ಮಕ್ಕಳ ಮನೋಲೋಕ ಪ್ರವೇಶವೇ ಶಿಕ್ಷಕನ ಮುಂದಿರುವ ಸವಾಲು
ಇಂದು ಡಾ. ಸರ್ವಪಲ್ಲಿ ರಾಧಾಕೃಷ್ಣನ್ ಅವರ ಜನ್ಮದಿನ. ಭಾರತದ ರಾಷ್ಟ್ರಪತಿಯಾಗಿದ್ದ...
ಇಂದು ಡಾ. ಸರ್ವಪಲ್ಲಿ ರಾಧಾಕೃಷ್ಣನ್ ಅವರ ಜನ್ಮದಿನ. ಭಾರತದ ರಾಷ್ಟ್ರಪತಿಯಾಗಿದ್ದ ಅವರನ್ನು ಈ ದೇಶ ಒಬ್ಬ ಆದರ್ಶ ಗುರುವಿನ ಸ್ಥಾನದಲ್ಲಿ ನೆನಪಿಸಿಕೊಳ್ಳುತ್ತದೆ. ಅವರ ಆದರ್ಶದ ನೆನಪಿನಲ್ಲಿ ಆಚರಿಸುವ ಶಿಕ್ಷಕರ ದಿನಾಚರಣೆ ಪ್ರಯುಕ್ತ ಗುರುವಿನ ಗತಿ ಚಿಂತನೆಯ ಬರಹ.
ಅದೊಂದು ಶಿಕ್ಷಕರು- ಪಾಲಕರ ಸಭೆ. ವಿದ್ಯಾರ್ಥಿಗಳ ಹೆತ್ತವರಿಗೆ ತಮ್ಮ ಅಭಿಪ್ರಾಯಗಳನ್ನು ಮುಂದಿಡುವಂತೆ ಶಾಲಾ ಮುಖ್ಯೋಪಾಧ್ಯಾಯರು ಕರೆಯಿತ್ತರು. ವೇದಿಕೆಯ ಮೇಲೇರಿ ಬಂದ ವ್ಯಕ್ತಿ ಒಬ್ಬ ಶಿಕ್ಷಕರ ಮೇಲೆ ವಾಗ್ದಾಳಿ ಆರಂಭಿಸಿದರು. ಅವರು ಮಕ್ಕಳಿಗೆ ಯಾವಾಗಲೂ ಬಡಿಯುತ್ತಾರೆ, ಪರೀಕ್ಷೆಯಲ್ಲಿ ಅಂಕಗಳನ್ನು ನೀಡುವಾಗ ತಾರತಮ್ಯ ತೋರುತ್ತಾರೆ, ಶಾಲೆಗೆ ಸಮಯಕ್ಕೆ ಸರಿಯಾಗಿ ಬರುವದೇ ಇಲ್ಲ, ಶಾಲೆಯಲ್ಲಿ ವೈಯಕ್ತಿಕ ಕೆಲಸ ಮಾಡುತ್ತಾರೆ, ಅಶ್ಲೀಲ ಶಬ್ದಗಳಿಂದ ಮಕ್ಕಳಿಗೆ ಬೈಯುತ್ತಾರೆ, ಇಂತಹ ಶಿಕ್ಷಕರಿಂದ ನಮ್ಮ ಮಕ್ಕಳು ಹೇಗೆ ಕಲಿತಾರು ಎಂದೆಲ್ಲ ಆರೋಪಗಳ ಸುರಿಮಳೆಗೈದರು.
ಬಹಳ ಮಂದಿ ಶಿಕ್ಷಕರು ಆದರ್ಶಪ್ರಾಯರಿದ್ದರೂ, ಒಂದೊಂದು ಶಾಲೆಯಲ್ಲಿ ಇರುವ ಒಬ್ಬಿಬ್ಬರು ಶಿಕ್ಷಕರು ತಮ್ಮ ವರ್ತನೆಯಿಂದಾಗಿ ವಾತಾವರಣ ಹದಗೆಡಿಸುವುದು ಸತ್ಯ.
ಇಂಥ ಸಂದರ್ಭಗಳಲ್ಲಿ ಮಕ್ಕಳು 'ಶಾಲೆಯಲ್ಲಿ ಶಿಕ್ಷಕರ ಭಯ, ಮನೆಯಲ್ಲಿ ಹೆತ್ತವರ ಭಯ' ಎಂಬ ಇಕ್ಕಟ್ಟಿಗೆ ಒಳಗಾಗುತ್ತಾರೆ. ಇದರಿಂದ ಮಕ್ಕಳು ಶಾಲೆಗೆ ಹೋಗುತ್ತೇವೆ ಎಂದು ಹೇಳಿ, ಹಳ್ಳಿಯಲ್ಲಾದರೆ ಗುಡ್ಡ ಸುತ್ತುವುದು, ನಗರದಲ್ಲಾದರೆ ಪೇಟೆ ಸುತ್ತುವುದು ಎಂಬ ಸ್ಥಿತಿ ಒದಗುತ್ತದೆ. ಇಲ್ಲಿ ಮಕ್ಕಳ ಮನದಲ್ಲಿ ಗೊಂದಲ ತೀವ್ರವಾಗುತ್ತದೆ. ಇಂತಹ ಸಂದರ್ಭಗಳಲ್ಲಿ ಶಿಕ್ಷಕರಿಗೆ ಮಕ್ಕಳ ಮನಶಾಸ್ತ್ರದ ಅರಿವಿನ ಅಗತ್ಯತೆ ಕಂಡುಬರುತ್ತದೆ.
ಮಕ್ಕಳ ಮನಶಾಸ್ತ್ರವನ್ನು ಅರಿತ ಒಬ್ಬ ಸಮರ್ಥ ಶಿಕ್ಷಕ, ಮಕ್ಕಳನ್ನು ಶಿಕ್ಷಿಸಿ ಸರಿಪಡಿಸುವುದಕ್ಕಿಂತಲೂ ಮಕ್ಕಳ ಮೇಲೆ ಪ್ರೀತಿ ತೋರುವ ಮೂಲಕ ಅವರನ್ನು ಸರಿದಾರಿಗೆ ತರುವುದು ಸುಲಭ ಎಂಬುದನ್ನು ಅರಿತುಕೊಳ್ಳುತ್ತಾನೆ. 'ಏ ಕತ್ತೆ, ನಿನಗೆ ಸರಿಯಾಗಿ ಬರೆಯಲು ಏನು ಅಡ್ಡಿ' ಎಂದು ಬೈದು ಹೇಳುವುದನ್ನೇ 'ನೀನು ಚೆನ್ನಾಗಿ ಬರೆದರೆ ನಿನಗೆ ಹೆಚ್ಚು ಅಂಕಗಳು ಲಭಿಸುತ್ತವೆ' ಎಂದು ಹೇಳಿ ಬೆನ್ನು ತಟ್ಟಿ ಪ್ರೋತ್ಸಾಹಿಸಿದರೆ ಮಗು ಅಂಕಗಳ ಆಸೆಯಿಂದ ತನ್ನ ಪ್ರಯತ್ನದಲ್ಲಿ ಹೆಚ್ಚಿನ ಯಶಸ್ಸಿನತ್ತ ಸಾಗಬಹುದು. ಯಾರು ಅತ್ಯುತ್ತಮವಾಗಿ ಬರೆದು ಹೆಚ್ಚು ಅಂಕ ಗಳಿಸುತ್ತೀರೋ ಅವರಿಗೆ ಬಹುಮಾನ ನೀಡಲಾಗುವುದು ಎಂದು ಹೇಳಿದಲ್ಲಿ ಮಕ್ಕಳು ಬಹುಮಾನದ ಆಸೆಯಿಂದ ಆ ಗುರಿಯತ್ತ ಹೆಚ್ಚಿನ ಪ್ರಯತ್ನದಿಂದ ಯಶಸ್ಸನ್ನು ಸಾಧಿಸಬಹುದು.
ಅನೇಕ ಬಾರಿ ಶಿಕ್ಷಕರು ಪಠ್ಯದಲ್ಲಿದೆ ಎಂಬ ಕಾರಣಕ್ಕೆ ಮಕ್ಕಳಿಗೆ ಬೋಧನೆ ಮಾಡುತ್ತಾರೆ. ಆದರೆ ಸ್ವತಃ ತಾನು ಅದನ್ನು ಆಚರಣೆಗೆ ತಾರದೇ ಇರುವ ಮೂಲಕ ವಿದ್ಯಾರ್ಥಿಗಳನ್ನು ಗೊಂದಲಕ್ಕೆ ತಳ್ಳುವುದಿದೆ. ಉದಾಹರಣೆಗೆ ಬೀಡಿ, ಸಿಗರೇಟ್ ಸೇವನೆ ಆರೋಗ್ಯಕ್ಕೆ ಹಾನಿಕರ ಎಂದು ಬೋಧನೆ ಮಾಡುವ ಶಿಕ್ಷಕ, ತರಗತಿಯ ವೇಳೆಯಲ್ಲೇ ಒಬ್ಬ ವಿದ್ಯಾರ್ಥಿಯನ್ನು ಕರೆದು ಆತನಿಂದಲೇ ಅಂಗಡಿಯಿಂದ ಸಿಗರೇಟ್ ಪ್ಯಾಕ್ ತರಿಸಿಕೊಂಡು ಮಕ್ಕಳೆದುರೇ ಧೂಮಪಾನ ಮಾಡುವುದು ಮಕ್ಕಳ ಮೇಲೆ ಕೆಟ್ಟ ಪರಿಣಾಮ ಬೀರುವಂತಾಗುತ್ತದೆ. ಈ ಬಗ್ಗೆ ಶಿಕ್ಷಕ ಆತ್ಮಾವಲೋಕನ ಮಾಡಿಕೊಳ್ಳಬೇಕು.
