ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಅಂಕಣಗಳು

ನಗರ ಸ್ಮಾರ್ಟ್ ಆಗೋದಂದ್ರೆ...

Vishwanath S
Updated On : 24 Oct 2013, 11:45 am

ಜಾಗತಿಕ ರಾಜಕೀಯವೇ ಈಗ ಮೂಲಸೌಕರ್ಯ ಮತ್ತು ಅಭಿವೃದ್ಧಿಗಳ ಬಗ್ಗೆ ಮಾತನಾಡುತ್ತಿದೆ. ಕೆಲವೊಮ್ಮೆ ಈ ಅಭಿವೃದ್ಧಿ ಕೆಲವರಿಗೆ ಮಾತ್ರ ಸೀಮಿತವಾಗುವ ಆತಂಕ ಇದ್ದಾಗ್ಯೂ ಸುಧಾರಣೆಯ ಮಂತ್ರ ಪಠಿಸಿಕೊಂಡಿರುವ ಈ ಟ್ರೆಂಡ್ ಅನ್ನು ಉಪೇಕ್ಷಿಸುವಂತಿಲ್ಲ. ಈ ನಿಟ್ಟಿನಲ್ಲಿ ವರ್ಲ್ಡ್‌ಕ್ರಂಚ್ ಜಾಲತಾಣವು ಪಟ್ಟಿ ಮಾಡಿರುವ ಜಗತ್ತಿನ ಕೆಲ ಸ್ಮಾರ್ಟ್‌ಸಿಟಿಗಳನ್ನು ಅವಲೋಕಿಸಬಹುದಾಗಿದೆ.

ಸ್ವೀಡನ್‌ನ ಮಾಲ್ಮೊ: 3,03,783 ಜನಸಂಖ್ಯೆ ಹೊಂದಿರುವ ಈ ನಗರವು 2020ರ ವೇಳೆಗೆ ವಾತಾವರಣಸ್ನೇಹಿ ನಗರವಾಗಿ ಹೊರಹೊಮ್ಮುವ ಗುರಿ ಇರಿಸಿಕೊಂಡಿದೆ. ಮಾಹಿತಿ ತಂತ್ರಜ್ಞಾನದಲ್ಲಿ ತಾನು ಬಳಸುತ್ತಿರುವ ಸಲಕರಣೆಗಳಿಂದ ಉಂಟಾಗುವ ಕಾರ್ಬನ್ ಡೈಆಕ್ಸೈಡ್ ವಿಸರ್ಜನೆಯನ್ನು 2020ರ ವೇಳೆಗೆ ಶೇ.30ರಷ್ಟು ತಗ್ಗಿಸುವ 'ಹಸಿರು ಡಿಜಿಟಲ್‌' ಪರಿಕಲ್ಪನೆಗೆ ಮಾಲ್ಮೊ ನಗರ ಬದ್ಧವಾಗಿದೆ.

ಡೆನ್ಮಾರ್ಕ್‌ನ ಕೋಪನ್ ಹೇಗನ್: ಜನಸಂಖ್ಯೆ 12,30,782. 2025ರ ವೇಳೆಗೆ ಜಗತ್ತಿನ ಕಾರ್ಬನ್ ತಟಸ್ಥ ರಾಜಧಾನಿ ಎನ್ನಿಸಿಕೊಳ್ಳಬೇಕು ಎಂಬ ತವಕ ಇದರದ್ದು. 2015ಕ್ಕೆಲ್ಲ ಕಾರ್ಬನ್ ವಿಸರ್ಜನೆಯಲ್ಲಿ ಶೇ.20ರ ಕಡಿತವಾಗಬೇಕು ಎಂಬುದಕ್ಕೆ ಬದ್ಧತೆ ತೋರಿರುವ ಈ ನಗರ ತನ್ನ ಸುಸಂಘಟಿತ ಸಾರಿಗೆ ವ್ಯವಸ್ಥೆ ಹಾಗೂ ಸೈಕಲ್ ಬಳಕೆ ಮೂಲಕ ಗುರಿ ಸಾಧನೆಯತ್ತ ಮುನ್ನುಗ್ಗಿದೆ. ತ್ಯಾಜ್ಯ ವಿಲೇವಾರಿಯಲ್ಲಿ ಹೀಟಿಂಗ್ ಕ್ರಮವನ್ನು ಅನುಸರಿಸಿ ಆ ಮೂಲಕವೇ ಶೇ.98ರಷ್ಟು ತ್ಯಾಜ್ಯವನ್ನು ವಿಲೇವಾರಿ ಮಾಡಿ ಲ್ಯಾಂಡ್‌ಫಿಲ್‌ಗಳ ಪ್ರಮಾಣ ಕುಗ್ಗಿಸಿದೆ.

ಫ್ರಾನ್ಸ್‌ನ ಪ್ಯಾರಿಸ್: 1,04, 3386 ಜನಸಂಖ್ಯೆ. ಜನರು ತಮ್ಮ ಸಾರಿಗೆಯನ್ನು ಹಂಚಿಕೊಳ್ಳುವ ವಿಷಯದಲ್ಲಿ ಈ ನಗರ ಜಗತ್ತಿಗೇ ನಾಯಕನಂತಿದೆ. ಬೈಕ್ ಶೇರಿಂಗ್‌ನಲ್ಲಿ ಆಗಲೇ ಮುಂದಿರುವ ಈ ನಗರ 2011ರಲ್ಲಿ ಎಲೆಕ್ಟ್ರಿಕ್ ಕಾರ್‌ಗಳಿಗೆ ಮಾತ್ರ ಅನ್ವಯಿಸುವ ಅಟೊಲಿಬ್ ಎಂಬ ಕಾರ್‌ಶೇರಿಂಗ್ ವ್ಯವಸ್ಥೆಯನ್ನೂ ಸಮರ್ಥವಾಗಿ ನಿಭಾಯಿಸುತ್ತಿದೆ.

ಯುಎಇಯ ಮಸ್ದಾರ್ ನಗರ: ಅಬುಧಾಬಿಗೆ ಸಮೀಪದಲ್ಲಿ 50 ಸಾವಿರ ಜನರ ವಾಸ್ತವ್ಯ ಗಮನದಲ್ಲಿಟ್ಟುಕೊಂಡು ಕಟ್ಟಲಾಗುತ್ತಿರುವ ಈ ನಗರ ಸಂಪೂರ್ಣ ಸೌರ ವಿದ್ಯುತ್ ಹಾಗೂ ನವೀಕರಿಸಬಹುದಾದ ಶಕ್ತಿಗಳ ಮೇಲೆ ಅವಲಂಬಿತವಾಗಿದೆ. ಆರು ಸಾವಿರ ಚದರ ಕಿ.ಮೀ.ಗಳಲ್ಲಿ ನಗರದ ಕಟ್ಟುವಿಕೆ 2008ರಲ್ಲಿ ಪ್ರಾರಂಭಾಗಿದ್ದು 2015ರಲ್ಲಿ ಕಾಮಗಾರಿ ಪೂರ್ಣಗೊಳ್ಳಲಿದೆ. ಪರಿಸರ ಸ್ನೇಹಿ ಉದ್ದಿಮೆಗಳನ್ನು ಈ ನಗರದಲ್ಲಿ ಹೊಂದಲು ಆಶಿಸಲಾಗಿದೆ.

ಸಿಂಗಾಪುರ: 53,99,200 ಜನಸಂಖ್ಯೆ ಹೊಂದಿರುವ ನಗರ ಪ್ರದೇಶವು ಹಸಿರಿಗೆ ಹೆಸರುವಾಸಿ. ಮೇಲ್ನೋಟಕ್ಕೆ ಇಲ್ಲಿ ಅಲಂಕಾರಿಕ ಮರಗಳನ್ನು ಬೆಳೆಸಲಾಗಿದೆ ಎನ್ನಿಸಿದರೂ ಈ ಸೂಪರ್‌ಟ್ರೀಗಳು ಅಲ್ಲಿ ಉತ್ಪತ್ತಿಯಾದ ಹೆಚ್ಚುವರಿ ಶಾಖವನ್ನು ಹೀರುವ ಹಾಗೂ ಮಳೆ ನೀರನ್ನು ಸಂಗ್ರಹಿಸಿ ಹತ್ತಿರದ ಸಂರಕ್ಷಣಾ ಪಾಯಿಂಟ್‌ಗಳಿಗೆ ಸಾಗಿಸುವ ಕೆಲಸ ಮಾಡುತ್ತವೆ. ಲಂಡನ್, ಸ್ಟಾಕ್‌ಹೋಮ್‌ನಂಥ ನಗರಗಳು ಈ ಮಾದರಿಯನ್ನು ತಾವೂ ಅಳವಡಿಸಿಕೊಳ್ಳುತ್ತಿವೆ. ಈ ನಿಟ್ಟಿನಲ್ಲಿ 2011-15ರ ಅವಧಿಗೆ 13 ಬಿಲಿಯನ್ ಡಾಲರ್‌ಗಳ ಭಾರಿ ಮೊತ್ತವನ್ನೇ ಸಿಂಗಾಪುರ ಸರ್ಕಾರ ಎತ್ತಿಟ್ಟಿದೆ.

ಬ್ರೆಜಿಲ್‌ನ ಸಾವೊ ಪೌಲೊ: 1,13,16,469 ಜನಸಂಖ್ಯೆ. ಸದ್ಯಕ್ಕೆ ಜಲವಿದ್ಯುತ್ ಮೇಲೆ ಸಂಪೂರ್ಣ ಅವಲಂಬಿತವಾಗಿರುವ ಈ ನಗರ, ತನ್ನಲ್ಲಿರುವ 333 ಸಕ್ಕರೆ ಕಾರ್ಖಾನೆಗಳಿಂದಲೇ ಶಕ್ತಿ ಉತ್ಪಾದನೆಗೆ ಯೋಜನೆ ಹಾಕಿಕೊಂಡಿದೆ. ಈ ನಿಟ್ಟಿನಲ್ಲಿ ಅಗತ್ಯ ಪರಿಕರಗಳೆಲ್ಲವನ್ನೂ ಟೆಕ್ ದೈತ್ಯ ಸಿಮೆನ್ಸ್ ಒದಗಿಸಿದೆ. ಹಬೆಗೆ ತಿರುಗುವ ಟರ್ಬೈನ್‌ಗಳನ್ನು ತನ್ನ ಸಕ್ಕರೆ ಕಾರ್ಖಾನೆಗಳಲ್ಲಿ ಉಪಯೋಗಿಸಿಕೊಂಡು ಶಕ್ತಿ ಉತ್ಪಾದನೆ ಮಾಡುವುದಕ್ಕೆ ಸಾವೊ ಪೌಲೊ ಸನ್ನದ್ಧವಾಗಿದೆ.

ಕೊಲಂಬಿಯಾದ ಮೆಡಲ್ಲಿನ್: 24,99,080 ಜನಸಂಖ್ಯೆ. ಒಂದೊಮ್ಮೆ ಜಗತ್ತಿನ ಅತ್ಯಪಾಯಕಾರಿ ನಗರ ಎಂಬ ಹಣೆಪಟ್ಟಿ ಹೊತ್ತಿದ್ದ ಈ ನಗರ ತನ್ನನ್ನು ಮರುವ್ಯಾಖ್ಯಾನ ಮಾಡಿಕೊಳ್ಳುವ ತರಾತುರಿಯಲ್ಲಿದೆ. ಹಿಂಸಾಗ್ರಸ್ತ ಪ್ರದೇಶಗಳನ್ನು ತಣ್ಣಗಾಗಿಸಿ, ಶಾಲೆಗಳ ಸ್ಥಾಪನೆ, ಹಿಂದುಳಿದ ಪ್ರದೇಶಗಳಿಗೆ ಉತ್ತಮ ಸಾರಿಗೆ ಸಂಪರ್ಕ ಇವೆಲ್ಲ ಸಮರೋಪಾದಿಯಲ್ಲಿ ಆಗುತ್ತಿವೆ.

ಮೊರಾಕ್ಕೋದ ರಬತ್: ಯುನೆಸ್ಕೊದ ಪಾರಂಪರಿಕ ನಗರಗಳ ಪಟ್ಟಿಯಲ್ಲಿರುವ, 6, 20, 996 ಜನಸಂಖ್ಯೆ ಹೊಂದಿರುವ ಈ ನಗರ ಇದೀಗ ಹೊಸ ಮೂಲಸೌಕರ್ಯ ಮತ್ತು ಟೆಕ್ನೊ ಪಾರ್ಕ್‌ಗಳಿಗೂ ತೆರೆದುಕೊಳ್ಳುತ್ತಿದೆ. 2000ನೇ ಇಸ್ವಿ ಪ್ರಾರಂಭದಲ್ಲಿ ಮೊರಾಕ್ಕೊದ ರಾಜ ಅಲ್ಲಿನ ಪುರಾತತ್ವಶಾಸ್ತ್ರಜ್ಞರು, ಇತಿಹಾಸಕಾರರು, ಎಂಜಿನಿಯರ್, ನಗರ ಯೋಜನಾಕಾರರನ್ನೆಲ್ಲ ಕಲೆಹಾಕಿ, ಪರಂಪರೆಗೆ ಚ್ಯುತಿ ಬರದಂತೆ ಹೊಸತನ್ನು ಅಪ್ಪಿಕೊಳ್ಳುವ ಹಾಗೂ ಉದ್ಯೋಗಗಳನ್ನು ಸೃಷ್ಟಿಸುವ ನಗರ ನಿರ್ಮಾಣಕ್ಕೆ ಯೋಜಿಸಿದ್ದು ಫಲ ಕೊಡುತ್ತಿದೆ.

ಕೆನಡಾದ ವ್ಯಾಂಕೋವರ್: 6,03,502 ಜನಸಂಖ್ಯೆ ಹೊಂದಿರುವ ಈ ನಗರದುದ್ದಕ್ಕೂ ಡಿಜಿಟಲ್ ಲಭ್ಯತೆ ಇರುವುದು, ಆಡಳಿತ ಡಿಜಿಟಲ್ ಮಾದರಿಗೆ ಒಗ್ಗಿಕೊಂಡಿರುವುದು ಒಂದು ಹೆಗ್ಗಳಿಕೆಯಾದರೆ, ಎಲೆಕ್ಟ್ರಿಕ್ ವೆಹಿಕಲ್‌ಗಳು ಹಾಗೂ ಅದಕ್ಕೆ ಪೂರಕವಾಗಿರುವ ಮೂಲಸೌಕರ್ಯ ಇನ್ನೊಂದು ಗರಿಮೆ. 2020ರ ವೇಳೆಗೆ ಜಗತ್ತಿನ ಅತಿ ಹಸಿರಿನ ನಗರ ಎನ್ನಿಸಿಕೊಳ್ಳುವ ಅಭಿಯಾನವನ್ನು ಅದು ಈಗಲೇ ಆರಂಭಿಸಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement