ಬೃಹತ್ ಬೆಂಗಳೂರಿಗೆ ಕಸವೇ ಭಾರ
ಬೃಹತ್ ಬೆಂಗಳೂರು ಮಹಾನಗರದಲ್ಲೀಗ ಕಸ ವಿಲೇವಾರಿ ದೊಡ್ಡ ತಲೆಬೇನೆಯಾಗಿ...
ಬೃಹತ್ ಬೆಂಗಳೂರು ಮಹಾನಗರದಲ್ಲೀಗ ಕಸ ವಿಲೇವಾರಿ ದೊಡ್ಡ ತಲೆಬೇನೆಯಾಗಿ ಪರಿಣಮಿಸಿದೆ. ವಸತಿ ಪ್ರದೇಶಗಳಲ್ಲಿ ಅಪಾರ ಪ್ರಮಾಣದಲ್ಲಿ ನಿತ್ಯ ಸಂಗ್ರಹವಾಗುವ ಕಸವನ್ನು ಏನು ಮಾಡಬೇಕೆನ್ನುವುದೇ ಪಾಲಿಕೆಗೆ ಸವಾಲಾಗಿ ಕಾಡಿಬದೆ.
ಅಂದಹಾಗೆ ಇದಕ್ಕೆ ಪರಿಹಾರವೇ ಇಲ್ಲ ಅಂದುಕೊಳ್ಳುವುದು ತಪ್ಪು. ಎಲ್ಲಾ ಸಮಸ್ಯೆಗೂ ಪರಿಹಾರ ಇದ್ದೇ ಇರುತ್ತದೆ. ಅದೇ ರೀತಿ ಬೆಂಗಳೂರು ಕಸಕ್ಕೂ ಒಂದು ಪರಿಣಾಮಕಾರಿ ಮಾರ್ಗ ಇದೆ. ಅದಕ್ಕೆ ನಾವು ಅಭಿವೃದಿ ಹೊಂದಿರುವ ರಾಷ್ಟ್ರಗಳ ನಿರ್ವಹಣೆಯ ಅಧ್ಯಯನ ಮಾಡಬೇಕಿದೆ. ಜಪಾನ್, ಚೈನಾ, ಇಸ್ರೇಲ್ ಮತ್ತಿತರ ರಾಷ್ಟ್ರಗಳು ಕೆಲ ವರ್ಷಗಳ ಹಿಂದೆ ಬೆಂಗಳೂರಿನ ಮಾದರಿಯಲ್ಲೇ ಕಸದ ಸಮಸ್ಯೆ ಎದುರಿಸುತ್ತಿದ್ದವು. ಕೆಲವೇ ವರ್ಷದಲ್ಲಿ ಈ ಸಮಸ್ಯೆಗೆ ಪರಿಣಾಮಕಾರಿ ಹಾಗೂ ದೀರ್ಘಕಾಲೀನ ಪರಿಹಾರ ಕಂಡುಕೊಂಡಿವೆ. ಇವು ಬೆಂಗಳೂರು ಮಹಾನಗರದ ಬಗೆಹರಿಯದ ಕಸದ ಸಮಸ್ಯೆಗೆ ಪರಿಹಾರವಾಗಿಯೂ ಲಭಿಸಬಹುದಾಗಿದೆ.
2004ನೇ ಇಸವಿ ಸಮಯ. ಘನತ್ಯಾಜ್ಯ ಅದರಲ್ಲೂ ಗೃಹತ್ಯಾಜ್ಯ ಸಂಗ್ರಹದಲ್ಲಿ ಚೀನಾ ದೇಶ ಅಮೆರಿಕವನ್ನು ಹಿಂದಿಕ್ಕಿ ಮುಂದೆ ಬಂದಿತ್ತು. ಕೇವಲ ಗ್ರಾಮೀಣ ಭಾಗದಲ್ಲಿ ಸಂಗ್ರಹವಾಗುವ ತ್ಯಾಜ್ಯದ ಪ್ರಮಾಣ 209 ದಶಲಕ್ಷ ಟನ್ ಆಗಿತ್ತು. ನಗರದ ತ್ಯಾಜ್ಯಗಳು ಇದರ ಎರಡಷ್ಟಾಗಿದ್ದವು. ಇದು ಮುಂದಿನ ವರ್ಷಗಳಲ್ಲಿ ವಾರ್ಷಿಕ 220 ದಶಲಕ್ಷ ಟನ್ವರೆಗೂ ತಲುಪಿತು. ಇದಕ್ಕೆ ಕಾರಣ ಅಪಾರ ಸಂಖ್ಯೆಯಲ್ಲಿ ಹೆಚ್ಚುತ್ತಿರುವ ಜನಸಂಖ್ಯೆ, ತ್ಯಾಜ್ಯ ನಿರ್ವಹಣೆ ರೂಪ ಕಾರಣ ಅನ್ನಲಾಗುತ್ತಿದೆ. ವಿಶ್ವಬ್ಯಾಂಕ್ ಮಾಹಿತಿ ಪ್ರಕಾರ ಚೀನಾದಲ್ಲಿ ಘನ ತ್ಯಾಜ್ಯ ಪ್ರಮಾಣ 2030ರ ಹೊತ್ತಿಗೆ 533 ದಶಲಕ್ಷ ಟನ್ಗೆ ಏರಲಿದೆ ಎನ್ನಲಾಗುತ್ತಿದೆ.
ಇದಕ್ಕೆ ಚೀನಾ ಪರಿಣಾಮಕಾರಿ ಪರಿಹಾರ ಕಂಡುಕೊಂಡಿತು. ಏಕೆಂದರೆ ಇದು ಆ ದೇಶಕ್ಕೆ ಅನಿವಾರ್ಯವಾಗಿತ್ತು ಕೂಡ. ಏಕೆಂದರೆ ಇದೇ ರೀತಿ ಕಸ ಸಂಗ್ರಹವಾಗುತ್ತಾ ಹೋದರೆ, 2020ರ ಹೊತ್ತಿಗೆ ಚೀನಾದಲ್ಲಿ ಕಸ ಸಂಗ್ರಹಿಸಿಡಲು ಬಳಸುತ್ತಿರುವ ಭೂಮಿ ಸಂಪೂರ್ಣ ಭರ್ತಿಯಾಗಲಿದೆ. ನಂತರ ಸಂಗ್ರಹವಾಗುವ ಕಸ ವಿಲೇವಾರಿ ಹೇಗೆ ಎಂಬ ತಲೆಬಿಸಿ ಆರಂಭವಾಯಿತು. ಈ ಪ್ರಮಾಣದ ತ್ಯಾಜ್ಯವನ್ನು ಏನು ಮಾಡುವುದು ಎನ್ನುವುದು ತಲೆ ಬಿಸಿಯಾದಾಗ ವೆಸ್ಟರ್ನ್ ಕೆಂಟುಕಿ ವಿಶ್ವವಿದ್ಯಾಲಯದ ಜತೆ ಚೀನಾ ಪರಿಸರ ಫೋರಂ ಒಪ್ಪಂದ ಮಾಡಿಕೊಂಡಿತು. ತ್ಯಾಜ್ಯ ಹೆಚ್ಚಳವನ್ನು ತಡೆಯಲು ಸಾಧ್ಯವೇ ಇಲ್ಲ. ಆದ್ದರಿಂದ ನಿಯಂತ್ರಣ ಸಾಧಿಸುವುದಾದರೆ ಅದು ಗೃಹ ತ್ಯಾಜ್ಯ ನಿಯಂತ್ರಣದಿಂದ ಕೊಂಚ ಯಶಸ್ಸು ಸಾಧ್ಯ ಎಂದು ಮನಗಂಡ ಸರ್ಕಾರ ಆ ನಿಟ್ಟಿನಲ್ಲಿ ಯೋಜನೆ ರೂಪಿಸಿತು. ಕಸ ಸಂಗ್ರಹವಾಗುವ ಪ್ರಮಾಣ, ಯಾವ ಪ್ರದೇಶದಲ್ಲಿ ಯಾವ ಮಾದರಿಯ ಕಸ ಸಂಗ್ರಹವಾಗುತ್ತದೆ ಎಂದು ಅರಿತು ಅದನ್ನು ಪ್ರತ್ಯೇಕಿಸಿ ವಿಲೇವಾರಿ ಮಾಡುವ ಕಾರ್ಯ ಆರಂಭಿಸಿತು.
ಇದೇ ಪ್ರಮಾಣದಲ್ಲಿ ಕಸದ ಹೆಚ್ಚಳ ಬೆಂಗಳೂರಿನಲ್ಲೂ ಆಗುತ್ತಿದೆ. ಒಣ ಹಾಗೂ ಹಸಿ ಕಸ ಎಂದು ವಿಭಾಗಿಸುವ ಕಾರ್ಯ ಇಲ್ಲಾಗುತ್ತಿದೆ. ಆದರೆ ಸಹಕಾರ ಹಾಗೂ ಬದಲಾವಣೆಯ ಕುರಿತು ಪಾಲಿಕೆ ಅಧಿಕಾರಿಗಳು ಜನರನ್ನು ಜಾಗೃತಗೊಳಿಸುವ ಕಾರ್ಯದಲ್ಲಿ ವೈಫಲ್ಯ ಕಾಡುತ್ತಿದೆ. ಪರಿಣಾಮಕಾರಿ ಮಾರ್ಗ ಬಳಸಿ ಪ್ರಚಾರ ಕಾರ್ಯ ಕೈಗೊಂಡರೆ ಅದು ಅನುಕೂಲ. ಚೀನಾ ಮೊಟ್ಟ ಮೊದಲು ಮಾಡಿದ್ದು ಯಾವ ಭಾಗದಲ್ಲಿ ಯಾವ ಮಾದರಿ ಕಸ ಸಂಗ್ರಹವಾಗುತ್ತದೆ ಎನ್ನುವುದರ ಅಧ್ಯಯನ. ಆ ಪ್ರಕಾರ ಸಾಮಾನ್ಯರ ವಸತಿ ಪ್ರದೇಶದಲ್ಲಿ ಕಾಗದ ತ್ಯಾಜ್ಯ ಶೇ. 30, ಸಾವಯವ ವಸ್ತುಗಳು ಶೇ.26ರಿಂದ 27, ಪ್ಲಾಸ್ಟಿಕ್ ಶೇ.18, ಗಾಜು ಶೇ. 15, ಮೆಟಲ್ ಶೇ.5 ರಷ್ಟು ತ್ಯಾಜ್ಯ ಸಂಗ್ರಹವಾಗಲಾರಂಭಿಸಿತು. ಕಡಿಮೆ ಆದಾಯ ಹೊಂದಿದ ನಾಗರಿಕರು ವಾಸಿಸುವ ಸ್ಥಳದಲ್ಲಿ ಹೆಚ್ಚಿನ ತ್ಯಾಜ್ಯ ಸಂಗ್ರಹವಾಗಲಾರಂಭಿಸಿತು ಅಂತ ವಿಶ್ವಬ್ಯಾಂಕ್ ಹೇಳುತ್ತದೆ. ಶ್ರೀಮಂತರು ವಾಸವಾಗಿರುವ ಪ್ರದೇಶದಲ್ಲಿ ಸಾವಯವ ತ್ಯಾಜ್ಯ ಶೇ.50, ಕಲ್ಲಿದ್ದಲು ಮಸಿ ಹಾಗೂ ಬೂದಿ ಶೇ.40, ಗಾಜು ಶೇ.2 ಹಾಗೂ ಪೇಪರ್ ಹಾಗೂ ಪ್ಲಾಸ್ಟಿಕ್ ಶೇ.5 ಸಂಗ್ರಹವಾಗುತ್ತಿದ್ದವು. ಕಸ ಕಡ್ಡಿ ಜತೆ ಪೇಪರ್ ಇತ್ಯಾದಿ ತ್ಯಾಜ್ಯವನ್ನು ಮರು ಬಳಕೆಗೆ ಸಿದ್ಧಪಡಿಸಿದರೆ ಅದನ್ನು ಕಡಿಮೆ ಬೆಲೆಗೆ ಮಾರಾಟ ಮಾಡಬಹುದು ಹಾಗೂ ಅನಗತ್ಯವಾಗಿ ಉಂಟಾಗುವ ತ್ಯಾಜ್ಯ ಸಂಗ್ರಹವೂ ಕಡಿಮೆ ಆಗುತ್ತದೆ.
2030ರ ಹೊತ್ತಿಗೆ ತ್ಯಾಜ್ಯ ಮರುಬಳಕೆಯನ್ನು ಶೇ.50ಕ್ಕೆ ಏರಿಸುವ ಗುರಿಯನ್ನು ಚೀನಾ ಹೊಂದಿದೆ. ಈ ಮೂಲಕ ಭೂಮಿಯ ಮೇಲೆ ಸಂಗ್ರಹವಾಗುತ್ತಿದ್ದ 41 ದಶಲಕ್ಷ ಟನ್ ತ್ಯಾಜ್ಯ ಮರು ಬಳಕೆ ಮೂಲಕ ಸದ್ವಿನಿಯೋಗವಾಗಲಿದೆ. ಇದೇ ಕಾರ್ಯ ಬೆಂಗಳೂರಲ್ಲಿ ಆದರೆ ಇಲ್ಲಿ ಪರಿಣಾಮಕಾರಿ ಪರಿಹಾರ ಕಂಡುಕೊಳ್ಳುವುದು ಸಾಧ್ಯವಾಗಬಹುದು. ವೈಜ್ಞಾನಿಕ ಕಸ ವಿಲೇವಾರಿಗೆ ಸೂಕ್ತ ಯೋಜನೆಗಳನ್ನು ರೂಪಿಸದ ಕಾರಣ ಸಮಸ್ಯೆಗೆ ಕಾರಣವಾಗಿದೆ. ಬಿಎಂಪಿ ಬಿಬಿಎಂಪಿಯಾದ ನಂತರ ಕಸ ಉತ್ಪತ್ತಿ ಹೆಚ್ಚಾಗಿದೆ. ಬಿಬಿಎಂಪಿ ವಾರ್ಷಿಕ 350 ಕೋಟಿ ರು. ತ್ಯಾಜ್ಯ ವಿಲೇವಾರಿಗಾಗಿ ವೆಚ್ಚ ಮಾಡುತ್ತಿದೆ. ಆದಾಗ್ಯೂ ಸಮರ್ಪಕ ಕಸ ವಿಲೇವಾರಿಯಲ್ಲಿ ವಿಫಲವಾಗಿರುವುದು ವ್ಯಾಪಕ ಟೀಕೆಗೆ ಒಳಗಾಗಿದೆ. ಇದರಿಂದ ಈ ಹಣೆಪಟ್ಟಿ ಕಳಚಿ ಆಚೆ ಬಂದು ಒಂದಿಷ್ಟು ಜನಸ್ನೇಹಿ ಹಾಗೂ ಅನುದಾನದ ಸಮರ್ಪಕ ಬಳಕೆಗೆ ಕ್ರಮ ಕೈಗೊಳ್ಳಬೇಕಿದೆ.
ಇಲ್ಲಿಯೂ ನಮಗೆ ಚೀನಾ ಮಾದರಿ ಅಗಬಹುದು. ನಗರ ಪ್ರದೇಶದಲ್ಲಿ ಸ್ಥಳೀಯ ಸರ್ಕಾರ ಹಣಕೊಟ್ಟು ತ್ಯಾಜ್ಯವನ್ನು ಸಂಗ್ರಹಿಸುವ ಕಾರ್ಯ ಮಾಡುತ್ತದೆ. ಇದು ಔಪಚಾರಿಕ. ಇನ್ನು ಸ್ಥಳೀಯವಾಗಿ ಕೆಲ ವ್ಯಕ್ತಿಗಳು ತಮ್ಮ ಕೈಗಾರಿಕೆ ಅಥವಾ ಇನ್ನಿತರ ಕಾರ್ಯಗಳಿಗೆ ಸಂಗ್ರಹಿಸುತ್ತಾರೆ. ಇದು ಅನೌಪಚಾರಿಕ. ಇವರು ತ್ಯಾಜ್ಯದ ಮರುಬಳಕೆ ವಸ್ತು ತಯಾರಿಕೆಗೆ ಇದನ್ನು ಒಯ್ಯುತ್ತಾರೆ. ಇದಕ್ಕೆ ಅವರು ಸ್ಥಳೀಯ ಆಡಳಿತಕ್ಕೆ ಹಣ ಭರಿಸುತ್ತಾರೆ. ಅವರಿಗೆ ಅದು ಉಪ ಆದಾಯದ ಮೂಲವೂ ಕೂಡ ಆಗಿದೆ.
ಬೆಂಗಳೂರು ನಗರದ ಹೋಟೆಲ್ಗಳಿಂದ ನಿತ್ಯ 1000 ಟನ್ ಹಸಿ ತ್ಯಾಜ್ಯ ಉತ್ಪಾದನೆಯಾಗುತ್ತದೆ. ಇದನ್ನೇ ಬಳಸಿಕೊಂಡು ಹೋಟೆಲ್ ಮಾಲೀಕರಿಗೆ ಬಯೋ ಗ್ಯಾಸ್ ಘಟಕ ಸ್ಥಾಪಿಸಲು ಸೂಚಿಸಲಾಗಿತ್ತು. ಆದರೆ ಅದಿನ್ನೂ ಫಲಕೊಟ್ಟಿಲ್ಲ. ಆ ಕಾರ್ಯಕ್ಕೆ ಉತ್ತೇಜನ ಸಿಕ್ಕಲ್ಲಿ ಬಹುಬೇಗ ಒಂದಿಷ್ಟು ಕಸದ ಸಮಸ್ಯೆಗೆ ಪರಿಹಾರ ಕಾಣಬಹುದು. ಮಹಾನಗರದಲ್ಲಿ ಮನೆ ಮುಂದೆ ರಾಶಿ ಬಿದ್ದ ಕಸವನ್ನು ಎತ್ತಲು ಸಕಾಲಕ್ಕೆ ಪೌರ ಕಾರ್ಮಿಕರು ಬರುತ್ತಿಲ್ಲ ಎನ್ನುವ ಆರೋಪ ಇದೆ. ಕಾರ್ಮಿಕರಿಗೆ ವೇತನ ನೀಡುತ್ತಿಲ್ಲ ಅನ್ನುವ ಆರೋಪ ಒಂದೆಡೆ ಇದ್ದರೆ, ಇನ್ನೊಂದೆಡೆ ಕಸ ವಿಲೇವಾರಿ ಘಟಕಗಳಿಗೆ ಕಸ ಸಾಗಿಸುವ ಲಾರಿಗಳ ಸಂಖ್ಯೆಯೂ ಕಡಿಮೆಯಾಗಿದೆ. ಶೇ.40ರಷ್ಟು ವಾಹನಗಳು ಲಭ್ಯವಾಗುತ್ತಿಲ್ಲ ಎನ್ನುವುದು ಗಂಭೀರ ಆರೋಪ. ಆದ್ದರಿಂದ ಕಸ ವಿಲೇವಾರಿ ಗುತ್ತಿಗೆ ಪಡೆದಿರುವವರು ಕಾರ್ಮಿಕರನ್ನು ವ್ಯವಸ್ಥಿತವಾಗಿ ನೋಡಿಕೊಳ್ಳುವ ಹಾಗೂ ವಾಹನಗಳ ಕೊರತೆ ಎದುರಾಗದಂತೆ ಎಚ್ಚರವಹಿಸುವ ಕಾರ್ಯ ಮಾಡಬೇಕು.
ಜಪಾನ್ ಕೂಡ ಕಸ ಸಂಗ್ರಹದಲ್ಲಿ ಒಂದಿಷ್ಟು ಆಧುನಿಕತೆ ಅಳವಿಡಿಸಿಕೊಂಡು, ಪರಿಣಾಮಕಾರಿ ಪರಿಹಾರ ಕಂಡುಕೊಂಡಿದೆ. ಇಲ್ಲಿ ಕೂಡ ಎರಡು ವಿಧದಲ್ಲಿ ಕಸ ಪ್ರತ್ಯೇಕಿಸಲಾಗುತ್ತದೆ. ಇಲ್ಲಿ ಎರಡು ಪ್ರತ್ಯೇಕ ಡಬ್ಬಿ ಇಡಲಾಗುತ್ತದೆ. ಮನೆಯವರೇ ಒಂದು ಡಬ್ಬದಲ್ಲಿ ಸಾಮಾನ್ಯ ಕಸವನ್ನು ಹಾಗೂ ಮತ್ತೊಂದರಲ್ಲಿ ಮರುಬಳಕೆ ಮಾಡುವ ವಸ್ತುಗಳು ಹಾಕುತ್ತಾರೆ. ನಿಗದಿಪಡಿಸಿದ ದಿನದಂದು, ದಿನದ ಕಸ ಮತ್ತು ಮರುಬಳಕೆ ತ್ಯಾಜ್ಯವನ್ನು ಸಂಗ್ರಹಿಸಲಾಗುತ್ತದೆ. ವೇಳೆಗೆ ಸರಿಯಾಗಿ ಪಾಲಿಕೆಯ ಪೌರ ಕಾರ್ಮಿಕರು ಬಂದು ಕಸವನ್ನು ತೆಗೆದುಕೊಂಡು ಹೋಗುವರು. ಅಪಾಯಕಾರಿ ವಸ್ತುಗಳನ್ನು ಕೂಡ ಪ್ರತ್ಯೇಕವಾಗಿ ವಿಲೇವಾರಿ ಮಾಡುವುದರಿಂದ ಇಲ್ಲಿನ ಕಸ ವಿಲೇವಾರಿ ಸಮಸ್ಯೆಯೇ ಅಲ್ಲ ಅನ್ನಿಸಿಕೊಂಡಿದೆ. ನಮ್ಮಲ್ಲಿ ಯಾವುದೇ ಕಾನೂನು ಜಾರಿ ಮಾಡಿದರೂ ನಮ್ಮಲ್ಲಿ ಜನರು ಸರಿಯಾಗಿ ಪಾಲಿಸುವುದಿಲ್ಲ. ಯಾಕೆಂದರೆ ನಮ್ಮ ಜನರಲ್ಲಿ ಭಾವನೆಗಳೇ ಹಾಗಿವೆ. ತಮ್ಮ ಮನೇಲಿರೋ ಕಸ ಹೋದ್ರೆ ಸಾಕು ಎಂಬ ಭಾವನೆ. ಇದರ ಜೊತೆಗೆ ನಮ್ಮ ಸರ್ಕಾರವು ಕೂಡ ಸರಿಯಾದ ಕಸ ವಿಲೇವಾರಿ ಯೋಜನೆಗಳನ್ನು ಕೈಗೊಳ್ಳಲಿ ಮತ್ತು ಆ ಕಸದಿಂದ ರಸವನ್ನು ತೆಗೆಯುವ ಕೆಲಸ ಮಾಡಬೇಕಾಗಿದೆ.
ಮುಖ್ಯಮಂತ್ರಿ ಸಿದ್ದರಾಮಯ್ಯನವರು ಬಜೆಟ್ನಲ್ಲಿ ಪಾಲಿಕೆಗೆ ನೂರು ಕೋಟಿ ರು. ಘೋಷಿಸಿದ್ದಾರೆ. ಆದರೆ, ಬಿಬಿಎಂಪಿಯ ಒಟ್ಟಾರೆ 8,520 ಕೋಟಿ ರೂ. ಬಜೆಟ್ನಲ್ಲಿ ಘನತ್ಯಾಜ್ಯ ನಿರ್ವಹಣೆಗಾಗಿ ಮೀಸಲಿಟ್ಟ ಒಟ್ಟಾರೆ ಹಣ 100 ಕೋಟಿ ರುಪಾಯಿ. ಹಾಗಾಗಿ, ಕಸದ ಸಮಸ್ಯೆ ನಿವಾರಣೆಗೆ ಸರ್ಕಾರ ಘೋಷಿಸಿದ ಹಣವನ್ನೇ ಎದುರು ನೋಡುತ್ತಿದೆ. ಕಳೆದ ಬಾರಿ ಬಜೆಟ್ನಲ್ಲಿ ಕಸಕ್ಕಾಗಿ 320 ಕೋಟಿ ರೂ. ಮೀಸಲಿಡಲಾಗಿತ್ತು. ಆದರೆ, ಈ ಬಾರಿ ಈ ಗಾತ್ರವನ್ನು ನೂರು ಕೋಟಿಗೆ ಇಳಿಸಲಾಗಿದೆ. ಈ ರೀತಿ ಕಸವನ್ನು ನಿರ್ಲಕ್ಷಿಸುವುದು ಪಾಲಿಕೆಗೆ ಒಳಿತಲ್ಲ.
ಬೆಂಗಳೂರಿನಲ್ಲಿ ಪ್ರತಿ ತಿಂಗಳು 10,000 ದಿಂದ 12,000 ಟನ್ಗಳಷ್ಟು ಇ-ಕಸ ಹೊರಬೀಳುತ್ತಿದೆ. ಕಸ ವಿಲೇವಾರಿ ಮಾಡುವವರಿಗೆ ಇ-ಕಸ ಹಾಗೂ ಅದರ ದುಷ್ಪರಿಣಾಮದ ಬಗ್ಗೆ ಜ್ಞಾನವಿಲ್ಲ. ದಶಕದ ಕೆಳಗೆ ಈ ಬಗ್ಗೆ ನಿಯಮಾವಳಿಯನ್ನು ರಾಜ್ಯ ಮಾಲಿನ್ಯ ನಿಯಂತ್ರಣ ಕೇಂದ್ರ ರೂಪಿಸಿದ್ದರೂ ಸಮರ್ಪಕವಾಗಿ ಬಳಕೆ ಆಗುತ್ತಿಲ್ಲ. ಇ-ಕಸ ವಿಲೇವಾರಿ ಮಾಡುವವರು ಬರಿಗೈಯಲ್ಲಿ ಕೆಲಸ ಮಾಡುವುದು ಕಂಡುಬರುತ್ತದೆ. ಈ ಕಸದ ಸಂಪರ್ಕದಿಂದ ನರ ದೌರ್ಬಲ್ಯ, ಕರುಳು ಬೇನೆ, ಕಿಡ್ನಿ, ಜನನಾಂಗ, ಮೆದುಳಿಗೆ ಸಂಬಂಧಿಸಿದ ಕಾಯಿಲೆಗೆ ಹಲವಾರು ಜನ ತುತ್ತಾಗುತ್ತಿದ್ದಾರೆ. ಈ ರೀತಿ ಕಸ ವಿಲೇವಾರಿ ಮಾಡುವವರಲ್ಲಿ ಮಹಿಳೆಯರು ಹಾಗೂ ಮಕ್ಕಳ ಸಂಖ್ಯೆ ಅಧಿಕವಾಗಿರುವುದು ಆತಂಕಕಾರಿ ವಿಷಯ.
- ಡಾ. ಸುಧಾಕರ, ಶಾಸಕರು
anisikeprabha@gmail.com