ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಅಂಕಣಗಳು

ಸಿರಿಯಾ ಬಾಗಿಲಿಗೆ ಯಾರೆಲ್ಲ ಬಂದಿಹರು?

Mainashree
Updated On : 5 Sept 2013, 12:48 pm

ಸಿರಿಯಾ ನೆಲದ ಮೇಲೆ ಕೆಲ ಗುರಿಗಳನ್ನಾದರೂ ದಾಳಿಗೀಡು ಮಾಡುತ್ತೇನೆ ಎಂಬ ಉತ್ಸುಕತೆಯಲ್ಲಿದೆ ಅಮೆರಿಕ. ಎದುರಿಗೆ ಕಂಡು ಬರುತ್ತಿರುವುದು ಅಮೆರಿಕವಾದರೂ ಸಿರಿಯಾದ ಮೇಲೆ ಅಂತಾರಾಷ್ಟ್ರೀಯ ಮಟ್ಟದ ಉತ್ಸಾಹವೊಂದಿದೆ. ತಮ್ಮ ಮಿಲಿಟರಿ ಸಾಧನಗಳನ್ನು ಸಿರಿಯಾದತ್ತ ಮುಖ ಮಾಡಿ ಅವಕಾಶಕ್ಕಾಗಿ ಹೊಂಚುತ್ತಿರುವ ಅರ್ಧಡಜನ್ ರಾಷ್ಟ್ರಗಳೇ ಇವೆ.
ಬಷರ್ ಅಲ್ ಅಸಾದ್‌ನ ಸಾಮ್ರಾಜ್ಯವನ್ನು ಕಲ್ಲವಿಲಗೊಳಿಸುವುದಕ್ಕೆ ಮೆಡಿಟರ್ರೇನಿಯನ್ ಸಮುದ್ರದಲ್ಲಿ ನೌಕೆಗಳನ್ನು ನಿಲ್ಲಿಸಿಕೊಂಡು ಅವುಗಳ ಎದೆಯ ಮೇಲೆ ವಾಯುನೆಲೆಯನ್ನು ನಿರ್ಮಿಸಿಕೊಂಡಿವೆ ಅಮೆರಿಕ ಹಾಗೂ ಫ್ರಾನ್ಸ್‌ಗಳು. ಈ ಸಂಘರ್ಷದಲ್ಲಿ ಸಿರಿಯಾದಿಂದ ಪ್ರತಿದಾಳಿಯಾದಾಗ ಅದರ ಪರಿಣಾಮ ನಿಯಂತ್ರಿಸುವುದಕ್ಕೆ ನಾವಲ್ಲಿ ಇರಬೇಕಲ್ಲ ಎಂಬ ಕಾರಣ ಕೊಟ್ಟು ಅಖಾಡದ ತುದಿಯಲ್ಲಿ ಕಾಯುತ್ತಿವೆ ಅಮೆರಿಕದ ಮಿಲಿಟರಿ ಮಿತ್ರ ರಾಷ್ಟ್ರಗಳಾದ ಬ್ರಿಟನ್, ಟರ್ಕಿ ಹಾಗೂ ಇಸ್ರೇಲ್. ಇನ್ನೊಂದೆಡೆ ಸಿರಿಯಾದ ಮಿತ್ರ ರಾಷ್ಟ್ರಗಳಾದ ರಷ್ಯ ಮತ್ತು ಇರಾನ್ ಆ ನೆಲದಲ್ಲೇ ಮಿಲಿಟರಿ ಸಿಬ್ಬಂದಿಯನ್ನು ಹೊಂದಿವೆ.
ಜೋರ್ಡಾನ್ ಮತ್ತು ಟರ್ಕಿಗಳಲ್ಲಿ ಅಮೆರಿಕವು ಅದಾಗಲೇ ಪೆಟ್ರಿಯಾಟ್ ಕ್ಷಿಪಣಿ ಬ್ಯಾಟರಿಗಳನ್ನು ನೆಲೆಗೊಳಿಸಿದೆ. ಮೆಡಿಟರ್ರೇನಿಯನ್ ಸಮುದ್ರದ ಪೂರ್ವಭಾಗದಲ್ಲಿ ಕ್ಷಿಪಣಿ ಧ್ವಂಸಕಗಳು ನೆಲೆಗೊಂಡಿವೆ. ಇಲ್ಲಿನ ನೌಕೆಗಳಲ್ಲಿ ಸಿರಿಯಾದ ಗ್ರೌಂಡ್ ಟಾರ್ಗೆಟ್‌ಗಳನ್ನು ಉಡಾಯಿಸುವ ಕ್ಷಿಪಣಿಗಳು ಹಾಗೂ ವಾಯುಮಾರ್ಗವಾಗಿ ಸಿರಿಯಾದಿಂದ ಬರಬಹುದಾದ ಪ್ರತ್ಯುತ್ತರವನ್ನು ನಿಭಾಯಿಸುವ 'ಸರ್ಫೇಸ್ ಟು ಏರ್‌' ಕ್ಷಿಪಣಿಗಳು ಇವೆ. ಅಮೆರಿಕವು ಸಿರಿಯಾಕ್ಕೆ ಎಚ್ಚರಿಕೆಯ ಏಟೊಂದನ್ನು ನೀಡಲಿದೆ ಎಂಬ ತಮ್ಮ ಮಾತಿಗೆ ತಕ್ಕ ನಡೆಯನ್ನು ಬರಾಕ್ ಒಬಾಮಾ ಅವರು ಅನುಸರಿಸಿದ್ದೇ ಆದರೆ ಈ ನೌಕೆಗಳು ಹಾಗೂ ಅವುಗಳಲ್ಲಿರುವ ಟೊಮಾಹಾಕ್ಸ್ ಕ್ಷಿಪಣಿಗಳು ನಿರ್ಣಾಯಕ ಪಾತ್ರವನ್ನು ವಹಿಸುತ್ತವೆ. ಈ ಶ್ರೇಣಿಯ ನಾಲ್ಕು ವಿಧ್ವಂಸಕ ಕ್ಷಿಪಣಿಗಳ ಜತೆಗೆ ಅಮೆರಿಕದ ಇನ್ನೂ ನಾಲ್ಕು ನಿರ್ದೇಶಿತ ಕ್ಷಿಪಣಿಗಳು ಜಲಾಂತರ್ಗಾಮಿ ನೌಕೆಯಲ್ಲಿ ಕುಳಿತು ಸಿರಿಯಾ ತಟದ ಬಳಿ ಇದ್ದಿರುವ ಅಂದಾಜಿದೆ. 2011ರಲ್ಲಿ ಲಿಬಿಯಾದ ಸರ್ವಾಧಿಕಾರಿ ಗಡಾಫಿಯನ್ನು ಇಳಿಸುವ ಸಂದರ್ಭದಲ್ಲಿ ಲಿಬಿಯಾವನ್ನು ಗುರಿಯಾಗಿಸಿಕೊಂಡು 'ಯುಎಸ್‌ಎಸ್ ಫ್ಲೊರಿಡಾ' ನೌಕೆ 90ಕ್ಕಿಂತಲೂ ಹೆಚ್ಚು ಟೊಮಾಹಾಕ್ಸ್ ಶ್ರೇಣಿಯ ಕ್ಷಿಪಣಿಗಳನ್ನು ಸಿಡಿಸಿತ್ತು ಎಂಬುದನ್ನು ನೆನಪು ಮಾಡಿಕೊಳ್ಳಬಹುದು.
ಇದೇ ವೇಳೆ ಪರ್ಷಿಯನ್ ಗಲ್ಫ್‌ನಲ್ಲಿರುವ ಅಮೆರಿಕದ ನೆಲೆಗಳು ಹಾಗೂ ಟರ್ಕಿಯ ಇಂಕ್ರಿಲಿಕ್‌ನಲ್ಲಿರುವ ನ್ಯಾಟೊ ಪಡೆಯ ದೈತ್ಯ ನೆಲೆಗಳಿಂದ ಕಾರ್ಯಾಚರಿಸಲಿರುವ ಅಮೆರಿಕ ವಾಯುಪಡೆಯ ಗೂಢಚರ ವಿಮಾನಗಳು ಸಿರಿಯಾ ಪಡೆಯ ಸಂವಹನ ಮಾಹಿತಿಗಳನ್ನು ಬೇಧಿಸುವ ಕೆಲಸ ಮಾಡಲಿವೆ. ಕತಾರ್‌ನ ಅಲ್ ಉದೈದ್ ವಾಯುನೆಲೆ ಹಾಗೂ ಯುನೈಟೆಡ್ ಅರಬ್ ಎಮಿರೇಟ್‌ನ ಧಾಫ್ರಾ ವಾಯುನೆಲೆಗಳಲ್ಲಿ ಅದಾಗಲೇ ಇ-8 ಜಾಯಿಂಟ್ ಸ್ಟಾರ್ ಶ್ರೇಣಿಯ ರಡಾರ್ ವಿಮಾನಗಳು ಹಾಗೂ 'ಯು-2 ಡ್ರಾಗನ್ ಲೇಡಿ', 'ಆರ್‌ಕ್ಯೂ ಗ್ಲೋಬಲ್ ಹಾಕ್‌' ಗೂಢಚರ ವಿಮಾನಗಳು ಜಮೆಯಾಗಿವೆ. ಇವು ಸಿರಿಯಾ ನೆಲದ ದಾಳಿಯ ಗುರಿಗಳನ್ನು ಗುರ್ತಿಸುತ್ತವೆ. ಇದೇ ಪರ್ಷಿಯನ್ ಗಲ್ಫ್ ಪ್ರದೇಶವು ವೈರಿಗಳ ರೆಡಿಯೋ ಸಂವಹನ ಹಾಗೂ ರಡಾರ್ ಸಂಕೇತಗಳನ್ನು ಬೇಧಿಸುವುದಕ್ಕೆ ನಿಯಮಿತವಾಗಿ ಸ್ಪೈ ವಿಮಾನಗಳನ್ನು ಹಾರಿಸುತ್ತದೆ. ಜತೆಯಲ್ಲಿ ಬಿ-1 ಲ್ಯಾನ್ಸರ್ ಹೆವಿ ಬಾಂಬರ್‌ಗಳು, ಕೆಸಿ-135 ಮತ್ತು ಕೆಸಿ-10 ಟ್ಯಾಂಕರ್‌ಗಳು ಇವೆ.
ಅರಬ್ ಎಮಿರೇಟ್‌ನ ವಾಯುನೆಲೆಯಲ್ಲಿ ಅಮೆರಿಕ ಯುದ್ಧ ವಿಮಾನಗಳ ಪಕ್ಕದಲ್ಲೇ ತನ್ನ ಕ್ರೂಸ್ ಮಿಸೈಲ್‌ಗಳನ್ನು ಹೊತ್ತ ಫೈಟರ್ ಜೆಟ್‌ಗಳನ್ನು ಕಳುಹಿಸಿರುವ ಫ್ರಾನ್ಸ್, ಸಿರಿಯಾದ ವಿರುದ್ಧ ಗುಟುರು ಹಾಕುವುದಕ್ಕೆ ತಾನೂ ಇದ್ದೇನೆ ಎಂಬುದನ್ನು ಸ್ಪಷ್ಟಪಡಿಸಿದೆ. ಕ್ಷಿಪಣಿ ನಿರೋಧಕ ಕ್ಷಿಪಣಿಗಳು ಹಾಗೂ ಆ್ಯಂಟಿ ಏರ್‌ಕ್ರಾಫ್ಟ್ ಸಲಕರಣೆ ಉಳ್ಳ ಫ್ರಾನ್ಸ್‌ನ ನೌಕೆ 'ಷೆವಲೀರ್ ಪೌಲ್‌' ಮೆಡಿಟರ್ರೆನಿಯನ್‌ನ ಪೂರ್ವಭಾಗಕ್ಕೆ ಹೊರಟಿದೆ. ಫ್ರಾನ್ಸ್ ಸರ್ಕಾರ ಇದು ಕೇವಲ ತರಬೇತು ಚಟುವಟಿಕೆ ಎಂದರೆ ಎಂದು ಹೇಳುತ್ತಿದ್ದರೂ ಅದರ ಒಳಸುಳಿಗಳು ಸ್ವಯಂವೇದ್ಯ.
ಸಿರಿಯಾ ಬಾಗಿಲಲ್ಲಿ ನಿಂತಿರುವ ಇನ್ನೊಂದು ಅತಿ ಪ್ರಮುಖ ಮಿಲಿಟರಿ ಶಕ್ತಿ ಎಂದರೆ ಟರ್ಕಿ. 2012ರಲ್ಲಿ ಇದೇ ಟರ್ಕಿಯ ಆರ್‌ಎಫ್-4 ಪ್ಯಾಂಥಮ್ ಫೈಟರ್ ಜೆಟ್‌ಗಳನ್ನು ಸಿರಿಯಾ ಹೊಡೆದುರುಳಿಸಿತ್ತು. ಇದೀಗ ತಾನು ಅಸಾದ್ ಆಳ್ವಿಕೆಯನ್ನು ಕೊನೆಗೊಳಿಸುವುದಕ್ಕೆ ಸಿದ್ಧ ಎಂದು ತೊಡೆ ತಟ್ಟಿರುವ ಟರ್ಕಿ, ತನ್ನ ನೆಲದಲ್ಲಿರುವ ನ್ಯಾಟೊ ನೆಲೆಯನ್ನು ಬಳಸಿಕೊಳ್ಳುವುದಕ್ಕೆ ಅಮೆರಿಕಕ್ಕೆ ಅನುವು ಮಾಡಿಕೊಡುವ ಮೂಲಕ ಸಹಕರಿಸುವ ಸಾಧ್ಯತೆ ಇದೆ. ಇನ್ನೂ ಹೆಚ್ಚಿನ ಪಾಲ್ಗೊಳ್ಳುವಿಕೆಗೆ ಟರ್ಕಿ ನಿರ್ಧರಿಸಿದ್ದೇ ಆದಲ್ಲಿ ದೂರಗಾಮಿ ಕ್ರೂಸ್ ಮಿಸೈಲ್‌ಗಳು ಹಾಗೂ ಭೂದಾಳಿ ಕ್ಷಿಪಣಿಗಳನ್ನು ಹೊಂದಿರುವ ಅದರ ಸಮರ್ಥ ವಾಯುಪಡೆಯನ್ನು ಉಪಯೋಗಿಸಿಕೊಳ್ಳುವ ಅವಕಾಶ ಅಮೆರಿಕಕ್ಕೆ ಸಿಗಲಿದೆ. ಸಿರಿಯಾ ಪ್ರತ್ಯುತ್ತರ ಎದುರಿಸಲು ಟರ್ಕಿ ಅದಾಗಲೇ ತನ್ನ ಗಡಿಗುಂಟ ಆ್ಯಂಟಿ ಏರ್‌ಕ್ರಾಫ್ಟ್ ಮಿಸೈಲ್ ಬ್ಯಾಟರಿಗಳನ್ನು ನೆಲೆಗೊಳಿಸಿದೆ.
ಇನ್ನು ಸಿರಿಯಾದ ದಕ್ಷಿಣದಲ್ಲಿರುವ ಜೋರ್ಡಾನ್‌ಗೆ ಈ ಸಂಘರ್ಷದಲ್ಲಿ ಪಾಲ್ಗೊಳ್ಳುವ ಇರಾದೆ ಇಲ್ಲ. ಆದರೂ ಅಮೆರಿಕ ದಾಳಿಗೆ ಪ್ರತಿಯಾಗಿ ಸಿರಿಯಾ ಸಿಡಿಸುವ ಕ್ಷಿಪಣಿಗಳಿಂದ ರಕ್ಷಣೆ ಪಡೆಯುವುದಕ್ಕೆ ಈ ದೇಶ ತನ್ನ ನೆಲದಲ್ಲಿ ಅಮೆರಿಕದ ಏರ್ ಡಿಫೆನ್ಸ್ ಮಿಸೈಲ್‌ಗಳಲ್ಲಿ ಹಾಗೂ ಫೈಟರ್ ಜೆಟ್‌ಗಳಿಗೆ ಜಾಗ ಕೊಟ್ಟಿದೆ.
ಇನ್ನು ಬ್ರಿಟನ್ ತನ್ನ ಸಂಸತ್ತಿನ ಧ್ವನಿಗೆ ಅನುಗುಣವಾಗಿ ಸಿರಿಯಾ ವಿರುದ್ಧದ ದಾಳಿಯಲ್ಲಿ ಪಾಲ್ಗೊಳ್ಳುವುದಿಲ್ಲ ಎಂದು ಹೇಳಿದೆ. ಆದರೆ ಆ ಭಾಗದಲ್ಲಿ ತನ್ನ ನೆಲೆಗಳನ್ನು ರಕ್ಷಿಸಿಕೊಳ್ಳುವುದಕ್ಕೆ ಆರು ಫೈಟರ್ ಜೆಟ್‌ಗಳನ್ನು ಈಗಾಗಲೇ ರವಾನಿಸಿದೆ. ಸಂಘರ್ಷದ ಸಮಯ ನಿಭಾಯಿಸುವ ಮುನ್ನೆಚ್ಚರಿಕೆ ಕ್ರಮ ಇದಷ್ಟೇ ಎಂಬುದು ಬ್ರಿಟನ್‌ನ ಸಮರ್ಥನೆ.
ಇನ್ನು, ಸಿರಿಯಾಕ್ಕೂ ಅದರ ಸ್ನೇಹಿತರಿದ್ದಾರೆ. ರಷ್ಯ ಬಹಳ ಕಾಲದಿಂದ ಸಿರಿಯಾಕ್ಕೆ ಶಸ್ತ್ರ ಪೂರೈಸುತ್ತಿರುವ ದೇಶ. ದಾಳಿ ಮಾಡದಿರುವಂತೆ ಅಮೆರಿಕವನ್ನು ಎಚ್ಚರಿಸಿರುವ ರಷ್ಯ, ಸಿರಿಯಾಕ್ಕೆ ಮಿಸೈಲ್ ಕ್ರೂಸರ್ ಹಾಗೂ ಆ್ಯಂಟಿ ಸಬ್‌ಮೆರಿನ್ ಶಿಪ್ ಅನ್ನೂ ಕಳುಹಿಸಿದೆ. ಸಂಘರ್ಷಕ್ಕೆ ಸಂಬಂಧಿಸಿದ ಕ್ರಮವೇನೂ ಅಲ್ಲ ಎಂಬುದು ಅದರ ಹೇಳಿಕೆ. ಸಿರಿಯಾ ತೀರದಲ್ಲಿರುವ ಟರ್ಟಸ್ ನೌಕಾನೆಲೆ ರಷ್ಯದ ಪಾಲಿಗೆ ಪ್ರಮುಖವಾದದ್ದು. ಮೆಡಿಟರ್ರೇನಿಯನ್ ಪ್ರದೇಶದಲ್ಲಿ ಹೆಚ್ಚುತ್ತಿರುವ ರಷ್ಯದ ನೌಕಾ ಚಟುವಟಿಕೆಗಳಿಗೆ ಇದು ಪೂರಕವಾಗಿದೆ. ಆಗಸ್ಟ್ 27ರಂದು ಸಿರಿಯಾದ ಲಟಕಿಯಾ ಬಂದರಿಗೆ ಹಾರಿದ್ದ ರಷ್ಯದ ಕಾರ್ಗೋ ಪ್ಲೇನ್‌ಗಳು ಎರಡೇ ತಾಸು ಅಲ್ಲಿದ್ದು, ಸಿರಿಯಾ ತೊರೆಯುವ ನಿರ್ಧಾರದ 12 ಮಂದಿ ರಷ್ಯನ್ನರನ್ನು ಕರೆತಂದಿತು.
ಅಮೆರಿಕ ದಾಳಿ ಮಾಡಿದರೆ ಪ್ರತಿದಾಳಿಗೆ ಸಹಕರಿಸುವುದಾಗಿ ಸಿರಿಯಾ ಬೆನ್ನಿಗೆ ನಿಂತಿರುವ ಇನ್ನೊಂದು ರಾಷ್ಟ್ರ ಇರಾನ್. ಲೆಬನಾನ್ ಮತ್ತು ಸಿರಿಯಾಗಳಲ್ಲಿ ಇರಾನ್‌ನ ಹಿತಾಸಕ್ತಿ ಕಾಪಾಡುತ್ತಿರುವ ಹೆಜ್‌ಬೊಲ್ಲಾಹ್ ಪಡೆ, ಅಸಾದ್‌ನ ವಿರುದ್ಧ ಬಂಡೆದ್ದಿರುವ ಸುನ್ನಿ ಸಮೂಹವನ್ನು ನಿಯಂತ್ರಿಸುವ ಕೆಲಸ ಮಾಡುತ್ತಿದೆ. ಆದರೆ ಸಿರಿಯಾದ ಬಳಿ ಪ್ರಮುಖ ಯುದ್ಧನೌಕೆಗಳನ್ನೇನೂ ಇರಾನ್ ಸ್ಥಿರಗೊಳಿಸಿಲ್ಲ.
ಆದರೆ ಸಮುದ್ರದಾಚೆಗಿನ ಮಿಲಿಟರಿ ದಾಳಿಗಳಿಗೆಂದೇ ರೂಪಿತವಾಗಿರುವ ಇರಾನ್ ಕ್ಷಿಪ್ರಪಡೆ ಕ್ವದ್ಸ್ ಫೋರ್ಸ್, ವರ್ಷಗಳಿಂದ ಸಿರಿಯಾ ಸೇನೆಗೆ ಅಲ್ಲಿನ ಬಂಡುಕೋರರನ್ನು ಹತ್ತಿಕ್ಕುವ ಸಮರ ತರಬೇತು ಮತ್ತು ಸಲಕರಣೆಗಳನ್ನು ನೀಡುತ್ತಿದೆ. ಸಿರಿಯಾದ ಹೆಚ್ಚಿನ ಮಿಲಿಟರಿ ಹಾರ್ಡ್‌ವೇರ್‌ಗಳು ರಷ್ಯ ಮತ್ತು ಚೀನಾಗಳಿಂದ ಬರುತ್ತವೆಯಾದರೂ ಇರಾನ್ ಅಸಾದ್‌ಗೆ ಡ್ರೋನ್‌ಗಳನ್ನು, ರಾಕೆಟ್‌ಗಳನ್ನು, ಆ್ಯಂಟಿ ಟ್ಯಾಂಕ್ ಮಿಸೈಲ್‌ಗಳನ್ನು ನೀಡುತ್ತದೆ.
ಅಸಾದ್ ವಿರುದ್ಧದ ಅಮೆರಿಕ ದಾಳಿಯಲ್ಲಿ ತಾನು ಪಾಲ್ಗೊಳ್ಳುವುದಿಲ್ಲ ಎಂದು ಇಸ್ರೇಲ್ ಹೇಳಿದೆಯಾದರೂ, ಅದು ಇದಕ್ಕೂ ಮೊದಲೇ ಆಗಾಗ ಸಿರಿಯಾಕ್ಕೆ ಪೆಟ್ಟು ಕೊಡುತ್ತಲೇ ಬಂದಿದೆ. ಸಿರಿಯಾವು ಭಯೋತ್ಪಾದಕರಿಗೆ ಶಸ್ತ್ರಗಳನ್ನು ಪೂರೈಸುವುದನ್ನು ತಡೆಯುವುದಕ್ಕೆ ಅದರ ಹಲವು ನೆಲೆಗಳ ಮೇಲೆ ದಾಳಿ ಮಾಡಿದ ಉದಾಹರಣೆ ಇದೆ. ಇದೀಗ ಸಂಘರ್ಷ ಸಾಧ್ಯತೆ ದಟ್ಟವಾಗುತ್ತಿದ್ದಂತೆ ಇಸ್ರೇಲ್, ಸಿರಿಯಾ ಬಳಿ ತನ್ನ ಗಡಿಗೆ ಹೆಚ್ಚುವರಿ ಪಡೆಯನ್ನು ನಿಯೋಜಿಸಿದೆ.
 
- ಜಾನ್ ರೀಡ್
ಫಾರಿನ್‌ಪಾಲಿಸಿ ಜರ್ನಲ್

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement