ಮುಜಫ್ಫರ್ ನಗರದ ಹಿಂಸಾಚಾರಕ್ಕೆ ಸಾಮಾಜಿಕ ಜಾಲತಾಣ ಕಾರಣವೇ?
ಮುಜಫ್ಫರ್ ನಗರದಲ್ಲಾಗುತ್ತಿರುವ ಕೋಮು...
ಮುಜಫ್ಫರ್ ನಗರದಲ್ಲಾಗುತ್ತಿರುವ ಕೋಮು ದಳ್ಳುರಿಗೆ ಮುಖ್ಯ ಕಾರಣ, ಅಲ್ಲಿ ಹರಿದಾಡಿದ 'ವೀಡಿಯೋ ಸಿ.ಡಿ.' ಎಂದು ಉತ್ತರ ಪ್ರದೇಶದ ಪೊಲೀಸರು ಮತ್ತು ರಾಜಕಾರಣಿಗಳು ಹೇಳುತ್ತಿದ್ದಾರೆ.
ಇಬ್ಬರು ಯುವಕರನ್ನು ಗುಂಪೊಂದು ಕೊಂದು ಹಾಕುವ ವೀಡಿಯೋ ಅದು. ಆದರೆ ಇದು ನಡೆದದ್ದು ಪಾಕಿಸ್ತಾನದ ಸಿಯಾಲ್ಕೋಟ್ನಲ್ಲಿ. ಸತ್ತ ಆ ಯುವಕರು ಪಾಕಿಸ್ತಾನಿಗಳು. ಈ ವೀಡಿಯೋ 2010ರಿಂದಲೂ ಅಂತರ್ಜಾಲದಲ್ಲಿದೆ ಎಂದು ಪೊಲೀಸರು ಹೇಳುತ್ತಿದ್ದಾರೆ. ಸ್ವಲ್ಪ ಹುಡುಕಿದರೆ ಆ ವೀಡಿಯೋ ನಿಮಗೂ ಸಿಗಬಹುದು. ಅದನೊಮ್ಮೆ ನೋಡಿ. ನಿಜಕ್ಕೂ ಕರುಳು ಕಿವುಚಿದಂತಹ ಅನುಭವವಾಗುತ್ತದೆ. ಆದರೂ ತಪ್ಪದೇ ನೋಡಿ. ಒಂದು ವೇಳೆ ನೀವು ನೋಡಿದ್ದರೆ/ ನೋಡಿದ ಮೇಲೆ, ನಿಮಗೂ ಒಂದು ದಂಗೆ ಶುರುಮಾಡಬೇಕು ಅಂತ ಅನ್ನಿಸುತ್ತದೆಯೇ/ ಅನ್ನಿಸಬಹುದಾ? ಖಂಡಿತ ಇಲ್ಲ.ಆದರೂ ಕಮ್ಯುನಲಿಸಂ ಮೇಲಿನ ನಮ್ಮ ರಾಷ್ಟ್ರೀಯ ಚರ್ಚೆಗಳ ಬಗ್ಗೆ, ನಮ್ಮ ಡಿಜಿಟಲ್ ಮೀಡಿಯಾಗಳ ಭವಿಷ್ಯ ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯದ ಬಗ್ಗೆ ಅದರಿಂದ ಕೆಲವು ಸೂಚನೆ ಸಿಗುತ್ತದೆ.
ಸಾಮಾಜಿಕ ಜಾಲತಾಣಗಳು ದಂಗೆಗಳಿಗೆ ಪ್ರೇರಣೆ ನೀಡುತ್ತಿವೆ ಎನ್ನುವ ಧ್ವನಿ ಕೆಲವು ವರ್ಷಗಳಿಂದ ಹೆಚ್ಚಾಗುತ್ತಿದೆ. ನಿಯಮಗಳಿಗೊಳಪಡದ ಈ ಡಿಜಿಟಲ್ ಪ್ರಪಂಚ ಭಾರತದಲ್ಲಿ ಅಸಹನೆ ಮತ್ತು ಅಶಾಂತಿ ಹೆಚ್ಚುವುದಕ್ಕೆ ಮುಖ್ಯ ಕಾರಣ(ಟ್ವಿಟರ್ ಮತ್ತು ಫೇಸ್ಬುಕ್ನಂಥ ಜಾಲತಾಣಗಳು) ಎಂದು ದೂಷಿಸಲಾಗುತ್ತಿದೆ. ಕಪಿಲ್ ಸಿಬಲ್ ಅವರು ಬಹಳ ದಿನಗಳಿಂದ ಸಾಮಾಜಿಕ ಜಾಲತಾಣಗಳನ್ನು ಕಾನೂನಿನ ನಿಯಂತ್ರಣಕ್ಕೆ ತರಬೇಕು ಎಂದು ವಾದಿಸುತ್ತಲೇ ಬಂದಿದ್ದಾರೆ.
ಆದರೆ ಈ ವಾದಕ್ಕೆ ಅರ್ಥವಿಲ್ಲ ಎನ್ನುವುದಕ್ಕೆ ಎರಡು ಕಾರಣಗಳಿವೆ. ಮೊದಲನೆಯದಾಗಿ, ಈ ವೀಡಿಯೋದಿಂದಾಗಿ ಮುಜಫ್ಫರ್ನಗರದಲ್ಲಿ ಯಾರದ್ದಾದರೂ ಸಾವಾಯಿತು ಎನ್ನುವುದಕ್ಕೆ ಯಾವ ಪುರಾವೆಯೂ ಇಲ್ಲ. ಇನ್ನು ಅದೆಷ್ಟು ಜನ ಈ ವೀಡಿಯೋ ತುಣುಕನ್ನು ನೋಡಿದ್ದಾರೆ ಎನ್ನುವುದೂ ಗೊತ್ತಿಲ್ಲ. ಇದೇ ಈ ಹಿಂಸೆಗೆ ಕಾರಣವಾಯಿತೇ ಅಥವಾ ಪರಿಸ್ಥಿತಿಯ ತೀವ್ರತೆಯಲ್ಲಿ ಈ ವೀಡಿಯೋ ತುಣುಕೇ ಹಿಂಸೆಗೆ ಕಾರಣವಿರಬಹುದೆಂದು ಗೋಚರಿಸುತ್ತಿದೆಯೇ ಎಂಬುದನ್ನು ತಿಳಿದುಕೊಳ್ಳುವುದಕ್ಕೂ ಯಾವುದೇ ಹಾದಿಯಿಲ್ಲ. ಎರಡನೆಯದಾಗಿ, ಬೆಳೆಯುತ್ತಿರುವ ಸಾಮಾಜಿಕ ಮಾಧ್ಯಮಗಳಿಂದಾಗಿ ಕೋಮುದಳ್ಳುರಿ ಹೆಚ್ಚುತ್ತಿದೆ ಎನ್ನುವುದಕ್ಕೂ ಯಾವ ಆಧಾರಗಳಿಲ್ಲ. ಈ ಬಗ್ಗೆ ಗೃಹ ಸಚಿವಾಲಯದ ವಾರ್ಷಿಕ ವರದಿಗಳಲ್ಲೂ ಉಲ್ಲೇಖವಿಲ್ಲ.
ಕಳೆದ ವರ್ಷ ಈಶಾನ್ಯ ರಾಜ್ಯಗಳ ಜನತೆ ಬೆಂಗಳೂರು ಮತ್ತು ಮುಂಬೈನಿಂದ ತಮ್ಮ ರಾಜ್ಯಕ್ಕೆ ಹಿಂದಿರುಗಿದ್ದಕ್ಕೆ ಕಾರಣಗಳು ಅನೇಕ. ಏಪ್ರಿಲ್ 2012ರಂದು ಮ್ಯಾನ್ಮಾರ್ ಮತ್ತು ಈಶಾನ್ಯ ರಾಜ್ಯಗಳಲ್ಲಿ ಮುಸ್ಲಿಂ ವಿರೋಧಿ ಹಿಂಸಾಚಾರ ನಡೆಯುತ್ತಿದೆ ಎಂಬುದನ್ನು ತೋರಿಸುವ ಚಿತ್ರಗಳು(ತಿರುಚಿದ ಚಿತ್ರಗಳೂ ಇರಬಹುದು) ಅಂತರ್ಜಾಲದಲ್ಲಿ ಹರಿದಾಡಿದವು. ಆನಂತರ ಮುಂಬೈ ಮತ್ತು ಅಲಹಾಬಾದ್ನಲ್ಲಿ ಪೊಲೀಸರ ಮೇಲೆ ಹಲ್ಲೆಗಳಾದವು. ಬೆಂಗಳೂರು ಮತ್ತು ಪುಣೆ, ಬೀದಿ ಜಗಳಗಳಿಗೆ ಸಾಕ್ಷಿಯಾದವು. ಮೈಸೂರಿನಲ್ಲಿ ಒಬ್ಬ ಇರಿತಕ್ಕೆ ಒಳಗಾದ.
ಆದರೆ ಈ ಆನ್ಲೈನ್ ಕ್ಯಾಂಪೇನ್ನಿಂದಾಗಿಯೇ ಈ ಹತ್ಯೆಗಳು ನಡೆದವೇ ಎನ್ನುವುದು ಸ್ಪಷ್ಟವಾಗಿ ಯಾರಿಗೂ ತಿಳಿಯದು ಅಥವಾ ಆ ರೀತಿಯ ಕ್ಯಾಂಪೇನ್ ನಡೆಯಿತೇ ಎನ್ನುವುದೂ ಕೂಡ! ಇದರಿಂದ ಸೈಬರ್ ಜಿಹಾದ್ ಸುಳಿವು ಸಿಗಬಹುದೇ ಎನ್ನುವ ಬಗ್ಗೆ ತನಿಖೆಗಳಾದವು. ಸುಮಾರು 50 ಲಕ್ಷ ಸಂದೇಶಗಳನ್ನು, ಸಾವಿರಾರು ವೆಬ್ಸೈಟ್ಗಳನ್ನು ಜಾಲಾಡಲಾಯಿತು. ಆದರೆ ಕರ್ತೃತ್ವ ಮತ್ತು ನಿರ್ದೇಶನ ಯಾರದಾಗಿತ್ತು ಎನ್ನುವುದು ಮಾತ್ರ ತಿಳಿಯಲಿಲ್ಲ.
ಹಾಗೆಯೇ ಈ ಸಂದೇಶಗಳೇ ಈಶಾನ್ಯ ರಾಜ್ಯಗಳವರ ಸಾಮೂಹಿಕ ವಲಸೆಗೆ ಕಾರಣವಾದವು ಎನ್ನುವುದಕ್ಕೂ ಸಾಧ್ಯವಿಲ್ಲ. ಕುಟುಂಬದ ಪ್ರೀತಿಪಾತ್ರರ ಒತ್ತಾಯ ಸೇರಿದಂತೆ ಈ ಘಟನೆಗೆ ಅನೇಕ ಕಾರಣಗಳು ಸಿಗುತ್ತವೆ.
ಸಂದೀಪ್ ಉನ್ನಿನಾಥನ್ ಮತ್ತು ಕಿರಣ್ ತಾರೆ ಎಂಬ ಪತ್ರಕರ್ತರು 2012ರ ಮುಂಬೈ ಹಿಂಸಾಚಾರಕ್ಕೆ ಕಾರಣಗಳೇನು ಎಂಬ ಬಗ್ಗೆ ಸರಿಯಾಗಿ ಬೆಳಕು ಚೆಲ್ಲಿದ್ದಾರೆ. "ಮ್ಯಾನ್ಮಾರ್ ಮತ್ತು ಅಸ್ಸಾಂನಲ್ಲಿ ಮುಸಲ್ಮಾನರ ಹತ್ಯೆಯಾಗುತ್ತಿದೆ ಎನ್ನುವ ಬಗ್ಗೆ ಮುಂಬೈನಲ್ಲಿ ತೀವ್ರ ಪ್ರಚಾರ ಮಾಡಲಾಯಿತು. ಯುವ ಮುಸಲ್ಮಾನರನ್ನು ಒಗ್ಗೂಡಿಸಿ ಪ್ರಚೋದಕ ಭಾಷಣ ಮಾಡಿ, ಅವರಿಗೆ ಕರಪತ್ರಗಳನ್ನು ಹಂಚಲಾಯಿತು. ಅಸ್ಸಾಂ ಬಗೆಗಿನ ಕಟ್ಟು ಕಥೆಗಳನ್ನು ಜನ ನಂಬಿದ್ದಕ್ಕೆ ನಮ್ಮ ಪತ್ರಿಕೆಗಳು ಮತ್ತು ಸುದ್ದಿ ವಾಹಿನಿಗಳೂ ಕಾರಣ. ಅಲ್ಲಿ ನಿಜಕ್ಕೂ ಏನು ನಡೆಯುತ್ತಿದೆ ಎನ್ನುವುದನ್ನು ಇವುಗಳು ಸರಿಯಾಗಿ ತೋರಿಸಲು ವಿಫಲವಾಗಿದ್ದರಿಂದಲೇ ಊಹಾಪೋಹಗಳು ವಾಸ್ತವದ ಹುಸಿ ರೂಪ ಪಡೆದವು" ಎನ್ನುತ್ತಾರೆ.
ಇನ್ನು ಯಾವ ಪುರಾವೆಯಿಲ್ಲದಿದ್ದರೂ 2010ರಲ್ಲಿ ಕಾಶ್ಮೀರದಲ್ಲಾದ ಹಿಂಸೆಗೆ ಸಾಮಾಜಿಕ ಮಾಧ್ಯಮವನ್ನು ಜವಾಬ್ದಾರನನ್ನಾಗಿ ಮಾಡಲಾಗುತ್ತಿದೆ. ಅಲ್ಲೂ ಕೂಡ ಪ್ರಚೋದನಾತ್ಮಕ ಭಾಷಣಗಳೇ ಯುವಕರ ತಲೆ ಕೆಡಿಸಿದವು ಎನ್ನುವುದಂತೂ ಸತ್ಯ. ಇತಿಹಾಸಕಾರ ರಾಮಚಂದ್ರ ಗುಹ ಇಂಥದ್ದೇ ಘಟನೆಯೊಂದನ್ನು ತಮ್ಮ ಪುಸ್ತಕದಲ್ಲಿ ನೆನಪುಮಾಡಿಕೊಳ್ಳುತ್ತಾರೆ. 1963ರಲ್ಲಿ ಕಾಶ್ಮೀರದ ಹಜ್ರತ್ಬಾಲ್ ಸಮಾಧಿಯಿಂದ ಪೂಜಾ ಪಳೆಯುಳಿಕೆಯೊಂದು ಕಾಣೆಯಾಯಿತು. ಇದು ನಡೆದದ್ದು ಕಾಶ್ಮೀರದಲ್ಲಾದರೂ, ಈ ಘಟನೆಯಿಂದಾಗಿ ರೊಚ್ಚಿಗೆದ್ದ ಬಾಂಗ್ಲಾದೇಶಿ ಮುಸಲ್ಮಾನರು ಅಲ್ಲಿನ ಹಿಂದುಗಳ ಮೇಲೆ ದಾಳಿ ಶುರುಮಾಡಿದರು. ಅಲ್ಲಿಂದ ತಪ್ಪಿಸಿಕೊಂಡು ಕೋಲ್ಕತಾಗೆ ಬಂದ ಕೆಲವು ನಿರಾಶ್ರಿತರು, ಕೆಲವೇ ದಿನಗಳಲ್ಲಿ ಕೋಲ್ಕತಾದ ಮುಸಲ್ಮಾನರ ವಿರುದ್ಧ ಹಿಂಸೆಗಿಳಿದರು! ಈ ಘಟನೆಯಲ್ಲಿ ನೂರಾರು ಜನ ಸಾವನಪ್ಪಿದರು.
ಆದರೆ ಗಮನಿಸಲೇಬೇಕಾದ ಅಂಶವೆಂದರೆ ಘಟನೆ ನಡೆದ ಕಾಶ್ಮೀರದಲ್ಲಿ ಅಂಥ ಒಂದೂ ಹತ್ಯೆಯೂ ಆಗಲಿಲ್ಲ. ಮುಖ್ಯಮಂತ್ರಿ ಬಕ್ಷಿ ಗುಲಾಮ್ ಮೊಹಮ್ಮದ್ ಅವರ ಚಿತ್ರಮಂದಿರ ಮತ್ತು ಪೊಲೀಸ್ ಠಾಣೆಯೊಂದಕ್ಕೆ ಹಾನಿಯಾಗಿತ್ತಷ್ಟೆ!
1926ರಲ್ಲಿ ಬಂಗಾಳ ಗಲಭೆಗಳಾದವು. ಇದಕ್ಕೆ ಕಾರಣ ಮಸೀದಿಯೊಂದರ ಮುಂದೆ ಕೆಲವರು ಸಂಗೀತ ನುಡಿಸಿದ್ದು. ಈ ಬಗ್ಗೆ ಬರೆಯುತ್ತಾ ಇತಿಹಾಸಕಾರ ಪಿ.ಕೆ. ದತ್ತಾ ಹೇಳುತ್ತಾರೆ, "ಸ್ಥಳೀಯ ಸಮಸ್ಯೆಯ ಮೂಲ ಇದ್ದದ್ದು ಜನರಿಗಿದ್ದ ದುರಾಭಿಮಾನದಲ್ಲಿ. ಈ ಒಂದು ಚಿಕ್ಕ ಘಟನೆಯ ಸುದ್ದಿ ಕಿವಿಗೆ ಬಿದ್ದದ್ದೇ ತಡ, ಕೋಹತ್, ಮೀರತ್ ಮತ್ತು ಲೂಧಿಯಾನಾಗಳಲ್ಲಿ ಹಿಂಸಾಚಾರ ಶುರುವಾಯಿತು. ಅಂದರೆ ಸಮಸ್ಯೆ ಜನರ ನಡುವೆಯೇ ಇದೆ' ಎನ್ನುತ್ತಾರೆ. 18ನೇ ಶತಮಾನದಿಂದಲೂ ಭಾರತೀಯರು ಮಾಹಿತಿಯನ್ನು(ಸುಳ್ಳೇ ಇರಲಿ ಅಥವಾ ನಿಜವೇ ಇರಲಿ) ವ್ಯಾಪಕವಾಗಿ ಹರಡುತ್ತಿದ್ದರು ಎನ್ನುತ್ತಾರೆ, ಸಿ. ಕ್ರಿಸ್ಟೋಫರ್ ಬೆಯ್ಲ್. ಆಗ ಏನಾದರೂ ಟ್ವಿಟರ್ ಮತ್ತು ಫೇಸ್ಬುಕ್ ಇದ್ದಿದ್ದರೆ ಅವು ಮಾಹಿತಿಯ ಪ್ರಸಾರವನ್ನು ಹೆಚ್ಚು ಮಾಡುತ್ತಿದ್ದವಾದರೂ, ಅವುಗಳಿಂದಾಗಿ ಹಿಂಸಾಚಾರಗಳಾಗುತ್ತಿರಲಿಲ್ಲ.
ಮನುಷ್ಯನ ಈ ಮೂರ್ಖತನ ಜಾಗತಿಕವಾದದ್ದು. ಅಮೆರಿಕದಲ್ಲಿ 9/11 ಕುರಿತಾದ ಹುಸಿ ಸಿದ್ಧಾಂತವೊಂದಿದೆ. ಅದೇನೆಂದರೆ ಖುದ್ದು ಅಮೆರಿಕ ಸರ್ಕಾರವೇ ತನ್ನ ಅವಳಿ ಕಟ್ಟಡಗಳನ್ನು ಸ್ಫೋಟಿಸಿತು, ಆ ಮೂಲಕ ಯುದ್ಧಕ್ಕೊಂದು ನೆಪ ಹುಡುಕಿತು ಎಂದು! ಆದರೆ ತನಿಖೆಗಳು ಈ ವಾದವನ್ನು ಸುಳ್ಳು ಎಂದು ಸಾಬೀತುಮಾಡಿದವು. ಆದರೂ ಈ ಸುದ್ದಿ ಮಾತ್ರ ಇನ್ನಷ್ಟು ಅಂಗಗಳನ್ನು ಪಡೆಯುತ್ತಾ ಬೃಹತ್ ರೂಪ ಪಡೆಯುತ್ತಿದೆ.
ಲಂಡನ್ನಲ್ಲಿ ನನ್ನ ಪರಿಚಿತರೊಬ್ಬರಿದ್ದಾರೆ. ಅವರು ತಮ್ಮ ಮನೆ ಮಾರಿ ಭಾರತಕ್ಕೆ ಬಂದು ವಾಸಿಸಲು ಒಮ್ಮೆ ಯೋಚಿಸಿದ್ದರು. ಬ್ರಿಟನ್ ಸರ್ಕಾರ ಆಕಾಶದಲ್ಲೆಲ್ಲ ರಾಸಾಯನಿಕಗಳನ್ನು ಪಸರಿಸುತ್ತಿದೆ ಎಂಬ ಸುಳ್ಳು ಪುಕಾರನ್ನು ನಂಬಿದ್ದೇ ಅವರು ಹೀಗೆ ಮಾಡಲು ಕಾರಣ. ಈ ವದಂತಿಗಳ ಪ್ರಭಾವ ಅಗಾಧವಾದದ್ದೆಂಬುದನ್ನು ಇತಿಹಾಸವೇ ಹೇಳುತ್ತದೆ. 1999ರಲ್ಲಿ ನಿಯತಕಾಲಿಕವೊಂದು 'ಪ್ರಳಯ ಹತ್ತಿರವಾಗುತ್ತಿದೆ' ಎಂಬ ಸುದ್ದಿಯನ್ನು ಪ್ರಕಟಿಸಿತು. ಇದನ್ನು ಓದಿದ್ದೇ ತಡ, ಅಲಾಂಗ್ನ ಕಡಲ ತಡಿಯಲ್ಲಿ ಕೆಲಸ ಮಾಡುತ್ತಿದ್ದ ಸಾವಿರಾರು ಜನ ರಾತ್ರೋರಾತ್ರಿ ತಮ್ಮ ಊರುಗಳಿಗೆ ಓಡಿಹೋದರು. ಹಾಲು ಕುಡಿಯುವ ದೇವರು, ಅಲ್ಲಾನ ಹೆಸರು ಹೊತ್ತು ಹುಟ್ಟಿದ ಬದನೇಕಾಯಿ, ಪವಿತ್ರ ಕಣ್ಣೀರು ಸುರಿಸುವ ಏಸುಕ್ರಿಸ್ತನನ್ನೂ ನಮ್ಮ ದೇಶ ನೋಡಿದೆ. ಅರ್ಥವಿಲ್ಲದ ವದಂತಿಗಳು, ಅವುಗಳ ಕುರಿತ ಅರ್ಥಹೀನ ವ್ಯಾಖ್ಯಾನಗಳು ಹುಟ್ಟಿಕೊಳ್ಳುವುದಕ್ಕೆ ಜನರ ಮೂರ್ಖತನವೊಂದೇ ಕಾರಣವಲ್ಲ, ಜೊತೆಗೆ ಅವರ ಸುತ್ತಲಿರುವ ವ್ಯವಸ್ಥೆ ಅಪಾರದರ್ಶಕವಾಗಿರುವುದು ಮತ್ತು ನಂಬಿಕೆಗರ್ಹವಲ್ಲದಿರುವುದು.
ಸರಿಯಾದ ಕ್ರಮ ಕೈಗೊಳ್ಳದ ಪೊಲೀಸ್ ವ್ಯವಸ್ಥೆ ನಮ್ಮಲ್ಲಿದೆ. ಹಿಂಸಾಚಾರವನ್ನು ಪ್ರಚೋದಿಸುವ ರಾಜಕಾರಣಿಗಳು ನಮ್ಮಲ್ಲಿದ್ದಾರೆ. ಫೇಸ್ಬುಕ್ ಅಥವಾ ಟ್ವಿಟರ್ ನಿಜವಾದ ಸಮಸ್ಯೆಗಳು ಎಂಬುದೇ ಆಗಿದ್ದರೆ, ಅವುಗಳನ್ನು ಮುಚ್ಚಿಹಾಕಿ ಹಿಂಸಾಚಾರಗಳನ್ನು ತಡೆಯಬಹುದು. ಆದರೆ ಅದು ಸಾಧ್ಯವಿಲ್ಲ, ಏಕೆಂದರೆ ಸತ್ಯವೇ ಬೇರೆಯಿದೆ- ಇಂಥ ಘಟನೆಗಳಿಗೆ ಕಾರಣ ಅವುಗಳಲ್ಲ!
-ಪ್ರವೀಣ್ ಸ್ವಾಮಿ ಫಸ್ಟ್ಪೋಸ್ಟ್.ಕಾಂ