ಅಂಕಣಗಳು

ಪೌಷ್ಟಿಕ ಆಹಾರದ ವಿತರಣೆ, ಶ್ರಮವಹಿಸಿ ಮಾಡಿದ ಸುಧಾರಣೆ

ನಮ್ಮ ಸಂಸ್ಕೃತಿಯಲ್ಲಿ 'ಇರುವವನು ಇಲ್ಲದವನಿಗೆ' ಅನ್ನ ಹಾಕಬೇಕು, ಕೇವಲ ಮನುಷ್ಯರಿಗೆ ಮಾತ್ರವಲ್ಲ, ಪ್ರಾಣಿ ಪಕ್ಷಿಗಳಿಗೆ ಕೂಡ ಆಹಾರವನ್ನು ಹಾಕಬೇಕು ಎಂದು ಹೇಳುತ್ತದೆ. ಹಲವಾರು ಪೌರಾಣಿಕ ಕಥೆಗಳ ಮೂಲಕ ಇನ್ನೊಬ್ಬರ ಅನ್ನವನ್ನು ಕಿತ್ತುಕೊಳ್ಳುವ ತಪ್ಪನ್ನು ಮಾಡಿದರೆ ಮುಂದೆ ಶಿಕ್ಷೆ ಅನುಭವಿಸಲೇಬೇಕು ಎನ್ನುವ ಬುದ್ಧಿ ಮಾತುಗಳನ್ನು ಕೇಳುತ್ತಲೇ ಬಂದಿದ್ದೇವೆ.
ನಾನು ನನ್ನ ಸುಧೀರ್ಘ ಸರ್ಕಾರಿ ಸೇವೆಯಲ್ಲಿ ಗಮನಿಸಿರುವುದೇನೆಂದರೆ ಸರ್ಕಾರದ ಯೋಜನೆಗಳು ಉತ್ತಮವಾಗಿಯೇ ರೂಪುಗೊಂಡಿರುತ್ತವೆ, ಆದರೆ ಅರ್ಹ ಫಲಾನುಭವಿಗಳಿಗೆ ಅದು ತಲುಪುವುದೇ ಇಲ್ಲ ಎಂಬುದು. ಒಂದು ಉತ್ತಮ ಯೋಜನೆಯಾದ 'ಸಮಗ್ರ ಶಿಶು ಅಭಿವೃದ್ಧಿ ಯೋಜನೆ' ಸಮಯ ಸಾಧಕರ ಕೈಗೆ ಸಿಕ್ಕಿ ಅದರಿಂದ ಬಡ ಮಕ್ಕಳು ಅನುಭವಿಸಿದ ಕಷ್ಟದ ಕಥೆಯನ್ನು ನಿಮ್ಮೊಡನೆ ಹಂಚಿಕೊಳ್ಳುತ್ತೇನೆ....
ಗರ್ಭಿಣಿ, ಬಾಣಂತಿ, ಕಿಶೋರಿಯರು ಮತ್ತು ಆರು ವರ್ಷ ಒಳಗಿನ ಮಕ್ಕಳ ಅಭಿವೃದ್ಧಿಯು ಸಮಗ್ರ ಶಿಶು ಅಭಿವೃದ್ಧಿ ಯೋಜನೆಯ ಮುಖ್ಯ ಗುರಿ. ಆರು ವರ್ಷದೊಳಗಿನ ಬಡ ಮಕ್ಕಳ ಪೌಷ್ಟಿಕ ಮಟ್ಟವನ್ನು ವೃದ್ಧಿಸುವುದು, ಸಾವು, ಅನಾರೋಗ್ಯ, ಅಪೌಷ್ಟಿಕತೆ ಮತ್ತು ಶಾಲೆ ತೊರೆಯುವಿಕೆಯನ್ನು ಕಡಿಮೆಗೊಳಿಸುವುದು ಹಾಗೂ ಮಗುವಿನ ದೈಹಿಕ, ಮಾನಸಿಕ, ಮತ್ತು ಸಾಮಾಜಿಕ ಬೆಳವಣಿಗೆಗೆ ಭದ್ರ ಅಡಿಪಾಯವನ್ನು ಹಾಕುವುದು, ಆರೋಗ್ಯ ಮತ್ತು ಪೌಷ್ಟಿಕತೆಯ ಶಿಕ್ಷಣವನ್ನು