ಅಮೆರಿಕದಲ್ಲಿ ದೀಪಾವಳಿ
ದೀಪಾವಳಿ ಆರಂಭವಾಗುತ್ತಿದ್ದಂತೆ, ಭಾರತ ಹಾಗೂ ಅಮೆರಿಕ ಸಂಯುಕ್ತ ಸಂಸ್ಥಾನದ ದೇವಾಲಯ, ಮನೆ ಹಾಗೂ ಮನಗಳನ್ನು...
ದೀಪಾವಳಿ ಆರಂಭವಾಗುತ್ತಿದ್ದಂತೆ, ಭಾರತ ಹಾಗೂ ಅಮೆರಿಕ ಸಂಯುಕ್ತ ಸಂಸ್ಥಾನದ ದೇವಾಲಯ, ಮನೆ ಹಾಗೂ ಮನಗಳನ್ನು ಹಣತೆಗಳ ಬೆಳಕು ತುಂಬುತ್ತದೆ. ಅಮೆರಿಕದಲ್ಲಿ ಗಣನೀಯ ಪ್ರಮಾಣದಲ್ಲಿ ಹಿಂದೂಗಳಿರುವುದರಿಂದ (ಈಗದು 15 ಲಕ್ಷ ಎಂದು ಅಂದಾಜು) ದೀಪಾವಳಿಯ ಸಂಭ್ರಮ ಈಚೆಗೆ ಹೆಚ್ಚುತ್ತಿದೆ. ಭಾರತದಲ್ಲಿ ದೀಪಾವಳಿಯನ್ನು ಆಚರಿಸುವಂತೆಯೇ, ಭಾರತೀಯ ಸಂಜಾತ ಅಮೆರಿಕನ್ನರೂ ದೀಪಗಳಿಂದ ತಮ್ಮ ಮನೆಯನ್ನು ಸಿಂಗರಿಸಿ, ಉಡುಗೊರೆಗಳನ್ನು ವಿನಿಮಯ ಮಾಡಿಕೊಂಡು, ಕುಟುಂಬದೊಡನೆ ಕಾಲ ಕಳೆಯುತ್ತಾರೆ. ಅಧ್ಯಕ್ಷರ ನಿವಾಸವಾದ ಶ್ವೇತ ಭವನದಲ್ಲಿ 2003ರಿಂದಲೂ ದೀಪಾವಳಿಯನ್ನು ಆಚರಿಸಲಾಗುತ್ತಿದೆ. ಅಧ್ಯಕ್ಷ ಒಬಾಮಾ ಅವರು ವೈಯಕ್ತಿಕವಾಗಿ 2009ರ ದೀಪಾವಳಿ ಆಚರಣೆಯಲ್ಲಿ ಪಾಲ್ಗೊಂಡಿದ್ದರು. ಭಾರತಕ್ಕೆ 2010ರಲ್ಲಿ ಭೇಟಿ ನೀಡಿದ್ದಾಗ, ಅಧ್ಯಕ್ಷ ಒಬಾಮಾ ಹಾಗೂ ಅವರ ಪತ್ನಿ ಮಿಶೆಲ್ ಒಬಾಮಾ ಅವರು ದೀಪಾವಳಿ ಸಂಭ್ರಮವನ್ನು ಮುಂಬೈನ ಹೋಲಿ ನೇಮ್ ಪ್ರೌಢಶಾಲೆಯಲ್ಲಿ ಆಚರಿಸಿದರು. ದೀಪಾವಳಿಯಲ್ಲಿ ಅಧ್ಯಕ್ಷರು ಭಾಗಿಯಾಗಿರುವುದು ಅಮೆರಿಕದ ಧಾರ್ಮಿಕ ಹಾಗೂ ಜನಾಂಗೀಯ ವೈವಿಧ್ಯವನ್ನು ತೋರಿಸುವುದರ ಜೊತೆಗೆ ನಮ್ಮೆರಡೂ ದೇಶಗಳ ನಡುವಣ ಸಹಕಾರ ಹಾಗೂ ಸ್ನೇಹವನ್ನೂ ತೋರಿಸುತ್ತದೆ. 'ಪರಸ್ಪರ ಸಮಾನ ಆಸಕ್ತಿಗಳು ಹಾಗೂ ಮೌಲ್ಯಗಳನ್ನು ಹಂಚಿಕೊಳ್ಳುವ ಅಮೆರಿಕ ಸಂಯುಕ್ತ ಸಂಸ್ಥಾನ ಹಾಗೂ ಭಾರತಗಳ ನಡುವಣ ಸಂಬಂಧ, 21ನೇ ಶತಮಾನದ ಬಹು ಪ್ರಮುಖವಾದ ಪಾಲುದಾರಿಕೆ' ಎಂದು ಅಧ್ಯಕ್ಷರು ಹಲವಾರು ಬಾರಿ ಹೇಳಿದ್ದಾರೆ.
ಅಮೆರಿಕದಲ್ಲಿಯೂ ಕೂಡಾ ದೀಪಾವಳಿ ಒಂದು ಸಮುದಾಯಿಕ ಕಾರ್ಯಕ್ರಮ. ಉದಾಹರಣೆಗೆ ಹೇಳುವುದಾದರೆ, ಈ ಬಾರಿ 'ಟೈಮ್ಸ್ ಚೌಕದಲ್ಲಿ ದೀಪಾವಳಿ' ಉತ್ಸವವು ಫ್ಯಾಷನ್ ಶೊ, ಭಾರತೀಯ ಆಹಾರದ ವಿವಿಧ ಬಗೆಗಳು ಹಾಗೂ ಬಾಲಿವುಡ್ ನಟ ರಣಬೀರ್ ಕಪೂರ್ ಅವರ ಕಾರ್ಯಕ್ರಮಗಳ ಮೂಲಕ ಭಾರತೀಯ ಸಂಸ್ಕೃತಿಯ ತುಣುಕನ್ನು ಪರಿಚಯಿಸಲಿದೆ. ನ್ಯೂಯಾರ್ಕ್ ನಗರದ ಎಲ್ಲ ಬೀದಿಗಳು, ಭಾರತೀಯ ಸಂಜಾತ ಅಮೆರಿಕನ್ನರು ಹಾಗೂ ಇತರ ಜನಾಂಗಗಳು, ಧರ್ಮಗಳು, ಹಾಗೂ ಸಂಸ್ಕೃತಿಯ ಎಲ್ಲ ಜನ ಸಮುದಾಯಗಳು ಈ ಸಂಭ್ರಮದಲ್ಲಿ ಭಾಗಿ. ಕ್ಯಾಲಿಫೋರ್ನಿಯಾದ ಕ್ಯೂಪರ್ಟಿನೋನಲ್ಲಿ ದೀಪಾವಳಿ ಸಂಭ್ರಮಕ್ಕೆ ವಿಭಿನ್ನ ಪಾಲುದಾರ ದೊರೆತಿದ್ದ -ಅದು ಹೃದಯ ಸಂಬಂಧಿ ಆರೋಗ್ಯ. ದಕ್ಷಿಣ ಏಷ್ಯನ್ ಹೃದಯ ಕೇಂದ್ರ ಹಾಗೂ ಕ್ಯೂಪರ್ಟಿನೋ ವಾಣಿಜ್ಯ ಮಂಡಳಿಯ ಸಹಯೋಗದೊಂದಿಗೆ ರೂಪಿಸಲಾಗಿದ್ದ ಈ ಕಾರ್ಯಕ್ರಮವು ಭಾರತೀಯ ಸಂಸ್ಕೃತಿಯನ್ನು ಪರಿಚಯಿಸುವುದರೊಂದಿಗೆ, ಹೃದಯ ಸಂಬಂಧಿ ಕಾಯಿಲೆಗಳು ಹಾಗೂ ಮಧುಮೇಹವನ್ನು ತಡೆಯಲು ಬೇಕಾದ ಆರೋಗ್ಯಕರ ಹವ್ಯಾಸಗಳ ಕುರಿತು ಸಾರ್ವಜನಿಕರಿಗೆ ಮಾಹಿತಿ ನೀಡಿಕೆಗೆ ಸದ್ವಿನಿಯೋಗ. ಟೆಕ್ಸಾಸ್ ಸಾಮ್ರಾಜ್ಯದ ಡಲ್ಲಾಸ್ ಹಾಗೂ ಫೋರ್ಟ್ವರ್ಥ್ ನಗರಗಳು ಆಚರಿಸುವ ಭಾರಿ ಪ್ರಮಾಣದ ದೀಪಾವಳಿ ಉತ್ಸವಕ್ಕೆ ಪ್ರತಿವರ್ಷವೂ 50,000ದಷ್ಟು ಜನ ಸೇರುತ್ತಾರೆ. ದೀಪಾವಳಿಯೂ ಸೇರಿದಂತೆ ದಕ್ಷಿಣ ಏಷ್ಯಾದ ಅನೇಕ ಉತ್ಸವಗಳ ಕುರಿತ ಜಾಗೃತಿ ಸಮಾಜದ ಅನೇಕ ಸ್ಥರಗಳಲ್ಲಿ, ಸ್ಥಳೀಯ ಸಮುದಾಯಗಳಲ್ಲಿ ಹಾಗೂ ರಾಷ್ಟ್ರಮಟ್ಟದಲ್ಲಿಯೂ ಮೂಡಿದೆ. ದುಷ್ಟತನದ ಮೇಲೆ ಒಳ್ಳೆಯತನದ ವಿಜಯವವನ್ನು ದೀಪಾವಳಿ ಅನೇಕರಿಗೆ ಪ್ರತಿನಿಧಿಸುತ್ತದೆ. ಅಲ್ಲದೇ, ಉಭಯ ದೇಶಗಳೂ ಬಲವಾಗಿ ನಂಬುವ ಮೌಲ್ಯಗಳಾದ ಕೌಟುಂಬಿಕ ಸಂಭ್ರಮ ಹಾಗೂ ಸಮುದಾಯದ ಶಕ್ತಿಯನ್ನೂ ಈ ಹಬ್ಬ ನೆನಪಿಸುತ್ತದೆ. ಎಲ್ಲಕ್ಕಿಂತ ಮುಖ್ಯವಾಗಿ, ಇದ್-ಉಲ್ಫಿತ್ರ್, ಗುರುನಾನಕರ ಗುರುಪೂರಬ್, ಕ್ರಿಸ್ಮಸ್ ಹಾಗೂ ಇತರ ಅನೇಕ ಧಾರ್ಮಿಕ ಹಾಗೂ ಸಾಂಸ್ಕೃತಿಕ ಪರ್ವ ದಿನಗಳಂತೆ, ದೀಪಾವಳಿಯೂ ಉಭಯ ದೇಶಗಳಲ್ಲಿರುವ ಧಾರ್ಮಿಕ ಸಹಿಷ್ಣುತೆ ಹಾಗೂ ವೈವಿಧ್ಯವನ್ನು ಪ್ರಮಾಣೀಕರಿಸುತ್ತದೆ.
- ಹೀರಾಕೌರ್ ಕಾಂಬೋಜ್
ಅಮೆರಿಕ ಕಾನ್ಸುಲೇಟ್, ಚೆನ್ನೈ