ನೇಣುಗಂಬಕ್ಕೆ ದೂರಶಿಕ್ಷಣ ವ್ಯವಸ್ಥೆ
ದೂರಶಿಕ್ಷಣ ಕ್ಷೇತ್ರ ಎಡವುತ್ತಿದೆ. ಕೇಂದ್ರ ಸರ್ಕಾರ ಮಾನವ ಸಂಪನ್ಮೂಲ ಮತ್ತು ಅಭಿವೃದ್ಧಿ ಇಲಾಖೆ ಈ ಎಲ್ಲಾ ಯಡವಟ್ಟಿಗೂ ಕಾರಣವಾಗುತ್ತಿದೆಯೇ ಎಂಬ ಅನುಮಾನ ಕಾಡಲು ಪ್ರಾರಂಭಿಸಿದೆ. ಮೊಟ್ಟ ಮೊದಲು ಡೀಮ್ಡ್ ವಿಶ್ವವಿದ್ಯಾಲಯಗಳನ್ನು ಪ್ರಾರಂಭ ಮಾಡಿದ ಕೇಂದ್ರ ಸರ್ಕಾರ ಮೊದಲ ತಪ್ಪು ಹೆಜ್ಜೆ ಇಟ್ಟಿತು. ತೇಪೆ ನೇಯುವಂತಹ ಕಾನೂನು ಮಾಡಿ ಹೇಗಾದರೂ ಮಾಡಿ ಡೀಮ್ಡ್ ವಿಶ್ವವಿದ್ಯಾಲಯಗಳನ್ನು ತಂದು ಶಭಾಷ್ ಎನ್ನಿಸಿಕೊಳ್ಳಬೇಕೆಂಬ ಬಯಕೆಯಿಂದ ಸುಮಾರು ಎಂಟು ವರ್ಷಗಳ ಹಿಂದೆ ಈ ಒಂದು ಹೆಜ್ಜೆ ಇಟ್ಟಿತು. ಪರಿಣಾಮ ನಾಯಿ ಕೊಡೆಗಳಂತೆ ಡೀಮ್ಡ್ ವಿಶ್ವವಿದ್ಯಾಲಯಗಳು ತಲೆ ಎತ್ತಿದವು.
ಈ ದೇಶದ ಶ್ರೀಮಂತ ಕುಟುಂಬಗಳು, ಶಿಕ್ಷಣ ಕ್ಷೇತ್ರಗಳಲ್ಲಿ ಅಂಬೆ ಕಾಲಿಡುತ್ತಿದ್ದ ಕೆಲವು ಶಿಕ್ಷಣ ಸಂಸ್ಥೆಗಳು, ರಾಜ್ಯ ಸರ್ಕಾರ ನಡೆಸುತ್ತಿರುವ ವಿಶ್ವವಿದ್ಯಾಲಯಗಳ ನೆರಳಲ್ಲೇ ಬೆಳೆಯುತ್ತಿದ್ದ ಇನ್ನೂ ಕೆಲವು ಶಿಕ್ಷಣ ಸಂಸ್ಥೆಗಳು ಇದ್ದಕ್ಕಿದ್ದಂತೆ ಸ್ವತಂತ್ರವಾಗಲು ಬಯಸಿದವು. ಡೀಮ್ಡ್- ಟು-ಬಿ- ಯೂನಿವರ್ಸಿಟೀಸ್ ಎಂಬ ಪದದ ಅರ್ಥ ತಿಳಿಯದೆ, ಯು.ಜಿ.ಸಿ. ಕಾಯ್ದೆ 1956, ಪರಿಚ್ಛೇದ-3ರ ಅಡಿ ಸಿಕ್ಕ ಅವಕಾಶಗಳನ್ನು ಬಳಸಿಕೊಂಡು ದೇಶದ ವಿವಿಧೆಡೆ ಡೀಮ್ಡ್ ವಿಶ್ವವಿದ್ಯಾಲಯಗಳು ತಲೆ ಎತ್ತತೊಡಗಿದವು. ಇಂತಹ ಕೆಲವು ಡೀಮ್ಡ್ ವಿಶ್ವವಿದ್ಯಾಲಯಗಳು ಬಾಲಿಷವೆನ್ನುವಂಥ ರೀತಿಯಲ್ಲಿ ಆಡಳಿತ ನಡೆಸಲು ಪ್ರಾರಂಭಿಸಿದವು. ಯಾವುದೇ ನೀತಿ ನಿಯಮ ಪಾಲಿಸದೆ ಮನಸ್ವೀ ಇಚ್ಛೆಯಾಗಿ ನಡೆದುಕೊಂಡವು. ಕೆಲವು ಡೀಮ್ಡ್ ವಿಶ್ವವಿದ್ಯಾಲಯಗಳಲ್ಲಿ ಕುಟುಂಬದ ಮುಖ್ಯಸ್ಥ ಕುಲಪತಿಯಾದರೆ ಆತನ ಮಗ ಕುಲಸಚಿವನಾದ. ಸೊಸೆ ಕುಲಸಚಿವೆ(ಮೌಲ್ಯಮಾಪನ)ಆದರೆ, ಮಗಳು ವಿತ್ತಾಧಿಕಾರಿಯಾದಳು. ಈ ರೀತಿಯ ಆಡಳಿತ ಮಂಡಳಿಗಳು ಅಲ್ಲಲ್ಲಿ ತಲೆ ಎತ್ತಿದವು. ಡೀಮ್ಡ್ ವಿಶ್ವವಿದ್ಯಾಲಯಗಳು ಪ್ರಾರಂಭವಾಗಿ ಇನ್ನು ಒಂದು ದಶಕ ಕೂಡ ಕಳೆದಿಲ್ಲ. ಆಗಲೇ ಹಲವು ಡೀಮ್ಡ್ ವಿಶ್ವವಿದ್ಯಾಲಯಗಳು ಬಾಗಿಲು ಮುಚ್ಚುವ ಪರಿಸ್ಥಿತಿಗೆ ಬಂದು ನಿಂತಿವೆ. ಕರ್ನಾಟಕದಲ್ಲಿ ಇರುವ 15 ಡೀಮ್ಡ್ ವಿಶ್ವವಿದ್ಯಾಲಯಗಳಲ್ಲಿ 6 ಸಮಸ್ಯೆಯ ಸುಳಿಯಲ್ಲಿವೆ. ಪಕ್ಕದ ತಮಿಳುನಾಡಿನಲ್ಲಿರುವ 29 ಡೀಮ್ಡ್ ವಿಶ್ವವಿದ್ಯಾಲಯಗಳಲ್ಲಿ 16 ಸಮಸ್ಯೆಯ ಸುಳಿಯಲ್ಲಿವೆ. ಈ ದೇಶದಲ್ಲಿರುವ ಒಟ್ಟು ಸರಿಸುಮಾರು 131 ಡೀಮ್ಡ್ ವಿಶ್ವವಿದ್ಯಾಲಯಗಳಲ್ಲಿ 44 ವಿಶ್ವವಿದ್ಯಾಲಯಗಳು ಸಮಸ್ಯೆಯ ಸುಳಿಯಲ್ಲಿವೆ. ದೇಶದ ಯಾವುದೇ ವಿಶ್ವವಿದ್ಯಾಲಯಗಳನ್ನು ತೆಗೆದುಕೊಂಡಾಗ ಅವುಗಳಿಗೆ ಅಧ್ಯಾಪಕರನ್ನು ನೇಮಕ ಮಾಡುವಾಗ ಪಿ.ಹೆಚ್.ಡಿ. ಪದವಿ ಅನಿವಾರ್ಯ ಎಂದು ಯು.ಜಿ.ಸಿ. ಹೇಳುತ್ತದೆ. ಆದರೆ ಈ ದೇಶದಲ್ಲಿರುವ ಒಂದು ಅಂಕಿ ಅಂಶದ ಪ್ರಕಾರ 131 ಡೀಮ್ಡ್ ವಿಶ್ವವಿದ್ಯಾಲಯಗಳಲ್ಲಿ ಪಿ.ಹೆಚ್.ಡಿ. ಪದವಿ ಇರುವುದು ಸುಮಾರು 50 ಅಧ್ಯಾಪಕರಿಗಷ್ಟೆ. ಯಾವುದೇ ಒಂದು ವಿಶ್ವವಿದ್ಯಾಲಯ ಅದು ವಿಶ್ವವಿದ್ಯಾಲಯ ಅನಿಸಿಕೊಳ್ಳಬೇಕೆಂದರೆ, ಸಂಶೋಧನೆ ಅನಿವಾರ್ಯ. ಆದರೆ ಈಗಿರುವ ಅಷ್ಟೂ ಡೀಮ್ಡ್ ವಿಶ್ವವಿದ್ಯಾಲಯಗಳಲ್ಲಿ ಸಂಶೋಧನೆಯ ಗಂಧ ಗಾಳಿಯ ಸುಳಿವಿಲ್ಲ. ನೇರವಾಗಿ ರಾಜ್ಯ ಸರ್ಕಾರದ ಅಧೀನದಲ್ಲಿರುವ ವಿಶ್ವವಿದ್ಯಾಲಯಗಳಿಗೆ ಯಾವುದೇ ಕಾರಣಕ್ಕೂ ದೂರಶಿಕ್ಷಣ ನೀಡಬಾರದೆಂದು ಯು.ಜಿ.ಸಿ. ತಾಕೀತು ಮಾಡಿದೆ. ಏಕೆಂದರೆ ಆಯಾ ರಾಜ್ಯಗಳಲ್ಲಿರುವ ಮುಕ್ತ ವಿಶ್ವವಿದ್ಯಾಲಯಗಳೇ ದೂರಶಿಕ್ಷಣ ನೀಡಬೇಕೆನ್ನುವುದು ಯು.ಜಿ.ಸಿ.ಯ ಇರಾದೆ. ಆದರೂ ಆರ್ಥಿಕ ಆಸಕ್ತಿಯಿಂದ ಹಲವಾರು ರಾಜ್ಯ ಸರ್ಕಾರದ ಅಧೀನದಲ್ಲಿರುವ ವಿಶ್ವವಿದ್ಯಾಲಯಗಳು ಕದ್ದು ಮುಚ್ಚಿ ದೂರಶಿಕ್ಷಣ ವ್ಯವಸ್ಥೆಯನ್ನು ಜಾರಿಗೆ ತಂದಿವೆ.
ದೂರಶಿಕ್ಷಣದ ವಸ್ತುಸ್ಥಿತಿ ಹೀಗಿರುವಾಗ ಕೇಂದ್ರ ಸರ್ಕಾರ ಮಾನವ ಸಂಪನ್ಮೂಲ ಮತ್ತು ಅಭಿವೃದ್ಧಿ ಇಲಾಖೆ ಏಕೆ ಈ ಎಡವಟ್ಟಿಗೆ ಕೈ ಹಾಕಿದೆ ಅರ್ಥವಾಗುತ್ತಿಲ್ಲ. ಈ ಡೀಮ್ಡ್ ವಿಶ್ವವಿದ್ಯಾಲಯಗಳಲ್ಲಿರುವ ಅಧ್ಯಾಪಕರ/ಶಿಕ್ಷಣ ತಜ್ಞರ ಕೊರತೆಯ ಬಗ್ಗೆ, ಒಮ್ಮೆ ಕೇಂದ್ರ ಸಂಪನ್ಮೂಲ ಇಲಾಖೆ ಕಣ್ಣು ಹಾಯಿಸಲಿ. ಆಗ ನಿಜ ಬಣ್ಣ ಏನೆಂದು ತಿಳಿಯುತ್ತದೆ. ಪಿ.ಹೆಚ್.ಡಿ. ಗಳಿಲ್ಲದೆ, ಒಳ್ಳೆಯ ಸಂಶೋಧನಾ ಕೇಂದ್ರಗಳಿಲ್ಲದೆ, ಕೊರಗುತ್ತಿರುವ ಈ ಡೀಮ್ಡ್ ವಿಶ್ವವಿದ್ಯಾಲಯಗಳಿಗೆ ದೂರಶಿಕ್ಷಣ ವ್ಯವಸ್ಥೆಯ ಬಾಗಿಲನ್ನು ಇವರಿಗೆ ತೆರೆದರೆ, ಅಲ್ಲಿಗೆ ಈ ದೂರಶಿಕ್ಷಣ ವ್ಯವಸ್ಥೆಯು ಅಗ್ಗವಾಗುವುದರಲ್ಲಿ ಎರಡು ಮಾತಿಲ್ಲ. ಯಾವುದೇ ಕಾರಣಕ್ಕೂ ದೂರಶಿಕ್ಷಣವನ್ನು ಡೀಮ್ಡ್ ವಿಶ್ವವಿದ್ಯಾಲಯಗಳಿಗೆ ನೀಡಬಾರದು. ಅದರ ಬದಲು ಪ್ರತೀ ರಾಜ್ಯಗಳಲ್ಲಿರುವ ಮುಕ್ತ ವಿಶ್ವವಿದ್ಯಾಲಯಗಳನ್ನು ಇನ್ನಷ್ಟು ಸುಭದ್ರವನ್ನಾಗಿಸಿ, ದೂರ ಶಿಕ್ಷಣವನ್ನು ಅವುಗಳಿಂದಲೇ ನೀಡುವಂತಾಗಬೇಕು. ಇಲ್ಲದಿದ್ದರೆ ಬರುವ ವರ್ಷಗಳಲ್ಲಿ ಕೇಂದ್ರ ಸರ್ಕಾರವೇ ದೂರಶಿಕ್ಷಣವನ್ನು ಮೂಲೆ ಗುಂಪಾಗುವುದಕ್ಕೆ ಮುಖ್ಯ ಕಾರಣವಾಗುವಂತಾಗುತ್ತದೆ.
- ಪ್ರೊ. ಎನ್.ಎಸ್. ಅಶೋಕ್‌ಕುಮಾರ್
ಪ್ರಾಧ್ಯಾಪಕರು, ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನ ವಿ.ವಿ