ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಅಂಕಣಗಳು

ಇದು ಕೇವಲ ಒಪ್ಪಂದವಲ್ಲ, ರಣನೀತಿಯ ಪ್ರಮುಖ ಭಾಗ!

Srinivasa Murthy VN
Updated On : 25 Oct 2013, 11:44 am

ಪ್ರಧಾನಿ ಮನಮೋಹನ್ ಸಿಂಗ್ ಅವರ ಚೀನಾ ಯಾತ್ರೆಯ ಹಿಂದೆ ಮುಖ್ಯವಾಗಿ ಮೂರು ಉದ್ದೇಶಗಳಿವೆ. ಮೊದಲನೆಯದು ಸೈನ್ಯ ಮತ್ತು ರಾಜತಾಂತ್ರಿಕ ಸಂಬಂಧದ ಕುರಿತು ಯೋಜನೆಯೊಂದನ್ನು ರೂಪಿಸುವುದು. ಅಂದರೆ ಪರಸ್ಪರ ಅವಿಶ್ವಾಸವನ್ನು ದೂರಗೊಳಿಸುವುದು. ಭಾರತ-ಚೀನಾ ನಡುವಿನ ಸಂಚಾರವನ್ನು ಸರಳಗೊಳಿಸುವುದು ಮತ್ತು ವ್ಯಾಪಾರದಲ್ಲಿನ ಅಸಮತೋಲನವನ್ನು ಪರಿಹರಿಸುವುದು.
ಚೀನಾ ಭಾರತಕ್ಕೆ ಅತ್ಯಂತ ಹತ್ತಿರವಿರುವ ಮತ್ತು ಅತಿ ದೊಡ್ಡ ನೆರೆ ದೇಶವಿರಬಹುದು, ಆದರೂ, ಚೀನಾದ ಬಗ್ಗೆ ನಮಗಿರುವ ಮಾಹಿತಿ ಅತ್ಯಲ್ಪವೆನ್ನುವುದಂತೂ ಸುಳ್ಳಲ್ಲ. ಬೀಜಿಂಗ್ ಮತ್ತು ಸಿಂಗಾಪುರಕ್ಕಿಂತ ಹೆಚ್ಚಾಗಿ ನಾವು ರೋಮ್, ಲಂಡನ್, ಪ್ಯಾರಿಸ್ ಮತ್ತು ನ್ಯೂಯಾರ್ಕ್‌ಗೆ ಬಹಳ ಹತ್ತಿರವಾಗಿದ್ದೇವೆ. ಆದರೆ ಈಗ ಆರ್ಥಿಕತೆ ಮತ್ತು ಸೈನ್ಯ ಶಕ್ತಿಯ ಪ್ರಜ್ವಲ ಸೂರ್ಯನೀಗ ಪಶ್ಚಿಮದಿಂದ ಹಾದಿ ಬದಲಿಸಿ ಪೂರ್ವದತ್ತ ಬರುತ್ತಿದ್ದಾನೆ. ಭವಿಷ್ಯವೇನಿದ್ದರೂ ಚೀನಾ, ಜಪಾನ್ ಮತ್ತು ಪೂರ್ವ ಏಶಿಯಾಗಳ ಕೈಯಲ್ಲಿದೆ. ಭಾರತ ಈ ವಿಷಯವನ್ನು ಅರ್ಥಮಾಡಿಕೊಂಡೇ ಚೀನಾದೊಂದಿಗೆ ಸಂಬಂಧ ಬೆಳೆಸುವ ನಿಟ್ಟಿನಲ್ಲಿ ಮುಂದಾಗಿದೆ. ಈ ಕಾರಣಕ್ಕಾಗಿಯೇ  ಈ ವಿದ್ಯಮಾನವನ್ನು ಬೆಂಬಲಿಸಬೇಕಾದ ಜರೂರತ್ತಿದೆ.
ಚೀನಾದೊಂದಿಗೆ ಸಾಮಾನ್ಯ ಜನತೆ ಮತ್ತು ಮಾಧ್ಯಮಗಳ ಸ್ತರದಲ್ಲಿ ಸಂಬಂಧ ಗಟ್ಟಿಗೊಳಿಸುವುದು ಸದ್ಯಕ್ಕೆ ಪೂರ್ಣಗೊಳ್ಳಬೇಕಿರುವ ಅತಿ ದೊಡ್ಡ ಅವಶ್ಯಕತೆ. ಪಾಕಿಸ್ತಾನ ನಮ್ಮ ಮೇಲೆ ನಾಲ್ಕು ಯುದ್ಧಗಳನ್ನು ನಡೆಸಿದ್ದರೂ, ಆತಂಕವಾದಿಗಳನ್ನು ಪೋಷಿಸುತ್ತಿದ್ದರೂ ಅದರೊಂದಿಗೆ ಟ್ರ್ಯಾಕ್ 2 ರಾಜತಾಂತ್ರಿಕತೆಯನ್ನು ನಾವು ಅನುಸರಿಸುತ್ತಿದ್ದೇವೆ. ಆದರೆ ಚೀನಾದೊಂದಿಗೆ ಕಳೆದ ಒಂದು ಸಾವಿರ ವರ್ಷದಲ್ಲಿ, ಕೇವಲ ಒಂದೇ ಬಾರಿ ಮಾತ್ರ, ಅಂದರೆ 1962ರಲ್ಲಿ ಮಾತ್ರ ನಮ್ಮ ಯುದ್ಧ ನಡೆದಿದೆ. ಆದರೂ ಆ ದೇಶದ ಸಮಾಜ, ಅದರ ಪ್ರಗತಿ, ದೌರ್ಬಲ್ಯ, ಸಾಹಿತ್ಯ, ಸಿನೆಮಾ ಮತ್ತು ಹೊಸ ತಲೆಮಾರಿನ ಬಗ್ಗೆ ನಮಗೆ ಏನೇನೂ ತಿಳಿದಿಲ್ಲ. ಬರೀ ದೊಡ್ಡ ದೊಡ್ಡ ಭಾಷಣ ಬಿಗಿಯುವುದರಿಂದ ಸಂಬಂಧಗಳು ಬೆಳೆಯುವುದಿಲ್ಲ!ಮನಮೋಹನ್ ಸಿಂಗ್ ಅವರು ನಿಸ್ಸಂಶಯವಾಗಿಯೂ ಒಂದು ಕಠಿಣ ಅಜೆಂಡಾ ಹಿಡಿದುಕೊಂಡೇ ಬೀಜಿಂಗ್ ತಲುಪಿದ್ದಾರೆ.
ಚೀನಾವನ್ನು ನಮ್ಮ ಶಾಶ್ವತ ಶತ್ರು ಎಂದು ಭಾವಿಸುವುದು ಹೇಗಿರುತ್ತದೆಂದರೆ, 2013ನೇ ಇಸವಿಯಲ್ಲಿದ್ದುಕೊಂಡೂ ನಾವು 1962ರ ಸಮಯದಲ್ಲಿ ಬದುಕುತ್ತಿರುವಂತೆ! ವಿಶ್ವದ ಅತಿದೊಡ್ಡ ಆರ್ಥಿಕ ಮತ್ತು ಸೈನಿಕ ಶಕ್ತಿಯಾಗಿ ಬೆಳೆಯುತ್ತಿರುವ ಚೀನಾದೊಂದಿಗೆ ನಾವು 400 ಕಿಲೋಮೀಟರ್ ಉದ್ದದ ಗಡಿಯನ್ನು ಹಂಚಿಕೊಂಡಿದ್ದೇವೆ. ಒಂದು ಸಾವಿರ ವರ್ಷಗಳ ನಮ್ಮ ನಡುವಿನ ಸಂಬಂಧದಲ್ಲಿ ಕೇವಲ ಒಂದೇ ಒಂದು ಬಾರಿ ಯುದ್ಧವಾಗಿದೆ. ಅಲ್ಲದೆ 1962ರ ನಂತರ ಒಂದು ಬಾರಿಯೂ ಕೂಡ ಗಡಿಯಲ್ಲಿ ಗುಂಡಿನ ಕಾಳಗ ನಡೆದಿಲ್ಲ. ಕಾರ್ಗಿಲ್ ಯುದ್ಧದ ಸಮಯದಲ್ಲೂ ಚೀನಾ ತಟಸ್ಥವಾಗಿತ್ತು. ಇನ್ನು ರಾಜೀವ್ ಗಾಂಧಿಯವರಿಂದ ಹಿಡಿದು ಅಟಲ್ ಬಿಹಾರಿ ವಾಜಪೇಯಿವರೆಗಿನ ಆಡಳಿತದಲ್ಲಿ ಚೀನಾ-ಭಾರತ ಸಂಬಂಧ ಪ್ರಗತಿಹೊಂದುತ್ತಲೇ ಬಂದಿತು. ಹಾಗಾಗೇ ಕೆಲವೇ ವರ್ಷಗಳಲ್ಲಿ ಚೀನಾ, ಭಾರತದೊಂದಿಗಿನ ತನ್ನ ಪ್ಯಾಪಾರ ಸಂಬಂಧದಲ್ಲಿ ಅಮೆರಿಕವನ್ನು ಹಿಂದಿಕ್ಕಲಿದೆ. ನಮ್ಮ ವಿಶ್ವಸನೀಯ ಮಿತ್ರರಾಷ್ಟ್ರವಾದ ರಷ್ಯಾ, ಚೀನಾದ ಅತಿದೊಡ್ಡ ಸೈನ್ಯ ಸಹಯೋಗಿಯೂ ಆಗಿದೆ. ರಷ್ಯಾ ಚೀನಾಕ್ಕೆ ಅನಿಲ ಸರಬರಾಜನ್ನೂ ಮಾಡುತ್ತಿದೆ. ಚೀನಾದಲ್ಲಿ 200 ಕ್ಕಿಂತಲೂ ಹೆಚ್ಚು ಭಾರತೀಯ ಕಂಪನಿಗಳು ಕೆಲಸ ನಿರ್ವಹಿಸುತ್ತಿವೆ. ಹಾಗಂತ ಎಲ್ಲಾ ಸಮಸ್ಯೆಗಳೂ ಬಗೆಹರಿದಿವೆ ಎಂದು ನಾನು ಹೇಳುತ್ತಿಲ್ಲ. ಅರುಣಾಚಲ ಪ್ರದೇಶ ಮತ್ತು ಕಾಶ್ಮೀರದ ವಿಷಯದಲ್ಲಿ ಚೀನಾ ನಮ್ಮೊಂದಿಗೆ ತಂಟೆ ಮಾಡುತ್ತಲೇ ಇದೆ. ಆದರೆ ವಾಜಪೇಯಿ ಸರ್ಕಾರದ ಸಮಯದಲ್ಲಿ ಹುಟ್ಟಿದ ಗಡಿ ಆಯೋಗದ ಅಡಿಯಲ್ಲಿ ಈ ವಿಷಯದ ಬಗ್ಗೆ ಮಾತು ಕತೆ ನಡೆಯುತ್ತಿದೆ. ವೀಸಾ ವಿಚಾರ ಮತ್ತು ಲದಾಖ್‌ನಲ್ಲಿ ಒಳನುಸುಳುವಿಕೆಯಯಂಥ ಗಂಭೀರ ಘಟನೆಗಳೂ ನಡೆದಿವೆ. ಆದರೆ ಈ ಸಂಗತಿಗಳಿಂದಾಗಿ ಗಡಿ ರೇಖೆಯಲ್ಲಿ ಎರಡೂ ದೇಶಗಳ ನಡುವೆ ಕಾಳಗ ಉದ್ಭವವಾಗದಂತೆ ನೋಡಿಕೊಳ್ಳುವುದು ಎರಡೂ ದೇಶಗಳ ನಾಯಕರ ಜವಾಬ್ದಾರಿ.
ಅತ್ಯಂತ ಜಟಿಲ ಆರ್ಥಿಕ ಸಂಕಟಕ್ಕೆ ಮತ್ತು ರಾಜಕೀಯ ಪರಿವರ್ತನೆಯ ವಿಷಮಯ ವಾತಾವರಣದಲ್ಲಿ ಸಿಲುಕಿರುವ ಭಾರತ ಕೂಡಲೇ ತನ್ನನ್ನು ತಾನು ಪಶ್ಚಿಮದ ನೀತಿಗಳಿಂದ ತನ್ನನ್ನು ತಾನು ದೂರಮಾಡಿಕೊಂಡು, ಚೀನಾದೊಂದಿಗೆ ಆಯಕಟ್ಟಿನ ಪಾಲುದಾರಿಕೆಯಲ್ಲಿ ಆತ್ಮವಿಶ್ವಾಸದೊಂದಿಗೆ ಮುನ್ನುಗ್ಗಬೇಕು. ಯುದ್ಧ ಶುರು ಮಾಡುವುದು ಬಹಳ ಸುಲಭದ ಕೆಲಸ, ಆದರೆ ನಮ್ಮ ನಿಲುವಲ್ಲಿ ತಟಸ್ಥವಾಗಿದ್ದುಕೊಂಡು ಅನ್ಯದೇಶಗಳ ಶಕ್ತಿ ಪ್ರತಿಷ್ಠಾಪನೆಗೆ ಪ್ರತಿರೋಧ ಒಡ್ಡುವುದು ವಿವೇಕಪೂರ್ಣ ನಡೆ ಎನಿಸಿಕೊಳ್ಳುತ್ತದೆ. ಹಾಗಾಗಿಯೇ ಪ್ರಧಾನಿ ಮನಮೋಹನ್ ಸಿಂಗ್ ಅವರ ಚೀನಾ ಪ್ರವಾಸವನ್ನು ವಿರೋಧಿಸದೆ ಅದನ್ನು ಭಾರತದ ಹಿತಾಸಕ್ತಿಗೆ ಅನುಗುಣವಾದ ನಡೆ ಎಂದೇ ನೋಡಬೇಕಾಗುತ್ತದೆ. 2015ರ ವೇಳೆಗಾಗಲೇ ಭಾರತ ಮತ್ತು ಚೀನಾದ ವ್ಯಾಪಾರ ನೂರು ಕೋಟಿ ಡಾಲರ್‌ಗಳನ್ನು ತಲುಪುವ ಸಂಭವವಿದೆ. ಭಾರತದಲ್ಲಿ ಚೀನಾದ ನೂರಕ್ಕೂ ಹೆಚ್ಚಿನ ಕಂಪನಿಗಳು ಕೆಲಸ ನಿರ್ವಹಿಸುತ್ತಿವೆ. ಜೈವಿಕ ಇಂಧನದಿಂದ ಹಿಡಿದು, ಆಟಿಕೆಗಳು, ಪೆನ್, ದೀಪಾವಳಿಯ ಆಕಾಶ ಬುಟ್ಟಿಗಳು, ಪಟಾಕಿಗಳು, ಚಿತ್ರಗಳು ಮತ್ತು ಗಣೇಶನ ಮೂರ್ತಿಯವರೆಗೂ ಚೀನಾದಿಂದ ನಮ್ಮ ದೇಶದಲ್ಲಿ ಹಲವು ಸಾಮಗ್ರಿಗಳು ಆಮದಾಗುತ್ತವೆ. ಆದರೆ ಸಮಸ್ಯೆ ಇರುವುದು ವ್ಯಾಪಾರ ಅಸಮತೋಲನದಲ್ಲಿ. ಏಕೆಂದರೆ ಈ ವ್ಯಾಪಾರದಲ್ಲಿ ಅರವತ್ತು ಪ್ರತಿಶತದಷ್ಟು ಭಾಗ ಚೀನಾದ ಹಿಡಿತದಲ್ಲಿದೆ.
ಒಂದು ವೇಳೆ ಭಾರತ ಈ ವಿಷಯವಾಗಿ ತನ್ನ ಕ್ಷೇತ್ರವನ್ನು ಬಲಪಡಿಸಿಕೊಂಡರೆ ಯಾರಿಗೂ ಆಪತ್ತು ಎದುರಾಗುವುದಿಲ್ಲವಲ್ಲ? ಚೀನಾ ಏನಿದ್ದರೂ ಒಂದು ಪ್ರಬಲ ಇಚ್ಛಾಶಕ್ತಿ ಮತ್ತು ಮಜಬೂತು ಅರ್ಥವ್ಯವಸ್ಥೆಯುಳ್ಳ ದೇಶದೊಂದಿಗೇ ಮಾತ್ರ ಹೆಚ್ಚು ವಿಶ್ವಸನೀಯವಾಗಿ ಇರುತ್ತದೆಯೇ ಹೊರತು ದುರ್ಬಲ ಭಾರತದೊಂದಿಗಲ್ಲ. ಭಾರತೀಯ ಸೇನೆ ಮತ್ತು ಅರ್ಥವ್ಯವಸ್ಥೆಯನ್ನು ಗಟ್ಟಿಗೊಳಿಸುವುದು ನಮ್ಮ ದೇಶವನ್ನಾಳುತ್ತಿರುವವರ ಕೆಲಸವೇ ಹೊರತು, ಚೀನಾದ್ದಲ್ಲ! ಅಂತಾರಾಷ್ಟ್ರೀಯ ರಾಜತಾಂತ್ರಿಕತೆಯಲ್ಲಿ ಒಂದು ಮಾತು ಪ್ರಚಲಿದಲ್ಲಿದೆ: "ದುರ್ಬಲ ವ್ಯಕ್ತಿ ಮಾತ್ರ ಗಂಟಲು ಹರಿದುಕೊಂಡು ಒದರುತ್ತಾನೆ, ಬಲಿಷ್ಠನಲ್ಲ"
ಇನ್ನು ದೇಶದಲ್ಲಿನ ಚುನಾವಣೆಯ ಚಕ್ರ ಹೇಗೆಯೇ ತಿರುಗುತ್ತಿರಲಿ, ಭಾರತದ ರಾಜತಾಂತ್ರಿಕ ಆಯಾಮವಂತೂ ಸರಿಯಾಗಿಯೇ ಸಾಗುತ್ತಿದೆ. ಒಂದು ತಿಂಗಳ ಅವಧಿಯಲ್ಲೇ ಭಾರತದ ಪ್ರಮುಖ ನಾಯಕರು ವಾಷಿಂಗ್ಟನ್, ಬ್ರುಸೆಲ್ಸ್, ಇಸ್ತಾನ್‌ಬುಲ್ ಮತ್ತು ಇನ್ನಿತರ ದೇಶಗಳ ಶಿಖರ ಸಮ್ಮೇಳನಗಳಿಗೆ, ಇಂಡೋನೇಷಿಯಾ, ಬ್ರಿನೆಯಿ, ಹಂಗರಿ, ಮಾಸ್ಕೋ ನಂತರ ಈಗ ಚೀನಾದ ಯಾತ್ರೆಯನ್ನು ತಮ್ಮ ಖಾತೆಯಲ್ಲಿ ಬರೆದುಕೊಂಡಿದ್ದಾರೆ. ವಾಷಿಂಗ್‌ಟನ್‌ನಲ್ಲಿ ರಾಷ್ಟ್ರಪತಿ ಒಬಾಮಾ ಅವರು ಭಾರತದೊಂದಿಗೆ ಇದೇ ಮೊದಲನೆಯದು ಎಂಬಂಥ ಹೆಜ್ಜೆಯನ್ನಿಟ್ಟರು. ರಕ್ಷಣಾ ಉತ್ಪಾದನೆ ಮತ್ತು ತಂತ್ರಜ್ಞಾನ ಸ್ಥಾನಾಂತರಣದ ಒಪ್ಪಂದ ಮಾಡಿಕೊಂಡರವರು. ಇನ್ನು ಅದ್ಭುತ ಸಂಗತಿಯೆಂದರೆ ರಷ್ಯಾದೊಂದಿಗೂ ಕೂಡ ನಮ್ಮ ದೇಶದ ಸೇನಾ ಸಂಬಂಧ ಅತ್ಯುತ್ತಮವಾಗಿರುವುದು.
ಭಾರತ ಇದುವರೆಗೂ ಅಮೆರಿಕ ಮತ್ತು ರಷ್ಯಾದೊಂದಿಗೆ ಮಾತ್ರ ತನ್ನ ಯುದ್ಧನೀತಿಗಳನ್ನು ಸೇರ್ಪಡೆಗೊಳಿಸುತ್ತಾ ಬಂದಿದೆ. ತಡವಾದರೂ ಅಡ್ಡಿಯಿಲ್ಲ, ಜಪಾನ್‌ನೊಂದಿಗಿನ ವ್ಯೂಹಾತ್ಮಕ ಮೈತ್ರಿಯೂ ಅಚಾನಕ್ಕಾಗಿ ಮಹತ್ವಪೂರ್ಣ ಘಟವನ್ನು ತಲುಪಿದೆ. ನಿಸ್ಸಂಶಯವಾಗಿ ಈ ವಿಷಯದಲ್ಲಿ ಮನಮೋಹನ್ ಸಿಂಗ್ ಅವರ ಪಾತ್ರ ಬಹಳಷ್ಟಿದೆ.ಇನ್ನು ಜಪಾನ್‌ನ ಪ್ರಧಾನಮಂತ್ರಿ ಶಿಂಜೋ ಅಬೇ ಅವರ ಭಾರತ ಭೇಟಿಯ ನಂತರ ನವೆಂಬರ್ ತಿಂಗಳು ಅಲ್ಲಿನ ಸಾಮ್ರಾಟನ ಭಾರತ ಯಾತ್ರೆ ಒಂದು ಅಭೂತಪೂರ್ವ ಹೊಸ ಸಂಬಂಧಕ್ಕೆ ಮುನ್ನುಡಿ ಬರೆದಿದೆ. ಇನ್ನು ಇದೇ ಸಂದರ್ಭದಲ್ಲಿ ಕೇವಲ ರಷ್ಯಾದ ರಕ್ಷಣಾ ಆಸರೆ ಹೊಂದಿದ್ದ ಭಾರತ, ಈಗ ಅಮೆರಿಕದೊಂದಿಗೂ ರಕ್ಷಣಾ ಸಂಬಂಧವನ್ನು ಬೆಳೆಸಲು ಮುಂದಾಗಿದೆ. ಆದರೆ ಒಂದು ವಿಷಯವನ್ನು ನಾವು ಮರೆಯಬಾರದು. ಈ ಕ್ಷೇತ್ರದಲ್ಲಿ ಅಮೆರಿಕ ನಮಗಿಂತಲೂ ಹೆಚ್ಚು ಮಹತ್ವ ನೀಡುವುದು ಪಾಕಿಸ್ತಾನಕ್ಕೆ. ಹಾಗಾಗೇ ಅಮೆರಿಕ, ಮನಮೋಹನ್ ಸಿಂಗ್ ಅವರ ಯಾತ್ರೆಯಾದ ತಕ್ಷಣವೇ ಪಾಕಿಸ್ತಾನಕ್ಕೆ "ಹಣ ಸಹಾಯ" ಮಾಡುವ ಘೋಷಣೆ ಮಾಡಿಬಿಟ್ಟಿತು. ಪಾಕಿಸ್ತಾನ ಉಗ್ರವಾದಿಗಳನ್ನು ಬೆಳೆಸುತ್ತಿದೆ ಮತ್ತು ಐಎಸ್‌ಐಗೆ ತಾಲಿಬಾನಿಗಳೊಂದಿಗೆ ಸಂಬಂಧವಿದೆ ಎನ್ನುವುದು ಗೊತ್ತಿದ್ದರೂ ಕೂಡ ಅಮೆರಿಕ ಈ ಕೆಲಸಕ್ಕೆ ಮುಂದಾಗಿದೆ. ಮೊದಲಿನಿಂದಲೂ ಅಮೆರಿಕ ಇಂಥ ಕೆಲಸವನ್ನು ಮಾಡುತ್ತಲೇ ಬಂದಿದೆ. ಗ್ಯಾರಿ ಜೆ ಬಾಸ್ ಅವರು ತಮ್ಮ ಪುಸ್ತಕದಲ್ಲಿ, ಹೇಗೆ ನಿಕ್ಸನ್ ಅವರ ಸಮಯದಲ್ಲಿ ಅಮೆರಿಕ, ಭಾರತ ವಿರೋಧಿ ನೀತಿ ಅನುಸರಿಸಿತ್ತು ಎನ್ನುವುದನ್ನು ಹೊರಗೆಡವಿದ್ದಾರೆ.
ಇಂಥ ಸಮಯದಲ್ಲಿ ಭಾರತ ಎಚ್ಚರಿಕೆಯಿಂದರಲೇಬೇಕಾಗುತ್ತದೆ. ಮೊದಲಿಗೆ ಅದು ತನ್ನ ಶತ್ರುಗಳ ಸಂಖ್ಯೆಯನ್ನು ಕಡಿಮೆಗೊಳಿಸುತ್ತಾ ಹೋಗಬೇಕು. ಆರ್ಥಿಕ ಮತ್ತು ಸೇನಾ ಶಕ್ತಿಯನ್ನು ಅದು ಬೆಳೆಸಬೇಕು ಮತ್ತು ನೆರೆಹೊರೆಯ ದೇಶಗಳೊಂದಿಗಿನ ಸಂಘರ್ಷಗಳು ಆದಷ್ಟು ಕಡಿಮೆಯಾಗುವಂತೆ ನೋಡಿಕೊಳ್ಳಬೇಕು. ಇದು ಕೇವಲ ಒಪ್ಪಂದವಲ್ಲ, ರಣನೀತಿಯ ಭಾಗವೂ ಹೌದು!

- ತರುಣ್ ವಿಜಯ್
tarun.vijay@gmail.com

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement