ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಅಂಕಣಗಳು

ಅಟ್ಟ ಹತ್ತಲು ಕಲಿಸದೆ ಬೆಟ್ಟ ಹತ್ತು ಅಂದರೆ?

ಇತ್ತೀಚಿನ ದಿನಗಳಲ್ಲಿ ಮತೀಯ ಹೆಸರಿನಲ್ಲಿ ಸರ್ಕಾರಿ ಸವಲತ್ತುಗಳನ್ನು ದುರ್ಬಳಕೆ ಮಾಡಿಕೊಳ್ಳುವ ಮನಸ್ಸುಗಳು ಹೆಚ್ಚಾಗುತ್ತಿವೆ...

Srinivasa Murthy VN
Updated On : 25 Oct 2013, 11:46 am

ಸರ್ಕಾರವು ಮೊದಲು ಮುಸ್ಲಿಂ ಮಕ್ಕಳಿಗೆ ಬಾಲ್ಯದಿಂದಲೇ ಉತ್ತಮ ಶಿಕ್ಷಣ ಕೊಟ್ಟು ಅವರು
ಸ್ವಸಾಮರ್ಥ್ಯದಿಂದ ಬೆಳೆಯುವಂಥ ಪರಿಸರ ನಿರ್ಮಾಣ ಮಾಡಬೇಕು. ಶಾಲೆಗೇ ಸೇರಿಸದೇ ಅವರನ್ನು ಮುಖ್ಯವಾಹಿನಿಯಲ್ಲಿ ತರುವುದು ಹೇಗೆ ಸಾಧ್ಯ?


ಇತ್ತೀಚಿನ ದಿನಗಳಲ್ಲಿ ಮತೀಯ ಹೆಸರಿನಲ್ಲಿ ಸರ್ಕಾರಿ ಸವಲತ್ತುಗಳನ್ನು ದುರ್ಬಳಕೆ ಮಾಡಿಕೊಳ್ಳುವ ಮನಸ್ಸುಗಳು ಹೆಚ್ಚಾಗುತ್ತಿವೆ. ಒಂದು ವಿಶ್ವವಿದ್ಯಾಲಯವನ್ನು ಒಂದು ಸೀಮಿತ ವರ್ಗಕ್ಕೆಂದೇ ವಿಶೇಷವಾಗಿ ತೆರೆಯುವುದು, ಜೊತೆಗೆ ಅದನ್ನು ಹೆಸರಿಸಲು ವಿವಾದಗ್ರಸ್ಥ ಹೆಸರನ್ನು ಸೂಚಿಸಿ ಸ್ವಪ್ರತಿಷ್ಠೆಗಾಗಿ ಸೆಣಸಾಡುವುದು,  ಭಾರತದಲ್ಲಿ ಮಾತ್ರ ನೋಡಲು ಸಾಧ್ಯ.
ಕೇಂದ್ರ ಅಲ್ಪಸಂಖ್ಯಾತ ಇಲಾಖೆಯು ನ್ಯಾ. ಸಾಚಾರ್ ವರದಿ ಶಿಫಾರಸಿನ ಅನ್ವಯ, ಮುಸ್ಲಿಂ ಜನಾಂಗಕ್ಕೆ ಪ್ರತ್ಯೇಕ ವಿವಿ ತೆರೆಯಲು ಹೊರಟಿತ್ತು. ಇದರ ವಿಚಾರವಾಗಿ ಸಮಾಜದಲ್ಲಿ ಪರ ವಿರೋಧದ ಅಲೆಗಳು ಅಪ್ಪಳಿಸತೊಡಗಿದ್ದವು. ಇಡೀ ವಿಶ್ವಕ್ಕೆ ತೆರೆದುಕೊಳ್ಳುವಂಥ ಒಂದು ವಿವಿಯನ್ನು, ಧಾರ್ಮಿಕ ಅಲ್ಪಸಂಖ್ಯಾತರು, ಭಾಷಾ ಅಲ್ಪಸಂಖ್ಯಾತರು, ವೈಚಾರಿಕ ಅಲ್ಪಸಂಖ್ಯಾತರು ಎಂದು ಹೀಗೆ ಬಗೆಬಗೆಯಾಗಿ ವಿಂಗಡಿಸಿ, ಒಟ್ಟು ಸಮಾಜದ ಮನಸ್ಸುಗಳನ್ನು ಒಡೆದು, ಒಂದೊಂದು ವಿವಿ ಸಲುವಾಗಿ ಜಾಗವನ್ನು ಹಂಚುತ್ತಾ ಹೋದರೆ, ಬಹುಶಃ ಇಡೀ ಭರತ ಖಂಡವೇ ನಮಗೆ ಸಾಲದಾಗಬಹುದು. ವಿವಿಯೊಂದು ರಾಷ್ಟ್ರಕವಿ ಕುವೆಂಪುರವರ ಕವಿವಾಣಿಯಂತೆ 'ಮನುಜ ಮತ ವಿಶ್ವ ಪಥ' ಎಂಬ ದಿಕ್ಕಿನಲ್ಲಿ ಸಾಗಬೇಕೇ ವಿನಃ ಈ ರೀತಿ ಸಣ್ಣತನ ಸಾರುವ ಧಾರ್ಮಿಕ ಅಂಧಾಭಿಮಾನದ ಗೂಡಾಗಬಾರದು.
ಇದೆಲ್ಲಾ ಒಂದೆಡೆ ಇರಲಿ. ಪ್ರಸಕ್ತ ಸನ್ನಿವೇಶದಲ್ಲಿ, ಮುಸ್ಲಿಮರಿಗೆಂದೇ ಪ್ರತ್ಯೇಕ ವಿವಿ ಸ್ಥಾಪಿಸುವ ಅಗತ್ಯವೇನಿದೆ? ಎಂಬ ಸಹಜ ಪ್ರಶ್ನೆಗೆ ಕೇಂದ್ರ ಅಲ್ಪಸಂಖ್ಯಾತ ಕಲ್ಯಾಣ ಸಚಿವ ಕೆ. ರೆಹಮಾನ್ ಖಾನ್ ಸಾಹೇಬರ ಉತ್ತರ, "ಮುಸ್ಲಿಮರ ಏಳಿಗೆ ಸಹಿಸದವರು ಈ ರೀತಿ ಇಲ್ಲಸಲ್ಲದ ವಿರೋಧ ವ್ಯಕ್ತಪಡಿಸುತ್ತಿದ್ದಾರೆ" ಎಂಬುದಾಗಿತ್ತು. ಆದರೆ ಒಂದು ವಿಷಯ ಅರ್ಥವಾಗುತ್ತಿಲ್ಲ. ಮುಸ್ಲಿಮರನ್ನು ಸಮಾಜದಲ್ಲಿ ಮೇಲಕ್ಕೆತ್ತಲು ಹಾಗೂ ಸಮಾಜದ ಮುಖ್ಯವಾಹಿನಿಗೆ ತರಲು ಇರುವ ಹಾಲಿ ವಿವಿಗಳೇ ಸಾಲದೇ? ಇದು ಹೀಗೆ ಮುಂದುವರೆದರೆ ಮುಂದೆ ಸಮಾಜದಲ್ಲಿ ಬ್ರಾಹ್ಮಣರ ವಿವಿ, ಒಕ್ಕಲಿಗರ ವಿವಿ, ವೀರಶೈವರ ವಿವಿ, ವೈಶ್ಯರ ವಿವಿ, ಜೈನರ ವಿವಿ, ಬೌದ್ಧರ ವಿವಿ, ಕ್ರೈಸ್ತರ ವಿವಿ, ಇತ್ಯಾದಿಗಳು ತಲೆ ಎತ್ತಬಹುದು! ಮುಸಲ್ಮಾನನೊಬ್ಬ, ಆತ ಬಡವನಿರಲಿ ಇಲ್ಲಾ ಶ್ರೀಮಂತನಿರಲಿ, ಮೊದಲು ಸರ್ಕಾರ ಕಡ್ಡಾಯ ಶಿಕ್ಷಣವನ್ನು ಕಡೇ ಪಕ್ಷ 10ನೇ ತರಗತಿಯವರೆಗೂ ಪಡೆದೇ ತೀರುವಂತೆ, ಆ ಜನಾಂಗದಲ್ಲಿ ಜಾಗೃತಿ ಮೂಡಿಸಬೇಕಾಗಿದೆ. ಅದಕ್ಕೆ ಪೂರಕವಾಗಿ ಬೇಕಾದ ಕನಿಷ್ಠ ಮೂಲಭೂತ ಸೌಕರ್ಯಗಳನ್ನು ಹಾಗೂ ಅನುಕೂಲಗಳನ್ನು, ಅವರ ಕುಟುಂಬದ ನೈಜ ವರಮಾನವನ್ನು (ಆದಾಯ ಪತ್ರದ ಆಧಾರದಿಂದಲ್ಲ) ಆಧರಿಸಿ ಸರ್ಕಾರದ ವತಿಯಿಂದಲೇ ದೊರಕುವಂತೆ ಮಾಡಬಹುದಾಗಿದೆ. ಜೊತೆಗೆ ಈ ಸಮುದಾಯ ಅಭದ್ರತೆಯ ಮನಃಸ್ಥಿತಿಯಲ್ಲೋ ಅಥವಾ ಅಂಧಶ್ರದ್ಧೆಯಿಂದಲೋ, ತುಟ್ಟಿಯಾದ ಈ ದಿನಗಳಲ್ಲಿ ತಮ್ಮ ಕುಟುಂಬದ ಗಾತ್ರವನ್ನು ಅನವಶ್ಯಕವಾಗಿ ಹಿಗ್ಗಿಸಿಕೊಂಡು, ಕುಟುಂಬ ಯೋಜನೆಯನ್ನು ಪಾಲಿಸುತ್ತಿಲ್ಲ. ಹಾಗೆ ಪಾಲಿಸಿದರೆ ಸೌಲಭ್ಯಗಳು ದೊರಕುತ್ತವೆ ಎಂದುತಿಳಿಸಿ, ಅದನ್ನು ಕಡ್ಡಾಯವಾಗಿ ಅನುಷ್ಠಾನಕ್ಕೆ ತಂದು, ಅವರಲ್ಲಿ ತಿಳಿವಳಿಕೆ ಹಾಗೂ ಕುಟುಂಬ ಯೋಜನೆಯ ಮಹತ್ವವನ್ನು ಕುರಿತಾದ ಜಾಗೃತಿಯನ್ನು ಮೂಡಿಸಬೇಕು.
ಅಂದ ಹಾಗೆ, ನ್ಯಾ. ಸಾಚಾರ್ ವರದಿ ಅನ್ವಯ ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ, ಬ್ಯಾಂಕ್‌ಗಳಲ್ಲಿ ಮುಸ್ಲಿಮರ ಶೇಕಡಾವಾರು ಸಂಖ್ಯೆ ಅತ್ಯಲ್ಪವಾಗಿದೆಯಂತೆ. ಇದರ ಹಿನ್ನೆಲೆಯಲ್ಲಿ ಎಲ್ಲೆಲ್ಲಿ ಮುಸ್ಲಿಮರು ಕಡಿಮೆ ಸಂಖ್ಯೆಯಲ್ಲಿದ್ದು, ಅವರ ವಾಸಸ್ಥಳದಿಂದ ಈ ಕಲಿಕೆಯ ಶಿಕ್ಷಣ ಸಂಸ್ಥೆಗಳು ದೂರದಲ್ಲಿರುವುದೋ, ಇದೇ ಅವರ ಶೈಕ್ಷಣಿಕ ಅಭಿವೃದ್ಧಿಗೆ ಮಾರಕವಾಗಿದೆಯಂತೆ. ಹಾಗೆ ನೋಡಿದರೆ ಈ ಪರಿಸ್ಥಿತಿ ಸಮಾಜದ ಎಲ್ಲಾ ಪಂಗಡಗಳಿಗೂ ಅನ್ವಯಿಸುತ್ತದೆ. ಉದಾಹರಣೆಗೆ ಭಾರತರತ್ನ ಸರ್ ಎಂ.ವಿ. ರವರು ವಿದ್ಯಾರ್ಥಿ ದೆಸೆಯಲ್ಲಿ ಶಿಕ್ಷಣ ಪಡೆಯಲು ಹತ್ತಾರು ಕಿ.ಮಿ. ನಡೆದೇ ಹೋಗುತ್ತಿದ್ದರಂತೆ. ಪ್ರಸಕ್ತ ಸನ್ನಿವೇಶದಲ್ಲೂ ಸಹಾ ಸಮೂಹ ಸಾರಿಗೆ ಕಾಣದ ಭಾರತದ ಎಷ್ಟೋ ಹಳ್ಳಿಗಳಲ್ಲಿನ ವಿದ್ಯಾರ್ಥಿಗಳ ಪರಿಸ್ಥಿತಿ ಭಿನ್ನವಾಗಿಲ್ಲ. ಇಲ್ಲಿ ಜಾತಿ ಮತದ ಪ್ರಶ್ನೆಯೇ ಉದ್ಭವಿಸುವುದಿಲ್ಲ. ಆದರೂ ಸಹ ನ್ಯಾ. ಸಾಚಾರ್ ವರದಿಯ ಶಿಫಾರಸಿನ ಅನುಷ್ಠಾನದ ಹಿನ್ನೆಲೆಯಲ್ಲಿ, ಖಾನ್ ಸಾಹೇಬರು ಶ್ರೀರಂಗಪಟ್ಟಣದ ಬಳಿ, ಮಂಡ್ಯ ಜಿಲ್ಲೆಯಲ್ಲಿ ಮುಸ್ಲಿಮ್ ವಿವಿಗಾಗಿ ಸರ್ಕಾರದಿಂದ 200 ಎಕರೆ ಜಾಗ ಕೇಳಹೊರಟಿದ್ದರು. ನನ್ನ ಅನಿಸಿಕೆಯೇನೆಂದರೆ, ಖಾನ್ ಸಾಹೇಬರು ಈ ಮುಸ್ಲಿಂ ವಿವಿ ಸ್ಥಾಪಿಸುವ ದಿಕ್ಕಿನಲ್ಲಿ ಆಲೋಚಿಸುವ ಬದಲು, ಬಹುತೇಕ ಆರ್ಥಿಕ ಸಂಕಷ್ಟದಿಂದ ಬೀದಿಗೆ ಬಿದ್ದು, ವಿದ್ಯೆಯಿಂದ ವಂಚಿತರಾಗಿ, ಪೋಷಕರ ಒತ್ತಾಯಕ್ಕೆ ಮಣಿದು, ಬಾಲ್ಯದ ಕನಸುಗಳನ್ನು ಅದುಮಿಟ್ಟು ಗ್ಯಾರೇಜ್‌ಗಳಲ್ಲಿ ದುಡಿಯುತ್ತಾ, ದುಶ್ಚಟಗಳಿಗೆ ಬಲಿಯಾಗಿ ಅತ್ಯಮೂಲ್ಯವಾದ ಬಾಲ್ಯವನ್ನು ಮೂರು ಕಾಸಿನ ದುಡಿಮೆಯಲ್ಲೇ ಕಳೆದುಕೊಂಡು ಬಿಡುವ ಅಮಾಯಕ ಮುಸ್ಲಿಂ ಹುಡುಗರನ್ನು ಶಾಲೆಗೆ ಕರೆತಂದು, ಅವರಿಗೆ ಮೌಲ್ಯಯುತ ಶಿಕ್ಷಣ ನೀಡಬೇಕು. ಅದನ್ನು ಬಿಟ್ಟು ಬಿಟ್ಟು, ಪ್ರತ್ಯೇಕ ವಿವಿ ಸ್ಥಾಪನೆಗೆ ಮುಂದಾಗಿದ್ದದ್ದು ತೀರ ಹಾಸ್ಯಾಸ್ಪದ ಸಂಗತಿ. ಇಂಥ ಕಠಿಣ ಸನ್ನಿವೇಶದ ಹಿನ್ನೆಲೆಯಲ್ಲಿ, ಹೇಗೆ ತಾನೆ ನಾವುಗಳು ಮುಸ್ಲಿಮರನ್ನು ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಆಗಲೀ, ಇಲ್ಲಾ ಬ್ಯಾಂಕ್‌ಗಳಲ್ಲಿ ಆಗಲೀ ಹೆಚ್ಚಿನ ಸಂಖ್ಯೆಯಲ್ಲಿ ನಿರೀಕ್ಷಿಸಲು ಸಾಧ್ಯ? ಸರ್ಕಾರವು ಮೊದಲು ಇವರಿಗೆ ಕನಿಷ್ಠ ಪಕ್ಷ 10ನೇ ತರಗತಿವರೆಗೆ, ಉತ್ತಮ ಶಿಕ್ಷಣ ಕೊಡಮಾಡಿ, ಮುಂದಿನ ವಿದ್ಯಾಭ್ಯಾಸದಲ್ಲಿ ಅವರು ಸ್ವಸಾಮರ್ಥ್ಯದಿಂದ ಮೇಲೆದ್ದು ಬೆಳೆಯುವಂಥ ಪರಿಸ್ಥಿತಿ ನಿರ್ಮಾಣ ಮಾಡಬೇಕು. ಶಾಲೆಗೇ ಸೇರಿಸದೇ ಅವರನ್ನು ವಿವಿಗಳಲ್ಲಿ, ಬ್ಯಾಂಕಿಂಗ್ ಕ್ಷೇತ್ರದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ನಾವು ಕಾಣಲು ಹೇಗೆ ಸಾಧ್ಯ? ಸರ್ಕಾರದ ಈ ಹುಸಿ ನಿರೀಕ್ಷೆ ಒಂದು ರೀತಿ "ಮದುವೆ ಮಾಡದೆಯೇ, ಮಕ್ಕಳಾಗಲಿಲ್ಲ" ಎಂದು ಅಲವತ್ತುಕೊಂಡಂತಾಯಿತು. ಹಾಗೆಯೇ  ಖಾನ್ ಅವರು ಪ್ರತ್ಯೇಕ ಮುಸ್ಲಿಂ ವಿವಿ ಸ್ಥಾಪಿಸುವ ಯೋಚನೆ ಬಿಟ್ಟು, ತಮ್ಮ ಜನಾಂಗದ ಮಕ್ಕಳನ್ನು ಶಾಲೆಯೆಡೆಗೆ ಕರೆದೊಯ್ಯುವ ಕೆಲಸ ಪ್ರಾರಂಭಿಸಲಿ. ಆಗ ಎಲ್ಲವೂ ತನ್ನಷ್ಟಕ್ಕೆ ತಾನೇ ಸರಿ ಹೋಗುತ್ತದೆ.  ಎಲ್ಲರೂ ತಮ್ಮ ಧರ್ಮಕ್ಕೊಂದು, ಜಾತಿಗೊಂದು ವಿವಿ ಬೇಕೆಂದು ಹಠ ಹಿಡಿದು ಕುಳಿತರೆ ಪರಿಸ್ಥಿತಿ ಎಲ್ಲಿಗೆ ಹೋಗಿ ಮುಟ್ಟತ್ತದೋ ಊಹಿಸಿಕೊಳ್ಳಿ. ಮುಸ್ಲಿಂ ಮಕ್ಕಳಿಗೆ ಕಡ್ಡಾಯವಾಗಿ ಮೂಲಭೂತ ಶಿಕ್ಷಣವನ್ನು ಸಿಗುವಂತಾಗಬೇಕು. ಈ ನಿಟ್ಟಿನಲ್ಲಿ ಸರ್ಕಾರಗಳು, ಸಮುದಾಯದ ನಾಯಕರುಗಳು ಕೆಲಸ ಮಾಡಬೇಕು. ಮಕ್ಕಳಲ್ಲಿ ವಿದ್ಯೆಯೊಂದಿಗೆ ಇಚ್ಛಾಶಕ್ತಿ ಬೆಳೆಯುತ್ತದೆ. ದೊಡ್ಡವರಾದ ಮೇಲೆ ಅವರು ಯಾವುದೇ ಮೀಸಲಾತಿಗಳಿಗಾಗಿ ಹಾತೊರೆಯದೆ, ಆತ್ಮವಿಶ್ವಾಸದಿಂದ ಕೂಡಿದ, ಒಬ್ಬ ಸಶಕ್ತ, ಸದೃಢ, ಸುಶಿಕ್ಷಿತ ಹಾಗೂ ಜವಾಬ್ದಾರಿಯುತ ವ್ಯಕ್ತಿಗಳಾಗಿ ಹೊರಹೊಮ್ಮಬಲ್ಲರು. ಧರ್ಮದ ಹೆಸರಿನಲ್ಲಿ ವಿಶ್ವವಿದ್ಯಾಲಯಗಳನ್ನು ಸ್ಥಾಪಿಸಿದಾಕ್ಷಣ ಸರ್ಕಾರದ ಕೆಲಸ ಮುಗಿದಂತಾಗುವುದಿಲ್ಲ. ಶಿಕ್ಷಣದ ಸದೃಢ ಪೋಷಣೆ ಸಿಗಬೇಕಾದದ್ದು ಬೇರು ಮಟ್ಟದಲ್ಲಿ ಎನ್ನುವುದನ್ನು ಮರೆಯದಿರಿ.

- ನಾಗಮಂಗಲ ನರಸಿಂಹಮೂರ್ತಿ
nsnmurthy.om@gmail.com

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement