೆಯಲ್ಲಿ ತುಂಬಿಕೊಂಡು ಆಟ ಮುಂದುವರೆಸಿದರೆ ಮುಂದಿನ ಕೆಲವೇ ಬಾಲ್ಗಳಲ್ಲಿ ವಿಕೆಟ್ಕಳೆದುಕೊಳ್ಳುವುದು ಖಚಿತ. ಆದ್ದರಿಂದ ಅಂಥ ಸನ್ನಿವೇಶದಲ್ಲಿ ಔಟ್ ಆಗುವುದರಿಂದ ತಪ್ಪಿಸಿಕೊಂಡರೆ ಮುಂದಿನ ಬಾಲ್ನಿಂದಲೇ ಏನೂ ಆಗಿಲ್ಲವೇನೋ ಎಂಬಂತೆ, ಆಗ ತಾನೇ ಮೈದಾನಕ್ಕೆ ಬಂದು ಆಟ ಪ್ರಾರಂಭಿಸಿದ ರೀತಿಯಲ್ಲಿ ನಿರಾಳತೆಯಿಂದ ಬ್ಯಾಟಿಂಗ್ ಮಾಡಬೇಕು.
ಮೂರನೆಯದು ದುರ್ಬಲರ ರಕ್ಷಣೆ-ಕ್ರಿಕೆಟ್ ಭಾಷೆಯಲ್ಲಿ ಹೇಳುವುದಾದರೆ ಕೊನೆಯ ಆಟಗಾರರೊಂದಿಗೆ ಅಥವಾ ಖಿಛ್ಝಟ-ಜಟಿಜಜ್ಠಗಳ ಜೊತೆಗೆ ಆಟವನ್ನು ಮುಂದುವರೆಸುವ ಸಂದರ್ಭ ಬಂದಾಗ ಆತ ಚೆಂಡನ್ನು ಹೆಚ್ಚಾಗಿ ಎದುರಿಸುವ ಸನ್ನಿವೇಶವನ್ನು ನಿವಾರಿಸಿ, ತಾನು ಹೆಚ್ಚೆಚ್ಚು ಎದುರಿಸುವ ಅವಕಾಶ ಸೃಷ್ಟಿಸಿಕೊಳ್ಳಬೇಕು. ಒಂದು ರನ್ ಅಥವಾ ಮೂರು ರನ್ ತೆಗೆದುಕೊಳ್ಳುವ ಬದಲು ಎರಡು ರನ್ಗಳನ್ನು, ಓವರ್ನ ಕೊನೆಯ ಚೆಂಡಿನಲ್ಲಿ ಒಂದು ರನ್ಗಳಿಸಿ ಒಟ್ಟಾರೆ ಸಮರ್ಥ ಆಟಗಾರನೇ ಹೆಚ್ಚು ಚೆಂಡುಗಳನ್ನು ಎದುರಿಸುವಂತೆ ಮಾಡಿಕೊಳ್ಳಬೇಕು. ಇವುಗಳು ತಾನು ಕಲಿತ ಅಮೂಲ್ಯ ಪಾಠಗಳೆನ್ನುತ್ತಾರೆ ವಿಜಯ್ ಮರ್ಚೆಂಟ್. ಅತ್ಯಂತ ಸೊಗಸಾದ ಕ್ರಿಕೆಟ್ ನೀತಿ ಇದರಲ್ಲಿ ಅಡಗಿದೆ.
ಕಳೆದ ಕೆಲವು ದಿನಗಳಿಂದ ಎಲ್ಲಾ ಕಡೆ ಸಚಿನ್ ತೆಂಡೂಲ್ಕರ್ ನಿವೃತ್ತಿಯಾಗುತ್ತಾರೆ ಎಂಬ ಸುದ್ದಿ. ಈ ಸುದ್ದಿ ಹೊರಬಂದ ತಕ್ಷಣ ಹೊರಹೊಮ್ಮಿರುವ ಉದ್ಗಾರಗಳು, ಪ್ರತಿಕ್ರಿಯೆಗಳು ಹಾಗೂ ಲೇಖನಗಳು ಸಚಿನ್ ಕ್ರಿಕೆಟ್ ಕ್ಷೇತ್ರದಲ್ಲಿ ಸಂಪಾದಿಸಿರುವ ಔನತ್ಯವನ್ನು ಹಾಗೂ ಅಪಾರ ಗೌರವವನ್ನು ತೋರಿಸುತ್ತದೆ.
ಕ್ರಿಕೆಟ್ ಕ್ಷೇತ್ರದಲ್ಲಿ ತೆಂಡೂಲ್ಕರ್ ಸಾರ್ವಭೌಮನಾಗಿ ಮೆರೆದಿರುವುದು ಎಲ್ಲಾ ಕ್ರೀಡಾ ಅಭಿಮಾನಿಗಳಿಗೆ ಗೊತ್ತಿರುವ ಸಂಗತಿ. ಸಚಿನ್ ದಾಖಲೆಗಳಿಗೆ ಮಿಗಿಲೇ ಇಲ್ಲ. ಆಡಿರುವ ಪಂದ್ಯಗಳ ಸಂಖ್ಯೆ ಇರಬಹುದು, ರನ್ಗಳ ಸಂಖ್ಯೆ ಇರಬಹುದು, ಶತಕಗಳ ಸಂಖ್ಯೆ ಇರಬಹುದು, ಅರ್ಧ ಶತಕಗಳಿರಬಹುದು, ಆಡಿರುವ ಒಟ್ಟು ಕ್ರಿಕೆಟ್ ಅವಧಿ ಇರಬಹುದು, ಎಲ್ಲದರಲ್ಲಿಯೂ ಈ ವಾಮನಮೂರ್ತಿಯದು ವಿಶ್ವರೂಪವೇ. ಕಾಲುಶತಮಾನದ ಹಿಂದೆ ತನ್ನ 16 ನೇ ವಯಸ್ಸಿನಲ್ಲಿ ಕ್ರಿಕೆಟ್ ರಂಗಕ್ಕೆ ಪಾದಾರ್ಪಣೆ ಮಾಡಿದ ಆ ಪುಟ್ಟ ಬಾಲಕ ಹೆದರಿಕೆಯನ್ನರಿಯದೆ ಅನೇಕ ದೈತ್ಯ ಬೌಲರ್ಗಳನ್ನು ಲೀಲಾಜಾಲವಾಗಿ ಎದುರಿಸಿ, ಸದೆಬಡಿದು ಕ್ರಿಕೆಟ್ ಪ್ರಪಂಚದಲ್ಲಿ ಔ್ಝಡಿಡಿಟಜ ಂಛಡಡಿಜ್ಠ ಆಗಿ ತಮ್ಮ ಪ್ರಾಬಲ್ಯ ಮೆರೆದಿದ್ದಾರೆ.
ಆಸ್ಟೇಲಿಯಾದ ಕ್ರಿಕೆಟ್ ಆಟಗಾರ ಮ್ಯಾಥ್ಯೂ ಹೇಡನ್ ಹೇಳಿದ್ದ- "ನಾನು ದೇವರನ್ನು ಕಂಡಿದ್ದೇನೆ ಮತ್ತು ಆತ ಭಾರತದ ಕ್ರಿಕೆಟ್ ತಂಡದಲ್ಲಿ 4ನೇ ಸ್ಥಾನದಲ್ಲಿ ಆಡುತ್ತಾನೆ". ಹೀಗೆ ಕ್ರಿಕೆಟ್ ಕ್ಷೇತ್ರದ ಅಗ್ರಗಣ್ಯ ಆಟಗಾರನಾದ ಸಚಿನ್, ಕ್ರಿಕೆಟೇತರ ಕ್ಷೇತ್ರದಲ್ಲಿರುವವರಿಗೂ ಪ್ರೇರಣೆ ಕೊಟ್ಟಿರುವುದು ಸತ್ಯ. ಸಚಿನ್ ತೆಂಡೂಲ್ಕರ್ ಆಟದ ವೈಖರಿಯಿಂದ, ಆತನ ಒಟ್ಟು ವ್ಯಕ್ತಿತ್ವದಿಂದ ನಾವೇನು ಕಲಿಯಬಹುದು?
ಮೊಟ್ಟ ಮೊದಲನೆಯದು ಆತನ ಅದಮ್ಯ ಉತ್ಸಾಹ. 24 ವರ್ಷಗಳ ಕಾಲ ನಿರಂತರವಾಗಿ ಬ್ಯಾಟನ್ನು ಹಿಡಿದು ವಿವಿಧ ಪಿಚ್ಗಳಲ್ಲಿ ನಾನಾ ವೈಖರಿಯ ಬೌಲರ್ಗಳನ್ನು ಎದುರಿಸಿ ಅಗಣಿತ ರನ್ಗಳನ್ನು ಗಳಿಸಿ, ಈಗಲೂ ಸಹ ತನ್ನ ಚೊಚ್ಚಲ ಪಂದ್ಯದಲ್ಲಿ ತೋರಿದ ಅದೇ ಉತ್ಸಾಹ, ಲವಲವಿಕೆಯನ್ನು ತೋರಲಿದ್ದಾನೆ ಸಚಿನ್. ಸಚಿನ್ ರೀತಿಯ ಆಟಗಾರರು ಅಪರೂಪ. ರನ್ಗಳಿಸಬೇಕೆಂಬ ಇಂಗದ-ದಾಹ, ಈಗ ತಾನೇ ತಂಡಕ್ಕೆ ಪ್ರವೇಶ ಪಡೆದಿರುವ ಆಟಗಾರರು ನಾಚಿಕೊಳ್ಳುವಂತೆ ಅಥವಾ ಅವರಿಗೆ ಮಾದರಿಯಾಗುವಂತೆ, ಅದೇ ಲವಲವಿಕೆಯಿಂದ ಕೂಡಿದ ನೆಟ್ ಪ್ರಾಕ್ಟೀಸ್, ಕಾಲು ಶತಮಾನದ ಅನುಭವಿ ಆಟಗಾರನಾದ ತನಗೆ ಈ ಅಭ್ಯಾಸ ಪಂದ್ಯಗಳು, ಈ ತಯಾರಿ ಏಕೆ ಎಂದು ಒಂದಿಷ್ಟೂ ಉದಾಸೀನ ತೋರದ ವೃತ್ತಿಪರತೆ ಈಗಿನ ಬಹಳಷ್ಟು ಆಟಗಾರರೂ ಸೇರಿದಂತೆ ವ್ಯಕ್ತಿಗಳಲ್ಲಿ ಕಾಣಸಿಗುವುದಿಲ್ಲ. ಒಂದಿಷ್ಟು ಅನುಭವ ಬಂದರೆ ಸಾಕು ಅಭ್ಯಾಸಕ್ಕೆ ತಿಲಾಂಜಲಿ ಇಟ್ಟು ತನಗೆಲ್ಲ ಗೊತ್ತು ತಾನ್ಯಾರಿಗೂ ಕಡಿಮೆ ಇಲ್ಲ ಎನ್ನುವ ಪ್ರವೃತ್ತಿಯೇ ಎಲ್ಲೆಡೆ ಕಾಣಸಿಗುತ್ತದೆ.
ಆತನ ಎರಡನೇ ಅನುಕರಣೀಯ ಗುಣ ಎಂದರೆ ಅಷ್ಟೆಲ್ಲಾ ಸ್ಥಾನಮಾನ ದೊರೆತರೂ, ಇಡೀ ಪ್ರಪಂಚಕ್ಕೆ ಹೆಸರುವಾಸಿಯಾದ ಆಟಗಾರನಾದರೂ ಅಹಂಕಾರ ಸಚಿನ್ನ ಸನಿಹ ಬರಲೇ ಇಲ್ಲ. ತನ್ನ ವಿರುದ್ಧ ಬಂದ ಎಂತಹ ಟೀಕೆಗೂ ಮಾತಿನಿಂದ ಉತ್ತರ ಕೊಡದೇ ಬ್ಯಾಟಿನಿಂದ ಸೂಕ್ತವಾಗಿ ಪ್ರತಿಕ್ರಿಯಿಸಿದ್ದಾನೆ ಸಚಿನ್.
ಮೂರನೆಯದು ಯಾವುದೇ ರೀತಿಯಲ್ಲಿ ಹೆಸರು ಕೆಡಿಸಿಕೊಳ್ಳದ ವ್ಯಕ್ತಿತ್ವ. ನಿನ್ನೆ-ಮೊನ್ನೆ ಬಂದು ಅಲ್ಪ ಸ್ವಲ್ಪ ಕೀರ್ತಿಗಳಿಸಿದವರು ಮ್ಯಾಚ್ ಫಿಕ್ಸಿಂಗ್ನಲ್ಲಿ ಹೆಸರು ಕೆಡಿಸಿಕೊಂಡು ಹಾಳಾಗುತ್ತಿರುವಾಗ ಯಾವುದೇ ಕಳಂಕವನ್ನು ಅಂಟಿಸಿಕೊಳ್ಳದೇ ತನ್ನಿಂದ ಕ್ರಿಕೆಟ್ ಆಟಕ್ಕೆ ಮತ್ತು ದೇಶಕ್ಕೆ ಕೆಟ್ಟ ಹೆಸರು ಬರದಂತೆ ನಡೆದುಕೊಂಡ ಮಹಾನುಭಾವ. ಸಚಿನ್ ರೀತಿಯ ವ್ಯಕ್ತಿತ್ವ ಮಾತ್ರ ಈ ದಿನಗಳಲ್ಲಿ ಕ್ರಿಕೆಟ್ನ ಹೆಸರನ್ನು ಉಳಿಸಬಲ್ಲದು.
ಅಪಾರ ಹಣ, ಅಂತಸ್ತು, ಹೆಸರು ತಮ್ಮದಾದರೂ ಅದೇ ಮಧ್ಯಮ ವರ್ಗದ ಮೌಲ್ಯಗಳನ್ನು ಜೀವನದಲ್ಲಿ ಅಳವಡಿಸಿಕೊಂಡಾತ. ಇತ್ತೀಚೆಗೆ ಸಚಿನ್ನನ್ನುಭೇಟಿ ಮಾಡುವ ಅವಕಾಶ ಸಿಕ್ಕಿತ್ತು. ಮುಂಬೈನಲ್ಲಿ ಕುಡಿಯುವ ನೀರಿನ ಅಭಾವವಿದ್ದಾಗ ನೀರನ್ನು ಅತ್ಯಲ್ಪ ಪ್ರಮಾಣದಲ್ಲಿ ಉಪಯೋಗಿಸಿರುವ ತೆಂಡೂಲ್ಕರ್ ನಿತ್ಯಜೀವನದ ಬಗ್ಗೆ ಸಾಕಷ್ಟು ಸಂಗತಿಗಳನ್ನು ಕೇಳಿದ್ದೆ. ಈ ಕುರಿತು ಮಾತಿಗೆ ಎಳೆದಾಗ ಅದೇ ನಿರ್ವಿಕಾರ ಮುಖದಿಂದ ಆತ ತಿಳಿಸಿದ್ದು "ಹೌದು ನಮ್ಮ ಮನೆಯಲ್ಲಿ ನಾವ್ಯಾರೂ ಶವರ್ ಉಪಯೋಗಿಸುವುದಿಲ್ಲ. ಕುಟುಂಬದ ಪ್ರತಿಯೊಬ್ಬರೂ ಒಂದೊಂದು ಬಕೆಟ್ ನೀರಿನಲ್ಲಿ ಸ್ನಾನ ಮುಗಿಸುತ್ತೇವೆ. ನಮಗೆ ನೀರಿನ ನಿಜವಾದ ಮೌಲ್ಯ ಗೊತ್ತಿದೆ" ಎಂದು. ಶ್ರೀಮಂತಿಕೆಯನ್ನು ಅಸಹ್ಯ ರೀತಿಯಲ್ಲಿ ಪ್ರದರ್ಶಿಸುವುದನ್ನೇ ಅನೇಕರು ಜೀವನ ವೈಖರಿ ಮಾಡಿಕೊಂಡಿದ್ದಾರೆ. ಇನ್ನು ಯಾರಾದರೂ ತಮ್ಮ ಕಾರುಗಳನ್ನು, ಮನೆ ಕಾಂಪೌಂಡನ್ನು ಸ್ವಚ್ಛಗೊಳಿಸಲು ದೊಡ್ಡ ಪೈಪುಗಳಿಂದ ಅಮೂಲ್ಯ ನೀರನ್ನು ವ್ಯರ್ಥಗೊಳಿಸುವುದನ್ನು ಕಂಡಾಗ, ಇವರುಗಳ ತದ್ವಿರುದ್ಧ ಸ್ವಭಾವದ ಸಚಿನ್ ಮನಸ್ಸನ್ನು ಆವರಿಸುತ್ತಾನೆ. ತನ್ನ ಹತ್ತಿರ ಹಣವಿದೆ, ಏನನ್ನಾದರೂ ಎಷ್ಟನ್ನಾದರೂ ಖರ್ಚು ಮಾಡಲು ಹಕ್ಕಿದೆ ಎಂಬ ಅಹಂಕಾರಿಗಳ ನಡುವೆಯೇ ಸಚಿನ್ ತೆಂಡೂಲ್ಕರ್, ರಾಹುಲ್ ದ್ರಾವಿಡ್, ಅನಿಲ್ ಕುಂಬ್ಳೆ, ಜಾವಗಲ್ ಶ್ರೀನಾಥ್ ಮುಂತಾದವರು ಅಪರೂಪದ ವ್ಯಕ್ತಿಗಳಾಗಿ, ಮಹಾನುಭಾವರಾಗಿ ಕಾಣುತ್ತಾರೆ.
ಓರ್ವ ಕ್ರಿಕೆಟ್ ಅಂಕಣಕಾರ ಸೊಗಸಾಗಿ ಬರೆದಂತೆ ' ಐಫಿಲ್ ಟವರ್ ಇಲ್ಲದ ಪ್ಯಾರಿಸ್, ಬೃಹತ್ ಗೋಡೆ ಇಲ್ಲದ ಚೀನಾ, ಖಡಿಛಡ್ಡಿಜ ಕಜಿ ಔ್ಝಛಿಜ್ಠಡಿಣಇಲ್ಲದ ನ್ಯೂಯಾರ್ಕ್, ತಾಜ್ಮಹಲ್ ಇಲ್ಲದ ಆಗ್ರಾ...ಇವುಗಳನ್ನು ಊಹಿಸಿಕೊಳ್ಳಲು ಹೇಗೆ ಅಸಾಧ್ಯವೋ ಅದೇ ರೀತಿ ಸಚಿನ್ ತೆಂಡೂಲ್ಕರ್ ಇಲ್ಲದ ಕ್ರಿಕೆಟನ್ನು ಸಹ ಊಹಿಸಲಿಕ್ಕೂ ಸಾಧ್ಯವಿಲ್ಲ. ದೇಶದಲ್ಲಿ ಅನೇಕ ಕಾರಣಗಳಿಂದಾಗಿ ನಿರಾಶಾದಾಯಕ ವಾತಾವರಣ ತುಂಬಿರುವಾಗ, ತನ್ನ ಆಟದ ಮೂಲಕ ಆ ವಾತಾವರಣವನ್ನು ದೂರ ಮಾಡಿ ಭರವಸೆ ಉಂಟು ಮಾಡಬಲ್ಲ ಶಕ್ತಿ ಆ ಗಾರುಡಿಗನಲ್ಲಿತ್ತು. ಕೂಗಾಡಿದ, ಆತನ ಬಾಯಿಂದ ಕೆಟ್ಟ ಬೈಗುಳ ಬಂದ, ಕೆಟ್ಟ ವರ್ತನೆ ತೋರಿದ, ಅಂಪೈರ್ ವಿರುದ್ಧ ಕ್ರೋಧ ವ್ಯಕ್ತಪಡಿಸಿದ ಘಟನೆ ಒಮ್ಮೆಯೂ ಸಚಿನ್ನಿಂದ ಜರುಗಿರುವುದು ನಾವ್ಯಾರೂ ನೋಡೇ ಇಲ್ಲ. ಆದರೆ ಪ್ರತಿಯೊಬ್ಬ ವ್ಯಕ್ತಿಯಲ್ಲಿನ ಒಳ್ಳೆಯ ಸಂಗತಿಗಳನ್ನು ಗುರುತಿಸುವ ಪರಿಪಾಠ ನಮ್ಮಲ್ಲಿ ಕಡಿಮೆ ಆಗಿ, ತಪ್ಪು ಕಂಡು ಹಿಡಿಯುವುದೇ ಅಭ್ಯಾಸವಾಗಿರುವಾಗ ತೆಂಡೂಲ್ಕರ್ನ ಈ ಅಮೂಲ್ಯ ಗುಣಗಳು ಮಸುಕಾಗಿ ಬಿಡುತ್ತದೆ.
ಸಚಿನ್ ದೇಶಕ್ಕಾಗಿ ಆಡುವುದಿಲ್ಲ, ತನ್ನ ವೈಯಕ್ತಿಕ ದಾಖಲೆಗಳಿಗಾಗಿ ರನ್ ಗಳಿಸುತ್ತಾನೆ ಎಂಬುದು ಅಲ್ಪಜ್ಞಾನಿಗಳ ದೂರು. ಸಚಿನ್ ತೆಂಡೂಲ್ಕರ್ ಹೆಚ್ಚು ರನ್ ಗಳಿಸಿದಾಗಲ್ಲೆಲ್ಲಾ ಭಾರತ ಸೋತಿದೆ ಎಂಬುದು ಕ್ರಿಕೆಟ್ ಅಜ್ಞಾನಿಗಳ ಮತ್ತೊಂದು ದೂರು. ಆದರೆ ಇವ್ಯಾವುದೂ ಸತ್ಯವಲ್ಲ ಎಂಬುದು ಕಳೆದ 24 ವರ್ಷಗಳಿಂದ ಸಚಿನ್ ಜೊತೆಯಲ್ಲಿಯೇ ಬೆಳೆದು ಬಂದಿರುವ ಭಾರತದ ಕ್ರಿಕೆಟ್ ಇತಿಹಾಸ ಹೇಳುತ್ತದೆ. ಸಚಿನ್ ತೆಂಡೂಲ್ಕರ್ ಬ್ಯಾಟ್ಮಾಡಲು ಬಂದಾಗ ಇಡೀ ದೇಶ ಉಸಿರು ಹಿಡಿದು ಎದುರು ನೋಡುತ್ತಿದ್ದ ದಿನಗಳನ್ನು ಎಂದಿಗೂ ಮರೆಯಲಾರೆವು. ಆ ವಾಮನಮೂರ್ತಿಯ ಭುಜದ ಮೇಲೆ 120 ಕೋಟಿ ಜನಸಂಖ್ಯೆಯ ಈ ದೇಶ ತನ್ನೆಲ್ಲಾ ಭಾರವನ್ನೂ ಹಾಕಿ ಅಪಾರ ನಿರೀಕ್ಷೆಯನ್ನು ಇಟ್ಟುಕೊಂಡ ಸಂದರ್ಭಗಳಲ್ಲಿ ಸಚಿನ್ ಆ ಭರವಸೆಯನ್ನು ಹುಸಿಗೊಳಿಸಿಲ್ಲ. ಅದಕ್ಕೆ ನಮ್ಮ ಪ್ರತಿಸ್ಪರ್ಧಿಗಳು ಒಂದು ಕಾಲದಲ್ಲಿ ಸಚಿನ್ ವಿಕೆಟ್ ಕಬಳಿಸಿದರೆ ಸಾಕು ಭಾರತವನ್ನು ಆ ಪಂದ್ಯದಲ್ಲಿ ಮಣಿಸಿದಂತೆ ಎಂಬ ಲೆಕ್ಕಾಚಾರದಲ್ಲಿ ತೊಡಗುತ್ತಿದ್ದದ್ದು. ಭಾರತದ ಅಸಂಖ್ಯಾತ ಆಟಗಾರರಿಗೆ ಮತ್ತು ಜೀವನದಲ್ಲಿ ಯಶಸ್ವಿಯಾಗ ಬಯಸುವವರಿಗೆ ಸಚಿನ್ ತೆಂಡೂಲ್ಕರ್ ನಿಜವಾದ ರೋಲ್ಮಾಡೆಲ್.
- ಎಸ್.ಸುರೇಶ್ ಕುಮಾರ್
nimmasuresh.2009@gmail.com