ಬಾಲಿವುಡ್ ನಟರಿಗೂ ರೈಲ್ವೇ ಪರೀಕ್ಷೆಗೂ ಸಂಬಂಧವೇನು?
ಭಾರತೀಯ ರೈಲ್ವೆಯ ಹಲವು ಹುದ್ದೆಗಳ ನೇಮಕಾತಿಗೆ ಸಂಬಂಧಿಸಿದಂತೆ ಆಗಸ್ಟ್ 18, 2013 ರಂದು ನಡೆಯುತ್ತಿದ್ದ ಪರೀಕ್ಷೆಗೆ ಹಾಜರಾಗಲು ನನ್ನ ಸಂಬಂಧಿಕರೊಬ್ಬರು ದೂರದ ಉತ್ತರ ಕರ್ನಾಟಕದ ಊರಿಂದ ಬಂದಿದ್ದರು. ಬೆಂಗಳೂರು ಅವರಿಗೆ ಅಷ್ಟು ಪರಿಚಿತವಲ್ಲದ ಕಾರಣ, ಅವರ ಪರೀಕ್ಷಾ ಕೇಂದ್ರವಾಗಿದ್ದ ಕಾಲೇಜ್ ಒಂದನ್ನು ಹುಡುಕಿಕೊಡಲು ನಾನು ಅವರೊಡನೆ ಹೋಗಬೇಕಾಯಿತು. ವಿವಿಧ ಪದವೀಧರರು ರಾಜ್ಯದ ನಾನಾ ಜಿಲ್ಲೆಯಿಂದ ಈ ಪರೀಕ್ಷೆಗೆ ಹಾಜರಾಗಲು ಬಂದಿದ್ದರು. ನಾನಾ ಥರದ ಹುದ್ದೆಗಳಿಗೆ ಅಂದು ಪರೀಕ್ಷೆ ನಡೆದಿದ್ದವು. ಕನ್ನಡಿಗರು-ತೆಲುಗರು-ಹಿಂದಿ ಭಾಷಿಕರು ಸೇರಿದಂತೆ ಅನೇಕರು ಪರೀಕ್ಷೆ ಬರೆಯಲು ಬಂದಿದ್ದರು.
ಪರೀಕ್ಷೆ ಬರೆದು ಹೊರಗೆ ಬಂದ ಅಭ್ಯರ್ಥಿಗಳು ಗುಂಪಾಗಿ ನಿಂತುಕೊಂಡು ಪ್ರಶ್ನೆಗಳ ಬಗ್ಗೆ ಚರ್ಚಿಸುತ್ತಿದ್ದರು. ಅವರ ಪ್ರಕಾರ ಒಬ್ಬರಿಗೆ ಬಂದ ಪ್ರಶ್ನೆ ಪತ್ರಿಕೆ ಇನ್ನೊಬ್ಬರಿಗೆ ಬಂದಿರಲಿಲ್ಲ. ಒಬ್ಬರ ಉತ್ತರ ಮತ್ತೊಬ್ಬರು ನಕಲು ಮಾಡಬಾರದು ಎಂದು ಹೀಗೆ ಮಾಡುವುದು ಸಹಜ. ಹೀಗೆ ಬೇರೆ ಬೇರೆ ಪ್ರಶ್ನೆ ಪತ್ರಿಕೆಯಲ್ಲಿ ಸಾಮಾನ್ಯ ಜ್ಞಾನ ಸಂಬಂಧಿತ ಪ್ರಶ್ನೆಗಳನ್ನು ಕೇಳುತ್ತಿದ್ದಾಗ ದಂಗು ಬಡಿಯೋ ಸರದಿ ನನ್ನದಾಯಿತು. ಒಬ್ಬರಿಗೆ ಬಂದಿದ್ದ ಪ್ರಶ್ನೆ 'ಛೋಟಾ ಭೀಮ್‌ನಲ್ಲಿ (ಹಿಂದಿ ಕಾರ್ಟೂನ್ ಧಾರಾವಾಹಿ) ಬರುವ ನಗರದ ಹೆಸರೇನು?', ಮತ್ತೊಬ್ಬರಿಗೆ 'ಇತ್ತೀಚೆಗಷ್ಟೇ ನಿಧನರಾದ ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿ ವಿಜೇತ ಬಾಲಿವುಡ್ ನಟ ಯಾರು?', ಮಗದೊಬ್ಬರಿಗೆ 'ಇತ್ತೀಚೆಗಷ್ಟೇ ಕೋರ್ಟ್ ತೀರ್ಪಿನಿಂದ ಜೈಲು ಸೇರಿ ಶಿಕ್ಷೆ ಅನುಭವಿಸುತ್ತಿರುವ ಬಾಲಿವುಡ್ ನಟ ಯಾರು?' ಎಂಬುದು. ಹೊಂದಿಸಿ ಬರೆಯಿರಿ ವಿಭಾಗದಲ್ಲಿ 4 ನಗರಗಳು ಮತ್ತು ಅಲ್ಲಿರುವ ಸ್ಮಾರಕಗಳನ್ನು ಸರಿಯಾಗಿ ಹೊಂದಿಸಬೇಕು. ಕೊಟ್ಟಿದ್ದ ನಗರಗಳೆಲ್ಲ ಉತ್ತರಭಾರತದ ನಗರಗಳೇ!
ಈ ಪ್ರಶ್ನೆಗಳ ಹಿಂದಿನ ಉದ್ದೇಶ ಊಹಿಸುವ ಹೊತ್ತಲ್ಲೇ ರೈಲ್ವೆ ಪರೀಕ್ಷೆಗಳ ಇತಿಹಾಸದ ಮೇಲೆ ಒಂಚೂರು ಕಣ್ಣು ಹಾಯಿಸಬೇಕು. ಈ ಹಿಂದೆ ಭಾರತೀಯ ರೈಲ್ವೆಯ ಯಾವುದೇ ವಿಭಾಗದ-ವಲಯದ ಹುದ್ದೆಗಳ ನೇಮಕಾತಿಗೆ ನಡೆಯುತ್ತಿದ್ದ ಪರೀಕ್ಷೆಗಳು ಹಿಂದಿಯನ್ನು ಹೊರತುಪಡಿಸಿ ಮತ್ಯಾವುದೇ ಪ್ರಾದೇಶಿಕ ಭಾಷೆಗಳಲ್ಲಿ ನಡೆಯುತ್ತಿರಲಿಲ್ಲ. ಹಿಂದಿ ಭಾಷಿಕರು ತಮ್ಮ ಭಾಷೆ ಯಲ್ಲೂ, ಉಳಿದವರು ಹಿಂದಿಯನ್ನು ಕಲಿತು ಹಿಂದಿಯಲ್ಲೋ ಅಥವಾ ಇಂಗ್ಲೀಷಿನಲ್ಲೋ ಪರೀಕ್ಷೆ ಬರೆಯಬೇಕಾಗಿತ್ತು! ಹಲವಾರು ಭಾಷೆ ಮಾತಾಡುವವರಿರುವ ದೇಶದಲ್ಲಿ ಕೇವಲ ಒಂದು ಭಾಷೆ(ಹಿಂದಿ) ಮಾತಾಡುವವರಿಗೆ ಅನುಕೂಲ ಮಾಡಿಕೊಡುತ್ತಿದ್ದ ಇಂಥ ವ್ಯವಸ್ಥೆ, ರೈಲ್ವೆ ಪರೀಕ್ಷೆ ನಡೆಯುವ ದಿನ ಹಲವಾರು ಘರ್ಷಣೆಗೆ (ಮಹಾರಾಷ್ಟ್ರ) ಎಡೆ ಮಾಡಿಕೊಟ್ಟಿದ್ದ ಉದಾಹರಣೆಗಳೂ ಇವೆ. ಕನ್ನಡದಲ್ಲೇ ರೈಲ್ವೆ ಪರೀಕ್ಷೆ ನಡೆಸಬೇಕೆಂದು ಕನ್ನಡಪರ ಸಂಘಟನೆಯೊಂದು ಸತತ ಹೋರಾಟದ ಮೂಲಕ ಕೇಂದ್ರ ಸರ್ಕಾರದ ಮೇಲೆ ಒತ್ತಡ ಹೇರುತ್ತಲೇ ಇತ್ತು. ಇದೆಲ್ಲದರ ಫಲವಾಗಿ 2009ರಲ್ಲಿ ಕೇಂದ್ರದ ರೈಲ್ವೆ ಮಂತ್ರಿಯಾಗಿದ್ದ ಮಮತಾ ಬ್ಯಾನರ್ಜಿ ಆಯಾ ರಾಜ್ಯಗಳ ಭಾಷೆಗಳಲ್ಲೂ ರೈಲ್ವೆ ಪರೀಕ್ಷೆ ನಡೆಸುವ ನಿಯಮ ಜಾರಿಗೆ ತಂದರು.
ಆದರ, ಕನ್ನಡದಲ್ಲಿ ಪರೀಕ್ಷೆ ಬರೆಯುವ ಅನುಕೂಲ ತಂದ ಸಂತಸ ಹೆಚ್ಚು ಕಾಲ ಉಳಿಯುವಂಥದ್ದಲ್ಲ ಅನ್ನುವ ಭಾವನೆ ಪರೀಕ್ಷೆಗಳಲ್ಲಿ ಕೇಳುತ್ತಿರುವ ಪ್ರಶ್ನೆಗಳನ್ನು ನೋಡಿದರೆ ಮೂಡುತ್ತದೆ. ಬಾಲಿವುಡ್‌ನ ಆಗು-ಹೋಗುಗಳ ಬಗ್ಗೆ, ಹಿಂದಿ ಧಾರಾವಾಹಿಗಳ ಬಗ್ಗೆ, ಉತ್ತರ ಭಾರತದ ಇತಿಹಾಸದ ಬಗ್ಗೆ ತಿಳಿದುಕೊಂಡಿರಬೇಕು ಅನ್ನುವ ಧೋರಣೆ ಹಿಂದಿಯೇತರರನ್ನು ಇನ್ನೊಂದು ಹಾದಿಯಲ್ಲಿ ನೇಮಕಾತಿಯಿಂದ ದೂರ ಇಡುವ ಪ್ರಯತ್ನವೇ ಅನ್ನಿಸುತ್ತದೆ. ಇದಕ್ಕೆ ಕಳಶವಿಟ್ಟಂತೆ ಈ ಪರೀಕ್ಷೆಯಲ್ಲಿ ತಪ್ಪು ಉತ್ತರಕ್ಕೆ 1/3 ನೆಗೆಟಿವ್ ಅಂಕವಿದೆ. ಅಂದರೆ 3 ಪ್ರಶ್ನೆಗೆ ತಪ್ಪು ಉತ್ತರ ಕೊಟ್ಟರೆ ಗಳಿಸಿರುವ ಅಂಕಗಳಿಂದ ಅಭ್ಯರ್ಥಿ ಒಂದು ಅಂಕ ಕಳೆದುಕೊಳ್ಳುತ್ತಾನೆ. ಮೇಲೆ ತಿಳಿಸಿದ ಪ್ರಶ್ನೆಗಳಿಗೆ ಉತ್ತರ ತಿಳಿಯದೆ ಇದ್ದದ್ದಕ್ಕೆ ಅಥವಾ ತಪ್ಪಾಗಿ ಉತ್ತರಿಸಿದ್ದಕ್ಕೆ ಹಿಂದಿಯೇತರರು ಪೇಚಾಡುತ್ತಿದ್ದ ಸನ್ನಿವೇಶಗಳು ಅಲ್ಲಿ ಸಾಮಾನ್ಯವಾಗಿತ್ತು. ಈ ಪರೀಕ್ಷೆ ಬರೆದ ಮೇಲೆ ಪ್ರಶ್ನೆ ಪತ್ರಿಕೆ ಹೊರ ತರುವ ಹಾಗಿಲ್ಲ. ಅಭ್ಯರ್ಥಿಗಳು ಉತ್ತರಿಸಿದ ಹಾಳೆಯ ಪ್ರತಿ ಕೂಡ ನೀಡುವ ವ್ಯವಸ್ಥೆಯೂ ಇಲ್ಲ. 'ಪ್ರಾದೇಶಿಕ ಭಾಷೆಗಳಲ್ಲಿ ಪರೀಕ್ಷೆ' ಅನ್ನುವ ನಿರ್ಧಾರ ಸರಿಯಾದುದೇ ಆದರೂ ಪರೀಕ್ಷೆ ನಡೆಸುವ ವಿಧಾನದಿಂದ ಹಿಂದಿಯೇತರರಿಗೆ ತಾರತಮ್ಯ ಆಗದೆ ಇರುವಂತೆ ಕನ್ನಡಿಗರೂ, ಕೇಂದ್ರದ ರೈಲ್ವೆ ಸಚಿವರೂ ಆಗಿರುವ ಮಾನ್ಯ ಮಲ್ಲಿಕಾರ್ಜುನ ಖರ್ಗೆಯವರು ಎಚ್ಚರ ವಹಿಸಬೇಕು.
- ಅನ್ನದಾನೇಶ.ಶಿ.ಸಂಕದಾಳ,
ಬೆಂಗಳೂರು