ನನ್ನ ಪರಿಚಿತ ಶಿಕ್ಷಕರೊಬ್ಬರು ಸ್ವತಃ ಲೇಖಕರು. ತನ್ನಲ್ಲಿರುವ ಚಿಂತನೆಗಳನ್ನು ಪಠ್ಯದ ಜೊತೆಗೆ ವಿದ್ಯಾರ್ಥಿಗಳಿಗೆ ಕತೆಯ ಮೂಲಕ ಬೋಧಿಸುತ್ತಾರೆ. ಶಾಲೆಯಲ್ಲಿ ಮಕ್ಕಳಿಂದಲೇ ಹಸ್ತಪತ್ರಿಕೆಯನ್ನು ಸಿದ್ಧಪಡಿಸುತ್ತಾರೆ. ಈ ಏಕ ಪ್ರತಿಯ ಹಸ್ತಪತ್ರಿಕೆಯಲ್ಲಿ ಮಕ್ಕಳ ಕತೆ, ಕವನ, ಲೇಖನ, ಚಿತ್ರಗಳು, ವ್ಯಂಗ್ಯಚಿತ್ರ, ಹೀಗೆ ಎಲ್ಲವೂ ಇರುತ್ತವೆ. ಮಾತ್ರವಲ್ಲ ಮಕ್ಕಳಿಗೆ ತರಬೇತಿ ನೀಡಿ ಆಕಾಶವಾಣಿಗೆ ಕರೆದೊಯ್ದು ಬಾಲವೃಂದ ಕಾರ್ಯಕ್ರಮವನ್ನೂ ನೀಡುತ್ತಾರೆ. ಶಾಲೆಯಲ್ಲೇ ಪತ್ರಿಕೋದ್ಯಮದ ಮೊದಲ ಪಾಠ ವಿದ್ಯಾರ್ಥಿಗಳು ಸಾಮಾಜಿಕ, ಸಾಂಸ್ಕೃತಿಕ, ಆರ್ಥಿಕ ಹಾಗೂ ಬೌದ್ಧಿಕವಾಗಿ ಬೆಳೆಯುವಲ್ಲಿ ಇದು ಸಹಕಾರಿ. ಇವರು ಮಕ್ಕಳ ಪ್ರೀತಿಪಾತ್ರ ಶಿಕ್ಷಕರೂ ಹೌದು. ಇಂತಹ ಶಿಕ್ಷಕರು ಇತರರಿಗೂ ಆದರ್ಶಪ್ರಾಯರೆನಿಸಿದ್ದಾರೆ.
ಪ್ರಕೃತಿಯ ಬಗ್ಗೆ, ಪರಿಸರದ ಬಗ್ಗೆ ಬೋಧನೆ ಮಾಡುವಾಗ ಪಠ್ಯಕ್ಕಷ್ಟೇ ಅಂಟಿಕೊಳ್ಳದೇ ಪ್ರಾಯೋಗಿಕವಾಗಿ ಕಾರ್ಯಾಚರಣೆಗೆ ಮುಂದಾಗುವ ಶಿಕ್ಷಕರು ವಿದ್ಯಾರ್ಥಿಗಳ ಮೇಲೆ ಹೆಚ್ಚು ಸತ್ಪರಿಣಾಮ ಬೀರಬಲ್ಲರು. ಪರಿಸರ ಸ್ವಚ್ಛತೆ ಬಗ್ಗೆ ಬೋಧಿಸುವ ಶಿಕ್ಷಕ ಅಲ್ಲೇ ಕಿಟಿಕಿಯ ಮೂಲಕ ಉಗುಳುವುದು, ಹರಿದ ಕಾಗದದ ಚೂರುಗಳನ್ನು ಅಲ್ಲೇ ಎಸೆಯುವುದು ಮುಂತಾದವುಗಳು ಶಿಕ್ಷಕರ ಪರಿಸರ ಪ್ರಜ್ಞೆಯನ್ನೇ ಪ್ರಶ್ನಿಸುವಂತಾಗುತ್ತದೆ. ಅದಕ್ಕೆ ಬದಲಾಗಿ ತಾನು ಅಂತಹ ಲೋಪಗಳನ್ನೆಸಗದೇ, ವಿದ್ಯಾರ್ಥಿಗಳಿಗೆ ಶಾಲೆಯಲ್ಲಿ ಹಾಗೂ ಮನೆಯಲ್ಲಿ ಕಂಡಕಂಡಲ್ಲಿ ಕಸ ಎಸೆಯದಿರುವಂತೆ, ಉಗುಳದಿರುವಂತೆ ತಿಳಿವಳಿಕೆ ನೀಡಬೇಕು.
ಅನೇಕ ಶಾಲೆಗಳಲ್ಲಿ ಶಿಕ್ಷಕರ ಕೊರತೆಯಿರುವಂತೆ ಶಿಕ್ಷಕೇತರ ಸಿಬ್ಬಂದಿಯ ಕೊರತೆಯೂ ಇದೆ. ಅಂತಹ ಸಂದರ್ಭಗಳಲ್ಲಿ ಶಾಲೆಯ ಸ್ವಚ್ಛತೆಯ ಜವಾಬ್ದಾರಿಯೂ ಶಿಕ್ಷಕರ ಮೇಲಿರುತ್ತದೆ. ಇದನ್ನು ಬುದ್ಧಿವಂತಿಕೆಯಿಂದ, ವಿದ್ಯಾರ್ಥಿಗಳಿಗೆ ಸೂಕ್ತ ತಿಳಿವಳಿಕೆ ನೀಡುವುದರಿಂದ ನಿಭಾಯಿಸುವುದು ಸುಲಭ ಸಾಧ್ಯ.
ಶಾಲೆಗೆ ಬರುವ ವಿದ್ಯಾರ್ಥಿಗಳ ನಡತೆಯಲ್ಲಿ ಒಂದೊಂದು ವಿಧ ಇರುವುದನ್ನು ಕಾಣಬಹುದು. ಶಿಸ್ತಿನ ಹೆಸರಲ್ಲಿ ಎಲ್ಲ ವಿದ್ಯಾರ್ಥಿಗಳನ್ನೂ ಒಂದೇ ತಕ್ಕಡಿಯಲ್ಲಿ ತೂಗುವುದು ಸಾಧ್ಯವಿಲ್ಲ, ಸಾಧುವೂ ಅಲ್ಲ. ಭಾರತದ ಮಾಜಿ ರಾಷ್ಟ್ರಪತಿ ಡಾ.ಎಸ್. ರಾಧಾಕೃಷ್ಣನ್ ಅವರು ಹೇಳುವಂತೆ ಅನೇಕ ಮಕ್ಕಳು ನ್ಯೂನ ಪೋಷಣೆಯಿಂದ ಮಾನಸಿಕ ನ್ಯೂನತೆ, ಆಹಾರದ ಕೊರತೆಯಿಂದ ದೈಹಿಕ ಕ್ಷೀಣತೆ, ಮನೆಯಲ್ಲಿ ಪ್ರೀತಿ, ಮಮತೆಯ ಕೊರತೆಯಿಂದ ಮಂಕಾಗಿರುವಿಕೆ ಮುಂತಾದ ಸಮಸ್ಯೆಗಳಿರುವಲ್ಲಿ ಶಿಕ್ಷಕರ ಜವಾಬ್ದಾರಿ ಹೆಚ್ಚು. ಆಗ ಶಿಕ್ಷಕ ಕೇವಲ ವಿದ್ವಾಂಸನಾಗಿದ್ದರೆ ಸಾಲದು, ಮಕ್ಕಳ ಬಗೆಗೆ ಸಹಾನುಭೂತಿ ಇರಬೇಕು.
ಅಂತಹ ಸಂದರ್ಭಗಳಲ್ಲಿ ಶಿಕ್ಷಕ ನಿರ್ದಿಷ್ಟ ವಿದ್ಯಾರ್ಥಿಯ ಮೇಲೆ ವಿಶೇಷ ಗಮನ ಹರಿಸುವ ಅನಿವಾರ್ಯತೆ ಇರುತ್ತದೆ. ಕೆಲವೊಂದು ರಿಯಾಯ್ತಿ, ಪ್ರೋತ್ಸಾಹದ ನುಡಿಗಳ ಮೂಲಕ ಮಕ್ಕಳಲ್ಲಿ ಚೈತನ್ಯ ತುಂಬಬೇಕಾಗುತ್ತದೆ. ಇದಕ್ಕೆ ಬದಲಾಗಿ ಬುದ್ಧಿವಂತ ವಿದ್ಯಾರ್ಥಿಯೊಂದಿಗೆ ಹೋಲಿಸಿ ನೀನು ಏನೂ ಪ್ರಯೋಜನವಿಲ್ಲ, ಕೆಲಸಕ್ಕೆ ಬಾರದವ, ನೀನು ಶಾಲೆಗೆ ಬರುವುದೇ ದಂಡಕ್ಕೆ ಎಂದೆಲ್ಲ ಹೀಯಾಳಿಸಿ ಬೈಯುವುದರಿಂದ ಮಕ್ಕಳ ಎಳೆಯ ಮನಸ್ಸಿನ ಮೇಲೆ ಕೆಟ್ಟ ಪರಿಣಾಮ ಬೀರುವಂತಾಗುತ್ತದೆ.
ಪರೀಕ್ಷಾ ಸಮಯದಲ್ಲಂತೂ ಮಕ್ಕಳನ್ನು ಗದರಿಸುವುದು, ಹೆದರಿಸುವುದು ಮಕ್ಕಳ ಮೇಲೆ ದುಷ್ಪರಿಣಾಮಗಳನ್ನು ಬೀರಿದಂತೆ. ಮಕ್ಕಳಲ್ಲಿ ಆತಂಕ, ಖಿನ್ನತೆ, ಭಯ ಮೂಡಬಹುದು. ಅದಕ್ಕೆ ಬದಲಾಗಿ ವರ್ಷಪೂರ್ತಿ ಪಾಠದ ಬಗ್ಗೆ ಗಮನ ಹರಿಸುವಂತೆ, ಅಂದಿನ ಪಾಠವನ್ನು ಅಂದೇ ಓದಿ ಅರ್ಥೈಸಿಕೊಳ್ಳುವಂತೆ, ಪರೀಕ್ಷೆಯ ಸಮಯದಲ್ಲಿ ನಿದ್ದೆಬಿಟ್ಟು ವಿಪರೀತ ಓದಿ ಗೊಂದಲಕ್ಕೀಡಾಗದಂತೆ ತಿಳಿವಳಿಕೆ ನೀಡುವುದು ಅಗತ್ಯ. ಇದರಿಂದ ವಿದ್ಯಾರ್ಥಿಗಳನ್ನು ಚೆನ್ನಾಗಿ ರೂಪಿಸಲು ಸಾಧ್ಯ. ಪಬ್ಲಿಕ್ ಪರೀಕ್ಷೆಗಳಲ್ಲಿ ವಿಫಲರಾದ ಅನೇಕ ಮಂದಿ ವಿದ್ಯಾರ್ಥಿಗಳು ಆತ್ಮಹತ್ಯೆಯ ಮೂಲಕ ದುರಂತಕ್ಕೀಡಾದ ಬಗ್ಗೆಯೂ ಕೇಳಿರುತ್ತೇವೆ. ಇಂತಹ ವಿದ್ಯಾರ್ಥಿಗಳಿಗೆ ಪರೀಕ್ಷೆಗೆ ಸಾಕಷ್ಟು ಮುಂಚಿತವಾಗಿಯೇ ಧೈರ್ಯ, ಆತ್ಮಸ್ಥೈರ್ಯವನ್ನು ತುಂಬುವ ಕೆಲಸವನ್ನು ಹೆತ್ತವರು ಹಾಗೂ ಶಿಕ್ಷಕರು ಮಾಡಬೇಕು.
ಒಟ್ಟಿನಲ್ಲಿ ವಿದ್ಯಾರ್ಥಿ ಪ್ರೇಮದಿಂದಲೇ ವಿದ್ಯಾರ್ಥಿಗಳ ಉನ್ನತಿಯನ್ನು ಕಂಡುಕೊಳ್ಳುವಲ್ಲಿ ಶಿಕ್ಷಕರ ಹೊಣೆಗಾರಿಕೆ ಗುರುತರವಾದುದು. ಇವುಗಳನ್ನು ಆಚರಣೆಗೆ ತರುವಲ್ಲಿ ಶಿಕ್ಷಕರ ಪ್ರಾಮಾಣಿಕ ಪ್ರಯತ್ನ ಮುಖ್ಯವಾದುದು. ಅದೇ ಶಿಕ್ಷಕರ ದಿನದ ಸಾರ್ಥಕತೆ.
-ಎನ್.ರಾಮ ಭಟ್
ಉಡುಪಿ