ರಾಜ್ಯೋತ್ಸವ ಪ್ರಶಸ್ತಿಗೆ ರಾಜಕೀಯ ಶಿಫಾರಸು ಬೇಕೇ?
ರಾಜ್ಯೋತ್ಸವ ಪ್ರಶಸ್ತಿ ಎಂದರೆ ನಾಡಿನ ಸಾಹಿತ್ಯ, ಸಾಂಸ್ಕೃತಿಕ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದವರಿಗೆ ನೀಡುವ ಅಮೂಲ್ಯ ಗೌರವ. ಆದರೆ, ಇಂತಹ ಗೌರವ ಪಡೆಯಲು ರಾಜಕೀಯ ಶಿಫಾರಸು ಬೇಕೇ ಎನ್ನುವುದು ಪ್ರಮುಖ ವಿಷಯವಾಗಿದೆ.
ಪ್ರಸಕ್ತ ಸಾಲಿನಲ್ಲಿ ರಾಜ್ಯೋತ್ಸವ ಪ್ರಶಸ್ತಿಗೆ 3 ಸಾವಿರಕ್ಕೂ ಹೆಚ್ಚಿನ ಅರ್ಜಿ ಬಂದಿದ್ದು, ಪ್ರತಿಯೊಂದು ಅರ್ಜಿಗೂ ಆಯಾ ಜಿಲ್ಲೆಗಳ ಜಿಲ್ಲಾ ಉಸ್ತುವಾರಿ ಸಚಿವರು, ತಮ್ಮ ಕ್ಷೇತ್ರದ ಶಾಸಕರ ಶಿಫಾರಸು ಪತ್ರಗಳೊಂದಿಗೆ ಸಲ್ಲಿಕೆಯಾಗಿವೆ ಎನ್ನುವುದು ಗಮನಿಸಬೇಕಾದ ಅಂಶ.
ನಾಡಿಗೆ ಸೇವೆ ಸಲ್ಲಿಸಿದರಿಗೆ ನೀಡುವ ಗೌರವವನ್ನು ರಾಜಕೀಯ ನಾಯಕರು ಶಿಫಾರಸು ಮಾಡುವುದು ಎಷ್ಟು ಸರಿ? ಸಾಧನೆ ಮಾಡಿದವರು ಸತತ 20 ವರ್ಷಗಳ ಕಾಲ ಸೇವೆ ಸಲ್ಲಿಸಿರುತ್ತಾರೆ. ಅದನ್ನು ಒಬ್ಬ ರಾಜಕೀಯ ನಾಯಕ ಒಂದೇ ಒಂದು ಪತ್ರದಲ್ಲಿ ಹೇಗೆ ಸಾಬೀತು ಮಾಡುತ್ತಾನೆ? ಹಾಗಾಗಿ ಇದೊಂದು ಅತ್ಯಂತ ಅಪಾಯಕಾರಿ ಬೆಳವಣಿಗೆ ಎಂದರೆ ತಪ್ಪಾಗಲಾರದು.
ಪ್ರಶಸ್ತಿ ಪಡೆಯುವ ವ್ಯಕ್ತಿ ಇದಕ್ಕಾಗಿಯೇ ರಾಜಕೀಯ ನಾಯಕರ ಮನೆ ಬಾಗಿಲು ಕಾಯಬೇಕಾಗುತ್ತದೆ. ಅವರ ಹಿಂಬಾಲಕರನ್ನು ಹಿಡಿದು, ಪತ್ರ ಪಡೆಯುವಂತಹ ಸ್ಥಿತಿ. ಇದರಿಂದ ಪ್ರಶಸ್ತಿಗೆ ಅರ್ಹತೆ ಇರುವ ವ್ಯಕ್ತಿ, ಮರಿ ರಾಜಕಾರಣಿಗಳ ಮುಂದೆ ಕೈಕಟ್ಟಿ ನಿಲ್ಲುವಂತಹ ವಾತಾವರಣ ರೂಪಿತವಾಗುತ್ತಿದೆ. ಇನ್ನೊಂದು ಅಪಾಯಕಾರಿ ಬೆಳವಣಿಗೆ ಎಂದರೆ ಸಾಧಕ ಇಂತಹ ಪ್ರಶಸ್ತಿ ಪಡೆಯಬೇಕಾದಲ್ಲಿ ಒಂದು ಪಕ್ಷದಲ್ಲಿ ಒಳ್ಳೆಯ ಸಂಬಂಧ ಹೊಂದಿರಬೇಕು (ಪರೋಕ್ಷವಾಗಿ ಗುರುತಿಸಿಕೊಂಡಿರಬೇಕು). ಅಂತಹವರಿಗೆ ಆದ್ಯತೆ ಎಂಬುದು ಎಲ್ಲರಿಗೂ ತಿಳಿದಿರುವ ಸತ್ಯ.