ನೀಡುವುದರ ಮೂಲಕ ತಾಯಂದಿರಲ್ಲಿ ತಮ್ಮ ಮಕ್ಕಳ ಆರೋಗ್ಯ ಮತ್ತು ಪೌಷ್ಟಿಕತೆಯ ಅಗತ್ಯಗಳನ್ನು ಸರಿಯಾಗಿ ನೋಡಿಕೊಳ್ಳುವ ಸಾಮರ್ಥ್ಯವನ್ನು ಹೆಚ್ಚಿಸುವುದು ಈ ಯೋಜನೆಯ ಉದ್ದೇಶವಾಗಿದೆ. ಪೂರಕ ಪೌಷ್ಟಿಕ ಆಹಾರ, ಚುಚ್ಚುಮದ್ದು, ಆರೋಗ್ಯ ತಪಾಸಣೆ, ಶಾಲಾ ಪೂರ್ವ ಶಿಕ್ಷಣ, ಪೌಷ್ಟಿಕತೆ ಮತ್ತು ಆರೋಗ್ಯ ಶಿಕ್ಷಣ ಈ ಯೋಜನೆಯಡಿಯಲ್ಲಿ ನೀಡಲಾಗುವ ಸೇವೆಗಳು. ರಾಜ್ಯದ ಎಲ್ಲಾ ಹಳ್ಳಿಗಳಲ್ಲೂ ಒಂದು ಸಾವಿರ ಜನಸಂಖ್ಯೆಗೆ ಒಂದರಂತೆ ಒಟ್ಟು 61,187 ಅಂಗನವಾಡಿ ಕೇಂದ್ರಗಳು ಹಾಗೂ ತಾಂಡಾಗಳಿಗಾಗಿ 3,331 ಚಿಕ್ಕ ಅಂಗನವಾಡಿ ಕೇಂದ್ರಗಳು ಕಾರ್ಯನಿರ್ವಹಿಸುತ್ತಿವೆ.
ಪೂರಕ ಪೌಷ್ಟಿಕ ಆಹಾರಕ್ಕಾಗಿ ರಾಜ್ಯ ಸರ್ಕಾರ ವೆಚ್ಚ ಮಾಡುವ ಮೊತ್ತದ ಶೇಕಡಾ ಐವತ್ತರಷ್ಟನ್ನು, ಅಂದರೆ ಸುಮಾರು ಮುನ್ನೂರು ಕೋಟಿ ಹಣವನ್ನು ಕೇಂದ್ರ ಸರ್ಕಾರ ರಾಜ್ಯ ಸರ್ಕಾರಕ್ಕೆ ಮರುಪಾವತಿಸುತ್ತದೆ. ಇಷ್ಟೆಲ್ಲಾ ವ್ಯವಸ್ಥೆ ಇದ್ದರೂ, ಅಂಗನವಾಡಿಗಳಲ್ಲಿ ಮಕ್ಕಳ ಸಂಖ್ಯೆ ತುಂಬಾ ಕಡಿಮೆ ಇರುತ್ತಿತ್ತು. ಅಪೌಷ್ಟಿಕ ಮಕ್ಕಳ ಸಂಖ್ಯೆ, ವಿಶೇಷವಾಗಿ ಹೈದ್ರಾಬಾದ್ ಕರ್ನಾಟಕ ಪ್ರದೇಶದಲ್ಲಿ ಹೆಚ್ಚು ಇತ್ತು. ರಾಷ್ಟ್ರೀಯ ಸಮೀಕ್ಷೆಯ ಪ್ರಕಾರ ಶೇಕಡಾ ಎಂಭತ್ತು ಮಹಿಳೆಯರ ಹಾಗೂ ಮಕ್ಕಳ ಪೌಷ್ಟಿಕತೆ ಸರಾಸರಿಗಿಂತ ಕೆಳಗೆ ಇದೆ. ಆದುದರಿಂದ ವಿಶೇಷವಾಗಿ ಬಡ ಕುಟುಂಬಗಳಿಗಾಗಿ ಈ ಆಹಾರದ ವ್ಯವಸ್ಥೆಯನ್ನು ಮಾಡಲು ಹಾಗೂ ನಾಗರಿಕರು ತೆರಿಗೆ ಕಟ್ಟಿದ ಕೋಟ್ಯಂತರ ರುಪಾಯಿಗಳ ಸದುಪಯೋಗಕ್ಕೆ ಸರ್ಕಾರ ಹೊಣೆಗಾರನಾಗುತ್ತದೆ.  
ನಾನು ಇಲಾಖೆಯ ಕಾರ್ಯದರ್ಶಿಯಾಗಿದ್ದಾಗ ಪೂರಕ ಪೌಷ್ಟಿಕ ಆಹಾರದ ವಿತರಣೆಯ ಬಗ್ಗೆ ದಿನಕ್ಕೆ ನೂರಾರು ದೂರುಗಳು ಸರ್ಕಾರೇತರ ಸಂಸ್ಥೆಗಳಿಂದ ಹಾಗೂ ಫಲಾನುಭವಿಗಳಿಂದ ಬರುತ್ತಿದ್ದವು. ನಾನು ಹಲವಾರು ಅಂಗನವಾಡಿಗಳಿಗೆ ಆಹಾರ ಕೊಡುವ ಸಮಯದಲ್ಲಿ ಹೋಗಿ ಪರಿಶೀಲನೆ ಮಾಡಿದೆ. ಆ ದೂರುಗಳಲ್ಲಿ ಬಹುಪಾಲು ಸತ್ಯವೆಂದು ನನಗೆ ಕಂಡು ಬಂದಿತು. ಅಂಗನವಾಡಿಗಳಿಗೆ ಆಹಾರವನ್ನು ಖಾಸಗೀ ಗುತ್ತಿಗೆದಾರರು ಪೂರೈಕೆ ಮಾಡುತ್ತಿದ್ದರು. ಅವರು ಪೊಟ್ಟಣಗಳಲ್ಲಿ ಕಳುಹಿಸುತ್ತಿದ್ದ ಆಹಾರವನ್ನು ನೀರಿನಲ್ಲಿ ಕಲಿಸಿ ಮಕ್ಕಳಿಗೆ ಕೊಡಲಾಗುತ್ತಿತ್ತು. ಆದರೆ ಕೆಟ್ಟ ವಾಸನೆಯನ್ನು ಬೀರುತ್ತಿದ್ದುದರಿಂದ ಮಕ್ಕಳು ಅದನ್ನು ತಿನ್ನಲು ನಿರಾಕರಿಸುತ್ತಿದ್ದರು. ತಿಂದ ಮಕ್ಕಳು ಹೊಟ್ಟೆ ನೋವು, ವಾಂತಿ, ಬೇಧಿ ಮುಂತಾದ ತೊಂದರೆಗಳನ್ನು ಅನುಭವಿಸುತ್ತಿದ್ದರು. ಇದನ್ನು ಕಂಡು ಬಹಳ ಬೇಸರವಾಯಿತು. ಏನಾದರೂ ಪರಿಹಾರ ಕಂಡುಹಿಡಿಯಲೇಬೇಕು ಎಂದು ನಿರ್ಧರಿಸಿದೆ.
ಒಳ್ಳೆ ಕೆಲಸ ಮಾಡಲು ಇಚ್ಛಿಸಿದಾಗ ತನಗೆ ತಾನೇ ದಾರಿ ಸಿಗುತ್ತದೆ ಎನ್ನುವಂತೆ, ನಮ್ಮ ದೇಶದ ಸರ್ವೋಚ್ಚ ನ್ಯಾಯಾಲಯವು 7 ಅಕ್ಟೋಬರ್, 2004ನೇ ಇಸವಿಯಲ್ಲಿಯೇ ಅಂಗನವಾಡಿಯಲ್ಲಿ ಮಕ್ಕಳಿಗೆ ಕೊಡುವ ಪೂರಕ ಪೌಷ್ಟಿಕ ಆಹಾರವನ್ನು ಖಾಸಗಿ ಗುತ್ತಿಗೆದಾರರೂ ಸರಬರಾಜು ಮಾಡುವುದಕ್ಕೆ ಸರ್ಕಾರ ಅವಕಾಶ ಮಾಡಿಕೊಡಬಾರದು ಎಂದು ತೀರ್ಪನ್ನು ಕೊಟ್ಟಿದ್ದು ನೆನಪಾಯಿತು. ಈ ತೀರ್ಪನ್ನು ಅನುಷ್ಠಾನಕ್ಕೆ ತರಲು ಇದೇ ಸೂಕ್ತ ಸಮಯವೆಂದು ನಿರ್ಧರಿಸಿದೆ. ಅದರದಂತೆ ಕೇರಳದಲ್ಲಿ ಈಗಾಗಲೇ ಜಾರಿಯಿದ್ದ ಕುಡುಂಬಶ್ರೀ ಮಾದರಿಯಲ್ಲಿ ಸ್ತ್ರೀಶಕ್ತಿ ಗುಂಪಿನ ಸದಸ್ಯರಿಗೆ ಪೂರಕ ಪೌಷ್ಟಿಕ ಆಹಾರವನ್ನು ತಯಾರಿಸಿ ವಿತರಿಸುವ ಜವಾಬ್ದಾರಿಯನ್ನು ಹೊರಿಸಲು ಇಚ್ಛಿಸಿದೆ. ಮಕ್ಕಳಿಗೆ ಕೊಡುವ ಆಹಾರವನ್ನು ಮಹಿಳೆಯರಿಗಿಂತ ಇನ್ಯಾರು ಚೆನ್ನಾಗಿ ನಿರ್ವಹಿಸಲು ಸಾಧ್ಯ? ಆಹಾರ ವಿತರಣೆ ಮಾನವೀಯತೆಯ ದೃಷ್ಟಿಯಿಂದ ಸಮರ್ಪಕವಾಗಿ ನಡೆಯಬೇಕೇ ಹೊರತು, ಕೇವಲ ವ್ಯವಹಾರದ ದೃಷ್ಟಿಯಿಂದ ನಡೆದರೆ ಯಾರಿಗೂ ಒಳ್ಳೆಯದಾಗುವುದಿಲ್ಲ ಎನ್ನುವುದನ್ನು ನಾವು ನಂತರದ ದಿನಗಳಲ್ಲಿ ಕಂಡಿದ್ದೇವಲ್ಲ? ಅದೇ ಅವಧಿಯಲ್ಲಿ, ಅಂದರೆ ಅಕ್ಟೋಬರ್ 2007 ರಿಂದ ಮೇ 2008 ರವರೆಗೆ ಕರ್ನಾಟಕದಲ್ಲಿ ರಾಷ್ಟ್ರಪತಿಗಳ ಆಡಳಿತ ಜಾರಿಯಲ್ಲಿತ್ತು. ನಮ್ಮ ಇಲಾಖೆಯನ್ನು ಪ್ರತಿಷ್ಠಿತ ನಿವೃತ್ತ ಪೊಲೀಸ್ ಅಧಿಕಾರಿ ತಾರಕನ್ ಅವರು ರಾಜ್ಯಪಾಲರ ಸಲಹೆಗಾರರಾಗಿ ನೋಡಿಕೊಳ್ಳುತ್ತಿದ್ದರು. ಅವರು ಕೇರಳದವರೇ ಆಗಿದ್ದುದರಿಂದ ಕುಡುಂಬಶ್ರೀ ಯೋಜನೆಯ ಬಗ್ಗೆ ತಿಳಿದುಕೊಂಡಿದ್ದರು. ಹಾಗಾಗಿ ನಮ್ಮ ಪ್ರಸ್ತಾವನೆಯನ್ನು ತಕ್ಷಣ ಅನುಮೋದಿಸಿದರು. ಅಂತೆಯೇ ನಾವು CFTRI ಸಹಾಯದಿಂದ ಆಸಕ್ತ ಸ್ವಸಹಾಯ ಗುಂಪುಗಳಿಗೆ ಉತ್ತಮ ಪೌಷ್ಟಿಕ ಆಹಾರವನ್ನು ಉತ್ಪಾದಿಸಲು ತರಬೇತಿ ನೀಡಿದೆವು. ಅಲ್ಲದೆ ಕಡ್ಡಾಯವಾಗಿ ಸ್ಥಳೀಯ ಸ್ವಸಹಾಯ ಗುಂಪುಗಳಿಂದ ಅಂಗವಾಡಿಗಳಿಗೆ ಊಟವನ್ನು ನೀಡುವ ಪದ್ಧತಿಗೆ ಚಾಲನೆ ನೀಡಿದೆವು. ಇವರುಗಳು ಬಡತನದ ಹಿನ್ನೆಲೆಯಿಂದ ಬಂದವರಾಗಿದ್ದು, ವಿಧವೆಯರು, ವಿಕಲಚೇತನರು, ಪರಿತ್ಯಕ್ತ ಮಹಿಳೆಯರು, ಫಲಾನುಭವಿಗಳ ತಾಯಂದಿರು ಹಾಗೂ ಸ್ತ್ರೀಶಕ್ತಿ ಗುಂಪಿನ ಸದಸ್ಯರುಗಳಾಗಿದ್ದರು.
ಪ್ರತಿ ಜಿಲ್ಲೆಯಲ್ಲಿ ಪೌಷ್ಟಿಕ ಆಹಾರದ ಖಾದ್ಯಪಟ್ಟಿಯನ್ನು ತಯಾರಿಸಿ ನಿಗದಿತವಾಗಿ ಪರಿಶೀಲಿಸಲು ಒಂದು ಸಮಿತಿಯನ್ನು ರಚಿಸಲಾಯಿತು. ಸ್ಥಳೀಯ ಹೋಮ್‌ಸೈನ್ಸ್ ಕಾಲೇಜುಗಳ ಜೊತೆಗೂಡಿ ಆಹಾರದಲ್ಲಿ ಗರಿಷ್ಠ ಪೋಷಕಾಂಶಗಳನ್ನು ಉಳಿಸಿ ಬಳಸಲು ಯಾವ ಕ್ರಮ ಜರುಗಿಸಬೇಕೆಂದು ನಮ್ಮ ಸಿಬ್ಬಂದಿಗಳಿಗೆ ತರಬೇತಿ ನೀಡಲಾಯಿತು. ಅಂಗನವಾಡಿ ಕೇಂದ್ರಗಳಿಗೆ ಒಂದು ಪೋಷಕರ ಸಮಿತಿ ಇದ್ದು, ಅದನ್ನು ಸಕ್ರಿಯಗೊಳಿಸಲು ಚುನಾಯಿತ ಪ್ರತಿನಿಧಿಗಳೊಂದಿಗೆ ಸ್ತ್ರೀಶಕ್ತಿ ಸಂಘದ ಮಹಿಳೆಯರನ್ನು ಸಹ ಸೇರಿಸಲಾಯಿತು. ಇದರಿಂದ ಪೌಷ್ಟಿಕ ಆಹಾರದ ಮೇಲ್ವಿಚಾರಣೆ ಮಾಡಲು ಅನುಕೂಲವಾಯಿತು.  
ಅದರಂತೆ ಪೌಷ್ಟಿಕ ಹಾಗೂ ರುಚಿ ಇರುವಂಥಹ ಆಹಾರದೊಂದಿಗೆ ಗೋಧಿ, ರವೆ, ಅನ್ನ, ಹೆಸರುಕಾಳು ಕಿಚಡಿ, ರವೆ ಪಾಯಸ, ಚಿತ್ರಾನ್ನ, ರವೆ ಲಾಡು, ಅಕ್ಕಿ ಕಿಚಡಿ, ಮೊಳಕೆ ಬರಿಸಿದ ಹೆಸರುಕಾಳು, ಅನ್ನ ಸಾಂಬಾರ್, ಗರ್ಭಿಣಿ, ಬಾಣಂತಿ, ಪ್ರಾಯ ಪೂರ್ವ ಕಿಶೋರಿಯರಿಗೆ ವಿವಿಧ ಧಾನ್ಯಗಳನ್ನೊಳಗೊಂಡ ಗೋಧಿ ಹಿಟ್ಟು, ಹೆಸರುಕಾಳು, ಬೆಲ್ಲ, ಗೋಧಿ, ಅನ್ನ ಸಾಂಬಾರ್‌ಗಳನ್ನು ನೀಡಲಾಗುತ್ತಿತ್ತು.
ಆದರೆ ಯಾವುದೇ ಹೊಸ ಬದಲಾವಣೆ ತರುವಾಗ ಹಳೆ ಪದ್ಧತಿಯಿಂದ ಪ್ರಯೋಜನ ಪಡೆಯುತ್ತಿದ್ದ ಶಕ್ತಿಗಳು ಪ್ರತಿವಿರೋಧಕ್ಕೆ ಸಕ್ರಿಯ ಆಗುತ್ತವೆ. ಉದಾಹರಣೆಗೆ ಹೊಸ ಸರ್ಕಾರದ ಅಧಿವೇಶನದ ಸಮಯದಲ್ಲಿ ಹೊಸ ಪದ್ಧತಿಯ ವಿರುದ್ಧ ಅಂಗನವಾಡಿ ಕಾರ್ಯಕರ್ತರು ಬೃಹತ್ ಆಂದೋಲನ ನಡೆಸಿದರು. ತಮ್ಮ ಮೇಲೆ ಮೇಲ್ವಿಚಾರಣೆ, ಪಾರದರ್ಶಕತೆ ಹಾಗೂ ಜನರ ಸಹಭಾಗಿತ್ವ ಅವರಿಗೆ ಬೇಕಾಗಿರಲಿಲ್ಲ. ಹೊಸ ಹೊಸ ಪೌಷ್ಟಿಕ ಆಹಾರವನ್ನು ಒದಗಿಸಲು ಸಾಕಷ್ಟು ಶ್ರಮಪಡಬೇಕಾಗಿತ್ತು. ಈ ಹಿಂದೆ ಅವರ ಜೊತೆಗೆ ಈ ವಿಷಯವಾಗಿ ಚರ್ಚಿಸಲಾಗಿತ್ತು. ಮಾತ್ರವಲ್ಲ ಅಂಗನವಾಡಿ ಕಾರ್ಯಕರ್ತರಿಗಾಗಿ ಹೆಚ್ಚಿನ ಗೌರವ ಧನ, ಪಿಂಚಣಿ ಯೋಜನೆ ಮುಂತಾದ ಪ್ರಸ್ತಾವನೆಗಳನ್ನು ತಯಾರಿಸಲಾಗಿತ್ತು. ಆದರೂ ಐದು ಸಾವಿರ ಅಂಗನವಾಡಿ ಕಾರ್ಯಕರ್ತರು ಕೆಲಸ ಬಿಟ್ಟು ಬೆಂಗಳೂರಿನ ಮೈದಾನದಲ್ಲಿ ಧರಣಿ ಕೂತಿದ್ದರು. ನಮ್ಮ ಸಚಿವರು ಅವರ ಪದಾಧಿಕಾರಿಗಳನ್ನು ಮಾತುಕತೆಗೆ ಕರೆಸಿದರು. ಆದರೆ ಅವರು ಒಪ್ಪಲು ತಯಾರಿರಲಿಲ್ಲ. ಆಗ ಸಚಿವರು ಅವರ ಬೇಡಿಕೆಯನ್ನು ಒಪ್ಪಿ ಕೆಲಸಕ್ಕೆ ವಾಪಸ್ಸು ಹೋಗಲು ಸೂಚಿಸಿದರು. ಅದರಂತೆ ಹಳೇ ಗುತ್ತಿಗೆದಾರರು ಇನ್ನೊಮ್ಮೆ ತಮ್ಮ ಸಾಮಗ್ರಿಯನ್ನು ನೀಡಲು ಪ್ರಾರಂಭಮಾಡಿದರು. ಆದರೆ ಸವೋಚ್ಚ ನ್ಯಾಯಾಲಯದ ತೀರ್ಪಿನಂತೆ ಗುತ್ತಿಗೆದಾರರನ್ನು ಮುಂದುವರೆಸಲು ಸಾಧ್ಯವಿರಲಿಲ್ಲ. ಹೀಗಾಗಿ ಸರ್ಕಾರದ ನಿರ್ಣಯದಂತೆ ಗುತ್ತಿಗೆದಾರರು ಪ್ರತಿ ತಾಲೂಕಿನಲ್ಲಿ ಒಂದು ಮಹಿಳಾ ಪೂರಕ ಪೌಷ್ಟಿಕ ಆಹಾರ ಉತ್ಪಾದನೆ ಹಾಗೂ ತರಬೇತಿ ಕೇಂದ್ರಗಳನ್ನು ಸ್ಥಾಪಿಸಬೇಕಾಗಿತ್ತು. ವಾರದ ಆರು ದಿನಗಳು ತಾಲೂಕು ಮಟ್ಟದಲ್ಲಿ ಕಾರ್ಯನಿರತ ಮಹಿಳಾ ಪೂರಕ ಪೌಷ್ಟಿಕ ಕೇಂದ್ರಗಳ ಮೂಲಕ ಗುತ್ತಿಗೆದಾರರು ತಯಾರಿಸಿದ ಸಾಮಗ್ರಿಗಳನ್ನು ಅಂಗನವಾಡಿಗಳಿಗೆ ಸರಬರಾಜು ಮಾಡಬೇಕಾಗಿತ್ತು. ಎರಡು ಮೂರು ವರ್ಷಗಳಲ್ಲಿ ಕೇಂದ್ರಗಳು ಸ್ವಾವಲಂಬಿಗಳಾಗಬೇಕಾಗಿತ್ತು.
ಈ ಮಧ್ಯೆ ಇನ್ನೊಂದು ಚಳವಳಿ ಪ್ರಾರಂಭವಾಯಿತು. ಸುಮಾರು ಮೂವತ್ತು ವರ್ಷಗಳಿಂದ ಸರ್ಕಾರ ಒಂದು ಪೌಷ್ಟಿಕ ಆಹಾರ ತಯಾರಿಸುವ ಕಾರ್ಖಾನೆಯನ್ನು ಪ್ರಾರಂಭಿಸಿತ್ತು. ಆದರೆ ಪೌಷ್ಟಿಕ ಆಹಾರವನ್ನು ಒದಗಿಸುವ ಆದೇಶ ಸರ್ಕಾರದಿಂದ ಕಾರ್ಖಾನೆಗೆ ಇಲ್ಲದೆ ಇದ್ದುದರಿಂದ ಅಲ್ಲಿನ ಕಾರ್ಮಿಕರು ಕೆಲಸ ಇಲ್ಲದೆ ಕಂಗಾಲಾಗಿದ್ದರು. ಆದರೆ ಅವರು ಟೆಂಡರ್ ಪ್ರಕ್ರಿಯೆಯಲ್ಲಿ ಭಾಗವಹಿಸಿರಲಿಲ್ಲ.
ಇಲಾಖೆಯಿಂದ ನನ್ನ ಬದಲಾವಣೆ ಆದ ಮೇಲೆ ಮಾಧ್ಯಮ, ವಿಧಾನ ಮಂಡಲ, ನ್ಯಾಯಾಲಯ ಮತ್ತು ಮುಂತಾದ ಸಂಘ ಸಂಸ್ಥೆಗಳು ಪೌಷ್ಟಿಕ ಆಹಾರ ಪದ್ಧತಿಯನ್ನು ವಿಕೇಂದ್ರೀಕರಿಸಲು ಹಾಗೂ ಖಾಸಗೀ ಗುತ್ತಿಗೆದಾರರನ್ನು ಹೊರ ಹಾಕಲು ಧ್ವನಿ ಎತ್ತಿದರು. ಈಗ ನಾನು ಪ್ರಾರಂಭಿಸಿದ ಪದ್ಧತಿ ಪುನಃ ಅನುಷ್ಠಾನಕ್ಕೆ ಬಂದಿದೆ ಎಂದು ತಿಳಿದು ನನಗೆ ಸಂತೋಷ ಆಗಿರುವುದು ಮಾತ್ರವಲ್ಲ ನನ್ನಲ್ಲಿ ಅನ್ಯಾಯದ ವಿರುದ್ಧದ ದಿಟ್ಟ  ಕ್ರಮ ಜರುಗಿಸಲು ಹೆಚ್ಚಿನ ಮನೋಬಲವೂ ದೊರಕಿದೆ. ಬದಲಾವಣೆಗಳಿಗೆ ಪ್ರಯತ್ನಿಸುವ ಛಲವನ್ನು ಸದೃಢಗೊಳಿಸಿದೆ. ತಾತ್ಕಾಲಿಕ ವಿರೋಧಗಳಿಂದ ಉದಾಸೀನರಾಗುವುದು ಬೇಡ, ಒಳ್ಳೆಯ ಕೆಲಸಕ್ಕೆ ಪ್ರಪಂಚದ ಉತ್ತಮ ಶಕ್ತಿಗಳು ನಮ್ಮೊಂದಿಗೆ ಕೈ ಜೋಡಿಸುತ್ತವೆ ಎಂಬ ವಿಶ್ವಾಸದಿಂದ, ನಮ್ಮ ಸಮಾಜ ಸುಧಾರಿಸುವ ಕೆಲಸದಲ್ಲಿ ಒಟ್ಟಾಗೋಣ.

(ಮುಂದುವರೆಯುವುದು)

- ಶಾಲಿನಿ ರಜನೀಶ್, ಐಎಎಸ್
anisikeprabha@gmail.com

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಅಮೆರಿಕ ಮಿಲಿಟರಿ ಕಾರ್ಯಾಚರಣೆ 'ಅಸಾಧ್ಯ', ವಿಮಾನವಾಹಕ ನೌಕೆ ಹೊಂದಿರುವ ಏಕೈಕ ಕಡಲ್ಗಳ್ಳ: Iran ಹೇಳಿಕೆ!

Cheap, Invisible, Accurate: ಇಸ್ರೇಲ್ ವಿರುದ್ಧ ಹೆಜ್ಬೊಲ್ಲಾದ ಹೊಸದಾದ ಮಾರಕ ಶಸ್ತ್ರಾಸ್ತ್ರ! ಸದ್ದಿಲ್ಲದೆ ಅನೇಕರ ಬಲಿ, Video

Video: ವಿವಸ್ತ್ರಗೊಳಿಸಿ, ಬೆನ್ನಟ್ಟಿ ಹಲ್ಲೆ-ಅತ್ಯಾಚಾರ; ನೈಜೀರಿಯಾದ ವಿಲಕ್ಷಣ Rape Festival ವಿರುದ್ಧ ಜಾಗತಿಕ ಆಕ್ರೋಶ

ಜೈಲಿನಲ್ಲಿ ಸಹ-ಕೈದಿಗಳಿಂದ ಬೆದರಿಕೆ, ಬೈಗುಳ, ಕಿರುಕುಳ: ಸುಪ್ರೀಂ ಕೋರ್ಟ್ ಬಳಿ ಕಷ್ಟ ಹೇಳಿಕೊಂಡ Actor Darshan

Monsoon 2026: ಸಿಹಿಸುದ್ದಿ.. ಅವಧಿಗಿಂತ ಮೊದಲೇ ಮುಂಗಾರು ಮಳೆ; ಅಂಡಮಾನ್, ಕೇರಳಕ್ಕೆ ಶೀಘ್ರ ಆಗಮನ- IMD

SCROLL FOR NEXT