ಮದುವೆ ಮನಸ್ಸುಗಳ ಮಿಲನವಾಗಬೇಕು, ವೈಭವದ ಪ್ರದರ್ಶನವಲ್ಲ!
ನಾನು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯಲ್ಲಿ ಕಾರ್ಯದರ್ಶಿಯಾಗಿದ್ದ...
ನಾನು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯಲ್ಲಿ ಕಾರ್ಯದರ್ಶಿಯಾಗಿದ್ದ ಸಮಯದಲ್ಲಿ ನಡೆದ ಒಂದು ಘಟನೆ ಇಂದು ಒಂದು ಮದುವೆಗೆ ಹೋದಾಗ ನೆನಪಿಗೆ ಬಂದಿತು. ನಾನು ಹೋಗಿದ್ದ ಮದುವೆ ಅತೀ ವಿಜೃಂಭಣೆಯಿಂದ ನೆರವೇರಿತು. ಬೆಂಗಳೂರಿನ ಪ್ರತಿಷ್ಠಿತ ವ್ಯಕ್ತಿಗಳೆಲ್ಲ ಅಲ್ಲಿ ಬಂದಿದ್ದರು. ಶ್ರೀಮಂತರು ಒಂದು ಮದುವೆಗೆ ಕೊಟ್ಯಂತರ ರುಪಾಯಿ ಖರ್ಚು ಮಾಡುವಾಗ ನಾವು ಕೇವಲ ಲಕ್ಷಗಳಲ್ಲಾದರೂ ಮಾಡದಿದ್ದರೆ ಹೇಗೆ ಎಂದೋ ಬಹಳಷ್ಟು ಜನ ಭಾವಿಸುತ್ತಾರೆ. ಒಂದು ದಿನ ವಯಸ್ಸಾದ ವ್ಯಕ್ತಿಯೊಬ್ಬರು ನನ್ನ ಕಚೇರಿಗೆ ಬಂದರು. ತಮ್ಮ ಮಗಳ ಮದುವೆಗೆ ಒಂದೂವರೆ ಲಕ್ಷ ಸಾಲ ಮಾಡಿದ್ದರಂತೆ. ಆ ಸಾಲ ಈಗ ಕುತ್ತಿಗೆಗೆ ಬಂದಿದೆಯಂತೆ. ಹಾಗಾಗಿ ನಾನು ಯಾವುದಾದರೂ ಸರ್ಕಾರದ ಯೋಜನೆಯ ಅಡಿಯಲ್ಲಿ ಅವರಿಗೆ ಸಹಾಯ ಮಾಡಬೇಕೆಂದೂ, ಸಹಾಯ ಮಾಡದಿದ್ದರೆ ನೇಣು ಹಾಕಿಕೊಂಡು ಪ್ರಾಣ ಬಿಡುವೆನೆಂದೂ ಹೇಳಿದರು. ಆದರೆ ಈ ರೀತಿ ಮಾಡಿಕೊಂಡ ಸಾಲಕ್ಕೆ ಸರ್ಕಾರದ ಯಾವ ಯೋಜನೆಗಳಲ್ಲೂ, ಬ್ಯಾಂಕುಗಳಿಂದಲೂ, ಹಣಕಾಸು ಸಂಸ್ಥೆಗಳಿಂದಲೂ ಸಾಲ ಸೌಲಭ್ಯ ಸಿಗುವುದಿಲ್ಲ. ಆದಾಯೋತ್ಪನ್ನ ಚಟುವಟಿಕೆಗಳಿಗೆ ದೊರೆಯುತ್ತದೆ. ಆ ವ್ಯಕ್ತಿಯ ಅಸಹಾಯಕ ಸ್ಥಿತಿ ನನ್ನನ್ನು ಗಾಢವಾಗಿ ಚಿಂತಿಸುವಂತೆ ಮಾಡಿತು.
ನಾನು ಭಾರತದ ಆಡಳಿತ ಸೇವೆಯಲ್ಲಿ ಆಯ್ಕೆಯಾಗಿ ಕರ್ನಾಟಕಕ್ಕೆ ಸೇವೆ ಸಲ್ಲಿಸಲು 24 ವರ್ಷಗಳ ಹಿಂದೆ ಬಂದಾಗ ಇಲ್ಲಿನ ಸರಳ ಮದುವೆಗಳನ್ನು ಕಂಡು ಅಚ್ಚರಿಗೊಂಡಿದ್ದೆ. ಮಂಗಳೂರಿನಲ್ಲಿ ನಾನು ಸೇವೆ ಸಲ್ಲಿಸುತ್ತಿದ್ದಾಗ ಅಲ್ಲಿ ಮದುವೆ ಸಮಾರಂಭಕ್ಕೆ ಒಂದು ಆಹ್ವಾನ ಬಂದಿತ್ತು. ಕರೆಯೋಲೆಯಲ್ಲಿ 'ನಿಮ್ಮ ಆಶೀರ್ವಾದವೇ ನಾವು ಬಯಸುವ ಉಡುಗೊರೆ' ಎಂದು ಮುದ್ರಿಸಲಾಗಿತ್ತು. ನಾನು ಮತ್ತು ನನ್ನ ಪತಿ ಇಬ್ಬರೂ ಮದುವೆಗೆ ಹೋಗಿ, ಸರತಿಯಲ್ಲಿ ನಿಂತು ಮದುಮಕ್ಕಳಿಗೆ ಅಕ್ಷತೆ ಹಾಕಿ ಹರೆಸಿದ್ದೆವು. ನಂತರ ನಮಗೆ ಒಂದು ಮೂಸಂಬಿಯನ್ನು ತಾಂಬೂಲವಾಗಿ ಕೊಡಲಾಗಿತ್ತು. ಊಟವಾಗಲೀ, ಸಿಹಿ ತಿಂಡಿಗಳಾಗಲೀ ಇರಲಿಲ್ಲ. ಅಷ್ಟು ಸರಳ ಮದುವೆಯನ್ನು ಕಂಡು ನಾವು ಮೆಚ್ಚಿಕೊಂಡಿದ್ದೆವು. ನಂತರ ನಮ್ಮ ಬಂಧುಗಳಿಗೆಲ್ಲ ಕರ್ನಾಟಕದಲ್ಲಿ ನಡೆಯುವ ಸರಳ ವಿವಾಹಗಳ ಬಗ್ಗೆ ಹೆಮ್ಮೆಯಿಂದ ಹೇಳುತ್ತಿದ್ದೆವು. ಏಕೆಂದರೆ ಉತ್ತರ ಭಾರತದಲ್ಲಿ ಸಾಮಾನ್ಯವಾಗಿ ರಾತ್ರಿಯ ಹೊತ್ತು ವಿವಾಹಗಳು ನಡೆಯುತ್ತವೆ. ಅತಿ ಆಡಂಬರ, ವೈಭವಗಳೊಂದಿಗೆ ಕೂಡಿರುತ್ತವೆ. ತಮ್ಮಲ್ಲಿರುವ ಚಿನ್ನಾಭರಣಗಳನ್ನೆಲ್ಲಾ ಮೈಮೇಲೆ ಹೇರಿಕೊಂಡು ತಮ್ಮ ಶ್ರೀಮಂತಿಕೆಯನ್ನು ಮೆರೆಸುವವರನ್ನು ನಾವು ಕಾಣಬಹುದು.
ನನ್ನ ಮದುವೆಯ ಸಂದರ್ಭ ನನಗೆ ನೆನಪಿಗೆ ಬಂತು. ನನ್ನ ಪತಿ ರಜನೀಶರ ತಾಯಿ ತಂದೆಯವರೊಂದಿಗೆ ನನ್ನ ತಾಯಿ ತಂದೆ ಮಾತುಕತೆಗೆ ಹೋದ ಸಂದರ್ಭವದು. ನನ್ನ ಅಪ್ಪ ಅವರಿಗೆ ಹೇಳಿದರು: "ನನ್ನ ತಿಂಗಳ ಸಂಬಳದಲ್ಲಿ ನನ್ನ 3 ಮಕ್ಕಳಿಗೆ ವಿದ್ಯೆಯನ್ನು ಕೊಟ್ಟು ಸಾಕಿದ್ದೇನೆ. ವರದಕ್ಷಿಣೆ ಕೊಡಲು ನನ್ನ ಬಳಿ ಉಳಿತಾಯದ ಹಣವೇನೂ ಇಲ್ಲ. ನನ್ನ ಮಗಳು ಮತ್ತು ನಿಮ್ಮ ಮಗ ಇಬ್ಬರೂ ಐ.ಎ.ಎಸ್. ಅಧಿಕಾರಿಗಳು. ತಾವೇ ತಮ್ಮ ಕಾಲ ಮೇಲೆ ನಿಂತು ಚೆನ್ನಾಗಿ ದುಡಿಯಬಲ್ಲರು. ಉತ್ತಮ ಜೀವನವನ್ನು ಪಡೆಯಬಲ್ಲರು. ಹಾಗಾಗಿ ನಿಮಗೇನಾದರೂ ವರದಕ್ಷಿಣೆಯ ಅಪೇಕ್ಷೆ ಇದ್ದಲ್ಲಿ ಮಾತುಕತೆಯನ್ನು ಮುಂದುವರಿಸುವುದೇ ಬೇಡ"
ಈ ಮಾತು ಕೇಳಿ ನನ್ನ ಅತ್ತೆ ದಿಗ್ಭ್ರಾಂತರಾದರು. ಅವರು ಹೇಳಿದರು, "ನಿಮ್ಮ ಮನಸ್ಸಿಗೆ ಏಕೆ ಇಂಥ ಆಲೋಚನೆ ಬಂತು ಎಂದು ನನಗೆ ಆಶ್ಚರ್ಯವಾಗುತ್ತಿದೆ. ನಾನು ನನ್ನ ಪತಿ ಇಬ್ಬರೂ ವಿಶ್ವವಿದ್ಯಾಲಯದಲ್ಲಿ ಪ್ರೊಫೆಸರುಗಳು. ನಾನು ಸಂಸ್ಕೃತ ಮತ್ತು ಫಿಲಾಸಫಿಯ ಪ್ರೊಫೆಸರ್. ಯಾವಾಗಲೂ ಸರಳತೆಯಲ್ಲಿ ನಂಬಿಕೆಯಿರುವವಳು. ಅದರಲ್ಲೂ ಹೆಣ್ಣು ಮಕ್ಕಳನ್ನು ಸದೃಢಗೊಳಿಸುವ ಕೆಲಸವನ್ನು ಮಾಡುತ್ತಿರುವವಳು. ನಾವು ವರದಕ್ಷಿಣೆಯನ್ನು ಅಪೇಕ್ಷಿಸುವುದು ನಮ್ಮ ವಿದ್ಯೆಗೆ ಮತ್ತು ನಮ್ಮ ನಂಬಿಕೆಗಳಿಗೆ ಮಾಡುವ ಅವಮಾನವಾಗುತ್ತದೆ." ಅವರ ಮಾತನ್ನು ಕೇಳಿ ನನ್ನ ತಾಯಿ "ನಮ್ಮನ್ನು ದಯವಿಟ್ಟು ಕ್ಷಮಿಸಿ. ನಮಗೆ ಸುತ್ತಿ ಬಳಸಿ ಮಾತನಾಡಲು ಗೊತ್ತಿಲ್ಲ. ಅದಕ್ಕೇ ನೇರವಾಗಿ ನಿಮಗೆ ಹೇಳಿದೆವು. ಯಾಕಂದ್ರೆ ನನ್ನ ಮಗಳು ಜೀವನವಿಡೀ ವರದಕ್ಷಿಣೆ ತಂದಿರಲಿಲ್ಲವೆಂಬ ಮಾತಿನಿಂದ ಗಂಡನ ಮನೆಯಲ್ಲಿ ಕಷ್ಟ ಪಡುವುದು ನಮಗೆ ಇಷ್ಟವಿಲ್ಲ."
ಎರಡೂ ಕುಟುಂಬಗಳಿಗೆ ಸಮಾಧಾನವಾಯಿತು. ನನ್ನ ಮದುವೆ ಬೆಳಗಿನ ಒಂದು ಹೊತ್ತಿನಲ್ಲಿ ಸರಳವಾಗಿ ನಡೆಯಿತು. ಅಂದೇ ನಾನು ನನ್ನ ಪತಿಯ ಮನೆಗೆ ಕೇವಲ ಒಂದು ಸೂಟ್ಕೇಸಿನಲ್ಲಿ ಬಟ್ಟೆಗಳನ್ನು ತುಂಬಿಕೊಂಡು ಕಾಲಿಟ್ಟೆ. ವಿವಾಹವೆನ್ನುವುದು ಮುಖ್ಯವಾಗಿ ಎರಡು ಮನಸ್ಸುಗಳ ಮಿಲನ. ವೈಭವದ ಪ್ರದರ್ಶನವಲ್ಲ.
ಹಿಂದಿನ ಕಾಲದಲ್ಲಿ ಮದುವೆ ಸಮಾರಂಭವೆಂದರೆ ಏಳು ದಿನ ನಡೆಯುತ್ತಿದ್ದವು. ವರ ಮತ್ತು ವಧು ಇನ್ನೂ ಚಿಕ್ಕವರಾಗಿರುತ್ತಿದ್ದರು. ಬೇರೆ ಬೇರೆ ಊರುಗಳಿಂದ ಸಂಸಾರ ಸಮೇತರಾಗಿ ಬಂದು ಜನ ಭಾಗವಹಿಸುತ್ತಿದ್ದರು. ಆಡಂಬರವಿರುತ್ತಿರಲಿಲ್ಲ. ಆತ್ಮೀಯತೆ ಇರುತ್ತಿತ್ತು. ಆದರೆ ಈಗ ಸಮಯ ಬದಲಾಗಿದೆ. ಆಡಂಬರ ಹೆಚ್ಚಾಗಿದೆ. ಕಡು ಬಡವರೂ ಸಹ ಸಾಲ ಸೋಲ ಮಾಡಿ ಎಲ್ಲರನ್ನೂ ಮೆಚ್ಚಿಸಬೇಕಾಗಿದೆ. ಜನರು ಏನೆಂದು ತಿಳಿಯುತ್ತಾರೋ, ಸಮಾಜ ತಮ್ಮನ್ನು ನಿಕೃಷ್ಟವಾಗಿ ಕಾಣಬಾರದು ಎನ್ನುವ ಆತಂಕದಿಂದ ಚಿನ್ನದ ಬೆಲೆ ಗಗನಕ್ಕೇರಿದ್ದರೂ ಮಗಳಿಗೆ ಚಿನ್ನವನ್ನು ಸಾಲ ಮಾಡಿ ತಂದು, ದುಬಾರಿಯಾದ ರೇಷ್ಮೆ ಸೀರೆಗಳನ್ನು ಖರೀದಿಸಿ ಮದುವೆ ಮಾಡಿಕೊಡುವ ಪದ್ಧತಿ ಇಂದು ಆರಂಭವಾಗಿದೆ. ನಾನು ಅಂದು ಕಂಡ ಕರ್ನಾಟಕಕ್ಕೂ ಇಂದು ಕಾಣುತ್ತಿರುವುದಕ್ಕೂ ಬಹಳಷ್ಟು ವ್ಯತ್ಯಾಸವಿದೆ.
ಕರ್ನಾಟಕ ಸರ್ಕಾರ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಅಡಿಯಲ್ಲಿ ಸಾಮೂಹಿಕ ವಿವಾಹಗಳನ್ನು "ಆದರ್ಶ ವಿವಾಹ" ಎಂಬ ಒಂದು ಯೋಜನೆಯ ಮೂಲಕ ಉತ್ತೇಜಿಸುತ್ತಿದೆ. ಸರ್ಕಾರೇತರ ಸಂಘ ಸಂಸ್ಥೆಗಳು ಮುಂದಾಳತ್ವವನ್ನು ವಹಿಸಿಕೊಂಡು ಸಾಮೂಹಿಕ ವಿವಾಹಗಳನ್ನು ಆಯೋಜಿಸಬಹುದಾಗಿದೆ. ಸಾಮೂಹಿಕ ವಿವಾಹಗಳಲ್ಲಿ ಕನಿಷ್ಠ ಇಪ್ಪತ್ತೈದು ಜೋಡಿಗಳು ಮದುವೆಯಾಗಬೇಕು. ಈ ರೀತಿ ಮದುವೆಯಾದ ಪ್ರತಿ ವಧುವಿಗೂ ಸರ್ಕಾರದಿಂದ ಹತ್ತು ಸಾವಿರ ರುಪಾಯಿಗಳನ್ನು ವಧುವು ಸೂಚಿಸಿದ ಬ್ಯಾಂಕಿನಲ್ಲಿ ಎರಡು ವರ್ಷಗಳ ಕಾಲ ಠೇವಣಿಯ ರೂಪದಲ್ಲಿ ಇಡಲಾಗುವುದು. ಅಂತರ್ಜಾತಿ ವಿವಾಹವಾದವರಿಗೆ ವಿಶೇಷ ಸೌಲಭ್ಯಗಳನ್ನೂ ಸಹ ನೀಡಲಾಗುವುದು. ಸಾಮೂಹಿಕ ವಿವಾಹವನ್ನು ಏರ್ಪಡಿಸಿದ ಸಂಸ್ಥೆಗೆ, ಪ್ರತಿ ಜೋಡಿಗೆ ನೂರು ರುಪಾಯಿಗಳನ್ನು ಕೊಡಲಾಗುವುದು. ಈ ವಿವಾಹಗಳನ್ನು ಕಡ್ಡಾಯವಾಗಿ ನೋಂದಣಿ ಮಾಡಿಸಬೇಕಾಗುತ್ತದೆ.
ಸರಳ ವಿವಾಹ ಎಲ್ಲರಿಗೂ ಒಳ್ಳೆಯದು ಎನ್ನುವ ಭಾವನೆ ಪ್ರತಿಯೊಬ್ಬ ಮಧು ಮಗನಿಗೂ ಮತ್ತು ಮಧು ಮಗಳಿಗೂ ಬರಬೇಕಾಗಿದೆ. ಒಂದು ದಿನದ ಮದುವೆಗೆ ಸಾಲ ಮಾಡಿ ಜೀವನ ಪರ್ಯಂತ ಸಾಲದ ಸುಳಿಯಲ್ಲಿ ಸಿಕ್ಕಿ ನರಳುವುದಕ್ಕಿಂತ, ತಮ್ಮ ಕೈಲಾಗುವ ಹಾಗೆ ಸರಳ ವಿವಾಹ ಮಾಡಿ ಇಡೀ ಜೀವನ ನಗುನಗುತ್ತಾ ಕಾಲ ಕಳೆಯುವುದು ಒಳ್ಳೆಯದಲ್ಲವೇ? ಇದರ ಬಗ್ಗೆ ಎಲ್ಲರೂ ಆತ್ಮಾವಲೋಕನ ಮಾಡಿಕೊಳ್ಳುವ ಸಮಯ ಬಂದಿದೆ.
ಮುಖ್ಯವಾಗಿ ಹುಡುಗಿಗೂ ಒಳ್ಳೆಯ ವಿದ್ಯಾಭ್ಯಾಸ ಕೊಡಿಸಿದರೆ ಅವಳೂ ಒಂದು ಕೆಲಸಕ್ಕೆ ಸೇರಿಯೋ ಅಥವಾ ಸ್ವ ಉದ್ಯೋಗದಲ್ಲಿ ತೊಡಗಿಕೊಂಡು ಸಂಪಾದಿಸಿಯೋ ಜೀವನ ಪೂರ್ತಿ ಆರ್ಥಿಕವಾಗಿ ಸಂಸಾರಕ್ಕೆ ಬೆನ್ನೆಲುಬಾಗಿ ನಿಲ್ಲುತ್ತಾಳೆ. ಪ್ರತಿ ತಿಂಗಳೂ ಅವಳಿಂದ ಬರುವ ಆರ್ಥಿಕ ಬಲಕ್ಕಿಂತ ಹೆಣ್ಣು ಮಕ್ಕಳನ್ನು ವಿದ್ಯೆಯಿಂದ ವಂಚಿಸಿ ಅವಳನ್ನು ಮದುವೆ ಮಾಡಿಕೊಂಡ ಗಂಡು ಜೀವನ ಪೂರ್ತಿ ಸಾಕಬೇಕೆಂದು, ಅವಳ ಮದುವೆಗಾಗಿ ಸಾಲ ಮಾಡಿ ಖರ್ಚು ಮಾಡುವುದು ಸರಿಯಲ್ಲ ಅಲ್ಲವೇ?
ಪ್ರತಿ ಸಮುದಾಯದವರೂ ನಾಯಕತ್ವ ವಹಿಸಿ ತಮ್ಮ ಜನಾಂಗದವರಿಗೆ ಸರಳ/ಸಾಮೂಹಿಕ ವಿವಾಹಗಳನ್ನು ಮಾಡಿಸುವತ್ತ ಹೆಜ್ಜೆ ಹಾಕಬೇಕಾಗಿದೆ. ಇದರಿಂದ ಪ್ರತಿ ಕುಟುಂಬಕ್ಕೂ ಅನವಶ್ಯಕ ಖರ್ಚು ವೆಚ್ಚಗಳನ್ನು ತಪ್ಪಿಸಬಹುದಾಗಿದೆ. ತಮ್ಮ ಸಮುದಾಯದವರೊಡಗೂಡಿ ಸಾಮೂಹಿಕ ವಿವಾಹದಲ್ಲಿ ಪಾಲ್ಗೊಂಡರೆ ಎಲ್ಲರಲ್ಲಿ ಆತ್ಮೀಯತೆ ಮೂಡುತ್ತದೆ. ಹಾಗೂ ಈ ಸಾಮೂಹಿಕ ವಿವಾಹದಲ್ಲಿ ಮುಖ್ಯವಾಗಿ ಹೆಣ್ಣು ಮಕ್ಕಳಿಗೆ ಸುರಕ್ಷತೆ ಸಿಗುತ್ತದೆ. ಹಲವಾರು ಜನರು ಅವರ ವಿವಾಹಕ್ಕೆ ಸಾಕ್ಷಿಯಾಗುತ್ತಾರೆ. ವರದಕ್ಷಿಣೆಯ ಹಾವಳಿಯನ್ನೂ ತಪ್ಪಿಸಬಹುದಾಗಿದೆ. ಈ ರೀತಿಯ ವಿವಾಹಗಳಿಂದ ಪಾರದರ್ಶಕತೆ ಸಾಧ್ಯವಾಗುತ್ತದೆ. ಮೋಸ ನಡೆಯುವ ಸಾಧ್ಯತೆಗಳು ಕಡಿಮೆ ಇರುತ್ತವೆ. ಸಮಾಜದಲ್ಲಿ ಇಂಥ ವಿವಾಹಗಳು ಅಂತರ್ಜಾತೀಯ ವಿವಾಹಗಳನ್ನು ಪ್ರೋತ್ಸಾಹಿಸಿ, ರಾಷ್ಟ್ರೀಯ ಐಕ್ಯತೆಗೆ ಅತ್ಯಂತ ಮಹತ್ತರ ಪಾತ್ರವನ್ನು ವಹಿಸುತ್ತವೆ. ಸಾಮೂಹಿಕ ವಿವಾಹಗಳಲ್ಲಿ ಬಾಲ್ಯ ವಿವಾಹ ನಡೆಯುವ ಸಾಧ್ಯತೆ ಇರುವುದಿಲ್ಲ. ಹೆಣ್ಣು ಮಕ್ಕಳಿಗೆ ಹದಿನೆಂಟು ವರ್ಷಗಳ ನಂತರ ಮದುವೆಯಾಗಿ, ನಂತರ ಮಗುವಿಗೆ ಜನ್ಮ ನೀಡುವುದರಿಂದ ಆರೋಗ್ಯವಂತ ಮಕ್ಕಳು ಹುಟ್ಟುತ್ತವೆ.
ನಮ್ಮಲ್ಲಿ ಈಗ ಹೆಣ್ಣು ಮತ್ತು ಗಂಡಿನ ಅನುಪಾತ 964/1000 ಇರುವುದರಿಂದ ಹುಡುಗನಿಗೆ ಮದುವೆಯಾಗಲು ಹೆಣ್ಣು ಸಿಗುವುದೇ ಕಷ್ಟವಾಗುತ್ತಿದೆ. ಸಾಮೂಹಿಕ ವಿವಾಹದಲ್ಲಿ ಹಲವಾರು ಕುಟುಂಬಗಳು ಆಗಮಿಸುವುದರಿಂದ ಕುಟುಂಬದಲ್ಲಿ ಹುಡುಗರಿಗೆ ಜೋಡಿಯನ್ನು ಹುಡುಕಲು ಈ ಒಂದು ಸ್ಥಳ ಒಳ್ಳೆಯ ಅವಕಾಶವನ್ನು ಕಲ್ಪಿಸಿಕೊಡುವಲ್ಲಿ ಕೂಡ ನೆರವಾಗುತ್ತದೆ.
ಇಷ್ಟೆಲ್ಲಾ ಅನುಕೂಲವಿರುವ ಸಾಮೂಹಿಕ ಆದರ್ಶ ವಿವಾಹವನ್ನು ಇಂದಿನ ಪುರೋಹಿತರು, ಮಠಾಧಿಪತಿಗಳು, ಧಾರ್ಮಿಕ ಗುರುಗಳು ನಿಜವಾದ ಅರ್ಥದಲ್ಲಿ ಆದರ್ಶ ವಿವಾಹಗಳನ್ನು ಮಾಡಿಸುವಲ್ಲಿ ಒಂದು ದೊಡ್ಡ ಪಾತ್ರ ವಹಿಸಿ ಸಮಾಜಕ್ಕೆ ಮಹತ್ತರ ಕೊಡುಗೆ ನೀಡಬೇಕೆಂದು ಈ ಅಂಕಣದ ಮೂಲಕ ನಾನು ಕೋರುತ್ತೇನೆ. ಸಾಮೂಹಿಕ ವಿವಾಹಗಳಿಂದ ಸಮಾಜದಲ್ಲಿ ಒಂದು ಕ್ರಾಂತಿಯನ್ನೇ ಮಾಡಬಹುದಾಗಿದೆ.
- ಶಾಲಿನಿ ರಜನೀಶ್, ಐಎಎಸ್
anisikeprabha@gmail.com