ಸಾಧನೆ ಮಾಡಿದ ಹಲವಾರು ಜನರು ನಮಗೆ ಸಾಧನೆಯೇ ಮುಖ್ಯ. ನಾವ್ಯಾರನ್ನೂ ಭೇಟಿ ಮಾಡುವುದಿಲ್ಲ ಎನ್ನುವುದಾದರೆ ಎಂತಹ ದೊಡ್ಡ ಸಾಧನೆ ಮಾಡಿದರೂ ಅವರಿಗೆ ರಾಜ್ಯೋತ್ಸವ ಪ್ರಶಸ್ತಿ ಎನ್ನುವುದು ಕನಸಿನ ಮಾತಾಗುತ್ತದೆ ಎಂಬುದು ಇತ್ತೀಚಿನ ಬೆಳವಣಿಗೆಗಳನ್ನು ಗಮನಿಸಿದಲ್ಲಿ ಗೋಚರಿಸುತ್ತಿದೆ. ಅದಕ್ಕಾಗಿಯೇ ಉತ್ತಮ ಸಾಧನೆ ಮೂಲಕ ನಾಡಿಗೆ ಅಪೂರ್ವ ಸೇವೆ ಸಲ್ಲಿಸಿದವರಿಗಿಂತಲೂ ಇಂದು ಪ್ರಶಸ್ತಿಗಳು ಯಾರ್ಯಾರದ್ದೋ ಪಾಲಾಗುತ್ತಿವೆ. ಆದರೆ, ಯಾರೂ ಬಹಿರಂಗವಾಗಿ ಧ್ವನಿ ಎತ್ತುತ್ತಿಲ್ಲ. ಇದಕ್ಕೆ ಕಾರಣ ಈ ಬಾರಿ ಸಿಗಲಿಲ್ಲ. ಮುಂದಿನ ಬಾರಿಯಾದರೂ ಸಿಕ್ಕೀತು ಎನ್ನುವ ಆಸೆ. ಹೀಗೆ ಯಾವ ರಾಜಕಾರಣಿಯ ಶಿಫಾರಸಿನ ಮೂಲಕ ಪ್ರಶಸ್ತಿ ಪಡೆದ ವ್ಯಕ್ತಿ, ಸಹಜವಾಗಿ ಅವನ ಜೀವನ ಪರ್ಯಂತ ಆ ರಾಜಕೀಯ ನಾಯಕನಿಗೆ ನಿಷ್ಠನಾಗಿರಬೇಕು. ಅವನ ಮುಂದೆ ತಲೆತಗ್ಗಿಸಿ ನಿಲ್ಲಲೇಬೇಕು. ಇನ್ನು ಕೆಲವು ಬಾರಿ ನಾನೇ ಇವರಿಗೆ ರಾಜ್ಯೋತ್ಸವ ಪ್ರಶಸ್ತಿ ಕೊಡಿಸಿದ್ದೇನೆ ಎಂದು ಹೇಳಿಕೊಂಡು ತಿರುಗುವ ನಾಯಕರೂ ನಮ್ಮ ಮಧ್ಯೆ ಇದ್ದಾರೆ.
ಪ್ರಶಸ್ತಿಗಾಗಿ ರಾಜಕೀಯ ನಾಯಕರ ಶಿಫಾರಸೇ ಮುಖ್ಯವಾಗುವುದಾದರೆ, ರಾಜ್ಯದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಕೆಲಸವಾದರೂ ಏನು? ಪ್ರತಿ ಜಿಲ್ಲೆಯಲ್ಲಿ ಕನ್ನಡ ನಾಡು, ನುಡಿ, ಕಲೆ, ಸಾಹಿತ್ಯ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದವರ ಮಾಹಿತಿ ಇಲಾಖೆ ಕಾಲಕಾಲಕ್ಕೆ ಸಂಗ್ರಹಿಸಬೇಕು. ಆದರೆ, ಇಲಾಖೆಯಲ್ಲಿ ಅಧಿಕಾರಿಗಳ ನಿಷ್ಕ್ರೀಯತೆಯೋ ಅಥವಾ ರಾಜಕೀಯ ನಾಯಕರ ಹಸ್ತಕ್ಷೇಪವೋ ಗೊತ್ತಿಲ್ಲ. ಕೊನೆಗೆ ಆಯಾ ಜಿಲ್ಲೆಯಿಂದ ಪ್ರಶಸ್ತಿಗೆ ಅರ್ಜಿ ಸಲ್ಲಿಸುವವರು ರಾಜಕೀಯ ನಾಯಕರ ಶಿಫಾರಸು ಪತ್ರದೊಂದಿಗೆ ಎನ್ನುವುದು ಮಾತ್ರ ಅತ್ಯಂತ ನೋವಿನ ಸಂಗತಿ.
ಇನ್ನು ಪ್ರಶಸ್ತಿ ಪಡೆಯುವ ಆಸೆ ಇರುವ ಸಾಧಕರು ಈ ನಿಟ್ಟಿನಲ್ಲಿ ಗಟ್ಟಿಯಾದ ನಿರ್ಧಾರ ತೆಗೆದುಕೊಂಡು, ನಮಗೆ ಪ್ರಶಸ್ತಿಯಷ್ಟೇ ನಮ್ಮ ಸಾಧನೆಯೂ ಮುಖ್ಯ. ಅದನ್ನು ಪರಿಗಣಿಸಿ ಪ್ರಶಸ್ತಿ ನೀಡಲಿ, ಇಲ್ಲವಾದಲ್ಲಿ ರಾಜ್ಯದಲ್ಲಿಯೇ ರಾಜ್ಯೋತ್ಸವ ಪ್ರಶಸ್ತಿಗೆ ಆಯ್ಕೆ ಕುರಿತು ಒಂದು ಸಮಿತಿ ಮಾಡಲಿ ಎನ್ನುವ ಮನೋಭಾವನೆ ತಳೆಯಬೇಕಿದೆ. ಸಾಧನೆಗಾಗಿ ನೀಡುವ ಪ್ರಶಸ್ತಿಗಳು ಅವರ ಸಾಧನೆ ಗುರುತಿಸಿ ನೀಡಬೇಕೇ ಹೊರತು, ಯಾರದೋ ಶಿಫಾರಸು ಪತ್ರದಿಂದ ಅಲ್ಲ ಎನ್ನುವುದನ್ನು ಗಂಭೀರವಾಗಿ ಪರಿಗಣಿಸಬೇಕಿದೆ.
- ಶಿವಕುಮಾರ ಕುಷ್ಟಗಿ, ಕನ್ನಡಪ್ರಭ