ದುಂದು ವೆಚ್ಚ ತಡೆಯದೇ ಹಾಲಿನ ಬೆಲೆ ಏರಿಸುವುದೆ?
ಡಿಸೇಲ್, ಪೆಟ್ರೋಲ್ ಬೆಲೆಯನ್ನು ಎಂಟು ಬಾರಿ ಕೇಂದ್ರ ಸರ್ಕಾರ ಏರಿಸಿದ್ದರೆ, ಕರ್ನಾಟಕ ಹಾಲು ಮಹಾ ಮಂಡಲ (ಕೆಎಂಎಫ್ ) ಆರು ತಿಂಗಳಲ್ಲಿ ಹಾಲಿನ ಬೆಲೆಯನ್ನು ಮೂರು ಬಾರಿ ಏರಿಕೆ ಮಾಡಿ ದಾಖಲೆ ನಿರ್ಮಿಸಿದೆ. ಆರ್ಥಿಕ ನಷ್ಟದ ನೆಪದಲ್ಲಿ ಹಾಲಿನ ಬೆಲೆಯನ್ನು ನಿರಂತರವಾಗಿ ಏರಿಕೆ ಮಾಡಿ ಗ್ರಾಹಕರಿಗೆ ಬರೆ ಎಳೆಯಲಾಗುತ್ತಿದೆ. ಅತ್ಯಂತ ಸೂಕ್ಮವಾಗಿ ಅವಲೋಕಿಸಿದರೆ ರೈತರಿಗೂ ವಂಚನೆ ಮಾಡಲಾಗುತ್ತಿದೆ.
ಸಹಕಾರಿ ಕಾಯ್ಕೆ ಪ್ರಕಾರ ಸಹಕಾರಿ ಸಂಸ್ಥೆಗಳ ಆಡಳಿತಾತ್ಮಕ ವೆಚ್ಚ ಶೇ. 2.5 ಕ್ಕಿಂತ ಹೆಚ್ಚು ದಾಟುವಂತಿಲ್ಲ. ಆದರೆ ಈಗ ಸಹಕಾರಿ ತತ್ವಗಳಡಿ ನಡೆಯುತ್ತಿರುವ (ಕೆಎಂಎಫ್ ಸೇರಿದಂತೆ) ಮತ್ತು ಅದರಡಿ ರಾಜ್ಯಾದ್ಯಂತ ಇರುವ 13 ಒಕ್ಕೂಟಗಳ ಆಡಳಿತಾತ್ಮಕ ವೆಚ್ಚ ಶೇ. 7 ರಿಂದ 8 ಕ್ಕೆ ಏರಿದೆ. ಇದಕ್ಕೆ ಕಾರಣ ಆಡಳಿತ ವ್ಯವಸ್ಥೆಯಲ್ಲಿರುವ ದುಂದುವೆಚ್ಚ ಮತ್ತಿತರ ಹತ್ತಾರು ದೋಷಗಳು. ಈಗ ರಾಜ್ಯದಲ್ಲಿ ಪ್ರತಿದಿನ 51 ಲಕ್ಷ ಲೀಟರ್ ಹಾಲು ಉತ್ಪಾದನೆಯಾಗುತ್ತಿದೆ. ಮಾರಾಟವಾಗುತ್ತಿರುವುದು 30 ಲಕ್ಷ ಲೀಟರ್ ಮಾತ್ರ. ಉಳಿದ ಹಾಲನ್ನು ಹಾಲಿನ ಪುಡಿ, ಬೆಣ್ಣೆ ಮಾಡಲು ಬಳಸಿಕೊಳ್ಳಲಾಗುತ್ತಿದೆಯಾದರೂ, ಈ ಉತ್ಪನ್ನಗಳನ್ನು ಸೂಕ್ತ ಕಾಲಕ್ಕೆ, ಸಕಾಲಕ್ಕೆ ಮಾರಾಟ ಮಾಡುವ ವ್ಯವಸ್ಥೆ ಆಗುತ್ತಿಲ್ಲ.
ಪಶು ಸಂಗೋಪನಾ ಸಚಿವರು ಕೆಎಂಎಫ್ ಆರ್ಥಿಕ ನಷ್ಟ ಅನುಭವಿಸುತ್ತಿದೆ ಎಂದು ಹೇಳುತ್ತಾರೆ. ಹಾಗಾದರೆ ಇತ್ತೀಚೆಗೆ ಕೆಎಂಎಫ್‌ನಲ್ಲಿ 207 ಹುದ್ದೆಗಳು ಮತ್ತು ಕೆಲ ಒಕ್ಕೂಟಗಳಲ್ಲಿ ನೂರಾರು ಹುದ್ದೆಗಳನ್ನು ಏಕೆ ನೇಮಕಾತಿ ಮಾಡಿಕೊಳ್ಳಲಾಗುತ್ತಿದೆ? ಕೆಎಂಎಫ್ ಅಧ್ಯಕ್ಷರು, ಅಧಿಕಾರಿಗಳಿಗಳಲ್ಲೇ 13 ಹಾಲು ಒಕ್ಕೂಟಗಳ ಅಧ್ಯಕ್ಷರಿಗೆ ಇನೋವಾ ಮತ್ತಿತರ ಐಷಾರಾಮಿ ಕಾರುಗಳೇ ಏಕೆ ಬೇಕು? ಅಧ್ಯಯನದ ನೆಪದಲ್ಲಿ ವರ್ಷದಲ್ಲಿ ಹಲವು ಬಾರಿ ಅಧಿಕಾರಿಗಳು ಮತ್ತು ಆಡಳಿತ ಮಂಡಳಿಯ ನಿರ್ದೇಶಕರು ಕುಟುಂಬ ಸಮೇತ ವಿದೇಶಗಳಿಗೆ ಹೋಗುವುದೇಕೆ? ಹಾಲು ಸಾಗಿಸಲು ಬಳಸುವ ಕ್ರೇಟ್‌ಗಳು ಕಳಪೆ ಮಟ್ಟದಿಂದ ಕೂಡಿರುವ ಕಾರಣ, ಹಾಲಿನ ಪ್ಯಾಕೆಟ್‌ಗಳು ಒಡೆದು ಪ್ರತಿದಿನ ಸಾವಿರಾರು ಲೀಟರ್ ಹಾಲು ನಷ್ಟವಾಗುತ್ತಿದೆ. ಹಾಲು ತುಂಬಲು ಬಳಸುವ ಪಾಲಿಥೀನ್ ಕವರ್ ಗುಣಮಟ್ಟ ಕಳಪೆ ಆಗಿರುವ ಕಾರಣ ಪ್ರತಿದಿನವೂ 700 ರಿಂದ 800 ರು. ಲೀಟರ್ ಹಾಲು ವ್ಯರ್ಥವಾಗುತ್ತಿದೆ. ಇದರಿಂದ ವಾರ್ಷಿಕ 86 ಲಕ್ಷ ರು. ನಷ್ಟವಾಗುತ್ತಿದೆ.
ಭದ್ರತಾ ವ್ಯವಸ್ಥೆಯೊಡನೆ ಷಾಮೀಲಾಗಿ ಕಳ್ಳ ದಾರಿಯ ಮೂಲಕ ಹಾಲು ಸಾಗಾಣಿಕೆ ಆಗುತ್ತಿರುವುದನ್ನು ಏಕೆ ಗಮನರಿಸಬಾರದು? ಒಕ್ಕೂಟಗಳಿಗೆ ಬೇಕಾದ ವಸ್ತುಗಳನ್ನು ಖರೀದಿಸುವಲ್ಲಿ ಮತ್ತು ಕಾಮಗಾರಿಗಳಲ್ಲಿ ನಡೆಯುತ್ತಿದೆ ಎನ್ನಲಾದ ಭ್ರಷ್ಟಾಚಾರ ತಡೆಗಟ್ಟಲು ಮುಂದಾಗಬಾರದೇಕೇ?
ಶೇ. 4 ಕ್ಕಿಂತ ಮೇಲ್ಪಟ್ಟು ಕೊಬ್ಬಿನಾಂಶ ಇರುವ ಹಾಲನ್ನು ಮಾತ್ರ ರೈತರಿಂದ ಖರೀದಿಸಲಾಗುತ್ತಿದೆ. ಅದಕ್ಕೆ ಒಕ್ಕೂಟಗಳು ಪ್ರತಿ ಲೀಟರ್‌ಗೆ ನೀಡುತ್ತಿರುವ ಹಣ 18 ರಿಂದ 20 ರುಪಾಯಿ ಮಾತ್ರ(ಸರ್ಕಾರ ನೀಡುವ ಪ್ರೋತ್ಸಾಹ ಧನ ಹೊರತುಪಡಿಸಿ). ಆದರೆ ಗ್ರಾಹಕರಿಗೆ ಶೇ. 3 ರಷ್ಟು ಕೊಬ್ಬಿನಾಂಶ ಇರುವ ಪ್ರತಿ ಲೀಟರ್ ಹಾಲನ್ನು 30 ರಿಂದ 32 ರು. ಗೆ ಮಾರಾಟ ಮಾಡಲಾಗುತ್ತಿದೆ. ಉಳಿದ ಶೇ. 1 ರಷ್ಟು ಕೊಬ್ಬಿನಾಂಶವನ್ನು ಪೇಡಾ, ಕೋವಾ ಮತ್ತಿತರ ಉತ್ಪನ್ನಗಳನ್ನು ತಯಾರು ಮಾಡಲು ಬಳಸಿಕೊಳ್ಳಲಾಗುತ್ತದೆ. ಹೀಗೆ ರೈತರಿಂದ 20 ರು.ಗೆ ಖರೀದಿಸಿ ಗ್ರಾಹಕರಿಗೆ 30 ರು.ಗೆ ಮಾರಾಟ ಮಾಡಲಾಗುತ್ತಿದೆ. ಪ್ರತಿ ಲೀಟರ್‌ಗೆ ಸರಾಸರಿ 10 ರು. ಲಾಭ ಪಡೆಯುವುದಲ್ಲದೇ, ಉಳಿಸಿಕೊಳ್ಳುವ ಶೇ. 1 ರಷ್ಟು ಕೊಬ್ಬಿನಾಂಶದಿಂದ ಪೇಡಾ ಮತ್ತಿತರ ವಸ್ತುಗಳನ್ನು ತಯಾರಿಸಿ ಲಾಭ ಪಡೆಯಲಾಗುತ್ತಿದೆ. ಇದನ್ನು ಗಮನಿಸಿದರೆ ಹಾಲು ಒಕ್ಕೂಟಗಳು ಲಾಭದಾಯಕವಾಗಿಯೇ ನಡೆಯಬೇಕು.
ಹೀಗಾಗದೇ ಇರಲು ಕಾರಣಗಳೆಂದರೆ, ಅನಗತ್ಯ ಆಡಳಿತಾತ್ಮಕ ವೆಚ್ಚ, ಸೋರಿಕೆ ಮತ್ತು ಭ್ರಷ್ಟಾಚಾರ. ಇವುಗಳನ್ನೆಲ್ಲಾ ತಡೆಯಲು ಮುಂದಾಗದೇ ಆರ್ಥಿಕ ನಷ್ಟ ಅನುಭವಿಸಲಾಗುತ್ತಿದೆ ಎಂಬ ಕಾರಣವೊಡ್ಡಿ ಹಾಲಿನ ದರವನ್ನು ನಿರಂತರವಾಗಿ ಏರಿಕೆ ಮಾಡುವ ಮೂಲಕ ಗ್ರಾಹಕರಿಗೆ ಬರೆ ಹಾಕುವುದು ಸರ್ವತ ಸಲ್ಲ. ಪ್ರೋತ್ಸಾಹ ಧನ ನೀಡಿ ಎಂದು ರೈತರ್ಯಾರೂ ವಿಧಾನಸೌಧದ ಬಳಿ ಬಂದು ಉಪವಾಸ ಸತ್ಯಾಗ್ರಹ ನಡೆಸಿರಲಿಲ್ಲ. ಆದರೂ ಪಕ್ಷ ರಾಜಕಾರಣದ ಹಿನ್ನೆಲೆಯಲ್ಲಿ ಏರಿಕೆ ಮಾಡಲಾಯಿತು. ಪ್ರೋತ್ಸಾಹ ನೀಡುತ್ತಿರುವುದು ಕೂಡ ಪ್ರಯೋಜನವಾಗುತ್ತಿಲ್ಲ. 2 ರು. ಪ್ರೋತ್ಸಾಹ ಧನ ನೀಡಿದ ಕಾಲಕ್ಕೇನೆ ಪಶು ಆಹಾರಗಳ ಬೆಲೆಯನ್ನು ಶೇ. 25 ರಷ್ಟು ಹೆಚ್ಚಿಸಲಾಯಿತು. ಅಂದರೆ 25 ರು. ಪಶು ಆಹಾರವನ್ನು 50 ರು. ಗೆ ಏರಿಸಲಾಯಿತು. ಹೀಗಾದರೆ ಪ್ರೋತ್ಸಾಹ ಧನ ಕೊಟ್ಟರೂ ಪ್ರಯೋಜನವಾಗಿದ್ದೇನು? ಇದರ ಬದಲು ಪಶು ಆಹಾರಗಳಿಗೆ ಸಬ್ಸಿಡಿ ನೀಡಿದ್ದರೆ ಮಹಾನ್ ಉಪಕಾರ ಮಾಡಿದಂತೆ ಆಗುತ್ತಿತ್ತು.
ಒಂದು ಹಸು ಹಾಲು ನೀಡುವುದು 8 ರಿಂದ 10 ತಿಂಗಳು. ಉಳಿದ 6 ರಿಂದ 7 ತಿಂಗಳು ಗರ್ಭಾವಸ್ಥೆಯಲ್ಲಿ ಹಾಲು ನೀಡುವುದಿಲ್ಲ. ಆದರೆ ಹಸುವಿಗೆ 365 ದಿನಗಳು ಪಶು ಆಹಾರ, ಮೇವು ಹಾಕಲೇಬೇಕು. ಹಾಲು ನೀಡಿದಾಗ ಮಾತ್ರ ಪ್ರೋತ್ಸಾಹ ಧನ ಇಲ್ಲದಿದ್ದರೆ ಇಲ್ಲ ಎಂದಾದರೇ ಪ್ರಯೋಜನವಾಗುವುದಿಲ್ಲ. ಆದ್ದರಿಂದ ಪಶು ಆಹಾರಕ್ಕೆ ಸಬ್ಸಿಡಿ ನೀಡಬೇಕು ಎಂಬ ರೈತ ಮಹಿಳೆಯರ ಅಭಿಪ್ರಾಯಕ್ಕೆ ಚಿಕ್ಕಾಸಿನ ಕಿಮ್ಮತ್ತು ನೀಡುತ್ತಿಲ್ಲ. ಪ್ರೋತ್ಸಾಹ ಧನವನ್ನೂ ಆಯಾ ತಿಂಗಳಿಗೆ ನೀಡುತ್ತಿಲ್ಲ. ಆರು ತಿಂಗಳಿಗೋ, 12 ತಿಂಗಳಿಗೊಮ್ಮೆಯೋ ನೀಡಲಾಗುತ್ತಿದೆ.
ಬೇಕೆಂದಾಗ ಹಾಲು ಖರೀದಿ ಮಾಡಲಾಗುತ್ತದೆ. ಸುಗ್ಗಿ ಕಾಲಕ್ಕೆ ಹೆಚ್ಚು ಹಾಲು ಉತ್ಪಾದನೆ ಆಗುತ್ತದೆ. ಆಗ ಒಣ ದಿನವೆಂದು ಘೋಷಿಸಿ ಹಾಲು ಖರೀದಿಸುವುದಿಲ್ಲ ಅಥವಾ ಉತ್ಪಾದಕರಿಗೆ ನೀಡುತ್ತಿದ್ದಂತೆ ಹಾಲಿನ ದರವನ್ನು ಹೇಳದೇ ಕೇಳದೆ ಇಳಿಕೆ ಮಾಡಲಾಗುತ್ತದೆ.
ಭಾರತದಲ್ಲಿ ಸಹಕಾರ ಕ್ಷೇತ್ರದ ಮೂಲಕ ಕ್ಷೀರಕ್ರಾಂತಿಗೆ ಭದ್ರ ಬುನಾದಿ ಹಾಕಿ ರೈತರ ಬದುಕಿನಲ್ಲಿ ಆಶಾ ಕಿರಣ ಚೆಲ್ಲಿದ್ದ ವರ್ಗೀಸ್ ಕುರಿಯನ್ ಅವರ ಘನೋದ್ದೇಶಗಳಿಗೆ ವಿರುದ್ಧವಾಗಿ ಕರ್ನಾಟಕ ಹಾಲು ಒಕ್ಕೂಟ ಮಹಾಮಂಡಲ (ಕೆಎಂಎಫ್ ) ನಡೆದುಕೊಳ್ಳುತ್ತಿರುವ ಪರಿಣಾಮವೇ ಎಲ್ಲಾ ಅವ್ಯವಸ್ಥೆ ಆಗರಗಳಿಗೆ ಕಾರಣ. ಕೆಎಂಎಫ್ ಅಧ್ಯಕ್ಷರಾದ ನಂತರವೇ ಹಾಲು ಹಸುವಿನಿಂದ ಉತ್ಪಾದನೆ ಆಗುತ್ತದೆ ಎಂದು ತಿಳಿದಂತೆ ಇರುವ ಹಾಲಿ ಅಧ್ಯಕ್ಷರು, ಹಸು, ಕರು, ಮೇವು, ಗಂಜಲ, ಹಾಲು ಮತ್ತು ಗಿಣ್ಣಾಲು ಎಂಬ ಬಗ್ಗೆ ಸರಿಯಾದ ತಿಳವಳಿಕೆ ಇಲ್ಲ ಎಂದು ಕಾಣಿಸುತ್ತಿದೆ. ಹಾಗಾಗಿ ಅಧ್ಯಕ್ಷರಿಗೆ ಅಧಿಕಾರಿಗಳಿಗೆ ಹೇಳಿದ್ದೆ ವೇದವಾಕ್ಯವಾಗಿದೆ.
ಹಾಲು ಮಹಾಮಂಡಲದ ಈ ನೀತಿಯಿಂದ ರೈತರು ತತ್ತರಿಸಿ ಹೋಗಿದ್ದಾರೆ. ಬರ, ಪಶು ಆಹಾರ ಏರಿಕೆ ಮತ್ತು ಹಾಲಿನ ಬೆಲೆ ಇಳಿಕೆಯಿಂದ ರೈತಾಪಿಗಳು ಹೈನುಗಾರಿಕೆಯನ್ನೇ ತ್ಯಜಿಸುವಂತಾಗಿದೆ.
ಕೋಲಾರ, ಮೈಸೂರು ಮತ್ತು ಚಾಮರಾಜನಗರ ಹಾಲು ಒಕ್ಕೂಟ, ಮಂಡ್ಯ, ತುಮಕೂರು, ಬಿಜಾಪುರ, ಬೆಳಗಾಂ,, ಬಳ್ಳಾರಿ, ಶಿವಮೊಗ್ಗ ಮತ್ತು ಧಾರವಾಡ ಹಾಲು ಒಕ್ಕೂಟಗಳು ಸೇರಿದಂತೆ ಎಲ್ಲಾ ಒಕ್ಕೂಟಗಳಲ್ಲಿ ಆಡಳಿತಾತ್ಮಕ ವೆಚ್ಚ ಹೆಚ್ಚಾಗಿದೆ. ರೈತರು ನೀಡಿದ ಹಾಲಿನ ಹಣ ಬಟವಾಡೆ ಸರಿಯಾಗಿ ಮಾಡುತ್ತಿಲ್ಲ. ಕೆಲವು ಒಕ್ಕೂಟಗಳು ಬಾಕಿ ಇರುವ ಹಾಲಿನ ಬಿಲ್ಲುಗಳ ಪಾವತಿಗೆ ಬ್ಯಾಂಕುಗಳಿಂದ ಸಾಲ ಪಡೆದಿದ್ದು, ಇದರ ಮೇಲಿನ ಬಡ್ಡಿ ಪಾವತಿಸಬೇಕಾಗಿದೆ. ಮಾದರಿ 1 ರ ಪಶು ಆಹಾರ ದರವು 2007-08 ರಲ್ಲಿ ಪ್ರತಿ ಟನ್‌ಗೆ 7,200 ರು ಇತ್ತು. ಪ್ರಸ್ತುತ ಪ್ರತಿ ಟನ್‌ಗೆ 16, 300 ರುಗೆ ಏರಿಕೆ ಆಗಿದೆ. ವಿಶೇಷ ಪಶು ಆಹಾರದ ದರ 2007-08 ರಲ್ಲಿ ಪ್ರತಿ ಟನ್‌ಗೆ 8, 000 ರು. ಇತ್ತು. ಈಗ ಶೇಕಡ 100 ರಷ್ಟು ಅಂದರೆ ಎರಡು ಪಟ್ಟು ಹೆಚ್ಚಾಗಿರುತ್ತದೆ. ಇಂತಹ ಹೆಚ್ಚಳ ಕೆಎಂಎಫ್ ಇತಿಹಾಸದಲ್ಲಿಯೇ ದಾಖಲೆಯಾಗಿದೆ.
ಪಶು ಆಹಾರ ಬೆಲೆ ಹೆಚ್ಚಳದಿಂದ ಉತ್ಪಾದಕನಿಗೆ ಪಶುಗಳ ನಿರ್ವಹಣಾ ವೆಚ್ಚ ಹೆಚ್ಚಾಗಿ ನಷ್ಟವನ್ನು ಭರಿಸಲಾಗದೇ ರಾಸುಗಳನ್ನು ಸಿಕ್ಕಿದಷ್ಟು ಬೆಲೆಗೆ ಮಾರಾಟ ಮಾಡುತ್ತಿದ್ದು, ಒಟ್ಟಾರೆ ಹೈನುಗಾರಿಕೆ ಬೆಳವಣಿಗೆ ತೀವ್ರ ಇಳಿಮುಖವಾಗುತ್ತಿದೆ. ಮಹಾ ಮಂಡಲವೂ ಪಶು ಆಹಾರ ಮಾರಾಟದ ಬೆಲೆಗಳನ್ನು ಇಷ್ಟೊಂದು ಪ್ರಮಾಣದಲ್ಲಿ ಹೆಚ್ಚಳ ಮಾಡಿದ್ದರೂ ಸಹ ಪಶು ಆಹಾರ ಕಾರ್ಖಾನೆಗಳು ಪ್ರಸ್ತುತ ಸಾಲಿನಲ್ಲಿ 59 ಕೋಟಿ ರು. ನಷ್ಟ ಅನುಭವಿಸುತ್ತಿವೆ. ಈ ನಷ್ಟಗಳಿಗೆ ಬಹುಮುಖ್ಯ ಕಾರಣವೆಂದರೆ ಪಶು ಆಹಾರ ಕಚ್ಚಾ ಪಧಾರ್ಥಗಳನ್ನು ಖರೀದಿಸುವಲ್ಲಿ ನಡೆಸಿರುವ ಅವೈಜ್ಞಾನಿಕ ಖರೀದಿ ವಿಧಾನಗಳು.
ಒಕ್ಕೂಟಗಳ ಸಗಟು ದಾಸ್ತಾನುಗಳನ್ನು ಸಕಾಲದಲ್ಲಿ ವಿಲೇವಾರಿ ಮಾಡದ ಕಾರಣ ಬೆಲೆಗಳು ಇಳಿಮುಖವಾಗಿ ಒಕ್ಕೂಟಗಳು ನಷ್ಟದ ಹಾದಿ ಹಿಡಿಯಲು ಕಾರಣವಾಗಿದೆ. ಯಾವುದೇ ಸಂಸ್ಥೆ ಉಳಿದು ಬೆಳೆಯಬೇಕಾದರೆ ಉತ್ಪಾದಕರು ಮತ್ತು ಗ್ರಾಹಕರ ಹಿತವನ್ನು ಕಾಪಾಡುವ ನಿಟ್ಟಿನಲ್ಲಿ ಸಾಗಬೇಕು.
ದಾಸ್ತಾನು ಇರುವ ಹಾಲಿನ ಪುಡಿ ಮತ್ತು ಬೆಣ್ಣೆಯನ್ನು ತ್ವರಿತವಾಗಿ ಆಯಾ ಕಾಲಕ್ಕೆ ಮಾರಾಟ ಮಾಡಲು ಕ್ರಮ ಜರುಗಿಸಬೇಕು. ಆಡಳಿತ ಮಂಡಳಿಯ ಅದಕ್ಷತೆ ಮತ್ತು ದುಂದುವೆಚ್ಚಕ್ಕೆ ಕಡಿವಾಣ ಹಾಕಲೇಬೇಕಾಗಿದೆ. ಹಾಗೆ ಮಾಡದೇ ಸರ್ಕಾರ ಹಾಲಿನ ಬೆಲೆ ಏರಿಸುವ ಪ್ರವೃತ್ತಿ ಮುಂದುವರಿಸಿದರೆ ಸಹಕಾರ ತತ್ವದಡಿ ಸಂಹಾರ ತತ್ವವನ್ನು ಅನುಷ್ಠಾನಗೊಳಿಸಿದಂತಾಗುತ್ತದೆ.
- ದಯಾಶಂಕರ ಮೈಲಿ
ಕನ್ನಡಪ್ರಭ