ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಅಂಕಣಗಳು

ರಾಜ್ಯದಲ್ಲಿರುವುದು ಬಿಜೆಪಿ ಸರ್ಕಾರ!

ರಾಜ್ಯದಲ್ಲಿ ವಿಧಾನಸಭಾ ಚುನಾವಣೆ ನಡೆದು ಸಿದ್ದರಾಮಯ್ಯ ನೇತೃತ್ವದಲ್ಲಿ ಕಾಂಗ್ರೆಸ್...

Srinivasa Murthy VN
Updated On : 2 Sept 2013, 12:16 pm

ರಾಜ್ಯದಲ್ಲಿ ವಿಧಾನಸಭಾ ಚುನಾವಣೆ ನಡೆದು ಸಿದ್ದರಾಮಯ್ಯ ನೇತೃತ್ವದಲ್ಲಿ ಕಾಂಗ್ರೆಸ್ ಸರ್ಕಾರ ರಚನೆಯಾಗಿ 100 ದಿನ ಪೂರೈಸಿ ಮುನ್ನುಗುತ್ತಿದೆ. ಆದರೆ ಮೈಸೂರು ನಗರ ಹಾಗೂ ಜಿಲ್ಲಾ ಬಿಜೆಪಿಯ ಪ್ರಕಾರ ಇನ್ನೂ ರಾಜ್ಯದಲ್ಲಿ ಬಿಜೆಪಿ ಸರ್ಕಾರ ಇದೆ! ಏಕೆಂದರೆ ಗೋ ಹತ್ಯೆ ನಿಷೇಧ ಕಾಯ್ದೆ ವಾಪಸ್ ಪಡೆದ ರಾಜ್ಯ ಸರ್ಕಾರದ ವಿರುದ್ಧ ಇತ್ತೀಚೆಗೆ ಮೈಸೂರಿನಲ್ಲಿ ಬಿಜೆಪಿ ಪ್ರತಿಭಟನೆ ಹಮ್ಮಿಕೊಂಡಿತ್ತು. ಈ ಕುರಿತು ಜಿಲ್ಲಾಧಿಕಾರಿಗಳಿಗೆ ಸಲ್ಲಿಸಿದ ಮನವಿ ಪತ್ರದಲ್ಲಿ ಗೋ ಹತ್ಯೆ ನಿಷೇಧ ಕಾಯ್ದೆ ವಾಪಸ್ ಪಡೆದಿರುವುದನ್ನು ಬಿಜೆಪಿ ಸರ್ಕಾರ ಖಂಡಿಸುತ್ತದೆ ಎಂದು ಹೇಳಲಾಗಿದೆ. ರಾಜ್ಯದಲ್ಲಿ ಐದು ವರ್ಷ ದರ್ಬಾರ್ ನಡೆಸಿದ ಬಿಜೆಪಿಯವರು ಇನ್ನೂ ಆ ಗುಂಗಿನಿಂದ ಹೊರಬಂದಂತೆ ಕಾಣಿಸುತ್ತಿಲ್ಲ!

ಕುಲಪತಿ ಹುದ್ದೆ ಕೇಳಲು ಹೋಗಿ 'ಪಾಠ' ಮಾಡಿಸಿಕೊಂಡ ಪ್ರಾಧ್ಯಾಪಕ!

ದಾವಣಗೆರೆ ವಿವಿ ಕುಲಪತಿ ಹುದ್ದೆ ಖಾಲಿಯಾಗುತ್ತಿರುವ ಹಿನ್ನೆಲೆಯಲ್ಲಿ ಮೈಸೂರು ವಿವಿಯ ಪ್ರಾಧ್ಯಾಪಕರೊಬ್ಬರು ಬೆಂಬಲಿಗರ ದಂಡಿನೊಂದಿಗೆ ಕಂದಾಯ ಸಚಿವ ವಿ. ಶ್ರೀನಿವಾಸಪ್ರಸಾದ್ ಅವರನ್ನು ಭೇಟಿ ಮಾಡಿ, ತಮ್ಮ ಅಹವಾಲು ಸಲ್ಲಿಸಿದರು. ತಮ್ಮನ್ನು ಕುಲಪತಿ ಹುದ್ದೆಗೆ ಶಿಫಾರಸು ಮಾಡುವಂತೆ ಕೇಳಿಕೊಂಡರು. ಆಗ ಸಚಿವರು, ಏನಪ್ಪ, ಕುಲಪತಿ ಆಗೋದು ಸುಲಭವೇ? ಯಾವುದಾದರೂ ಪುಸ್ತಕ ಬರೆದಿದ್ದೀರಾ? ಎಲ್ಲಿಯಾದರೂ ಭಾಷಣ ಮಾಡಿದ್ದೀರಾ? ನಾಳೆ ಕುಲಪತಿಯಾಗಿ ನೇಮಕವಾದಾಗ ಉದ್ಘಾಟನೆಗೆ ಕರೆದರೆ ಏನ್ ಭಾಷಣ ಮಾಡ್ತೀರಾ ಎಂದು ಕೂಲಾಗಿಯೇ ಕೇಳಿದರು. ಆ ಕಡೆ ಪ್ರತಿಕ್ರಿಯೆ ಬಾರದಿದ್ದಾಗ,  ಹೇಗೋ ಪ್ರೊಫೆಸರ್ ಆಗಿದ್ದೀರ. ಪಾಠ ಮಾಡ್ಕೊಂಡು ಹೋಗಿಯಪ್ಪ ಎಂದು ಹೇಳಿದಾಗ ಅವರು ಸದ್ದಿಲ್ಲದೆ ಜಾಗ ಖಾಲಿ ಮಾಡಿದರು.

ಭೂಸ್ವಾಧೀನದ ವಿರುದ್ಧ ಹೋರಾಡಿ ಬಂಡವಾಳ ಆಕರ್ಷಿಸಲು ಸಿದ್ಧರಾದರು!
ಭೂಸ್ವಾಧೀನದ ವಿರುದ್ಧ ಹಗಲಿರುಳು ಸಂತ್ರಸ್ತರ ಪರ ಹೋರಾಟ ನಡೆಸಿದವರು ಹೂಡಿಕೆದಾರರನ್ನು ಆಕರ್ಷಿಸುವ ಸಮ್ಮೇಳನದಲ್ಲಿ ಕಾಣಿಸಿಕೊಂಡರೆ ಅವರನ್ನು ಯಾರು ನಂಬಬೇಕು? ಇದಕ್ಕೊಂದು ತಾಜಾ ಉದಾಹರಣೆ ಮಂಗಳೂರಲ್ಲಿ ನಡೆದ ಐಟಿ ಸಮ್ಮೇಳನ. ಸಮ್ಮೇಳನದ ಕಾರ್ಯಕ್ರಮ ನಿರ್ವಹಣೆ ವಹಿಸಿಕೊಂಡಿದ್ದು ಮಹಿಳಾಮಣಿಯೊಬ್ಬರು. ಅವರೇ ಎಂಎಸ್‌ಇಝಡ್ ವಿರುದ್ಧ ಹೋರಾಟ ಮಾಡಿ ಸಂತ್ರಸ್ತರಿಗೆ ಬೇಕಾದವರಾಗಿದ್ದರು. ಆದರೆ ಇತ್ತೀಚೆಗೆ ನಡೆದ ಕಾರ್ಯಕ್ರಮ ಹೂಡಿಕೆದಾರರನ್ನು ಮಂಗಳೂರಿಗೆ ಆಕರ್ಷಿಸುವ ಸಲುವಾಗಿ ಸಂಘಟಿಸಿದ್ದು. ಅದರಲ್ಲಿ ಕಾರ್ಯಕ್ರಮ ನಿರ್ವಾಹಕಿಯಾಗಿದ್ದ ಮಹಿಳೆ ಮಾಹಿತಿ ತಂತ್ರಜ್ಞಾನ ಇಲಾಖೆ ಕಾರ್ಯದರ್ಶಿಯನ್ನು ಕೈ ಹಿಡಿದು ಭಾಷಣಕ್ಕೆ ಆಹ್ವಾನಿಸಿದ್ದರು. ಇದನ್ನು ನೋಡಿದ ಮಾಧ್ಯಮದವರಿಗೆ ಅಚ್ಚರಿ. ಏಕೆಂದರೆ, ಅದೇ ಕಾರ್ಯದರ್ಶಿ ಹಿಂದೆ ಎಸ್‌ಇಝಡ್‌ನಲ್ಲಿದ್ದಾಗ ಅವರ ವಿರುದ್ಧ ಹೋರಾಟ ನಡೆಸಿದ್ದರು! ಬಹುಶಃ ಅಂದಿಗೆ ಅದು ಸರಿ, ಇಂದಿಗೆ ಇದು ಸರಿ ಎಂದಿರುವುದು ಇದಕ್ಕೇ ಇರಬೇಕು.

ಒಂದೇ ಕಾರ್ಯಕ್ರಮದಲ್ಲಿ ಖಾದರ್ ಕನ್ನಡ, ಇಂಗ್ಲಿಷ್ ಭಾಷಣ
ಮಂಗಳೂರಿನಲ್ಲಿ ನಡೆದ ಐಟಿ ಸಮ್ಮೇಳನದ ವಂದನಾರ್ಪಣೆ ಅರ್ಧದಲ್ಲಿರುವಾಗ ಸಚಿವ ಯು.ಟಿ. ಖಾದರ್ ವೇದಿಕೆಗೆ ಆಗಮಿಸಿದರು. ಎಷ್ಟಾದರೂ ಐಟಿ ಸಮ್ಮೇಳನವಾದ್ದರಿಂದ ವಂದನಾರ್ಪಣೆ ಮೊಟಕುಗೊಳಿಸಿ ಅವರಿಗೆ ನಾಲ್ಕು ಮಾತನಾಡಲು ಅವಕಾಶ ಕಲ್ಪಿಸಲಾಯಿತು. ರಾಜ್ಯಾದ್ಯಂತ ಆಗಮಿಸಿದ ಹೂಡಿಕೆದಾರರಿರುವುದರಿಂದ ಖಾದರ್ ಅವರು ಇಂಗ್ಲಿಷ್‌ನಲ್ಲಿ ಮಾತನಾಡುತ್ತಾರೆ ಎಂದು ನಿರೀಕ್ಷಿಸಲಾಗಿತ್ತು. ಆದರೆ ಕನ್ನಡದಲ್ಲಿ ಮಾತು ಆರಂಭಿಸಿ, ಎಷ್ಟು ಮಂದಿಗೆ ಕನ್ನಡ ಗೊತ್ತಿದೆ ಕೈ ಎತ್ತಿ ಎಂದರು. ಬಹುತೇಕ ಮಂದಿ ಗೊತ್ತುಂಟು ಮಾರಾಯ್ರೆ ಎಂದು ತಲೆ ಆಡಿಸಿದರು. ಆಗ 'ಗೊತ್ತಿಲ್ಲದವರು ಕನ್ನಡ ಕಲಿಯಿರಿ' ಎನ್ನುತ್ತಲೇ ಭಾಷಣ ಮುಂದುವರಿಸಿದರು. ಕಾಲು ಗಂಟೆ ಭಾಷಣ ಮಾಡಿದ ಖಾದರ್‌ಗೆ ಏನಾಯಿತೋ ಗೊತ್ತಿಲ್ಲ, ಕೊನೆಯಲ್ಲಿ ಕನ್ನಡ ಗೊತ್ತಿಲ್ಲದವರಿಗಾಗಿ ಇಂಗ್ಲಿಷ್‌ನಲ್ಲಿ ಮಾತನಾಡುತ್ತೇನೆ ಎಂದು ಒಂದೆರಡು ವಾಕ್ಯ ಇಂಗ್ಲಿಷ್‌ನಲ್ಲಿ ಹೇಳಿ ಭಾಷಣ ಮುಗಿಸಿದರು. ಖಾದರ್ ಅವರ ಭಾಷಣದ ಧಾಟಿ ಕೇಳಿ ಸಭೆಯಲ್ಲಿದ್ದವರು ನಕ್ಕಿದ್ದೇ ನಕ್ಕಿದ್ದು!

10ಕ್ಕೊಂದು ಬಾಳೆ ಹಣ್ಣು!
ಹಣ್ಣು ತಿಂದವನು ಬಚಾವಾದ. ಸಿಪ್ಪೆ ತಿಂದವನು ಸಿಕ್ಕಿಕೊಂಡ ಎಂಬ ಗಾದೆ ಮಾತಿದೆ. ಆದರೆ ಮೈಸೂರಿನಲ್ಲಿ ಹಣ್ಣು ತಿಂದವನು ಇಂಗು ತಿಂದ ಮಂಗನಂತಾದ ಘಟನೆ ನಡೆದಿದೆ. ಸಾಮಾನ್ಯವಾಗಿ ಬಾಳೆಗೊನೆಯನ್ನು ಸಣ್ಣ ಸಣ್ಣ ಅಂಗಡಿ ಮುಂದೆ ನೇತು ಹಾಕಿರುತ್ತಾರೆ. ಕೆಲವರು ಗೊನೆಯಿಂದ ನೇರವಾಗಿ ಹಣ್ಣನ್ನು ಮುರಿದು ತಿಂದು, ನಂತರ ಕಾಸು ಕೊಡುತ್ತಾರೆ. ಯುವಕನೊಬ್ಬ ಮೈಸೂರಿನ ಜಗನ್ಮೋಹನ ಅರಮನೆ ಎದುರಿನ ಚಿಲ್ಲರೆ ಅಂಗಡಿಗೆ ಹೋಗಿ ಅಲ್ಲಿ ನೇತಾಕಿದ್ದ ಬಾಳೆಗೊನೆಗೆ ಕೈ ಹಾಕಿ ಒಂದು ಹಣ್ಣನ್ನು ತಿಂದು, ಸಿಪ್ಪೆಯನ್ನು ಪಕ್ಕದಲ್ಲಿದ್ದ ಕಸದ ಡಬ್ಬಿಗೆ ಹಾಕಿದ. 10 ನೋಟು ನೀಡಿ ಚಿಲ್ಲರೆಗಾಗಿ ಕಾಯತೊಡಗಿದೆ. ಅಂಗಡಿ ಮಾಲೀಕರಿಂದ ಯಾವುದೇ ಪ್ರತಿಕ್ರಿಯೆ ಇಲ್ಲದಿದ್ದಾಗ ಆತ ಚಿಲ್ಲರೆ ಕೇಳಿದ. ಆಗ ಅವರು ಹೇಳಿದ್ದು ಏನು ಗೊತ್ತೆ? ಅದು ನಂಜನಗೂಡಿನ ರಸಬಾಳೆ. ಒಂದಕ್ಕೆ 10. ಇದನ್ನು ಕೇಳಿದ ಆತ ಅಲ್ಲಿಂದ ಕಾಲ್ತೆಗೆದ.

ಪ್ರಾಮಾಣಿಕ ಪಾಟೀಲ್‌ರ ಹೊಸಾ ಲೆಕ್ಕ ಶುರುವಾಗಿದೆ!
ಸರ್ಕಾರ ಬದಲಾದಾಗ ಹಿಂದಿನ ಸರ್ಕಾರ ಆರಂಭಿಸಿದ ಯೋಜನೆಗಳಿಗೆ ಕೊಕ್ಕೆ ಹಾಕುವುದು ಹೊಸ ಸರ್ಕಾರದ ಸಹಜ ಪ್ರಕ್ರಿಯೆ. ಈ ರೋಗ ಈಗ ಹಳ್ಳಿಗಳಿಗೂ ಹಬ್ಬಿದೆ. ನಾನು ಪ್ರಾಮಾಣಿಕ. ಯಾರಿಂದಲೂ ಹಣ ಪಡೆಯದೇ ಅಧಿಕಾರಿಗಳನ್ನು ನನ್ನ ಜಿಲ್ಲೆಗೆ ವರ್ಗ ಮಾಡಿಸಿಕೊಂಡು ಬಂದಿದ್ದೇನೆ ಎಂದು ಎದೆ ತಟ್ಟಿ ಹೇಳಿಕೊಳ್ಳುತ್ತಿದ್ದ ಬೀಳಗಿ ಕ್ಷೇತ್ರದ ಶಾಸಕ ಜೆ.ಟಿ. ಪಾಟೀಲ್ ಅವರು ಕೂಡ ಈಗ ವರಸೆ ಬದಲಿಸಿದ್ದಾರೆ. ತಮ್ಮ ಕ್ಷೇತ್ರದಲ್ಲಿ ಚಾಲ್ತಿಯಿದ್ದ ಎಲ್ಲ ಯೋಜನೆ, ಕಾಮಗಾರಿಗಳಿಗೆ ಬ್ರೇಕ್ ಹಾಕಿ ಹೊಸ ಲೆಕ್ಕ ಶುರುವಾಗ್ಲಿ, ಹಿಂದಿನ ಕತೆ ಎಲ್ಲ ನಾನು ಕೇಳುವುದಿಲ್ಲ ಎಂದು ಗುತ್ತಿಗೆದಾರರು, ಅಧಿಕಾರಿಗಳಿಗೆ ಆವಾಜ್ ಹಾಕುತ್ತಿದ್ದಾರೆ. ಪ್ರಾಮಾಣಿಕ ಎಂದು ಹಣೆಪಟ್ಟಿ ಕಟ್ಟಿಕೊಂಡಿದ್ದ ಶಾಸಕರ ಬಣ್ಣ ಬಯಲಾದದ್ದು ನೋಡಿ ವರ್ಗವಾಗಿ ಬಂದಿದ್ದ ಅಧಿಕಾರಿಗಳು ಹಾಗೂ ಗುತ್ತಿಗೆದಾರರು ಈಗ ಕೈ ಕೈ ಹಿಸುಕಿಕೊಳ್ಳುತ್ತಿದ್ದಾರೆ!

- ನಂಬಿರಾಜ್

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement