

ಬೆಂಗಳೂರು: ಬಿರುಬೇಸಿಗೆಯಿಂದಾಗಿ ಬಳಲಿ ಬೆಂಡಾಗಿರುವ ಜನತೆಗೆ ಕೇಂದ್ರ ಹವಾಮಾನ ಇಲಾಖೆ ಸಿಹಿಸುದ್ದಿ ನೀಡಿದ್ದು, ಈ ಬಾರಿ ನಿಗಧಿಗಿಂತ ಮುಂಚಿತವಾಗಿಯೇ ಮುಂಗಾರು ಮಳೆ ಅಪ್ಪಳಿಸಲಿದ್ದು, ಅಂಡಮಾನ್ ಮತ್ತು ಕೇರಳಕ್ಕೆ ಮುಂಗಾರು ಮಾರುತಗಳು ಸಾಮಾನ್ಯಕ್ಕಿಂತ ಬೇಗನೇ ಆಗಮಿಸಲಿವೆ ಎಂದು ಹೇಳಲಾಗಿದೆ.
ಹೌದು.. ಭಾರತೀಯ ಹವಾಮಾನ ಇಲಾಖೆಯ (IMD) ಮುನ್ಸೂಚನೆಯಂತೆ, ನೈಋತ್ಯ ಮುಂಗಾರು ಮಳೆಯು ಮೇ 14 ಮತ್ತು 16, 2026ರ ನಡುವೆ ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳಿಗೆ ಮುಂಚಿತವಾಗಿ ಪ್ರವೇಶಿಸಲಿದೆ. ಅಂತರರಾಷ್ಟ್ರೀಯ ಮಾದರಿಗಳು (ECMWF) ಕೇರಳಕ್ಕೆ ಮುಂಗಾರು ಸುಮಾರು ಮೇ 25ರ ಸುಮಾರಿಗೆ ಬರಬಹುದು ಎಂದು ಅಂದಾಜಿಸಿವೆ.
ಆದರೆ ಐಎಂಡಿಯ ಅಧಿಕೃತ ಅಂದಾಜಿನ ಪ್ರಕಾರ ಕೇರಳಕ್ಕೆ ಸಾಮಾನ್ಯ ದಿನಾಂಕವಾದ ಜೂನ್ 1ರ ಹತ್ತಿರದಲ್ಲಿ ಅಥವಾ ಅದಕ್ಕಿಂತಲೂ ಮೊದಲೇ ಮಳೆ ಆರಂಭವಾಗುವ ಸಾಧ್ಯತೆಯಿದೆ ಎಂದು ಹೇಳಲಾಗಿದೆ.
ಈ ಬಾರಿ ನೈಋತ್ಯ ಮುಂಗಾರು ಅವಧಿಗಿಂತ ಮುಂಚಿತವಾಗಿ ಅಂಡಮಾನ್ ಪ್ರವೇಶಿಸಲಿದ್ದು, ಮೇ ಕೊನೆಯ ವಾರದಲ್ಲೇ ಕೇರಳಕ್ಕೆ ಅಪ್ಪಳಿಸುವ ಸಾಧ್ಯತೆಯಿದೆ. ಈ ಬಾರಿಯ ಮಳೆಯ ಮೇಲೆ 'ಎಲ್ ನಿನೊ' ಪ್ರಭಾವ ಬೀರಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
ಮುಂಗಾರು ಮಾರುತವು ಅವಧಿಗಿಂತ ಮುಂಚೆಯೇ ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳಿಗೆ ಪ್ರವೇಶಿಸುವ ಸಾಧ್ಯತೆ ಇದೆ. ಮೇ 14ರಿಂದ 16ರ ನಡುವೆ ಮುಂಗಾರು ಅಂಡಮಾನ್ ಪ್ರದೇಶಕ್ಕೆ ತಲುಪುವ ನಿರೀಕ್ಷೆಯಿದ್ದು, ಬಳಿಕ ಜೂನ್ 1ರ ಬದಲು ಮೇ ಕೊನೆಯ ವಾರದಲ್ಲೇ ಕೇರಳ ಕರಾವಳಿಗೆ ಅಪ್ಪಳಿಸಬಹುದು ಎಂದು ಇಲಾಖೆ ತಿಳಿಸಿದೆ.
ವಾಡಿಕೆಗಿಂತ ಹೆಚ್ಚು ಮಳೆ
ಮೇ ತಿಂಗಳಲ್ಲಿ ದೇಶದ ಹಲವು ಭಾಗಗಳಲ್ಲಿ ವಾಡಿಕೆಯಿಗಿಂತ ಹೆಚ್ಚಿನ ಮಳೆಯಾಗುವ ಸಾಧ್ಯತೆ ಇದೆ ಎಂದು ಹೇಳಲಾಗಿದ್ದು, ಇದು ಕೃಷಿ ಚಟುವಟಿಕೆಗಳಿಗೆ ಕೆಲ ಮಟ್ಟಿಗೆ ಸಹಕಾರಿ ಆಗಬಹುದು. ಆದರೆ, ಈಶಾನ್ಯ, ಪೂರ್ವ ಹಾಗೂ ಕೇಂದ್ರ ಭಾರತದ ಕೆಲವು ಪ್ರದೇಶಗಳಲ್ಲಿ ಮಳೆಯ ಪ್ರಮಾಣ ವಾಡಿಕೆಯಷ್ಟೇ ಅಥವಾ ಅದಕ್ಕಿಂತ ಕಡಿಮೆ ಇರುವ ಸಾಧ್ಯತೆಯಿದೆ ಎಂದು ಎಚ್ಚರಿಕೆ ನೀಡಲಾಗಿದೆ.
ಇದರ ನಡುವೆ ದೇಶದ ಬಹುತೇಕ ಭಾಗಗಳಲ್ಲಿ ಉಷ್ಣಾಂಶ ಹೆಚ್ಚಾಗುವ ಸಾಧ್ಯತೆ ಇದೆ. ವಿಶೇಷವಾಗಿ ಉತ್ತರ ಭಾರತ ಹಾಗೂ ಹಿಮಾಲಯದ ತಪ್ಪಲಿನ ಪ್ರದೇಶಗಳಲ್ಲಿ ಹೀಟ್‌ವೇವ್ ಪರಿಣಾಮ ಹೆಚ್ಚು ಕಾಣಿಸಿಕೊಳ್ಳಬಹುದು. ಏಪ್ರಿಲ್ ತಿಂಗಳಲ್ಲಿ ದಕ್ಷಿಣ ಭಾರತದಲ್ಲಿ ಸಾಮಾನ್ಯಕ್ಕಿಂತ ಹೆಚ್ಚಿನ ತಾಪಮಾನ ದಾಖಲಾಗಿದ್ದರೆ, ಇತರ ಭಾಗಗಳಲ್ಲಿ ಕನಿಷ್ಠ ತಾಪಮಾನ ಸಾಮಾನ್ಯ ಮಟ್ಟದಲ್ಲೇ ಇತ್ತು.
‘ಎಲ್ ನಿನೊ’ ಪರಿಣಾಮ
ಪೆಸಿಫಿಕ್ ಮಹಾಸಾಗರದಲ್ಲಿ ನೀರಿನ ತಾಪಮಾನ ಹೆಚ್ಚಾಗುತ್ತಿರುವ ಹಿನ್ನೆಲೆ ‘ಎಲ್ ನಿನೊ’ ಪರಿಸ್ಥಿತಿ ನಿರ್ಮಾಣವಾಗಿದ್ದು, ಇದು ಈ ವರ್ಷದ ಮುಂಗಾರು ಮಳೆಯ ಪ್ರಮಾಣದ ಮೇಲೆ ಪರಿಣಾಮ ಬೀರುವ ಸಾಧ್ಯತೆ ಇದೆ. ಒಟ್ಟಾರೆ ಮಳೆಯ ಪ್ರಮಾಣ ವಾಡಿಕೆಗಿಂತ ಕಡಿಮೆಯಾಗುವ ಸಾಧ್ಯತೆ ಇದೆ ಎಂಬ ಅಂದಾಜು ವ್ಯಕ್ತವಾಗಿದೆ. ಹವಾಮಾನ ಇಲಾಖೆ ನೀಡಿರುವ ಈ ಮುನ್ಸೂಚನೆ ಹಿನ್ನೆಲೆಯಲ್ಲಿ ರೈತರು ಹಾಗೂ ಸಾರ್ವಜನಿಕರು ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳುವಂತೆ ಸೂಚಿಸಲಾಗಿದೆ.
ಅದಾಗ್ಯೂ ಪ್ರಸ್ತುತ ತಟಸ್ಥವಾಗಿದ್ದರೂ, ಮುಂದಿನ ದಿನಗಳಲ್ಲಿ ಪಾಸಿಟಿವ್ IOD ಉಂಟಾಗುವ ಸಾಧ್ಯತೆಯಿದೆ, ಇದು ಉತ್ತಮ ಮಳೆಗೆ ಪೂರಕವಾಗಿದೆ. ಒಳನಾಡಿನ ವಿಪರೀತ ಶಾಖವು ಕಡಿಮೆ ಒತ್ತಡದ ಪ್ರದೇಶವನ್ನು ನಿರ್ಮಿಸಿದ್ದು, ಇದು ತೇವಾಂಶಭರಿತ ಮಾರುತಗಳನ್ನು ನಿಗದಿತ ಸಮಯಕ್ಕಿಂತ ಮೊದಲೇ ಭೂಮಿಯತ್ತ ಸೆಳೆಯುವ ಸಾಧ್ಯತೆಯಿದೆ.
ಕರ್ನಾಟಕದ ಮೇಲೂ ಪರಿಣಾಮ
2026ರ ಮುಂಗಾರು ಮತ್ತು ಪ್ರಸ್ತುತ ಹವಾಮಾನ ಬದಲಾವಣೆಗಳು ಕರ್ನಾಟಕದ ಮೇಲೂ ಪರಿಣಾಮ ಬೀರಲಿದ್ದು, ಏಪ್ರಿಲ್ ಅಂತ್ಯ ಮತ್ತು ಮೇ ಆರಂಭದಲ್ಲಿ ರಾಜ್ಯದಾದ್ಯಂತ ಬೀಳುತ್ತಿರುವ [ಮುಂಗಾರು ಪೂರ್ವ ಮಳೆಯಿಂದಾಗಿ ಬೆಂಗಳೂರು ಸೇರಿದಂತೆ ದಕ್ಷಿಣ ಒಳನಾಡಿನ ಜಿಲ್ಲೆಗಳಲ್ಲಿ ತಾಪಮಾನವು 1-2 ಡಿಗ್ರಿಯಷ್ಟು ಇಳಿಕೆಯಾಗಿದೆ. ಮಳೆಯ ಹೊರತಾಗಿಯೂ, ಉತ್ತರ ಕರ್ನಾಟಕದ ಕಲಬುರಗಿ, ರಾಯಚೂರು, ಬಳ್ಳಾರಿ ಮತ್ತು ವಿಜಯಪುರ ಜಿಲ್ಲೆಗಳಲ್ಲಿ ತಾಪಮಾನವು ಇನ್ನೂ 40-44°C ಆಸುಪಾಸಿನಲ್ಲಿದ್ದು, ಬಿಸಿಗಾಳಿಯ ಅಬ್ಬರ ಮುಂದುವರಿದಿದೆ.
Advertisement