ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಅಂಕಣಗಳು

ದೇಶವನ್ನು ಮುನ್ನಡೆಸುವ ಆತ್ಮವಿಶ್ವಾಸ ಇವರಿಗಿದೆಯೇ?

Vishwanath S
Updated On : 12 Sept 2013, 10:58 am

ಸಪ್ಟೆಂಬರ್ 9ರ ಸಂಪಾದಕೀಯದಲ್ಲಿ ಪ್ರಕಟವಾದ 'ರಾಹುಲ್ ಹೆಸರು ಪಕ್ಕಾ' ಲೇಖನವನ್ನು ಅತಿ ಆಸಕ್ತಿಯಿಂದ ಓದಿದ್ದಾಯಿತು. ಕಾರಣ, ಅತಿ ದೊಡ್ಡ ಪ್ರಜಾಸತ್ಮಾತ್ಮಕ ರಾಷ್ಟ್ರದ ಪ್ರಧಾನಿ ಹುದ್ದೆಯ ಅಭ್ಯರ್ಥಿಯ ನಿರ್ಣಯವಾಗಿದೆಯೆಂದರೆ ಅದೊಂದು ಕುತೂಹಲ ಕೆರಳಿಸುವ ವಿಷಯವೇ ಸರಿ. ಲೇಖನ ಓದುತ್ತಾ ಸಾಗಿದಾಗ, ಆಘಾತಕಾರಿ ವಿಷಯದ ಅರಿವೂ ಆಯಿತು. ಅಷ್ಟಕ್ಕೂ ರಾಹುಲ್ ಗಾಂಧಿಯನ್ನು ಪ್ರಧಾನಿಯಾಗಲು ಆರಿಸಿದವರು ಸದ್ಯದ ಪ್ರಧಾನಿ ಮೌನಿ ಮನಮೋಹನಸಿಂಗ್‌ರೆ? ಅಲ್ಲ ಸ್ವಾಮಿ, ಈ ರೀತಿ ಹೇಳಿಕೆ ಕೊಡುವಾಗ ಅವರು ಮೇಡಂ ಸೋನಿಯಾ ಅವರ ಅನುಮತಿ ಪಡೆದಿದ್ದರೇ! ನಮ್ಮ ಪ್ರಧಾನಿಗೆ ಅವರ ಅಸ್ತಿತ್ವದ ಬಗ್ಗೆಯೇ ಪ್ರಬಲ ಸಂಶಯವಿರುವಾಗ ಅವರ ಮಾತನ್ನು ನಂಬುವುದಾದರೂ ಹೇಗೆ? ಲೇಖಕರು ಹೇಳಿದಂತೆ, ಪ್ರಾಯಶಃ ಬೀಸುವ ದೊಣ್ಣೆಯಿಂದ ಪಾರಾಗಲು ಇದೊಂದೇ ದಾರಿ ಅವರಿಗೆ ಕಂಡಿರಬೇಕು. ಅದಲ್ಲದಿದ್ದರೆ ಅವರಿಗೆಲ್ಲಿಂದ ಬರಬೇಕು ಆ ಧೈರ್ಯ? ಒಬ್ಬ ಅರ್ಹ ವ್ಯಕ್ತಿ ಇನ್ನೊಬ್ಬರ ಅರ್ಹತೆಯ ಬಗ್ಗೆ ಮಾತನಾಡಿದರೆ ಅದಕ್ಕೊಂದು ಅರ್ಥ. ಇಲ್ಲವಾದರೆ ಅದೊಂದು ಹೇಳಿಕೆಯಷ್ಟೆ. ಅಂಥ ಮಾತಿಗೆ ಯಾವುದೇ ವಿಶೇಷ ಅರ್ಥವನ್ನೂ ಕಲ್ಪಿಸಲು ಸಾಧ್ಯವಾಗದು. ಈ ಬಾರಿಯ ಅವರ ಮಾತಿನ ಧಾಟಿ ಹೆಚ್ಚು ಪ್ರಸ್ತುತ ಎಂಬ ಮಾತನ್ನೂ ಲೇಖಕರು ಉಲ್ಲೇಖಿಸಿದ್ದಾರೆ. ನಮ್ಮ ಪ್ರಧಾನಿಯವರ ಮಾತಿನ ಧಾಟಿ, ಅವರ ಹಾವ-ಭಾವ, ಅವರ ಶೈಲಿ ಇವೆಲ್ಲವುಗಳ ಪರಿಚಯ ದೇಶವಾಸಿಗಳಿಗೆಲ್ಲ ಚಿರಪರಿಚಿತವಿರುವಾಗ, ಅವರಿಂದ ವಿಶೇಷ ಧಾಟಿಯನ್ನು ಊಹಿಸುವುದಾದರೂ ಹೇಗೆ?
ಇನ್ನು 'ನನಗೇನೂ ಮದುವೆ ಬೇಕಿಲ್ಲ, ಅಪ್ಪ ಯಾರಿಗಾಗಿ ಹೆಣ್ಣು ಹುಡುಕುತ್ತಿದ್ದಾನೋ' ಎಂಬಂತಾಗಿದೆ ರಾಹುಲ್ ಪರಿಸ್ಥಿತಿ. ಒಂದು ದೇಶವನ್ನು ಮುನ್ನಡೆಸಿಕೊಂಡುಹೋಗುವ ಯಾವುದೇ ಆತ್ಮವಿಶ್ವಾಸ, ಭರವಸೆ, ದೃಢತೆ ಹಾಗೂ ಸ್ಪಷ್ಟ ನಿಲುವು ರಾಹುಲ್ ಗಾಂಧಿಯಲ್ಲಿ ಕಾಣಸಿಗುತ್ತಿಲ್ಲ. ಪರಿವಾರ ಬಲವೋ ಅಥವಾ ಬಾಲಬಡುಕರ ಒಲವೋ ಅವರನ್ನು ಈಗಿರುವ ಸ್ಥಿತಿಯಲ್ಲಿ ತಂದು ನಿಲ್ಲಿಸಿದೆ. 'ಸ್ಥಾನಂ ಪ್ರಧಾನಂ ನ ಬಲಂ ಪ್ರಧಾನಂ; ಸ್ಥಾನೇ ಸ್ಥಿತಃ ಕಾ ಪುರುಷೋಪಿ ಶೂರಃ' ಎಂಬ ಉಕ್ತಿ ರಾಹುಲ್ ಗಾಂಧಿಗೆ ನೂರಕ್ಕೆ ನೂರರಷ್ಟು ಅನ್ವಯವಾಗುತ್ತದೆ. ನೆಹರೂ ಮನೆತನ, ಇಂದಿರಾಗಾಂಧಿಯವರ ಮೊಮ್ಮಗ, ಮಾಜಿ ಪ್ರಧಾನಿ ರಾಜೀವ್ ಗಾಂಧಿ ಹಾಗೂ ಹಾಲಿ ಕಾಂಗ್ರೆಸ್ ಅಧಿನಾಯಕಿ ಸೋನಿಯಾರ ಪುತ್ರ! ಒಂದು ಗಟ್ಟಿ ಸ್ಥಾನ ಪಡೆಯಲು ಇನ್ನೇನು ಹೆಚ್ಚಿನ ಅರ್ಹತೆಯ ಬೇಕು? ದೇಶದ 120 ಕೋಟಿ ಜನರ ಆಶೋತ್ತರಗಳ ಪ್ರತಿನಿಧಿಯಾಗಿ ರಾಹುಲ್ ನಿಲ್ಲಬಲ್ಲರೆ? ಬಡತನ ಎಂಬುದು ಕೇವಲ ಒಂದು ಮಾನಸಿಕ ಪರಿಸ್ಥಿತಿ; ಹಕೀಕತ್ ಅಲ್ಲ ಎನ್ನುವ ರಾಹುಲ್, ದೇಶವನ್ನು ಎಷ್ಟು ಅರ್ಥಮಾಡಿಕೊಂಡಿದ್ದಾರೆಂದು ನೆನೆದರೆ ನಮ್ಮ ಭವಿಷ್ಯದ ಅರಿವು ಇಂದೇ ಸ್ಪಷ್ಟವಾಗಿ ಆಗುತ್ತದೆ!
ತಾನೇ ಕಟಪುತಲಿಯಂತಿರುವಾಗ ರಾಹುಲ್ ಹೆಸರನ್ನು "ಪಕ್ಕಾ" ಮಾಡುವ ಯಾವ ಅಧಿಕಾರವೂ ಮನ ಮೋಹನ್ ಸಿಂಗ್‌ರಿಗೆ ಇಲ್ಲ! ಅವರ ಮಾತಿನಲ್ಲಿ ಚಿಂತನೆಗಿಂತ ಚಿಂತೆಯೇ ಹೆಚ್ಚು ಪ್ರಾಧಾನ್ಯತೆ ಪಡೆದುಕೊಳ್ಳುತ್ತದೆ.


 -ಶಂಕರನಾರಾಯಣ ಭಟ್


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement