ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಅಂಕಣಗಳು

ಚೀನಾದ ದಕ್ಷಿಣ ಟಿಬೆಟ್ ದಾಹಕ್ಕೆ ಕಾಶ್ಮೀರವೂ ಬಲಿಯಾಗಲಿದೆಯೇ?

ಚೀನಾ ಕೆಲವು ವರ್ಷಗಳಿಂದ ಅತ್ಯಂತ ವಿನಾಶಕಾರಿ ಪ್ರಯತ್ನವೊಂದಕ್ಕೆ ಸಜ್ಜುಗೊಳ್ಳುತ್ತಿದೆ. ಇದರ ಸುಳಿವು ಸಿಕ್ಕಿರುವುದರಿಂದ ನೆರೆ ರಾಷ್ಟ್ರಗಳಲ್ಲಿ ಮತ್ತು ಪ್ರಪಂಚದಾದ್ಯಂತ ಚಿಂತೆ ಶುರುವಾಗಿದೆ.

Mainashree
Updated On : 29 Oct 2013, 11:41 am

1840-42ರಲ್ಲಿ ಬ್ರಿಟಿಷರು ಅಫೀಮು ಯುದ್ಧದಲ್ಲಿ ಸಾಮ್ರಾಜ್ಯಶಾಹಿ ಚೀನಾವನ್ನು ಬಗ್ಗುಬಡಿದಿದ್ದರು. ಆ ಯುದ್ಧದಲ್ಲಿ ತಾನು ಅನೇಕ ಭೂ ಪ್ರದೇಶಗಳನ್ನು ಕಳೆದುಕೊಂಡೆ ಎಂದು ಚೀನಾ ಭಾವಿಸುತ್ತದೆ. ಹಾಗಾಗೇ ಮುಂದಿನ ಐವತ್ತು ವರ್ಷಗಳಲ್ಲಿ '6 ಯುದ್ಧಗಳನ್ನು' ನಡೆಸುವ ಮೂಲಕ ಅವನ್ನೆಲ್ಲ ಮತ್ತೆ ತನ್ನ ವಶಕ್ಕೆ ಪಡೆಯಬೇಕೆಂದು ಚೀನಾ ಯೋಜನೆ ರೂಪಿಸಿದೆ ಎಂದು ಅಲ್ಲಿನ ಪ್ರಮುಖ ದಿನಪತ್ರಿಕೆಯೊಂದು ವರದಿ ಮಾಡಿದೆ. ಈ ಕುರಿತು ರಕ್ಷಣಾ ಪರಿಣತ ರಾಜೀವ್ ಶರ್ಮ ಫಸ್ಟ್ಪೋಸ್ಟ್ ಜಾಲತಾಣದಲ್ಲಿ ಮಾಡಿದ ವಿಶ್ಲೇಷಣೆ...

ಚೀನಾ ಕೆಲವು ವರ್ಷಗಳಿಂದ ಅತ್ಯಂತ ವಿನಾಶಕಾರಿ ಪ್ರಯತ್ನವೊಂದಕ್ಕೆ ಸಜ್ಜುಗೊಳ್ಳುತ್ತಿದೆ. ಇದರ ಸುಳಿವು ಸಿಕ್ಕಿರುವುದರಿಂದ ನೆರೆ ರಾಷ್ಟ್ರಗಳಲ್ಲಿ ಮತ್ತು ಪ್ರಪಂಚದಾದ್ಯಂತ ಚಿಂತೆ ಶುರುವಾಗಿದೆ.  
"The Six Wars China is Sure to Fight in the next 50 Years''(ಮುಂದಿನ ಐವತ್ತು ವರ್ಷಗಳಲ್ಲಿ ಚೀನಾ ನಿಶ್ಚಿತವಾಗಿ ನಡೆಸಲಿರುವ 6 ಯುದ್ಧಗಳು) ಎಂಬ ತಲೆಬರಹದಡಿಯಲ್ಲಿ ಚೀನಾದ ಪ್ರಮುಖ ದಿನ ಪತ್ರಿಕೆಯಾದ 'ವೆನ್ ವಿ ಪೋ'ದಲ್ಲಿ ಜುಲೈ 8 ರಂದು ಪ್ರಕಟವಾದ ಲೇಖನ ಈ ಚಿಂತೆಗೆ ಮೂಲ ಕಾರಣ.
ಈ ಲೇಖನದಿಂದ ಭಾರತ ಸರ್ಕಾರದ ಬೆನ್ನಹುರಿಯಲ್ಲಿ ನಡುಕ ಶುರುವಾಗಿದೆ ಎನ್ನುವುದಂತೂ ನನಗೆ ಖಚಿತವಾಗಿ ಗೊತ್ತು. ಅಲ್ಲದೇ ಭಾರತದ ಸಾಮಾನ್ಯ ಜನರಿಗೆ ಈ ಬಗ್ಗೆ ಏನೇನೂ ಮಾಹಿತಿಯಿರಲಾರದು ಎನ್ನುವುದೂ ನನಗೆ ಗೊತ್ತು. ಹಾಗಾಗೇ ಈ ಲೇಖನವನ್ನು ಬರೆಯುತ್ತಿದ್ದೇನೆ.
1840-42ರಲ್ಲಿ ಬ್ರಿಟಿಷರು ಓಪಿಯಮ್ ಯುದ್ಧದಲ್ಲಿ (ಆಂಗ್ಲ-ಚೀನಿಯರ ಯುದ್ಧ) ಸಾಮ್ರಾಜ್ಯಶಾಹಿ ಚೀನಾವನ್ನು ಬಗ್ಗುಬಡಿದಿದ್ದರು. ಆ ಯುದ್ಧದಲ್ಲಿ ತಾನು ಅನೇಕ ಭೂ ಪ್ರದೇಶಗಳನ್ನು ಕಳೆದುಕೊಂಡೆ ಎಂದು ಚೀನಾ ಭಾವಿಸುತ್ತದೆ. ಹಾಗಾಗೇ ಮುಂದಿನ ಐವತ್ತು ವರ್ಷಗಳಲ್ಲಿ 6 ಯುದ್ಧಗಳನ್ನು ನಡೆಸುವ ಮೂಲಕ ಅವನ್ನೆಲ್ಲ ಮತ್ತೆ ತನ್ನ ವಶಕ್ಕೆ ಪಡೆಯಬೇಕು ಎಂದು ಚೀನಾ ಯೋಜನೆ ರೂಪಿಸಿದೆ. "ಈ ಭೂಪ್ರದೇಶಗಳನ್ನು ಕಳೆದುಕೊಂಡ ಚೀನಾ, "ನೂರು ವರ್ಷಗಳಿಂದ ಅವಮಾನ ಅನುಭವಿಸುತ್ತಿದೆ" ಎನ್ನುತ್ತದೆ 'ವೆನ್ ವಿ ಪೋ' ಪತ್ರಿಕೆ. ಇದಷ್ಟೇ ಅಲ್ಲ, ಮುಂದಿನ ಐವತ್ತು ವರ್ಷಗಳಲ್ಲಿ ಚೀನಾ ಈ ಯುದ್ಧಗಳನ್ನು ಯಾವಾಗ ನಡೆಸಲಿದೆ ಎನ್ನುವುದರ ಅಂದಾಜು ಕಾಲಮಿತಿಯನ್ನೂ ಅದು ಪ್ರಕಟಿಸಿದೆ.
1)    ಮೊದಲನೇ ಯುದ್ಧ: ತೈವಾನ್ ಏಕೀಕರಣಕ್ಕಾಗಿ (2020-2025)
2)    ಎರಡನೇ ಯುದ್ಧ: ದಕ್ಷಿಣ ಚೀನಾ ಸಮುದ್ರದಲ್ಲಿರುವ ಸ್ಪ್ರಾಟ್ಲಿ ದ್ವೀಪಗಳನ್ನು ವಶಪಡಿಸಿಕೊಳ್ಳುವುದು (2025-2030)
3)    ಮೂರನೇ ಯುದ್ಧ: ದಕ್ಷಿಣ ಟಿಬೆಟ್ನಲ್ಲಿ ಅಧಿಪತ್ಯ ಸ್ಥಾಪಿಸುವುದು (2035-2040)
4)     ನಾಲ್ಕನೇ ಯುದ್ಧ: ಡಿಯಾಯು ದ್ವೀಪಗಳು (ಪೂರ್ವ ಚೀನಾ ಸಮುದ್ರದಲ್ಲಿನ ಈ ನಿರ್ಜನ ದ್ವೀಪಗಳು ಜಪಾನ್ನ ಹಿಡಿತದಲ್ಲಿವೆ) ಮತ್ತು ರ್ಯೂಕ್ಯೂ ದ್ವೀಪಗಳನ್ನು ವಶಪಡಿಸಿಕೊಳ್ಳುವುದು (2040-2045)
5) ಐದನೇ ಯುದ್ಧ: ಹೊರ ಮಂಗೋಲಿಯಾವನ್ನು (ಚೀನಾದ ಹಿಡಿತದಲ್ಲಿಲ್ಲದ ಸ್ವತಂತ್ರ ಮಂಗೋಲಿಯಾ) ವಶಪಡಿಸಿಕೊಳ್ಳುವುದು.
6)     ಆರನೇ ಯುದ್ಧ: ರಷ್ಯಾದ ಕೈವಶವಾದ ಭೂ ಪ್ರದೇಶಗಳನ್ನು ವಶಪಡಿಸಿಕೊಳ್ಳುವುದು (2055-2060)
ಭಾರತೀಯರಂತೂ ಸ್ವಾಭಾವಿಕವಾಗಿ "ಮೂರನೇ ಯುದ್ಧದ ಬಗ್ಗೆ" ತಿಳಿದುಕೊಳ್ಳಲು ಬಯಸುತ್ತಾರೆ. ಹಾಗಾಗೇ ಆ ಚೀನೀ ದಿನ ಪತ್ರಿಕೆ ಈ ಯುದ್ಧದ ಬಗ್ಗೆ ಏನು ಹೇಳಿದೆ ಎನ್ನುವುದನ್ನು ನೋಡೋಣ...
ದಕ್ಷಿಣ ಟಿಬೆಟ್ನಲ್ಲಿ ಅಧಿಪತ್ಯ ಸ್ಥಾಪಿಸುವುದು (2035-2040): "ಚೀನಾ ಮತ್ತು ಭಾರತ ಬಹಳ ದೊಡ್ಡ ಗಡಿಯನ್ನು ಹಂಚಿಕೊಂಡಿವೆ. ಆದರೆ ಇವೆರಡೂ ದೇಶಗಳ ನಡುವೆ ಇದುವರೆಗೂ ವಿವಾದಕ್ಕೀಡಾಗಿರುವ ಪ್ರದೇಶವೆಂದರೆ ದಕ್ಷಿಣ ಟಿಬೆಟ್. ಚೀನಾ ಮೊದಲಿನಿಂದಲೂ ಭಾರತದ "ಕಾಲ್ಪನಿಕ" ಶತ್ರುವಾಗಿದೆ. ಭಾರತೀಯ ಮಿಲಿಟರಿಯ ಪ್ರಮುಖ ಗುರಿ ಚೀನಾವನ್ನು ಹಿಂದಿಕ್ಕುವುದೇ ಆಗಿದೆ. ಈ ಗುರಿಯನ್ನು ತಲುಪುವುದಕ್ಕಾಗಿ ಭಾರತ ಅನೇಕ ವರ್ಷಗಳಿಂದ ಅಮೆರಿಕ, ರಷ್ಯಾ ಮತ್ತು ಯುರೋಪ್ ರಾಷ್ಟ್ರಗಳಿಂದ ಅತ್ಯಾಧುನಿಕ ತಂತ್ರಜ್ಞಾನಗಳನ್ನು ಆಮದು ಮಾಡಿಕೊಳ್ಳುತ್ತಿದೆ. ಮಿಲಿಟರಿ ಮತ್ತು ಆರ್ಥಿಕತೆಯ ವಿಷಯದಲ್ಲಿ ಭಾರತ ಚೀನಾದ ಹತ್ತಿರದ ಪ್ರತಿಸ್ಪರ್ಧಿ. ಭಾರತ ಸರ್ಕಾರ ಮತ್ತು ಅಲ್ಲಿನ ಮಾಧ್ಯಮಗಳು ಅಮೆರಿಕ, ರಷ್ಯಾ ಮತ್ತು ಯುರೋಪ್ನೊಂದಿಗೆ ಆಪ್ತವಾಗಿ ವರ್ತಿಸುತ್ತವೆ. ಇನ್ನೊಂದೆಡೆ ಅವು ಚೀನಾವನ್ನು ಶತ್ರುವೆಂದೇ ಪರಿಗಣಿಸುತ್ತಿವೆ. ಇದರಿಂದಾಗಿ ಚೀನಾ ಮತ್ತು ಭಾರತದ ನಡುವೆ ಬಗೆಹರಿಯಲಾಗದ ಸಮಸ್ಯೆಗಳು ಉದ್ಭವವಾಗುತ್ತಿವೆ. ಇಷ್ಟೇ ಅಲ್ಲದೆ ಭಾರತ, ತಾನು ಅಮೆರಿಕ, ರಷ್ಯಾ ಮತ್ತು ಯುರೋಪ್ನ ಸಹಾಯ ಪಡೆದು ಯುದ್ಧಗಳಲ್ಲಿ ಚೀನಾವನ್ನು ಸೋಲಿಸಬಲ್ಲೆ ಎಂಬ ಮಹತ್ವಾಕಾಂಕ್ಷೆಯಲ್ಲಿದೆ. ದೀರ್ಘಾವಧಿಯ ಸಮಸ್ಯೆಗಳಿಗೆ ಇದೂ ಕೂಡ ಒಂದು ಪ್ರಮುಖ ಕಾರಣ."
20 ವರ್ಷಗಳ ನಂತರ ಸೇನಾ ಬಲದಲ್ಲಿ ಭಾರತ ಚೀನಾಗಿಂತ ಹಿಂದುಳಿದಿರಬಹುದಾದರೂ, ಅದು ಪ್ರಪಂಚದ ಕೆಲವೇ ಕೆಲವು ಬಲಿಷ್ಠ ರಾಷ್ಟ್ರಗಳಲ್ಲಿ ಒಂದಾಗಿರಲಿದೆ ಎನ್ನುವುದಂತೂ ಸುಳ್ಳಲ್ಲ. ಒಂದು ವೇಳೆ ದಕ್ಷಿಣ ಟಿಬೆಟ್ ಅನ್ನು ವಶಪಡಿಸಿಕೊಳ್ಳಲು ಚೀನಾ ತನ್ನ ಮಿಲಿಟರಿ ಬಲವನ್ನೇನಾದರೂ ಉಪಯೋಗಿಸಿದರೆ, ಅದಕ್ಕೆ ಬಹಳ ಹೊಡೆತ ಬೀಳುವುದಂತೂ ನಿಶ್ಚಿತ. ಹಾಗಾಗೇ ಚೀನಾದ ಮುಂದಿರುವ ಇನ್ನೊಂದು ಮಾರ್ಗವೆಂದರೆ ಭಾರತವನ್ನು ಒಡೆದು ಅದನ್ನು ದುರ್ಬಲಗೊಳಿಸುವುದು. ನಿಸ್ಸಂಶಯವಾಗಿಯೂ ಅಂಥ ಯೋಜನೆಗಳು ವಿಫಲವಾಗಬಹುದು. ಆದರೆ ಚೀನಾ ಅಸ್ಸಾಂ ಮತ್ತು ಸಿಕ್ಕಿಂ ರಾಜ್ಯಗಳನ್ನು ಭಾರತದ ವಿರುದ್ಧ ಎತ್ತಿಕಟ್ಟಬಲ್ಲದು. ಅದರ ಮುಂದೆ ಈಗಿರುವ ಸುಲಭ ಮಾರ್ಗಗಳಲ್ಲಿ ಇದೂ ಕೂಡ ಒಂದು.
ಇದೂ ಕಷ್ಟವಾದರೆ, ಇನ್ನೊಂದು ಮಾರ್ಗವಿದೆ. ಪಾಕಿಸ್ತಾನಕ್ಕೆ ಅತ್ಯಾಧುನಿಕ ಶಸ್ತ್ರಾಸ್ತ್ರಗಳನ್ನು ದಂಡಿಯಾಗಿ ಪೂರೈಸಿ ಅದು 2035ರ ವೇಳೆಗೆ ದಕ್ಷಿಣ ಕಾಶ್ಮೀರವನ್ನು ವಶಪಡಿಸಿಕೊಳ್ಳುವಂತೆ ಮಾಡುವುದು. ಭಾರತ ಆ ಸಮಯದಲ್ಲಿ ಪಾಕಿಸ್ತಾನದೊಂದಿಗೆ ಸೆಣಸುತ್ತಿರುವಾಗ ಹಠಾತ್ತನೆ ದಕ್ಷಿಣ ಟಿಬೆಟ್ನಲ್ಲಿ ಬಂದು ಕೂಡುವುದು. ಹೀಗೆ ಎರಡೂ ಕಡೆಯಿಂದ ದಾಳಿಯಾದರೆ ಭಾರತ ಎರಡೂ ಯುದ್ಧಗಳಲ್ಲೂ ಸೋಲುವ ಸಾಧ್ಯತೆಗಳು ಹೆಚ್ಚಿರುತ್ತವೆ. ಅತ್ತ ಚೀನಾದ ವಶಕ್ಕೆ ದಕ್ಷಿಣ ಟಿಬೆಟ್ ಸಿಗುತ್ತದೆ, ಇತ್ತ ಪಾಕಿಸ್ತಾನ ಆರಾಮಾಗಿ ಇಡೀ ಕಾಶ್ಮೀರವನ್ನು ಆಳುತ್ತದೆ! ಒಂದು ವೇಳೆ ಈ ಯೋಜನೆಯನ್ನು ಅನುಷ್ಠಾನಕ್ಕೆ ತರುವುದು ಕಷ್ಟವಾದರೆ, ಚೀನಾಕ್ಕಿರುವ ಏಕೈಕ ಮಾರ್ಗವೆಂದರೆ ನೇರಾನೇರ ಸೇನಾ ದಾಳಿ.
ಮೊದಲ ಎರಡು ಯುದ್ಧಗಳ ನಂತರ ವಿಶ್ರಾಂತಿ ಪಡೆದಿರುವ ಚೀನಾ, ಆರ್ಥಿಕತೆ ಹಾಗೂ ಮಿಲಿಟರಿ ಕ್ಷೇತ್ರದಲ್ಲಿ ಸೂಪರ್ ಪವರ್ ಆಗಿ ಬದಲಾಗಿದೆ. ಮುಂದಿನ ವರ್ಷಗಳಲ್ಲಿ ಅದನ್ನು ಎದುರಿಸುವ ತಾಕತ್ತು ಅಮೆರಿಕ ಮತ್ತು ಯುರೋಪ್ಗೆ(ಒಂದು ವೇಳೆ ಅದು ಒಕ್ಕೂಟ ರಾಷ್ಟ್ರವಾದರೆ ಮಾತ್ರ) ಇರಲಿದೆ. ಇಲ್ಲದಿದ್ದರೆ ಅದರ ಜಾಗದಲ್ಲಿ ರಷ್ಯಾ ಇರಬಹುದು. ಆದರೆ ನನಗನ್ನಿಸಿದಂತೆ ಯುರೋಪ್ನ ಏಕೀಕರಣ ಸಂಭವನೀಯ. ತೈವಾನ್ ಮತ್ತು ಸ್ಪ್ರಾಟ್ಲಿ ದ್ವೀಪಗಳನ್ನು ವಶಪಡಿಸಿಕೊಂಡರೆ ವಾಯುಸೇನೆ, ಭೂ ಸೇನೆ ಮತ್ತು ನೌಕಾಪಡೆಯಲ್ಲಿ ಚೀನಾ ಮತ್ತಷ್ಟು ಪ್ರಬಲವಾಗಲಿದೆ. ಚೀನಾ ಮಿಲಿಟರಿ ಬಲದಲ್ಲಿ ಅಮೆರಿಕದ ನಂತರದ ಸ್ಥಾನ ಪಡೆಯಬಹುದು. ಹಾಗಾಗೇ ಈ ಯುದ್ಧವನ್ನು ಭಾರತ ಸೋಲಲಿದೆ.
ಮುಂದುವರಿಯುವ ಮುನ್ನ,  ನಾವು ಈ ಆಘಾತಕಾರಿ ಸುದ್ದಿಯನ್ನು ಪ್ರಕಟಿಸಿದ 'ವೆನ್ ವಿ ಪೋ' ಪತ್ರಿಕೆಯ ಹಿನ್ನೆಲೆಯನ್ನು ನೋಡುವುದು ಒಳಿತು. ಕಳೆದ 75 ವರ್ಷಗಳಿಂದ ಪ್ರಕಟವಾಗುತ್ತಿರುವ ಈ ದಿನಪತ್ರಿಕೆ ಅಲ್ಲಿ ಅತಿ ಹೆಚ್ಚು ಪ್ರಸಾರ ಹೊಂದಿದೆ. 1938ರ ಜನವರಿಯಲ್ಲಿ ಶಾಂಘೈನಿಂದ ಪ್ರಕಟಣೆ ಶುರು ಮಾಡಿದ ಈ ಪತ್ರಿಕೆ ಅದಾದ ಹತ್ತು ವರ್ಷಗಳ ನಂತರ ತನ್ನ ಮುಖ್ಯ ಕಚೇರಿಯನ್ನು ಹಾಂಗ್ಕಾಂಗ್ಗೆ ಸ್ಥಳಾಂತರಿಸಿತು. ಪಾಶ್ಚಿಮಾತ್ಯರು ಇದನ್ನು "ಚೀನಾದ ಮುಖವಾಣಿ"ಎಂದೇ ಟೀಕಿಸುತ್ತಾರೆ. ಆದರೂ ಒಮ್ಮೆ ಚೀನಿ ಸೇನೆ 1989ರಲ್ಲಿ ಟೀನಾಮೆನ್ ಚೌಕದಲ್ಲಿ ಪ್ರತಿಭಟನಾನಿರತರ ಮೇಲೆ ಮಾಡಿದ ದಾಳಿಯನ್ನು ಈ ಪತ್ರಿಕೆ ತೀವ್ರವಾಗಿ ಖಂಡಿಸಿತ್ತು. ಅದಾದ ನಂತರ, ಅದರ ಪ್ರಮುಖ ಸಂಪಾದಕೀಯ ವರ್ಗವನ್ನು ಓಡಿಸಲಾಯಿತು ಎನ್ನುವುದು ಬೇರೇ ವಿಚಾರ!
ಇದೆಲ್ಲವನ್ನೂ ನೋಡಿದಾಗ ಹಲವು ಪ್ರಶ್ನೆಗಳು ನಮ್ಮೆದುರಾಗುತ್ತವೆ. ಮೊದಲನೆಯದಾಗಿ, ಆ ಲೇಖನ ಪರೋಕ್ಷವಾಗಿಯಾದರೂ ಚೀನಾವನ್ನು ಬಹಳ ಕೆಟ್ಟದಾಗಿ ಚಿತ್ರಿಸುತ್ತದೆ. ಚೀನಿಯರ ಸೋ ಕಾಲ್ಡ್ "ಶಾಂತಿಯುತ ಬೆಳವಣಿಗೆ" ಮುಂದಿನ ದಿನಗಳಲ್ಲಿ ಅಷ್ಟೇನೂ ಶಾಂತಿಯುತವಾಗಿರಲಾರದು. ಒಂದು ವೇಳೆ ಚೀನಾ ಆರ್ಥಿಕವಾಗಿ ಬೆಳೆಯಿತೆಂದರೆ, ಅದರ ಸೇನೆ ಬಲಿಷ್ಠವಾಗುತ್ತಾ ಸಾಗಿತೆಂದರೆ ನಮ್ಮ ದೇಶಕ್ಕಷ್ಟೇ ಅಲ್ಲದೆ ಇಡೀ ಅಂತಾರಾಷ್ಟ್ರೀಯ ಸಮುದಾಯಕ್ಕೂ ಅಪಾಯ ಪಕ್ಕಾ ಆದದ್ದು.
ಅಂತಾರಾಷ್ಟ್ರೀಯ ಸಮುದಾಯ ಚೀನಿಯರ "ಶಾಂತಿಯುತ ಬೆಳವಣಿಗೆ"ಯ ಬಗ್ಗೆ ಕಳವಳ ವ್ಯಕ್ತಪಡಿಸುತ್ತಿರುವುದು ಅನವಶ್ಯವಕವಾಗಿಯೇನೂ ಅಲ್ಲ. ಪ್ರಪಂಚ, ಚೀನಿಯರ ಅಗಾಧ ಶಕ್ತಿಯೆದುರು ಕರಗಿ ಹೋಗುವುದಕ್ಕೂ ಮುನ್ನ ಅಂತಾರಾಷ್ಟ್ರೀಯ ಸಮುದಾಯ ಎಚ್ಚೆತ್ತುಕೊಂಡು ಇದನ್ನೆಲ್ಲ ತಡೆಯಲು ಏನು ಮಾಡಬಹುದು ಎನ್ನುವುದರತ್ತ ತಲೆ ಓಡಿಸಬೇಕು. ಎರಡನೆಯದಾಗಿ, ಇದು ಚೀನಾ ಸರ್ಕಾರದ ಹಿಡಿತದಲ್ಲಿರುವ ಅಥವಾ ಅದರ ಬೆಂಬಲಿಗನಾಗಿರುವ ಪ್ರಬಲ ಮಾಧ್ಯಮ ಮನೆಯೊಂದರಿಂದ ಭಾರತಕ್ಕೆ ದೊರೆತಿರುವ ಎಚ್ಚರಿಕೆಯೂ ಹೌದು. ಕಳೆದ ವರ್ಷವೂ ಕೂಡ ಚೀನಾ ಸರ್ಕಾರದ ಹಿಡಿತದಲ್ಲಿರುವ ಇನ್ನೊಂದು ಪ್ರಮುಖ ಪತ್ರಿಕೆಯೊಂದರಲ್ಲಿ ಆ ದೇಶದ ಪ್ರಮುಖ ಪರಿಣತನೊಬ್ಬ ಇದೇ ಧಾಟಿಯಲ್ಲಿ ಲೇಖನ ಬರೆದಿದ್ದ. ಭಾರತವನ್ನು 30 ರಿಂದ 40 ಭಾಗಗಳಾಗಿ ಒಡೆಯಬೇಕು ಎಂದಾತ ಹೇಳಿದ್ದ! ನನಗೆ ತಿಳಿದಿರುವಂತೆ, ಈ "ಆರು ಯುದ್ಧಗಳು" ಎಂಬ ಲೇಖನ ಪ್ರಕಟವಾಗಿ ತಿಂಗಳುಗಳು ಕಳೆದರೂ ಅದಕ್ಕೆ ಯಾವುದೇ ವಿರೋಧ ವ್ಯಕ್ತವಾಗಿಲ್ಲ. ಈ ಲೇಖನ ಚೀನಾದ ಪ್ರಮುಖ ಜಾಲತಾಣಗಳಲ್ಲಿ ಸುಮಾರು 100 ದಿನಗಳಿಂದ ಹರಿದಾಡುತ್ತಲೇ ಇದೆ. ಆದರೆ ಈ ಲೇಖನದ ಬಗ್ಗೆ ಚೀನಿಯರಿಂದ ಮಾತ್ರ ಪ್ರತಿಕ್ರಿಯೆ ಬರುತ್ತಿಲ್ಲ. ಇದು ನಿಜಕ್ಕೂ ಅಪಾಯಕಾರಿ ವಿದ್ಯಮಾನ. ಒಂದು ವೇಳೆ ಚೀನಿ ಸರ್ಕಾರದ ಅಂತರಂಗವನ್ನೇ ಈ ಪತ್ರಿಕೆ ಪ್ರಕಟಿಸಿದೆಯೆಂದಾದರೆ ಪ್ರಪಂಚ ಚೀನಾವನ್ನು "ಅಂತಾರಾಷ್ಟ್ರೀಯ ಸಂಬಂಧಗಳನ್ನು ಕಡೆಗಣಿಸುವ, "ಅಧಿಕಬಲವೇ ಅತ್ಯುತ್ತಮವಾದದ್ದೆಂದು" ಭಾವಿಸುವ ಅಧಿಕಾರದಾಹಿ ರಾಷ್ಟ್ರವೆಂದೇ" ನೋಡಲಿದೆ.
ಈ ಲೇಖನದ ಪ್ರಕಾರ ಚೀನಾ ಇನ್ನು 50 ವರ್ಷಗಳಲ್ಲಿ ಕೇವಲ ಭಾರತ, ಜಪಾನ್ ಮತ್ತು ವಿಯೆಟ್ನಾಂನ ಮೇಲಷ್ಟೇ ಅಲ್ಲದೆ, ರಷ್ಯಾದ ಮೇಲೂ ಯುದ್ಧ ನಡೆಸಲಿದೆ. ಹಾಗೆ ನೋಡಿದರೆ ಆ ಲೇಖನ ಯಾವುದೋ ಮೂರ್ಖನೊಬ್ಬ ತನ್ನ ಕನಸಿನಲ್ಲಿ ಕಂಡದ್ದನ್ನೇ ಸತ್ಯವೆಂದು ಬರೆದಂತಿದೆಯಾದರೂ, ಅದರಲ್ಲಿ ತೂಕವಿಲ್ಲ ಅನಿಸಿದರೂ, ಸತ್ಯವೇನೆಂಬುದನ್ನು ಚೀನಾ ಅಂತಾರಾಷ್ಟ್ರೀಯ ಸಮುದಾಯದೆದುರು ಬಹಿರಂಗಗೊಳಿಸಬೇಕಿದೆ. ಅದಾಗ್ಯೂ ಭಾರತಕ್ಕೆ ಕೇವಲ ಒಂದು ಲೇಖನವನ್ನು ಹಿಡಿದುಕೊಂಡು ಚೀನಾದಿಂದ ವಿವರಣೆ ಕೇಳುವುದಕ್ಕೆ ಸಾಧ್ಯವಿಲ್ಲವಲ್ಲ?

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement