ಹಿರಿಯ ನಾಗರಿಕರ ರಕ್ಷಣೆ- ಪೋಷಣೆಯ ಹೊಣೆ ಸಮಾಜದ್ದು
ನಾನು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಕಾರ್ಯದರ್ಶಿಯಾಗಿದ್ದಾಗ ಒಂದು ದಿನ ಇಬ್ಬರು ಹಿರಿಯರು ನನ್ನನ್ನು ಕಾಣಲು ಬಂದರು. ಅವರ ಅಹವಾಲು ಏನಿತ್ತೆಂದರೆ ಹಿರಿಯರಾದವರಿಗೆ ಸರ್ಕಾರದಿಂದ ಏನೇನು ಸವಲತ್ತುಗಳು ಸಿಗುತ್ತವೆ ಎಂಬುದರ ಬಗೆಗೆ ಸಂಪೂರ್ಣ ಮಾಹಿತಿಯನ್ನು ನಾನೇ ಖುದ್ದಾಗಿ ಹಿರಿಯ ನಾಗರಿಕರ ಸಂಘಕ್ಕೆ ಹೋಗಿ ಗಾಂಧಿ ಜಯಂತಿಯಂದು ತಿಳಿಸಬೇಕು ಎಂದು. ನಾನು ಸಂತೋಷದಿಂದ ಒಪ್ಪಿಕೊಂಡೆ. ಗಾಂಧಿ ಜಯಂತಿಯಂದು ಮಧ್ಯಾಹ್ನ ನಾಲ್ಕು ಗಂಟೆಗೆ ನಾನು ಅವರ ಸಂಘಕ್ಕೆ ಹೋದಾಗ ಅಲ್ಲಿ ಸುಮಾರು ಮುನ್ನೂರು ಜನ ಹಿರಿಯ ನಾಗರಿಕರು ನೆರೆದಿದ್ದರು. ನೋಡಿದರೆ ಅವರೆಲ್ಲರೂ ಅನುಕೂಲವಾಗಿರುವಂತೆ ಕಾಣುತ್ತಿದ್ದರು. ಇಲ್ಲಿ ನೆರೆದಿರುವವರಿಗೆ ನಿಜವಾಗಿಯೂ ಸರ್ಕಾರದ ಸವಲತ್ತುಗಳು ಬೇಕೇ ಎಂಬ ಪ್ರಶ್ನೆ ನನ್ನ ಮನದಾಳದಲ್ಲಿ ಮೂಡಿತು. ನನ್ನ ಮನಸ್ಸನ್ನು ಓದಿದವರಂತೆ, ಆ ಸಂಘದ ಅಧ್ಯಕ್ಷರು ನನಗೆ ಹೇಳಿದರು. ನಮ್ಮ ಸಂಘದ ಸದಸ್ಯರೆಲ್ಲರೂ ಅನುಕೂಲವಾಗಿರುವವರು. ನಮಗೆಲ್ಲಾ ಸರ್ಕಾರದ ಸಹಾಯ ಬೇಡ. ಆದರೆ ನಾವೆಲ್ಲರೂ ನಮ್ಮ ಬಿಡುವಿನ ವೇಳೆಯಲ್ಲಿ ಕಷ್ಟದಲ್ಲಿರುವ ಹಿರಿಯ ನಾಗರಿಕರಿಗೆ ನಮ್ಮ ಸಹಾಯ ಹಸ್ತವನ್ನು ಚಾಚುತ್ತೇವೆ. ನಮ್ಮ ಸುತ್ತಮುತ್ತಲೂ ನೀವು ಗಮನಿಸಿದರೆ ಅತ್ಯಂತ ಹೀನಾಯದ ಪರಿಸ್ಥಿತಿಯಲ್ಲಿರುವವರು, ದಿಕ್ಕು ದೆಸೆ ಇಲ್ಲದಿರುವವರು, ಅನಾರೋಗ್ಯದಿಂದ ನರಳುತ್ತಿರುವವರು, ತಮ್ಮ ಕುಟುಂಬದಿಂದ ತಿರಸ್ಕೃತರಾದವರು, ಇಂಥಹ ಹಲವಾರು ಹಿರಿಯ ನಾಗರಿಕರು ಇದ್ದಾರೆ. ನಮ್ಮ ಸಂಘದ ಸದಸ್ಯರಿಗೆ ಸರಿಯಾದ ಮಾಹಿತಿ ಇದ್ದರೆ, ನಾವು ಅವರುಗಳಿಗೆ ಸಹಾಯ ಮಾಡಬಹುದಾಗಿದೆ. ನೊಂದಿರುವವರಿಗೆ ಆತ್ಮ ವಿಶ್ವಾಸ ಬಹಳ ಕುಗ್ಗಿರುತ್ತದೆ. ಅವರಿಗೆ ಸಹಾಯ ಸಿಗಬಹುದು ಎನ್ನುವ ಕಲ್ಪನೆಯೂ ಇರುವುದಿಲ್ಲ. ಹಾಗಾಗಿ ಅಂತಹವರಿಗೆ ಸರಿಯಾದ ಮಾಹಿತಿಯನ್ನು ಕೊಡುವುದು ನಮ್ಮ ಧರ್ಮ. ಆದುದರಿಂದ ನಿಮಗೆ ತೊಂದರೆ ಕೊಟ್ಟೆವು. ಸರ್ಕಾರಿ ಕಚೇರಿಗಳಿಗೆ ಮಾಹಿತಿಯನ್ನು ಪಡೆಯಲು ಅಲೆಯಲು ನಮಗೆ ಪುರುಸೊತ್ತಿಲ್ಲ. ಅದಕ್ಕಾಗಿ ನಿಮಗೆ ತೊಂದರೆ ಕೊಡುತ್ತಿದ್ದೇವೆ. ಅವರ ಮಾತುಗಳನ್ನು ಕೇಳಿ ನನ್ನ ಹೃದಯ ತುಂಬಿ ಬಂದಿತು. ಪ್ರತಿಯೊಬ್ಬ ಪ್ರಜ್ಞಾವಂತ ನಾಗರಿಕರೂ ತಮಗಿಂತ ಕಡಿಮೆ ಮಟ್ಟದಲ್ಲಿರುವವರ ಬಗೆಗೆ ಇದೇ ರೀತಿ ಕಾಳಜಿ ವಹಿಸಿದರೆ ಸರ್ಕಾರದ ಯೋಜನೆಗಳು ಸರಿಯಾದ ಫಲಾನುಭವಿಗಳಿಗೆ ತಲುಪುತ್ತವೆ ಎನಿಸಿತು. ಅವರಿಗೆ ಕೊಟ್ಟ ಮಾಹಿತಿಯನ್ನು ಈಗ ನಿಮ್ಮ ಮುಂದೆ ಹಂಚಿಕೊಳ್ಳುತ್ತಿದ್ದೇನೆ.
ಹಿರಿಯ ನಾಗರಿಕರ ಸೇವೆಗೆಂದೇ ಹಿರಿಯ ನಾಗರಿಕರ ನಿರ್ದೇಶನಾಲಯವು ಪೋಡಿಯಂ ಬ್ಲಾಕ್, ವಿಶ್ವೇಶ್ವರಯ್ಯ ಟವರ್, ಡಾ. ಅಂಬೇಡ್ಕರ್ ರಸ್ತೆ, ಬೆಂಗಳೂರು- ಇಲ್ಲಿ ಕೆಲಸ ನಿರ್ವಹಿಸುತ್ತಿದೆ. ಹಿರಿಯ ನಾಗರಿಕರಿಗೆ ಬೇಕಾದ ಸಹಾಯವನ್ನು ಅಲ್ಲಿಗೆ ಹೋಗಿ ಖಂಡಿತವಾಗಿ ಪಡೆಯಬಹುದು.
ತುಂಬಾ ವಿಷಾದನೀಯ ಸಂಗತಿ ಏನೆಂದರೆ, ಯಾವ ಪಾಲಕರು ತಮ್ಮ ಇಡೀ ಜೀವನವನ್ನು ಮಕ್ಕಳ ಪೋಷಣೆಗೆ ವ್ಯಯಿಸುತ್ತಾರೋ, ಅವರಿಗೆ ವಯಸ್ಸಾದಮೇಲೆ ನೋಡಿಕೊಳ್ಳುವವರು ಯಾರೂ ಇರುವುದಿಲ್ಲ. ಇಂತಹ ಸಮಸ್ಯೆಯನ್ನು ಬಗೆಹರಿಸಲು ಹಿರಿಯ ನಾಗರಿಕರಿಗಾಗಿಯೇ ಸರ್ಕಾರೇತರ ಸಂಘ ಸಂಸ್ಥೆಗಳು ಸರ್ಕಾರದಿಂದ ಅನುದಾನವನ್ನು ಪಡೆದು ವೃದ್ಧಾಶ್ರಮಗಳನ್ನು ನಡೆಸುತ್ತಿವೆ. ಬಡತನದ ರೇಖೆಗಿಂತ ಕೆಳಗಿನವರು, ನಿರ್ಗತಿಕರು, ಈ ಸೌಕರ್ಯವನ್ನು ಪಡೆದುಕೊಳ್ಳಬಹುದಾಗಿದೆ.
ಅಲ್ಲದೆ ಕನಿಷ್ಠ ಊಟ ತಿಂಡಿಯ ವ್ಯವಸ್ಥೆಗಾಗಿ ಕಂದಾಯ ಇಲಾಖೆಯಿಂದ ಸಂಧ್ಯಾ ಸುರಕ್ಷಾ ಯೋಜನೆಯಡಿಯಲ್ಲಿ ವಯೋ ವೃದ್ಧರು ತಿಂಗಳಿಗೆ ನಾನ್ನೂರು ರೂಪಾಯಿಗಳ ಸಾಮಾಜಿಕ ಸುರಕ್ಷಾ ಪಿಂಚಣಿಯನ್ನು ಪಡೆಯಬಹುದು. ಅದನ್ನು ಪಡೆಯಲು ಅರ್ಹತೆ ಈ ಕೆಳಗೆ ಹೇಳಿದಂತೆ ಇದೆ.
- ವಯಸ್ಸು ಅರವತ್ತೈದು ಮತ್ತು ಅದಕ್ಕಿಂತ ಹೆಚ್ಚಿರಬೇಕು.
-ಗಂಡ ಮತ್ತು ಹೆಂಡತಿ, ಇಬ್ಬರ ಒಟ್ಟು ವಾರ್ಷಿಕ ಆದಾಯ ಇಪ್ಪತ್ತು ಸಾವಿರಕ್ಕಿಂತ ಕಡಿಮೆ ಇರಬೇಕು. ಇದನ್ನು ಹತ್ತಿರದ ಕಂದಾಯ ಅಧಿಕಾರಿಗಳು ದೃಢೀಕರಿಸಿರಬೇಕು.
- ತಮ್ಮ ಆದಾಯವನ್ನು ವಯೋ ವೃದ್ಧರೇ ಹೇಳಿಕೊಂಡಾಗ, ಅವರ ಬೆಳೆದ ಮಕ್ಕಳ ಆದಾಯವನ್ನು ಗಣನೆಗೆ ತೆಗೆದುಕೊಳ್ಳುವುದಿಲ್ಲ.
-ಗಂಡ ಹೆಂಡತಿ ಇಬ್ಬರೂ ಸೇರಿ ಯಾವುದೇ ಹಣಕಾಸು ಸಂಸ್ಥೆಗಳಲ್ಲಿ ಹತ್ತು ಸಾವಿರ ರೂಪಾಯಿಗಳಿಗಿಂತ ಹೆಚ್ಚಿನ ಠೇವಣಿಯನ್ನು ಇಟ್ಟಿರಬಾರದು.
-ಬೇರೆ ಯಾವುದಾದರೂ ಪಿಂಚಣಿಗಳಾದ ಅಂಗವಿಕಲರ ಪಿಂಚಣಿ, ವಿಧವಾ ವೇತನ, ಮುಂತಾದವುಗಳನ್ನು ಸರ್ಕಾರದಿಂದ ಅಥವಾ ಇತರ ಖಾಸಗಿ ಸಂಸ್ಥೆಗಳಿಂದ ಪಡೆಯುತ್ತಿರಬಾರದು.
ಈ ಪಿಂಚಣಿಗೆ ಅರ್ಹ ಫಲಾನುಭವಿಗಳನ್ನು ಸಣ್ಣ ರೈತರು, ಕೃಷಿ ಕಾರ್ಮಿಕರು, ಬೆಸ್ತರು, ನೇಯ್ಗೆಯವರು, ಕಟ್ಟಡಗಳಲ್ಲಿ ಕೂಲಿ ಕೆಲಸ ಮಾಡುತ್ತಿರುವವರು, ಇಂಥಹವರುಗಳ ಪಟ್ಟಿಯಿಂದ ಆಯ್ದು ನೀಡಲಾಗುವುದು. ಈ ಪಿಂಚಣಿಯ ಅನುಕೂಲವನ್ನು ಮಾಡಿಕೊಡಲು ಈ ಇಲಾಖೆಯಿಂದ ಹಿರಿಯ ನಾಗರಿಕ ಸಂಘಗಳ ಮೂಲಕ ಗುರುತಿನ ಚೀಟಿಯನ್ನು ನೀಡಲಾಗುತ್ತದೆ. ಇದಕ್ಕಾಗಿ ಅವರು ಒಂದು ಅರ್ಜಿ, ಎರಡು ಭಾವಚಿತ್ರಗಳು, ವಿಳಾಸದ ಗುರುತಿನ ಕುರುಹು, ವಯಸ್ಸಿನ ಕುರುಹನ್ನು ಲಗತ್ತಿಸಿ, ಇಪ್ಪತ್ತೈದು ರೂಪಾಯಿಗಳನ್ನು ಪಾವತಿಸಿ ಪಡೆಯಬಹುದು. ವಿಶೇಷವಾಗಿ ಇದಕ್ಕೆ ಬೇಕಾಗಿರುವುದು ಸರ್ಕಾರಿ ವೈದ್ಯರ ವಯಸ್ಸಿನ ದೃಢೀಕರಣದ ಪತ್ರ. ಏಕೆಂದರೆ ಬಹಳಷ್ಟು ಸಲ ಜನ್ಮ ಪ್ರಮಾಣ ಪತ್ರವು ಹಿರಿಯರ ಹತ್ತಿರ ಇರುವುದಿಲ್ಲ.
ಅರವತ್ತೈದು ವರ್ಷ ಮತ್ತು ಅದಕ್ಕಿಂತ ಹೆಚ್ಚು ವಯಸ್ಸಾಗಿರುವ ವಯೋವೃದ್ಧರಿಗೆ ಬಸ್ಸುಗಳ ಪಾಸುಗಳಲ್ಲಿ ರಿಯಾಯತಿ ಇದೆ. ಕೇಂದ್ರ ಸರ್ಕಾರದಿಂದ ರೈಲು ಪ್ರಯಾಣಕ್ಕೂ ರಿಯಾಯತಿ ಇದೆ.
ಪ್ರಕೃತಿಯ ವಿಧಾನವನ್ನು ನಾವೆಲ್ಲರೂ ಪಾಲಿಸಬೇಕಾಗುತ್ತದೆ. ಅರವತ್ತರ ನಂತರ ಶಾರೀರಿಕ ಶಕ್ತಿ ಕಡಿಮೆಯಾಗುತ್ತಾ ಹೋಗುತ್ತದೆ. ಮಾನಸಿಕವಾಗಿ ಸಹ ಸುಮಾರು ಬದಲಾವಣೆಗಳು ಕಂಡು ಬರುತ್ತವೆ. ಕಣ್ಣು ಕಾಣದಿರುವುದು, ಕಿವಿ ಕೇಳಿಸದಿರುವುದು, ಕೈಕಾಲು ನಡುಗುವುದು, ನೆನಪಿನ ಶಕ್ತಿ ಕಡಿಮೆಯಾಗುತ್ತಾ ಹೋಗುವುದು, ಅದರಲ್ಲೂ ಮಹಿಳೆಯರಿಗೆ ವಿಶೇಷವಾಗಿ ಮುಟ್ಟು ನಿಲ್ಲುವ ಸಮಸ್ಯೆ. ಇಂತಹ ಸಮಯದಲ್ಲಿ ಬಡತನದ ರೇಖೆಗಿಂತ ಕೆಳಗಿರುವ ವಯೋವೃದ್ಧರ ಯೋಗಕ್ಷೇವುವನ್ನು ಹಗಲು ಹೊತ್ತಿನಲ್ಲಿ ನೋಡಿಕೊಳ್ಳಲು ಕರ್ನಾಟಕ ರಾಜ್ಯದಲ್ಲಿ ಪ್ರತಿ ಜಿಲ್ಲಾ ಸರ್ಕಾರಿ ಆಸ್ಪತ್ರೆಗಳಲ್ಲಿ ವಯೋವೃದ್ಧರಿಗೆಂದೇ ನಿಗದಿತ ಮುಪ್ಪಿನ ಖಾಯಿಲೆಗಳಿಗೆ ಸಂಬಂಧಿಸಿದ ವಿಭಾಗವನ್ನು ತೆರೆಯಲಾಯಿತು. ಏಕೆಂದರೆ ಈ ಕ್ಷೇತ್ರದಲ್ಲಿ ಪರಿಣತರು ಸಿಗುವುದು ಕಡಿಮೆ. ಇಲ್ಲಿ ವಯೋವೃದ್ಧರಿಗೆ ಸಾಮಾಜಿಕ ಮತ್ತು ಭಾವನಾತ್ಮಕ ಸೇವೆಗಳು, ಮನರಂಜನೆ ಮತ್ತು ಆರೋಗ್ಯದ ಕಾಳಜಿ ಮುಂತಾದ ಸೇವೆಗಳು ಲಭ್ಯವಿರಬೇಕು.
ಇದೇ ಮಾದರಿಯಲ್ಲಿ ಹಳ್ಳಿಯ ಜನರಿಗೆ ಏಕೆ ಸೌಲಭ್ಯ ನೀಡಬಾರದು ಎಂದು ನನ್ನ ತಲೆಗೆ ಬಂದಿತು. ಆಗ ಕೇಂದ್ರ ಸರ್ಕಾರದ ಸಾಮಾಜಿಕ ನ್ಯಾಯ ಇಲಾಖೆಯನ್ನು ಸಂಪರ್ಕಿಸಿ ಒಂದು ವಿನೂತನ ಯೋಜನೆಯನ್ನು ಪ್ರಾರಂಭಿಸಿದೆ. ಇದೇನೆಂದರೆ, ಸುಮಾರು ನೂರು ಹಳ್ಳಿಗಳಲ್ಲಿ ನೂರು ಉತ್ತಮ ಮೂಲಭೂತ ಸೌಕರ್ಯಗಳನ್ನು ಹೊಂದಿರುವ ಅಂಗನವಾಡಿ ಕೇಂದ್ರಗಳಲ್ಲಿ ಮಧ್ಯಾಹ್ನದ ಹೊತ್ತಿಗೆ ಹಿರಿಯ ನಾಗರಿಕರ ಕ್ಷೇಮ ಕೇಂದ್ರವನ್ನು ತೆರೆಯಲಾಯಿತು. ಇದಕ್ಕಾಗಿ ಪ್ರತಿ ತಿಂಗಳೂ ಅಂಗನವಾಡಿಯ ಕಾರ್ಯಕರ್ತರಿಗೆ ಸಾವಿರ ರುಪಾಯಿಗಳ ಗೌರವಧನವನ್ನು ನೀಡಲಾಯಿತು ಹಾಗೂ ಹಿರಿಯರ ಸಮಸ್ಯೆಗಳನ್ನು ಅರ್ಥಮಾಡಿಕೊಳ್ಳಲು ತರಬೇತಿ ನೀಡಲಾಯಿತು. ಅಲ್ಲದೆ ಪೌಷ್ಟಿಕ ಆಹಾರದೊಂದಿಗೆ ಟಿ.ವಿ. ರೇಡಿಯೋ ಮತ್ತು ಪತ್ರಿಕೆಗಳನ್ನು ಒದಗಿಸಲು ವ್ಯವಸ್ಥೆ ಮಾಡಲಾಯಿತು. ಮಾತ್ರವಲ್ಲ ಆರ್ಥಿಕವಾಗಿ ಹಣ ಸಂಪಾದನೆ ಮಾಡಲು ಇಚ್ಛಿಸುವ ಹಿರಿಯ ನಾಗರಿಕರಿಗೆ ಲಕೋಟೆ ತಯಾರಿ, ಇತ್ಯಾದಿ ಸುಲಭ ಕೆಲಸಗಳನ್ನು ನೀಡಿ ಮಾರುಕಟ್ಟೆಗಾಗಿ ಸರ್ಕಾರೇತರ ಸಂಸ್ಥೆಗಳ ಮೂಲಕ ವ್ಯವಸ್ಥೆ ಮಾಡಲಾಯಿತು. ವೃದ್ಧ ಮಹಿಳೆಯರು ವಿಶೇಷವಾಗಿ ಮಕ್ಕಳ ಜೊತೆ ಕಾಲ ಕಳೆಯಬೇಕೆಂದು ಇಚ್ಛಿಸಿದಾಗ, ಬೆಳಗಿನ ಸಮಯದಲ್ಲಿ ಅಂಗನವಾಡಿಯಲ್ಲಿ ಬರಮಾಡಿಕೊಳ್ಳಲಾಯಿತು. ಅಜ್ಜಿಯ ಕಥೆಗಳನ್ನು ತುಂಬಾ ಆಸಕ್ತಿಯಿಂದ ಮಕ್ಕಳು ಕೇಳತೊಡಗಿದರು. ಮೌಲ್ಯಗಳನ್ನು ಅರ್ಥ ಮಾಡಿಕೊಳ್ಳುತ್ತಿದ್ದರು.
ಇದೇ ರೀತಿ ಕೇಂದ್ರ ಸರ್ಕಾರದ ಅನುದಾನದಿಂದ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯಲ್ಲಿ ಸರ್ಕಾರೇತರ ಸಂಸ್ಥೆಯಾದ ನೈಟಿಂಗೇಲ್ ಸಂಸ್ಥೆಯವರ ವತಿಯಿಂದ ಉಚಿತ ಆ್ಯಂಬುಲೆನ್ಸುಗಳ ಸೇವೆಯನ್ನು ಆಯೋಜಿಸಲಾಗಿತ್ತು. ಹಿರಿಯ ನಾಗರಿಕರಿಗೆ ಭದ್ರತೆ ತುಂಬಾ ಅಗತ್ಯವಿರುತ್ತದೆ. ಕಳ್ಳರು ಹಣಕ್ಕಾಗಿ ವೃದ್ಧರ ಕೊಲೆ ಮಾಡುವುದು ಸಾಮಾನ್ಯವಾಗಿದೆ. ಕೆಲವೊಮ್ಮೆ ಮನೆಯಲ್ಲಿ ಮಗ ಅಥವಾ ಸೊಸೆ ಸಹ ಅವರ ಮೇಲೆ ಹಿಂಸಾಚಾರ ಮಾಡುವುದರ ಬಗ್ಗೆ ನನಗೆ ಸುಮಾರು ಕರೆಗಳು ಬರುತ್ತಿದ್ದವು. ಇದಕ್ಕಾಗಿಯೇ ಕರ್ನಾಟಕ ರಾಜ್ಯದಲ್ಲಿ ಬೆಂಗಳೂರು, ಮೈಸೂರು, ಹುಬ್ಬಳ್ಳಿ-ದಾರವಾಢ, ಗುಲ್ಬರ್ಗ, ಮಂಗಳೂರು, ಬೆಳಗಾಂ, ದಾವಣಗೆರೆ, ರಾಯಚೂರು, ಬಳ್ಳಾರಿ ಮತ್ತು ಶಿವಮೊಗ್ಗ ಜಿಲ್ಲೆಗಳಲ್ಲಿ, ಹದಿನಾಲ್ಕು ಜಾಗಗಳಲ್ಲಿ ಪೋಲೀಸ್ ಇಲಾಖೆ ಮತ್ತು ಸರ್ಕಾರೇತರ ಸಂಸ್ಥೆಗಳ ನೆರವಿನೊಂದಿಗೆ ಸಹಾಯವಾಣಿಯನ್ನು ತೆರೆಯಲಾಗಿದೆ. ಯಾವುದೇ ಸಮಯದಲ್ಲಿ ಏನೇ ತೊಂದರೆಗಳಿದ್ದರೂ ವಯೋವೃದ್ಧರು ಉಚಿತವಾಗಿ ಕರೆಗಳನ್ನು ಮಾಡಬಹುದಾಗಿದೆ.
ಮನುಷ್ಯ ಹುಟ್ಟಿದ ಮೇಲೆ ಬಾಲ್ಯ, ಯೌವ್ವನ, ಗೃಹಸ್ಥಾವಸ್ಥೆಯನ್ನು ದಾಟಿ ವೃದ್ಧಾವಸ್ಥೆಗೆ ಬರಲೇ ಬೇಕಾಗುತ್ತದೆ. ಇದೀಗ ಸಮೀಕ್ಷೆಗಳ ಪ್ರಕಾರ ಮಾನವನ ಆಯಸ್ಸೂ ಕೂಡ ಹೆಚ್ಚಾಗುತ್ತಿದೆ. ಅಂದರೆ ನಮ್ಮ ಸುತ್ತ ಮುತ್ತ ವಯೋವೃದ್ಧರು ಹೆಚ್ಚಾಗುತ್ತಿದ್ದಾರೆ. ತಮ್ಮ ಜೀವನದ ಕೊನೆಗಾಲದಲ್ಲಿ ನೆಮ್ಮದಿಯಿಂದ ವಯೋವೃದ್ಧರು ಜೀವನ ಮಾಡುವಂತೆ ನೋಡಿಕೊಳ್ಳುವುದು ಸಮಾಜದ ಹೊಣೆಯಾಗಿದೆ. ನಮ್ಮ ಸಂಸ್ಕೃತಿಯಲ್ಲಿ ಮೂರು, ನಾಲ್ಕು ತಲೆಮಾರುಗಳು ಒಟ್ಟಿಗೆ ಜೀವಿಸುತ್ತಿದ್ದುದನ್ನು ನಾವು ಕಂಡಿದ್ದೇವೆ. ಆ ಪದ್ಧತಿಯಲ್ಲಿ ವಯೋವೃದ್ಧರಿಗೆ ಯಾವುದೇ ತೊಂದರೆಗಳು ಇರುತ್ತಿರಲಿಲ್ಲ. ಆದರೆ ಈಗ ಬದಲಾದ ಸಮಾಜದಲ್ಲಿ ವಯಸ್ಸಾದವರು ಜೊತೆಗಿದ್ದರೆ ತಮಗೆ ತೊಂದರೆ ಎನ್ನುವ ಭಾವ ಇಂದಿನ ಯುವ ಜನತೆಯಲ್ಲಿ ಹೆಚ್ಚಾಗುತ್ತಿದೆ. ಇದಕ್ಕೆ ಕಾರಣ ವಿದೇಶದ ಜನ ಜೀವನದ ಪ್ರಭಾವವೂ ಇರಬಹುದು. ಆದರೆ ನಮ್ಮ ಸುತ್ತ ಮುತ್ತಲಿನ ವಯೋವೃದ್ಧರು ನಿಟ್ಟುಸಿರು ಬಿಟ್ಟು ನರಳುವಂತೆ ಮಾಡಿ ನಾವು ಆನಂದದಿಂದ ಇರುವುದು ಅಮಾನವೀಯವಾಗುತ್ತದೆ. ಯುವಕ ಯುವತಿಯರು ಒಂದು ದಿನ ನಾವೂ ವೃದ್ಧರಾಗುತ್ತೇವೆ, ನಮ್ಮ ಹಿರಿಯರನ್ನು ನೋಡಿಕೊಳ್ಳುವುದು ನಮ್ಮ ಜವಾಬ್ದಾರಿಯಾಗಿದೆ. ನಮ್ಮನ್ನು ನೋಡಿ ನಮ್ಮ ಮಕ್ಕಳು ಈ ಸಂಸ್ಕೃತಿ ಕಲಿಯಲಿ ಎಂದು ಆಶಿಸಿ, ಅದರಂತೆ ನಡೆದುಕೊಂಡರೆ ವಯೋವೃದ್ಧರ ಆಶೀರ್ವಾದದಿಂದ ನಮ್ಮೆಲ್ಲರ ಜೀವನ ಹಸನ್ಮುಖಿ ಆಗುತ್ತದೆ ಅಲ್ಲವೇ?
- ಶಾಲಿನಿ ರಜನೀಶ್, ಐಎಎಸ್
anisikeprabha@gmail.com