ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಅಂಕಣಗಳು

ಸಾಲಸ್ಕರ್ ಹೀರೋ, ವನ್ಝಾರಾ ವಿಲನ್ನಾ?

Mainashree
Updated On : 12 Sept 2013, 1:11 am

ಮುಂಬೈ ಪೊಲೀಸ್ ಇಲಾಖೆಯ ಸಬ್‌ಇನ್ಸಪೆಕ್ಟರ್ ಆಗಿದ್ದ ವಿಜಯ್ ಸಾಲಸ್ಕರ್ ನವೆಂಬರ್ 26, 2008ರಂದು ಲಷ್ಕರ್-ಎ- ತಯ್ಬಾದ ಉಗ್ರರ ದಾಳಿಗೆ ಬಲಿಯಾದರು. ಅವರು ಡ್ರೈವ್ ಮಾಡುತ್ತಿದ್ದ ವಾಹನದಲ್ಲಿ ಹೇಮಂತ್ ಕರ್ಕರೆ ಮತ್ತು ಅಶೋಕ್ ಕಾಮ್ಟೆ ಕೂಡ ಇದ್ದರು.
 26/11 ರಂದು ನಡೆದ ಮುಂಬೈ ದಾಳಿಯ ತೀವ್ರತೆ ಎಷ್ಟಿದೆ ಎನ್ನುವುದಕ್ಕೆ ಈ ಘಟನೆ ಸಾಕ್ಷಿಯಾಗಿತ್ತು. ಮಹಾರಾಷ್ಟ್ರ ಸರ್ಕಾರ  'ಶೌರ್ಯ ಪ್ರಶಸ್ತಿಗೆ' ಸಾಲಸ್ಕರ್ ಅವರ ಹೆಸರನ್ನು ಶಿಫಾರಸು ಮಾಡಿತು. ಜನವರಿ 26, 2009 ರಂದು, ಅಂದರೆ ಅವರ ಸಾವಿನ ಮೂರು ತಿಂಗಳ ನಂತರ ಕೇಂದ್ರ ಸರ್ಕಾರ ಅವರ ಹೆಸರನ್ನು ಅಶೋಕ ಚಕ್ರಕ್ಕೆ ಸೂಚಿಸಿತು.  ಇನ್ನು ಅದೇ ವರ್ಷ ಪಿ. ಚಿದಂಬರಂ ಅವರು ಮುತುವರ್ಜಿ ವಹಿಸಿ ಸಾಲಸ್ಕರ್ ಅವರ ಮಗಳಿಗೆ ಸರ್ಕಾರಿ ನೌಕರಿ ಸಿಗುವಂತೆ ಮಾಡಿದರು. ನಿಸ್ಸಂಶಯವಾಗಿಯೂ ಮುಂಬರುವ ವರ್ಷಗಳಲ್ಲಿ ಸಾಲಸ್ಕರ್ ಮತ್ತು ಅವರ ಸಹವರ್ತಿಗಳ ಸಾಹಸಗಾಥೆ ಶಾಲಾ ಪಠ್ಯಪುಸ್ತಕಗಳಲ್ಲಿ ಸ್ಥಾನಪಡೆಯಲಿದೆ.
ಹಾಗಿದ್ದರೆ ಸಾಲಸ್ಕರ್ ಸಾಯುವುದಕ್ಕೂ ಮುನ್ನ ಅವರು ನಡೆದು ಬಂದ ಹಾದಿ ಹೇಗಿತ್ತು? 20 ವರ್ಷಗಳಿಂದ ಅವರು ಕೆಚ್ಚೆದೆಯ ಮುಂಬೈ ಪೊಲೀಸ್ ಎಂದೇ ಹೆಸರು ಪಡೆದಿದ್ದರು. ಮುಂಬೈನ ಭೂಗತಪಾತಕಿಗಳನ್ನು ಗುಡಿಸಿಹಾಕಲು ತರಬೇತಿ ಪಡೆದಿದ್ದ ತಂಡದಲ್ಲಿ ಅವರೂ ಒಬ್ಬರು. 1980ರ ವೇಳೆಗೆ ಬೃಹತ್ ಶಕ್ತಿಗಳಾಗಿ ಮುಂಬೈನ ಕ್ರಿಮಿನಲ್ ಗುಂಪುಗಳು ಬೆಳೆದಾಗ (ಇವುಗಳಲ್ಲಿ ಕೆಲವು ಉಗ್ರ ಸಂಘಟನೆಗಳೊಂದಿಗೆ ಜೊತೆಯಾದವು) ಅವನ್ನೆಲ್ಲ ಮೆತ್ತಗೆ ಮಾಡಿ, ಮುಂಬೈಯನ್ನು ರಕ್ಷಿಸುವುದಕ್ಕಾಗಿ ಮಹಾರಾಷ್ಟ್ರ ಸರ್ಕಾರ ವಿಶೇಷ ನೀತಿಯೊಂದನ್ನು ಅಳವಡಿಸಿಕೊಳ್ಳಲು ಮುಂದಾಯಿತು.
ಈ ಹೊಸ ತಂತ್ರದಲ್ಲಿ ಅತಿ ಯಶಸ್ವಿಯಾಗಿದ್ದು ಸಾಲಸ್ಕರ್. 1983ರಲ್ಲಿ ಕ್ರಿಮಿನಲ್ಲೊಬ್ಬನನ್ನು ಗುಂಡಿಟ್ಟು ಕೊಂದು ಅವರು ತಮ್ಮ ಮೊದಲ ಬಲಿ ಪಡೆದರು. ಇದಷ್ಟೇ ಅಲ್ಲ, ಮುಂದಿನ ವರ್ಷಗಳಲ್ಲಿ 70-80 ಕ್ರಿಮಿನಲ್‌ಗಳನ್ನು(ಗ್ಯಾಂಗ್‌ಸ್ಟರ್‌ಗಳು, ಚಿಕ್ಕ ಪುಟ್ಟ ಕ್ರಿಮಿನಲ್‌ಗಳು, ಭಯೋತ್ಪಾದಕರ ಸಹಾಯಕರನ್ನೊಳಗೊಂಡು) ಕೊಂದುಹಾಕಿದರು. ಹಾಗಿದ್ದರೆ ಇಷ್ಟು ಜನರನ್ನು ಸಾಲಸ್ಕರ್ ಕೊಂದದ್ದು ಹೇಗೆ? ಖಂಡಿತವಾಗಿ ಅವರಿಗೆಲ್ಲ ಲಾಲಿಪಾಪ್ ತಿನಿಸಿಯಂತೂ ಅಲ್ಲ!
ಸಾಲಸ್ಕರ್ ಒಬ್ಬ ಎನ್ಕೌಂಟರ್ ತಜ್ಞ. ಅವರಿಗೆ ತಮ್ಮದೇ ಆದ ವಿಧಾನಗಳಿದ್ದವು. ಸರ್ಕಾರ ಕೂಡ 'ಕೇಳಬೇಡ-ಹೇಳಬೇಡ' ಎನ್ನುವ ನಿಯಮಕ್ಕೆ ಶರಣಾಗಿತ್ತು. ಅವರ ಪತ್ರಗಳನ್ನು ಯಾರೂ ಲೀಕ್ ಮಾಡಲಿಲ್ಲ. ಇಂಥ ಕೆಲಸವನ್ನು ಬೆಂಬಲಿಸುತ್ತಿದ್ದ ಮುಂಬೈ ಪೊಲೀಸ್ ಅಥವಾ ರಾಜಕಾರಣಿಗಳನ್ನು ಪ್ರಶ್ನಿಸುವ ಯಾವ ಹೋರಾಟಗಾರರು ಆಗ ಇರಲಿಲ್ಲ. ಸಾಲಸ್ಕರ್ ಅವರ ವೃತ್ತಿ ಜೀವನದ ದಾಖಲೆಗಳನ್ನೆಲ್ಲ ತಡಕಾಡಿ ಅವರನ್ನು ಮುಗಿಸಿಹಾಕುವ ಪ್ರಯತ್ನವನ್ನೂ ಸಿಬಿಐ ಮಾಡಲಿಲ್ಲ. ಅವರು ಈ ವಿಷಯದಲ್ಲಿ ತುಂಬಾ ಅದೃಷ್ಟವಂತರಾಗಿದ್ದರು ಎನ್ನುವುದಂತೂ ಸತ್ಯ!
ಈಗ ಜೈಲಿನಲ್ಲಿ ಕುಳಿತಿರುವ ಗುಜರಾತ್‌ನ ಉಗ್ರನಿಗ್ರಹ ದಳದ ಮಾಜಿ ಮುಖ್ಯಸ್ಥ ವನ್ಝಾರಾ, ಸಾಲಸ್ಕರ್ ಅವರ ಅದೃಷ್ಟ ಮತ್ತು ಹಣೆಬರಹದ ಬಗ್ಗೆ ಆಲೋಚಿಸುತ್ತಿರಬಹುದು. ಈಗ ಸಾಲಸ್ಕರ್ ಅವರನ್ನು ಮಾದರಿ ವ್ಯಕ್ತಿ ಎಂದು ಗೌರವಿಸಲಾಗುತ್ತದೆ. ಆದರೆ ಬಹುಪಾಲು ಅಂಥದ್ದೇ ಕೆಲಸವನ್ನು ಮಾಡಿರುವ ವನ್ಝಾರಾರನ್ನು ಮಾತ್ರ ವಿಲನ್‌ನಂತೆ ನೋಡಲಾಗುತ್ತಿದೆ. ಎಲ್ಲಾ ನಕಲಿ ಎನ್ಕೌಂಟರ್‌ಗಳೂ ಕೆಟ್ಟವು ಎಂಬ ಕ್ಲೀಷೆಯನ್ನು ಪಕ್ಕಕ್ಕಿಟ್ಟು ನೋಡಿದರೆ(ನಿಸ್ಸಂಶಯವಾಗಿಯೂ ಅವು ಕೆಟ್ಟವೇ, ಹಾಗೆ ನೋಡಿದರೆ ಸಾಲಸ್ಕರ್ ಅವರ ಎನ್ಕೌಂಟರ್‌ಗಳನ್ನು ಕೂಲಂಕಷವಾಗಿ ತನಿಖೆಗೊಳಪಡಿಸಿ ಅವುಗಳಲ್ಲಿ ಒಂದನ್ನಾದರೂ ಕಾನೂನು ಬಾಹಿರ(ನಕಲಿ ಎನ್ಕೌಂಟರ್) ಎಂದೂ ಸಾಬೀತು ಮಾಡಬಹುದು) ವನ್ಝಾರಾ ಏಕೆ ಅನುಕಂಪಕ್ಕೆ ಅರ್ಹರಲ್ಲ ಎನ್ನುವ ಪ್ರಶ್ನೆ ಕೇಳಿಕೊಳ್ಳಬೇಕಾಗುತ್ತದೆ.
ಇದಕ್ಕೆ ಉತ್ತರವೂ ಇದೆ. ಅವರು ಕಳೆದ ಆರು ವರ್ಷಗಳಿಂದ ಜೈಲಿನಲ್ಲಿದ್ದಾರೆ. ಮೂರು ಹೈ ಪ್ರೊಫೈಲ್ ಕೇಸುಗಳಲ್ಲಿ ಅವರ ಹೆಸರಿದೆಯಾದರೂ, ಇದುವರೆಗೂ ವಿಚಾರಣೆ ಮಾತ್ರ ಶುರುವಾಗೇ ಇಲ್ಲ. ಹಾಗಂತ ಅವರೊಬ್ಬರೇ ಅಲ್ಲ, ಅವರೊಂದಿಗೆ ಗುಜರಾತ್ ಪೊಲೀಸ್‌ನ 32 ಅಧಿಕಾರಿಗಳು ಮತ್ತು ಉಗ್ರಹ ನಿಗ್ರಹ ದಳದ(ಎಟಿಎಸ್) ಬಹುತೇಕ ಅಧಿಕಾರಿಗಳೂ ಜೈಲು ಕಂಬಿಗಳ ಹಿಂದೆ ಅಸಹಾಯಕರಾಗಿ ಕುಳಿತಿದ್ದಾರೆ. ಗುಜರಾತ್‌ನಲ್ಲಿ ದಶಕದ ಹಿಂದೆ  ಅಸ್ತಿತ್ವಕ್ಕೆ ಬಂದ ಎಟಿಎಸ್ ಜಾಲದ ಶಕ್ತಿಯೇ ಉಡುಗಿಹೋಗಿದೆ.
ಆದರೆ ಮಾಧ್ಯಮಗಳು ಬಿಂಬಿಸುತ್ತಿರುವಂತೆ ವನ್ಝಾರಾ 'ನ್ಯಾಯಕ್ಕಾಗಿ ಬೇಡಿಕೆ'ಯಿಡುತ್ತಿಲ್ಲ ಬದಲಾಗಿ ನರೇಂದ್ರ ಮೋದಿಯವರ ರಾಜಕೀಯ ಭವಿಷ್ಯದ ಮೇಲೆ ದಾಳಿ ನಡೆಸಲು ಪ್ರಯತ್ನಿಸುತ್ತಿದ್ದಾರೆ. ಹಾಗಾಗೆ ಈ ವಿಳಂಬ ಅವರಿಗೆ ಸರಿಯಾಗೇ ಹೊಂದಿಕೆಯಾಗುತ್ತಿದೆ ಎನ್ನಲೇಬೇಕು. ಅದಾಗ್ಯೂ ಅವರು ಒಳ್ಳೆಯ ವಕೀಲರನ್ನು ತಮಗಾಗಿ ನೇಮಿಸಿಕೊಳ್ಳಬಹುದಿತ್ತಲ್ಲ? ಕೊನೆಗೆ ಅವರನ್ನು ನಿರ್ದೋಷಿಯೆಂದು ಬಿಡುಗಡೆ ಮಾಡಿದರೂ, ಕಳೆದು ಹೋದ ವರ್ಷಗಳನ್ನು ಅವರಿಗೆ ಹಿಂದಿರುಗಿಸುವವರ್ಯಾರು? ಹಾಗೊಂದು ವೇಳೆ ಯಾರಿಗಾದರೂ ಶಿಕ್ಷೆ ಜಾರಿಯಾದರೂ ಕೂಡ, ಈ 32 ಪೊಲೀಸ್ ಅಧಿಕಾರಿಗಳು ಮತ್ತು ಎಟಿಎಸ್ ಅಧಿಕಾರಿಗಳು ತಮಗೆ ನೀಡಿದ ಶಿಕ್ಷೆಗಿಂತಲೂ ಹೆಚ್ಚು ದಿನ ವಿಚಾರಣಾಧೀನ ಕೈದಿಯಾಗಿ ಜೈಲಿನಲ್ಲಿ ಕಾಲ ಕಳೆದಿದ್ದಾರೆ ಎನ್ನುವುದನ್ನು ಮರೆಯುವುದಕ್ಕಾಗುವುದಿಲ್ಲ.
 ಗುಜರಾತ್ ಅನ್ನು 1980ರ ಪಂಜಾಬ್ ಅಥವಾ 1990ರ ಕಾಶ್ಮೀರಕ್ಕೆ ಹೋಲಿಸುವುದಕ್ಕೆ ಸಾಧ್ಯವಿಲ್ಲ ಎಂದು ಮಾಧ್ಯಮಗಳೆಲ್ಲ ಆರ್ಭಟಿಸುತ್ತಿವೆ. ನಿಜ, ಹೋಲಿಕೆ ಸರಿಯಲ್ಲ. ಆದರೆ ಇದರರ್ಥ ಗುಜರಾತ್‌ಗೆ ಉಗ್ರರ ಬೆದರಿಕೆ ಇರಲೇ ಇಲ್ಲ ಎಂದೇ? 90ರ ದಶಕದಲ್ಲಿ ಅನೇಕ ಬಾರಿ ಅದರ ಕರಾವಳಿಯನ್ನು ಯುದ್ಧಸಾಮಗ್ರಿಗಳನ್ನು ಸಾಗಿಸಲು ಉಗ್ರರು ಬಳಸಿಕೊಂಡರು (ಪ್ರಮುಖವಾಗಿ 1993ರ ಮುಂಬೈ ದಾಳಿಗೆ). 2002ರ ನಂತರ ಉಗ್ರರಿಂದ ಅತಿಹೆಚ್ಚು ಬೆದರಿಕೆಯನ್ನು ಎದುರಿಸಿದ ಮುಖ್ಯಮಂತ್ರಿಯೆಂದರೆ ನರೇಂದ್ರ ಮೋದಿ ಒಬ್ಬರೆ. ಇದಕ್ಕೆ ಪುಷ್ಠಿಕೊಟ್ಟದ್ದು ಗುಪ್ತಚರ ದಳದ ಮಾಹಿತಿಗಳು. 2010ರಲ್ಲಿ ವಿಕೀಲೀಕ್ಸ್, "2004ರಲ್ಲಿ ಇಶ್ರತ್ ಜಹಾನ್ ಮತ್ತು ತಂಡವನ್ನು ಅಳಿಸಿ ಹಾಕಿದ ನಂತರವೂ ಮೋದಿ ಅವರಿಗೆ ಲಷ್ಕರ್ ಉಗ್ರರಿಂದ ಬೆದರಿಕೆಯಿದೆ ಎಂದು ಪಾಶ್ಚಾತ್ಯ ಗುಪ್ತಚರ ದಳಗಳು ಹೇಳುತ್ತವೆ" ಎಂದು ವರದಿ ಮಾಡಿತ್ತು.  ಸಾರ್ವಜನಿಕ ಜೀವನದಲ್ಲಿರುವ ಯಾರನ್ನೇ ಆಗಲಿ(ರಾಜಕಾರಣಿಗಳು, ಪರ್ತಕರ್ತರು ಮತ್ತಿತರರು) ಸಮಾನ ತಳಹದಿಯಲ್ಲಿ ನೋಡಬೇಕು ಎಂದು ಸಂವಿಧಾನ ಹೇಳುತ್ತದೆ. ಆದರೆ ಈ ಮಾತು ಗುಜರಾತ್‌ಗೆ ಅನ್ವಯವಾಗಿದೆಯೇ? ಹಾಗಾದರೆ ಗುಜರಾತ್ ಮತ್ತು ಅದರ ಮುಖ್ಯಮಂತ್ರಿಗೆ ಎದುರಾಗುವ ಉಗ್ರರ ಬೆದರಿಕೆಗಳನ್ನೆಲ್ಲ ಕಡೆಗಣಿಸುವುದೇಕೆ?  ಗುಜರಾತ್ ಪೊಲೀಸ್ ಕೈಗೊಂಡ ಉಗ್ರ ವಿರೋಧಿ ಕಾರ್ಯಾಚರಣೆಗಳನ್ನೆಲ್ಲ ವಿರೋಧಿಸುವುದೇಕೆ? ಬೇರೆ ರಾಜ್ಯಗಳಲ್ಲೇಕೆ ಹೀಗಾಗುತ್ತಿಲ್ಲ?
ಇನ್ನೆರಡು ಉದಾಹರಣೆ ಕೊಡುತ್ತೇನೆ. ಇತ್ತೀಚೆಗೆ ಕಾಂಗ್ರೆಸ್ ಸಂಸತ್ ಸದಸ್ಯರೊಬ್ಬರ ನೇತೃತ್ವದಲ್ಲಿನ ಪರಿಶಿಷ್ಟ ಜಾತಿಗಳ ರಾಷ್ಟ್ರೀಯ ಆಯೋಗ(ಎನ್‌ಸಿಎಸ್‌ಸಿ) ತುಳಸೀರಾಮ್ ಪ್ರಜಾಪತಿ ಅವರ ಕೇಸಿನಲ್ಲಿ ಯಾರದ್ದೋ ಕೈಚಳಕವಿದೆ, ಹಾಗಾಗಿ ಆ ಪ್ರಕರಣವನ್ನು ಸಿಬಿಐ ತನಿಖೆಗೆ ಒಪ್ಪಿಸಬೇಕೆಂದು ಆಗ್ರಹಿಸಿತು. ತುಳಸಿರಾಮ್ ಒಬ್ಬ ದಲಿತ. ಗುಜರಾತ್ ಪೊಲೀಸರು ಈ ಕ್ರಿಮಿನಲ್‌ನನ್ನು ಕೊಂದು ಹಾಕಿದ್ದರು. ಎನ್‌ಸಿಎಸ್‌ಸಿಯ ಈ ಆಗ್ರಹಕ್ಕೆ ಆಧಾರವೇನು ಗೊತ್ತೇ? ಕಾಂಗ್ರೆಸ್‌ಗೆ ಬೇಕಾದ ವ್ಯಕ್ತಿಯೊಬ್ಬ ಮಾಧ್ಯಮಗಳ ಸಹಾಯದಿಂದ ನಡೆಸಿದ ರಹಸ್ಯ ಕಾರ್ಯಾಚರಣೆಯ ವೀಡಿಯೋ ತುಣುಕುಗಳು! ಈ ಕೆಲಸಕ್ಕೆ ಈತನಿಗೆ ಕಾಂಗ್ರೆಸ್ ವಕ್ತಾರರ ಬೆಂಬಲವೂ ಸಿಕ್ಕಿತು. ಆದರೆ ಈ ವ್ಯಕ್ತಿ ಬಹಳಷ್ಟು ಬಾರಿ ಹುಸಿ ರಹಸ್ಯ ಕಾರ್ಯಾಚರಣೆಯ ವೀಡಿಯೋಗಳನ್ನು ತೋರಿಸಿ ಸರ್ಕಾರಿ ಅಧಿಕಾರಿಗಳನ್ನು ಬ್ಲ್ಯಾಕ್‌ಮೇಲ್ ಮಾಡುತ್ತಿದ್ದ ಎನ್ನುವುದು ಬೇರೇ ವಿಷಯ!
ಉತ್ತರ ಪ್ರದೇಶದಲ್ಲಿ ದಲಿತ ಲೇಖಕ ಕನ್ವಲ್ ಭಾರತಿ ಎನ್ನುವವರು ರಾಜ್ಯ ಸರ್ಕಾರ ನಡೆದುಕೊಳ್ಳುತ್ತಿರುವ ರೀತಿಯನ್ನು ಫೇಸ್‌ಬುಕ್‌ನಲ್ಲಿ ಖಂಡಿಸಿ, ದುರ್ಗಾ ಶಕ್ತಿ ಅವರನ್ನು ಬೆಂಬಲಿಸಿದ್ದರು. ಕೂಡಲೇ ಅವರನ್ನು ಬಂಧಿಸಲಾಯಿತು! ಆದರೂ ಎನ್‌ಸಿಎಸ್‌ಸಿ ಅದೇಕೆ ಕನ್ವಲ್ ಭಾರತಿ ಅವರ ಬೆಂಬಲಕ್ಕೆ ಬರಲಿಲ್ಲ? ಅವರು ಬೆಂಬಲಕ್ಕೆ ಅರ್ಹರು ಎಂದು ಆ ಆಯೋಗಕ್ಕೆ ಅದೇಕೆ ಅನ್ನಿಸಲಿಲ್ಲ?
ಎರಡನೆಯದಾಗಿ, ಇಶ್ರತ್ ಜಹಾನ್‌ಳ ಎನ್ಕೌಂಟರ್ ಅನ್ನು ವಿರೋಧಿಸುವವರು, ವನ್ಝಾರಾ ಅವರು ದೀರ್ಘಾವಧಿಯಿಂದ ಜೈಲಲ್ಲಿರುವುದನ್ನು ಸಮರ್ಥಿಸುತ್ತಾರೆ. ಈ ವಿಷಯ ಒತ್ತಟ್ಟಿಗಿರಲಿ, ಗೋಪಾಲ್ ಕಾಂದಾ ಎನ್ನುವ ಹರ್ಯಾಣಾ ಕಾಂಗ್ರೆಸ್‌ನ ಮಾಜಿ ಸಚಿವನೊಬ್ಬನನ್ನು ಗೀತಿಕಾ ಶರ್ಮಾ ಎನ್ನುವ ಮಹಿಳೆಯನ್ನು ಹಿಂಸಿಸಿ, ಅವರನ್ನು ಹಿಂಬಾಲಿಸಿ ಕೊನೆಗೆ ಅವರ ಆತ್ಮಹತ್ಯೆಗೆ ಕಾರಣವಾದ ಆಪಾದನೆಯ ಮೇರೆಗೆ ಬಂಧಿಸಲಾಗಿತ್ತು. ಕಳೆದ ವಾರ ಈ ವ್ಯಕ್ತಿಗೆ ಜಾಮೀನು ಮತ್ತು ಆತ ವಿಧಾನಸಭೆಗೂ ಹಾಜರಾಗಲು ಅನುಮತಿ ದೊರೆತಿದೆ. ಆದರೆ ಈ ಬಗ್ಗೆ ಯಾವ ಮಾಧ್ಯಮಗಳಲ್ಲೂ ಕೂಗಾಟ ಕೇಳಿಸಲೇ ಇಲ್ಲ. ಎಲ್ಲಾ ಮಹಿಳೆಯರೂ ಸಮಾನರೇ...ಆದರೆ ಗೀತಿಕಾ ಶರ್ಮಾಗಿಂತ ಇಶ್ರತ್ ಜಹಾನ್‌ಗೆ ಹೆಚ್ಚು ಹಕ್ಕು ಸಿಗುತ್ತಿರುವುದೇಕೇ? ಒಂದು ವೇಳೆ ಗೀತಿಕಾ ಶರ್ಮಾ ಗುಜರಾತ್‌ನವಳಾಗಿದ್ದರೆ ಮತ್ತು ಕಾಂದಾ ಮೋದಿ ಸರ್ಕಾರದಲ್ಲಿನ ಸಚಿವನಾಗಿದ್ದರೆ ಪರಿಸ್ಥಿತಿ ಯಾವ ರೀತಿ ಬದಲಾಗುತ್ತಿತ್ತೋ ಯೋಚಿಸಿ?

- ಅಶೋಕ್ ಮಲಿಕ್
malikashok@gmail.com

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement