ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಅಂಕಣಗಳು

ನಮ್ಮಿಂದಲೇ ಆಗುತ್ತಿದೆ ದೈವನಿಂದನೆ!

Srinivasa Murthy VN
Updated On : 23 Oct 2013, 11:54 am

ಮನೆಗೆ ಬಾಗಿಲಿಗೆ ಬಂದ ಸಂಬಂಧಿಕರೊಬ್ಬರು ಆತ್ಮೀಯವಾಗಿ ಮದುವೆಗೆ ಆಹ್ವಾನಿಸಿ ಹೋದರು. ಅವರು ಹೋದ ಮೇಲೆ ಆಹ್ವಾನ ಪತ್ರಿಕೆ ನೋಡ್ತಾ ಇದ್ದೆ. ತುಂಬಾ ಅದ್ಭುತವಾಗಿತ್ತು. ಒಬ್ಬನೇ ಮಗ ಅಂತ ತುಂಬಾನೇ ಖರ್ಚು ಮಾಡಿ ಮದುವೆ ಮಾಡ್ತಾ ಇದ್ದಾರೆ ಅಂದುಕೊಂಡೆ. Invitation card ಒಳಗಡೆ  golden color ನಲ್ಲಿ ಗಣೇಶನ ಚಿತ್ರ. ಅದಕ್ಕೆ ಕುಂದನ್ ಇಂದ ಅಲಂಕಾರ ಮಾಡಿದ್ರು. ನೋಡಕ್ಕೆ ತುಂಬಾ ಚೆನ್ನಾಗಿ ಇತ್ತು.
ಅಮ್ಮ ಬಂದೊಡನೆ ಸಂಭ್ರಮದಿಂದ ವಿಷಯ ತಿಳಿಸುತ್ತ ಆಹ್ವಾನ ಪತ್ರಿಕೆ ಅವರಿಗೆ ಕೊಟ್ಟೆ. ಅವರು ಅದನ್ನು ಓದುತ್ತಿರುವಾಗ, 'ಅಮ್ಮ  card ಚೆನ್ನಾಗಿ ಇದೆ ಅಲ್ವಾ' ಅಂತ ಕೇಳಿದೆ. ಅದಕ್ಕೆ ಅಮ್ಮನ ಉತ್ತರ, 'ಕಾರ್ಡ್‌ಹೇಗಿದ್ರೆ ಏನಮ್ಮಾ, ಆಮೇಲೆ ಅದುನ್ನ ಬಿಸಾಡ್ತೀವಿ. ಕಾರ್ಡ್‌ಗೆ ಇಷ್ಟೆಲ್ಲಾ ಖರ್ಚು ಮಾಡೋದ್ರಲ್ಲಿ ಅರ್ಥ ಇಲ್ಲ.'
ಆಮೇಲೆ ನಾನು ಯೋಚನೆ ಮಾಡ್ತಾ ಇದ್ದೆ. ಮದುವೆ  invitation card ಚೆನ್ನಾಗಿ ಇರಬೇಕು ಅಂತ ಎಷ್ಟೆಲ್ಲಾ ಮಾಡಿದ್ರು, ಮದುವೆ ಆದ್ಮೇಲೆ ಬೇರೆಯವರು ಅದನ್ನ ಎಷ್ಟು ದಿನಾ ಅಂತ ಮನೇಲಿ ಇಟ್ಕೋತಾರೆ ಹೇಳಿ? ಒಂದು ದಿನಾ ಅದನ್ನು ಕಸದಬುಟ್ಟಿಗೋ, ರದ್ದಿಗೋ ಅಥವಾ ಒಲೆಗೊ ಹಾಕಿ ಬಿಡ್ತಾರೆ.
ಆದ್ರೆ, ಒಮ್ಮೆ ಯೋಚನೆ ಮಾಡಿ. ನಾವು ಕ.ಬು.ಗೆ ಅಥವಾ ರದ್ದಿಗೆ ಅಂತ ಬಿಸಾಡೋ ಆಹ್ವಾನ ಪತ್ರಿಕೆಯಲ್ಲಿ ನಾವು ದಿನನಿತ್ಯ ಪೂಜಿಸುವ ಗಣೇಶ, ಪಾರ್ವತಿ, ಪರಮೇಶ್ವರ, ಲಕ್ಷ್ಮೀ ಹೀಗೆ ಮುಂತಾದ ದೇವರುಗಳ ಚಿತ್ರ ಇರುತ್ತೆ.
ನಾವು ಸಣ್ಣವರಿದ್ದಾಗ ಪೇಪರ್ ತುಳಿದರೆ, ಅಮ್ಮ ಬಂದು ಮಗು ಅದು ಸರಸ್ವತಿ ಇದ್ದ ಹಾಗೇ, ಅದುನ್ನ ಹಾಗೆಲ್ಲಾ ತುಳಿಯ ಬಾರದು, ನಮಸ್ಕಾರ ಮಾಡು ಅಂತ ಹೇಳಿ ಕೊಡ್ತಾರೆ. ಇವತ್ತಿಗೂ ಕೂಡ ಕಾಲಿನ ಹತ್ರ ಪೇಪರ್ ಬಿದ್ರೆ, ನಮಸ್ಕಾರ ಮಾಡಿ ಎತ್ತಿಡುತ್ತೀವಿ. ಆದ್ರೆ,  invitation cardನ ಕಸಕ್ಕೆ ಹಾಕಬೇಕಾದ್ರೆ ಅದರಲ್ಲಿ ಇರೂ ದೇವರ ಚಿತ್ರದ ಬಗ್ಗೆ ಒಂದು ನಿಮಿಷವೂ ಯೋಚನೆ ಮಾಡೋದಿಲ್ಲ.
ಎಲ್ಲೋ ಇರುವಂತಹ ಪಾಶ್ಚಿಮಾತ್ಯರು ನಮ್ಮ ದೇವರ ಚಿತ್ರವನ್ನು ಅವರ ಒಳ ವಸ್ತ್ರದ ಮೇಲೆ ಹಾಕಿಕೊಂಡ್ರು ಅಂತ ಪ್ರತಿಭಟನೆ ಮಾಡೋ ನಾವು, ನಮ್ಮ ಕಣ್ಣ ಮುಂದೇನೆ ದಿನನಿತ್ಯ ರದ್ದಿಗೆ ಹಾಕುತ್ತಿರುವ ದೇವರ ಚಿತ್ರದ ಬಗ್ಗೆ ಒಂದೇ ಒಂದು ಮಾತನ್ನು ಕೂಡ ಆಡೋಲ್ಲ ಯಾಕೆ? ನಮ್ಮ ದೇವರಿಗೆ ನಾವು ಮಾಡುವ ಅವಮಾನ ಯಾಕೆ ನಮ್ಮ ಅಂತಃಕರಣಕ್ಕೆ ತಪ್ಪು ಅಂತ ಅನಿಸಲ್ಲ?
ಇಷ್ಟೇ ಅಲ್ಲ, ಕೆಲವು ವ್ಯಾಪಾರಸ್ತರು ಹೊಸ ವರುಷದ ಶುಭಾಶಯ ಅಂತ ಹೇಳಿ ಕೊಡುವ ಕ್ಯಾಲೆಂಡರ್‌ನಲ್ಲ್ಠಿ ಕೂಡ ದೊಡ್ಡದಾಗಿ ದೇವರ ಚಿತ್ರ ಇರುತ್ತೆ. ಕೊನೆಗೆ ಅದೂ ಸೇರೋದು ಕಸದ ಬುಟ್ಟಿಗೇ. ನಾವೆಲ್ಲಾ ಯಾಕೆ ಇಷ್ಟು ಪ್ರಜ್ಞಾಹೀನರಾಗ್ತೀವಿ?
ದಯವಿಟ್ಟು ನಾವು ಪೂಜಿಸುವ ದೇವರ ಚಿತ್ರಗಳನ್ನು ಅನಾವಶ್ಯಕವಾಗಿ ಎಲ್ಲಿ ಬೇಕೂ ಅಲ್ಲೆಲ್ಲಾ ಬಳಸಬೇಡಿ.   invitation card, calendar, ರಸ್ತೆ ಬದಿಯಲ್ಲಿ ದೇವರ ಉತ್ಸವ ದಿನ ಹಾಕೋ ಪೋಸ್ಟರ್‌ಗಳಲ್ಲಿ ದೇವರ ಚಿತ್ರಗಳ್ಳನ್ನು ಬಳಸಬೇಡಿ. ಆಹ್ವಾನ ಪತ್ರಿಕೆಯಲ್ಲಿ ವಧು-ವರರ ಪರಿಚಯ, ಮದುವೆಯ ದಿನಾಂಕ, ವಿಳಾಸ ಇದ್ರೆ ಸಾಕು. ದಿನದರ್ಶಿಕೆಯಲ್ಲಿ ವಾರ, ದಿನ, ಆ ದಿನದ ವಿಶೇಷಗಳು ಮುಖ್ಯ. ರಸ್ತೆ ಬದಿ ಪೋಸ್ಟರ್‌ನಲ್ಲಿ  ಯಾವ ದೇವರ ಉತ್ಸವ, ಅಲ್ಲಿನ ಕಾರ್ಯಕ್ರಮಗಳು ಇದರ ಬಗ್ಗೆ ಮಾಹಿತಿ ಇರಬೇಕು. ಇಲ್ಲೆಲ್ಲೂ ದೇವರ ಚಿತ್ರ ಬೇಕಿಲ್ಲ.
ದೇವರ ಚಿತ್ರಗಳನ್ನು ನಿಮ್ಮ ಆಡಂಬರ ತೋರಿಸಲು ಅಥವಾ ಪ್ರಚಾರಕ್ಕೆ ಬಳಸುವುದು ಬೇಡ. ಅದರ ಬದಲು ಶ್ರೀ ಗಣೇಶನ ಆಶೀರ್ವಾದದೊಂದಿಗೆ, ಪಾರ್ವತಿ-ಪರಮೇಶ್ವರರ ಕೃಪೆಯೊಂದಿಗೆ ಅನ್ನೋ ಸಾಲುಗಳನ್ನು ಮುದ್ರಿಸಿದರೆ ಸಾಕು ಅಲ್ಲವೇ?
ಓದುತ್ತಿರುವ ನಿಮಗೆ ಮದುವೆ ಆಗಿದೆಯೋ ಇಲ್ಲವೋ ಗೊತ್ತಿಲ್ಲ. ಆದ್ರೆ, ಮುಂದೆ ಒಂದು ದಿನ ಆಹ್ವಾನ ಪತ್ರಿಕೆ ಮುದ್ರಿಸಬೇಕಾದರೆ, ಅಥವಾ ನಿಮಗೆ ಪರಿಚಯ ಇರುವವರು calendarನಲ್ಲಿ  ದೇವರ ಚಿತ್ರ ಹಾಕಿಸ ಬೇಕಾದ್ರೆ ದಯವಿಟ್ಟು ಅವರಿಗೆ ಈ ಮಾಹಿತಿಯನ್ನು ತಿಳಿಸಿ ಕೊಡಿ.

- ವೀಣಾ
veenagyec114@gmail.com

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement